ವಿಜಯಸಾಕ್ಷಿ ಸುದ್ದಿ, ಗದಗ: ಬದುಕಿನ ಹಾದಿಗಳು ಬದಲಾಗಿದ್ದರೂ ಅಕ್ಷರ ಕಲಿಸಿದ ಶಾಲೆ, ಬದುಕಿಗೆ ದಾರಿ ತೋರಿದ ಗುರುಗಳು ಮತ್ತು ಬಾಲ್ಯದ ಸ್ನೇಹ ಎಂದಿಗೂ ಮರೆಯಾಗುವುದಿಲ್ಲ ಎಂಬುದನ್ನು ಗದಗದ ಶ್ರೀ ಸಿ.ಡಿ.ಒ. ಜೈನ್ ಎಜುಕೇಶನ್ ಸೊಸೈಟಿ ಪ್ರೌಢಶಾಲೆಯ 2006ನೇ ಸಾಲಿನ ಹಳೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಸಾಬೀತುಪಡಿಸಿದರು.
ಶಾಲೆಯಲ್ಲಿ ಆಯೋಜಿಸಿದ್ದ ‘ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ’ ಕಾರ್ಯಕ್ರಮದಲ್ಲಿ ಸುಮಾರು 20 ವರ್ಷಗಳ ಬಳಿಕ ಒಂದಾದ ಸಹಪಾಠಿಗಳು ತಮ್ಮ ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದರು. ವಿವಿಧ ಉದ್ಯೋಗ, ವ್ಯಾಪಾರ ಹಾಗೂ ಸೇವಾ ಕ್ಷೇತ್ರಗಳಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಮತ್ತೆ ಅದೇ ಶಾಲೆಯಂಗಳದಲ್ಲಿ ಭೇಟಿಯಾದ ಕ್ಷಣಗಳು ಭಾವನಾತ್ಮಕ ವಾತಾವರಣ ನಿರ್ಮಿಸಿದವು.
ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಶಿಕ್ಷಕರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು. ಶಿಕ್ಷಣದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಿದ್ದ ಗುರುಗಳ ಸೇವೆಯನ್ನು ಸ್ಮರಿಸಿ, ಅವರ ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಶಾಲೆಯ ನಿವೃತ್ತ ಹಾಗೂ ಹಾಲಿ ಶಿಕ್ಷಕರನ್ನು ಹೂಮಾಲೆ, ಶಾಲು ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ತಮ್ಮ ಗುರುಗಳ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದರು. ಹಲವು ವರ್ಷಗಳ ಬಳಿಕ ತಮ್ಮ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಕಂಡ ಶಿಕ್ಷಕರು ಸಂತಸ ವ್ಯಕ್ತಪಡಿಸಿದರು.
ಸುಮಾರು ಎರಡು ದಶಕಗಳ ಹಿಂದೆ ಒಂದೇ ತರಗತಿಯಲ್ಲಿ ಓದಿದ ಸ್ನೇಹಿತರು ಮತ್ತೆ ಭೇಟಿಯಾಗಿ ಹಳೆಯ ತರಗತಿ ಕೊಠಡಿಗಳು, ಬ್ಲ್ಯಾಕ್ಬೋರ್ಡ್, ಬೆಂಚುಗಳು, ಶಿಕ್ಷಕರ ಬೋಧನೆ, ಶಾಲೆಯ ತುಂಟಾಟ, ಶಿಕ್ಷೆ ಹಾಗೂ ಆಟದ ದಿನಗಳನ್ನು ನೆನೆದು ನಗೆಗಡಲಲ್ಲಿ ತೇಲಿದರು. ಹಲವು ವರ್ಷಗಳ ಬಳಿಕ ಭೇಟಿಯಾದ ಸ್ನೇಹಿತರು ಪರಸ್ಪರ ಆತ್ಮೀಯವಾಗಿ ಅಪ್ಪಿಕೊಂಡ ದೃಶ್ಯ ಕಾರ್ಯಕ್ರಮದ ವಿಶೇಷವಾಗಿತ್ತು.

ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ವಾಟ್ಸಾಪ್ ಗುಂಪಿನ ಮೂಲಕ ಸಂಪರ್ಕ ಸಾಧಿಸಿ ಈ ಕಾರ್ಯಕ್ರಮವನ್ನು ಸಂಘಟಿಸಿದ್ದರು.
ಕಾರ್ಯಕ್ರಮದ ಸ್ಮರಣಾರ್ಥ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಕೋಲಾರ ಮೇಡಂ, ಜೋಷಿ ಮೇಡಂ, ಮಾನ್ವಿ ಸರ್, ರಡ್ಡಿ ಸರ್ ಹಾಗೂ ಹಳೆಯ ವಿದ್ಯಾರ್ಥಿಗಳಾದ ಡಾ. ಜೆತಿಂದ್ರ, ಅಜಯ್ ಅಬ್ಬಿಗೇರಿ, ಆನಂದ್, ವಿಕಾಸ್, ಉದಯ್, ರಾಜೀವ್, ರೀಮಾ, ಪ್ರಿಯಾ, ದೀಪ, ಪ್ರತಿಭಾ ಸೇರಿದಂತೆ ಹಲವು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರಿಸರ ಸಂರಕ್ಷಣೆಗೆ ಹಸಿರು ಸಂಕಲ್ಪ
ಗುರುವಂದನೆ ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ಗುರುಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸಸಿ ನೆಟ್ಟು ಪರಿಸರ ಸಂರಕ್ಷಣೆಯ ಸಂಕಲ್ಪ ಕೈಗೊಂಡರು. “ಒಬ್ಬ ವಿದ್ಯಾರ್ಥಿ – ಒಂದು ಸಸಿ” ಎಂಬ ಸಂದೇಶದೊಂದಿಗೆ ಹಸಿರು ಉಳಿಸುವ ಜವಾಬ್ದಾರಿಯನ್ನು ಸಮಾಜಕ್ಕೆ ಸಾರಿದರು.



