Home Blog Page 5

ಮಾರನಬಸರಿಯಲ್ಲಿ ಮೊಹರಂ ವೈಭವ ಜೋರು

0

ವಿಜಯಸಾಕ್ಷಿ ಸುದ್ದಿ, ರೋಣ: ಐತಿಹಾಸಿಕ ಮೊಹರಂ ಹಬ್ಬದ ಸಂಭ್ರಮದಲ್ಲಿ ತೇಲುತ್ತಿರುವ ರೋಣ ತಾಲೂಕಿನ ಮಾರನಬಸರಿ ಗ್ರಾಮ ಇದೀಗ ಅಲಂಕಾರಿಕ ವಿದ್ಯುತ್ ದೀಪಗಳ ಝಗಮಗಿಕೆಯಿಂದ ಕಂಗೊಳಿಸುತ್ತಿದ್ದು, ಸಂಧಲ್ ರಾತ್ರಿಗೆ ಕ್ಷಣಗಣನೆ ಆರಂಭವಾಗಿದೆ.

ಗ್ರಾಮದ ಪ್ರಮುಖ ಬೀದಿಗಳು, ಸಣ್ಣ ಹಾಗೂ ದೊಡ್ಡ ಮಸೀದಿಗಳು ಸೇರಿದಂತೆ ವಿವಿಧ ಸ್ಥಳಗಳನ್ನು ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಗ್ರಾಮವೇ ವರ್ಣರಂಜಿತವಾಗಿ ಕಂಗೊಳಿಸುತ್ತಿದೆ. ಈ ಬಾರಿ ವಿಶೇಷವಾಗಿ ಗ್ರಾಮದ ಮಹಾಧ್ವಾರವನ್ನು ಭವ್ಯವಾಗಿ ಸಜ್ಜುಗೊಳಿಸಲಾಗಿದ್ದು, ಮಹಾಧ್ವಾರದ ಮೇಲ್ಭಾಗದಲ್ಲಿ ಎರಡು ಬಸವಣ್ಣಗಳ ಮಧ್ಯೆ ಇಷ್ಟಲಿಂಗದ ಆಕೃತಿ ಅಳವಡಿಸಿರುವುದು ಭಕ್ತರ ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಜೂನ್ 24ರಂದು ನಡೆಯಲಿರುವ ಸಂಧಲ್ ರಾತ್ರಿಗೆ ಈಗಾಗಲೇ ಸಾವಿರಾರು ಭಕ್ತರು ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಹಬ್ಬದ ಅಂಗವಾಗಿ ಎರಡು ಮಸೀದಿಗಳಲ್ಲೂ ವಿಶೇಷ ಸಿದ್ಧತೆಗಳು ನಡೆದಿದ್ದು, ಮೊಹರಂ ಸಂಪ್ರದಾಯದ ಅಳ್ಳೊಳ್ಳಿ ಬವ್ವ, ಹುಲಿಕುಣಿತ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಚರಣೆಗಳು ಗ್ರಾಮದಲ್ಲಿ ವಿಶೇಷ ಮೆರುಗು ತಂದಿವೆ.

ಸಣ್ಣ ಹಾಗೂ ದೊಡ್ಡ ಮಸೀದಿ ಆವರಣದಲ್ಲಿ ಸುಮಾರು 50 ಅಡಿ ಎತ್ತರದ ವಿದ್ಯುತ್ ದೀಪಾಲಂಕೃತ ಧ್ವಜಸ್ತಂಭಗಳನ್ನು ನಿರ್ಮಿಸಲಾಗಿದ್ದು, ಅವುಗಳು ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. ಅಲ್ಲದೆ, ಸಣ್ಣ ಮಸೀದಿಯಿಂದ ರಾಜಕೀಯ ಭವಿಷ್ಯ ನುಡಿಯುವ ಧ್ವಜಸ್ತಂಭದವರೆಗೆ ಆಕರ್ಷಕ ಬೆಳಕಿನ ವಿನ್ಯಾಸ ಮಾಡಲಾಗಿದೆ.

ಬುಧವಾರದ ಸಂಧಲ್ ರಾತ್ರಿಯಲ್ಲಿ ಪ್ರಸಕ್ತ ವರ್ಷ ಯಾವ ಬೀಜ ಬಿತ್ತನೆ ಮಾಡಿದರೆ ಉತ್ತಮ ಫಸಲು ದೊರೆಯಲಿದೆ ಎಂಬುದರ ಕುರಿತು ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ದೊಡ್ಡ ಮಸೀದಿ ದೇವರ ಸವಾರಿ ಹಾಗೂ ಗೀಗಿ ಪದಗಳ ಮೇಳದ ಕಲಾವಿದರ ಪ್ರದರ್ಶನವೂ ಜರುಗಲಿದೆ.

ಒಟ್ಟಾರೆ, ಬೆಳಕಿನ ಅಲಂಕಾರದಲ್ಲಿ ಮಿಂದೇಳುತ್ತಿರುವ ಭಾವೈಕ್ಯತೆಯ ಮಾರನಬಸರಿ ಗ್ರಾಮವು ಹಬ್ಬದ ವೈಭವದಿಂದ ಸುತ್ತಮುತ್ತಲಿನ ಜನರನ್ನು ತನ್ನತ್ತ ಸೆಳೆಯುತ್ತಿದೆ.

ಎಚ್‌ಕೆಪಿಗೆ ಸಚಿವ ಸ್ಥಾನಕ್ಕಾಗಿ ಪ್ರಾರ್ಥನೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದ ಮಂತ್ರಿಮಂಡಲದಲ್ಲಿ ಮಾಜಿ ಸಚಿವ ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ದೊರಕಲಿ ಎಂದು ಆಶಿಸಿ ಪಟ್ಟಣದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.

ಸೋಮೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಹಿರಿಯ ಮುಖಂಡ ಚನ್ನಪ್ಪ ಜಗಲಿ, ಎಚ್.ಕೆ. ಪಾಟೀಲ ಅವರು ಗದಗ ಜಿಲ್ಲೆಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ಅನುಭವಿ ಹಾಗೂ ಕಳಂಕರಹಿತ ರಾಜಕಾರಣಿಯಾಗಿದ್ದಾರೆ ಎಂದು ಹೇಳಿದರು.

ಪ್ರವಾಸೋದ್ಯಮ ಸಚಿವರಾಗಿದ್ದ ಅವಧಿಯಲ್ಲಿ ಲಕ್ಷ್ಮೇಶ್ವರದ ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನದ ಉತ್ತರ ಮಹಾದ್ವಾರದ ಮರುನಿರ್ಮಾಣಕ್ಕೆ ₹2.50 ಕೋಟಿ ಅನುದಾನ ಒದಗಿಸಿ ದೇವಸ್ಥಾನದ ಅಭಿವೃದ್ಧಿಗೆ ನೆರವಾಗಿದ್ದರು. ಅವರ ಅನುಭವ ಮತ್ತು ಸೇವೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂಬ ಆಶಯದಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಅಧ್ಯಕ್ಷ ಗುರುರಾಜ ಪಾಟೀಲಕುಲಕರ್ಣಿ, ಸುರೇಶ ರಾಚನಾಯ್ಕರ, ವಿರುಪಾಕ್ಷ ಆದಿ, ಬಸವರಾಜ ಮೆಣಸಿನಕಾಯಿ, ಮಯೂರಗೌಡ ಪಾಟೀಲ, ಬಂಗಾರೆಪ್ಪ ಮುಳಗುಂದ, ಡಿ.ವಿ. ಹಿರೇಮಠ, ನಂದೀಶ ಬಂಡಿವಾಡ, ಕಾಶಪ್ಪ ಉಮಚಗಿ, ಯಲ್ಲಪ್ಪಗೌಡ ಪಾಟೀಲ, ಬಸಣ್ಣ ಉಮಚಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯುತ್ ಖಾಸಗೀಕರಣಕ್ಕೆ ರೈತರ ತೀವ್ರ ವಿರೋಧ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಬಾರದು ಹಾಗೂ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಲಕ್ಷ್ಮೇಶ್ವರ ತಾಲೂಕು ಘಟಕದ ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.

ವಿದ್ಯುತ್ ವಿತರಣಾ ಕ್ಷೇತ್ರಕ್ಕೆ ಖಾಸಗಿ ಕಂಪನಿಗಳು ಪ್ರವೇಶಿಸಿದರೆ ರೈತರ ಪಂಪ್‌ಸೆಟ್‌ಗಳಿಗೆ ಹಾಗೂ ಗೃಹ ಬಳಕೆದಾರರಿಗೆ ತೊಂದರೆಯಾಗಲಿದೆ. ಜೊತೆಗೆ ನಿರುದ್ಯೋಗ ಸಮಸ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ವಿದ್ಯುತ್ ಇಲಾಖೆಯನ್ನು ಖಾಸಗಿಯವರಿಗೆ ವಹಿಸಲು ಯಾವುದೇ ಪರವಾನಿಗೆ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈಗಾಗಲೇ ಕೆಲವು ರಾಜ್ಯಗಳಲ್ಲಿ ಖಾಸಗಿ ಕಂಪನಿಗಳು ವಿದ್ಯುತ್ ಕ್ಷೇತ್ರಕ್ಕೆ ಪ್ರವೇಶಿಸಿದ ಪರಿಣಾಮ ರೈತರು ಹಾಗೂ ಸಾಮಾನ್ಯ ಗ್ರಾಹಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೆಸ್ಕಾಂನ ಆರ್ಥಿಕ ಸ್ಥಿರತೆ, ವಿದ್ಯುತ್ ಕಾರ್ಮಿಕರ ಹಿತಾಸಕ್ತಿ ಹಾಗೂ ಗ್ರಾಮೀಣ ಗ್ರಾಹಕರ, ವಿಶೇಷವಾಗಿ ರೈತರ ಹಿತದೃಷ್ಟಿಯಿಂದ ಖಾಸಗಿ ವಿತರಣಾ ಪರವಾನಗಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಲಾಯಿತು.

ಒಂದು ವೇಳೆ ವಿದ್ಯುತ್ ಖಾಸಗೀಕರಣಕ್ಕೆ ಮುಂದಾದರೆ ರಾಜ್ಯಾದ್ಯಂತ ಬಂದ್ ಹಾಗೂ ಬಾರಕೋಲು ಚಳವಳಿ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಕಳ್ಳಿಹಾಳ, ಮಂಜುನಾಥ ಅಣ್ಣಿಗೇರಿ ಸೇರಿದಂತೆ ರಾಮಣ್ಣ ಕಾಶಿಕೋವಿ, ಶಿವಾನಂದ ಲಿಂಗಶೆಟ್ಟಿ, ಮಂಜುನಾಥ ಹಾವಳಕೇರಿ, ಮುರುಗೇಶ ಬಳಿಗಾರ, ಶಂಭಣ್ಣ ಬಳಿಗಾರ, ಸಿದ್ಧಲಿಂಗಪ್ಪ ಕಳ್ಳಿಹಾಳ, ಪ್ರಕಾಶ ಬಡಿಗೇರ, ಖಾದರ್‌ಸಾಬ್ ರಿತ್ತಿ, ಶಿವಪ್ಪ ಶಿವಸಿಂಪಿಗೇರ, ದಲಾವರ್‌ಸಾಬ್ ತಬ್ಬಲ, ಫಕ್ಕೀರೇಶ ಶೀರನಹಳ್ಳಿ, ಕುಮಾರ ಕರಡಿಕೊಪ್ಪ ಹಾಗೂ ರಮೇಶ ಕಾಶಿಕೋವಿ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಕೃಷಿ ಇಲಾಖೆ ಸತ್ತಂತಾಗಿದೆ: ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಮಳೆ ಕೊರತೆಯಿಂದ ಬರಗಾಲದ ಛಾಯೆ ಆವರಿಸಿದ್ದು, ಸರ್ಕಾರ ತಕ್ಷಣ ಸಮೀಕ್ಷೆ ನಡೆಸಿ ರಾಜ್ಯವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲದಂತಾಗಿದ್ದು, ಕೃಷಿ ಇಲಾಖೆ ಏನು ಮಾಡುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪರ್ಯಾಯ ಬೆಳೆ ಬೆಳೆಯಿರಿ, ಅಲ್ಪಾವಧಿ ಬೆಳೆ ಬೆಳೆಸಿರಿ ಎಂಬ ಸಲಹೆಗಳು ಹೊಸದೇನಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಇಲಾಖೆ ರೈತರ ಪಾಲಿಗೆ ಸತ್ತಂತಾಗಿದೆ ಎಂದು ಟೀಕಿಸಿದರು.

ಬರಗಾಲ ಘೋಷಿಸಿದ ಬಳಿಕ ಕೇಂದ್ರ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಗಂಭೀರ ಪ್ರಯತ್ನ ನಡೆಸಿಲ್ಲ ಎಂದು ಆರೋಪಿಸಿದರು.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಪ್ರತಿಭಟನೆಯಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಯುವಕರ ಬಗ್ಗೆ ಭಯ ಉಂಟಾಗಿದೆ. ಉದ್ಯೋಗ ಸೃಷ್ಟಿಸುವ ಬದಲು ಯುವಕರಿಗೆ ಆಮಿಷವೊಡ್ಡಿ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರದ ನ್ಯಾಷನಲ್ ಕ್ಯಾರಿಯರ್ ಸರ್ವಿಸ್ ಪೋರ್ಟಲ್ ಮೂಲಕ ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರ ನಡುವೆ ನೇರ ಸಂಪರ್ಕ ಕಲ್ಪಿಸಲಾಗಿದ್ದು, ಕೋಟ್ಯಂತರ ಜನರಿಗೆ ಅನುಕೂಲವಾಗಿದೆ. ಇದೇ ಮಾದರಿಯ ಯೋಜನೆಯನ್ನು ಹೊಸ ಹೆಸರಿನಲ್ಲಿ ಘೋಷಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಎಂಜಿಎನ್‌ಆರ್‌ಇಜಿಎಸ್ ಯೋಜನೆಯಡಿ ಕೇಂದ್ರ ಸರ್ಕಾರ 100 ದಿನಗಳ ಉದ್ಯೋಗಕ್ಕೆ ಅನುದಾನ ನೀಡುತ್ತಿದ್ದು, ಉಳಿದ 25 ದಿನಗಳಿಗೆ ಮಾತ್ರ ರಾಜ್ಯ ಸರ್ಕಾರ ಹಣ ಒದಗಿಸಬೇಕಿದೆ. ಹಲವು ರಾಜ್ಯಗಳು ಈ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ರೈತರ ಹಿತದೃಷ್ಟಿಯಿಂದ ಕರ್ನಾಟಕದಲ್ಲೂ ತಕ್ಷಣ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಷ್ಠೆ ಬಿಟ್ಟು ನಡೆದುಕೊಳ್ಳಬೇಕು. ರೈತರಿಗೆ ತೊಂದರೆಯಾಗದಂತೆ ಲಭ್ಯವಿರುವ ಸರ್ಕಾರಿ ಜಮೀನಿನಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

“ರಾಜ್ಯದಲ್ಲಿ ಕೃಷಿ ಸಚಿವರಿಲ್ಲ, ಕೃಷಿ ಇಲಾಖೆ ಏನು ಮಾಡುತ್ತಿದೆ ಎಂಬುದೇ ಗೊತ್ತಿಲ್ಲ. ಒಟ್ಟಾರೆ ರೈತರ ಪಾಲಿಗೆ ಇಲಾಖೆ ಸತ್ತಂತಾಗಿದೆ.”

– ಬಸವರಾಜ ಬೊಮ್ಮಾಯಿ, ಸಂಸದ

ಶೀಘ್ರದಲ್ಲೇ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ: ಹೊರರಾಜ್ಯದ ವೀಕ್ಷಕರಿಂದ ಆಯ್ಕೆ ಪ್ರಕ್ರಿಯೆ ಎಂದ ಬಿ.ಕೆ. ಹರಿಪ್ರಸಾದ್

ಮಂಗಳೂರು: ರಾಜ್ಯ ಕಾಂಗ್ರೆಸ್ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದ್ದು, ಇನ್ನು ಮುಂದೆ ಬೇರೆ ರಾಜ್ಯಗಳಿಂದ ಆಗಮಿಸುವ ವೀಕ್ಷಕರು ಜಿಲ್ಲೆಯಲ್ಲೇ ಒಂದು ವಾರ ತಂಗಿ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಎಐಸಿಸಿಗೆ ಹೆಸರುಗಳನ್ನು ಶಿಫಾರಸು ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಜಿಲ್ಲಾಧ್ಯಕ್ಷರ ಹೆಸರನ್ನು ಎಐಸಿಸಿಗೆ ಶಿಫಾರಸು ಮಾಡುತ್ತಿದ್ದರು. ಆದರೆ, ಇದೀಗ ಎಐಸಿಸಿ ಜಾರಿಗೆ ತಂದಿರುವ “ಸಂಘಟನ್ ಸರ್ಜನ್ ಅಭಿಯಾನ್” ಅಡಿಯಲ್ಲಿ ಹೊಸ ವಿಧಾನ ಅನುಸರಿಸಲಾಗುತ್ತಿದೆ ಎಂದು ಹೇಳಿದರು.

ಅದರಂತೆ, ಬೇರೆ ರಾಜ್ಯಗಳ ವೀಕ್ಷಕರು ಜಿಲ್ಲೆಗೆ ಭೇಟಿ ನೀಡಿ ಕನಿಷ್ಠ ಏಳು ದಿನಗಳ ಕಾಲ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಸಭೆ ನಡೆಸಲಿದ್ದಾರೆ. ಈ ವೇಳೆ ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿ, ಕನಿಷ್ಠ ಇಬ್ಬರಿಂದ ಗರಿಷ್ಠ ಆರು ಅಭ್ಯರ್ಥಿಗಳ ಹೆಸರನ್ನು ಎಐಸಿಸಿಗೆ ಶಿಫಾರಸು ಮಾಡಲಿದ್ದಾರೆ. ಆ ಪಟ್ಟಿಯ ಆಧಾರದ ಮೇಲೆ ಅಂತಿಮವಾಗಿ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ ಎಂದು ವಿವರಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಚುನಾವಣಾ ಆಯೋಗದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ ಎಂದು ತಿಳಿಸಿದ ಹರಿಪ್ರಸಾದ್, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ನೈಜ ಮತದಾರರನ್ನು ಮತ್ತೆ ದಾಖಲಿಸಲು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದರು.

ನೈಜ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿಸುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ. ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಭಾವನೆ ಮೂಡಿದೆ. ಯಾವುದೇ ನೈಜ ಮತದಾರರು ತಮ್ಮ ಮತದಾನದ ಹಕ್ಕು ಕಳೆದುಕೊಳ್ಳದಂತೆ ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದು  ಹೇಳಿದರು.

ಕಾರವಾರ-ಬಳ್ಳಾರಿಯಲ್ಲಿ ಏಕಕಾಲಕ್ಕೆ ದಾಳಿ: ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

ಕಾರವಾರ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿರುವ ಲೋಕಾಯುಕ್ತ,

ಮತ್ತೊಂದೆಡೆ ಬಳ್ಳಾರಿಯಲ್ಲಿ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದಡಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮನೆ ಹಾಗೂ ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿದೆ.

ಕಾರವಾರ ಲೋಕಾಯುಕ್ತ ಎಸ್‌ಪಿ ಕುಮಾರಚಂದ್ರ ಅವರ ನೇತೃತ್ವದಲ್ಲಿ ಧಾರವಾಡ ಹಾಗೂ ಕಾರವಾರ ಡಿವೈಎಸ್‌ಪಿಗಳ ಜಂಟಿ ತಂಡ ಮುಂಡಗೋಡಿನ ಎರಡು ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಸಿತು.

ಹೆಸ್ಕಾಂ ಇಂಜಿನಿಯರ್ ಧರ್ಮರಾಜ್ ಬೆಡಸಗಾಂವ್ ಗುತ್ತಿಗೆದಾರ ಶಿವಯೋಗಿ ಕೂಡಲಮಠ ಅವರಿಂದ ₹65 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದರು.

ಇನ್ನೊಂದು ಪ್ರಕರಣದಲ್ಲಿ, ಫಾರ್ಮ್‌ಹೌಸ್‌ಗೆ ಪರವಾನಗಿ ನೀಡಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ನಿರೀಕ್ಷಕ ಬಸವರಾಜ್ ಬಿಸ್ನಾಳ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

ಬಳ್ಳಾರಿ ಲೋಕಾಯುಕ್ತ ಎಸ್‌ಪಿ ವಾಸುದೇವರಾಮ್ ನೇತೃತ್ವದಲ್ಲಿ ಸಿರುಗುಪ್ಪ ತಾಲೂಕಿನ ಆರ್‌ಡಿಪಿಆರ್ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವ್ಯಾಸಗಾರ ತಿಪ್ಪೇಸ್ವಾಮಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಬೆಳ್ಳಂಬೆಳಗ್ಗೆ ದಾಳಿ ನಡೆಸಲಾಯಿತು.

ಬಳ್ಳಾರಿಯ ಹನುಮಾನ್ ನಗರ ಹಾಗೂ ಕುಡಿತಿನಿಯಲ್ಲಿರುವ ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ಸುಮಾರು 300 ಗ್ರಾಂ ಚಿನ್ನ, 800 ಗ್ರಾಂ ಬೆಳ್ಳಿ ಆಭರಣ, 6 ನಿವೇಶನಗಳಿಗೆ ಸಂಬಂಧಿಸಿದ ದಾಖಲೆಗಳು, ₹1 ಲಕ್ಷ ನಗದು ಪತ್ತೆಹಚ್ಚಿದರು. ಜೊತೆಗೆ ಬ್ಯಾಂಕ್ ಖಾತೆಯಲ್ಲಿದ್ದ ₹5 ಲಕ್ಷವನ್ನು ಫ್ರೀಜ್ ಮಾಡಲಾಗಿದೆ.

ಮನೆಗಳ ಮೇಲಿನ ದಾಳಿಯ ಬಳಿಕ ಸಿರುಗುಪ್ಪ ನಗರದ ಆರ್‌ಡಿಪಿಆರ್ ಕಚೇರಿಯ ಮೇಲೂ ಲೋಕಾಯುಕ್ತ ತಂಡ ದಾಳಿ ನಡೆಸಿ, ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಅಡ್ಡ ಮತದಾನ ಮಾಡಿದವರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ: ಅರಗ ಜ್ಞಾನೇಂದ್ರ

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದವರ ವಿರುದ್ಧ ಪಕ್ಷ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಅಡ್ಡ ಮತದಾನ ಮಾಡಿರುವುದು ಪಕ್ಷಕ್ಕೆ ಮಾಡಿದ ದ್ರೋಹ. ಇಂತಹ ಘಟನೆ ನಡೆಯಬಾರದು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಅಡ್ಡ ಮತದಾನದ ಬೆಳವಣಿಗೆಯಿಂದ ಪಕ್ಷದ ರಾಜ್ಯಾಧ್ಯಕ್ಷರು ವಿಚಲಿತರಾಗಿದ್ದಾರೆ. ಭಾವೋದ್ವೇಗದಲ್ಲಿ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಅಡ್ಡ ಮತದಾನ ಮಾಡಿದವರನ್ನು ಪತ್ತೆಹಚ್ಚಲು ಧರ್ಮಸ್ಥಳಕ್ಕೆ ಹೋಗುವ ಅಗತ್ಯವಿಲ್ಲ. ಬೇರೆ ಮಾರ್ಗಗಳ ಮೂಲಕ ಸತ್ಯಾಸತ್ಯತೆ ತಿಳಿದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಅಡ್ಡ ಮತದಾನ ಮಾಡಿದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬಾರದು ಎಂದು ಹೇಳಿದ ಅವರು, ಈ ಕುರಿತು ಪರಿಶೀಲನೆ ನಡೆಸಲು ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಯಾರು ಅಡ್ಡ ಮತದಾನ ಮಾಡಿದ್ದಾರೆ ಎಂಬುದು ಸ್ಪಷ್ಟವಾಗಲಿದೆ. ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು ಎಂದರು.

ಪಕ್ಷ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಇದೇ ಕಾರಣಕ್ಕೆ ರಾಜ್ಯಾಧ್ಯಕ್ಷರು ಹಾಗೂ ಪ್ರತಿಪಕ್ಷ ನಾಯಕರನ್ನು ದೆಹಲಿಗೆ ಕರೆಯಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಅಡ್ಡ ಮತದಾನ ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಖಚಿತ ಎಂದು ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಯುವಕ ಆತ್ಮಹತ್ಯೆ!

0

ಉಡುಪಿ: ಉದ್ಯಾವರ ಸಮೀಪದ ಪಾಪನಾಶಿನಿ ಸೇತುವೆಯಿಂದ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ.

ಪಿತ್ರೋಡಿ ನಿವಾಸಿ ಹರ್ಷಿತ್ ಶೆಟ್ಟಿ (28) ಮೃತ ಯುವಕನಾಗಿದ್ದು, ಬೆಳಗ್ಗೆ ಕ್ರಿಕೆಟ್ ಆಡಲು ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ಆದರೆ, ಸಂಜೆವರೆಗೂ ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ಆರಂಭಿಸಿದ್ದರು.

ಈ ವೇಳೆ ಪಾಪನಾಶಿನಿ ಸೇತುವೆ ಮೇಲೆಯೇ ಹರ್ಷಿತ್ ದ್ವಿಚಕ್ರ ವಾಹನ ಪತ್ತೆಯಾಗಿತ್ತು. ಜೊತೆಗೆ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನ ಮತ್ತಷ್ಟು ಬಲವಾಗಿತ್ತು. ತಕ್ಷಣ ಸ್ಥಳೀಯರು ಹಾಗೂ ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದಲ್ಲಿ ನದಿಯಲ್ಲಿ ಶೋಧ ಕಾರ್ಯ ಕೈಗೊಳ್ಳಲಾಯಿತು.

ಸಂಜೆಯ ವೇಳೆಗೆ ನದಿಯಲ್ಲಿ ಹರ್ಷಿತ್ ಮೃತದೇಹ ಪತ್ತೆಯಾಗಿದ್ದು, ಬಳಿಕ ಅದನ್ನು ಮೇಲಕ್ಕೆತ್ತಲಾಯಿತು. ಹರ್ಷಿತ್ ಮಲ್ಪೆಯಲ್ಲಿರುವ ಸೊಸೈಟಿಯೊಂದರಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮಮ್ಮುಟ್ಟಿ, ಅಲ್ಕಾ ಯಾಗ್ನಿಕ್ʼಗೆ ಪದ್ಮವಿಭೂಷಣ ಗೌರವ: ಕ್ರಿಕೆಟಿಗ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರದಾನ

0

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಡೆದ ಎರಡನೇ ಸುತ್ತಿನ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಟೆನಿಸ್ ದಂತಕಥೆ ವಿಜಯ್ ಅಮೃತರಾಜ್, ಮಲಯಾಳಂ ಚಿತ್ರರಂಗದ ಹಿರಿಯ ನಟ ಮಮ್ಮುಟ್ಟಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.

ಚಿತ್ರರಂಗ, ಸಂಗೀತ, ಕ್ರೀಡೆ, ಸಾರ್ವಜನಿಕ ಸೇವೆ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಹಲವಾರು ಗಣ್ಯರನ್ನು ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸನ್ಮಾನಿಸಿದರು.

ಸಮಾರಂಭದಲ್ಲಿ ನಟ ಮಮ್ಮುಟ್ಟಿ ಅವರ ಪತ್ನಿ ಸಲ್ಫತ್, ಪುತ್ರ ಹಾಗೂ ನಟ ದುಲ್ಕರ್ ಸಲ್ಮಾನ್ ಮತ್ತು ಪುತ್ರಿ ಸುರುಮಿ ಉಪಸ್ಥಿತರಿದ್ದರು.

ರೋಹಿತ್ ಶರ್ಮಾ, ಆರ್. ಮಾಧವನ್‌ಗೆ ಪದ್ಮಶ್ರೀ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಹಾಗೂ ಬಾಲಿವುಡ್ ನಟ ಆರ್. ಮಾಧವನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ವೇಳೆ ರಂಗ ಕಲಾವಿದ ನೂರುದ್ದೀನ್ ಅಹ್ಮದ್ ಅವರಿಗೂ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಶಿಬು ಸೊರೆನ್‌ಗೆ ಮರಣೋತ್ತರ ಪದ್ಮಭೂಷಣ

ಸಾರ್ವಜನಿಕ ವ್ಯವಹಾರಗಳ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಜೆಎಂಎಂ ಸಂಸ್ಥಾಪಕ ಹಾಗೂ ಬುಡಕಟ್ಟು ನಾಯಕ ಶಿಬು ಸೊರೆನ್ ಅವರಿಗೆ ಮರಣೋತ್ತರವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ಪರವಾಗಿ ಪತ್ನಿ ರೂಪಿ ಸೊರೆನ್ ಪ್ರಶಸ್ತಿಯನ್ನು ಸ್ವೀಕರಿಸಿದರು.

ಮೊದಲ ಸಮಾರಂಭದಲ್ಲಿ 66 ಪದ್ಮ ಪ್ರಶಸ್ತಿಗಳ ಪ್ರದಾನ

ಇದಕ್ಕೂ ಮುನ್ನ ಮೇ 26ರಂದು ನಡೆದ ಮೊದಲ ಪದ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 66 ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಿದ್ದರು.

ಆ ಸಮಾರಂಭದಲ್ಲಿ ದಿವಂಗತ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಪರವಾಗಿ ಪತ್ನಿ ಹಾಗೂ ನಟಿ-ರಾಜಕಾರಣಿ ಹೇಮಾ ಮಾಲಿನಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಹೊಸ ಕಾನೂನು ತಂತ್ರ: ಸುಪ್ರೀಂ ಕೋರ್ಟ್‌ನಲ್ಲಿ ಗಡುವು ಸಡಿಲಿಕೆಗೆ ಮನವಿ

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ತಮ್ಮ ಕಾನೂನು ಹೋರಾಟಕ್ಕೆ ಹೊಸ ದಿಕ್ಕು ನೀಡಿದ್ದಾರೆ. ಪ್ರಕರಣದಲ್ಲಿ ವಾದಿಸುತ್ತಿದ್ದ ವಕೀಲರನ್ನು ಬದಲಾಯಿಸಿರುವ ಅವರು, ಹೊಸ ವಕೀಲರ ಮೂಲಕ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣದ ವಿಚಾರಣೆಗೆ ಸಂಬಂಧಿಸಿ 60 ಸಾಕ್ಷಿಗಳ ಹೇಳಿಕೆಗಳನ್ನು ಒಂದು ವರ್ಷದೊಳಗೆ ದಾಖಲಿಸಿ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ನಿರ್ದೇಶನ ನೀಡಿತ್ತು. ಇದೀಗ ಆ ಗಡುವು ಕಾರ್ಯಸಾಧ್ಯವಲ್ಲ ಎಂಬ ವಾದದೊಂದಿಗೆ ಅವಧಿಯನ್ನು ಮರುಪರಿಶೀಲಿಸಿ ಕಡಿಮೆ ಅಥವಾ ಪರಿಷ್ಕರಿಸುವಂತೆ ಮನವಿ ಮಾಡಲಾಗಿದೆ.

ಇದೇ ವೇಳೆ ದರ್ಶನ್ ಸೇರಿದಂತೆ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿ ವಾದಿಸುತ್ತಿದ್ದ ವಕೀಲ ಸುನೀಲ್ ಕುಮಾರ್ ಅವರು ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು 59ನೇ ಸೆಷನ್ಸ್ ನ್ಯಾಯಾಲಯಕ್ಕೆ ಮೆಮೋ ಸಲ್ಲಿಸಿರುವ ಅವರು, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಚಾರಣೆ ವೇಳೆ ನ್ಯಾಯಾಲಯ, ಹಿರಿಯ ವಕೀಲ ಹಷ್ಮತ್ ಪಾಷಾ ಅವರು ದರ್ಶನ್ ಪರವಾಗಿ ಹೊಸದಾಗಿ ವಕಾಲತ್ತು ಸಲ್ಲಿಸಿರುವುದನ್ನು ಉಲ್ಲೇಖಿಸಿತು. ಪ್ರಕರಣದ ಎಲ್ಲಾ ದಾಖಲೆಗಳನ್ನು ನೂತನ ವಕೀಲರಿಗೆ ಹಸ್ತಾಂತರಿಸುವಂತೆ ಕೋರ್ಟ್ ಸೂಚನೆ ನೀಡಿದಾಗ, ದಾಖಲೆಗಳನ್ನು ಈಗಾಗಲೇ ಕುಟುಂಬಸ್ಥರ ಮೂಲಕ ಹಸ್ತಾಂತರಿಸಲಾಗಿದೆ ಎಂದು ಸುನೀಲ್ ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.

ವಕೀಲರ ಬದಲಾವಣೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪುನರ್ ಪರಿಶೀಲನಾ ಅರ್ಜಿ ಹಾಗೂ ವಿಚಾರಣಾ ಗಡುವಿನ ಪ್ರಶ್ನೆ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ.

error: Content is protected !!