HomeBengaluru Newsಸಚಿವ ಸ್ಥಾನವೇ ಬೇಕು, ಬೇರೆ ಮಾತೇ ಇಲ್ಲ..! ಹೈಕಮಾಂಡ್‌ ಮನವೊಲಿಕೆಗೂ ಬಗ್ಗದ ಎಂ. ಕೃಷ್ಣಪ್ಪ

ಸಚಿವ ಸ್ಥಾನವೇ ಬೇಕು, ಬೇರೆ ಮಾತೇ ಇಲ್ಲ..! ಹೈಕಮಾಂಡ್‌ ಮನವೊಲಿಕೆಗೂ ಬಗ್ಗದ ಎಂ. ಕೃಷ್ಣಪ್ಪ

For Dai;y Updates Join Our whatsapp Group

ಬೆಂಗಳೂರು: ಸಚಿವ ಸ್ಥಾನ ಕೈತಪ್ಪಿದ ಬಳಿಕ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆ ಇನ್ನೂ ತಣ್ಣಗಾಗಿಲ್ಲ. ವಿಜಯನಗರ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, “ನನಗೆ ಸಚಿವ ಸ್ಥಾನ ನೀಡಲೇಬೇಕು, ಅದೂ ಕೂಡಲೇ ನೀಡಬೇಕು. ಇದನ್ನು ಬಿಟ್ಟು ಬೇರೆ ಯಾವುದೇ ಚರ್ಚೆಗೆ ಆಸ್ಪದವೇ ಇಲ್ಲ” ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಪ್ರಿಯಾ ಕೃಷ್ಣ ಅವರನ್ನು ಮನವೊಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಈಗಾಗಲೇ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಇಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಕೂಡ ಕೃಷ್ಣಪ್ಪ ನಿವಾಸಕ್ಕೆ ತೆರಳಿ ಸಮಾಲೋಚನೆ ನಡೆಸಿದರು.

ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣಪ್ಪ, “ನಾಯಕರು ಮನೆಗೆ ಬರುತ್ತಾರೆ, ಹೋಗುತ್ತಾರೆ. ಅವರೆಲ್ಲರೂ ನಮ್ಮ ಸ್ನೇಹಿತರು. ಆದರೆ ನನಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಒಂದೇ—ಸಚಿವ ಸ್ಥಾನ. ಅದನ್ನು ತಕ್ಷಣ ನೀಡಬೇಕು. ಅದನ್ನು ಬಿಟ್ಟು ಬೇರೆ ಯಾವ ಮಾತುಕತೆಯೂ ಇಲ್ಲ” ಎಂದು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದರು.

ಇನ್ನೊಂದೆಡೆ, ಬಿ.ಕೆ. ಹರಿಪ್ರಸಾದ್ ಮಾತುಕತೆ ಸೌಹಾರ್ದಯುತ ವಾತಾವರಣದಲ್ಲಿ ನಡೆದಿದೆ ಎಂದು ತಿಳಿಸಿದರು. “ಕೃಷ್ಣಪ್ಪ ಅವರೊಂದಿಗೆ ಸುಮಾರು 45-50 ವರ್ಷಗಳ ಆತ್ಮೀಯ ಸಂಬಂಧವಿದೆ. ಕಾಲೇಜು ದಿನಗಳಿಂದಲೂ ನಾವು ಒಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇವೆ. ಹಿರಿಯ ನಾಯಕರಿಗೆ ಸ್ಥಾನಮಾನ ಸಿಗದಿದ್ದಾಗ ನೋವಾಗುವುದು ಸಹಜ. ಅವರ ನೋವನ್ನು ಈಗಾಗಲೇ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ” ಎಂದರು.

“ಇನ್ನು ಕೆಲವೇ ದಿನಗಳಲ್ಲಿ ರಾಹುಲ್ ಗಾಂಧಿಯವರೇ ಕೃಷ್ಣಪ್ಪ ಅವರೊಂದಿಗೆ ನೇರವಾಗಿ ಮಾತನಾಡಿ ಸಮಾಧಾನಪಡಿಸಲಿದ್ದಾರೆ ಎಂಬ ವಿಶ್ವಾಸವಿದೆ. ಸಚಿವ ಸ್ಥಾನ ಸಿಗದಿದ್ದರೂ ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ಕೃಷ್ಣಪ್ಪ ನಡೆದುಕೊಂಡಿದ್ದಾರೆ. ಅವರಿಗೆ ಯಾವ ಜವಾಬ್ದಾರಿ ಅಥವಾ ಸ್ಥಾನಮಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ” ಎಂದು ಹರಿಪ್ರಸಾದ್ ಹೇಳಿದರು.

ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ರಾಜಕೀಯ ಸಾಧ್ಯತೆಗಳ ಆಟ. ಯಾವಾಗ ಏನು ಬೇಕಾದರೂ ಆಗಬಹುದು. ಆದ್ದರಿಂದ ನಾವು ಯಾವಾಗಲೂ ಸಕಾರಾತ್ಮಕವಾಗಿರಬೇಕು. ಖಂಡಿತ ಒಳ್ಳೆಯದಾಗುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img