ವಿಜಯಸಾಕ್ಷಿ ಸುದ್ದಿ, ಬಾಳೆಹೊನ್ನೂರು : ಬೆಟ್ಟದಷ್ಟು ಸಂಪತ್ತು ಇದ್ದರೂ ಮನಸ್ಸಿಗೆ ಶಾಂತಿ ಮುಖ್ಯ. ಸಾಮರಸ್ಯ ಬದುಕಿನಿಂದ ಜೀವನದಲ್ಲಿ ಶಾಂತಿ, ನೆಮ್ಮದಿ ಪ್ರಾಪ್ತವಾಗುವುದೆಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಸೋಮವಾರ ಶ್ರೀ ರಂಭಾಪುರಿ ಪೀಠದಲ್ಲಿ ಜಾತ್ರಾ ಮಹೋತ್ಸವ ಪೂರ್ವಭಾವಿಯಾಗಿ ಜರುಗಿದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರ ಮತ್ತು ಧರ್ಮಾಚರಣೆಗೆ ಬಹಳಷ್ಟು ಪ್ರಾಮುಖ್ಯತೆ ಕೊಟ್ಟಿದೆ. ಭಾರತೀಯ ಉತ್ಕೃಷ್ಟ ಸಂಸ್ಕೃತಿಯ ಸಂವರ್ಧನೆಗೆ ಮಹಿಳೆಯರ ಕೊಡುಗೆ ಅಪಾರ. ಒಬ್ಬ ಮಹಿಳೆ ಸಂಸ್ಕಾರವಂತಳಾಗಿ ಬಾಳಿದರೆ ಇಡೀ ಕುಟುಂಬ ಸುಸಂಸ್ಕೃತವಾಗಿ ಬಾಳಲು ಸಾಧ್ಯವಾಗುತ್ತದೆ. ಆದರ್ಶ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಜವಾಬ್ದಾರಿಯುತವಾದುದು. ತಾಯಿಯಾಗಿ, ಸಹೋದರಿಯಾಗಿ, ಸೊಸೆಯಾಗಿ ಮತ್ತು ಪತಿಗೆ ಸತಿಯಾಗಿ ವಿವಿಧ ಪಾತ್ರದಲ್ಲಿ ಶ್ರಮಿಸುತ್ತಿರುವುದನ್ನು ಮರೆಯಲಾಗದು ಎಂದರು.
ಇದೇ ಸಂದರ್ಭದಲ್ಲಿ ಆದರ್ಶ ಗೃಹಸ್ಥ ಜೀವನ ಹೊಂದಿ ಸಾರ್ಥಕ ಬದುಕನ್ನು ಕಟ್ಟಿಕೊಂಡ ಚಿಕ್ಕಮಗಳೂರಿನ ಎ.ಎಸ್. ಗುರುಕಾಂತಾರಾಧ್ಯ ದಂಪತಿಗಳಿಗೆ `ಗುರು ಕಾರುಣ್ಯ ಸೇವಾ ಸಿಂಧು’ ಪ್ರಶಸ್ತಿಯಿತ್ತು ಶಾಲು, ಸ್ಮರಣಿಕೆ, ಫಲ-ಪುಷ್ಪವಿತ್ತು ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ 15 ಜನ ಜಂಗಮ ವಟುಗಳಿಗೆ ಶಿವದೀಕ್ಷಾ ಅಯ್ಯಾಚಾರವನ್ನು ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ಮಂತ್ರೋಪದೇಶ ಮಾಡಿದರು. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು, ಬೀರೂರು ರಂಭಾಪುರಿ ಶಾಖಾ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಮತ್ತು ಬೇರುಗಂಡಿ ಬೃಹನ್ಮಠದ ರೇಣುಕ ಮಹಂತ ಶಿವಾಚಾರ್ಯ ಸ್ವಾಮಿಗಳು ವೀರಶೈವ ಧರ್ಮ, ಗುರು ಕೊಟ್ಟ ಸಂಸ್ಕಾರದ ಬಗೆಗೆ ಉಪದೇಶಾಮೃತವನ್ನಿತ್ತರು. ಹಾಸನದ ವೇ.ದೇವರಾಜು ಶಾಸ್ತಿ ಮತ್ತು ತಂಡದವರಿಂದ ಪೂಜಾ ಕಾರ್ಯಗಳು ಜರುಗಿದವು.
ಬೆಂಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಯು.ಎಂ. ಬಸವರಾಜ್, ಎ.ಎಸ್. ಶಿವಕಾಂತಾರಾಧ್ಯರು, ಅ.ಭಾ.ವೀ. ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ಲೋಕೇಶ್, ಚಿಕ್ಕಮಗಳೂರಿನ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ವೀರಭದ್ರಯ್ಯನವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಚಿಕ್ಕಮಗಳೂರಿನ ಹಿರಿಯ ಪತ್ರಕರ್ತ ಪ್ರಭುಲಿಂಗ ಶಾಸ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಜಿನಿಯರ್ ದಕ್ಷಿಣಾಮೂರ್ತಿ ಸರ್ವರನ್ನು ಸ್ವಾಗತಿಸಿದರು. ಶೈಲಾ ಬಸವರಾಜ ಮಹಿಳಾ ತಂಡದವರಿಂದ ಪ್ರಾರ್ಥನಾ ಗೀತೆ ಜರುಗಿತು. ಶ್ರೀಕಾಂತ ಚಿಕ್ಕಮಗಳೂರು ನಿರೂಪಿಸಿದರು.
ಒಂದು ಹೆಣ್ಣಿನಲ್ಲಿ ಆರು ಸದ್ಗುಣಗಳಿರಬೇಕೆಂದು ಧರ್ಮ ಶಾಸ್ತç ಹೇಳುತ್ತದೆ. ಕೆಲಸ ಕಾರ್ಯಗಳಲ್ಲಿ ದಾಸಿಯಾಗಿ, ಸಲಹೆ ಕೊಡುವಲ್ಲಿ ಮಂತ್ರಿಯಾಗಿ, ರೂಪದಲ್ಲಿ ಲಕ್ಷಿö್ಮಯಾಗಿ, ಕ್ಷಮೆಯಲ್ಲಿ ಭೂ ತಾಯಿಯಾಗಿ, ಊಟ ಮಾಡಿಸುವಾಗ ತಾಯಿಯಾಗಿ ಮತ್ತು ಸಂಸಾರಿಕ ಜೀವನದಲ್ಲಿ ಗಂಡನ ಇಚ್ಛೆಯಂತೆ ಬಾಳುವ ಸದ್ಗುಣಗಳಿದ್ದರೆ ಆ ಮನೆತನ ಬಹು ಬೇಗ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಪುರುಷರಷ್ಟೇ ಮಹಿಳೆಯರಿಗೂ ಸಮಾನ ಧರ್ಮ ಪರಿಪಾಲಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದನ್ನು ಮರೆಯಲಾಗದು ಎಂದು ರಂಭಾಪುರಿ ಶ್ರೀಗಳು ತಿಳಿಸಿದರು.
Advertisement