Home Blog Page 3

ರಣವೀರ್ ಸಿಂಗ್‌ಗೆ ಮತ್ತೆ ಬೆದರಿಕೆ; ಈ ಬಾರಿ ಸಿಬ್ಬಂದಿ-ಮ್ಯಾನೇಜರ್‌ಗಳಿಗೂ ಅಪಾಯ

0

ಬಾಲಿವುಡ್ ನಟ ರಣವೀರ್ ಸಿಂಗ್ ಮೇಲೆ ಮತ್ತೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ನೀಡಿರುವ ಘಟನೆ ನಡೆದಿದೆ.

ಈ ಬಾರಿ ಗ್ಯಾಂಗ್ ಕೇವಲ ರಣವೀರ್ ಅವರನ್ನು ಮಾತ್ರ ಗುರಿಯಾಗಿಸಲು ಹೊರಟಿಲ್ಲ, ಅವರ ಸಿಬ್ಬಂದಿ ಮತ್ತು ಮ್ಯಾನೇಜರ್‌ಗಳು ಕೂಡ ಅಪಾಯದಲ್ಲಿ ಇದ್ದಾರೆ ಎಂದು ಎಚ್ಚರಿಸಲಾಗಿದೆ. ಫೆಬ್ರವರಿ 10 ರಂದು ಮೊದಲ ವಾಟ್ಸಾಪ್ ವಾಯ್ಸ್ ನೋಟ್‌ನಲ್ಲಿ 1 ಕೋಟಿ ರೂ. ಬೇಡಿಕೆಯಾದದ್ದು ಮತ್ತು ಇದೀಗ ಬಂದ ಎರಡನೇ ವಾಯ್ಸ್ ನೋಟ್‌ನಲ್ಲಿ ಮಾತು ತಪ್ಪಿದರೆ ಶಿಕ್ಷೆ ಏನು ಎಂಬುದನ್ನು ಸೂಚಿಸಲಾಗಿದೆ.

ಗ್ಯಾಂಗ್ ಲೈನ್‌ನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿಯ ಹೆಸರನ್ನೂ ಉಲ್ಲೇಖಿಸಿದ್ದು, ಅವರಿಗೆ ಸಹ ಬೆದರಿಕೆ ನೀಡಲಾಗಿದೆ. ಪ್ರಸ್ತುತ, ದೀಪಿಕಾ ಪಡುಕೋಣೆ ಮತ್ತು ರಣವೀರ್ ವಾಸಿಸುವ ಅಪಾರ್ಟ್‌ಮೆಂಟ್‌ಗೆ ಸಶಸ್ತ್ರ ಗಾರ್ಡ್‌ಗಳು ನಿಯೋಜಿಸಲ್ಪಟ್ಟಿದ್ದು, ಮುಂಬೈ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಚಿರತೆ ದಾಳಿ; ಸಿಬ್ಬಂದಿ ಗಂಭೀರ!

0

ಬೆಂಗಳೂರು:- ಬನ್ನೇರುಘಟ್ಟ ಉದ್ಯಾನವನದಲ್ಲಿ ಚಿರತೆ ದಾಳಿ ಮಾಡಿದ ಪರಿಣಾಮ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಶಾಂತಪ್ಪ ಗಾಯಗೊಂಡ ಪ್ರಾಣಿ ಪಾಲಕ. ಸದ್ಯ ಶಾಂತಪ್ಪರನ್ನ ಜಿಗಣಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಘಟನೆ ಬಗ್ಗೆ ಶಾಂತಪ್ಪ ಪತ್ನಿ ಜಯಮ್ಮ ಪ್ರತಿಕ್ರಿಯಿಸಿದ್ದು, ಬನ್ನೇರುಘಟ್ಟ ಝೂನಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡೆಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಇದೀಗ ಚಿರತೆ ದಾಳಿ ಮಾಡಿದೆ. ಮನೆಗೆ ಆಧಾರವಾಗಿದ್ದಾರೆ. ಅವರನ್ನ ಖಾಯಂ ನೌಕರರನ್ನಾಗಿ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಧ್ಯ ಶಾಂತಪ್ಪ ಅವರ ಸ್ಥಿತಿ ಗಂಭೀರ ಆಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಯಲ್ಲಿ ಸುತ್ತಿಕೊಂಡಿದೆ; ಆರ್ ಅಶೋಕ್

0

ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಅವರ ಕುತ್ತಿಗೆಯಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸುತ್ತಿಕೊಂಡಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸಾವಿರ ದಿನದಲ್ಲಿ ಸಾವಿರಾರು ಹಗರಣಗಳ ಸರಮಾಲೆ ಸಿಎಂ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ರಾಜ್ಯದಲ್ಲಿ ಜನವಿರೋಧಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ದರಾಮಯ್ಯರಿಂದ ಮುಡಾ ಹಗರಣ ನಡೆದಿದೆ. ಮುಡಾ ಹಗರಣದ ಮೂಲ ಪುರುಷ ಸಿದ್ದರಾಮಯ್ಯ ಆಗಿದ್ದು, ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರೂ. ಹಣ ನುಂಗಿದ್ದಾರೆ. ಈ ವೇಳೆ ಸಚಿವರಾಗಿದ್ದ ನಾಗೇಂದ್ರ ರಾಜೀನಾಮೆ ಸಲ್ಲಿಸಿ, ಜೈಲಿಗೆ ಹೋಗಿದ್ದರು. ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದ್ದು, ಇನ್ಸ್‌ಪೆಕ್ಟರ್‌ ಸೇರಿ ವಿವಿಧ ಹುದ್ದೆಗಳಿಗೆ ಹಣ ಫಿಕ್ಸ್ ಮಾಡಿ, ಈ ಸರ್ಕಾರ ಲೂಟಿ ಹೊಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಗೃಹಲಕ್ಷ್ಮೀ ಹಣ ಕೊಡುವುದಾಗಿ ಹಣ ಲೂಟಿ ಹೊಡೆಯುತ್ತಿರುವ ಸರ್ಕಾರವು ಒಂದು ತಿಂಗಳ ಹಣ ನೀಡದೆ, ಅನ್ನಭಾಗ್ಯ ಹಣದಲ್ಲೂ ಲೂಟಿ ಹೊಡೆಯುತ್ತಿದೆ. ರೈತರ ರಸಗೊಬ್ಬರ ಸಹ ಲೂಟಿ ಹೊಡೆಯುತ್ತಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್ ನಡೆಯುತ್ತಿದೆ, ಹೆಣ್ಣು ಮಕ್ಕಳ ಸಾವು ನಡೀತಿದೆ. ರಾಜ್ಯದಲ್ಲಿ ಬ್ಯಾಂಕ್‌ಗಳ ಲೂಟಿ ನಡೆಯುತ್ತಿದೆ. ಪೊಲೀಸರೇ ಕಳ್ಳರಾದರೆ ರಾಜ್ಯದಲ್ಲಿ ಯಾವ ಸ್ಥಿತಿಯಿದೆ. ಅಧಿಕಾರಿಗಳು ಕೆಲಸ ಮಾಡುವ ಮೂಡ್‌ನಲ್ಲಿಲ್ಲ. ಒತ್ತಡದಲ್ಲಿ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಕೆಲವರು ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗ್ತಿದ್ದು, ಸರ್ಕಾರದ ಕಿರುಕುಳದಿಂದ ಸಾವುಗೀಡಾದ ಅಧಿಕಾರಿಗಳ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇದನ್ನು ಗೃಹ ಸಚಿವ ಪರಮೇಶ್ವರ್‌ಗೆ ಕೇಳಿದ್ರೆ ಗೊತ್ತಿಲ್ಲ ಅಂತಾರೆಂದು ಕಿಡಿಕಾರಿದ್ದಾರೆ.

ಈ ಕಾಂಗ್ರೆಸ್ ಸರ್ಕಾರಕ್ಕೆ ಮರಳು ದಂಧೆ ಎಟಿಎಂ ಆಗಿದ್ದು, ದೇವದುರ್ಗ ಜೆಡಿಎಸ್ ಶಾಸಕಿ ಮನೆಗೆ ನುಗ್ಗಿ ಗಲಾಟೆ ನಡೆಸಲಾಗಿದೆ. ಅಧಿಕಾರಿ ವರ್ಗ ಕಾಪಾಡಿ ಕಾಪಾಡಿ ಎಂಬ ಸ್ಥಿತಿಯಲ್ಲಿದೆ. ಆದ್ರೆ ಈ ಸರ್ಕಾರದಲ್ಲಿ ನಾನ್ ಸಿಎಂ, ನೀನ್ ಸಿಎಂ ಎಂದು ಇಬ್ಬರ ಜಗಳ ನಡೆದಿದೆ. ಇವ್ರೇ ಇರ್ತಾರಾ ನಾಳೆ ಹೋಗ್ತಾರಾ ಎಂಬ ಅತಂತ್ರ ಸ್ಥಿತಿಯಲ್ಲಿರುವ ಅಧಿಕಾರಿಗಳು ಲೂಟಿಗೆ ನಿಂತಿದ್ದಾರೆ. ನಾಳೆ ನಡೆಯುವ ಸಾವಿರ ದಿನದ ಕಾರ್ಯಕ್ರಮ ಸಹ ಲೂಟಿ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮಕ್ಕೆ ಲೂಟಿ ಮಂತ್ರಿಗಳು ಬರ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿದ್ಧರಾಮಯ್ಯಗೆ ಲೂಟಿ ಹಣ ನೀಡುವರು. ಇದು ಅಲಿಬಾಬಾ ಮತ್ತು ಮೂವತ್ತು ಜನ ಕಳ್ಳರ ಸರ್ಕಾರವಾಗಿದೆ. ಇವರದ್ದು ಸಾವಿರ ದಿನದ ಸಾಧನೆ ಶೂನ್ಯ, ಬರೀ ಲೂಟಿ ಲೂಟಿ ಎಂದು ಹರಿಹಾಯ್ದರು.

ಮಂಡ್ಯ| ವಿದ್ಯುತ್ ತಂತಿ ಸ್ಪರ್ಶಿಸಿ ಹೊತ್ತಿ ಉರಿದ ಲಾರಿ; ಅದೃಷ್ಟವಶಾತ್ ಚಾಲಕ ಪಾರು!

0

ಮಂಡ್ಯ:- ವಿದ್ಯುತ್ ತಂತಿ ಸ್ಪರ್ಶಿಸಿ ಲಾರಿಯೊಂದು ಹೊತ್ತಿ ಉರಿದಿರುವ ಘಟನೆ ಮಂಡ್ಯ ತಾಲ್ಲೂಕು ದೊಡ್ಡ ಬಾಣಸವಾಡಿ ಗೇಟ್ ಬಳಿ ಜರುಗಿದೆ.

ಘಟನೆಯಲ್ಲಿ ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೆರಗೋಡು ಮುಖ್ಯ ರಸ್ತೆಯಲ್ಲಿ ಮಂಡ್ಯ ಕಡೆಗೆ ಕಬ್ಬಿನ ತರಗುತುಂಬಿ ಬರುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಏಕಾಏಕಿ ಬೆಂಕಿ ಹೊತ್ತುಕೊಂಡು ಉರಿದಿದೆ.

ಘಟನೆಯಿಂದ ಲಾರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ| ಅನುಮತಿ ಇಲ್ಲದೆ ಸಾಗುವ ಕಲ್ಲು ಗಣಿಗಾರಿಕೆ; ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

0

ಯಾದಗಿರಿ:- ಜಿಲ್ಲೆಯಲ್ಲಿ ಶಿರವಾಳ ಹಾಗೂ ಅಣಬಿ ಗ್ರಾಮಗಳಲ್ಲಿ ಪರವಾನಗಿ ಪಡೆಯದೇ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಯ ನಷ್ಟವಾಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಜೆಸಿಬಿ ಬಳಸಿ ನೂರಾರು ಅಡಿ ಭೂಗರ್ಭ ಅಗ್ಗವಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸೈಲೆಂಟ್ ಆಗಿದ್ದಾರೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯನ್ನು ಬಳಸುತ್ತಿದ್ದು, ಯಾವುದೇ ಅಪಘಾತ ಸಂಭವಿಸಿದರೆ ಜನರ ಜೀವಕ್ಕೆ ಹಾನಿ ಸಂಭವಿಸಬಹುದು.

ಅಕ್ರಮ ಗಣಿಗಾರಿಕೆಯಿಂದ ಉಂಟಾದ ಕಲ್ಲು ಕಲಬುರಗಿ, ಯಾದಗಿರಿ ಮತ್ತು ಇತರ ಭಾಗಗಳಲ್ಲಿ ಮಾರಾಟವಾಗುತ್ತಿದೆ ಮತ್ತು ಮನೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. ತಹಶೀಲ್ದಾರ್ ಸಿದ್ಧಾರೂಢರು ಈ ಬಗ್ಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

13 ಮಂದಿಗೆ ಲಾಡ್ಲೆ ಮಶಾಕ್ ದರ್ಗಾ ಶಿವಲಿಂಗ ಪೂಜೆ ಮಾಡಲು ಅವಕಾಶ ನೀಡಿದ ಕಲಬುರಗಿ ಹೈಕೋರ್ಟ್

0

ಕಲಬುರಗಿ: ಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗದಲ್ಲಿ ಪೂಜೆ ಸಲ್ಲಿಸಲು 13 ಜನರಿಗೆ ಕಲಬುರಗಿ ಹೈಕೋರ್ಟ್ ಇಂದು ಅವಕಾಶ ಕಲ್ಪಿಸಿದೆ.

ಹಿಂದೂ ಮುಖಂಡ ಗುರುಶಾಂತ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ನಂತರ, ನ್ಯಾಯಮೂರ್ತಿ ಇಂದ್ರೀಶ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಈ 13 ಮಂದಿಗೆ ಮಧ್ಯಾಹ್ನ 2ರಿಂದ ಸಂಜೆ 8 ಗಂಟೆಯವರೆಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ನಿನ್ನೆ ಜಿಲ್ಲಾಡಳಿತ ಹಿಂದೂ ಮುಖಂಡರಿಂದ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೋಗಿ ಅವಕಾಶ ಪಡೆಯಲು ಮುಂದಾದರು. ಇದೀಗ ಹೈಕೋರ್ಟ್ ಆದೇಶದಿಂದ ಪೂಜೆ ಜಾರಿಗೆ ಬರುವ ಮೂಲಕ ಹಿಂದೂ ಸಮುದಾಯಕ್ಕೆ ನ್ಯಾಯಮೂಲಕ ಹಕ್ಕು ದೊರಕಿದೆ.

ಸಿಐಡಿ ವಶದಲ್ಲಿರುವ ಭೈರತಿ ಬಸವರಾಜ್‌ಗೆ ಹೃದಯ ಸಮಸ್ಯೆ: ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಕೋರ್ಟ್ ಆದೇಶ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ 42ನೇ ಎಸಿಜೆಎಂ ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ.

ಹೃದಯ ಸಂಬಂಧಿ ಸಮಸ್ಯೆ ಇರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ ಹಿರಿಯ ವೈದ್ಯರ ಸಮ್ಮುಖದಲ್ಲಿ ಸಂಪೂರ್ಣ ತಪಾಸಣೆಗೆ ಒಳಪಡಿಸಲು ಸಿಐಡಿಗೆ ಆದೇಶಿಸಲಾಗಿದೆ.

ಇಂದು ಅವರನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಯಲ್ಲಿ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಹೃದಯ ಸಮಸ್ಯೆಯ ಲಕ್ಷಣಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ಅವರಿಗೆ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದ್ದು, ಸಿಐಡಿ ಸುಪರ್ದಿಯಲ್ಲೇ ಮೆಡಿಕಲ್ ಟೆಸ್ಟ್ ನಡೆಸಬೇಕು ಎಂದು ತಿಳಿಸಿದೆ. ನಾಳೆ ವೈದ್ಯಕೀಯ ವರದಿಯೊಂದಿಗೆ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಬೌರಿಂಗ್ ಮತ್ತು ಜಯದೇವ ಆಸ್ಪತ್ರೆಗಳ ವರದಿಗಳ ಆಧಾರದ ಮೇಲೆ ಆರೋಪಿಯನ್ನು ಜೈಲು ಶಿಕ್ಷೆಗೆ ಕಳುಹಿಸಲಾಗುವುದೇ ಅಥವಾ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗುವುದೇ ಎಂಬುದು ತೀರ್ಮಾನವಾಗಲಿದೆ.

ಫಿಲಂ ಚೇಂಬರ್ನಲ್ಲೇ ಹೃದಯಾಘಾತ: 100ಕ್ಕೂ ಹೆಚ್ಚು ಚಿತ್ರಗಳಿಗೆ ಜೀವ ತುಂಬಿದ ಜೋ ಸೈಮನ್ ನಿಧನ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭಾರೀ ನಷ್ಟ ಸಂಭವಿಸಿದೆ. ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲ ನೀಡಲಿಲ್ಲ. 80 ವರ್ಷದ ಜೋ ಸೈಮನ್ ಅವರ ಅಗಲಿಕೆ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

1977ರಿಂದ ಆರಂಭವಾದ ಅವರ ನಿರ್ದೇಶನ ಪಯಣ ಹಲವು ದಶಕಗಳ ಕಾಲ ಮುಂದುವರಿದಿತು. ಆಕ್ಷನ್, ಥ್ರಿಲ್ಲರ್ ಹಾಗೂ ಪ್ರೇಮಕಥಾ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ನಟ ಹಾಗೂ ಗೀತರಚನೆಕಾರರಾಗಿ ಕೂಡ ತಮ್ಮ ಗುರುತು ಮೂಡಿಸಿದ್ದರು.

ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಜೋ ಸೈಮನ್ ಅವರ ಅಗಲಿಕೆ ಒಂದು ಯುಗದ ಅಂತ್ಯವೆಂದು ಚಿತ್ರರಂಗದ ವಲಯಗಳು ಹೇಳುತ್ತಿವೆ. ಅವರ ಸ್ಮರಣೆ ಕನ್ನಡ ಸಿನಿ ಇತಿಹಾಸದಲ್ಲಿ ಸದಾಕಾಲ ಉಳಿಯಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ..!

0

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 14 ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆ ಹೊರಡಿಸಿದ್ದು,

ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದೆ. ತುಮಕೂರಿನ ಶಿರಾ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿಯೂ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಯಾವ ಯಾವ ಪ್ರದೇಶಗಳಲ್ಲಿ ವ್ಯತ್ಯಯ?

ಜಾಲಹಳ್ಳಿ ಪ್ರದೇಶ:
ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ, ಬಾಹುಬಲಿ ನಗರ, ಬ್ಲೂಮ್‌ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಪ್ರೆಸ್ಟೀಜ್ ಕೆನ್ಸಿಂಗ್ಟನ್, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ದೊಮ್ಮಲೂರು ಪ್ರದೇಶ:
ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ ಹಂತ (6ನೇ ಮೇನ್‌ವರೆಗೆ), ಇಎಸ್‌ಐ ಆಸ್ಪತ್ರೆ, 100 ಅಡಿ ರಸ್ತೆ, ಸಲಾರ್ಪುರಿಯಾ ಜಿಆರ್ ಟೆಕ್ ಪಾರ್ಕ್, ಜೆಆರ್‌ಆರ್ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ಮೈಸೂರು ರಸ್ತೆ ಭಾಗ:
ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್‌ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರದು.

ನೃಪತುಂಗ ರಸ್ತೆ ಭಾಗ:
ಕುಬ್ಬನ್‌ಪೇಟೆ 3ನೇ, 4ನೇ, 5ನೇ, 6ನೇ ಕ್ರಾಸ್, 13ನೇ, 14ನೇ, 15ನೇ ಕ್ರಾಸ್, ಆರ್‌ಬಿಐ, ಯು‌ವಿ‌ಸಿ‌ಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಸೇಂಟ್ ಮಾರ್ತಾ ಆಸ್ಪತ್ರೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆಎಎಸ್ ಲೇನ್, ಕೆಜಿ ರಸ್ತೆ, ಓಟಿಸಿ ರಸ್ತೆ, ಶಾರದಾ ಥಿಯೇಟರ್, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ ಪ್ರದೇಶಗಳಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಪ್ರಕಟಣೆಯಂತೆ, ನಿರ್ವಹಣಾ ಕಾರ್ಯಗಳ ನಂತರ ವಿದ್ಯುತ್ ಸರಬರಾಜು ಮರುಸ್ಥಾಪನೆ ಮಾಡಲಾಗುವುದು

SC-ST ಸಮುದಾಯಕ್ಕೆ ನಿವೇಶನ ಯೋಜನೆಗೆ ಗ್ರೀನ್ ಸಿಗ್ನಲ್: ಸಚಿವ ಸತೀಶ್ ಜಾರಕಿಹೊಳಿ

0

ದಾವಣಗೆರೆ: ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ನಿವೇಶನ ನೀಡುವ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ. ಹರಿಹರದಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಉತ್ತಮ ಬಜೆಟ್ ನಿರೀಕ್ಷೆ ಇದೆ. ಎಸ್ಸಿ–ಎಸ್ಟಿ ಸಮುದಾಯದವರಿಗೆ ನಿವೇಶನ ನೀಡುವ ಯೋಜನೆಗೂ ಒಪ್ಪಿಗೆ ದೊರೆತಿದೆ ಎಂದರು. ಸಾಮಾನ್ಯವಾಗಿ ಪ್ರತಿವರ್ಷ ಬಜೆಟ್ ಮೊತ್ತವು 10ರಿಂದ 20 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.

ದುರ್ಗದ ಉತ್ಸವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.

error: Content is protected !!