Home Blog Page 4

ಅ.11ಕ್ಕೆ ನಡೆಯಬೇಕಿದ್ದ ಕಾವೇರಿ ಆರತಿ ಮುಂದೂಡಿಕೆ; ಹೊಸ ದಿನಾಂಕ ಪ್ರಕಟ!

0

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಕೆಆರ್‌ಎಸ್ ಅಣೆಕಟ್ಟಿನ ಬಳಿ ಆಯೋಜಿಸಲು ಉದ್ದೇಶಿಸಲಾಗಿದ್ದ ಕಾವೇರಿ ಆರತಿ ಕಾರ್ಯಕ್ರಮದ ದಿನಾಂಕವನ್ನು ಮುಂದೂಡಲಾಗಿದೆ.

ಈ ಹಿಂದೆ ಅಕ್ಟೋಬರ್ 11ರಿಂದ ಕಾವೇರಿ ಆರತಿ ಕಾರ್ಯಕ್ರಮ ಆರಂಭಿಸಲು ವೇಳಾಪಟ್ಟಿ ನಿಗದಿಯಾಗಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಅಂದು ಮುಖ್ಯಮಂತ್ರಿಗಳಿಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇರುವ ಹಿನ್ನೆಲೆಯಲ್ಲಿ ಕಾವೇರಿ ಆರತಿ ದಿನಾಂಕವನ್ನು ಬದಲಾಯಿಸಲಾಗಿದೆ.

ಪರಿಷ್ಕೃತ ವೇಳಾಪಟ್ಟಿಯಂತೆ ಇದೀಗ ಅಕ್ಟೋಬರ್ 18ರಿಂದ 23ರವರೆಗೆ ಸತತವಾಗಿ ಕೆಆರ್‌ಎಸ್ ಅಣೆಕಟ್ಟಿನ ಬಳಿ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ.

ಕಳೆದ ವರ್ಷ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಅದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಈ ಬಾರಿಯೂ ಕೆಆರ್‌ಎಸ್ ಆವರಣದಲ್ಲಿ ಅದ್ದೂರಿಯಾಗಿ ಕಾವೇರಿ ಆರತಿ ಆಯೋಜಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆ ಇಂದು ಬಹುತೇಕ ಅಂತ್ಯ? ಕ್ರಾಸ್ ಎಗ್ಸಾಮಿನೇಷನ್‌ಗೆ ದಿನಾಂಕ ನಿಗದಿ!

0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಅವರ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇಂದು ನಾಲ್ಕನೇ ದಿನವೂ ಮುಂದುವರಿಯಲಿದೆ.

ಇಂದಿನ ವಿಚಾರಣೆಯಲ್ಲೇ ಮಾಫಿ ಸಾಕ್ಷ್ಯ ಹೇಳಿಕೆ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆ ಇದೆ.

ಮಾಫಿ ಸಾಕ್ಷ್ಯ ಹೇಳಿಕೆ ಪೂರ್ಣಗೊಂಡ ಬಳಿಕ ಪ್ರದೋಷ್ ಅವರ ಕ್ರಾಸ್ ಎಗ್ಸಾಮಿನೇಷನ್‌ಗೆ ದಿನಾಂಕ ನಿಗದಿಯಾಗಲಿದೆ. ನಿಗದಿತ ದಿನದಂದು ಆರೋಪಿಗಳ ಪರ ವಕೀಲರು ಪ್ರದೋಷ್ ಅವರನ್ನು ಕ್ರಾಸ್ ಎಗ್ಸಾಮಿನೇಷನ್ ಮಾಡಲಿದ್ದಾರೆ.

ಇದೇ ವೇಳೆ, ಎವಿಡೆನ್ಸ್ ಆಕ್ಟ್‌ಗೆ ಸಂಬಂಧಿಸಿದಂತೆ ಇಂದು 59ನೇ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಲಿದೆ. ಎವಿಡೆನ್ಸ್ ಆಕ್ಟ್‌ನ 137 ಮತ್ತು 138ನೇ ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.

ಮಾಫಿ ಸಾಕ್ಷ್ಯ ಹೇಳಿಕೆ ದಾಖಲಿಸುವ ವೇಳೆ ಪ್ರದೋಷ್ ಅವರು ಕೆಲವು ಮಾಹಿತಿಯನ್ನು ಮರೆತಿದ್ದ ಹಿನ್ನೆಲೆಯಲ್ಲಿ, ಮರುದಿನ ಮತ್ತೆ ಹೇಳಿಕೆ ದಾಖಲಿಸಲಾಗಿತ್ತು. ಇದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರದೋಷ್ ಅವರಿಗೆ ಯಾರೋ ಹೇಳಿಕೊಟ್ಟು ಪದೇಪದೇ ಹೇಳಿಕೆ ದಾಖಲಿಸಲಾಗುತ್ತಿದೆ. ಇಂತಹ ಹೇಳಿಕೆಯನ್ನು ಕೋರ್ಟ್ ದಾಖಲಿಸಬಾರದು ಎಂದು ದರ್ಶನ್ ಪರ ವಕೀಲರು ವಾದಿಸಿದ್ದರು.

ಎವಿಡೆನ್ಸ್ ಆಕ್ಟ್ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರವಾಗಿ ಇಂದು 59ನೇ ಸೆಷನ್ಸ್ ಕೋರ್ಟ್ ತನ್ನ ಆದೇಶ ಪ್ರಕಟಿಸಲಿದೆ.

ಜಿಮ್ ಆ್ಯನಿವರ್ಸರಿ ಬಳಿಕ ಟ್ರೈನರ್ ಅನುಮಾನಾಸ್ಪದ ಸಾವು; ನಾಲ್ವರ ವಿರುದ್ಧ ಕೊಲೆ ಕೇಸ್

0

ಬೆಂಗಳೂರು: ನಗರದ ಹೆಬ್ಬಾಳದ ಕೆಂಪಾಪುರದಲ್ಲಿ 25 ವರ್ಷದ ಜಿಮ್ ಟ್ರೈನರ್‌ವೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಸ್ನೇಹಿತರೇ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೃತರನ್ನು ನಂದನ್ ಎಂದು ಗುರುತಿಸಲಾಗಿದೆ. ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿದ ಬಳಿಕ ತಡವಾದರೆ ಬೆಳಗ್ಗೆ ಮನೆಗೆ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ನಂದನ್ ತೆರಳಿದ್ದರು.

ಆ್ಯನಿವರ್ಸರಿ ಕಾರ್ಯಕ್ರಮದ ಬಳಿಕ ನಂದನ್ ಇತರೆ ಸಿಬ್ಬಂದಿಯೊಂದಿಗೆ ಪರಿಚಿತರೊಬ್ಬರ ಅಪಾರ್ಟ್‌ಮೆಂಟ್‌ಗೆ ತೆರಳಿದ್ದರು. ಈ ವೇಳೆ ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ನಡೆದಿದ್ದು, ನಂದನ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ವಿಚಾರ ತಿಳಿದು ಆಸ್ಪತ್ರೆಗೆ ತೆರಳಿದ ನಂದನ್ ಅವರ ತಾಯಿ, ಮಗನ ದೇಹದ ಮೇಲೆ ಗಾಯದ ಗುರುತುಗಳಿರುವುದನ್ನು ಗಮನಿಸಿದ್ದಾರೆ.

ಅಪಾರ್ಟ್‌ಮೆಂಟ್‌ನಲ್ಲಿ ಗಲಾಟೆ ನಡೆದು ನಂದನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಅವರ ತಾಯಿ ಮಂಜುಳಾ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸಖತ್ ಡ್ಯಾನ್ಸ್ ಮಾಡಿದ ರೇಣುಕಾಚಾರ್ಯ!

0

ದಾವಣಗೆರೆ: ಹೊನ್ನಾಳಿ ನಗರದಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಅವರು ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊನ್ನಾಳಿ ನಗರದಲ್ಲಿ ಆಯೋಜಿಸಿದ್ದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ಸಂಭ್ರಮದಿಂದ ನಡೆದಿದ್ದು, ಡಿಜೆ ಸಂಗೀತಕ್ಕೆ ಯುವಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಜ್ಜೆ ಹಾಕಿದ್ದಾರೆ.

ಈ ವೇಳೆ ಮಾಜಿ ಸಚಿವ ರೇಣುಕಾಚಾರ್ಯ ಅವರೂ ಮೆರವಣಿಗೆಯಲ್ಲಿ ಭಾಗವಹಿಸಿ, ಅಲ್ಲಿ ನೆರೆದಿದ್ದ ಮಹಿಳೆಯರು ಹಾಗೂ ಯುವತಿಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ರೇಣುಕಾಚಾರ್ಯ ಅವರ ನೃತ್ಯದ ದೃಶ್ಯಗಳನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಸಂಭ್ರಮಿಸುವುದು ಸಾಮಾನ್ಯವಾಗಿದ್ದು, ರೇಣುಕಾಚಾರ್ಯ ಅವರ ಡ್ಯಾನ್ಸ್ ಕೂಡ ಮೆರವಣಿಗೆಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಕತ್ತಲಾದರೂ ನಿಲ್ಲದ ಬರ ಅಧ್ಯಯನ; ಮೊಬೈಲ್ ಟಾರ್ಚ್‌ನಲ್ಲಿ ಬೆಳೆ ವೀಕ್ಷಿಸಿದ ಕೇಂದ್ರ ತಂಡ

0

ರಾಯಚೂರು: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಹಾಗೂ ಬೆಳೆ ಹಾನಿ ಪರಿಶೀಲಿಸಲು ಆಗಮಿಸಿದ್ದ ಕೇಂದ್ರ ಬರ ಅಧ್ಯಯನ ತಂಡ ನಿನ್ನೆ ಮಧ್ಯಾಹ್ನದಿಂದ ರಾತ್ರಿ ವರೆಗೂ ವಿವಿಧೆಡೆ ಪರಿಶೀಲನೆ ನಡೆಸಿತು.

ಜಿಲ್ಲೆಗೆ ಮಧ್ಯಾಹ್ನ ಆಗಮಿಸಿದ ಕೇಂದ್ರ ತಂಡ, ದೇವದುರ್ಗ, ಲಿಂಗಸೂಗೂರು ಹಾಗೂ ಮಸ್ಕಿ ತಾಲೂಕುಗಳಲ್ಲಿ ಬೆಳೆ ಹಾನಿ ಕುರಿತು ಮಾಹಿತಿ ಸಂಗ್ರಹಿಸಿತು. ಮೆಣಸಿನಕಾಯಿ, ಹತ್ತಿ ಹಾಗೂ ತೊಗರಿ ಬೆಳೆಗಳನ್ನು ವೀಕ್ಷಿಸಿ ರೈತರೊಂದಿಗೆ ಮಾತುಕತೆ ನಡೆಸಿತು.

ಸಂಜೆಯಾಗುತ್ತಿದ್ದಂತೆ ಕತ್ತಲು ಆವರಿಸಿದ್ದರೂ ತಂಡ ಪರಿಶೀಲನೆ ಮುಂದುವರಿಸಿತು. ಜಮೀನುಗಳಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಬೆಳೆಗಳನ್ನು ವೀಕ್ಷಿಸಿ ಅಧಿಕಾರಿಗಳು ಹಾಗೂ ರೈತರಿಂದ ಮಾಹಿತಿ ಪಡೆದರು.

ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ತೊಗರಿ ಬೆಳೆ ಪರಿಶೀಲಿಸಿದ ತಂಡ, ಬೆಳೆ ಹಾನಿ ಹಾಗೂ ಬರ ಪರಿಸ್ಥಿತಿ ಕುರಿತು ರೈತರಿಂದ ಮಾಹಿತಿ ಪಡೆದುಕೊಂಡಿತು.

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಕೇಂದ್ರದ ತಂಡ ರಾತ್ರಿ ವರೆಗೂ ವಿವಿಧೆಡೆ ಸಂಚರಿಸಿ ಬೆಳೆ ಹಾನಿಯ ಸ್ಥಿತಿಗತಿಗಳನ್ನು ಪರಿಶೀಲಿಸಿತು.

20 ಅಡಿ ಎತ್ತರಕ್ಕೆ ಚಿಮ್ಮಿದ ನೀರು..! ರಾತ್ರಿಯಿಡೀ ಹಳ್ಳದ ಪಾಲಾದ ಕುಡಿಯುವ ನೀರು

0

ಗದಗ: ಒಂದೆಡೆ ಕುಡಿಯುವ ನೀರಿಗೆ ಪರದಾಟ, ಮತ್ತೊಂದೆಡೆ ಸರಬರಾಜಿನ ಮುಖ್ಯ ಪೈಪ್ ಒಡೆದು ರಾತ್ರಿಯಿಡೀ ಅಪಾರ ಪ್ರಮಾಣದ ನೀರು ಪೋಲು! ಗದಗ-ಬೆಟಗೇರಿ ಅವಳಿ ನಗರಕ್ಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ಕುಡಿಯುವ ನೀರಿನ ಆತಂಕ ಎದುರಾಗಿದೆ.

ಮುಂಡರಗಿ ತಾಲೂಕಿನ ದಿಂಡೂರ ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ಗದಗ-ಬೆಟಗೇರಿ ಅವಳಿ ನಗರಕ್ಕೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೀರು ಪೂರೈಸುವ ಮುಖ್ಯ ಪೈಪ್ ಒಡೆದು, ನೀರು ಸುಮಾರು 20 ಅಡಿ ಎತ್ತರಕ್ಕೆ ಚಿಮ್ಮಿದೆ. ಪರಿಣಾಮ ಇಡೀ ರಾತ್ರಿ ಸಾವಿರಾರು ಲೀಟರ್ ಕುಡಿಯುವ ನೀರು ಹಳ್ಳದ ಪಾಲಾಗಿದೆ.

ಹಳ್ಳದಲ್ಲಿ ಬೋರ್‌ವೆಲ್ ಕೊರೆಸುವ ವೇಳೆ ಪೈಪ್‌ಗೆ ಹಾನಿಯಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಪೈಪ್ ಒಡೆಯಲು ನಿಖರ ಕಾರಣ ಇನ್ನಷ್ಟೇ ಸ್ಪಷ್ಟವಾಗಬೇಕಿದೆ.

ವಿಷಯ ತಿಳಿಯುತ್ತಿದ್ದಂತೆ ರಾತ್ರೋರಾತ್ರಿ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನೀರು ಪೂರೈಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಈಗಾಗಲೇ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಸಂದರ್ಭದಲ್ಲೇ ಮುಖ್ಯ ಪೈಪ್ ಒಡೆದು ನೀರು ಪೋಲಾಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಪೈಪ್‌ಲೈನ್‌ಗೆ ಹಾನಿಯಾಗಲು ಕಾರಣರಾದವರನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನೀರು ಬೇಕೆಂದು ಜನರು ಪರದಾಡುತ್ತಿರುವಾಗ, ಕುಡಿಯುವ ನೀರೇ ರಾತ್ರಿಯಿಡೀ ಹಳ್ಳದ ಪಾಲಾಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

20 ವರ್ಷಗಳಿಂದ ನಕಲಿ ಮತಗಳಿಂದ ಗೆಲ್ಲುತ್ತಿದ್ದರು: ಕಾಂಗ್ರೆಸ್ ವಿರುದ್ಧ ಬೊಮ್ಮಾಯಿ ಗಂಭೀರ ಆರೋಪ

0

ಹಾವೇರಿ: ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಪಕ್ಷದವರು ನಕಲಿ ಮತಗಳನ್ನು ಹಾಕಿಸಿಕೊಂಡು, ಒಂದೇ ವ್ಯಕ್ತಿಯಿಂದ ಎರಡು ಕಡೆ ವೋಟ್ ಮಾಡಿಸಿ ಹಾಗೂ ಸತ್ತವರ ಹೆಸರಿನಲ್ಲಿ ಮತ ಚಲಾಯಿಸಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು. ಈಗ ನಕಲಿ ಮತ ತೆರವು ಪ್ರಕ್ರಿಯೆಯಿಂದ ಅವರಿಗೆ ಸಂಕಷ್ಟ ಎದುರಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಫೇಕ್ ಮತಗಳ ರಕ್ಷಣೆಗಾಗಿ ಚುನಾವಣಾಧಿಕಾರಿ ಕಚೇರಿ ಎದುರು ಧರಣಿ ನಡೆಸುವ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಎಸ್‌ಐಆರ್ (SIR) ಪ್ರಕ್ರಿಯೆ ಆರಂಭದಿಂದಲೂ ಬಹಳ ಸರಳವಾಗಿ ನಡೆದುಕೊಂಡು ಬರುತ್ತಿತ್ತು. ಪ್ರಾರಂಭದಲ್ಲಿ ಕಾಂಗ್ರೆಸ್‌ನವರು ಮಸೀದಿಗಳಲ್ಲಿ ಅರ್ಜಿ ತುಂಬಿಸುವುದಕ್ಕೆ ನಾವು ತೀವ್ರ ವಿರೋಧ ವ್ಯಕ್ತಪಡಿಸಿದ್ದೆವು. ಅಕ್ಟೋಬರ್ 8 ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗಬೇಕಿದ್ದ ಇಂತಹ ಸಂದರ್ಭದಲ್ಲಿ, ಕಾಂಗ್ರೆಸ್‌ನವರು ಬೇಕೆಂದೇ ಚುನಾವಣಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಪಕ್ಷದ ಪ್ರಮುಖರು ಈಗಾಗಲೇ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈಗ ಕಾನೂನು ಪ್ರಕಾರ ಎಲ್ಲ ಸತ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಈ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ನೇರವಾಗಿ ಕೇಸ್ ಹಾಕುವ ಯಾವುದೇ ಅಧಿಕಾರವಿಲ್ಲ, ಇದು ಸಂಪೂರ್ಣವಾಗಿ ಚುನಾವಣಾ ಆಯೋಗವೇ ಮಾಡಬೇಕಾದ ಕೆಲಸವಾಗಿದೆ. ಕಾನೂನಿನ ಪ್ರಕಾರ ಅರ್ಹ ಮತದಾರರ ಮತಗಳು ಮಾತ್ರ ರಕ್ಷಿಸಲ್ಪಡಬೇಕು ಮತ್ತು ಅನರ್ಹರ ಮತಗಳನ್ನು ಪಟ್ಟಿಯಿಂದ ಸಂಪೂರ್ಣವಾಗಿ ತೆಗೆದುಹಾಕಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಮಮತಾ ಬ್ಯಾನರ್ಜಿ ಪಕ್ಷ ತೊರೆದ ಕೋಯಲ್ ಮಲಿಕ್ʼಗೆ ಬಿಜೆಪಿ ಮಣೆ; ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಟಿಕೆಟ್

0

ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹುದ್ದೆ ಹಾಗೂ ರಾಜ್ಯಸಭಾ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಕೋಯಲ್ ಮಲ್ಲಿಕ್ (ರುಕ್ಮಿಣಿ ಮಲ್ಲಿಕ್) ಅವರಿಗೆ ಬಿಜೆಪಿಯು ಪಶ್ಚಿಮ ಬಂಗಾಳದ ರಾಜ್ಯಸಭಾ ಉಪಚುನಾವಣೆಯ ಟಿಕೆಟ್ ಘೋಷಿಸಿದೆ. ಇದರೊಂದಿಗೆ ಉತ್ತರಾಖಂಡದಿಂದ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ದಿನೇಶ್ ಆರ್ಯ ಅವರ ಹೆಸರನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಅಧಿಕೃತವಾಗಿ ಪ್ರಕಟಿಸಿದೆ.

 ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಮತ್ತು ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಇದೇ ಅಕ್ಟೋಬರ್ 16ರಂದು ಉಪಚುನಾವಣೆ ನಡೆಯಲಿದೆ. ಅಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಮತ ಎಣಿಕೆ ನಡೆಯಲಿದೆ. ಬಿಜೆಪಿಯ ಹಾಲಿ ಸಂಸದ ನರೇಶ್ ಬನ್ಸಾಲ್ ಅವರು ಈ ವರ್ಷದ ನವೆಂಬರ್‌ನಲ್ಲಿ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡದ ಒಂದು ಸ್ಥಾನಕ್ಕೆ ಚುನಾವಣೆ ಎದುರಾಗಿದೆ.

ಟಿಎಂಸಿ ರಾಜ್ಯಸಭಾ ಸಂಸದೆಯಾಗಿದ್ದ ರುಕ್ಮಿಣಿ ಮಲ್ಲಿಕ್ (ಅಲಿಯಾಸ್ ಕೋಯಲ್ ಮಲ್ಲಿಕ್) ಅವರ ಅಧಿಕಾರಾವಧಿ 2032ರ ಏಪ್ರಿಲ್ 2ರವರೆಗೆ ಇತ್ತು. ಆದರೆ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಈ ಸ್ಥಾನ ತೆರವಾಗಿತ್ತು. ಕೋಯಲ್ ಮಲ್ಲಿಕ್ ಅವರು ರಾಜೀನಾಮೆ ನೀಡಿದ ಟಿಎಂಸಿಯ 4ನೇ ರಾಜ್ಯಸಭಾ ಸಂಸದರಾಗಿದ್ದಾರೆ. ಇದಕ್ಕೂ ಮುನ್ನ ಸುಖೇಂದು ಶೇಖರ್ ರೇ, ಸುಶ್ಮಿತಾ ದೇವ್ ಹಾಗೂ ಪ್ರಕಾಶ್ ಚಿಕ್ ಬಾರೈಕ್ ಕೂಡ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾಗಿ ಮರುಚುನಾಯಿತರಾಗಿದ್ದರು. ಇದೀಗ ಕೋಯಲ್ ಮಲ್ಲಿಕ್ ಅವರಿಗೂ ಬಿಜೆಪಿ ಮೇಲ್ಮನೆ ಟಿಕೆಟ್ ನೀಡಿದೆ.

‘ಫ್ರೀಜ್’ ಅಂದ ಬಿಗ್ ಬಾಸ್, ಕ್ಷಣದಲ್ಲೇ ಬದಲಾಯ್ತು ಆಟ; 8 ಸ್ಪರ್ಧಿಗಳಿಗೆ ಬಿಗ್ ಶಾಕ್!

0

ಬಿಗ್ ಬಾಸ್ ಮಲಯಾಳಂ 8ರಲ್ಲಿ (Bigg Boss Malayalam 8) ದಿನದಿಂದ ದಿನಕ್ಕೆ ಹೊಸ ಹೊಸ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಇದೀಗ ಒಂದೇ ದಿನ ಬರೋಬ್ಬರಿ 8 ಸ್ಪರ್ಧಿಗಳು ಕಾರ್ಯಕ್ರಮದಿಂದ ಹೊರಬಂದಿರುವುದು ವೀಕ್ಷಕರಿಗೆ ಮಾತ್ರವಲ್ಲ, ಬಿಗ್ ಬಾಸ್ ಮನೆಯ ಸದಸ್ಯರಿಗೂ ಶಾಕ್ ನೀಡಿದೆ.

ಇತ್ತೀಚಿನ ವಾರಾಂತ್ಯದ ಸಂಚಿಕೆಯಲ್ಲಿ ಬಿಗ್ ಬಾಸ್ ಶೋ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮೂಹಿಕ ಹೊರಹಾಕುವಿಕೆ (Mass Eviction) ಪ್ರಕ್ರಿಯೆ ನಡೆಸಲಾಗಿದೆ. ಈ ಘೋಷಣೆ ಮನೆಯ ಸದಸ್ಯರಿಗೆ ಅಚ್ಚರಿ ಮೂಡಿಸಿತು. ಬಳಿಕ ಬಿಗ್ ಬಾಸ್ ಜನಪ್ರಿಯ ‘ಫ್ರೀಜ್ ಟಾಸ್ಕ್’ ಆರಂಭಿಸಿ, ಒಬ್ಬೊಬ್ಬ ಸ್ಪರ್ಧಿಯ ಹೆಸರನ್ನು ಕರೆದು ಅವರು ಇದ್ದಲ್ಲಿಯೇ ಸ್ಥಿರವಾಗಿ ನಿಲ್ಲುವಂತೆ ಸೂಚಿಸಿದರು.

ಆರಂಭದಲ್ಲಿ ಸ್ಪರ್ಧಿಗಳು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ದರು. ಪರಸ್ಪರರನ್ನು ರೇಗಿಸುತ್ತಾ, ನಗುತ್ತಾ ಟಾಸ್ಕ್‌ನಲ್ಲಿ ಭಾಗವಹಿಸುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಬಿಗ್ ಬಾಸ್ ಎಲ್ಲರನ್ನೂ ಫ್ರೀಜ್ ಆಗುವಂತೆ ಸೂಚಿಸಿ, ರಾಕೇಶ್ ಅವರನ್ನು ಮಾತ್ರ ಮುಕ್ತಗೊಳಿಸಿ ಮನೆಯಿಂದ ಹೊರಹಾಕುವುದಾಗಿ ಘೋಷಿಸಿದರು.

ಈ ಘೋಷಣೆ ರಾಕೇಶ್‌ಗೆ ಭಾರೀ ಆಘಾತ ನೀಡಿತು. ಯಾರೊಂದಿಗೂ ಸರಿಯಾಗಿ ವಿದಾಯ ಹೇಳದೆ ಮನೆಯಿಂದ ಹೊರಹೋಗಬೇಕಾದ ಪರಿಸ್ಥಿತಿ ಎದುರಾದ ಹಿನ್ನೆಲೆಯಲ್ಲಿ ಅವರು ಭಾವುಕರಾದರು. ಬಳಿಕ ಬಿಗ್ ಬಾಸ್ ಮನೆಯಲ್ಲಿದ್ದ ಎಲ್ಲರನ್ನೂ ಮುಕ್ತಗೊಳಿಸಲಾಯಿತು. ಸ್ಪರ್ಧಿಗಳು ರಾಕೇಶ್‌ಗೆ ಬೀಳ್ಕೊಡುಗೆ ನೀಡಿ ಅವರನ್ನು ಮನೆಯಿಂದ ಕಳುಹಿಸಿದರು.

ರಾಕೇಶ್ ಹೊರಬಂದ ಬಳಿಕವೂ ‘ಫ್ರೀಜ್ ಟಾಸ್ಕ್’ ಮುಂದುವರಿಯಿತು. ಸಾಮೂಹಿಕ ಎವಿಕ್ಷನ್‌ನ ಭಾಗವಾಗಿ ಲೋಲೆಟ್ಟಾ ಅವರನ್ನೂ ಮನೆಯಿಂದ ಹೊರಹಾಕಲಾಗುತ್ತಿದೆ ಎಂದು ಬಿಗ್ ಬಾಸ್ ಘೋಷಿಸಿದರು. ಮನೆಯೊಳಗೆ ಲೋಲೆಟ್ಟಾ ಅವರೊಂದಿಗೆ ಈ ಹಿಂದೆ ತೀವ್ರ ವಾಗ್ವಾದ ನಡೆಸಿದ್ದ ಅಂಜಲಿ, ಈ ಘೋಷಣೆ ಕೇಳುತ್ತಿದ್ದಂತೆ ಖುಷಿ ವ್ಯಕ್ತಪಡಿಸಿದರು. ನಂತರ ಲೋಲೆಟ್ಟಾ ಮನೆಯ ಎಲ್ಲ ಸದಸ್ಯರಿಗೂ ವಿದಾಯ ಹೇಳಿ ಹೊರನಡೆದರು.

ಇನ್ನು ವಿಶೇಷವೆಂದರೆ, ‘ಅಗ್ನಿಪರೀಕ್ಷೆ’ ಎಂಬ ಸಾಮಾನ್ಯರಿಗಾಗಿ ನಡೆದ ಆಡಿಷನ್ ಕಾರ್ಯಕ್ರಮದ ಮೂಲಕ ರಾಕೇಶ್ ಮತ್ತು ಲೋಲೆಟ್ಟಾ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದರು. ಲೋಲೆಟ್ಟಾ ತಮ್ಮ ಚುರುಕುತನದಿಂದ ಗಮನ ಸೆಳೆದಿದ್ದರೆ, ರಾಕೇಶ್ ಮನೆಯಲ್ಲಿ ಮನರಂಜನೆ ನೀಡುವ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.

ಆದರೆ ಇದೀಗ ಬಿಗ್ ಬಾಸ್ ನೀಡಿದ ಭಾರೀ ಟ್ವಿಸ್ಟ್‌ನಲ್ಲಿ ರಾಕೇಶ್ ಮತ್ತು ಲೋಲೆಟ್ಟಾ ಮಾತ್ರವಲ್ಲದೆ ಸುಮೇಶ್, ಗಾಯತ್ರಿ ಸುರೇಶ್, ಜಸೀಲಾ ಪರ್ವೀನ್ ಹಾಗೂ ಶ್ರೀಲಕ್ಷ್ಮಿ ಅರಕ್ಕಲ್ ಕೂಡ ಮನೆಯಿಂದ ಹೊರಬಂದಿದ್ದಾರೆ. ಹೀಗಾಗಿ ಒಂದೇ ದಿನ ಒಟ್ಟು ಆರು ಸ್ಪರ್ಧಿಗಳು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಇದರ ನಡುವೆ ಮೃದುಲಾ ವಿಜಯ್ ಮತ್ತು ಅಂಜಲಿ ಅವರಿಗೂ ಎಲಿಮಿನೇಷನ್ ಘೋಷಿಸಲಾಗಿತ್ತು. ಆದರೆ ಇವರಿಬ್ಬರ ಕಥೆ ಇಲ್ಲಿಗೆ ಮುಗಿದಿಲ್ಲ. ಇಬ್ಬರನ್ನೂ ಸೀಕ್ರೆಟ್ ರೂಮ್‌ಗೆ ಕಳುಹಿಸಲಾಗಿದ್ದು, ಅಲ್ಲಿಂದ ಬಿಗ್ ಬಾಸ್ ಮನೆಯ ಬೆಳವಣಿಗೆಗಳನ್ನು ವೀಕ್ಷಿಸುತ್ತಿದ್ದಾರೆ. ಶೀಘ್ರದಲ್ಲೇ ಮೃದುಲಾ ವಿಜಯ್ ಮತ್ತು ಅಂಜಲಿ ಮತ್ತೆ ಬಿಗ್ ಬಾಸ್ ಮನೆಗೆ ರೀ-ಎಂಟ್ರಿ ನೀಡುವ ಸಾಧ್ಯತೆಯಿದೆ ಎಂಬ ಕುತೂಹಲವೂ ಮೂಡಿದೆ.

ಹೀಗಾಗಿ ಬಿಗ್ ಬಾಸ್ ಮಲಯಾಳಂ 8ರಲ್ಲಿ ನಡೆದ ಈ ಸಾಮೂಹಿಕ ಎವಿಕ್ಷನ್ ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಮುಂದಿನ ಸಂಚಿಕೆಗಳಲ್ಲಿ ಸೀಕ್ರೆಟ್ ರೂಮ್‌ನಿಂದ ಯಾರು ಮರಳಿ ಬರುತ್ತಾರೆ ಎಂಬುದೇ ಇದೀಗ ಪ್ರಮುಖ ಪ್ರಶ್ನೆಯಾಗಿದೆ.

ದೊಡ್ಡಗುಬ್ಬಿ ಕೆರೆಯಲ್ಲಿ ಸಾವಿರಾರು ಮೀನುಗಳ ದಾರುಣ ಮಾರಣಹೋಮ; ಕಲುಷಿತ ನೀರು ಸೇರಿ ಆತಂಕ!

0

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರಸಿದ್ಧ ದೊಡ್ಡಗುಬ್ಬಿ ಕೆರೆಯಲ್ಲಿ ಸಾವಿರಾರು ಮೀನುಗಳು ಏಕಾಏಕಿ ಸತ್ತು ಬಿದ್ದಿದ್ದು, ಕಲುಷಿತ ನೀರಿನ ಪರಿಣಾಮ ಭೀಕರ ಮೀನುಗಳ ಮಾರಣಹೋಮ ಸಂಭವಿಸಿದೆ.

ಸುಮಾರು 125 ಎಕರೆ ಬೃಹತ್ ವಿಸ್ತೀರ್ಣ ಹೊಂದಿರುವ ದೊಡ್ಡಗುಬ್ಬಿ ಕೆರೆಯಾದ್ಯಂತ ಬೆಳಗಾಗುವುದರೊಳಗೆ ಸಾವಿರಾರು ಮೀನುಗಳು ನೀರಿನ ಮೇಲೆ ತೇಲುತ್ತಿರುವುದು ಕಂಡುಬಂದಿದೆ. ಕೆರೆಯಲ್ಲಿ ತೇಲುತ್ತಿರುವ ಸತ್ತ ಮೀನುಗಳನ್ನು ನೋಡಿ ಸ್ಥಳೀಯ ನಿವಾಸಿಗಳು ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿದೆ. ಯಾರೋ ಕಿಡಿಗೇಡಿಗಳು ಕೆರೆಯ ನೀರಿಗೆ ವಿಷಕಾರಿ ರಾಸಾಯನಿಕ (Chemical) ಬೆರೆಸಿರಬಹುದು ಅಥವಾ ಚರಂಡಿಯ ಕಲುಷಿತ ನೀರು ಕೆರೆಗೆ ಸೇರಿರಬಹುದು ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

 ಈ ಘಟನೆಯ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, “ಸಮರ್ಪಕವಾಗಿ ಸಂಸ್ಕರಿಸದ ಒಳಚರಂಡಿ ನೀರು ನೇರವಾಗಿ ಕೆರೆಗೆ ಸೇರಿದಾಗ ಈ ರೀತಿಯ ದುರಂತಗಳು ಸಂಭವಿಸುತ್ತವೆ. ಒಳಚರಂಡಿ ನೀರಿನಲ್ಲಿರುವ ಸಾವಯವ ವಸ್ತುಗಳು ಹಾಗೂ ಪಾಚಿ ಕೊಳೆಯಲು ಆರಂಭಿಸಿದಾಗ, ನೀರಿನಲ್ಲಿರುವ ಸೂಕ್ಷ್ಮಜೀವಿಗಳು ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು (Dissolved Oxygen) ಬಳಸಿಕೊಳ್ಳುತ್ತವೆ. ಇದರಿಂದ ನೀರಿನಲ್ಲಿ ಆಮ್ಲಜನಕದ ಮಟ್ಟ ತೀವ್ರವಾಗಿ ಕುಸಿದು ಮೀನುಗಳು ಉಸಿರುಗಟ್ಟಿ ಸಾಯುತ್ತವೆ” ಎಂದು ವಿವರಿಸಿದ್ದಾರೆ.

ಸಾಲು ಸಾಲು ಕೆರೆಗಳ ಮಾಲಿನ್ಯದ ನಡುವೆ ಇದೀಗ ದೊಡ್ಡಗುಬ್ಬಿ ಕೆರೆಯಲ್ಲೂ ಸಾವಿರಾರು ಜೀವಜಲಚರಗಳು ಬಲಿಯಾಗಿರುವುದು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಕೂಡಲೇ ಕೆರೆಯನ್ನು ಶುದ್ಧೀಕರಿಸಿ ಒಳಚರಂಡಿ ನೀರು ಕೆರೆಗೆ ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.