ಮಠಗಳು ಶ್ರೇಯೋಭಿವೃದ್ಧಿಗೆ ಮೂಲಾಧಾರ

0
rotti jatre
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಜಾತ್ರೆ, ಹಬ್ಬ-ಹರಿದಿನ, ಉತ್ಸವಗಳು, ಧರ್ಮಸಭೆಗಳು ಪರಸ್ಪರರಲ್ಲಿ ಸ್ನೇಹ, ಬಾಂಧವ್ಯ, ಸೌಹಾರ್ದತೆ ಬೆಸೆಯುತ್ತವೆ. ಪ್ರಸ್ತುತ ತಾಂತ್ರಿಕ ಜಮಾನಾದಲ್ಲಿಯೂ ಇಂತಹ ಸಾಂಪ್ರದಾಯಿಕ ಆಚರಣೆಗಳು ವಿಜೃಂಭಿಸುವ ಅಗತ್ಯವಿದೆ ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.

Advertisement

ಅವರು ತಾಲೂಕಿನ ಆದ್ರಳ್ಳಿ ಗ್ರಾಮದ ಗವಿಸಿದ್ದೇಶ್ವರ ಮಠದ ರೊಟ್ಟಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಮಾತನಾಡಿ, ಜಾತ್ರೆಗಳ ಆಚರಣೆಯ ಸಂದರ್ಭದಲ್ಲಿ ಮಠಮಾನ್ಯಗಳು ಆಚರಿಸಿಕೊಂಡು ಬರುತ್ತಿರುವ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಸಮಾಜದ ಸ್ವಾಸ್ಥ್ಯಕ್ಕೆ, ಶ್ರೇಯೋಭಿವೃದ್ಧಿಗೆ ಮೂಲಾಧಾರವಾಗಿದೆ. ಧರ್ಮ, ಸಂಸ್ಕೃತಿ, ಶಿಕ್ಷಣ, ಆಚಾರ-ವಿಚಾರ, ಮೌಲ್ಯಗಳನ್ನು ಬಿತ್ತುವ ಮೂಲಕ ಸಾಮಾಜಿಕ ಪ್ರಗತಿಯಲ್ಲಿ ಮಠಮಾನ್ಯಗಳ ಪಾತ್ರ ಮಹತ್ವದ್ದಾಗಿದೆ. ಮಠಮಾನ್ಯಗಳ ಈ ಕಾರ್ಯಕ್ಕೆ ಯುವಕರು ಕೈ ಜೋಡಿಸಬೇಕು. ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣದೊಂದಿಗೆ ಸಂಸ್ಕಾರ, ಬದುಕಿನ ಮೌಲ್ಯಗಳು, ಗುರು-ಹಿರಿಯರ ಬಗ್ಗೆ ಗೌರವ ಭಾವನ ಮೂಡಿಸಬೇಕು ಎಂದರು.

ಸವಣೂರಿನ ದೊಡ್ಡಹುಣಸೇಮಠದ ಚನ್ನಬಸವ ಮಹಾಸ್ವಾಮಿಗಳು ಮಾತನಾಡಿ, ನಾಡಿನ ಐತಿಹಾಸಿಕ ಪರಂಪರೆಯಲ್ಲಿ ಸಾಧು-ಸಂತರು, ಶರಣರು, ಋಷಿಮುನಿಗಳು, ಮಠಾಧೀಶರು ತಮ್ಮ ತಪಃಶಕ್ತಿ, ಸಂಕಲ್ಪ, ಜ್ಞಾನ, ಅನುಭಾವಗಳಿಂದ ಸಮಾಜಸೇವೆ, ತ್ರಿವಿಧ ದಾಸೋಹದ ಮೂಲಕ ಲೋಕ ಕಲ್ಯಾಣಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಗ್ರಾಮೀಣ ಪ್ರದೇಶಗಳು ದೇಶದ ಸಂಸ್ಕೃತಿಯ ಜೀವಾಳವೇ ಆಗಿವೆ. ದೇಶದ ಸಂಪತ್ತಾದ ಯುವಕರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ದುಶ್ಚಟಗಳಿಂದ ನಮ್ಮ ದೇಶದ ಧರ್ಮ, ಸಂಸ್ಕೃತಿ, ಪರಂಪರೆಗಳನ್ನು ಮುಂದುವರೆಸಿಕೊಂಡು ಹೋಗುವ ಕಾರ್ಯ ಮಾಡಬೇಕು. ಮಕ್ಕಳಷ್ಟೇ ಅಲ್ಲ ದೊಡ್ಡವರೂ ಮೊಬೈಲ್, ಟಿವಿಗಳ ದುರಭ್ಯಾಸದಿಂದ ಹೊರ ಬರದಿದ್ದರೆ ಬದುಕು ಹಾಳಾಗುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ದೇವರು, ಧರ್ಮ, ಮಠ ಮಾನ್ಯಗಳ ಬಗ್ಗೆ ಪೂಜ್ಯನೀಯ ಭಾವನೆ, ನಂಬಿಕೆ, ಶ್ರದ್ಧೆ, ಭಕ್ತಿ ಮೂಡಿಸಬೇಕು ಎಂದರು.

ಮುರಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಬೈಲೂರಿನಿ ನಿಜಗುಣಾನಂದ ಸ್ವಾಮಿಗಳು, ಹತ್ತಿಮತ್ತೂರಿನ ನಿಜಗುಣ ಶಿವಯೋಗಿಗಳು, ಅಗಡಿ ಅಕ್ಕಿಮಠದ ಡಾ.ಗುರುಲಿಂಹ ಮಹಾಸ್ವಾಮಿಗಳು, ತಿಪ್ಪಾಯಿಕೊಪ್ಪದ ಮಹಾಂತಸ್ವಾಮಿಗಳು, ಕೈಲಾಸಪತಿ ಮಹಾರಾಜರು, ನಾಗರಾಜ ಮಹಾರಾಜರು, ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ರಾಮಣ್ಣ ಲಮಾಣಿ, ಆನಂದಸ್ವಾಮಿ ಗಡ್ಡದೇವರಮಠ, ಶಾರದಾ ಪೂರ್ಣಾನಾಯಕ, ಗವಿಸಿದ್ದಪ್ಪ ದ್ಯಾಮಣ್ಣವರ, ರವಿ ಪೂಜಾರ, ಯು.ಬಿ ಬಣಕಾರ,ದೇವಪ್ಪ ಲಮಾಣಿ, ಹೊನ್ನಪ್ಪ ವಡ್ಡರ, ಶೇಖಪ್ಪ ಲಮಾಣಿ, ಪರಶುರಾಮ ನಾಯಕ ಸೇರಿ ಅನೇಕರಿದ್ದರು.

ಬಳಿಕ ಗಾಯಕ ರಮೇಶ ಲಮಾಣಿ, ಸೌಮ್ಯ ಕೆಂಪಣ್ಣವರ ಸೇರಿ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬುಧವಾರ ಸಂಜೆ ಕಡುಬಿನ ಕಾಳಗ ಜರುಗಿತು. ಮಾ.21ರಂದು ಮದ್ಯಾಹ್ನ 3ಕ್ಕೆ ಕುಸ್ತಿ ಪಂದ್ಯಾವಳಿಗಳು ಜರುಗಲಿವೆ.

ಆದ್ರಳ್ಳಿ ಗವಿಮಠದ ಕುಮಾರ ಮಹಾರಾಜರ ನೇತೃತ್ವದಲ್ಲಿ ಮೌನತಪಸ್ವಿ ಶ್ವೇತಶಾಂತ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳ ನಾಣ್ಯ ತುಲಾಭಾರ, ಪಲ್ಲಕ್ಕಿ ಉತ್ಸವ ಬಳಿಕ ರಥೋತ್ಸವ ಅನೇಕ ಮಠಾಧೀಶರು, ಗಣ್ಯರು, ಅಪಾರ ಭಕ್ತ ಸಮೂಹದ ನಡುವೆ ನೆರವೇರಿತು. ಮುಂದಿನ ವರ್ಷ ನಡೆಯುವ ಶ್ರೀಮಠದ ಕುಮಾರ ಮಹಾರಾಜರ ಪಟ್ಟಾಧಿಕಾರ ಮಹೋತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.


Spread the love

LEAVE A REPLY

Please enter your comment!
Please enter your name here