HomeGadag Newsಶರಣರ ಬದುಕು ಜೀವಜಲವಾಗಲಿ

ಶರಣರ ಬದುಕು ಜೀವಜಲವಾಗಲಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಮಂದಿರ, ಮಸೀದಿ, ಚರ್ಚ್ಗಳನ್ನು ಕಟ್ಟಿದರೆ ನಾಳೆ ಅವು ಬೀಳುತ್ತವೆ. ಬಿದ್ದ ಮೇಲೆ ಅವುಗಳನ್ನು ಮೊದಲಿಗಿಂತ ಚೆನ್ನಾಗಿ ಮರು ನಿರ್ಮಿಸಬಹುದು. ಆದರೆ, ಮಾನವನಲ್ಲಿರುವ ಮಾನವೀಯತೆಯ ಮಂದಿರ ಬಿದ್ದರೆ ಅದನ್ನು ಮತ್ತೆ ಕಟ್ಟಲು ಸಾಧ್ಯವಿಲ್ಲ ಎಂದು ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಫಕ್ಕೀರೇಶ್ವರ ಶಿವಾಚಾರ್ಯರ ಮಹಾಸ್ವಾಮೀಜಿ ಹೇಳಿದರು.

ಅವರು ಗದಗ ತಾಲೂಕಿನ ಕಳಸಾಪುರ ಗ್ರಾಮದ ಈಶ್ವರ ದೇವರ ಹಾಗೂ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾನವೀಯತೆ ಅನ್ನುವ ಮಂದಿರವೇ ಶ್ರೇಷ್ಠ ಮಂದಿರವಾಗಬೇಕು. ಜಾತಿಯಿಂದ ದೂರ ಇದ್ದು ನೀತಿಯಿಂದ ಬಾಳಬೇಕು. ಅಂತೆಯೇ ಶರಣ-ಶರಣೆಯರು ಹಾಗೆಯೇ ಬದುಕಿದರು. ಅಂತವರ ಜೀವನ, ಅವರ ಬದುಕು ನಮ್ಮ ಜೀವನಕ್ಕೆ ಜೀವಜಲವಾದಾಗ ಅಂತರಂಗದ ದೀಪ ಬೆಳಗುತ್ತದೆ. ದಾನಮ್ಮ ದೇವಿಯ ಜೀವನ ದರ್ಶನ ಪ್ರವಚನ ಕೇಳಿ ಎಲ್ಲರೂ ಕೂಡ ಶರಣರಾಗಲು ಸಾಧ್ಯವೆಂದು ಹೇಳಿದರು.

ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರೀ ಸಿದ್ದಾಪುರವರು ಮಾತನಾಡಿ, ಗುಡ್ಡಾಪುರದ ದಾನಮ್ಮ ದೇವಿಯ ಪ್ರವಚನದಲ್ಲಿ ಮನುಷ್ಯ ಜೀವನದಲ್ಲಿ ಬದುಕಿಗೆ ಬೆಳಕಾಗುವಂತಹ ಎರಡು ಒಳ್ಳೆಯ ಮಾತನ್ನು ಕೇಳಬೇಕು.

ರಾಮಕೃಷ್ಣ ಪರಮಹಂಸರ ಸಂಘದಿಂದ, ಅವರ ಒಳ್ಳೆಯ ಮಾತಿನಿಂದ ನರೇಂದ್ರಸ್ವಾಮಿ ವಿವೇಕಾನಂದರಾದರು. ಅಂತೆಯೇ ಗುರುಗೋವಿಂದರ ಮಾತಿನಿಂದ ಷರೀಫ್ ಸಾಹೇಬರು ಶಿವಯೋಗಿಯಾದರು. ಹಾನಗಲ್ ಕುಮಾರ ಶಿವಯೋಗಿಯವರ ಮಾತಿನಿಂದ ಪಂ.ಪಂಚಾಕ್ಷರಿ ಗವಾಯಿಗಳು ಪ್ರಪಂಚದ ಅಂಧ-ಅನಾಥ, ದೀನ-ದಲಿತರ ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದು ಅವರ ಬಾಳ ಬೆಳಗಿ ಸಂಗೀತ ಲೋಕದ ಋಷಿಯಾದರು. ಹಾಗೆ ದಾನಮ್ಮದೇವಿ, ಗುರು ಶಾಂತವೀರ ಮಹಾಸ್ವಾಮಿಗಳ ಸೇವೆ ಮಾಡಿ ಅವರ ಎರಡು ಮಾತಿನಿಂದ ಶರಣೆ ಆದರು ಎಂದರು.

ಕಲಬುರಗಿಯ ಸಂಗಮೇಶ್ವರ ಗವಾಯಿ ಪಾಟೀಲ ಅವರಿಂದ ಸಂಗೀತ ಸೇವೆ ಜರುಗಿತು. ತೋಂಟದಾರ್ಯ ಕರಡಿಕಲ್ ತಬಲಾ ಸಾಥ್ ನೀಡಿದರು. ವೇದಿಕೆ ಮೇಲೆ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಗುರು-ಹಿರಿಯರು ಉಪಸ್ಥಿತರಿದ್ದರು.

ದಾನಮ್ಮನ ಬದುಕಿನ ಧ್ಯಾನದ ಬೆಳಕು ನಮ್ಮೆಲ್ಲರ ಹೃದಯಗಳನ್ನು ಬೆಳಗುವಂತಾಗಲಿ. ನಿತ್ಯ ನಡೆಯುವ ಪ್ರವಚನ ಕೇಳಿ ನಮ್ಮ ಮನಸ್ಸಿನ ಪಾಪಗಳು ಸುಟ್ಟು ಹೋಗುತ್ತವೆ. ಅಕ್ಕಮಹಾದೇವಿ ಒಳ್ಳೆಯ ಮಾತುಗಳು ಹೇಳುವಂತವರ ಸಂಗವನ್ನೇ ಕರುಣಿಸು ಚೆನ್ನಮಲ್ಲಿಕಾರ್ಜುನ ಎಂದು ಪ್ರಾರ್ಥನೆ ಮಾಡಿದ್ದಾಳೆ. ಅಕ್ಕಮಹಾದೇವಿಯಂತೆ ನಮ್ಮೆಲ್ಲರ ಜೀವನ ಆಗಲಿ ಎಂದು ಪ್ರವಚನಕಾರ ಶಿವಲಿಂಗಯ್ಯಶಾಸ್ತಿç ಸಿದ್ದಾಪುರ ಆಶಯ ವ್ಯಕ್ತಪಡಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!