ಬೆಂಗಳೂರು: ಸ್ಟಾಕ್ ಮಾರ್ಕೆಟ್ನಲ್ಲಿ ಹೆಚ್ಚಿನ ಲಾಭದ ಆಮಿಷವೊಡ್ಡಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹೂಡಿಕೆ ಪಡೆದು ವಂಚನೆ ನಡೆಸಿರುವ ಆರೋಪದ ಬೆನ್ನಲ್ಲೇ, ಹೂಡಿಕೆದಾರರನ್ನು ಅವಾಚ್ಯವಾಗಿ ನಿಂದಿಸಿ ಕನ್ನಡ ಭಾಷೆಗೆ ಅವಮಾನ ಮಾಡಿದ ಮಹಿಳೆಯೊಬ್ಬಳು ಕೊನೆಗೆ ಪೊಲೀಸ್ ಠಾಣೆಯ ಎದುರೇ ಕನ್ನಡಿಗರ ಕ್ಷಮೆ ಕೋರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ವಂಚನೆಗೆ ಒಳಗಾದ ಹೂಡಿಕೆದಾರರು ಕಂಪನಿಯ ಪ್ರತಿನಿಧಿಗಳನ್ನು ಪ್ರಶ್ನಿಸಲು ತೆರಳಿದ್ದರು. ಈ ವೇಳೆ ಪ್ರಿಯಾಂಕ ಎಂಬ ಮಹಿಳೆ ಹೂಡಿಕೆದಾರರೊಂದಿಗೆ ವಾಗ್ವಾದ ನಡೆಸಿ, “ನನಗೆ ಕನ್ನಡ ಗೊತ್ತಿಲ್ಲ, ಏನ್ ಮಾಡ್ತೀರಾ ಮಾಡ್ಕೊಳ್ಳಿ” ಎಂದು ಅವಾಚ್ಯ ಪದಗಳನ್ನು ಬಳಸಿ ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಕಾನೂನು ಕ್ರಮದ ಸಾಧ್ಯತೆ ಹಾಗೂ ಸಾರ್ವಜನಿಕರ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಪ್ರಿಯಾಂಕ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ. ಇನ್ನು ಮುಂದೆ ಕನ್ನಡ ಭಾಷೆ ಹಾಗೂ ಕನ್ನಡಿಗರ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸುವುದಿಲ್ಲ ಎಂದು ಸಾರ್ವಜನಿಕರ ಎದುರೇ ತಪ್ಪೊಪ್ಪಿಕೊಂಡಿದ್ದಾರೆ.
ಇದೇ ವೇಳೆ, ಸ್ಟಾಕ್ ಮಾರ್ಕೆಟ್ ಹೂಡಿಕೆ ಹೆಸರಿನಲ್ಲಿ ನಡೆದಿರುವ ವಂಚನೆ ಪ್ರಕರಣದ ಹಣಕಾಸು ವ್ಯವಹಾರಗಳ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಇನ್ನಷ್ಟು ಸಂತ್ರಸ್ತರು ಮುಂದೆ ಬರುವ ಸಾಧ್ಯತೆ ಇದೆ.



