Home Blog Page 6

ಕೆನಡಾದಲ್ಲಿ ಶೂಟೌಟ್‌ಗೆ ಬಲಿಯಾದ ಚಂದನ್ ಕುಮಾರ್ ಪಾರ್ಥಿವ ಶರೀರ ಫೆ.16ಕ್ಕೆ ಬೆಂಗಳೂರು ಆಗಮನ

0

ನೆಲಮಂಗಲ: ಕೆನಡಾ ದೇಶದ ಟೊರೊಂಟೊ ನಗರದಲ್ಲಿ ಫೆಬ್ರವರಿ 7ರಂದು ನಡೆದ ಶೂಟೌಟ್‌ನಲ್ಲಿ ಹತ್ಯೆಗೀಡಾದ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಅವರ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರಲು ನಡೆದ ಪ್ರಯತ್ನ ಫಲಕಾರಿಯಾಗಿದ್ದು, ಕುಟುಂಬಕ್ಕೆ ಸಮಾಧಾನ ತಂದಿದೆ.

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇ-ಮೇಲ್ ಮೂಲಕ ಮಾಹಿತಿ ನೀಡಿರುವಂತೆ, ಚಂದನ್ ಕುಮಾರ್ ಅವರ ಪಾರ್ಥಿವ ಶರೀರ ಫೆಬ್ರವರಿ 14ರಂದು ಟೊರಾಂಟೋದಿಂದ ಹೊರಟು, ನವದೆಹಲಿಯ ಮೂಲಕ ಫೆಬ್ರವರಿ 16ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಬೆಂಗಳೂರಿಗೆ ತಲುಪಲಿದೆ.

“ನೂರ್ಕಾಲ ಬಾಳಿ ಬದುಕಬೇಕಾದ ಮಗನನ್ನು ಕಳೆದುಕೊಂಡ ಹೆತ್ತವರಿಗೆ ಜೀವವನ್ನು ವಾಪಸ್ ತಂದುಕೊಡುವ ಶಕ್ತಿ ನಮಗಿಲ್ಲ. ಆದರೆ, ಅಂತಿಮ ದರ್ಶನ ಪಡೆದು ತಮ್ಮ ಸಂಪ್ರದಾಯದಂತೆ ತಾಯ್ನಾಡಿನಲ್ಲಿ ಅಂತ್ಯಕ್ರಿಯೆ ನಡೆಸುವ ಅವಕಾಶ ಒದಗಿಸುವುದು ನಮ್ಮ ಕರ್ತವ್ಯ” ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಡಾ. ಕೆ. ಸುಧಾಕರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಿದೇಶಾಂಗ ಸಚಿವಾಲಯ ಹಾಗೂ ಕೆನಡಾದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳಿಗೆ ಅವರು ಕುಟುಂಬದ ಪರವಾಗಿ ಹಾಗೂ ಕರ್ನಾಟಕದ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

T20 ವಿಶ್ವಕಪ್ʼನಲ್ಲಿ ಇತಿಹಾಸ ನಿರ್ಮಿಸಿದ ಜಿಂಬಾಬ್ವೆ: ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ

0

ಕೊಲಂಬೊ: 2026ರ ಟಿ20 ವಿಶ್ವಕಪ್‌ನ 19ನೇ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಅಚ್ಚರಿ ಜಯ ಸಾಧಿಸಿದೆ. ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ಗಳ ಅಂತರದಿಂದ ಕಾಂಗರೂಗಳನ್ನು ಮಣಿಸಿ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್‌ಗಳ ಭರ್ಜರಿ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಆಲೌಟ್ ಆಯಿತು.

ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ 7 ಬೌಂಡರಿಗಳ ನೆರವಿನಿಂದ 64 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ತಡಿವಾನಾಶೆ ಮರುಮಾನಿ 21 ಎಸೆತಗಳಲ್ಲಿ 35 ರನ್‌ಗಳಿಸಿ ಉತ್ತಮ ಬೆಂಬಲ ನೀಡಿದರು.

ಮಧ್ಯಕ್ರಮದಲ್ಲಿ ರಯಾನ್ ಬರ್ಲ್ 30 ಎಸೆತಗಳಲ್ಲಿ 35 ರನ್‌ಗಳಿಸಿದರೆ, ನಾಯಕ ಸಿಕಂದರ್ ರಜಾ 13 ಎಸೆತಗಳಲ್ಲಿ ಅಜೇಯ 25 ರನ್‌ಗಳನ್ನು ಸೇರಿಸಿ ತಂಡವನ್ನು 169 ರನ್‌ಗಳ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು.

170 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಕಳಪೆ ಆರಂಭ ಕಂಡಿತು. ಪವರ್‌ಪ್ಲೇನಲ್ಲಿ 4 ವಿಕೆಟ್ ಕಳೆದುಕೊಂಡು ಕೇವಲ 38 ರನ್‌ಗಳಿಸಲಷ್ಟೇ ಶಕ್ತವಾಯಿತು. ಜೋಶ್ ಇಂಗ್ಲಿಸ್, ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಮತ್ತು ಟ್ರಾವಿಸ್ ಹೆಡ್ ಬೇಗನೆ ಔಟಾಗಿದ್ದು ತಂಡಕ್ಕೆ ದೊಡ್ಡ ಹೊಡೆತವಾಯಿತು.

ಮ್ಯಾಟ್ ರೆನ್‌ಶಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 77 ರನ್‌ಗಳ ಜೊತೆಯಾಟ ಕಟ್ಟಿದರೂ, ಡೆತ್ ಓವರ್‌ಗಳಲ್ಲಿ ಜಿಂಬಾಬ್ವೆ ಬೌಲರ್‌ಗಳ ಕಟ್ಟಿ ಹಿಡಿದ ದಾಳಿ ಆಸ್ಟ್ರೇಲಿಯಾವನ್ನು ಸಂಕಷ್ಟಕ್ಕೆ ತಳ್ಳಿತು. ಅಂತಿಮವಾಗಿ ಆಸ್ಟ್ರೇಲಿಯಾ 146 ರನ್‌ಗಳಿಗೆ ಆಲೌಟ್ ಆಗಿ 23 ರನ್‌ಗಳಿಂದ ಸೋಲು ಕಂಡಿತು.

ಈ ಗೆಲುವಿನೊಂದಿಗೆ ಜಿಂಬಾಬ್ವೆ ಬಿ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿದ್ದು, ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಯ ಇದು ಎರಡನೇ ಗೆಲುವಾಗಿದ್ದು, ಇದಕ್ಕೂ ಮೊದಲು 2007ರಲ್ಲಿ ಜಿಂಬಾಬ್ವೆ ಜಯ ಸಾಧಿಸಿತ್ತು.

ಮೇಕೆದಾಟು-ಯುಕೆಪಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುಮತಿ ಬೇಕು: ಡಿ.ಕೆ. ಶಿವಕುಮಾರ್

0

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಜೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾತನಾಡಿದರು.

“ನೀವೆಲ್ಲರೂ ಬೆಂಗಳೂರಿನಲ್ಲಿದ್ದೀರಿ. ಇಲ್ಲಿ 1.50 ಕೋಟಿ ಜನಸಂಖ್ಯೆ ಇದ್ದು, ವಿಶ್ವದಾದ್ಯಂತ ಕೈಗಾರಿಕೋದ್ಯಮಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಇಲ್ಲಿರುವ ಹವಾಮಾನ ಹಾಗೂ ಸಂಸ್ಕೃತಿ ಎಲ್ಲರ ಆಕರ್ಷಣೆಯಾಗಿದೆ. ಎಲ್ಲರೂ ಬೆಂಗಳೂರಿಗೆ ಬರಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ.

ಹೀಗಾಗಿ ನಾವು ಸಮತೋಲಿದ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ. ಆಮೂಲಕ ನಾವು ಈ ಯೋಜನೆ ಜಾರಿ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಈ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ” ಎಂದು ವಿವರಿಸಿದರು.

“ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನಾವು ಪಾರದರ್ಶಕ ನೀತಿ ತರಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ 2013ರ ಕಾಯ್ದೆ ಅನುಸಾರ ಉತ್ತಮ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. 2025ರ ಡಿಸೆಂಬರ್ ವೇಳೆಗೆ ನಮ್ಮಲ್ಲಿ 1.72 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇನ್ನು ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್ ವರೆಗೂ ವಿಧಿಸಲಾಗಿರುವ ನಿಬಂಧನೆಯನ್ನು ಸಡಿಲಗೊಳಿಸಬೇಕು. ಆ ಮೂಲಕ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ಆರ್ಥಿಕತೆಗೆ ನೆರವಾಗಬೇಕು ಎಂದು ಕರ್ನಾಟಕ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ” ಎಂದು ಕೋರಿದರು.

ಅಣೆಕಟ್ಟುಗಳು ದೇಶದ ಶಕ್ತಿ, ಪ್ರಗತಿಯ ಪ್ರತೀಕ

“ಅಣೆಕಟ್ಟುಗಳು ನಮ್ಮ ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ, ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಸ್ವಚ್ಛ ಇಂಧನ ಸೃಷ್ಟಿಸಿ, ನಮ್ಮ ಸಮುದಾಯವನ್ನು ಕಾಯುತ್ತಿವೆ. ನಮ್ಮ ಪೀಳಿಗೆಯನ್ನು ಸುಸ್ಥಿರವಾಗಿಟ್ಟು ಕಾಪಾಡುತ್ತಿರುವ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿವೆ. ನೀರು ಸಮೃದ್ಧವಾದಷ್ಟು, ನಾಗರೀಕತೆ ಅಭಿವೃದ್ಧಿಯಾಗುತ್ತದೆ.

ನಮ್ಮಲ್ಲಿರುವ ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳು ಅಗತ್ಯವಾಗಿವೆ. ಇದರ ಜತೆಗೆ ಅನಿರೀಕ್ಷಿತ ಹವಾಮಾನ ವೈಪರಿತ್ಯ ನಮಗೆ ಹೆಚ್ಚಿನ ಸವಾಲೊಡ್ಡಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ” ಎಂದು ತಿಳಿಸಿದರು.

“ಅಣೆಕಟ್ಟುಗಳ ಶಕ್ತಿ ಅಡಗಿರುವುದು ಅದನ್ನು ಹೇಗೆ ನಿರ್ಮಾಣ ಮಾಡಲಾಗಿದೆ ಎಂಬುದರ ಮೇಲೆ ಮಾತ್ರವಲ್ಲ, ಅದನ್ನು ಎಷ್ಟು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತದೆ ಎಂಬುದರ ಮೇಲೂ ನಿಂತಿದೆ. ಭಾರತದಲ್ಲಿ ಸುಮಾರು 6500 ಅಣೆಕಟ್ಟುಗಳಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ 232 ಅಣೆಕಟ್ಟುಗಳಿದ್ದು, ದೇಶದ ಮೂರನೇ ಎರಡು ಭಾಗದಷ್ಟು ಅಣೆಕಟ್ಟುಗಳು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾಗಿವೆ.

ಇದು ನಮ್ಮಲ್ಲಿ ಅಣೆಕಟ್ಟುಗಳ ವ್ಯವಸ್ಥಿತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದನ್ನು ಸಾರುತ್ತಿದೆ. ಇಂದು ಅಣೆಕಟ್ಟುಗಳ ಸುರಕ್ಷತೆ ರಾಷ್ಟ್ರ ಮಟ್ಟದ ಆದ್ಯತೆಯಾಗಿದೆ. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (DRIP) ಮೂಲಕ ಅನೇಕ ನೆರವು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದರ ಎರಡನೇ ಹಂತವನ್ನು ಜಾರಿಗೊಳಿಸಲಾಗುತ್ತಿದ್ದು, 58 ಅಣೆಕಟ್ಟುಗಳ ದುರಸ್ತಿ ಕಾಮಗಾರಿಗಳಿಗೆ 1500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅಲ್ಲದೇ ಬೇರೆ ಯಾರೇ ಸಿಎಂ ಆದ್ರೂ ಸರ್ಕಾರ ನಡೆಸೋದು ಕಷ್ಟ: ಅಶೋಕ್‌ ಪಟ್ಟಣ್ ಸ್ಪಷ್ಟನೆ

0

ಕೊಪ್ಪಳ: “ಸಿದ್ದರಾಮಯ್ಯ ಇಲ್ಲದಿದ್ದರೆ ಯಾವ ಪಕ್ಷದವರಾದರೂ ಸರ್ಕಾರ ನಡೆಸುವುದು ಕಷ್ಟ. ಸಿಎಂ ಬದಲಾವಣೆ ಬಗ್ಗೆ ಯಾರೂ ಒಪ್ಪಿಕೊಳ್ತಿಲ್ಲ. ನಾನು ಹೈಕಮಾಂಡ್ ಸೂಚಿಸಿದರೆ ಮಾತ್ರ ರಾಜೀನಾಮೆ ಕೊಡುತ್ತೇನೆ” ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಯಾವುದೇ ಸಂಘರ್ಷವಿಲ್ಲ. ಆದರೆ ಜಗಳ ಸೃಷ್ಟಿ ಮಾಡುವ ಪ್ರಯತ್ನ ನಡೆಯುತ್ತಿದೆ. “ಇಕ್ಬಾಲ್ ಹುಸೇನ್ ಮೊದಲ ಬಾರಿ ಶಾಸಕರಾಗಿದ್ದಾರೆ, ಸ್ವಲ್ಪ ಅನುಭವ ಕಡಿಮೆ. ಅವರು ಡಿ.ಕೆ ಶಿವಕುಮಾರ್ ಅವರೊಂದಿಗೆ ಹೆಚ್ಚು ಆತ್ಮೀಯರಿದ್ದಾರೆ. ಆದರೆ ಎಲ್ಲ ಶಾಸಕರು ಹಾಗೂ ರಾಹುಲ್ ಗಾಂಧಿ ಬಯಸುವುದು ಸಿದ್ದರಾಮಯ್ಯ ಮುಂದುವರಿಯಲಿ ಎನ್ನುವುದು” ಎಂದು ಹೇಳಿದರು.

“ಎರಡೂವರೆ ವರ್ಷ ಒಳ್ಳೆಯ ಆಡಳಿತ ಕೊಡಲಾಗಿದೆ, ಹೀಗಾಗಿ ಸಿದ್ದರಾಮಯ್ಯ ಮುಂದುವರಿಯಲಿ. 2028ಕ್ಕೆ ಡಿ.ಕೆ ಶಿವಕುಮಾರ್ ನೇತೃತ್ವಕ್ಕಾಗಿ ಪ್ರಸ್ತಾಪಿಸಬಹುದು. ಯಾರ ಅದೃಷ್ಟ ಇದ್ದರೆ ಅವರಿಗೆ ಅವಕಾಶ ಸಿಗಲಿ” ಎಂದು ಸ್ಪಷ್ಟಪಡಿಸಿದ್ದಾರೆ.

 

 

ಫೇರ್ವೆಲ್ ಪಾರ್ಟಿ ಬಳಿಕ ಕಾರು ಅಪಘಾತ: 6 ವರ್ಷದ ಬಾಲಕ ಸಾವು, ನಾಲ್ವರಿಗೆ ಗಾಯ

ಲಕ್ನೋ: ಫೇರ್ವೆಲ್ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವಿದ್ಯಾರ್ಥಿಯೊಬ್ಬನ ಕಾರು ನಿಯಂತ್ರಣ ತಪ್ಪಿ ಹಲವರಿಗೆ ಡಿಕ್ಕಿ ಹೊಡೆದ ಪರಿಣಾಮ 6 ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಲಕ್ನೋದಲ್ಲಿ ನಡೆದಿದೆ.

21 ವರ್ಷದ ವಿದ್ಯಾರ್ಥಿ ಗೌರವ್ ಸಿಂಗ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರಿನ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿದೆಯೆಂದು ತಿಳಿದುಬಂದಿದೆ. ಮೊದಲು ನಿಲ್ಲಿಸಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ನಂತರ ಐವರ ಮೇಲೆ ಹರಿದಿದೆ. ಅಪಘಾತದಲ್ಲಿ ಅರ್ಮಾನ್, ಸಾಧನಾ ಪಟೇಲ್, ಆಕೆಯ ತಾಯಿ ಮೀನಾ ದೇವಿ ಮತ್ತು  ಆರು ವರ್ಷದ ಮಗ ದೀಕ್ಷಾಂತ್ ಗಂಭೀರವಾಗಿ ಗಾಯಗೊಂಡರು.

ತೀವ್ರವಾಗಿ ಗಾಯಗೊಂಡಿದ್ದ ದೀಕ್ಷಾಂತ್ ನನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಾಲಕ ಕೇಂದ್ರೀಯ ವಿದ್ಯಾಲಯದಲ್ಲಿ 2ನೇ ತರಗತಿಯಲ್ಲಿ ಓದುತ್ತಿದ್ದನು.

ಅಪಘಾತದ ನಂತರ ಕಾರು ಇ-ರಿಕ್ಷಾ ಮತ್ತು ಆಟೋಗೆ ಸಹ ಡಿಕ್ಕಿ ಹೊಡೆದಿದ್ದು, ಇ-ರಿಕ್ಷಾ ಚಾಲಕ ಅವಧ್ ಬಿಹಾರಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬೆನ್ನಲ್ಲೇ ವಿದ್ಯಾರ್ಥಿ ಕಾರನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

ಹೊಸಕೋಟೆ ಡೆಡ್ಲಿ ಆಕ್ಸಿಡೆಂಟ್: ಮನೆಗೆ ಆಧಾರವಾಗಿದ್ದ ಮಕ್ಕಳ ದಾರುಣ ಅಂತ್ಯ – ಪೋಷಕರ ಆಕ್ರಂದನ

0

ಬೆಂಗಳೂರು: ಬದುಕಿ ಬಾಳಬೇಕಿದ್ದ, ಮನೆಯ ಆಧಾರಸ್ತಂಭರಾಗಿದ್ದ ಏಳು ಯುವಕರು ಭೀಕರ ಸರಣಿ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ. ಮೃತಪಟ್ಟವರ ವಯಸ್ಸು 22ರಿಂದ 30 ವರ್ಷಗಳ ನಡುವೆ ಇದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಎಂ. ಸತ್ಯವರ ಗ್ರಾಮದ ಬಳಿ ಬೆಳಗ್ಗಿನ ಜಾವ ಕ್ಯಾಂಟರ್, ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದೇ ಕಾರಿನಲ್ಲಿದ್ದ ಆರು ಜನರು ಹಾಗೂ ದ್ವಿಚಕ್ರ ವಾಹನ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದೇವನಹಳ್ಳಿ ತಾಲೂಕಿನ ದೇವನಾಯಕನಹಳ್ಳಿಯ 26 ವರ್ಷದ ಗಗನ್ ಈ ಅಪಘಾತದಲ್ಲಿ ಮೃತಪಟ್ಟ ದ್ವಿಚಕ್ರ ವಾಹನ ಸವಾರ. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ತಂದೆ-ತಾಯಿಗೆ ಗಗನ್ ಒಬ್ಬನೇ ಮಗನಾಗಿದ್ದ. ತಾಯಿಗೆ ದೃಷ್ಟಿ ಇಲ್ಲದ ಕಾರಣ ಮನೆಯ ಸಂಪೂರ್ಣ ಜವಾಬ್ದಾರಿ ಅವನ ಮೇಲಾಗಿತ್ತು. ಸಂಜೆ ಕೆಲಸಕ್ಕೆ ತೆರಳಿ ಮುಂಜಾನೆ ಮನೆಗೆ ಬರುತ್ತಿದ್ದ ಗಗನ್, ನಿನ್ನೆ ರಾತ್ರಿ ಪಾಳಿ ಮುಗಿಸಿ ಮನೆಗೆ ಬರುತ್ತಿದ್ದಾಗ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಇತರರನ್ನು ಅಶ್ವಿನ್, ಅಯಾನ್ ಅಲಿ, ಭರತ್, ಅರ್ಹಾನ್ ಹಾಗೂ ಇತನ್ ಜಾರ್ಜ್ ಎಂದು ಗುರುತಿಸಲಾಗಿದೆ. ಇವರು ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕರು ಎಂದು ತಿಳಿದುಬಂದಿದೆ. ಎಲ್ಲರೂ ಕೊತ್ತನೂರು ನಿವಾಸಿಗಳಾಗಿದ್ದಾರೆ. ಅಯಾನ್ ಅಲಿ ಕೂಡ ತನ್ನ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದನು.

ಹೊಸಕೋಟೆಯಿಂದ ದೇವನಹಳ್ಳಿ ಕಡೆ ಅತಿವೇಗವಾಗಿ ಬರುತ್ತಿದ್ದ ಕಾರು ಮೊದಲು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ನಂತರ ವಿಭಜಕಕ್ಕೆ ಗುದ್ದಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಸವಾರ ಗಗನ್ ಹಾಗೂ ಕಾರಿನಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಗಳನ್ನ ನಡೆಸಲು ಸಮಿತಿ ರಚನೆ: ಸಚಿವ ಜಿ. ಪರಮೇಶ್ವರ್

0

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷಿತವಾಗಿ ಆಯೋಜಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ನಿಯಮಗಳನ್ನು ಜಾರಿಗೆ ತರುವುದಿಲ್ಲ. ಸುರಕ್ಷತೆ ಅತ್ಯಂತ ಮುಖ್ಯ. ಪಂದ್ಯಗಳು ಯಾವುದೇ ತೊಂದರೆ ಇಲ್ಲದೆ ನಡೆಯುವಂತೆ ಸಮಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮೋದನೆ ನೀಡಲಾಗಿದೆ. ಒಂದು ಪಂದ್ಯಕ್ಕೆ ಗರಿಷ್ಠ 35 ಸಾವಿರ ಪ್ರೇಕ್ಷಕರು ಮಾತ್ರ ಸೇರಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ.

ಸಚಿವ ಸಂಪುಟ ಸಭೆಗೆ ಮುನ್ನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವರು, ಸಂಬಂಧಿತ ಅಧಿಕಾರಿಗಳು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಪ್ರತಿನಿಧಿಗಳು ಹಾಗೂ ಬೆಂಗಳೂರು ತಂಡದ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಇನ್ನೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮುಂಗಡ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರು ಶರಣಾಗಿದ್ದಾರೆ ಎಂದು ತಿಳಿಸಿದರು. ಅಪರಾಧ ತನಿಖಾ ಇಲಾಖೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಭಾರತಕ್ಕೆ ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಸಾಧ್ಯತೆ: ಸಚಿವ ಪಿಯೂಷ್ ಗೋಯಲ್

0

ನವದೆಹಲಿ: ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಬಾಂಗ್ಲಾದೇಶಕ್ಕೆ ವಿಸ್ತರಿಸಿದಂತೆ ಭಾರತಕ್ಕೂ ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕದ (Zero Tariff) ಪ್ರಯೋಜನ ದೊರೆಯುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಜಂಟಿ ಹೇಳಿಕೆ ಅಥವಾ ಶ್ವೇತಭವನದ ಫ್ಯಾಕ್ಟ್‌ಶೀಟ್‌ನಲ್ಲಿ ಈ ಷರತ್ತು ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ ಅಂತಿಮ ಒಪ್ಪಂದದಲ್ಲಿ ಭಾರತಕ್ಕೂ ಬಾಂಗ್ಲಾದೇಶದಂತೆ ಸಮಾನ ಪ್ರಯೋಜನ ಸಿಗಲಿದೆ ಎಂದು ಹೇಳಿದರು.

ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಹೆಚ್ಚಿನ ಲಾಭ ಪಡೆದುಕೊಂಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆರೋಪಗಳನ್ನು ಗೋಯಲ್ ತಿರಸ್ಕರಿಸಿದರು. ಸಂಸತ್ತಿನಲ್ಲಿ ಸುಳ್ಳು ಮಾಹಿತಿ ಹರಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಅಮೆರಿಕವು ಬಾಂಗ್ಲಾದೇಶದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ.19ಕ್ಕೆ ಇಳಿಸುವುದಾಗಿ ತಿಳಿಸಿದೆ. ಆದರೆ ಅಮೆರಿಕದ ಹತ್ತಿ ಬಳಸಿ, ಯಂತ್ರಗಳ ನೆರವಿಲ್ಲದೆ ಸಿದ್ಧಪಡಿಸಿದ ನೂಲಿನಿಂದ ತಯಾರಿಸಿದ ಜವಳಿ ಉತ್ಪನ್ನಗಳಿಗೆ ಮಾತ್ರ ಶೂನ್ಯ ಸುಂಕ ಅನ್ವಯವಾಗಲಿದೆ ಎಂದು ಹೇಳಿದರು.

ಪ್ರಸ್ತುತ ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೇ.31ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಲ್ಲಿ ಅತ್ಯಂತ ನೆಚ್ಚಿನ ರಾಷ್ಟ್ರ (MFN) ಸ್ಥಾನಮಾನದಿಂದ ಶೇ.12 ಹಾಗೂ ಪ್ರತಿಸುಂಕ ರೂಪದಲ್ಲಿ ಶೇ.19 ಸೇರಿವೆ. ಬಾಂಗ್ಲಾದೇಶವು ಅಮೆರಿಕದ ನೂಲು ಬಳಸಿದರೆ ಸುಂಕ ಶೇ.12ಕ್ಕೆ ಇಳಿಯಲಿದೆ.

ಅಂತಿಮ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೂ ಇದೇ ರೀತಿಯ ಪ್ರಯೋಜನ ದೊರೆಯಲಿದೆ. ಭಾರತೀಯ ಕಂಪನಿಗಳು ಅಮೆರಿಕದಿಂದ ಹತ್ತಿ ಮತ್ತು ನೂಲು ಖರೀದಿಸಿ ಉತ್ಪನ್ನ ತಯಾರಿಸಿ ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡಿದರೆ, ಶೂನ್ಯ ಸುಂಕದ ಲಾಭ ಸಿಗಲಿದೆ ಎಂದು ಗೋಯಲ್ ಹೇಳಿದರು. ಇದರಿಂದ ದೇಶದ ಹತ್ತಿ ಬೆಳೆಗಾರರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಹತ್ಯೆ!

0

ಶಿವಮೊಗ್ಗ: ತಾಲೂಕಿನ ಗಾಜನೂರು ಗ್ರಾಮದಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬನನ್ನು ತಲೆಗೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತನನ್ನು ಶಿವಮೊಗ್ಗದ ಹೊಸಮನೆ ಬಡಾವಣೆ 6ನೇ ತಿರುವಿನ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ.

ಶ್ರೀನಿವಾಸ್ ಗಾರೆ ಕೆಲಸ ಮಾಡುತ್ತಿದ್ದನು. ಗಾಜನೂರಿನಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದ ಆತ ಕಳೆದ ಮೂರು ದಿನಗಳಿಂದ ಅಲ್ಲಿಯೇ ವಾಸಿಸುತ್ತಿದ್ದನು. ಗುರುವಾರ ರಾತ್ರಿ ಗಾಜನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಪಕ್ಕದಲ್ಲಿ ಇನ್ನೋರ್ವ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತ ಕುಳಿತಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಯಾವ ಕಾರಣಕ್ಕೆ ಕೊಲೆ ನಡೆದಿದೆ ಹಾಗೂ ಆರೋಪಿಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಶ್ರೀನಿವಾಸ್ ಇರುವ ಕೆಲ ದೃಶ್ಯಗಳು ಸೆರೆಯಾಗಿವೆ.

ಆದರೆ ಅವನೊಂದಿಗೆ ಇದ್ದ ಇನ್ನೋರ್ವನ ಮುಖ ಸ್ಪಷ್ಟವಾಗಿ ಕಾಣಿಸದ ಹಿನ್ನೆಲೆಯಲ್ಲಿ, ಅವರು ಮದ್ಯ ತರಲು ತೆರಳಿದ್ದ ಬಾರ್ ಹಾಗೂ ಎಂಆರ್‌ಪಿ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಶ್ರೀನಿವಾಸ್ ಜೊತೆ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಜಗಳವಾಗಿ ನಂತರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್ ಹಾಜರು, ಐದು ದಿನ ಕಸ್ಟಡಿಗೆ ಸಿಐಡಿ ಸಿದ್ಧತೆ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಸಲ್ಲಿಸಲು ಸಿಐಡಿ ಸಜ್ಜಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಅಜಿತ್ ಹಾಗೂ ಬೈರತಿ ಬಸವರಾಜ್ ಮತ್ತು ಮೃತ ಬಿಕ್ಲು ಶಿವ ನಡುವೆ ಸಾಕಷ್ಟು ವ್ಯವಹಾರ ನಡೆದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಆ ವ್ಯವಹಾರಗಳ ಕುರಿತಾಗಿ ಆಳವಾದ ತನಿಖೆ ನಡೆಸಲು ಕಸ್ಟಡಿ ಅಗತ್ಯವೆಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೊಲೆಯಾದ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪವೂ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ದಾಖಲೆ ಪತ್ತೆಯಾಗಿದೆ ಎಂಬ ಮಾಹಿತಿ ತನಿಖಾ ವಲಯದಲ್ಲಿ ಚರ್ಚೆಯಲ್ಲಿದೆ. ಇನ್ನೂ ಆರೋಪಿ ಜಗದೀಶ್ ಪರಿಚಯವಿಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದರೂ, ಜಗದೀಶ್ ಜೊತೆ ವಿವಿಧ ಕಾರ್ಯಕ್ರಮಗಳು, ಜನ್ಮದಿನ ಸಮಾರಂಭಗಳು ಹಾಗೂ ದೇವಸ್ಥಾನ ಭೇಟಿ ಮಾಡಿರುವ ಚಿತ್ರಗಳು ಮತ್ತು ಮಾಹಿತಿ ಲಭ್ಯವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ಈ ಹಿಂದೆ ಬೈರತಿ ಬಸವರಾಜ್ ಹಾಗೂ ಬಿಕ್ಲು ಶಿವ ನಡುವೆ ಜಮೀನು ವಿವಾದ ಸಂಬಂಧ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಅವಲಹಳ್ಳಿ, ಕೆಆರ್ ಪುರ ಹಾಗೂ ಭಾರತೀನಗರ ಪೊಲೀಸ್ ಠಾಣೆಗಳಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರುಗಳು ದಾಖಲಾಗಿದ್ದವು ಎಂಬುದು ತಿಳಿದುಬಂದಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಸಾಮಾನ್ಯ ಕ್ಲಿನಿಕಲ್ ಪರೀಕ್ಷೆ, ರಕ್ತದೊತ್ತಡ, ಶುಗರ್ ಮಟ್ಟ, ಇಸಿಜಿ ಪರೀಕ್ಷೆ ಸೇರಿದಂತೆ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಯಲಿದೆ. ಈಗಾಗಲೇ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಅಗತ್ಯವಿದ್ದರೆ ಚಿಕಿತ್ಸೆ ಸೂಚಿಸಲಾಗುತ್ತದೆ.

error: Content is protected !!