ಶಿವಮೊಗ್ಗ: ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿರುವ ಶಾಲಾ ಕಟ್ಟಡದಲ್ಲೇ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ.
ನಗರದ ಜಯನಗರದ ಎರಡನೇ ಕ್ರಾಸ್‌ನಲ್ಲಿರುವ ಕಿಡ್ಸ್ ಶಾಲೆಯ ಕಟ್ಟಡದ ಮೇಲ್ಭಾಗದಲ್ಲಿ ಭಾರಿ ಪ್ರಮಾಣದ ಪಟಾಕಿಗಳನ್ನು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ತಕ್ಷಣ ಕಾರ್ಯಾಚರಣೆ ನಡೆಸಿ ಪಟಾಕಿಗಳನ್ನು ಜಪ್ತಿ ಮಾಡಿದ್ದಾರೆ.
ಅಮರ್ ಎಂಬುವವರು ಶಾಲಾ ಕಟ್ಟಡದ ಮೇಲ್ಭಾಗದಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಎಸಿ ಮೈತ್ರಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ವೇಳೆ ಅಪಾರ ಪ್ರಮಾಣದ ಪಟಾಕಿಗಳು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.
ಶಾಲಾ ಕಟ್ಟಡದಲ್ಲೇ ಪಟಾಕಿ ಸಂಗ್ರಹ: ಆತಂಕ:
ಪಟಾಕಿಗಳನ್ನು ಸಂಗ್ರಹಿಸಲು ಕಟ್ಟುನಿಟ್ಟಿನ ನಿಯಮಗಳು ಹಾಗೂ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದರಲ್ಲೂ ಮಕ್ಕಳು ವಿದ್ಯಾಭ್ಯಾಸ ಮಾಡುವ ಖಾಸಗಿ ಶಾಲೆಯ ಕಟ್ಟಡದ ಮೇಲ್ಭಾಗದಲ್ಲೇ ಈ ರೀತಿ ಪಟಾಕಿಗಳನ್ನು ಸಂಗ್ರಹಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಶಾಲಾ ಕಟ್ಟಡದಲ್ಲಿ ಪಟಾಕಿಗಳನ್ನು ದಾಸ್ತಾನು ಮಾಡಿರುವುದರಿಂದ ಅಗ್ನಿ ಅವಘಡ ಸಂಭವಿಸಿದ್ದರೆ ಭಾರಿ ಅನಾಹುತವೇ ನಡೆಯುವ ಸಾಧ್ಯತೆಯಿತ್ತು. ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸುವ ಮೊದಲೇ ಅಧಿಕಾರಿಗಳು ದಾಳಿ ನಡೆಸಿ ಪಟಾಕಿಗಳನ್ನು ವಶಪಡಿಸಿಕೊಂಡಿದ್ದಾರೆ.
ಗೋದಾಮಿನಲ್ಲಿ ಜಾಗವಿಲ್ಲದೆ ಶಾಲೆಯಲ್ಲಿ ಸಂಗ್ರಹಿಸಿದ್ದೆ: ಅಮರ್:
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಪಟಾಕಿ ಸಂಗ್ರಹಿಸಿದ್ದ ಅಮರ್, ಗೋದಾಮಿನಲ್ಲಿ ಜಾಗದ ಕೊರತೆ ಇದ್ದ ಕಾರಣ ತಾತ್ಕಾಲಿಕವಾಗಿ ಶಾಲಾ ಕಟ್ಟಡದಲ್ಲಿ ಪಟಾಕಿಗಳನ್ನು ಇಟ್ಟಿದ್ದಾಗಿ ತಿಳಿಸಿದ್ದಾರೆ. ಬೆಳಗ್ಗೆ ತಂದಿದ್ದ ಪಟಾಕಿಗಳನ್ನು ಸಂಜೆಯೊಳಗೆ ಬೇರೆ ಸ್ಥಳಕ್ಕೆ ಸಾಗಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಅಷ್ಟರಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಹೇಳಿದ್ದಾರೆ.
ತಪ್ಪಾಗಿರುವುದು ನಿಜ. ಈ ಸಂಬಂಧ ಕಾನೂನು ಪ್ರಕಾರ ಅಧಿಕಾರಿಗಳು ಕೈಗೊಳ್ಳುವ ಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಅಮರ್ ತಿಳಿಸಿದ್ದಾರೆ.
ಸದ್ಯ ಅಧಿಕಾರಿಗಳು ಪಟಾಕಿಗಳನ್ನು ಜಪ್ತಿ ಮಾಡಿದ್ದು, ಶಾಲಾ ಕಟ್ಟಡದಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮಗಳ ಕುರಿತು ಗಮನ ಹರಿಸಿದ್ದಾರೆ.










