Home Blog Page 5

ಸಾವಿರ ದಿನಗಳ ಸಂಭ್ರಮವಲ್ಲ, ಸಮಸ್ಯೆಗಳ ಉಲ್ಬಣ: ಕಾಂಗ್ರೆಸ್ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ

0

ಹಾಸನ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸಾವಿರ ದಿನಗಳ ಸಂಭ್ರಮಾಚರಣೆಗೆ ಸಿದ್ಧವಾಗಿರುವ ಸಂದರ್ಭದಲ್ಲಿ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,

ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ದರೋಡೆ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ಹೆಚ್ಚಾಗಿವೆ ಎಂದು ಆರೋಪಿಸಿದರು. ಸಾವಿರ ದಿನಗಳ ಸಾಧನೆ ಎನ್ನುವುದಕ್ಕಿಂತ ಸಮಸ್ಯೆಗಳೇ ಹೆಚ್ಚಾಗಿವೆ ಎಂದು ಟೀಕಿಸಿದರು.ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ ಪ್ರಶ್ನೆ ಎತ್ತಿದ ಅವರು,

ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ ರೂ.2,000 ನೀಡುವುದಾಗಿ ಹೇಳಿದ್ದರೂ, ಅದು ಸಕಾಲದಲ್ಲಿ ಲಾಭಾರ್ಥಿಗಳಿಗೆ ತಲುಪಿಲ್ಲ ಎಂದು ಆರೋಪಿಸಿದರು. 2025ರ ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಬಿಡುಗಡೆ ಆಗಿಲ್ಲ ಎಂದು ಪ್ರಶ್ನಿಸಿದಾಗ ಸಮರ್ಪಕ ಉತ್ತರ ನೀಡಲಾಗಿಲ್ಲ ಎಂದು ಹೇಳಿದರು.

ಸಚಿವರು ಸದನದಲ್ಲಿ ಕಣ್ತಪ್ಪಿನಿಂದಾಗಿದೆ ಅಥವಾ ಹಣಕಾಸು ಇಲಾಖೆ ಬಿಡುಗಡೆ ಮಾಡಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿ, ಇದನ್ನು ಜವಾಬ್ದಾರಿಯುತ ಉತ್ತರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದರು.ಸಾವಿರ ದಿನಗಳ ಸಂಭ್ರಮಾಚರಣೆ ನಡೆಸುವುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ನಾಳೆ ಡಾ. ಭೀಮಣ್ಣ ಖಂಡ್ರೆ ಅವರ ನುಡಿ ನಮನ ಕಾರ್ಯಕ್ರಮ!

0

ಬೆಂಗಳೂರು: ಇತ್ತೀಚೆಗೆ ಲಿಂಗೈಕ್ಯರಾದ ಮಾಜಿ ಸಚಿವರು, ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ಅವರ ಗೌರವಾರ್ಥ ಫೆಬ್ರವರಿ 14ರಂದು (ಶನಿವಾರ) ಸಂಜೆ ಬೆಂಗಳೂರಿನಲ್ಲಿ ನುಡಿನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಭಾಲ್ಕಿಯ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ, ಬೆಂಗಳೂರು ಅರಮನೆ ಆವರಣದ ಗೇಟ್ 4ರಲ್ಲಿರುವ ಗಾಯತ್ರಿ ವಿಹಾರದಲ್ಲಿ ಈ ನುಡಿನಮನ ಕಾರ್ಯಕ್ರಮ ನಡೆಯಲಿದೆ.

ಸುತ್ತೂರು ಸಂಸ್ಥಾನದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯರು, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಭಾಧ್ಯಕ್ಷ ಯು.ಟಿ. ಖಾದರ್, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ವಿ.ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ನುಡಿನಮನ ಸಲ್ಲಿಸಲಿದ್ದಾರೆ.

ರಾಜ್ಯ ಸಚಿವ ಸಂಪುಟದ ಸಚಿವರುಗಳು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಮಹಾಸಭಾದ ರಾಜ್ಯ ಘಟಕಗಳ ವಿವಿಧ ರಾಜ್ಯ ಘಟಕಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಡಾ. ಭೀಮಣ್ಣ ಖಂಡ್ರೆ ಅವರು ಸಭೆಗೆ ಸ್ವಂತ ನಿವೇಶನ ಖರೀದಿಸಿ, ಭವ್ಯ ಕಟ್ಟಡ ನಿರ್ಮಿಸಿ ಸಭಾ ಸ್ವಾವಲಂಬಿಯಾಗುವಂತೆ ಮಾಡಿದ ಮಹತ್ತರ ಕೊಡುಗೆ ಸಮಾಜ ಎಂದಿಗೂ ಮರೆಯುವುದಿಲ್ಲ. ಭಾಲ್ಕಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯ ಬಳಿಕ ಇದೀಗ ಬೆಂಗಳೂರಿನಲ್ಲಿ ನುಡಿನಮನ ಹಮ್ಮಿಕೊಳ್ಳಲಾಗಿದೆ.

ಅವಹೇಳನಕಾರಿ ಬರಹ ಪ್ರಕರಣ: ಶಾಸಕ ಆರಗ ಜ್ಞಾನೇಂದ್ರ ಆಪ್ತನಿಗೆ ಜಾಮೀನು ಮಂಜೂರು!

0

ಶಿವಮೊಗ್ಗ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಬರಹ ಹಂಚಿಕೊಂಡ ಆರೋಪದಡಿ ಬಂಧನಕ್ಕೊಳಗಾಗಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಆಪ್ತ ಸಹಾಯಕನಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹೊಸನಗರ ತಾಲೂಕಿನ ಮಳಲಿ ಗ್ರಾಮದ ನಿವಾಸಿ ರಾಜೇಶ್ ಹಿರಿಮನೆ ಅವರನ್ನು 2026ರ ಫೆಬ್ರವರಿ 11ರಂದು ಹೊಸನಗರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು. ಫೆಬ್ರವರಿ 12ರಂದು ಹೊಸನಗರ ನ್ಯಾಯಿಕ ಪ್ರಥಮ ದರ್ಜೆ ದಂಡಾಧಿಕಾರಿ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ. ಅವರು ಒಂದು ದಿನ ನ್ಯಾಯಾಂಗ ಬಂಧನದಲ್ಲಿದ್ದು ನಂತರ ಬಿಡುಗಡೆಗೊಂಡಿದ್ದಾರೆ.

ರಾಜೇಶ್ ಹಿರಿಮನೆ ಅವರು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಹೊಸನಗರ ಭಾಗದ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಅವರು, ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ರಾಹುಲ್ ಗಾಂಧಿ ಅವರ ಮುಖದ ಅರ್ಧ ಭಾಗವನ್ನು ಪಾಕಿಸ್ತಾನ ಸೇನೆಯ ಅಧಿಕಾರಿಯೊಬ್ಬರ ಚಿತ್ರ ಜತೆ ಸಂಯೋಜಿಸಿ “ಒನ್ ಅಜೆಂಡಾ” ಎಂಬ ಸಾಲು ಸೇರಿಸಿ ಪ್ರಕಟಿಸಿದ್ದರು.

ಈ ಬರಹ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಗಮನಿಸಿದ ಹೊಸನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಕಲಂ 353(2) ಅಡಿಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಪ್ರಕರಣದ ತನಿಖೆ ಮುಂದುವರಿದಿದೆ.

ಸಂಜೀವಿನಿ ಗುಡ್ಡದಲ್ಲಿ ನಿಗೂಢ ಖಜಾನೆ? ಋಷಿಮುನಿ ತಪಸ್ಸು, ಚಿನ್ನದ ರಥ ಮತ್ತು 10 ವರ್ಷ ಹಳೆಯ ಸ್ವಾಮೀಜಿ ಪ್ರಕರಣದ ಹೊಸ ಸತ್ಯ!

0

ಗದಗ: ಐತಿಹಾಸಿಕ ಲಕ್ಕುಂಡಿಯ ಚಿನ್ನದ ನಿಧಿ ಪತ್ತೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಸಂಚಲನಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕಪ್ಪತ್ತಗುಡ್ಡದ ಸಂಜೀವಿನಿ ಗುಡ್ಡದ ಒಳಗಿರುವ ಗುಹೆಯಲ್ಲಿ ಅಪಾರ ಸಂಪತ್ತಿದೆ ಎಂಬ ಆಘಾತಕಾರಿ ಮಾಹಿತಿ ಗ್ರಾಮಸ್ಥರಿಂದ ಕೇಳಿ ಬಂದಿದೆ.

ಲಕ್ಕುಂಡಿ — ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು ಮತ್ತು ರಾಷ್ಟ್ರಕೂಟರ ಆಡಳಿತ ಕಂಡ ಐತಿಹಾಸಿಕ ಕೇಂದ್ರ. ಇತ್ತೀಚೆಗೆ 466 ಗ್ರಾಮ ಚಿನ್ನ ಪತ್ತೆಯಾದ ಹಿನ್ನೆಲೆ, ಈ ಪ್ರದೇಶದ ಭೂಗರ್ಭ ರಹಸ್ಯಗಳ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ.

ಇದೀಗ ಅತ್ತಿಕಟ್ಟಿ ಗ್ರಾಮಸ್ಥರು ಹೇಳುತ್ತಿರುವ ಮಾಹಿತಿ ಇನ್ನಷ್ಟು ಕುತೂಹಲ ಕೆರಳಿಸಿದೆ. ಗುಹೆಯೊಳಗೆ ಚಿನ್ನದ ರಥ, ಎತ್ತುಗಳು, ವಜ್ರ ವೈಢೂರ್ಯಗಳಿಂದ ಅಲಂಕರಿಸಿದ ದೇವಿಮೂರ್ತಿ ಮತ್ತು ಬಂಗಾರದ ಶಿವಲಿಂಗವಿದೆ ಎನ್ನಲಾಗಿದೆ. ಗುಹೆಯೊಳಗೆ ನಿರಂತರ ನೀರಿನ ಹರಿವು ಇದೆ ಮತ್ತು ಸರ್ಪಕಾವಲು ಇದೆ ಎಂಬ ಹೇಳಿಕೆಗಳೂ ಕೇಳಿಬಂದಿವೆ.

ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ಇಲ್ಲಿ ತಪಸ್ಸು ಮಾಡುತ್ತಿದ್ದಾರೆ ಎಂಬ ದಾವೆ ಮಾಡಲಾಗಿದೆ. ಲಿಂಗದಿಂದ ಬೀಳುವ ಮಣ್ಣನ್ನು ಸೇವಿಸಿದರೆ ಆಯುಷ್ಯ ಹೆಚ್ಚುತ್ತದೆ ಎಂಬ ನಂಬಿಕೆ ಸಹ ಹರಿದಾಡುತ್ತಿದೆ.

ಸುಮಾರು 10 ವರ್ಷಗಳ ಹಿಂದೆ ಬಂದ ಸ್ವಾಮೀಜಿ ತಪಸ್ಸು ನಡೆಸಿದ ವೇಳೆ, ಮಳೆ ಬರದ ಸಂದರ್ಭದಲ್ಲಿ ಪವಾಡ ತೋರಿಸಿ ಒಂದು ಗಂಟೆಯೊಳಗೆ ಮಳೆ ಸುರಿಸಿದರು ಎಂಬ ಗ್ರಾಮಸ್ಥರ ಹೇಳಿಕೆ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ವಾಮೀಜಿಯನ್ನು ತೆರವುಗೊಳಿಸಿದ್ದು, ಗುಹೆಯೊಳಗಿನ ಸಂಪತ್ತಿನ ಬಗ್ಗೆ ದಾಖಲೆಯಿದೆ ಎಂದು ಹೇಳಿದ್ದಾರಂತೆ. ಆ ಅಧಿಕಾರಿ ಈಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಎಲ್ಲ ಹೇಳಿಕೆಗಳಿಗೂ ಅಧಿಕೃತ ದಾಖಲೆಗಳಿಲ್ಲ. ಪುರಾತತ್ವ ಅಥವಾ ಸರ್ಕಾರದ ತನಿಖೆ ನಡೆದಿರುವ ಮಾಹಿತಿ ಇಲ್ಲ. ಸಂಜೀವಿನಿ ಗುಡ್ಡದ ಗುಹೆ — ಪುರಾಣ, ಜನಪದ, ಇತಿಹಾಸ ಮತ್ತು ರಹಸ್ಯಗಳ ಸಂಧಿಸ್ಥಳವಾಗಿ ಪರಿಣಮಿಸಿದೆ. ಇದು ಖಜಾನೆಯ ನಿಜಸ್ವರೂಪವೇ? ಅಥವಾ ನಂಬಿಕೆಗಳ ನಿರ್ಮಿತಿಯೋ? ಉತ್ತರ ಇನ್ನೂ ಸಿಗಬೇಕಿದೆ.

ಮಹಾಶಿವರಾತ್ರಿ ಅಂಗವಾಗಿ ಫೆ.15ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ, ಪ್ರಾಣಿ ವಧೆ ನಿಷೇಧ

0

ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಫೆಬ್ರವರಿ 15ರಂದು ಬೆಂಗಳೂರು ನಗರದಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಆದೇಶ ಹೊರಡಿಸಿದೆ.

ಜಿಬಿಎ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಈ ಸಂಬಂಧ ಆದೇಶ ಜಾರಿಗೊಳಿಸಿದ್ದಾರೆ. ಮಹಾಶಿವರಾತ್ರಿ ಹಬ್ಬದ ಹಿನ್ನೆಲೆ, ಫೆಬ್ರವರಿ 15ರಂದು ಯಾವುದೇ ರೀತಿಯ ಪ್ರಾಣಿ ವಧೆ ನಡೆಸುವುದು ಹಾಗೂ ಮಾಂಸ ಮತ್ತು ಮಾಂಸ ಉತ್ಪನ್ನಗಳ ಮಾರಾಟ ಮಾಡುವುದು ನಿಷಿದ್ಧವಾಗಿದೆ ಎಂದು ತಿಳಿಸಲಾಗಿದೆ.

ಹಬ್ಬದ ದಿನದಂದು ಧಾರ್ಮಿಕ ಭಾವನೆಗಳನ್ನು ಗೌರವಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಗರದಲ್ಲಿನ ಎಲ್ಲ ಮಾಂಸ ಮಾರಾಟಗಾರರು ಹಾಗೂ ಸಂಬಂಧಿತ ವ್ಯಾಪಾರಿಗಳು ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ನಾಗರಿಕರು ಹಾಗೂ ವ್ಯಾಪಾರಸ್ಥರು ಈ ಆದೇಶಕ್ಕೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ದಿನಸಿ ಅಂಗಡಿಯಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ನಾಲಾಯಕ್ ಕಾಂಗ್ರೆಸ್ ಸರ್ಕಾರದ ಸಾಧನೆ: ವಿಜಯೇಂದ್ರ

0

ಬೆಳಗಾವಿ: ಸುಮಾರು 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿತ್ತು. ಇಂಥ ಲಜ್ಜೆಗೆಟ್ಟ ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಬಡವರನ್ನು ನಿರ್ಮೂಲನೆ ಮಾಡಿದರೇ ಹೊರತು ಬಡವರ ಬಡತನ ನಿರ್ಮೂಲನೆ ಮಾಡಲು ಇವರಿಂದ ಆಗಿಲ್ಲ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.

ಇಂದು ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಪುಡಾರಿಗಳು ಶ್ರೀಮಂತರಾದರು ಎಂದು ಟೀಕಿಸಿದರು. ಕಳೆದ ಎರಡೂವರೆ ವರ್ಷದಲ್ಲಿ ಒಂದಾದರೂ ಹೊಸ ಅಭಿವೃದ್ಧಿ ಯೋಜನೆ ನೀಡಲು ಇವರಿಂದ ಸಾಧ್ಯವಾಗಿದೆಯೇ ಎಂದು ಪ್ರಶ್ನಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಡುವುದಾಗಿ ಬೆನ್ನು ತಟ್ಟಿಕೊಳ್ಳುತ್ತಾರೆ. ಮತ್ತೊಂದೆಡೆ ಗೃಹಲಕ್ಷ್ಮಿ ಯೋಜನೆಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ರಾಜ್ಯದಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ವ್ಯವಹಾರದ ಗುರಿ ನೀಡಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ 500 ಮೀಟರ್‍ಗೆ ಒಂದು ಮೆಡಿಕಲ್ ಶಾಪ್ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ; ಆದರೆ, 500 ಮೀಟರಿಗೆ ಒಂದು ಹೆಂಡದಂಗಡಿ ಸಿಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯದ ದಿನಸಿ ಅಂಗಡಿಗಳಲ್ಲಿ ಹೆಂಡ ಮಾರಾಟ ಮಾಡುತ್ತಿರುವುದು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಅವರು ಟೀಕಿಸಿದರು. ಗೃಹಲಕ್ಷ್ಮಿಯಡಿ 2 ಸಾವಿರ ಕೊಟ್ಟು ಅದೇ ಮನೆಯಿಂದ ಹೆಂಡದ ಮೂಲಕ 10 ಸಾವಿರ ಕಿತ್ತುಕೊಳ್ಳುವುದೇ ಈ ಸರಕಾರದ ಸಾಧನೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ವೀರಶೈವರು, ಒಕ್ಕಲಿಗರ ಸಮುದಾಯದಲ್ಲಿ ನಿಮಗೆ ಬಡವರು ಕಾಣುತ್ತಿಲ್ಲವೇ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದರು. ಈ ರಾಜ್ಯದ ಕಾಯಕ ಸಮುದಾಯಗಳ ಬದುಕನ್ನು ಕಟ್ಟಿ ಕೊಡುವ ಕೆಲಸ ರಾಜ್ಯದ ಮುಖ್ಯಮಂತ್ರಿಗಳಾಗಿ ನಿಮಗೆ ಕಳೆದ ಎರಡೂವರೆ ವರ್ಷದಲ್ಲಿ ಮಾಡಲು ಸಾಧ್ಯವಾಗಿಲ್ಲವೇ ಹಾಗಿದ್ದರೆ? ಎಂದು ಕೇಳಿ, ಸಾಧ್ಯವಾಗಿಲ್ಲ ಎಂದು ಉತ್ತರ ಕೊಟ್ಟರು.

ಚುನಾವಣೆಯಲ್ಲಿ ಸೋಲುವ ಭಯದಿಂದ ಹಂಚಿದ್ದ ಕುಕ್ಕರ್‌, ಹಣ ವಾಪಸ್‌ ಕೇಳಿದ ಕಾಂಗ್ರೆಸ್‌ ಅಭ್ಯರ್ಥಿ

0

ಹೈದರಾಬಾದ್: ತೆಲಂಗಾಣ ರಾಜ್ಯದ ಖಮ್ಮಂ ಜಿಲ್ಲೆಯ ಅಶ್ವರಾವ್‌ಪೇಟೆ ಪುರಸಭೆಯ ವಾರ್ಡ್ ಸಂಖ್ಯೆ 10ರಲ್ಲಿ ನಡೆದ ಚುನಾವಣೆ ವೇಳೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಹರಿಬಾಬು ಅವರು ಸೋಲಿನ ಭೀತಿಯಿಂದ ಮತದಾರರಿಗೆ ವಿತರಿಸಿದ್ದ ಕುಕ್ಕರ್ ಹಾಗೂ ನಗದು ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮತದಾರರಿಗೆ ಪ್ರಚಾರ ಸಮಯದಲ್ಲಿ ಗೃಹೋಪಯೋಗಿ ವಸ್ತುಗಳು, ಪ್ರೆಶರ್ ಕುಕ್ಕರ್ ಹಾಗೂ ನಗದು ಹಣ ವಿತರಿಸಿದ್ದಾಗಿ ಹೇಳಲಾಗುತ್ತಿದೆ. ಆದರೆ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ, ವಿತರಿಸಿದ್ದ ವಸ್ತುಗಳನ್ನು ಹಿಂತಿರುಗಿಸಬೇಕು ಎಂದು ಕೇಳಿದರೆಂಬ ಮಾಹಿತಿ ಹೊರಬಿದ್ದಿದೆ.

ಈ ಬೆಳವಣಿಗೆಯಿಂದ ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿ ನೀಡಿದ್ದ ಕುಕ್ಕರ್‌ಗಳನ್ನು ಬೀದಿಗೆ ಎಸೆದು ಆಕ್ರೋಶ ಹೊರಹಾಕಿದ ಘಟನೆ ಸ್ಥಳೀಯವಾಗಿ ಉದ್ವಿಗ್ನತೆ ಸೃಷ್ಟಿಸಿದೆ. ಈ ಸಂಬಂಧದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಪರಿಸ್ಥಿತಿ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಅಭ್ಯರ್ಥಿ ವಿರುದ್ಧ ದೂರು ದಾಖಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮೇಕೆದಾಟು, ಯುಕೆಪಿ ಯೋಜನೆಗಳು ಜಾರಿಗೆ: ಡಿಕೆ ಶಿವಕುಮಾರ್

0

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಸಿದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಯೋಜನೆ ಪರವಾಗಿ ತೀರ್ಪು ನೀಡಿರುವುದರಿಂದ ಇದೀಗ ಕೇಂದ್ರದ ಅನುಮತಿಗೆ ಕಾಯುತ್ತಿರುವುದಾಗಿ ಹೇಳಿದರು.

ಬೆಂಗಳೂರು ನಗರದಲ್ಲಿ 1.50 ಕೋಟಿ ಜನಸಂಖ್ಯೆ ಇದೆ. ಜಾಗತಿಕ ಹೂಡಿಕೆದಾರರು ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಮೇಕೆದಾಟು ಯೋಜನೆಯಿಂದ ಬೆಂಗಳೂರು ಸೇರಿದಂತೆ ಈ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಲಿದೆ ಎಂದು ವಿವರಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಮಾತನಾಡಿದ ಅವರು, 2013ರ ಭೂಸ್ವಾಧೀನ ಕಾಯ್ದೆ ಅನುಸಾರ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯಸಮ್ಮತ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದರು. 2025ರ ಡಿಸೆಂಬರ್ ವೇಳೆಗೆ 1.72 ಲಕ್ಷ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ ಎಂದರು.

ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್ ವರೆಗೆ ವಿಧಿಸಿರುವ ನಿರ್ಬಂಧವನ್ನು ಸಡಿಲಗೊಳಿಸಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.

ವಿಶ್ವ ಬ್ಯಾಂಕ್ ನೆರವಿನ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆಯಡಿ ರಾಜ್ಯದ 58 ಅಣೆಕಟ್ಟುಗಳ ದುರಸ್ತಿ ಕಾರ್ಯಗಳಿಗೆ 1500 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.

ಕೆನಡಾದಲ್ಲಿ ಶೂಟೌಟ್‌ಗೆ ಬಲಿಯಾದ ಚಂದನ್ ಕುಮಾರ್ ಪಾರ್ಥಿವ ಶರೀರ ಫೆ.16ಕ್ಕೆ ಬೆಂಗಳೂರು ಆಗಮನ

0

ನೆಲಮಂಗಲ: ಕೆನಡಾ ದೇಶದ ಟೊರೊಂಟೊ ನಗರದಲ್ಲಿ ಫೆಬ್ರವರಿ 7ರಂದು ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ನಡೆದ ಪ್ರಯತ್ನ ಫಲಕಾರಿಯಾಗಿದ್ದು, ಕುಟುಂಬಕ್ಕೆ ಸಮಾಧಾನ ತಂದಿದೆ.

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇ-ಮೇಲ್ ಮೂಲಕ ಮಾಹಿತಿ ನೀಡಿರುವಂತೆ, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಫೆಬ್ರವರಿ 14ರಂದು ಟೊರಾಂಟೋದಿಂದ ಹೊರಟು, ನವದೆಹಲಿಯ ಮೂಲಕ ಫೆಬ್ರವರಿ 16ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಂಗಳೂರಿಗೆ ತಲುಪಲಿದೆ.

“ನೂರ್ಕಾಲ ಬಾಳಿ ಬದುಕಬೇಕಾದ ಮಗನನ್ನು ಕಳೆದುಕೊಂಡ ಹೆತ್ತವರಿಗೆ ಜೀವವನ್ನು ವಾಪಸ್ ತಂದುಕೊಡುವ ಶಕ್ತಿ ನಮಗಿಲ್ಲ. ಆದರೆ, ಅಂತಿಮ ದರ್ಶನ ಪಡೆದು ತಮ್ಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತ್ಯಕ್ರಿಯೆ ನಡೆಸುವ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ” ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅವರು ಕುಟುಂಬದ ಪರವಾಗಿ ಹಾಗೂ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

T20 ವಿಶ್ವಕಪ್ʼನಲ್ಲಿ ಇತಿಹಾಸ ನಿರ್ಮಿಸಿದ ಜಿಂಬಾಬ್ವೆ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ

0

ಕೊಲಂಬೊ: 2026ರ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಅಚ್ಚರಿ ಜಯ ಸಾಧಿಸಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ಗಳ ಅಂತರದಿಂದ ಕಾಂಗರೂಗಳನ್ನು ಮಣಿಸಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ 7 ಬೌಂಡರಿಗಳ ನೆರವಿನಿಂದ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ತಡಿವಾನಾಶೆ ಮರುಮಾನಿ 21 ಎಸೆತಗಳಲ್ಲಿ 35 ರನ್‌ಗಳಿಸಿ ಉತ್ತಮ ಬೆಂಬಲ ನೀಡಿದರು.

ಮಧ್ಯಕ್ರಮದಲ್ಲಿ ರಯಾನ್ ಬರ್ಲ್ 30 ಎಸೆತಗಳಲ್ಲಿ 35 ರನ್‌ಗಳಿಸಿದರೆ, ನಾಯಕ ಸಿಕಂದರ್ ರಜಾ 13 ಎಸೆತಗಳಲ್ಲಿ ಅಜೇಯ 25 ರನ್‌ಗಳನ್ನು ಸೇರಿಸಿ ತಂಡವನ್ನು 169 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

170 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳಪೆ ಆರಂಭ ಕಂಡಿತು. ಪವರ್‌ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 38 ರನ್‌ಗಳಿಸಲಷ್ಟೇ ಶಕ್ತವಾಯಿತು. ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಮತ್ತು ಟ್ರಾವಿಸ್ ಹೆಡ್ ಬೇಗನೆ ಔಟಾಗಿದ್ದು ತಂಡಕ್ಕೆ ದೊಡ್ಡ ಹೊಡೆತವಾಯಿತು.

ಮ್ಯಾಟ್ ರೆನ್‌ಶಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 77 ರನ್‌ಗಳ ಜೊತೆಯಾಟ ಕಟ್ಟಿದರೂ, ಡೆತ್ ಓವರ್‌ಗಳಲ್ಲಿ ಜಿಂಬಾಬ್ವೆ ಬೌಲರ್‌ಗಳ ಕಟ್ಟಿ ಹಿಡಿದ ದಾಳಿ ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ತಳ್ಳಿತು. ಅಂತಿಮವಾಗಿ ಆಸ್ಟ್ರೇಲಿಯಾ 146 ರನ್‌ಗಳಿಗೆ ಆಲೌಟ್ ಆಗಿ 23 ರನ್‌ಗಳಿಂದ ಸೋಲು ಕಂಡಿತು.

ಈ ಗೆಲುವಿನೊಂದಿಗೆ ಜಿಂಬಾಬ್ವೆ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಯ ಇದು ಎರಡನೇ ಗೆಲುವಾಗಿದ್ದು, ಇದಕ್ಕೂ ಮೊದಲು 2007ರಲ್ಲಿ ಜಿಂಬಾಬ್ವೆ ಜಯ ಸಾಧಿಸಿತ್ತು.

error: Content is protected !!