ವಿಜಯಸಾಕ್ಷಿ ಸುದ್ದಿ, ಧಾರವಾಡ : ಮಾರ್ಚ್ 26ರ ಬೆಳಿಗ್ಗೆ ಅಗ್ರಿ ಯುನಿವರ್ಸಿಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆಯಲ್ಲಿ ಕಾರ್ ಒಂದರಲ್ಲಿ ಸೂಕ್ತ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ರೂ. 3,35,500 ಮೌಲ್ಯದ ಪ್ಯಾಂಟ್ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾ.26ರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬೆಳಗಾವಿಯಿಂದ ಗದಗ ನಗರಕ್ಕೆ ತೆರಳುತ್ತಿದ್ದ ಕೆಎ-01, ಎಂ.ಎಲ್-1243 ಸಂಖ್ಯೆಯ ಮಾರುತಿ ಸುಜುಕಿ ಏರ್ಟಿಗಾ ವಾಹನವನ್ನು ಅಗ್ರಿ ಯುನಿವರ್ಸಿಟಿ ಚೇಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಿದಾಗ ಪ್ರಸಿದ್ದ ಕಂಪನಿಗಳ 1,342 ಪ್ಯಾಂಟ್ ಪೀಸ್ ಬಟ್ಟೆಗಳು ದೊರೆತಿವೆ. ಇವುಗಳ ಮೌಲ್ಯ ರೂ. 3,35,500 ಆಗಿದ್ದು, ಇವು ವಾಹನ ಮಾಲೀಕ ಮೋಹಮ್ಮದ ಶಾಕೀರ್ ಶಾ ಅವರಿಗೆ ಸೇರಿವೆ. ಸೂಕ್ತವಾದ ದಾಖಲೆಗಳನ್ನು ಸಲ್ಲಿಸದಿರುವದರಿಂದ ಇವುಗಳನ್ನು ಚುನಾವಣೆಗೆ ಬಳಸಬಹುದಾದ ಸಂಶಯದ ಮೇಲೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಎಸಿ ಶಾಲಂ ಹುಸೇನ್, ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಅವರು ಎಂಸಿಸಿ ನೋಡಲ್ ಅಧಿಕಾರಿ ಮೋನಾ ರಾವುತ್, ಶಿವಪುತ್ರಪ್ಪ ಹೊಸಮನಿ ಅವರ ಮಾರ್ಗದರ್ಶನದಲ್ಲಿ ಎಸ್.ಎಸ್.ಟಿ ಮತ್ತು ಎಫ್.ಎಸ್.ಟಿ ತಂಡಗಳ ಸದಸ್ಯರು ಚೆಕ್ ಪೊಸ್ಟ್ ತಪಾಸಣೆ ಕಠಿಣಗೊಳಿಸಿದ್ದು, ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



