ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಬೆಳವಣಿಗೆಯೊಂದು ನಟ ದರ್ಶನ್ ಮತ್ತು ಅವರ ಗ್ಯಾಂಗ್ಗೆ ಸಂಕಷ್ಟ ಹೆಚ್ಚಿಸಿದೆ. ಪ್ರಕರಣದ ಆರೋಪಿ ಹಾಗೂ ದರ್ಶನ್ ಆಪ್ತ ಪ್ರದೋಷ್, ಮಾಫಿ ಸಾಕ್ಷಿಯಾಗಲು ನ್ಯಾಯಾಲಯದ ಮೊರೆ ಹೋಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಈ ಬೆಳವಣಿಗೆಯ ಪರಿಣಾಮ ಜೈಲಿನಲ್ಲಿರುವ ದರ್ಶನ್ ಮೇಲೂ ಸ್ಪಷ್ಟವಾಗಿ ಕಂಡುಬಂದಿದೆ ಎನ್ನಲಾಗಿದೆ.
ಪ್ರದೋಷ್ ಸಲ್ಲಿಸಿರುವ ಅರ್ಜಿಯಿಂದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಸಾಕ್ಷ್ಯ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ ಎಂದು ಕಾನೂನು ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಸ್ವತಃ ಆಪ್ತನೇ ನ್ಯಾಯಾಲಯದ ಮುಂದೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದರೆ ಪ್ರಕರಣದ ದಿಕ್ಕೇ ಬದಲಾಗಬಹುದು ಎಂಬ ಆತಂಕ ಆರೋಪಿಗಳಲ್ಲಿ ಮೂಡಿದೆ.
ಜೈಲು ಮೂಲಗಳ ಮಾಹಿತಿ ಪ್ರಕಾರ, ಈ ಸುದ್ದಿ ತಿಳಿದ ಬಳಿಕ ದರ್ಶನ್ ತೀವ್ರ ಚಿಂತೆಗೆ ಒಳಗಾಗಿದ್ದಾರೆ. ಗುರುವಾರ ರಾತ್ರಿ ಅವರಿಗೆ ನೀಡಿದ ಊಟವನ್ನೂ ಸೇವಿಸದೆ, ಯಾರೊಂದಿಗೂ ಮಾತನಾಡದೇ ಏಕಾಂಗಿಯಾಗಿ ಸಮಯ ಕಳೆದಿದ್ದಾರೆ. ರಾತ್ರಿಯಿಡೀ ನಿದ್ರೆ ಮಾಡದೆ ಜಾಗರಣೆ ಮಾಡಿರುವುದಾಗಿ ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ ಎಂದಿನಂತೆ ಬ್ಯಾರಕ್ನಲ್ಲಿ ನಡೆದಾಡಿದ ಬಳಿಕ ಪತ್ರಿಕೆ ಓದುತ್ತಿದ್ದ ವೇಳೆ ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಕುರಿತ ವರದಿಯನ್ನು ಗಮನಿಸಿದ ದರ್ಶನ್ ಮತ್ತೆ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ದರ್ಶನ್ಗೆ ಮತ್ತಷ್ಟು ಆತಂಕ ಉಂಟುಮಾಡುತ್ತಿದ್ದು, ಮುಂದಿನ ನ್ಯಾಯಾಂಗ ಪ್ರಕ್ರಿಯೆ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.



