ಬೆಂಗಳೂರು: ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪ್ರಕರಣದ ಟ್ರಯಲ್ಗೆ (ವಿಚಾರಣೆ) ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದ್ದು, ಚುನಾವಣಾ ತಕರಾರು ಪ್ರಕರಣದ ವಿಚಾರಣೆ ಮುಂದುವರಿಯಲು ಅವಕಾಶ ನೀಡಿದೆ. ಈ ಮೂಲಕ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರಿಗೆ ಸುಪ್ರೀಂ ಕೋರ್ಟ್ನಲ್ಲೂ ಹಿನ್ನಡೆ ಎದುರಾಗಿದೆ.
ಏನಿದು ಜಯನಗರ ವಿವಾದ?
2023ರಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿ.ಕೆ.ರಾಮಮೂರ್ತಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಸೌಮ್ಯ ರೆಡ್ಡಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸಿ.ಕೆ.ರಾಮಮೂರ್ತಿ ಅವರು ಸೌಮ್ಯ ರೆಡ್ಡಿ ಅವರನ್ನು ಕೇವಲ 16 ಮತಗಳ ಅಂತರದಲ್ಲಿ ಸೋಲಿಸಿದ್ದರು.
ಆದರೆ ತಮ್ಮ ಪರಾಭವವನ್ನು ಪ್ರಶ್ನಿಸಿದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಮತ ಎಣಿಕೆ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಇವಿಎಂ ಮತ ಎಣಿಕೆಯಲ್ಲಿ ತಾನು ಮುನ್ನಡೆ ಸಾಧಿಸಿದ್ದೆ, ಆದರೆ ಅಂಚೆ ಮತಗಳ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದ್ದರು.
ಅಂಚೆ ಮತ ಎಣಿಕೆಯಲ್ಲಿ ವ್ಯತ್ಯಾಸ ಆರೋಪ
ಸೌಮ್ಯ ರೆಡ್ಡಿ ಅವರ ಪ್ರಕಾರ, ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗ ವಿಭಿನ್ನ ಅಂಕಿ-ಅಂಶಗಳು ಲಭ್ಯವಾಗಿದ್ದವು. ಅಲ್ಲದೆ ಮತ ಎಣಿಕೆ ಪ್ರಕ್ರಿಯೆ ಆರಂಭವಾದ ನಂತರವೂ ಅಂಚೆ ಮೂಲಕ ಬಂದ ಮತ ಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ ಎಂದು ಅವರು ಆರೋಪಿಸಿದ್ದರು.
ಈ ಹಿನ್ನೆಲೆ, ವಿಜೇತ ಅಭ್ಯರ್ಥಿ ಸಿ.ಕೆ.ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸೌಮ್ಯ ರೆಡ್ಡಿ ಅವರು ಹೈಕೋರ್ಟ್ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಈ ಸಂಬಂಧ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೌಮ್ಯ ರೆಡ್ಡಿ ಅವರಿಗೆ ಸೂಚನೆ ನೀಡಿತ್ತು.
ಸುಪ್ರೀಂ ಕೋರ್ಟ್ನಲ್ಲೂ ಹಿನ್ನಡೆ
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ.ರಾಮಮೂರ್ತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣದ ವಿಚಾರಣೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದ್ದು, ಚುನಾವಣಾ ತಕರಾರು ಪ್ರಕರಣದ ಟ್ರಯಲ್ ಮುಂದುವರಿಯಲಿದೆ.

