Home Blog Page 2

ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ದರ್ಶನ್‌ಗೆ ಭಾರೀ ಶಾಕ್! ಜೈಲಿನಲ್ಲಿ ಊಟ ಬಿಟ್ಟು ಆತಂಕದಲ್ಲಿ ಕಳೆದ ಡಿ-ಬಾಸ್

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆಯೊಂದು ನಟ ದರ್ಶನ್ ಮತ್ತು ಅವರ ಗ್ಯಾಂಗ್‌ಗೆ ಸಂಕಷ್ಟ ಹೆಚ್ಚಿಸಿದೆ. ಪ್ರಕರಣದ ಆರೋಪಿ ಹಾಗೂ ದರ್ಶನ್ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ನ್ಯಾಯಾಲಯದ ಮೊರೆ ಹೋಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆಯ ಪರಿಣಾಮ ಜೈಲಿನಲ್ಲಿರುವ ದರ್ಶನ್ ಮೇಲೂ ಸ್ಪಷ್ಟವಾಗಿ ಕಂಡುಬಂದಿದೆ ಎನ್ನಲಾಗಿದೆ.

ಪ್ರದೋಷ್ ಸಲ್ಲಿಸಿರುವ ಅರ್ಜಿಯಿಂದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ ಎಂದು ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸ್ವತಃ ಆಪ್ತನೇ ನ್ಯಾಯಾಲಯದ ಮುಂದೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದರೆ ಪ್ರಕರಣದ ದಿಕ್ಕೇ ಬದಲಾಗಬಹುದು ಎಂಬ ಆತಂಕ ಆರೋಪಿಗಳಲ್ಲಿ ಮೂಡಿದೆ.

ಜೈಲು ಮೂಲಗಳ ಮಾಹಿತಿ ಪ್ರಕಾರ, ಈ ಸುದ್ದಿ ತಿಳಿದ ಬಳಿಕ ದರ್ಶನ್ ತೀವ್ರ ಚಿಂತೆಗೆ ಒಳಗಾಗಿದ್ದಾರೆ. ಗುರುವಾರ ರಾತ್ರಿ ಅವರಿಗೆ ನೀಡಿದ ಊಟವನ್ನೂ ಸೇವಿಸದೆ, ಯಾರೊಂದಿಗೂ ಮಾತನಾಡದೇ ಏಕಾಂಗಿಯಾಗಿ ಸಮಯ ಕಳೆದಿದ್ದಾರೆ. ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿರುವುದಾಗಿ ತಿಳಿದುಬಂದಿದೆ.

ಶುಕ್ರವಾರ ಬೆಳಗ್ಗೆ ಎಂದಿನಂತೆ ಬ್ಯಾರಕ್‌ನಲ್ಲಿ ನಡೆದಾಡಿದ ಬಳಿಕ ಪತ್ರಿಕೆ ಓದುತ್ತಿದ್ದ ವೇಳೆ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತ ವರದಿಯನ್ನು ಗಮನಿಸಿದ ದರ್ಶನ್ ಮತ್ತೆ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ದರ್ಶನ್‌ಗೆ ಮತ್ತಷ್ಟು ಆತಂಕ ಉಂಟುಮಾಡುತ್ತಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

‘ವರ್ಕ್ ಫ್ರಂ ಹೋಂ’ ಹೆಸರಲ್ಲಿ ಕೋಟಿ ಕೋಟಿ ವಂಚನೆ: ದಂಪತಿ ಪೊಲೀಸ್ ಬಲೆಗೆ

0

ದೇವನಹಳ್ಳಿ: ಸಾಮಾಜಿಕ ಜಾಲತಾಣದಲ್ಲಿ ‘ವರ್ಕ್ ಫ್ರಂ ಹೋಂ’ ಹೆಸರಿನಲ್ಲಿ ಉದ್ಯೋಗದ ಕನಸು ತೋರಿಸಿ ಲಕ್ಷಾಂತರ ರೂಪಾಯಿ ಡೆಪಾಸಿಟ್ ಪಡೆದು ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ‘ಕಾಳಿಕಾ ದೇವಿ ಎಂಟರ್‌ಪ್ರೈಸಸ್’ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಮತ್ತು ಆರತಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.

ಇನ್‌ಸ್ಟಾಗ್ರಾಂ ರೀಲ್ಸ್ ಮೂಲಕ ಮೇಣದ ಬತ್ತಿ, ಡ್ರೈ ಫ್ರೂಟ್ಸ್ ಹಾಗೂ ಅಗರಬತ್ತಿ ಪ್ಯಾಕಿಂಗ್ ಕೆಲಸ ನೀಡುವುದಾಗಿ ಹೇಳುತ್ತಿದ್ದ ಕಿರಣ್, ಒಂದು ಲಕ್ಷ ರೂಪಾಯಿ ಡೆಪಾಸಿಟ್ ಮಾಡಿದರೆ ತಿಂಗಳಿಗೆ 23 ಸಾವಿರ ರೂಪಾಯಿ ಆದಾಯ ಸಿಗುತ್ತದೆ ಎಂದು ಜನರನ್ನು ನಂಬಿಸುತ್ತಿದ್ದ.

ಈ ಮಾತುಗಳನ್ನು ನಂಬಿದ ನೂರಾರು ಜನರು 2 ಲಕ್ಷದಿಂದ 20 ಲಕ್ಷ ರೂಪಾಯಿವರೆಗೆ ಹಣ ಹೂಡಿಕೆ ಮಾಡಿದ್ದರು. ಆದರೆ ಹಣ ಪಡೆದ ಬಳಿಕ ಯಾವುದೇ ಕೆಲಸ ನೀಡದೆ, ಠೇವಣಿ ಹಣವನ್ನೂ ಹಿಂತಿರುಗಿಸದೆ ದಂಪತಿ ತಲೆಮರೆಸಿಕೊಂಡಿದ್ದರು.

ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಜಾಲ, ಕೋಲಾರ ಸೇರಿದಂತೆ ವಿವಿಧ ಭಾಗಗಳ ಸಂತ್ರಸ್ತರು ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಾರ್ವಜನಿಕರಿಂದ ಸಂಗ್ರಹಿಸಲಾದ ಹಣದ ಮೂಲ, ಹಣದ ವರ್ಗಾವಣೆ ಹಾಗೂ ವಂಚನೆಯ ಜಾಲದ ಕುರಿತು ಪೊಲೀಸರು ಸವಿಸ್ತಾರ ತನಿಖೆ ನಡೆಸುತ್ತಿದ್ದಾರೆ.

ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಸೆಪ್ಟೆಂಬರ್ 5ರಂದು ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ

0

ದುಬೈ: 2026ರ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದೆ. 10ನೇ ಆವೃತ್ತಿಯ ಈ ಪ್ರತಿಷ್ಠಿತ ಟೂರ್ನಿ ಆಗಸ್ಟ್ 28ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 8ರವರೆಗೆ ನಡೆಯಲಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ.

ಈ ಬಾರಿಯ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಥೈಲ್ಯಾಂಡ್ ಹಾಗೂ ಹಾಂಗ್ ಕಾಂಗ್ ತಂಡಗಳು ಸ್ಥಾನ ಪಡೆದಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಹಾಗೂ ಇಂಡೋನೇಷ್ಯಾ ತಂಡಗಳು ಕಣಕ್ಕಿಳಿಯಲಿವೆ.

ಸೆಪ್ಟೆಂಬರ್ 5ರಂದು ಭಾರತ-ಪಾಕ್ ಕದನ

ಪ್ರತಿ ಗುಂಪಿನಲ್ಲಿರುವ ತಂಡಗಳು ಪರಸ್ಪರ ತಲಾ ಒಂದು ಪಂದ್ಯವನ್ನು ಆಡಲಿವೆ. ಹೀಗಾಗಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ.

ಭಾರತ-ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯ ಸೆಪ್ಟೆಂಬರ್ 5ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಸಂಜೆ 7.30ಕ್ಕೆ ಟಾಸ್ ನಡೆಯಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 30ರಂದು ಥೈಲ್ಯಾಂಡ್ ವಿರುದ್ಧ ಆಡಲಿದೆ. ಬಳಿಕ ಸೆಪ್ಟೆಂಬರ್ 3ರಂದು ಹಾಂಗ್ ಕಾಂಗ್ ವಿರುದ್ಧ ಸೆಣಸಲಿದೆ. ಸೆಪ್ಟೆಂಬರ್ 5ರಂದು ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ

  • ಆಗಸ್ಟ್ 28: ಥೈಲ್ಯಾಂಡ್ vs ಹಾಂಗ್ ಕಾಂಗ್
  • ಆಗಸ್ಟ್ 29: ಶ್ರೀಲಂಕಾ vs ಯುಎಇ
  • ಆಗಸ್ಟ್ 30: ಭಾರತ vs ಥೈಲ್ಯಾಂಡ್
  • ಆಗಸ್ಟ್ 31: ಬಾಂಗ್ಲಾದೇಶ vs ಇಂಡೋನೇಷ್ಯಾ
  • ಸೆಪ್ಟೆಂಬರ್ 1: ಪಾಕಿಸ್ತಾನ vs ಥೈಲ್ಯಾಂಡ್
  • ಸೆಪ್ಟೆಂಬರ್ 2: ಶ್ರೀಲಂಕಾ vs ಇಂಡೋನೇಷ್ಯಾ
  • ಸೆಪ್ಟೆಂಬರ್ 3: ಭಾರತ vs ಹಾಂಗ್ ಕಾಂಗ್
  • ಸೆಪ್ಟೆಂಬರ್ 4: ಯುಎಇ vs ಇಂಡೋನೇಷ್ಯಾ
  • ಸೆಪ್ಟೆಂಬರ್ 5: ಪಾಕಿಸ್ತಾನ vs ಭಾರತ
  • ಸೆಪ್ಟೆಂಬರ್ 6: ಶ್ರೀಲಂಕಾ vs ಬಾಂಗ್ಲಾದೇಶ
  • ಸೆಪ್ಟೆಂಬರ್ 7: ಪಾಕಿಸ್ತಾನ vs ಹಾಂಗ್ ಕಾಂಗ್
  • ಸೆಪ್ಟೆಂಬರ್ 8: ಬಾಂಗ್ಲಾದೇಶ vs ಯುಎಇ

ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣಸಲಿದ್ದು, ಭಾರತ-ಪಾಕಿಸ್ತಾನ ನಡುವಿನ ಪಂದ್ಯ ಟೂರ್ನಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ. ದುಬೈನಲ್ಲಿ ನಡೆಯಲಿರುವ ಈ ಟೂರ್ನಿಯತ್ತ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ.

IND vs SL: ಭಾರತ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಶ್ರೀಲಂಕಾ ಇಲೆವೆನ್ ತಂಡ ಪ್ರಕಟ!

0

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15ರಿಂದ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ ಮೂರು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದು, ಆಗಸ್ಟ್ 7ರಿಂದ ಕೊಲಂಬೊದ ಎನ್‌ಸಿಸಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡವನ್ನು ಎದುರಿಸಲಿದೆ.

ಇದೀಗ ಈ ಅಭ್ಯಾಸ ಪಂದ್ಯಕ್ಕಾಗಿ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡವನ್ನು ಪ್ರಕಟಿಸಲಾಗಿದ್ದು, 15 ಸದಸ್ಯರ ತಂಡಕ್ಕೆ 25 ವರ್ಷದ ಸೋನಲ್ ದಿನುಷಾ ನಾಯಕತ್ವ ವಹಿಸಲಿದ್ದಾರೆ.

ಕಳೆದ ಜೂನ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ತವರಿನ ಟೆಸ್ಟ್ ಸರಣಿಯಲ್ಲಿ ಸೋನಲ್ ದಿನುಷಾ ಶ್ರೀಲಂಕಾ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಮೂರು ಟೆಸ್ಟ್ ಪಂದ್ಯಗಳಲ್ಲಿ 46.50ರ ಸರಾಸರಿಯಲ್ಲಿ ರನ್ ಗಳಿಸಿರುವ ದಿನುಷಾ, ಬೌಲಿಂಗ್‌ನಲ್ಲೂ ಆರು ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಇನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದ ನಿಶಾನ್ ಮದುಷ್ಕ ಕೂಡ ಅಭ್ಯಾಸ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ತಮ್ಮ ಮೂರು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮದುಷ್ಕ ಎಂಟು ಏಕದಿನ ಹಾಗೂ 12 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

ವೇಗದ ಬೌಲರ್‌ಗಳಾದ ಲಹಿರು ಕುಮಾರ ಹಾಗೂ ವಿಶ್ವ ಫೆರ್ನಾಂಡೊ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ರಮೇಶ್ ಮೆಂಡಿಸ್ ಕೂಡ ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಈ ಅಭ್ಯಾಸ ಪಂದ್ಯವು ಭಾರತ ತಂಡಕ್ಕೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಆಟಗಾರರ ಫಾರ್ಮ್ ಹಾಗೂ ತಂಡದ ಸಂಯೋಜನೆಯನ್ನು ಪರಿಶೀಲಿಸಲು ಉತ್ತಮ ಅವಕಾಶವಾಗಲಿದೆ. ಆಗಸ್ಟ್ 15ರಿಂದ ಆರಂಭವಾಗಲಿರುವ ಟೆಸ್ಟ್ ಸರಣಿಗೂ ಮುನ್ನ ಆಟಗಾರರು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ಪಂದ್ಯ ಮಹತ್ವದ್ದಾಗಿದೆ.

ಶ್ರೀಲಂಕಾ ಕ್ರಿಕೆಟ್ ಇಲೆವೆನ್ ತಂಡ

ನಿಶಾನ್ ಮದುಷ್ಕ, ರವಿಂದು ರಶಾಂತ, ಪಸಿಂದು ಸೂರಿಯಬಂಡಾರ, ಪವನ್ ರತ್ನಾಯಕೆ, ಅಹಾನ್ ವಿಕ್ರಮಸಿಂಘೆ, ಸೋನಲ್ ದಿನುಷಾ (ನಾಯಕ), ಅಂಜಲ ಬಂಡಾರ (ವಿಕೆಟ್‌ಕೀಪರ್), ನಿಪುನ್ ಧನಂಜಯ, ಲಹಿರು ಕುಮಾರ, ವಿಶ್ವ ಫೆರ್ನಾಂಡೊ, ಅಸಂಕ ಮನೋಜ್, ಇಸಿತಾ ವಿಜೆಸುಂದರ, ರಮೇಶ್ ಮೆಂಡಿಸ್, ಕೇಸರ ನುವಂತ ಹಾಗೂ ದಿಲುಂ ಸುದೀರ.

ಭಾರತ ಟೆಸ್ಟ್ ತಂಡ

ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ರಿಷಭ್ ಪಂತ್, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಸಾರಂಶ್ ಜೈನ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಹಾಗೂ ಆಖಿಬ್ ನಬಿ.

100 ದಿನಗಳಲ್ಲಿ ಗದಗನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ: ಎಚ್.ಕೆ. ಪಾಟೀಲ

0

ಗದಗ: “ರಾಜಕೀಯ ಎಂದರೆ ಕೇವಲ ಅಧಿಕಾರವಲ್ಲ, ಜನಸೇವೆಯೇ ನಮ್ಮ ಮೊದಲ ಆದ್ಯತೆ. ಗದಗವನ್ನು ಸೇವಾ ಕಾರ್ಯಗಳ ಮೂಲಕ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿಸುವ ಸಂಕಲ್ಪದೊಂದಿಗೆ ಮುಂದಿನ 100 ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತರೋಣ” ಎಂದು ಶಾಸಕ ಎಚ್.ಕೆ. ಪಾಟೀಲ ಕಾರ್ಯಕರ್ತರಿಗೆ ಕರೆ ನೀಡಿದರು.

ಸಂಪುಟ ವಿಸ್ತರಣೆಯ ಬಳಿಕ ಮೊದಲ ಬಾರಿಗೆ ಗದಗಕ್ಕೆ ಆಗಮಿಸಿದ ಎಚ್.ಕೆ. ಪಾಟೀಲ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಭಾವನಾತ್ಮಕ ಹಾಗೂ ಅದ್ದೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. ಬಳಿಕ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕರ್ತರ ಪ್ರೀತಿ, ಅಭಿಮಾನ ಮತ್ತು ಬೆಂಬಲವೇ ನನಗೆ ನೈತಿಕ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬಿದೆ ಎಂದು ಹೇಳಿದರು.

ಸಚಿವ ಸ್ಥಾನ ಸಿಗದಿರುವುದರಿಂದ ತಮ್ಮನ್ನು ಪ್ರೀತಿಸುವ ಕಾರ್ಯಕರ್ತರಿಗೆ ನೋವಾಗಿದೆ ಎಂಬುದು ನನಗೆ ಗೊತ್ತಿದೆ. ಆಡಳಿತದಲ್ಲಿ ಪ್ರಾಮಾಣಿಕತೆ, ದಕ್ಷತೆ ಮತ್ತು ಪಾರದರ್ಶಕತೆಯನ್ನು ಬಯಸುವ ಎಲ್ಲರ ಭಾವನೆಗೆ ತಲೆಬಾಗುತ್ತೇನೆ. ಕಾಂಗ್ರೆಸ್ ಪಕ್ಷ ನನ್ನ ಸಾರ್ವಜನಿಕ ಬದುಕನ್ನು ರೂಪಿಸಿದ್ದು, ಪಕ್ಷದ ವರಿಷ್ಠರು ಹಾಗೂ ಸೋನಿಯಾ ಗಾಂಧಿ ಅವರಿಗೆ ನಾನು ಸದಾ ಚಿರಋಣಿಯಾಗಿದ್ದೇನೆ ಎಂದು ಹೇಳಿದರು.

ಸೇವಾ ಕ್ಷೇತ್ರಕ್ಕೆ ಮಿತಿಯಿಲ್ಲ. ಜನಸೇವೆ ಮಾಡಲು ಸಚಿವ ಸ್ಥಾನವೇ ಬೇಕೆಂದಿಲ್ಲ. ಲಭ್ಯವಿರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ಧಿ, ಸ್ವಾಭಿಮಾನಿ ಹಾಗೂ ಸ್ವಾವಲಂಬಿ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸೋಣ. ಪಕ್ಷದ ತತ್ವ-ಸಿದ್ಧಾಂತಗಳ ಅನುಷ್ಠಾನದ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸೋಣ ಎಂದು ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದರು.

ಈ ಸಂದರ್ಭದಲ್ಲಿ ಗದಗ-ಬೆಟಗೇರಿ ನಗರಸಭೆಯ ಕಾಂಗ್ರೆಸ್ ಸದಸ್ಯರು ತಮ್ಮ ಬೆಂಬಲ ಸೂಚಕವಾಗಿ ನೀಡಿರುವ ರಾಜೀನಾಮೆಗಳನ್ನು ಹಿಂಪಡೆಯುವಂತೆ ಅವರು ಮನವಿ ಮಾಡಿದರು.

ರೋಣ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಪಾಟೀಲ ಅವರನ್ನು ಪಕ್ಷ ವಿಧಾನಸಭೆ ಸಭಾನಾಯಕರಾಗಿ ಆಯ್ಕೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸಿದ ಎಚ್.ಕೆ. ಪಾಟೀಲ, ಅವರ ನೇತೃತ್ವದಲ್ಲಿ ಪಕ್ಷ ಇನ್ನಷ್ಟು ಸದೃಢವಾಗಲಿ ಎಂದು ಹಾರೈಸಿದರು.

ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹಾಗೂ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ, ಕಾರ್ಯಕರ್ತರು ಧೈರ್ಯ ಕಳೆದುಕೊಳ್ಳದೆ ಕಾಂಗ್ರೆಸ್ ತತ್ವ-ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಮೂಲಕ ಜನಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಭೆಯಲ್ಲಿ ವಾಸಣ್ಣ ಕುರಡಗಿ, ಸುರಪುರ, ಚನ್ನವೀರಪ್ಪ ಮಳಗಿ, ಸುಜಾತಾ ದೊಡ್ಡಮನಿ, ಬಸವರಾಜ ಕಡೇಮನಿ, ನೀಲಮ್ಮ ಬೋಳನವರ, ಸೈಯದ್ ಖಾಲಿದ್ ಕೊಪ್ಪಳ, ಬರಕತ್ ಅಲಿ ಮುಲ್ಲಾ, ಕೃಷ್ಣಾ ಪರಾಪೂರ, ಶ್ರೀನಿವಾಸ ಹುಯಿಲಗೋಳ ಸೇರಿದಂತೆ ಹಲವರು ಮಾತನಾಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ಎನ್. ಬಳ್ಳಾರಿ ವಂದಿಸಿದರು.

ಇನ್ನೂ ಈ ವೇಳೆ “ಸೇವಾ ಕ್ಷೇತ್ರಕ್ಕೆ ಮಿತಿಯಿಲ್ಲ. ಸಚಿವ ಸ್ಥಾನವಿಲ್ಲದಿದ್ದರೂ ಜನಸೇವೆಗೆ ಅವಕಾಶಗಳಿವೆ. ಮುಂದಿನ 100 ದಿನಗಳಲ್ಲಿ ಗದಗವನ್ನು ರಾಜ್ಯಕ್ಕೆ ಮಾದರಿ ಕ್ಷೇತ್ರವನ್ನಾಗಿಸೋಣ.” ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ಮಾನಸಿಕ ಖಿನ್ನತೆ: ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಯುವತಿ ಆತ್ಮಹತ್ಯೆ

0

ಉಡುಪಿ ಜಿಲ್ಲೆಯ ಕಲ್ಮಾಡಿಯಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಯುವತಿ ಕೃತಿ ಬಂಗೇರಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ಬೆಡ್‌ರೂಮ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಪ್ರಕರಣದ ಕುರಿತು ಮಲ್ಪೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

27 ವರ್ಷದ ಕೃತಿ ಬಂಗೇರಾ ಮಾಡೆಲಿಂಗ್ ಜೊತೆಗೆ ಕಡಿಯಾಳಿ ಸಮೀಪದ ಖಾಸಗಿ ಹೋಟೆಲ್‌ನಲ್ಲಿ ಉದ್ಯೋಗದಲ್ಲಿದ್ದರು. ಆದರೆ ಕಳೆದ ಸುಮಾರು ಐದು ತಿಂಗಳಿಂದ ಅವರು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದರು ಎಂದು ತಿಳಿದುಬಂದಿದೆ.

ಘಟನೆ ನಡೆದ ದಿನ ಕೃತಿ ಅವರ ತಾಯಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ಕೃತಿ ಅವರನ್ನು ಹೊರಗೆ ಕಳುಹಿಸಿ ಮನೆಯೊಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ಬಹಳ ಹೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಂಬಂಧಿಕರನ್ನು ಕರೆಸಿ ಬಾಗಿಲು ಒಡೆದು ಒಳಗೆ ಪ್ರವೇಶಿಸಿದಾಗ, ಕೃತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ಕೃತಿ ಕೆಲವು ದಿನಗಳಿಂದ ತೀವ್ರ ಮಾನಸಿಕ ಒತ್ತಡದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.

ಸೂಚನೆ: ಯಾರಾದರೂ ಮಾನಸಿಕ ಒತ್ತಡ ಅಥವಾ ಆತ್ಮಹತ್ಯೆಯ ಆಲೋಚನೆಗಳನ್ನು ಅನುಭವಿಸುತ್ತಿದ್ದರೆ, ವಿಶ್ವಾಸಾರ್ಹ ಕುಟುಂಬದವರು, ಸ್ನೇಹಿತರು ಅಥವಾ ಮಾನಸಿಕ ಆರೋಗ್ಯ ತಜ್ಞರ ನೆರವು ಪಡೆಯುವುದು ಮುಖ್ಯ.

 

ಪುರುಷರೇ ಗಮನಿಸಿ.. ಒಳ ಉಡುಪು ಧರಿಸುವಾಗ ಯಾವುದೇ ಕಾರಣಕ್ಕೂ ಈ 5 ತಪ್ಪುಗಳನ್ನು ಮಾಡಬೇಡಿ!?

0

ಪುರುಷರು ಸಾಮಾನ್ಯವಾಗಿ ಹೊರಗಡೆ ಧರಿಸುವ ಶರ್ಟ್‌, ಪ್ಯಾಂಟ್‌ ಸೇರಿದಂತೆ ಉಡುಪುಗಳ ಆಯ್ಕೆ ಮತ್ತು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಆದರೆ ಒಳ ಉಡುಪುಗಳ ವಿಚಾರದಲ್ಲಿ ಅಷ್ಟೊಂದು ಗಮನ ನೀಡುವುದಿಲ್ಲ. ಹೊರಗಿನಿಂದ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಒಳ ಉಡುಪುಗಳ ಗುಣಮಟ್ಟ, ಸ್ವಚ್ಛತೆ ಮತ್ತು ಆರಾಮವನ್ನು ನಿರ್ಲಕ್ಷಿಸುವುದು ಸರಿಯಲ್ಲ.

ಸರಿಯಾದ ಒಳ ಉಡುಪು ಆಯ್ಕೆ ಮಾಡದಿರುವುದು ಅಥವಾ ದೀರ್ಘಕಾಲ ಒಂದೇ ಒಳ ಉಡುಪು ಬಳಸುವುದು ಗುಪ್ತಾಂಗದ ಸುತ್ತಲಿನ ಚರ್ಮದಲ್ಲಿ ಬೆವರು, ತೇವಾಂಶ, ತುರಿಕೆ ಹಾಗೂ ಸೋಂಕಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಪುರುಷರು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳ ಬಗ್ಗೆ ಆರೋಗ್ಯದ ದೃಷ್ಟಿಯಿಂದ ಎಚ್ಚರಿಕೆ ವಹಿಸುವುದು ಮುಖ್ಯ.

1. ರಾತ್ರಿ ಮಲಗುವಾಗಲೂ ಒಳ ಉಡುಪು ಧರಿಸುವುದು

ಕೆಲವರು ದಿನವಿಡೀ ಮತ್ತು ರಾತ್ರಿ ಮಲಗುವಾಗಲೂ ಒಳ ಉಡುಪು ಧರಿಸಿರುತ್ತಾರೆ. ರಾತ್ರಿ ಸಮಯದಲ್ಲಿ ಸಡಿಲವಾದ ಉಡುಪು ಧರಿಸುವುದು ಅಥವಾ ವೈಯಕ್ತಿಕ ಆರಾಮಕ್ಕೆ ಅನುಗುಣವಾಗಿ ಒಳ ಉಡುಪು ಇಲ್ಲದೆ ಮಲಗುವುದು ಕೆಲವರಿಗೆ ಹೆಚ್ಚು ಆರಾಮದಾಯಕವಾಗಬಹುದು.

ಮುಖ್ಯವಾಗಿ ತುಂಬಾ ಬಿಗಿಯಾದ ಒಳ ಉಡುಪುಗಳನ್ನು ರಾತ್ರಿ ಧರಿಸುವುದನ್ನು ತಪ್ಪಿಸುವುದು ಉತ್ತಮ.

2. ತುಂಬಾ ಬಿಗಿಯಾದ ಒಳ ಉಡುಪು ಧರಿಸುವುದು

ಅತಿಯಾಗಿ ಬಿಗಿಯಾದ ಒಳ ಉಡುಪುಗಳು ಗುಪ್ತಾಂಗದ ಸುತ್ತಲಿನ ಗಾಳಿ ಸಂಚಾರವನ್ನು ಕಡಿಮೆ ಮಾಡಿ ಬೆವರು ಮತ್ತು ತೇವಾಂಶ ಹೆಚ್ಚಾಗುವಂತೆ ಮಾಡಬಹುದು. ಇದರಿಂದ ಚರ್ಮದ ಕಿರಿಕಿರಿ, ತುರಿಕೆ ಅಥವಾ ಸೋಂಕಿನ ಅಪಾಯ ಹೆಚ್ಚಾಗಬಹುದು.

ಆದ್ದರಿಂದ ದೇಹಕ್ಕೆ ಸರಿಯಾಗಿ ಹೊಂದಿಕೊಳ್ಳುವ, ಆದರೆ ಅತಿಯಾಗಿ ಬಿಗಿಯಾಗಿರದ ಒಳ ಉಡುಪುಗಳನ್ನು ಆಯ್ಕೆ ಮಾಡುವುದು ಉತ್ತಮ. ಹತ್ತಿಯಂತಹ ಗಾಳಿ ಸಂಚಾರಕ್ಕೆ ಅನುಕೂಲವಾಗುವ ಬಟ್ಟೆಗಳನ್ನು ಬಳಸುವುದು ಸಹಾಯಕವಾಗಬಹುದು.

3. ಬೆವರಿನಿಂದ ಒದ್ದೆಯಾದ ಒಳ ಉಡುಪಿನಲ್ಲೇ ಇರುವುದು

ಜಿಮ್‌, ಓಟ ಅಥವಾ ದೈಹಿಕ ಚಟುವಟಿಕೆಯ ಬಳಿಕ ಬೆವರಿನಿಂದ ಒದ್ದೆಯಾದ ಒಳ ಉಡುಪುಗಳನ್ನು ಗಂಟೆಗಟ್ಟಲೆ ಧರಿಸುವುದು ಆರೋಗ್ಯಕರ ಅಭ್ಯಾಸವಲ್ಲ. ತೇವಾಂಶ ಹೆಚ್ಚಿರುವ ವಾತಾವರಣದಲ್ಲಿ ಚರ್ಮದ ಮೇಲೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಅನುಕೂಲವಾಗಬಹುದು. ಹೀಗಾಗಿ ಹೆಚ್ಚು ಬೆವರು ಬಂದ ಬಳಿಕ ಸಾಧ್ಯವಾದಷ್ಟು ಬೇಗ ಸ್ನಾನ ಮಾಡಿ ಒಣ ಹಾಗೂ ಸ್ವಚ್ಛವಾದ ಒಳ ಉಡುಪು ಧರಿಸುವುದು ಉತ್ತಮ.

4. ಬಣ್ಣಕ್ಕಿಂತ ಬಟ್ಟೆಯ ಗುಣಮಟ್ಟಕ್ಕೆ ಆದ್ಯತೆ ನೀಡಿ

ಕಪ್ಪು ಅಥವಾ ಗಾಢ ಬಣ್ಣದ ಒಳ ಉಡುಪುಗಳನ್ನು ಧರಿಸುವುದರಿಂದಲೇ ಗುಪ್ತಾಂಗದ ಉಷ್ಣಾಂಶ ಅಪಾಯಕಾರಿಯಾಗಿ ಹೆಚ್ಚುತ್ತದೆ ಎಂಬುದಕ್ಕೆ ಸ್ಪಷ್ಟ ವೈಜ್ಞಾನಿಕ ಸಾಕ್ಷ್ಯವಿಲ್ಲ. ಆದ್ದರಿಂದ ಬಣ್ಣಕ್ಕಿಂತ ಬಟ್ಟೆಯ ಗುಣಮಟ್ಟ, ಗಾಳಿಯಾಡುವಿಕೆ, ಸ್ವಚ್ಛತೆ ಮತ್ತು ಆರಾಮಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಮುಖ್ಯ. ಹತ್ತಿಯಂತಹ ಗಾಳಿ ಸಂಚಾರಕ್ಕೆ ಅನುಕೂಲವಾಗುವ ಬಟ್ಟೆಯ ಒಳ ಉಡುಪುಗಳು ದೈನಂದಿನ ಬಳಕೆಗೆ ಉತ್ತಮ ಆಯ್ಕೆಯಾಗಬಹುದು.

5. ವರ್ಷಗಟ್ಟಲೆ ಒಂದೇ ಒಳ ಉಡುಪು ಬಳಸುವುದು

ಒಳ ಉಡುಪುಗಳನ್ನು ವರ್ಷಗಟ್ಟಲೆ ಬಳಸುವುದರಿಂದ ಬಟ್ಟೆಯ ಗುಣಮಟ್ಟ ಕುಸಿಯಬಹುದು. ಹರಿದುಹೋದ, ಸ್ಥಿತಿಸ್ಥಾಪಕತೆ ಕಳೆದುಕೊಂಡ ಅಥವಾ ಕಲೆಗಳಿಂದ ಕೂಡಿರುವ ಒಳ ಉಡುಪುಗಳನ್ನು ಬದಲಾಯಿಸುವುದು ಉತ್ತಮ.

ಅದೇ ರೀತಿ ಒಮ್ಮೆ ಧರಿಸಿದ ಒಳ ಉಡುಪನ್ನು ತೊಳೆಯದೆ ಮತ್ತೆ ಧರಿಸುವುದನ್ನು ತಪ್ಪಿಸಬೇಕು. ಪ್ರತಿದಿನ ಸ್ವಚ್ಛವಾದ ಒಳ ಉಡುಪು ಧರಿಸುವುದು ವೈಯಕ್ತಿಕ ಸ್ವಚ್ಛತೆಯ ಪ್ರಮುಖ ಭಾಗವಾಗಿದೆ.

ತೇವಾಂಶದಿಂದ ಸೋಂಕಿನ ಅಪಾಯ ಹೆಚ್ಚಬಹುದು

ಗುಪ್ತಾಂಗದ ಸುತ್ತಲಿನ ಪ್ರದೇಶದಲ್ಲಿ ನಿರಂತರವಾಗಿ ಬೆವರು ಮತ್ತು ತೇವಾಂಶ ಉಳಿದರೆ ಫಂಗಲ್‌ ಸೋಂಕು, ತುರಿಕೆ, ಕೆಂಪಾಗುವುದು ಅಥವಾ ಚರ್ಮದ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ ಆ ಭಾಗವನ್ನು ಸ್ವಚ್ಛವಾಗಿ ಮತ್ತು ಒಣವಾಗಿಟ್ಟುಕೊಳ್ಳುವುದು ಮುಖ್ಯ.

ಪುರುಷರು ಹೊರಗಿನ ಉಡುಪುಗಳಷ್ಟೇ ಒಳ ಉಡುಪುಗಳ ಸ್ವಚ್ಛತೆ ಮತ್ತು ಗುಣಮಟ್ಟಕ್ಕೂ ಪ್ರಾಮುಖ್ಯತೆ ನೀಡಬೇಕು. ಯಾವುದೇ ತುರಿಕೆ, ನೋವು, ಗಾಯ, ಅಸಹಜ ಸ್ರಾವ ಅಥವಾ ಸೋಂಕಿನ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ ಪಾಲುದಾರಿಕೆ ಅಂತ್ಯ; ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಬೆಂಗಳೂರು: ಪಾಲುದಾರಿಕೆ ಸಂಸ್ಥೆ ಎಂಬುದು ಕೇವಲ ಒಪ್ಪಂದದ ಆಧಾರದ ಮೇಲೆ ರೂಪುಗೊಳ್ಳುವ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವ ಹಕ್ಕಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇಬ್ಬರು ಪಾಲುದಾರರನ್ನು ಮಾತ್ರ ಹೊಂದಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ, ಆ ಪಾಲುದಾರಿಕೆ ಸಂಸ್ಥೆ ಸ್ವಯಂಚಾಲಿತವಾಗಿ ವಿಸರ್ಜನೆಗೊಳ್ಳುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಪಾಲುದಾರಿಕೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ವಾರಸುದಾರರನ್ನು ಪ್ರತಿವಾದಿಗಳಾಗಿ ಸೇರಿಸಲು ಅನುಮತಿ ನೀಡಿದ್ದ ದಾವಣಗೆರೆಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ನ್ಯಾಯಪೀಠದ ಪ್ರಕಾರ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೂ ಸಂಸ್ಥೆ ರದ್ದಾಗುವುದಿಲ್ಲ ಹಾಗೂ ಮೃತರ ವಾರಸುದಾರರು ಪಾಲುದಾರರಾಗುತ್ತಾರೆ ಎಂಬ ಷರತ್ತು ಪಾಲುದಾರಿಕೆ ಒಪ್ಪಂದದಲ್ಲಿದ್ದರೂ ಅದು ಭಾರತೀಯ ಪಾಲುದಾರಿಕೆ ಕಾಯ್ದೆ, 1932ರ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

ಪಾಲುದಾರಿಕೆ ಎಂಬುದು ಕೇವಲ ಒಡಂಬಡಿಕೆಯ ಸಂಬಂಧವಾಗಿದ್ದು, ಅದು ವಂಶಪಾರಂಪರ್ಯವಾಗಿ ವರ್ಗಾವಣೆಯಾಗುವುದಿಲ್ಲ. ಹೀಗಾಗಿ, ಹೊಸ ಒಪ್ಪಂದ ಅಥವಾ ಉಳಿದ ಪಾಲುದಾರರ ಅನುಮತಿಯಿಲ್ಲದೆ ಮೃತ ಪಾಲುದಾರರ ಕಾನೂನುಬದ್ಧ ವಾರಸುದಾರರು ಸ್ವಯಂಚಾಲಿತವಾಗಿ ಪಾಲುದಾರರಾಗಲು ಅವಕಾಶವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್ ನೀಡಿರುವ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರ ಮರಣದಿಂದಲೇ ಪಾಲುದಾರಿಕೆ ಸಂಸ್ಥೆ ಕಾನೂನಾತ್ಮಕವಾಗಿ ಅಂತ್ಯಗೊಳ್ಳುತ್ತದೆ ಎಂದು ತಿಳಿಸಿದೆ. ಈ ಕಾನೂನು ತತ್ವವನ್ನು ಪರಿಗಣಿಸದೇ ವಿಚಾರಣಾ ನ್ಯಾಯಾಲಯ ದಾವೆದಾರರ ಮನವಿಯನ್ನು ಅಂಗೀಕರಿಸಿರುವುದು ಸರಿಯಲ್ಲ ಎಂದು ಹೇಳಿ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ.

ಪ್ರಕರಣದ ಹಿನ್ನೆಲೆ

ದಾವಣಗೆರೆಯ ಪಿ.ಬಿ. ರಸ್ತೆಯಲ್ಲಿರುವ ಮೆಸೆಸ್ ಶಿವ ಸ್ಟೀಲ್ ಸಪ್ಲೈಸ್ ಸಂಸ್ಥೆ, ಬಾಕಿ ಹಣ ವಸೂಲಾತಿಗಾಗಿ ಮೆಸೆಸ್ ನ್ಯೂ ಪ್ರವೀಣ್ ಟ್ರೇಲರ್ಸ್ ವಿರುದ್ಧ ವಾಣಿಜ್ಯ ದಾವೆ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಯುವ ವೇಳೆ ಪ್ರತಿವಾದಿ ಸಂಸ್ಥೆಯ ಪಾಲುದಾರರಾದ ಶಾಂತರಾಜ್ ಮೃತಪಟ್ಟಿದ್ದರು.

ಇದಾದ ಬಳಿಕ ಮೃತ ಪಾಲುದಾರರ ಸ್ಥಾನಕ್ಕೆ ಅವರ ಕಾನೂನುಬದ್ಧ ವಾರಸುದಾರರನ್ನು ಅಥವಾ ಹೊಸ ಪಾಲುದಾರರನ್ನು ಸೇರಿಸಿಕೊಳ್ಳಲು ಅನುಮತಿ ಕೋರಿ ದಾವೆದಾರರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ದಾವಣಗೆರೆ ನ್ಯಾಯಾಲಯ ಅನುಮೋದಿಸಿತ್ತು.

ಆದರೆ, ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರ ಸಂಸ್ಥೆಯ ಪರವಾಗಿ ತೀರ್ಪು ನೀಡಿರುವ ಹೈಕೋರ್ಟ್, ಇಬ್ಬರು ಪಾಲುದಾರರಿರುವ ಸಂಸ್ಥೆಯಲ್ಲಿ ಒಬ್ಬರು ಮೃತಪಟ್ಟರೆ ಪಾಲುದಾರಿಕೆ ಸಂಸ್ಥೆಯೇ ಅಂತ್ಯಗೊಳ್ಳುತ್ತದೆ ಎಂಬ ಮಹತ್ವದ ಕಾನೂನು ತತ್ವವನ್ನು ಪುನರುಚ್ಚರಿಸಿದೆ.

ಒಂದೇ ಮರಕ್ಕೆ ನೇಣು… ಇಬ್ಬರು ಯುವತಿಯರ ಸಾವಿನ ಹಿಂದಿತ್ತು ಪ್ರೀತಿ! ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ಬೆಂಗಳೂರು: ನಗರದ ಹೊರವಲಯದಲ್ಲಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಇಬ್ಬರು ಯುವತಿಯರ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಒಟ್ಟಿಗೆ ಬದುಕಲು ಸಾಧ್ಯವಾಗದ ನೋವಿನಿಂದ ಈ ದುರ್ಘಟನೆಯ ನಿರ್ಧಾರ ಕೈಗೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತರನ್ನು 22 ವರ್ಷದ ಸಿರ್ಜನಾ ಹಾಗೂ 23 ವರ್ಷದ ರಿತಾ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದ ತಕ್ಷಣ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಕುಟುಂಬಸ್ಥರು ಮತ್ತು ಆಪ್ತರನ್ನು ವಿಚಾರಣೆ ನಡೆಸಿದ ಬಳಿಕ ಹಲವು ಮಹತ್ವದ ಮಾಹಿತಿ ಲಭ್ಯವಾಗಿದೆ.

ಪೊಲೀಸರ ಪ್ರಕಾರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಿ ಒಟ್ಟಿಗೆ ಬದುಕುವ ಆಸೆ ಹೊಂದಿದ್ದರು. ಆದರೆ ತಮ್ಮ ಸಂಬಂಧವನ್ನು ಕುಟುಂಬ ಹಾಗೂ ಸಮಾಜ ಒಪ್ಪಿಕೊಳ್ಳುವುದಿಲ್ಲ ಎಂಬ ಆತಂಕ ಅವರಲ್ಲಿತ್ತು. ಇದೇ ಮಾನಸಿಕ ಒತ್ತಡದಿಂದ ಇಬ್ಬರೂ ಒಟ್ಟಿಗೆ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಸಿರ್ಜನಾ ಮತ್ತು ರಿತಾ ಸಂಬಂಧಿಕರಾಗಿದ್ದು, ನೇಪಾಳದಲ್ಲಿ ಒಟ್ಟಿಗೆ ಓದಿ ಬೆಳೆದಿದ್ದರು. ಬಾಲ್ಯದಿಂದಲೇ ಆತ್ಮೀಯರಾಗಿದ್ದ ಅವರು, ಸದಾ ಒಟ್ಟಿಗೇ ಇರುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಕಾರಣದಿಂದ ಊರಿನಲ್ಲಿ ಮಾತುಕತೆಗಳು ಆರಂಭವಾಗಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಅವರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದರು.

ಬೆಂಗಳೂರುಗೆ ಬಂದ ಬಳಿಕವೂ ಇಬ್ಬರೂ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದರೂ ವಾರದಲ್ಲಿ ಹಲವು ಬಾರಿ ಭೇಟಿಯಾಗುತ್ತಿದ್ದರು. ರಿತಾ ಫ್ರೇಜರ್ ಟೌನ್‌ನಲ್ಲಿ ಹಾಗೂ ಸಿರ್ಜನಾ ಜಕ್ಕೂರಿನಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಘಟನೆ ನಡೆದ ದಿನ ಇಬ್ಬರೂ ಸಂಬಂಧಿಕರ ಮನೆಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಕುಟುಂಬದವರ ನಡುವೆ ಮದುವೆ ವಿಚಾರ ಪ್ರಸ್ತಾಪವಾಗಿತ್ತು. ನಂತರ ‘ಸಮಾಜ ನಮ್ಮನ್ನು ಒಟ್ಟಿಗೆ ಬದುಕಲು ಬಿಡುವುದಿಲ್ಲ’ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ. ಇದೇ ಭಾವನಾತ್ಮಕ ಒತ್ತಡ ಆತ್ಮಹತ್ಯೆಯ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರು ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

ಹಾರ್ಮುಜ್ ಜಲಸಂಧಿ ಉದ್ವಿಗ್ನತೆ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.1ರಷ್ಟು ಏರಿಕೆ

0

ಟೆಹ್ರಾನ್: ಹಾರ್ಮುಜ್ ಜಲಸಂಧಿ ಮೂಲಕ ತೈಲ ಸಾಗಣೆ ಕುರಿತು ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ.

ಶುಕ್ರವಾರ ತೈಲ ಬೆಲೆಯಲ್ಲಿ ಶೇ.1ರಷ್ಟು ಏರಿಕೆ ದಾಖಲಾಗಿದೆ. ಭಾರತೀಯ ಕಾಲಮಾನ ಬೆಳಗ್ಗೆ 7.25ರ ವೇಳೆಗೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 84 ಸೆಂಟ್‌ಗಳಷ್ಟು ಏರಿಕೆಯಾಗಿದ್ದು, 83.33 ಡಾಲರ್‌ಗೆ ತಲುಪಿದೆ.

ಅದೇ ರೀತಿ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 69 ಸೆಂಟ್‌ಗಳಷ್ಟು ಏರಿಕೆಯಾಗಿ 77.98 ಡಾಲರ್‌ಗೆ ತಲುಪಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ತೈಲ ಸಾಗಣೆ ಜಾಗತಿಕ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಈ ಮಾರ್ಗದ ಕುರಿತು ಉಂಟಾಗಿರುವ ಆತಂಕವೇ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಇದರ ನಡುವೆ ಇರಾನ್ ಮತ್ತು ಓಮನ್ ದೇಶಗಳು ಹೊಸ ಸಾರಿಗೆ ವ್ಯವಸ್ಥೆಗಳ ಕುರಿತು ಚರ್ಚೆ ನಡೆಸಿವೆ. ಆದರೆ, ತಮ್ಮ ವಿರುದ್ಧವೆಂದು ಪರಿಗಣಿಸುವ ಹಡಗುಗಳ ವಿರುದ್ಧ ಕ್ರಮಗಳನ್ನು ಮುಂದುವರಿಸಿರುವುದರಿಂದ ಸಾಗಣೆ ಕ್ಷೇತ್ರದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

ತೈಲ ಬೆಲೆಗಳ ಏರಿಕೆ ಮುಂದುವರಿದರೆ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ರಾಷ್ಟ್ರಗಳ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.