ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಬಾದಾಮಿ ತಾಲೂಕಿನ ಪ್ರಸಿದ್ಧ ಶಿವಯೋಗ ಮಂದಿರದ ಕಾರಣಿಕ ಯುಗಪುರುಷ ಲಿಂ. ಹಾನಗಲ್ಲ ಗುರುಕುಮಾರೇಶ್ವರ ಮಹಾ ಶಿವಯೋಗಿಗಳವರ ಮಠಕ್ಕೆ ವಿಭೂತಿ ತಯಾರಿಸಲು ಬೇಕಾದ ಶುದ್ಧವಾಗಿರುವ ಬೆರಣಿಯನ್ನು ಸಮೀಪದ ಕೋಟುಮುಚಗಿ ಗ್ರಾಮದ 12 ಜನ ಸದ್ಭಕ್ತ ರೈತರು ಪ್ರತಿ ನಿತ್ಯ ಸ್ವತಃ ತಾವೇ ದೇಶಿ ಗೋವುಗಳ ಸಗಣಿಯನ್ನು ಶೇಖರಿಸಿ 7500ಕ್ಕೂ ಹೆಚ್ಚು ಬೆರಣಿ(ಕುಳ್ಳು)ಗಳನ್ನು ಕಳೆದ 6 ತಿಂಗಳಿಂದ ತಟ್ಟಿ ಸಂಗ್ರಹಿಸಿದ್ದರು. ಈ ಕುಳ್ಳುಗಳನ್ನು ನಿಡಗುಂದಿಕೊಪ್ಪದ ಶ್ರೀಗಳ ನೇತೃತ್ವದಲ್ಲಿ ಶಿವಯೋಗ ಮಂದಿರಕ್ಕೆ ಶ್ರೀ ದುರ್ಗಾದೇವಿ ಭಜನಾ ಮಂಡಳಿಯೊಂದಿಗೆ ತೆರಳಿ ಅಲ್ಲಿರುವ ವಿಭೂತಿ ತಯಾರಿಕಾ ಘಟಕಕ್ಕೆ ಅರ್ಪಿಸಿದರು.
ಶ್ರೀ ಅಭಿನವ ಚನ್ನಬಸವ ಮಹಾಸ್ವಾಮೀಜಿ ಮಾತನಾಡಿ, ಭಾರತದಲ್ಲಿ ಗೋ ಮಾತೆಗೆ ವಿಶಿಷ್ಠ ಸ್ಥಾನವಿದೆ. ದೇಸೀ ಹಸುವಿನ ಸೆಗಣಿಯಲ್ಲಿ ತಯಾರಿಸಿದ ವಿಭೂತಿಯನ್ನು ಹಣೆಗೆ ಹಚ್ಚಿಕೊಂಡರೆ ಎಲ್ಲ ಪಾಪಗಳೂ ನಾಶವಾಗುತ್ತವೆ ಎನ್ನುವ ನಂಬುಗೆ ಹಿಂದೂಗಳಲ್ಲಿದೆ. ಆದ್ದರಿಂದ ಈ ಗ್ರಾಮದ ರೈತರು ಮಾಡಿರುವ ಈ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು ಎಂದರು.
ಹಾವೇರಿ ಹುಕ್ಕೇರಿಮಠದ ಶ್ರೀಮುದ್ವೀರಶೈವ ಶಿವಯೋಗಮಂದಿರದ ಉಪಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿಯವರು ಕೋಟುಮಚಗಿ ಗ್ರಾಮದ ಸದ್ಭಕ್ತರನ್ನು ಶಿವಯೋಗ ಮಂದಿರದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಆಶೀರ್ವದಿಸಿದರು. ಬೆರಣಿ ಸಂಗ್ರಹಿಸಿದ ಸದ್ಭಕ್ತರಾದ ವೀರೇಶ ನೇಗಲಿ, ಅಮರೀಷ ಜಗ್ಗಲ್, ಶ್ರೀಕಾಂತ ಸಿಂಗಟಾಲಕೇರಿ, ಮಲ್ಲಪ್ಪ ಗಡಾದ, ಬಸವರಾಜ ಮಡಿವಾಳರ, ಶರಣಪ್ಪ, ಬಸವರಾಜ ಗೋದಿ, ನಿಂಗಪ್ಪ ಕಿರಟಗೇರಿ, ಮಲ್ಲಪ್ಪ ಕಿತ್ತೂರ, ಅಶೋಕ ಬ್ಯಾಹಟ್ಟಿ, ಈಶಪ್ಪ ಜಗ್ಗಲ್, ಸೋಮಣ್ಣ ಕರಡಿ, ಹೊನ್ನಪ್ಪ ಬ್ಯಾಹಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.