ಬೆಂಗಳೂರು: ನಗರದ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅಡಮಾನ ಚಿನ್ನ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಸುಮಾರು 2 ಕೆಜಿ 787 ಗ್ರಾಂ ಚಿನ್ನಾಭರಣ ಕಾಣೆಯಾಗಿದ್ದು, ಅದರ ಮೌಲ್ಯವನ್ನು 4 ಕೋಟಿ 12 ಲಕ್ಷ 65 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣ ಸಂಬಂಧ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಕಿರಣ್ ಕುಮಾರ್ ಅವರನ್ನು ಬಂಧಿಸಲಾಗಿದೆ.
ಪ್ರಕರಣ ಹೇಗೆ ಬಹಿರಂಗವಾಯಿತು?
ಗಿರಿನಗರ ಶಾಖೆಯಲ್ಲಿ ವ್ಯವಸ್ಥಾಪಕ ಹಾಗೂ ಸಹಾಯಕ ವ್ಯವಸ್ಥಾಪಕರ ಬಳಿ ಲಾಕರ್ ಕೀಲಿಗಳು ಇರುತ್ತಿದ್ದವು. ವ್ಯವಸ್ಥಾಪಕರು ಇಲ್ಲದ ಸಂದರ್ಭಗಳಲ್ಲಿ ಗ್ರಾಹಕರು ಅಡವಿಟ್ಟಿದ್ದ ಚಿನ್ನದ ಪ್ಯಾಕೇಟ್‌ಗಳಿಂದ ಸ್ವಲ್ಪಸ್ವಲ್ಪವಾಗಿ ಚಿನ್ನ ತೆಗೆದು ಕಳವು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಫೆಬ್ರವರಿ 2ರಂದು ಗ್ರಾಹಕರೊಬ್ಬರು ತಮ್ಮ ಚಿನ್ನವನ್ನು ಬಿಡಿಸಿಕೊಳ್ಳಲು ಬಂದಾಗ ಪ್ಯಾಕೇಟ್‌ನಲ್ಲಿ ಚಿನ್ನಾಭರಣ ಕಾಣೆಯಾಗಿರುವುದು ಪತ್ತೆಯಾಯಿತು. ತಕ್ಷಣ ಶಾಖಾ ವ್ಯವಸ್ಥಾಪಕಿ ತೃಪ್ತಿ ಝಾ ಇತರ ಪ್ಯಾಕೇಟ್‌ಗಳನ್ನು ಪರಿಶೀಲಿಸಿದಾಗ 24 ಪ್ಯಾಕೇಟ್‌ಗಳಲ್ಲಿ ತಿರುಚಾಟ ಕಂಡುಬಂದಿತು. ಅದರಲ್ಲಿ 21 ಪ್ಯಾಕೇಟ್‌ಗಳಲ್ಲಿ ಭಾಗಶಃ ಚಿನ್ನ ಮತ್ತು 3 ಪ್ಯಾಕೇಟ್‌ಗಳಲ್ಲಿ ಸಂಪೂರ್ಣ ಚಿನ್ನಾಭರಣ ಕಾಣೆಯಾಗಿತ್ತು.
ಈ ಮಾಹಿತಿ ಮುಖ್ಯ ವ್ಯವಸ್ಥಾಪಕ ದಿಲೀಪ್ ಕುಮಾರ್ ಅವರಿಗೆ ನೀಡಲಾಗಿದ್ದು, ಬಳಿಕ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೂಜಾಟದ ಚಟಕ್ಕೆ ಕಳವು:-
ತನಿಖೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಕದ್ದ ಚಿನ್ನವನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದು ಜೂಜಾಟ ಮತ್ತು ಬೆಟ್ಟಿಂಗ್‌ಗೆ ಬಳಸಿರುವುದು ತಿಳಿದುಬಂದಿದೆ. ಪೊಲೀಸರು ಈಗಾಗಲೇ ಸುಮಾರು 700 ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಚಿನ್ನ ವಶಪಡಿಸಿಕೊಳ್ಳಲು ಕ್ರಮ ಮುಂದುವರಿದಿದೆ.
ಕೆಲವು ಹಣಕಾಸು ಸಂಸ್ಥೆಗಳು ಕಳುವಾದ ಚಿನ್ನ ಹಸ್ತಾಂತರಿಸಲು ನಿರಾಕರಿಸಿರುವ ಹಿನ್ನೆಲೆ, ಪೊಲೀಸರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

