ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅಜಿತ್ ಪವಾರ್ ಅವರನ್ನು ತಕ್ಷಣ ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.
ವಿಮಾನದಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ದುರ್ಘಟನೆಯಲ್ಲಿ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಅಜಿತ್ ಪವಾರ್ ಅವರ ಪಿಎಸ್ಒ ಸೇರಿದಂತೆ ಇಬ್ಬರು ಸಿಬ್ಬಂದಿ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಆರಂಭಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಕ್ರ್ಯಾಶ್ ಲ್ಯಾಂಡಿಂಗ್ ಮಾಡಲು ಯತ್ನಿಸಿದೆ. ಈ ವೇಳೆ ವಿಮಾನ ಸಂಪೂರ್ಣವಾಗಿ ನಾಶಗೊಂಡಿದ್ದು, ಭಾರೀ ಅಪಘಾತ ಸಂಭವಿಸಿದೆ. ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಜಿತ್ ಪವಾರ್ ಅವರು ಜಿಲ್ಲಾ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬುಧವಾರ ಬಾರಾಮತಿಯಲ್ಲಿ ಹಲವು ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಈ ದುರ್ಘಟನೆ ಮಹಾರಾಷ್ಟ್ರ ಸೇರಿದಂತೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ತಮ್ಮನ ಮಗ ಹಾಗೂ ಇತ್ತೀಚಿನ ವರ್ಷಗಳಲ್ಲಿ ಎನ್ಸಿಪಿಯೊಳಗಿನ ಒಡಕಿನ ನಂತರ ತಮ್ಮದೇ ಬಣವನ್ನು ಮುನ್ನಡೆಸುತ್ತಿದ್ದರು.
ಅಜಿತ್ ಪವಾರ್ ಅವರ ರಾಜಕೀಯ ಪಯಣ
ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿದ್ದರು. 1995ರಲ್ಲಿ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ನಂತರ 1999, 2004, 2009, 2014 ಮತ್ತು 2019ರಲ್ಲಿ ನಿರಂತರವಾಗಿ ಗೆಲುವು ಸಾಧಿಸಿದ್ದರು. 2025ರ ವಿಧಾನಸಭಾ ಚುನಾವಣೆಯಲ್ಲಿ ಅವರು ಯುಗೇಂದ್ರ ಪವಾರ್ ಅವರನ್ನು ಸೋಲಿಸಿ ಜಯಗಳಿಸಿದ್ದರು.
ಉಪಮುಖ್ಯಮಂತ್ರಿಯಾಗಿ ದಾಖಲೆ ಸೇವೆ
ಅಜಿತ್ ಪವಾರ್ ಅವರು ಐದು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ವಿಭಿನ್ನ ಮುಖ್ಯಮಂತ್ರಿಗಳ ಅಡಿಯಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿದೆ. 2023ರಲ್ಲಿ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಎನ್ಡಿಎ ಸೇರಿದ್ದ ಅಜಿತ್ ಪವಾರ್
ರಾಜಕೀಯ ಚಾಣಾಕ್ಷತನದಿಂದ ಎನ್ಸಿಪಿಯನ್ನು ಬಲಪಡಿಸಿದ ಅಜಿತ್ ಪವಾರ್, ನಂತರ ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಬಿಟ್ಟು ಎನ್ಡಿಎಗೆ ಸೇರಿದ್ದರು. ಎಂಟು ಎನ್ಸಿಪಿ ಶಾಸಕರೊಂದಿಗೆ ಬಿಜೆಪಿ–ಶಿಂಧೆ ಬಣವನ್ನು ಬೆಂಬಲಿಸಿ, ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು.
ವೈಯಕ್ತಿಕ ಜೀವನ
ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಸಚಿವ ಪದಮ್ ಸಿಂಗ್ ಪಾಟೀಲ್ ಅವರ ಸಹೋದರಿ. ಈ ದಂಪತಿಗೆ ಜೈ ಪವಾರ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಪುತ್ರರು ಇದ್ದಾರೆ.