Home Blog Page 7

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಗಳನ್ನ ನಡೆಸಲು ಸಮಿತಿ ರಚನೆ: ಸಚಿವ ಜಿ. ಪರಮೇಶ್ವರ್

0

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳನ್ನು ಸುರಕ್ಷಿತವಾಗಿ ಆಯೋಜಿಸಲು ಸಮಿತಿ ರಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ನಿಯಮಗಳನ್ನು ಜಾರಿಗೆ ತರುವುದಿಲ್ಲ. ಸುರಕ್ಷತೆ ಅತ್ಯಂತ ಮುಖ್ಯ. ಪಂದ್ಯಗಳು ಯಾವುದೇ ತೊಂದರೆ ಇಲ್ಲದೆ ನಡೆಯುವಂತೆ ಸಮಿತಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮೋದನೆ ನೀಡಲಾಗಿದೆ. ಒಂದು ಪಂದ್ಯಕ್ಕೆ ಗರಿಷ್ಠ 35 ಸಾವಿರ ಪ್ರೇಕ್ಷಕರು ಮಾತ್ರ ಸೇರಬೇಕು ಎಂಬ ಷರತ್ತಿನೊಂದಿಗೆ ಅನುಮತಿ ನೀಡಲಾಗಿದೆ.

ಸಚಿವ ಸಂಪುಟ ಸಭೆಗೆ ಮುನ್ನ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವರು, ಸಂಬಂಧಿತ ಅಧಿಕಾರಿಗಳು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ ಪ್ರತಿನಿಧಿಗಳು ಹಾಗೂ ಬೆಂಗಳೂರು ತಂಡದ ಮಂಡಳಿ ಸದಸ್ಯರು ಭಾಗವಹಿಸಿದ್ದರು.

ಇನ್ನೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಮುಂಗಡ ಜಾಮೀನು ಅರ್ಜಿ ತಿರಸ್ಕೃತವಾದ ಹಿನ್ನೆಲೆಯಲ್ಲಿ ಅವರು ಶರಣಾಗಿದ್ದಾರೆ ಎಂದು ತಿಳಿಸಿದರು. ಅಪರಾಧ ತನಿಖಾ ಇಲಾಖೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಭಾರತಕ್ಕೆ ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕ ಸಾಧ್ಯತೆ: ಸಚಿವ ಪಿಯೂಷ್ ಗೋಯಲ್

0

ನವದೆಹಲಿ: ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಬಾಂಗ್ಲಾದೇಶಕ್ಕೆ ವಿಸ್ತರಿಸಿದಂತೆ ಭಾರತಕ್ಕೂ ಜವಳಿ ಉತ್ಪನ್ನಗಳಿಗೆ ಶೂನ್ಯ ಸುಂಕದ (Zero Tariff) ಪ್ರಯೋಜನ ದೊರೆಯುವ ಸಾಧ್ಯತೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಜಂಟಿ ಹೇಳಿಕೆ ಅಥವಾ ಶ್ವೇತಭವನದ ಫ್ಯಾಕ್ಟ್‌ಶೀಟ್‌ನಲ್ಲಿ ಈ ಷರತ್ತು ಸ್ಪಷ್ಟವಾಗಿ ಉಲ್ಲೇಖವಾಗಿಲ್ಲ ಎಂಬುದನ್ನು ಒಪ್ಪಿಕೊಂಡರು. ಆದರೆ ಅಂತಿಮ ಒಪ್ಪಂದದಲ್ಲಿ ಭಾರತಕ್ಕೂ ಬಾಂಗ್ಲಾದೇಶದಂತೆ ಸಮಾನ ಪ್ರಯೋಜನ ಸಿಗಲಿದೆ ಎಂದು ಹೇಳಿದರು.

ವ್ಯಾಪಾರ ಒಪ್ಪಂದದಲ್ಲಿ ಬಾಂಗ್ಲಾದೇಶವು ಭಾರತಕ್ಕಿಂತ ಹೆಚ್ಚಿನ ಲಾಭ ಪಡೆದುಕೊಂಡಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಆರೋಪಗಳನ್ನು ಗೋಯಲ್ ತಿರಸ್ಕರಿಸಿದರು. ಸಂಸತ್ತಿನಲ್ಲಿ ಸುಳ್ಳು ಮಾಹಿತಿ ಹರಡಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಅಮೆರಿಕವು ಬಾಂಗ್ಲಾದೇಶದ ಸರಕುಗಳ ಮೇಲಿನ ಪ್ರತಿಸುಂಕವನ್ನು ಶೇ.19ಕ್ಕೆ ಇಳಿಸುವುದಾಗಿ ತಿಳಿಸಿದೆ. ಆದರೆ ಅಮೆರಿಕದ ಹತ್ತಿ ಬಳಸಿ, ಯಂತ್ರಗಳ ನೆರವಿಲ್ಲದೆ ಸಿದ್ಧಪಡಿಸಿದ ನೂಲಿನಿಂದ ತಯಾರಿಸಿದ ಜವಳಿ ಉತ್ಪನ್ನಗಳಿಗೆ ಮಾತ್ರ ಶೂನ್ಯ ಸುಂಕ ಅನ್ವಯವಾಗಲಿದೆ ಎಂದು ಹೇಳಿದರು.

ಪ್ರಸ್ತುತ ಬಾಂಗ್ಲಾದೇಶದ ಜವಳಿ ಉತ್ಪನ್ನಗಳಿಗೆ ಅಮೆರಿಕದಲ್ಲಿ ಶೇ.31ರಷ್ಟು ಸುಂಕ ವಿಧಿಸಲಾಗುತ್ತಿದೆ. ಇದರಲ್ಲಿ ಅತ್ಯಂತ ನೆಚ್ಚಿನ ರಾಷ್ಟ್ರ (MFN) ಸ್ಥಾನಮಾನದಿಂದ ಶೇ.12 ಹಾಗೂ ಪ್ರತಿಸುಂಕ ರೂಪದಲ್ಲಿ ಶೇ.19 ಸೇರಿವೆ. ಬಾಂಗ್ಲಾದೇಶವು ಅಮೆರಿಕದ ನೂಲು ಬಳಸಿದರೆ ಸುಂಕ ಶೇ.12ಕ್ಕೆ ಇಳಿಯಲಿದೆ.

ಅಂತಿಮ ಭಾರತ–ಅಮೆರಿಕ ವ್ಯಾಪಾರ ಒಪ್ಪಂದದಲ್ಲಿ ಭಾರತಕ್ಕೂ ಇದೇ ರೀತಿಯ ಪ್ರಯೋಜನ ದೊರೆಯಲಿದೆ. ಭಾರತೀಯ ಕಂಪನಿಗಳು ಅಮೆರಿಕದಿಂದ ಹತ್ತಿ ಮತ್ತು ನೂಲು ಖರೀದಿಸಿ ಉತ್ಪನ್ನ ತಯಾರಿಸಿ ಅಮೆರಿಕ ಮಾರುಕಟ್ಟೆಗೆ ರಫ್ತು ಮಾಡಿದರೆ, ಶೂನ್ಯ ಸುಂಕದ ಲಾಭ ಸಿಗಲಿದೆ ಎಂದು ಗೋಯಲ್ ಹೇಳಿದರು. ಇದರಿಂದ ದೇಶದ ಹತ್ತಿ ಬೆಳೆಗಾರರ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಿವಮೊಗ್ಗದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಭೀಕರ ಹತ್ಯೆ!

0

ಶಿವಮೊಗ್ಗ: ತಾಲೂಕಿನ ಗಾಜನೂರು ಗ್ರಾಮದಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬನನ್ನು ತಲೆಗೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮೃತನನ್ನು ಶಿವಮೊಗ್ಗದ ಹೊಸಮನೆ ಬಡಾವಣೆ 6ನೇ ತಿರುವಿನ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ.

ಶ್ರೀನಿವಾಸ್ ಗಾರೆ ಕೆಲಸ ಮಾಡುತ್ತಿದ್ದನು. ಗಾಜನೂರಿನಲ್ಲಿ ಗಾರೆ ಕೆಲಸಕ್ಕೆ ಹೋಗಿದ್ದ ಆತ ಕಳೆದ ಮೂರು ದಿನಗಳಿಂದ ಅಲ್ಲಿಯೇ ವಾಸಿಸುತ್ತಿದ್ದನು. ಗುರುವಾರ ರಾತ್ರಿ ಗಾಜನೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ಪಕ್ಕದಲ್ಲಿ ಇನ್ನೋರ್ವ ವ್ಯಕ್ತಿಯೊಂದಿಗೆ ಮದ್ಯಪಾನ ಮಾಡುತ್ತ ಕುಳಿತಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಯಾವ ಕಾರಣಕ್ಕೆ ಕೊಲೆ ನಡೆದಿದೆ ಹಾಗೂ ಆರೋಪಿಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ತುಂಗಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಶ್ರೀನಿವಾಸ್ ಇರುವ ಕೆಲ ದೃಶ್ಯಗಳು ಸೆರೆಯಾಗಿವೆ.

ಆದರೆ ಅವನೊಂದಿಗೆ ಇದ್ದ ಇನ್ನೋರ್ವನ ಮುಖ ಸ್ಪಷ್ಟವಾಗಿ ಕಾಣಿಸದ ಹಿನ್ನೆಲೆಯಲ್ಲಿ, ಅವರು ಮದ್ಯ ತರಲು ತೆರಳಿದ್ದ ಬಾರ್ ಹಾಗೂ ಎಂಆರ್‌ಪಿ ಅಂಗಡಿಗಳ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಶ್ರೀನಿವಾಸ್ ಜೊತೆ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಜಗಳವಾಗಿ ನಂತರ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಬಿಕ್ಲು ಶಿವ ಕೊಲೆ ಪ್ರಕರಣ: ಬೈರತಿ ಬಸವರಾಜ್ ವೈದ್ಯಕೀಯ ಪರೀಕ್ಷೆ ಬಳಿಕ ಕೋರ್ಟ್ ಹಾಜರು, ಐದು ದಿನ ಕಸ್ಟಡಿಗೆ ಸಿಐಡಿ ಸಿದ್ಧತೆ

0

ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಬೈರತಿ ಬಸವರಾಜ್ ಅವರಿಗೆ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಬಳಿಕ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲು ಸಿಐಡಿ ಅಧಿಕಾರಿಗಳು ಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಕನಿಷ್ಠ ಐದು ದಿನಗಳ ಪೊಲೀಸ್ ಕಸ್ಟಡಿಗೆ ಮನವಿ ಸಲ್ಲಿಸಲು ಸಿಐಡಿ ಸಜ್ಜಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ಅಜಿತ್ ಹಾಗೂ ಬೈರತಿ ಬಸವರಾಜ್ ಮತ್ತು ಮೃತ ಬಿಕ್ಲು ಶಿವ ನಡುವೆ ಸಾಕಷ್ಟು ವ್ಯವಹಾರ ನಡೆದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದ್ದು, ಆ ವ್ಯವಹಾರಗಳ ಕುರಿತಾಗಿ ಆಳವಾದ ತನಿಖೆ ನಡೆಸಲು ಕಸ್ಟಡಿ ಅಗತ್ಯವೆಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಕೊಲೆಯಾದ ಬಿಕ್ಲು ಶಿವನಿಗೆ ಬೈರತಿ ಬಸವರಾಜ್ ಬೆದರಿಕೆ ಹಾಕಿದ್ದ ಆರೋಪವೂ ಕೇಳಿಬಂದಿದೆ. ಇದಕ್ಕೆ ಪೂರಕವಾಗಿ ಬಿಕ್ಲು ಶಿವನ ಮೊಬೈಲ್‌ನಲ್ಲಿ ಆಡಿಯೋ ದಾಖಲೆ ಪತ್ತೆಯಾಗಿದೆ ಎಂಬ ಮಾಹಿತಿ ತನಿಖಾ ವಲಯದಲ್ಲಿ ಚರ್ಚೆಯಲ್ಲಿದೆ. ಇನ್ನೂ ಆರೋಪಿ ಜಗದೀಶ್ ಪರಿಚಯವಿಲ್ಲ ಎಂದು ಬೈರತಿ ಬಸವರಾಜ್ ಹೇಳಿದ್ದರೂ, ಜಗದೀಶ್ ಜೊತೆ ವಿವಿಧ ಕಾರ್ಯಕ್ರಮಗಳು, ಜನ್ಮದಿನ ಸಮಾರಂಭಗಳು ಹಾಗೂ ದೇವಸ್ಥಾನ ಭೇಟಿ ಮಾಡಿರುವ ಚಿತ್ರಗಳು ಮತ್ತು ಮಾಹಿತಿ ಲಭ್ಯವಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತೀವ್ರತೆ ತಂದಿದೆ.

ಈ ಹಿಂದೆ ಬೈರತಿ ಬಸವರಾಜ್ ಹಾಗೂ ಬಿಕ್ಲು ಶಿವ ನಡುವೆ ಜಮೀನು ವಿವಾದ ಸಂಬಂಧ ಹಲವು ಬಾರಿ ಗಲಾಟೆಗಳು ನಡೆದಿದ್ದವು. ಅವಲಹಳ್ಳಿ, ಕೆಆರ್ ಪುರ ಹಾಗೂ ಭಾರತೀನಗರ ಪೊಲೀಸ್ ಠಾಣೆಗಳಲ್ಲಿ ಬೈರತಿ ಬಸವರಾಜ್ ವಿರುದ್ಧ ದೂರುಗಳು ದಾಖಲಾಗಿದ್ದವು ಎಂಬುದು ತಿಳಿದುಬಂದಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಸಾಮಾನ್ಯ ಕ್ಲಿನಿಕಲ್ ಪರೀಕ್ಷೆ, ರಕ್ತದೊತ್ತಡ, ಶುಗರ್ ಮಟ್ಟ, ಇಸಿಜಿ ಪರೀಕ್ಷೆ ಸೇರಿದಂತೆ ಆರೋಗ್ಯ ಸ್ಥಿತಿಯ ಪರಿಶೀಲನೆ ನಡೆಯಲಿದೆ. ಈಗಾಗಲೇ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅದರ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಅಗತ್ಯವಿದ್ದರೆ ಚಿಕಿತ್ಸೆ ಸೂಚಿಸಲಾಗುತ್ತದೆ.

ಕೋರ್ಟ್ ಆದೇಶದ ಜಾರಿಗೆ ಬಸ್ ಸೀಜ್: ಚನ್ನರಾಯಪಟ್ಟಣದಲ್ಲಿ ಸರ್ಕಾರಿ ಬಸ್‌ಗಳಿಗೆ ತಡೆ, ಪ್ರಯಾಣಿಕರ ಆಕ್ರೋಶ

0

ಚಿಕ್ಕಮಗಳೂರು ಡಿಪೋಗೆ ಸೇರಿದ ಎರಡು ಸರ್ಕಾರಿ ಬಸ್‌ಗಳನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಕೋರ್ಟ್ ಆದೇಶದಂತೆ ಸೀಜ್‌ ಮಾಡಲಾಗಿದೆ. ಈ ಬಸ್‌ಗಳು ಬೆಂಗಳೂರಿನಿಂದ ಶೃಂಗೇರಿಗೆ ಹೊರಟ್ಟಿದ್ದವು.

ಅಪಘಾತ ಪ್ರಕರಣದಲ್ಲಿ ಪರಿಹಾರ ಹಣವನ್ನು ಕ್ಲೈಮ್ ಮಾಡದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ನೀಡಿದ್ದು, ವಕೀಲರ ತಂಡ ಬಸ್‌ಗಳನ್ನು ತಡೆದು ಕೋರ್ಟ್ ಆವರಣಕ್ಕೆ ಕೊಂಡೊಯ್ಯುವಂತೆ ಸೂಚಿಸಿದೆ.

ಮಾರ್ಗ ಮಧ್ಯೆ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ದೂರ ಪ್ರಯಾಣದಲ್ಲಿದ್ದ ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ತೊಂದರೆ ಉಂಟಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಘಟನೆ ನಂತರ ಬಸ್‌ಗಳನ್ನು ಚನ್ನರಾಯಪಟ್ಟಣ ಕೋರ್ಟ್ ಆವರಣದಲ್ಲಿ ನಿಲ್ಲಿಸಲಾಗಿದೆ. ಅಪಘಾತ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಕಾನೂನು ಗೊಂದಲದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಗದಗನಲ್ಲಿ ಕಾಂಗ್ರೆಸ್ ಮುಖಂಡನ ಮನೆ ಬೀಗ ಮುರಿದು ಚಿನ್ನ-ಬೆಳ್ಳಿ-ನಗದು ದೋಚಿದ ಕಳ್ಳರು!

0

ಗದಗ: ನಗರದ ಹುಡ್ಕೋ ಕಾಲೋನಿಯಲ್ಲಿ ಮನೆ ಕಳ್ಳತನದ ಘಟನೆ ಸಂಭವಿಸಿ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಕಾಂಗ್ರೆಸ್ ಪಕ್ಷದ ಮುಖಂಡ ಸೋಮಪ್ಪ ಲಮಾಣಿ ಎಂಬುವರ ಮನೆಗೆ ರಾಡ್‌ನಿಂದ ಸೆಂಟರ್ ಲಾಕ್ ಮುರಿದು ನುಗ್ಗಿದ ಕಳ್ಳರು, ಸುಮಾರು 30 ಗ್ರಾಂ ಬಂಗಾರದ ಆಭರಣ, ಎರಡು ಕೆಜಿ ಬೆಳ್ಳಿ ಹಾಗೂ ₹50 ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಕುಟುಂಬಸ್ಥರು ಮಗಳ ಭೇಟಿಗಾಗಿ ಬೆಂಗಳೂರಿಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಇಂದು ಬೆಂಗಳೂರಿನಿಂದ ಮನೆಗೆ ಮರಳಿದ ಕುಟುಂಬದವರು ಮನೆ ಬಾಗಿಲು ಒಡೆದಿರುವುದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಒಳಗೆ ಹೋಗಿ ನೋಡಿದಾಗ ಬೀರು ಮತ್ತು ಗೋದ್ರೆಜ್ ಲಾಕರ್ ಮುರಿದು ಚಿನ್ನ, ಬೆಳ್ಳಿ, ನಗದು ದೋಚಿರುವುದು ಬೆಳಕಿಗೆ ಬಂದಿದೆ.

ಮನೆಯ ಯಜಮಾನಿ ಕಣ್ಣೀರು ಹಾಕುತ್ತಾ, “ಎಲ್ಲವೂ ದೋಚಿದ್ದಾರೆ. ಇನ್ನೂ ಒಳಗಡೆ ಸಂಪೂರ್ಣವಾಗಿ ನೋಡಿಲ್ಲ. ಇನ್ನೇನು ದೋಚಿದ್ದಾರೆ ಗೊತ್ತಿಲ್ಲ,” ಎಂದು ದುಃಖ ವ್ಯಕ್ತಪಡಿಸಿದರು.

ಘಟನಾ ಸ್ಥಳಕ್ಕೆ ಗದಗ ಡಿವೈಎಸ್ಪಿ ಮುರ್ತಾಜ್ ಖಾದ್ರಿ, ಸಿಪಿಐ ಲಾಲಸಾಬ್ ಜೂಲಕಟ್ಟಿ ಹಾಗೂ ಪಿಎಸ್ಐ ಪವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಾಗ್ ಸ್ಕ್ವಾಡ್ ಹಾಗೂ ಸೋಕೋ ತಂಡವು ಸ್ಥಳ ಪರಿಶೀಲನೆ ನಡೆಸಿದೆ. ಪೊಲೀಸ್ ಶ್ವಾನ್ ‘ಚೇತಕ್’ ಕಳ್ಳರ ಹೆಜ್ಜೆ ಗುರುತು ಹಿಡಿದು ಸೂಚನೆ ನೀಡಿದ್ದು, ಅದರ ಆಧಾರದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ₹5,000 ಹಾಕಿದ ಡಿಎಂಕೆ ಸರ್ಕಾರ!

0

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ M. K. Stalin ನೇತೃತ್ವದ Dravida Munnetra Kazhagam (ಡಿಎಂಕೆ) ಸರ್ಕಾರವು ‘ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ’ಯಡಿ ಮಹಿಳಾ ಫಲಾನುಭವಿಗಳಿಗೆ ಒಟ್ಟು ₹5,000 ಜಮಾ ಮಾಡಿರುವುದಾಗಿ ಘೋಷಿಸಿದೆ.

ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಿಗೆ ಮುಂಗಡವಾಗಿ ₹3,000 ಹಣ ನೀಡಲಾಗಿದ್ದು, ಬೇಸಿಗೆ ವಿಶೇಷ ಪ್ಯಾಕೇಜ್ ರೂಪದಲ್ಲಿ ಹೆಚ್ಚುವರಿ ₹2,000 ಜಮಾ ಮಾಡಲಾಗಿದೆ. ರಾಜ್ಯದಾದ್ಯಂತ ಸುಮಾರು 1.31 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಮೊತ್ತವನ್ನು ಜಮಾ ಮಾಡಲಾಗಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಮುಖ್ಯಮಂತ್ರಿ ಸ್ಟಾಲಿನ್, ಚುನಾವಣೆಯನ್ನು ಉಲ್ಲೇಖಿಸಿ ಮಹಿಳಾ ಹಕ್ಕುಗಳ ಅನುದಾನವನ್ನು ಮೂರು ತಿಂಗಳ ಕಾಲ ತಡೆಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಸರ್ಕಾರ ಸಮಯಕ್ಕಿಂತ ಮುಂಚಿತವಾಗಿ ಹಣ ಜಮಾ ಮಾಡಿದ್ದು, ಯಾವುದೇ ಅಡಚಣೆ ಎದುರಾಗದಂತೆ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ‘ದ್ರಾವಿಡ ಮಾದರಿ 2.0’ ಅಡಿಯಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಸ್ತುತ ಇರುವ ₹1,000 ಮಾಸಿಕ ಸಹಾಯಧನವನ್ನು ₹2,000ಕ್ಕೆ ಹೆಚ್ಚಿಸಲಾಗುವುದು ಎಂದು ಸ್ಟಾಲಿನ್ ಭರವಸೆ ನೀಡಿದ್ದಾರೆ. ಇನ್ನೊಂದೆಡೆ, ಪ್ರತಿಪಕ್ಷವಾದ All India Anna Dravida Munnetra Kazhagam (ಎಐಎಡಿಎಂಕೆ) ಕೂಡ ಐದು ಚುನಾವಣಾ ಭರವಸೆಗಳನ್ನು ಪ್ರಕಟಿಸಿದೆ.

ಸಾಮಾಜಿಕ ಭದ್ರತಾ ಪಿಂಚಣಿಯನ್ನು ₹1,200ರಿಂದ ₹2,000ಕ್ಕೆ ಹೆಚ್ಚಿಸುವುದು, ಶಿಕ್ಷಣ ಸಾಲ ಮನ್ನಾ, ವರ್ಷಕ್ಕೆ ಮೂರು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ, ಜಲ್ಲಿಕಟ್ಟು ಸೇರಿದಂತೆ ಸಾಂಪ್ರದಾಯಿಕ ಕ್ರೀಡೆಗಳಿಗೆ ಬೆಂಬಲ ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡುವುದು ಪ್ರಮುಖ ಭರವಸೆಗಳಾಗಿವೆ. ಚುನಾವಣಾ ಹಿನ್ನಲೆಯಲ್ಲಿ ಆಡಳಿತಾರೂಢ ಮತ್ತು ಪ್ರತಿಪಕ್ಷ ಪಕ್ಷಗಳು ವಿವಿಧ ಯೋಜನೆಗಳ ಮೂಲಕ ಮತದಾರರ ಗಮನ ಸೆಳೆಯಲು ಮುಂದಾಗಿವೆ.

ಶಿಕ್ಷಕರ ನಿರ್ಲಕ್ಷ್ಯಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಯ ಬೆರಳುಗಳೇ ಕಟ್! ನಾಲ್ವರ ವಿರುದ್ಧ ಎಫ್ ಐಆರ್

0

ತುಮಕೂರು: ಜಿಲ್ಲೆಯ ಗ್ರಾಮಾಂತರ ಪ್ರದೇಶದ ಗೂಳೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಡೆದ ದುರ್ಘಟನೆ ಶಿಕ್ಷಣ ವ್ಯವಸ್ಥೆಯ ಸುರಕ್ಷತೆ ಪ್ರಶ್ನಾರ್ಥಕವಾಗಿಸಿದೆ. ಫೆಬ್ರವರಿ 9ರಂದು ಮಧ್ಯಾಹ್ನದ ಬಿಸಿಯೂಟ ವೇಳೆ ಒಂದನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿದೇವಿ ಬಲಗೈಯ ಎರಡು ಬೆರಳುಗಳನ್ನು ಕಳೆದುಕೊಂಡಿದ್ದಾಳೆ.

ಸಾಲಿನಲ್ಲಿ ನಿಂತಿದ್ದ ಬಾಲಕಿ ಮೂರನೇ ತರಗತಿ ಕೊಠಡಿಯ ಬಾಗಿಲಿಗೆ ಕೈ ಇಟ್ಟಿದ್ದಾಗ ಮತ್ತೊಬ್ಬ ವಿದ್ಯಾರ್ಥಿ ಬಾಗಿಲು ತಳ್ಳಿದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಗಂಭೀರ ಗಾಯವಾಗಿದ್ದರೂ ಕೂಡ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಕೇವಲ ನೀರು ಸುರಿದು ಬ್ಯಾಂಡೇಜ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಬಾಲಕಿಯ ಪೋಷಕರು ಗಾರೆ ಕೆಲಸ ಮಾಡುವವರಾಗಿದ್ದು, ಶಿಕ್ಷಕರನ್ನು ಪ್ರಶ್ನಿಸಿದಾಗ ನಿರ್ಲಕ್ಷ್ಯ ತೋರಲಾಗಿದ್ದು, 2000 ರೂಪಾಯಿ ಫೋನ್ ಪೇ ಮೂಲಕ ಕಳುಹಿಸಲಾಗಿದೆ ಎನ್ನುವ ವಿಷಯವೂ ಹೊರಬಂದಿದೆ. ಜಿಲ್ಲಾ ಆಸ್ಪತ್ರೆಯ ವೈದ್ಯರು ಕಟ್ ಆದ ಬೆರಳುಗಳನ್ನು ತಂದುಕೊಟ್ಟರೆ ಮರುಜೋಡಣೆ ಸಾಧ್ಯವೆಂದು ಹೇಳಿದ್ದರೂ, ಅವು ಶಾಲೆಯಲ್ಲಿ ಲಭ್ಯವಿಲ್ಲವೆಂದು ತಿಳಿಸಿರುವುದು ಪ್ರಕರಣಕ್ಕೆ ಮತ್ತಷ್ಟು ಗಂಭೀರತೆ ತಂದಿದೆ.

ಈ ಹಿನ್ನೆಲೆಯಲ್ಲಿ ಬಿಇಓ ಹನುಮಂತಪ್ಪ, ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕಿ ರೇಣುಕಮ್ಮ ಹಾಗೂ ಸಿಆರ್‌ಪಿ ವೆಂಕಟೇಶ್ ವಿರುದ್ಧ ತುಮಕೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಸ್ತೃತ ತನಿಖೆ ಆರಂಭಿಸಿದ್ದಾರೆ. ನ್ಯಾಯ ದೊರಕಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

 

ಬಿಡುಗಡೆಯಿಗೂ ಮುನ್ನವೇ ‘ಟಾಕ್ಸಿಕ್’ ಭರ್ಜರಿ ವ್ಯಾಪಾರ: ಆಂಧ್ರ–ತೆಲಂಗಾಣ ಹಕ್ಕುಗಳು 120 ಕೋಟಿಗೆ ಡೀಲ್!

ಇನ್ನೂ ಒಂದು ತಿಂಗಳಲ್ಲೇ ತೆರೆಗೆ ಬರಲಿರುವ ಯಶ್‌ ನಟನೆಯ ಟಾಕ್ಸಿಕ್ ಚಿತ್ರ ಈಗಾಗಲೇ ವ್ಯಾಪಾರ ವಲಯದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿತರಣೆ ಹಕ್ಕುಗಳನ್ನು ದಿಲ್‌ ರಾಜು 120 ಕೋಟಿ ರೂಪಾಯಿಗೆ ಪಡೆದಿದ್ದಾರೆ ಎನ್ನುವ ಮಾಹಿತಿ ಸಿನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಒಪ್ಪಂದ ನಿಜವೇ ಅಥವಾ ಪ್ರಚಾರದ ಭಾಗವೇ ಎಂಬ ಪ್ರಶ್ನೆಗೆ ದಿಲ್ ರಾಜು ನೇರ ಉತ್ತರ ನೀಡಿದ್ದಾರೆ. “ಹಣ ವರ್ಗಾವಣೆ ಮಾಡಿದ ನಂತರ ಬ್ಯಾಂಕ್ ವಿವರ ತೋರಿಸುತ್ತೇನೆ, ಆಗ ಎಲ್ಲರೂ ನಂಬುತ್ತಾರೆ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚಿತ್ರದಲ್ಲಿ ಯಶ್‌ ನಾಯಕನಾಗಿ ಮತ್ತು ಕಿಯಾರಾ ಅಡ್ವಾಣಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಗೀತೂ  ಮೋಹನ್‌ ದಾಸ್‌ ನಿರ್ದೇಶಿಸಿದ್ದು, ಕೆವಿಎನ್‌ ಪ್ರೊಡಕ್ಷನ್‌ ನಿರ್ಮಾಣದ ಹೊಣೆ ಹೊತ್ತಿದೆ.

ಪ್ಯಾನ್ ಭಾರತ ಮಟ್ಟದಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ ಈಗಾಗಲೇ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಬಿಡುಗಡೆಯ ನಂತರ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟದ ದಾಖಲೆ ನಿರ್ಮಿಸಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

T20 World Cup: ನಮೀಬಿಯಾ ವಿರುದ್ಧ 93 ರನ್ ಗಳ ಭರ್ಜರಿ ಜಯ – ಭಾರತಕ್ಕೆ ಸತತ ಎರಡನೇ ಗೆಲುವು!

0

ನವದೆಹಲಿ: 2026ರ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ 93 ರನ್‌ಗಳ ಭಾರಿ ಜಯ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಫೆಬ್ರವರಿ 12ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್‌ಗಳಲ್ಲಿ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ನಮೀಬಿಯಾ 116 ರನ್‌ಗಳಿಗೆ ಆಲೌಟ್ ಆಯಿತು.

ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಜೋಡಿ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ನೀಡಿತು. ಮೊದಲ 6 ಓವರ್‌ಗಳಲ್ಲಿ 86 ರನ್‌ಗಳನ್ನು ಸೇರಿಸಿದರು. ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 24 ಎಸೆತಗಳಲ್ಲಿ 61 ರನ್‌ಗಳಿಸಿ ಔಟಾದರು.

ಮಧ್ಯಮ ಕ್ರಮದಲ್ಲಿ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್‌ಗಳ ದಿಟ್ಟ ಇನ್ನಿಂಗ್ಸ್ ಆಡಿದರು. ಆದರೆ ಕೊನೆಯ ಎರಡು ಓವರ್‌ಗಳಲ್ಲಿ ಭಾರತ 10 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸ್ವಲ್ಪ ಕುಸಿತ ಕಂಡಿತು. ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ 4 ವಿಕೆಟ್ ಪಡೆದು ಮೆರೆದರು.

209 ರನ್‌ಗಳ ಗುರಿ ಬೆನ್ನಟ್ಟಿದ ನಮೀಬಿಯಾ ಪವರ್‌ಪ್ಲೇನಲ್ಲಿ 57 ರನ್‌ಗಳೊಂದಿಗೆ ಉತ್ತಮ ಆರಂಭ ಕಂಡಿತು. ಜಾನ್ ಫ್ರೈಲಿಂಕ್ ಹಾಗೂ ಲಾರೆನ್ ಸ್ಟೀನ್‌ಕ್ಯಾಂಪ್ ಉತ್ತಮ ಜೊತೆಯಾಟ ಕಟ್ಟಿದರು. ಆದರೆ ಪವರ್‌ಪ್ಲೇ ನಂತರ ಪಂದ್ಯ ತಿರುವು ಪಡೆದುಕೊಂಡಿತು.

ವರುಣ್ ಚಕ್ರವರ್ತಿ ಸತತ ಎರಡು ಓವರ್‌ಗಳಲ್ಲಿ 3 ವಿಕೆಟ್ ಪಡೆದು ನಮೀಬಿಯಾದ ಬೆನ್ನುಮುರಿದರು. ನಂತರ ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ಒತ್ತಡ ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 18ನೇ ಓವರ್‌ನಲ್ಲಿ 2 ವಿಕೆಟ್ ಪಡೆದು ನಮೀಬಿಯಾದ ಸೋಲನ್ನು ಖಚಿತಪಡಿಸಿದರು.

ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೂರ್ನಿಯಲ್ಲಿ ತನ್ನ ಪಾಯಿಂಟ್‌ಗಳನ್ನು ಮತ್ತಷ್ಟು ಬಲಪಡಿಸಿದೆ

error: Content is protected !!