ವಿಜಯಸಾಕ್ಷಿ ಸುದ್ದಿ, ಗದಗ : ಮಹಿಳೆ ತನ್ನ ಕುಟುಂಬ ನಿರ್ವಹಣೆಯೊಂದಿಗೆ ಸರ್ವ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸುತ್ತಾ ಮುನ್ನುಗ್ಗುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರಲ್ಲಿ ತಾಳ್ಮೆ, ಪ್ರೀತಿ, ಮಮತೆ, ವಾತ್ಸಲ್ಯ ಈ ಎಲ್ಲ ಗುಣಗಳಿಂದ ಶ್ರೇಷ್ಠತೆಯನ್ನು ಹೊಂದಿರುತ್ತಾಳೆ. ಆದ್ದರಿಂದ ಮಾನವ ಕುಲದ ಅಭಿವೃದ್ಧಿಗೆ ಮಹಿಳೆಯ ಪಾತ್ರ ಅಪಾರವೆಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯ ಬಿ.ಎಲ್. ಬಾರಟಕ್ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗದಗ ಶಹರ ವಲಯದ ಅಕ್ಷರ ಟೆಕ್ನೋ ಶಾಲೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆಲಸದ ಒತ್ತಡದ ನಡುವೆಯೂ ಮಹಿಳೆಯು ತಾಳ್ಮೆಯಿಂದ ಕುಟುಂಬ ನಿರ್ವಹಣೆಯೊಂದಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕ, ಔದ್ಯೋಗಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆಯನ್ನು ಮಾಡಿರುವುದು ಶ್ಲಾಘನೀಯ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರಕಾಶ ಮಂಗಳೂರು ಮಾತನಾಡಿ, ಮಹಿಳೆ ಕುಟುಂಬದ ಕಣ್ಣು, ಕೌಟುಂಬಿಕ, ಆರ್ಥಿಕ ವ್ಯವಸ್ಥೆಯಲ್ಲಿ ಬಿಗಿಯಾದ ಹಿಡಿತದೊಂದಿಗೆ ಮಕ್ಕಳಿಗೆ ಆಪ್ತ ಸ್ನೇಹಿತೆಯಾಗಿ ಸಾಮಾಜಿಕ ಮೌಲ್ಯಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ತಿಳಿದು ಪೂಜ್ಯನೀಯ ಸ್ಥಾನವನ್ನು ನೀಡಿ, ಪ್ರತಿದಿನ ಗೌರವಿಸಬೇಕಿದೆ ಎಂದರು.
ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಹಾಲಮಠ ಮಾತನಾಡಿ, ಶಾಲೆಯು 7 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮಾನವೀಯ ಮೌಲ್ಯಗಳ ಕುರಿತು ಶಿಕ್ಷಣವನ್ನು ನೀಡುತ್ತಾ ಗದಗ ಶಹರ ವಲಯದಲ್ಲಿ ಒಂದು ಅತ್ಯುತ್ತಮ ಶಾಲೆಯೆಂದು ಗುರುತಿಸಿಕೊಂಡಿದೆ. ಇದಕ್ಕೆಲ್ಲಾ ಕಾರಣ ನಮ್ಮ ಶಾಲೆಯಲ್ಲಿ ಸೇವೆಗೈಯುತ್ತಿರುವ ಎಲ್ಲ ಶಿಕ್ಷಕಿಯರು. ಮಹಿಳೆಯರು ಮನಸ್ಸು ಮಾಡಿದರೆ, ಎಂಥಹ ಕಠಿಣ ಕೆಲಸವನ್ನಾದರೂ ಮಾಡಬಲ್ಲರೆಂಬುದಕ್ಕೆ ನಮ್ಮ ಶಾಲೆಯೇ ಸಾಕ್ಷಿ ಎಂದರು.
ವೇದಿಕೆಯ ಮೇಲೆ ಸಂಸ್ಥೆಯ ಪಾಲುದಾರರಾದ ಧನಲಕ್ಷ್ಮಿ ಹಾಲಮಠ ಹಾಗೂ ಮುಖ್ಯೋಪಾಧ್ಯಾಯೆ ಜ್ಯೋತಿ ಕರಾವಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯರಿಗೆ ಹಾಗೂ ಶ್ರೀ ಪುಟ್ಟರಾಜ ಶ್ರೀ ಸದ್ಭಾವನಾ ಪ್ರಶಸ್ತಿ ಪಡೆದ ಪ್ರಕಾಶ ಮಂಗಳೂರು ಅವರಿಗೆ ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಜ್ಯೋತಿ ಕರಾವಿ ಸ್ವಾಗತಿಸಿದರು. ಬೇಬಿಜಾನ ನದಾಫ ನಿರೂಪಿಸಿದರು. ವನಜಾಕ್ಷಿ ಹಿರೇಮಠ ವಂದಿಸಿದರು.