ಶಿವಮೊಗ್ಗ: ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ನಾನ್ ಎಸಿ ಸ್ಲೀಪರ್ ಬಸ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಅರಸಾಳು ಸಮೀಪದ ಸೂಡೂರು ಗ್ರಾಮದ ಬಳಿ ನಡೆದಿದೆ.
ಬೆಂಕಿ ಹೊತ್ತಿಕೊಂಡ ದೃಶ್ಯ ಭಯಾನಕವಾಗಿತ್ತು. ಅನ್ನಪೂರ್ಣ ಹೆಸರಿನ ಖಾಸಗಿ ಬಸ್ ಹೊಸನಗರ ತಾಲೂಕು ನಗರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ನಗರ, ಹೊಸನಗರ ಹಾಗೂ ರಿಪ್ಪನ್ಪೇಟೆಗಳಲ್ಲಿ ಪ್ರಯಾಣಿಕರನ್ನು ಪಿಕ್ಅಪ್ ಮಾಡಿಕೊಂಡಿತ್ತು. ಅರಸಾಳು ಗ್ರಾಮದ ಬಳಿ ಇರುವ 9ನೇ ಮೈಲಿಗಲ್ಲಿನ ಸಮೀಪ ಬಸ್ ಸಾಗುತ್ತಿದ್ದಾಗ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬಸ್ಗೆ ಬೆಂಕಿ ತಗುಲಿದೆ. ಈ ವೇಳೆ ಬಸ್ನಲ್ಲಿ ಸುಮಾರು 36 ಜನ ಪ್ರಯಾಣಿಕರು ಇದ್ದರು. ಪರಿಸ್ಥಿತಿ ಅರಿತ ಚಾಲಕ ಸಮಯಪ್ರಜ್ಞೆ ಪ್ರದರ್ಶಿಸಿ ಬಸ್ ಅನ್ನು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಸ್ ಪ್ರಯಾಣ ಆರಂಭಿಸಿ ಕೇವಲ 30 ನಿಮಿಷಗಳಷ್ಟೇ ಕಳೆದಿದ್ದು, ಪ್ರಯಾಣಿಕರು ಇನ್ನೂ ನಿದ್ರೆಗೆ ಜಾರಿರದ ಕಾರಣ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಲ್ಲರೂ ಬಸ್ನಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಎಲ್ಲಾ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, 12 ಜನರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಳಿದ ಪ್ರಯಾಣಿಕರನ್ನು ರಿಪ್ಪನ್ಪೇಟೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ರಿಪ್ಪನ್ಪೇಟೆ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬಸ್ ಹೊರಟು ಹೆಚ್ಚು ಸಮಯವಾಗಿರದ ಕಾರಣ ಹಾಗೂ ಹೇಗೆ ಬೆಂಕಿ ತಗುಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ರಿಪ್ಪನ್ಪೇಟೆ ಠಾಣೆಯ ಪಿಎಸ್ಐ ಮಾತನಾಡಿ, ಬಸ್ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಗಾಯಗೊಂಡ ಎಲ್ಲ ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

