ಆನೇಕಲ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಧಾರಾಕಾರ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತವಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದಲ್ಲಿ ಭಾರಿ ಮಳೆಯ ಪರಿಣಾಮ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ.
ರಸ್ತೆಗಳಲ್ಲಿ ಮಳೆ ನೀರು ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಹಲವು ಅಂಗಡಿ ಮುಂಗಟ್ಟುಗಳಿಗೂ ಮಳೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ತೀವ್ರ ತೊಂದರೆ ಅನುಭವಿಸಿದ್ದಾರೆ.
ಇನ್ನು ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಮಳೆ ನೀರು ರಸ್ತೆಯಲ್ಲೇ ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಏಕಾಏಕಿ ಸುರಿದ ಭಾರಿ ಮಳೆಗೆ ಎಲೆಕ್ಟ್ರಾನಿಕ್ ಸಿಟಿ ಎರಡನೇ ಹಂತದ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.
ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದೇ ಇಂತಹ ಅವಾಂತರಗಳಿಗೆ ಕಾರಣವೇ ಎಂಬ ಪ್ರಶ್ನೆಯೂ ಸ್ಥಳೀಯರಲ್ಲಿ ಮೂಡಿದೆ. ಪ್ರತಿ ಬಾರಿ ಮಳೆ ಬಂದಾಗಲೂ ಇದೇ ಸಮಸ್ಯೆ ಎದುರಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.









