HomeGadag Newsಅಣ್ಣಿಗೇರಿ ಗುರುಗಳದು ಮೇರು ವ್ಯಕ್ತಿತ್ವ : ಡಿಡಿಪಿಐ ಎಂ.ಎ. ರಡ್ಡೇರ

ಅಣ್ಣಿಗೇರಿ ಗುರುಗಳದು ಮೇರು ವ್ಯಕ್ತಿತ್ವ : ಡಿಡಿಪಿಐ ಎಂ.ಎ. ರಡ್ಡೇರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಣ ತಜ್ಞ ಬಿ.ಜಿ. ಅಣ್ಣಿಗೇರಿ ಅವರು ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಹೇಳುವ ಮೂಲಕ ಗುರುಕುಲ ಮಾದರಿಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳನ್ನು ರೂಢಿಸಿದ ಮೇರು ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂದು ಡಿಡಿಪಿಐ ಎಂ.ಎ. ರಡ್ಡೇರ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ನಗರದ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮ ಹಾಗೂ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಸಹಯೋಗದಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಉಚಿತ ಟ್ಯೂಶನ್ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಬಿ.ಜಿ. ಅಣ್ಣಿಗೇರಿ ಅವರು ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಅತ್ಯುನ್ನತ ಸೇವೆಗೈದವರು. ತಾವಿರುವ ಕೊಠಡಿಯಲ್ಲಿ ತಮ್ಮೊಂದಿಗೆ ಇದ್ದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಪಾಠ ಹೇಳಿಕೊಡುವದನ್ನು ಪ್ರಾರಂಭಿಸಿದರು. ಕಾಲಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತ ಬಂತು. ಇಲ್ಲಿ ಪಾಠ ಹೇಳಿಸಿಕೊಂಡವರು ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಅತ್ಯುತ್ತಮ ಫಲಿತಾಂಶ ಕಂಡುಕೊಂಡರು. ಇಲ್ಲಿ ಟ್ಯೂಶನ್ ಹೇಳಿಸಿಕೊಂಡವರು ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿರುವದು ಅಣ್ಣಿಗೇರಿ ಗುರುಗಳ ಬೋಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಅಣ್ಣಿಗೇರಿ ಅವರೊಂದಿಗೆ ಇತರ ಶಿಕ್ಷಕ-ಶಿಕ್ಷಕಿಯರು ಬೇರೆ ಬೇರೆ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತ ಬಂದರು. ಅಣ್ಣಿಗೇರಿ ಅವರ ಅಗಲುವಿಕೆಯ ಬಳಿಕ ಈ ಆಶ್ರಮಕ್ಕೊಂದು ಹೊಸ ಆಯಾಮ ನೀಡಲಾಗಿದೆ. ಶಿಕ್ಷಣ ಪ್ರೇಮಿಗಳು ಒಗ್ಗೂಡಿ, ಗುರುಕುಲ ಆಶ್ರಮ ಪರಂಪರೆಯನ್ನು ಮುಂದುವರೆಸುವ ಮೂಲಕ ಅಣ್ಣಿಗೇರಿ ಗುರುಗಳ ಕನಸು, ಪರಂಪರೆಯನ್ನು ಮುಂದುವರೆಸಿದ್ದು ಅಭಿನಂದನೀಯ. ನಾನೂ ಇಲ್ಲಿ ಟ್ಯೂಶನ್ ಹೇಳಿಸಿಕೊಂಡಿದ್ದೇನೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ಎಸ್.ಎಸ್ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರಮನ್ ಆನಂದ ಪೋತ್ನೀಸ್ ಮಾತನಾಡಿ, ಈ ಗುರುಕುಲ ಆಶ್ರಮದಲ್ಲಿ ಶೃದ್ಧೆ ಮತ್ತು ನಿಷ್ಠೆಯಿಂದ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವದು ಎಂದರು.
ಇನ್ನೋರ್ವ ಮುಖ್ಯ ಅತಿಥಿ, ಆಶ್ರಮದ ಹಳೆಯ ವಿದ್ಯಾರ್ಥಿ ಹುಬ್ಬಳ್ಳಿ ಕೆಎಂಸಿಯ ಹಿರಿಯ ವೈದ್ಯಾಧಿಕಾರಿ ಡಾ. ಶರಣಬಸವ ಚೌಕಿಮಠ ಮಾತನಾಡಿ, ಟ್ಯೂಶನ್ ಇಂದು ಕಮರ್ಶಿಯಲ್ ಆಗಿ ಹಣ ಗಳಿಸುವ ವೃತ್ತಿಯಾಗಿದೆ. ಇಂತಹ ಸಂದರ್ಭದಲ್ಲೂ ಆಶ್ರಮದಲ್ಲಿ ಅನುಭವಿ ಶಿಕ್ಷಕರು ಮಕ್ಕಳಿಗೆ ಉಚಿತ ಬೋಧನೆಗೆ ಮುಂದಾಗಿರುವದು ಅಭಿನಂದನೀಯ ಎಂದರು.
trust
ವೇದಿಕೆಯ ಮೇಲೆ ಶಂಕ್ರಪ್ಪ ಅಣ್ಣಿಗೇರಿ, ಬಸವರಾಜ ಬಿಂಗಿ, ಸಿದ್ಧು ಕವಲೂರ, ಕೃಷ್ಣರಡ್ಡಿ ಗಿರಡ್ಡಿ, ಜಿ.ಎಂ. ಫಿರಂಗಿ ಉಪಸ್ಥಿತರಿದ್ದರು. ಪಾವನಿ ಮುನವಳ್ಳಿ ಪ್ರಾರ್ಥಿಸಿದರು. ಎಸ್.ಜಿ. ಅಣ್ಣಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಳಕಪ್ಪ ಕುರ್ತಕೋಟಿ ನಿರೂಪಿಸಿದರು. ಶಿವಾನಂದ ಕಟ್ಟಿ ವಂದಿಸಿದರು. ವಿಜಯಲಕ್ಷ್ಮಿ ಅಂಗಡಿ ಪ್ರಸಾದ ಸೇವೆ ವಹಿಸಿಕೊಂಡಿದ್ದರು.
ಶಿಕ್ಷಕ ವೃಂದದವರಾದ ಪ್ರಸನ್ನಕುಮಾರ, ಅರುಣಕುಮಾರ ಹಾದಿ, ಮಂಜುಳಾ, ಜ್ಯೋತಿ ವಡಗೇರಿ ಸೇರಿದಂತೆ ವಿದ್ಯಾರ್ಥಿಗಳು, ಪಾಲಕ, ಪೋಷಕರು ಪಾಲ್ಗೊಂಡಿದ್ದರು.
ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಎಚ್.ಪಾಟೀಲ ಮಾತನಾಡಿ, ಅಣ್ಣಿಗೇರಿ ಗುರುಗಳ ಕನಸು, ಸಂಕಲ್ಪಗಳನ್ನು ಸಾಕಾರಗೊಳಿಸುವ ನಿಟ್ಟಿಯಲ್ಲಿ ಪ್ರತಿಷ್ಠಾನವು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ. ಸರ್ವರ ಸಹಾಯ, ಸಹಕಾರದೊಂದಿಗೆ ಗುರುಕುಲ ಪದ್ಧತಿಯನ್ನು ಮುಂದುವರೆಸಿ ಈ ಭಾಗದಲ್ಲಿ ಕಲಿಸುವಿಕೆ ಮತ್ತು ಕಲಿಯುವಿಕೆಯಲ್ಲಿ ಸುಧಾರಣೆಗಳನ್ನು ತರಲು ಪ್ರಯತ್ನಿಸಲಾಗುವದು. ಒಟ್ಟಾರೆಯಾಗಿ ಈ ಭಾಗದ ಮಕ್ಕಳ ಭವಿಷ್ಯ ಸುಂದರವಾಗಿ ರೂಪುಗೊಳ್ಳುವಂತಾಗಬೇಕು ಎಂದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img