Home Blog Page 4

ಯಾದಗಿರಿ| ಅನುಮತಿ ಇಲ್ಲದೆ ಸಾಗುವ ಕಲ್ಲು ಗಣಿಗಾರಿಕೆ; ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ

0

ಯಾದಗಿರಿ:- ಜಿಲ್ಲೆಯಲ್ಲಿ ಶಿರವಾಳ ಹಾಗೂ ಅಣಬಿ ಗ್ರಾಮಗಳಲ್ಲಿ ಪರವಾನಗಿ ಪಡೆಯದೇ ಭಾರಿ ಪ್ರಮಾಣದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಕೆಲವು ವರ್ಷಗಳಿಂದ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿಯ ನಷ್ಟವಾಗುತ್ತಿದೆ. ರಸ್ತೆ ಪಕ್ಕದಲ್ಲಿಯೇ ಜೆಸಿಬಿ ಬಳಸಿ ನೂರಾರು ಅಡಿ ಭೂಗರ್ಭ ಅಗ್ಗವಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಸೈಲೆಂಟ್ ಆಗಿದ್ದಾರೆ. ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯನ್ನು ಬಳಸುತ್ತಿದ್ದು, ಯಾವುದೇ ಅಪಘಾತ ಸಂಭವಿಸಿದರೆ ಜನರ ಜೀವಕ್ಕೆ ಹಾನಿ ಸಂಭವಿಸಬಹುದು.

ಅಕ್ರಮ ಗಣಿಗಾರಿಕೆಯಿಂದ ಉಂಟಾದ ಕಲ್ಲು ಕಲಬುರಗಿ, ಯಾದಗಿರಿ ಮತ್ತು ಇತರ ಭಾಗಗಳಲ್ಲಿ ಮಾರಾಟವಾಗುತ್ತಿದೆ ಮತ್ತು ಮನೆ, ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ನಿರ್ಮಾಣ ಕಾರ್ಯಗಳಲ್ಲಿ ಬಳಸಲಾಗುತ್ತಿದೆ. ತಹಶೀಲ್ದಾರ್ ಸಿದ್ಧಾರೂಢರು ಈ ಬಗ್ಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

13 ಮಂದಿಗೆ ಲಾಡ್ಲೆ ಮಶಾಕ್ ದರ್ಗಾ ಶಿವಲಿಂಗ ಪೂಜೆ ಮಾಡಲು ಅವಕಾಶ ನೀಡಿದ ಕಲಬುರಗಿ ಹೈಕೋರ್ಟ್

0

ಕಲಬುರಗಿ: ಲಾಡ್ಲೆ ಮಶಾಕ್ ದರ್ಗಾದ ಶಿವಲಿಂಗದಲ್ಲಿ ಪೂಜೆ ಸಲ್ಲಿಸಲು 13 ಜನರಿಗೆ ಕಲಬುರಗಿ ಹೈಕೋರ್ಟ್ ಇಂದು ಅವಕಾಶ ಕಲ್ಪಿಸಿದೆ.

ಹಿಂದೂ ಮುಖಂಡ ಗುರುಶಾಂತ ಸಲ್ಲಿಸಿದ್ದ ಅರ್ಜಿಯನ್ನು ಕಲಬುರಗಿ ಏಕಸದಸ್ಯ ಪೀಠ ವಿಚಾರಣೆ ನಡೆಸಿದ ನಂತರ, ನ್ಯಾಯಮೂರ್ತಿ ಇಂದ್ರೀಶ್ ಅವರು ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ, ಈ 13 ಮಂದಿಗೆ ಮಧ್ಯಾಹ್ನ 2ರಿಂದ ಸಂಜೆ 8 ಗಂಟೆಯವರೆಗೆ ಪೂಜೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.

ನಿನ್ನೆ ಜಿಲ್ಲಾಡಳಿತ ಹಿಂದೂ ಮುಖಂಡರಿಂದ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದು, ಹೈಕೋರ್ಟ್ ಮೊರೆ ಹೋಗಿ ಅವಕಾಶ ಪಡೆಯಲು ಮುಂದಾದರು. ಇದೀಗ ಹೈಕೋರ್ಟ್ ಆದೇಶದಿಂದ ಪೂಜೆ ಜಾರಿಗೆ ಬರುವ ಮೂಲಕ ಹಿಂದೂ ಸಮುದಾಯಕ್ಕೆ ನ್ಯಾಯಮೂಲಕ ಹಕ್ಕು ದೊರಕಿದೆ.

ಸಿಐಡಿ ವಶದಲ್ಲಿರುವ ಭೈರತಿ ಬಸವರಾಜ್‌ಗೆ ಹೃದಯ ಸಮಸ್ಯೆ: ಸಂಪೂರ್ಣ ವೈದ್ಯಕೀಯ ತಪಾಸಣೆಗೆ ಕೋರ್ಟ್ ಆದೇಶ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಂತೆ 42ನೇ ಎಸಿಜೆಎಂ ನ್ಯಾಯಾಲಯ ಮಹತ್ವದ ನಿರ್ದೇಶನ ನೀಡಿದೆ.

ಹೃದಯ ಸಂಬಂಧಿ ಸಮಸ್ಯೆ ಇರುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ ಅವರನ್ನು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಯಲ್ಲಿ ಹಿರಿಯ ವೈದ್ಯರ ಸಮ್ಮುಖದಲ್ಲಿ ಸಂಪೂರ್ಣ ತಪಾಸಣೆಗೆ ಒಳಪಡಿಸಲು ಸಿಐಡಿಗೆ ಆದೇಶಿಸಲಾಗಿದೆ.

ಇಂದು ಅವರನ್ನು ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಯಲ್ಲಿ ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಹೃದಯ ಸಮಸ್ಯೆಯ ಲಕ್ಷಣಗಳು ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ತನಿಖಾಧಿಕಾರಿ ಡಿವೈಎಸ್‌ಪಿ ಗೌತಮ್ ಅವರಿಗೆ ನ್ಯಾಯಾಲಯ ಸ್ಪಷ್ಟ ಸೂಚನೆ ನೀಡಿದ್ದು, ಸಿಐಡಿ ಸುಪರ್ದಿಯಲ್ಲೇ ಮೆಡಿಕಲ್ ಟೆಸ್ಟ್ ನಡೆಸಬೇಕು ಎಂದು ತಿಳಿಸಿದೆ. ನಾಳೆ ವೈದ್ಯಕೀಯ ವರದಿಯೊಂದಿಗೆ ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಲು ಸೂಚನೆ ನೀಡಲಾಗಿದೆ.

ಬೌರಿಂಗ್ ಮತ್ತು ಜಯದೇವ ಆಸ್ಪತ್ರೆಗಳ ವರದಿಗಳ ಆಧಾರದ ಮೇಲೆ ಆರೋಪಿಯನ್ನು ಜೈಲು ಶಿಕ್ಷೆಗೆ ಕಳುಹಿಸಲಾಗುವುದೇ ಅಥವಾ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಕಸ್ಟಡಿಗೆ ನೀಡಲಾಗುವುದೇ ಎಂಬುದು ತೀರ್ಮಾನವಾಗಲಿದೆ.

ಫಿಲಂ ಚೇಂಬರ್ನಲ್ಲೇ ಹೃದಯಾಘಾತ: 100ಕ್ಕೂ ಹೆಚ್ಚು ಚಿತ್ರಗಳಿಗೆ ಜೀವ ತುಂಬಿದ ಜೋ ಸೈಮನ್ ನಿಧನ

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಭಾರೀ ನಷ್ಟ ಸಂಭವಿಸಿದೆ. ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅಸ್ವಸ್ಥಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲ ನೀಡಲಿಲ್ಲ. 80 ವರ್ಷದ ಜೋ ಸೈಮನ್ ಅವರ ಅಗಲಿಕೆ ಸಿನಿರಂಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

1977ರಿಂದ ಆರಂಭವಾದ ಅವರ ನಿರ್ದೇಶನ ಪಯಣ ಹಲವು ದಶಕಗಳ ಕಾಲ ಮುಂದುವರಿದಿತು. ಆಕ್ಷನ್, ಥ್ರಿಲ್ಲರ್ ಹಾಗೂ ಪ್ರೇಮಕಥಾ ಚಿತ್ರಗಳ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.

‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿದ್ದಾರೆ. ನಿರ್ದೇಶನ ಮಾತ್ರವಲ್ಲದೆ ನಟ ಹಾಗೂ ಗೀತರಚನೆಕಾರರಾಗಿ ಕೂಡ ತಮ್ಮ ಗುರುತು ಮೂಡಿಸಿದ್ದರು.

ಕನ್ನಡ ಚಿತ್ರರಂಗದ ಹಿರಿಯ ತಲೆಮಾರಿನೊಂದಿಗೆ ನಿಕಟ ಸಂಬಂಧ ಹೊಂದಿದ್ದ ಜೋ ಸೈಮನ್ ಅವರ ಅಗಲಿಕೆ ಒಂದು ಯುಗದ ಅಂತ್ಯವೆಂದು ಚಿತ್ರರಂಗದ ವಲಯಗಳು ಹೇಳುತ್ತಿವೆ. ಅವರ ಸ್ಮರಣೆ ಕನ್ನಡ ಸಿನಿ ಇತಿಹಾಸದಲ್ಲಿ ಸದಾಕಾಲ ಉಳಿಯಲಿದೆ.

Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರಲ್ಲ..!

0

ಬೆಂಗಳೂರು: ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಫೆಬ್ರವರಿ 14 ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಪ್ರಕಟಣೆ ಹೊರಡಿಸಿದ್ದು,

ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದೆ. ತುಮಕೂರಿನ ಶಿರಾ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿಯೂ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.

ಯಾವ ಯಾವ ಪ್ರದೇಶಗಳಲ್ಲಿ ವ್ಯತ್ಯಯ?

ಜಾಲಹಳ್ಳಿ ಪ್ರದೇಶ:
ಡಿಬಿ ಸಂದ್ರ 2ನೇ ಮತ್ತು 4ನೇ ಬ್ಲಾಕ್, ಜೆಬಿ ಕಾವಲ್ ಟ್ರೀ ಪಾರ್ಕ್, ಗಂಗಮ್ಮ ಸರ್ಕಲ್, ಕಮ್ಮಗೊಂಡನಹಳ್ಳಿ, ಬಿಇಎಲ್ ಉತ್ತರ ಮತ್ತು ದಕ್ಷಿಣ ಕಾಲೋನಿ, ಬಾಹುಬಲಿ ನಗರ, ಬ್ಲೂಮ್‌ಫೀಲ್ಡ್ ಗಾರ್ಡನ್, ರಾಮಚಂದ್ರಾಪುರ, ಎಚ್‌ಎಂಟಿ ಇಂಡಸ್ಟ್ರಿಯಲ್ ಎಸ್ಟೇಟ್, ಪ್ರೆಸ್ಟೀಜ್ ವೆಲ್ಲಿಂಗ್ಟನ್, ಪ್ರೆಸ್ಟೀಜ್ ಕೆನ್ಸಿಂಗ್ಟನ್, ಚಾಮುಂಡೇಶ್ವರಿ ಲೇಔಟ್, ನಂಜಪ್ಪ ಲೇಔಟ್ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ದೊಮ್ಮಲೂರು ಪ್ರದೇಶ:
ದೊಮ್ಮಲೂರು 2ನೇ ಹಂತ, ಕೋಡಿಹಳ್ಳಿ, ಯೋಗಾನಂದ ಲೇಔಟ್, ಪರಮಹಂಸ ರಸ್ತೆ, ಧೂಪನಹಳ್ಳಿ, ಎಚ್‌ಎಎಲ್ 2ನೇ ಹಂತ (6ನೇ ಮೇನ್‌ವರೆಗೆ), ಇಎಸ್‌ಐ ಆಸ್ಪತ್ರೆ, 100 ಅಡಿ ರಸ್ತೆ, ಸಲಾರ್ಪುರಿಯಾ ಜಿಆರ್ ಟೆಕ್ ಪಾರ್ಕ್, ಜೆಆರ್‌ಆರ್ ಲೇಔಟ್, ಡೈಮಂಡ್ ಡಿಸ್ಟ್ರಿಕ್ಟ್ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ಮೈಸೂರು ರಸ್ತೆ ಭಾಗ:
ಶಾಮಣ್ಣ ಗಾರ್ಡನ್, ಮಂಜುನಾಥ ನಗರ, ಪೈಪ್‌ಲೈನ್ ರಸ್ತೆ, ಸಂತೋಷ್ ಟೆಂಟ್ ಪ್ರದೇಶ, ನ್ಯೂ ಗುಡ್ಡದಹಳ್ಳಿ, ಕುವೆಂಪು ನಗರ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಇರದು.

ನೃಪತುಂಗ ರಸ್ತೆ ಭಾಗ:
ಕುಬ್ಬನ್‌ಪೇಟೆ 3ನೇ, 4ನೇ, 5ನೇ, 6ನೇ ಕ್ರಾಸ್, 13ನೇ, 14ನೇ, 15ನೇ ಕ್ರಾಸ್, ಆರ್‌ಬಿಐ, ಯು‌ವಿ‌ಸಿ‌ಇ, ಕೃಷಿ ಕಚೇರಿ, ಸರ್ಕಾರಿ ಕಲಾ ಕಾಲೇಜು, ಸೇಂಟ್ ಮಾರ್ತಾ ಆಸ್ಪತ್ರೆ, ನಾಗರ್ತಪೇಟೆ ಮುಖ್ಯ ರಸ್ತೆ, ಕೆಎಎಸ್ ಲೇನ್, ಕೆಜಿ ರಸ್ತೆ, ಓಟಿಸಿ ರಸ್ತೆ, ಶಾರದಾ ಥಿಯೇಟರ್, ಎಸ್‌ಪಿ ರಸ್ತೆ, ಎಸ್‌ಜೆಪಿ ರಸ್ತೆ, ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆ ಪ್ರದೇಶಗಳಲ್ಲಿಯೂ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ಪ್ರಕಟಣೆಯಂತೆ, ನಿರ್ವಹಣಾ ಕಾರ್ಯಗಳ ನಂತರ ವಿದ್ಯುತ್ ಸರಬರಾಜು ಮರುಸ್ಥಾಪನೆ ಮಾಡಲಾಗುವುದು

SC-ST ಸಮುದಾಯಕ್ಕೆ ನಿವೇಶನ ಯೋಜನೆಗೆ ಗ್ರೀನ್ ಸಿಗ್ನಲ್: ಸಚಿವ ಸತೀಶ್ ಜಾರಕಿಹೊಳಿ

0

ದಾವಣಗೆರೆ: ಎಸ್ಸಿ ಮತ್ತು ಎಸ್ಟಿ ಸಮುದಾಯದವರಿಗೆ ನಿವೇಶನ ನೀಡುವ ಯೋಜನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ. ಹರಿಹರದಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ಸರ್ಕಾರಿ ಜಾಗಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.

ಮಾರ್ಚ್ 6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಉತ್ತಮ ಬಜೆಟ್ ನಿರೀಕ್ಷೆ ಇದೆ. ಎಸ್ಸಿ–ಎಸ್ಟಿ ಸಮುದಾಯದವರಿಗೆ ನಿವೇಶನ ನೀಡುವ ಯೋಜನೆಗೂ ಒಪ್ಪಿಗೆ ದೊರೆತಿದೆ ಎಂದರು. ಸಾಮಾನ್ಯವಾಗಿ ಪ್ರತಿವರ್ಷ ಬಜೆಟ್ ಮೊತ್ತವು 10ರಿಂದ 20 ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದರು.

ದುರ್ಗದ ಉತ್ಸವದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಸೂಕ್ತ ಸಮಯದಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್ ನೀಡುವ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಮಹಿಳೆಯರಿಗೆ ಉಚಿತ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಸಾವಿರ ದಿನಗಳ ಸಂಭ್ರಮವಲ್ಲ, ಸಮಸ್ಯೆಗಳ ಉಲ್ಬಣ: ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

0

ಹಾಸನ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ದರೋಡೆ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ಸಾವಿರ ದಿನಗಳ ಸಾಧನೆ ಎನ್ನುವುದಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿವೆ ಎಂದು ಟೀಕಿಸಿದರು.ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಶ್ನೆ ಎತ್ತಿದ ಅವರು,

ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ರೂ.2,000 ನೀಡುವುದಾಗಿ ಹೇಳಿದ್ದರೂ, ಅದು ಸಕಾಲದಲ್ಲಿ ಲಾಭಾರ್ಥಿಗಳಿಗೆ ತಲುಪಿಲ್ಲ ಎಂದು ಆರೋಪಿಸಿದರು. 2025ರ ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಬಿಡುಗಡೆ ಆಗಿಲ್ಲ ಎಂದು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲಾಗಿಲ್ಲ ಎಂದು ಹೇಳಿದರು.

ಸಚಿವರು ಸದನದಲ್ಲಿ ಕಣ್ತಪ್ಪಿನಿಂದಾಗಿದೆ ಅಥವಾ ಹಣಕಾಸು ಇಲಾಖೆ ಬಿಡುಗಡೆ ಮಾಡಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿ, ಇದನ್ನು ಜವಾಬ್ದಾರಿಯುತ ಉತ್ತರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಸಾವಿರ ದಿನಗಳ ಸಂಭ್ರಮಾಚರಣೆ ನಡೆಸುವುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ನಾಳೆ ಡಾ. ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮ!

0

ಬೆಂಗಳೂರು: ಇತ್ತೀಚೆಗೆ ಲಿಂಗೈಕ್ಯರಾದ ಮಾಜಿ ಸಚಿವರು, ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಗೌರವಾರ್ಥ ಫೆಬ್ರವರಿ 14ರಂದು (ಶನಿವಾರ) ಸಂಜೆ ಬೆಂಗಳೂರಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಬೆಂಗಳೂರು ಅರಮನೆ ಆವರಣದ ಗೇಟ್ 4ರಲ್ಲಿರುವ ಗಾಯತ್ರಿ ವಿಹಾರದಲ್ಲಿ ಈ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ನುಡಿನಮನ ಸಲ್ಲಿಸಲಿದ್ದಾರೆ.

ರಾಜ್ಯ ಸಚಿವ ಸಂಪುಟದ ಸಚಿವರುಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಹಾಸಭಾದ ರಾಜ್ಯ ಘಟಕಗಳ ವಿವಿಧ ರಾಜ್ಯ ಘಟಕಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ಭೀಮಣ್ಣ ಖಂಡ್ರೆ ಅವರು ಸಭೆಗೆ ಸ್ವಂತ ನಿವೇಶನ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ ಸಭಾ ಸ್ವಾವಲಂಬಿಯಾಗುವಂತೆ ಮಾಡಿದ ಮಹತ್ತರ ಕೊಡುಗೆ ಸಮಾಜ ಎಂದಿಗೂ ಮರೆಯುವುದಿಲ್ಲ. ಭಾಲ್ಕಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯ ಬಳಿಕ ಇದೀಗ ಬೆಂಗಳೂರಿನಲ್ಲಿ ನುಡಿನಮನ ಹಮ್ಮಿಕೊಳ್ಳಲಾಗಿದೆ.

ಅವಹೇಳನಕಾರಿ ಬರಹ ಪ್ರಕರಣ: ಶಾಸಕ ಆರಗ ಜ್ಞಾನೇಂದ್ರ ಆಪ್ತನಿಗೆ ಜಾಮೀನು ಮಂಜೂರು!

0

ಶಿವಮೊಗ್ಗ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಹಂಚಿಕೊಂಡ ಆರೋಪದಡಿ ಬಂಧನಕ್ಕೊಳಗಾಗಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಅವರನ್ನು 2026ರ ಫೆಬ್ರವರಿ 11ರಂದು ಹೊಸನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಫೆಬ್ರವರಿ 12ರಂದು ಹೊಸನಗರ ನ್ಯಾಯಿಕ ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ. ಅವರು ಒಂದು ದಿನ ನ್ಯಾಯಾಂಗ ಬಂಧನದಲ್ಲಿದ್ದು ನಂತರ ಬಿಡುಗಡೆಗೊಂಡಿದ್ದಾರೆ.

ರಾಜೇಶ್ ಹಿರಿಮನೆ ಅವರು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು, ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗವನ್ನು ಪಾಕಿಸ್ತಾನ ಸೇನೆಯ ಅಧಿಕಾರಿಯೊಬ್ಬರ ಚಿತ್ರ ಜತೆ ಸಂಯೋಜಿಸಿ “ಒನ್ ಅಜೆಂಡಾ” ಎಂಬ ಸಾಲು ಸೇರಿಸಿ ಪ್ರಕಟಿಸಿದ್ದರು.

ಈ ಬರಹ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಗಮನಿಸಿದ ಹೊಸನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 353(2) ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.

ಸಂಜೀವಿನಿ ಗುಡ್ಡದಲ್ಲಿ ನಿಗೂಢ ಖಜಾನೆ? ಋಷಿಮುನಿ ತಪಸ್ಸು, ಚಿನ್ನದ ರಥ ಮತ್ತು 10 ವರ್ಷ ಹಳೆಯ ಸ್ವಾಮೀಜಿ ಪ್ರಕರಣದ ಹೊಸ ಸತ್ಯ!

0

ಗದಗ: ಐತಿಹಾಸಿಕ ಲಕ್ಕುಂಡಿಯ ಚಿನ್ನದ ನಿಧಿ ಪತ್ತೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಸಂಚಲನಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಪ್ಪತ್ತಗುಡ್ಡದ ಸಂಜೀವಿನಿ ಗುಡ್ಡದ ಒಳಗಿರುವ ಗುಹೆಯಲ್ಲಿ ಅಪಾರ ಸಂಪತ್ತಿದೆ ಎಂಬ ಆಘಾತಕಾರಿ ಮಾಹಿತಿ ಗ್ರಾಮಸ್ಥರಿಂದ ಕೇಳಿ ಬಂದಿದೆ.

ಲಕ್ಕುಂಡಿ — ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು ಮತ್ತು ರಾಷ್ಟ್ರಕೂಟರ ಆಡಳಿತ ಕಂಡ ಐತಿಹಾಸಿಕ ಕೇಂದ್ರ. ಇತ್ತೀಚೆಗೆ 466 ಗ್ರಾಮ ಚಿನ್ನ ಪತ್ತೆಯಾದ ಹಿನ್ನೆಲೆ, ಈ ಪ್ರದೇಶದ ಭೂಗರ್ಭ ರಹಸ್ಯಗಳ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಇದೀಗ ಅತ್ತಿಕಟ್ಟಿ ಗ್ರಾಮಸ್ಥರು ಹೇಳುತ್ತಿರುವ ಮಾಹಿತಿ ಇನ್ನಷ್ಟು ಕುತೂಹಲ ಕೆರಳಿಸಿದೆ. ಗುಹೆಯೊಳಗೆ ಚಿನ್ನದ ರಥ, ಎತ್ತುಗಳು, ವಜ್ರ ವೈಢೂರ್ಯಗಳಿಂದ ಅಲಂಕರಿಸಿದ ದೇವಿಮೂರ್ತಿ ಮತ್ತು ಬಂಗಾರದ ಶಿವಲಿಂಗವಿದೆ ಎನ್ನಲಾಗಿದೆ. ಗುಹೆಯೊಳಗೆ ನಿರಂತರ ನೀರಿನ ಹರಿವು ಇದೆ ಮತ್ತು ಸರ್ಪಕಾವಲು ಇದೆ ಎಂಬ ಹೇಳಿಕೆಗಳೂ ಕೇಳಿಬಂದಿವೆ.

ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದಾರೆ ಎಂಬ ದಾವೆ ಮಾಡಲಾಗಿದೆ. ಲಿಂಗದಿಂದ ಬೀಳುವ ಮಣ್ಣನ್ನು ಸೇವಿಸಿದರೆ ಆಯುಷ್ಯ ಹೆಚ್ಚುತ್ತದೆ ಎಂಬ ನಂಬಿಕೆ ಸಹ ಹರಿದಾಡುತ್ತಿದೆ.

ಸುಮಾರು 10 ವರ್ಷಗಳ ಹಿಂದೆ ಬಂದ ಸ್ವಾಮೀಜಿ ತಪಸ್ಸು ನಡೆಸಿದ ವೇಳೆ, ಮಳೆ ಬರದ ಸಂದರ್ಭದಲ್ಲಿ ಪವಾಡ ತೋರಿಸಿ ಒಂದು ಗಂಟೆಯೊಳಗೆ ಮಳೆ ಸುರಿಸಿದರು ಎಂಬ ಗ್ರಾಮಸ್ಥರ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಮೀಜಿಯನ್ನು ತೆರವುಗೊಳಿಸಿದ್ದು, ಗುಹೆಯೊಳಗಿನ ಸಂಪತ್ತಿನ ಬಗ್ಗೆ ದಾಖಲೆಯಿದೆ ಎಂದು ಹೇಳಿದ್ದಾರಂತೆ. ಆ ಅಧಿಕಾರಿ ಈಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಹೇಳಿಕೆಗಳಿಗೂ ಅಧಿಕೃತ ದಾಖಲೆಗಳಿಲ್ಲ. ಪುರಾತತ್ವ ಅಥವಾ ಸರ್ಕಾರದ ತನಿಖೆ ನಡೆದಿರುವ ಮಾಹಿತಿ ಇಲ್ಲ. ಸಂಜೀವಿನಿ ಗುಡ್ಡದ ಗುಹೆ — ಪುರಾಣ, ಜನಪದ, ಇತಿಹಾಸ ಮತ್ತು ರಹಸ್ಯಗಳ ಸಂಧಿಸ್ಥಳವಾಗಿ ಪರಿಣಮಿಸಿದೆ. ಇದು ಖಜಾನೆಯ ನಿಜಸ್ವರೂಪವೇ? ಅಥವಾ ನಂಬಿಕೆಗಳ ನಿರ್ಮಿತಿಯೋ? ಉತ್ತರ ಇನ್ನೂ ಸಿಗಬೇಕಿದೆ.

error: Content is protected !!