HomeGadag Newsಅಂಚೆ ಮತಪತ್ರ ವಿತರಣೆ ವ್ಯವಸ್ಥಿತವಾಗಿರಲಿ

ಅಂಚೆ ಮತಪತ್ರ ವಿತರಣೆ ವ್ಯವಸ್ಥಿತವಾಗಿರಲಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ, ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಹಾಗೂ ಅಗತ್ಯ ಸೇವೆಗಳಲ್ಲಿ ತೊಡಗಿರುವ ಎಲ್ಲಾ ನೌಕರರಿಗೆ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದ್ದು, ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಬದ್ಧರಾಗಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವೈಶಾಲಿ ಎಂ.ಎಲ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಅಂಚೆ ಮತಪತ್ರ ವಿತರಣೆ ಕುರಿತ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಮ್ಮೆ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸಿದಲ್ಲಿ ಮತಕೇಂದ್ರಕ್ಕೆ ಬಂದು ಮತದಾನ ಮಾಡಲು ಚುನಾವಣಾ ಅಯೋಗವು ಅವಕಾಶ ಕಲ್ಪಿಸುವುದಿಲ್ಲ. ಈ ವಿಷಯವನ್ನು ಚುನಾವಣಾ ಕಾರ್ಯನಿರತ ನೌಕರರು ಹಾಗೂ ಮತದಾರರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ನಿಗದಿತ ದಿನಾಂಕದೊಳಗೆ ಅಂಚೆ ಮತಪತ್ರ ವಿತರಣೆ ಮತ್ತು ಒಪ್ಪಿಗೆ ಪತ್ರಗಳನ್ನು ಸಂಗ್ರಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಯಾವುದೇ ಅರ್ಹ ಮತದಾರರು ಈ ಸೌಲಭ್ಯದಿಂದ ವಂಚಿತರಾಗದಂತೆ ಎಚ್ಚರವಹಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 85 ವರ್ಷ ಮೀರಿದವರು, ವಿಕಲಚೇತನರು ಮತ್ತು ಕೋವಿಡ್ ಪೀಡಿತರಿಗೆ ವಿತರಿಸಲಾಗುವ ಅಂಚೆಪತ್ರ ಪತ್ರಗಳ ವಿತರಣಾ ಕಾರ್ಯವನ್ನು ಸಹ ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಬೇಡ. ಪ್ರತಿಯೊಬ್ಬ ಅರ್ಹರ ಮನೆಗಳಿಗೂ ಭೇಟಿ ನೀಡಿ 12ಡಿ ಫಾರಂ ವಿತರಿಸಿ, ಒಪ್ಪಿಗೆ ಪತ್ರ ಪಡೆಯುವಂತೆ ಅಗತ್ಯ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸುರೇಖಾ ಹಾಗೂ ಅಂಚೆ ಪತ್ರ ವಿತರಣೆಗೆ ನಿಯೋಜಿಸಲಾದ ವಿವಿಧ ಇಲಾಖೆಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

85 ವರ್ಷ ಮೇಲ್ಪಟ್ಟವರಿಗೆ, ಅಂಗವಿಕಲರಿಗೆ ಹಾಗೂ ಕೋವಿಡ್‌ನಿಂದ ಬಾಧಿತರಾದವರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮತದಾರರು ಮತಗಟ್ಟೆಗೆ ಹೋಗಿ ಹಕ್ಕು ಚಲಾಯಿಸಿದಾಗ ಮತದಾನ ಹಬ್ಬ ಎನಿಸಿಕೊಳ್ಳುತ್ತದೆ. ಸಾಧ್ಯವಾದಷ್ಟು ಮತಕೇಂದ್ರಗಳಿಗೆ ಹೋಗಿ ಮತದಾನ ಮಾಡಲು ಜನರನ್ನು ಪ್ರೇರೇಪಿಸಬೇಕು. ಮತಕೇಂದ್ರಕ್ಕೆ ಬರಲು ಆಗದವರಿಗೆ ಅಂಚೆ ಮತಪತ್ರ ಕಡ್ಡಾಯವಾಗಿ ವಿತರಣೆ ಮಾಡಿ ಮತದಾನ ಮಾಡುವ ಕ್ರಮಗಳನ್ನು ವಿವರಿಸಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಸೂಚಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img