Home Blog Page 6

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ಅಗಲಿಕೆಯ ದುಃಖದಲ್ಲೇ ತಮ್ಮನೂ ಸಾವು

0

ಕಲಬುರಗಿ: ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಹೋದರರ ಸಾವಿನ ಘಟನೆ ಜನರಲ್ಲಿ ತೀವ್ರ ನೋವು ಮೂಡಿಸಿದೆ. ಗ್ರಾಮದ ಹಿರಿಯ ನಿವಾಸಿ ಬಸವಂತರಾಯ ಸಣ್ಣಕ್ (81) ಅವರು ಅನಾರೋಗ್ಯದಿಂದ ಜನವರಿ 26ರಂದು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಜನವರಿ 27ರಂದು ನೆರವೇರಿತ್ತು.

ಅಣ್ಣನ ಅಗಲಿಕೆಯ ಆಘಾತಕ್ಕೆ ಒಳಗಾಗಿದ್ದ ಅವರ ತಮ್ಮ ಶಿವರಾಯ ಸಣ್ಣಕ್ (79) ಅವರು ಮಾನಸಿಕವಾಗಿ ಕುಸಿದು, ಮನೆಗೆ ಮರಳಿದ ಬಳಿಕ ಆರೋಗ್ಯ ಹದಗೆಟ್ಟು ಅದೇ ದಿನ ರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅಣ್ಣ-ತಮ್ಮಂದಿರಿಬ್ಬರೂ ಸತತ ಎರಡು ದಿನಗಳಲ್ಲಿ ಅಗಲಿರುವುದರಿಂದ ಗ್ರಾಮದಲ್ಲಿ ಶೋಕಾಚರಣೆ ಮುಂದುವರಿದಿದೆ.

ಇನ್ನೊಂದೆಡೆ, ದಾವಣಗೆರೆ ತಾಲೂಕಿನ ತುರ್ಚಗಟ್ಟ ಗ್ರಾಮದಲ್ಲಿ 35 ವರ್ಷದ ಯುವಕ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಮಾರ್ಗಮಧ್ಯೆಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಧಾರವಾಡದಲ್ಲಿ ಮೆಡಿಕಲ್ ಪಿಜಿ ವಿದ್ಯಾರ್ಥಿನಿ ಆತ್ಮಹತ್ಯೆ! ಕಾರಣ ನಿಗೂಢ

0

ಧಾರವಾಡ: ಮೆಡಿಕಲ್ ಪಿಜಿ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್)ಯ ಸೈಕಿಯಾಟ್ರಿಕ್ ಪಿಜಿ ವಿಭಾಗದ ಮೊದಲನೇ ವರ್ಷದ ವಿದ್ಯಾರ್ಥಿನಿ ಡಾ. ಪ್ರಜ್ಞಾ ಪಾಲೇಗರ್ (24) ಮೃತ ದುರ್ಧೈವಿಯಾಗಿದ್ದು,

ಶಿವಮೊಗ್ಗ ಮೂಲದ ಡಾ. ಪ್ರಜ್ಞಾ, ಎರಡು ವಾರಗಳ ಹಿಂದಷ್ಟೇ ಪಿಜಿ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದಿದ್ದರು. ನಿನ್ನೆ ಅವರ ತಂದೆ–ತಾಯಿ ಭೇಟಿಗೆ ಬಂದಿದ್ದು, ಬಳಿಕ ತೆರಳಿದ್ದರು ಎನ್ನಲಾಗಿದೆ.

ಡಾ. ಪ್ರಜ್ಞಾ, ಡಾ. ಪ್ರಿಯಾ ಪಾಟೀಲ್ ಅವರೊಂದಿಗೆ ಹಾಸ್ಟೆಲ್ ರೂಮ್ ಶೇರ್ ಮಾಡಿಕೊಂಡಿದ್ದರು. ಆದರೆ ಪೋಷಕರು ಬಂದಿದ್ದ ಹಿನ್ನೆಲೆಯಲ್ಲಿ ಡಾ. ಪ್ರಿಯಾ ಆ ರಾತ್ರಿ ಹೊರಗಡೆ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಕಾರಣದಿಂದ ಡಾ. ಪ್ರಜ್ಞಾ ಒಬ್ಬರೇ ರೂಮಿನಲ್ಲಿ ಇದ್ದರು.

ಬೆಳಗ್ಗೆ ಡಾ. ಪ್ರಿಯಾ ರೂಮಿಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವ್ಯಾಸಂಗದ ಒತ್ತಡ ಅಥವಾ ಮನಸ್ಸಿನ ಅಶಾಂತಿಯೇ ಈ ದುರ್ಘಟನೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಜಮ್ಮು- ಕಾಶ್ಮೀರದ ಸೋನಾಮಾರ್ಗ್​ ರೆಸಾರ್ಟ್​ ಮೇಲೆ ಹಿಮಪಾತ! ತಪ್ಪಿದ ದುರಂತ

0

ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಹಿಮಪಾತದ ನಡುವೆ, ಪ್ರವಾಸಿಗರ ಪ್ರಮುಖ ತಾಣವಾಗಿರುವ ಸೋನಾಮಾರ್ಗ್‌ನಲ್ಲಿ ಭಾರೀ ಹಿಮಪಾತ ಸಂಭವಿಸಿದೆ. ಮಧ್ಯ ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ಸೋನಾಮಾರ್ಗ್ ಪ್ರವಾಸಿ ರೆಸಾರ್ಟ್ ಮೇಲೆ ಹಿಮದ ರಾಶಿ ಪ್ರವಾಹದಂತೆ ಹರಿದು ಬಂದಿದ್ದು, ರೆಸಾರ್ಟ್ ಸಂಪೂರ್ಣವಾಗಿ ಹಿಮದ ಅಡಿಯಲ್ಲಿ ಮುಚ್ಚಿಕೊಂಡಿದೆ.

ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಾತ್ರಿ 10.12ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೆಸಾರ್ಟ್ ಹಾಗೂ ಸುತ್ತಮುತ್ತಲಿನ ಕಟ್ಟಡಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿದ್ದು,

ಬೃಹತ್ ಹಿಮಪಾತದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋಗಳಲ್ಲಿ ಕಟ್ಟಡಗಳ ಮೇಲೆ ಹಿಮದ ರಾಶಿ ಹರಿದುಬರುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಈ ಹಿಮಪಾತದಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲ. ಆದರೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹಾಗೂ ಅಪಾಯಕಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಸೋನಾಮಾರ್ಗ್ ಸೇರಿದಂತೆ ಕಣಿವೆಯ ಹಲವಾರು ಭಾಗಗಳಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮಧ್ಯಮದಿಂದ ಭಾರಿ ಹಿಮ ಬೀಳುತ್ತಿದೆ. ಇದಕ್ಕೆ ಜೊತೆಗೆ, ರಾಜ್ಯದಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಾಗಿದ್ದು, ಉತ್ತರಾಖಂಡದ ಬದರಿನಾಥ್, ಕೇದಾರನಾಥ ಸೇರಿದಂತೆ ಹಲವು ಎತ್ತರದ ಪ್ರದೇಶಗಳಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಒಂದು ವಾರದೊಳಗೆ ಇದು ರಾಜ್ಯದಲ್ಲಿ ಸಂಭವಿಸಿರುವ ಎರಡನೇ ಹಿಮಪಾತವಾಗಿದೆ. ಇದಕ್ಕೂ ಮುನ್ನ ಜನವರಿ 23ರಂದು ಸಂಭವಿಸಿದ್ದ ಭಾರಿ ಹಿಮಪಾತವು ಎತ್ತರದ ಪ್ರದೇಶಗಳನ್ನು ಆವರಿಸಿತ್ತು. ಈ ಹಿನ್ನೆಲೆ, ಹಿಮಪಾತದ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಎಲ್ಲಾ ಜಿಲ್ಲೆಗಳಿಗೆ ಎಚ್ಚರಿಕೆ ರವಾನಿಸಿದೆ.

ಶಿವಮೊಗ್ಗದಲ್ಲಿ ಮಂಗನ ಕಾಯಿಲೆಗೆ 29 ವರ್ಷದ ಯುವಕ ಬಲಿ: ಸಿದ್ದಾಪುರದಲ್ಲಿ ಮಹಿಳೆಗೆ ಸೋಂಕು ದೃಢ

0

ಶಿವಮೊಗ್ಗ: ಜಿಲ್ಲೆಯಲ್ಲಿ ಕ್ಯಾಸನೂರು ಫಾರೆಸ್ಟ್ ಡಿಸೀಸ್ (KFD) ಅಂದರೆ ಮಂಗನ ಕಾಯಿಲೆ ಪ್ರಕರಣಗಳು ಮತ್ತೆ ಆತಂಕ ಮೂಡಿಸುತ್ತಿವೆ. ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಮಾಹಿತಿ ಪ್ರಕಾರ, ಯುವಕ ಜನವರಿ 20ರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯ ಚಿಕಿತ್ಸೆ ಫಲಕಾರಿಯಾಗದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತಪಟ್ಟಿದ್ದಾರೆ.

ಘಟನೆಯ ಬಳಿಕ ಜಿಲ್ಲಾ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿದ್ದು, ಕಟಗಾರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರ ಲಕ್ಷಣವಿರುವವರ ತಪಾಸಣೆಗೆ ಸೂಚಿಸಲಾಗಿದೆ. ಮಂಗಗಳು ಅಸ್ವಸ್ಥವಾಗಿರುವುದು ಅಥವಾ ಸತ್ತಿರುವುದು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ಇನ್ನೊಂದೆಡೆ, ಸಿದ್ದಾಪುರ ತಾಲೂಕಿನ ನಿಲ್ಕುಂದ ಗ್ರಾಪಂ ವ್ಯಾಪ್ತಿಯ ಮುಳಗುಂದ ಗ್ರಾಮದಲ್ಲಿ 80 ವರ್ಷದ ಮಹಿಳೆಗೆ ಮಂಗನ ಕಾಯಿಲೆ ದೃಢಪಟ್ಟಿದೆ. ಇದು ಈ ವರ್ಷದ ಮೊದಲ ಪ್ರಕರಣ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಲೂಕು ಆರೋಗ್ಯಾಧಿಕಾರಿ, ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಕ್ಕೆ ಭೇಟಿ ನೀಡಿ, ಮನೆಯ ಸದಸ್ಯರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರಪತ್ರ ವಿತರಣೆ ಹಾಗೂ ತೈಲ ವಿತರಣೆಯಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸದ್ಯ ಸೋಂಕು ದೃಢಪಟ್ಟ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾವುದೇ ಗಂಭೀರ ಅಪಾಯ ಇಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಸರ್ಕಾರದ ನೆರವು: ಪುತ್ರಿಗೆ ಅನುಕಂಪದ ಹುದ್ದೆ ಮಂಜೂರು

0

ಬೆಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಅನುಕಂಪದ ಆಧಾರದ ಮೇಲೆ ಉದ್ಯೋಗ ಮಂಜೂರು ಮಾಡಿದೆ. ಬೀಳಗಿ ಅವರ ಪುತ್ರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಕಳೆದ ವರ್ಷದ ನವೆಂಬರ್ 25ರಂದು ಕಲಬುರಗಿ ಸಮೀಪ ಸಂಭವಿಸಿದ ಕಾರು ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದರು. ಈ ದುರ್ಘಟನೆ ಬಳಿಕ ಕುಟುಂಬದ ಆರ್ಥಿಕ ಭದ್ರತೆಗೆ ನೆರವಾಗುವ ಉದ್ದೇಶದಿಂದ, ಸಚಿವ ಸಂಪುಟ ಸಭೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡಿತ್ತು.

ಆದೇಶದ ಪ್ರಕಾರ, ಚೈತನ್ಯಾ ಎಂ. ಬೀಳಗಿ ಅವರನ್ನು ಎರಡು ವರ್ಷಗಳ ಪರೀಕ್ಷಾರ್ಥ ಅವಧಿಗೆ ನೇಮಕ ಮಾಡಲಾಗಿದ್ದು, ಮುಂದಿನ 15 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ಹುದ್ದೆಗೆ ವೇತನ ಶ್ರೇಣಿ ತಿಂಗಳಿಗೆ ರೂ.49,050 ರಿಂದ ರೂ.92,500 ವರೆಗೆ ನಿಗದಿಪಡಿಸಲಾಗಿದೆ.

ಕರ್ನಾಟಕ ನಾಗರೀಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು, 1996ರ ನಿಯಮ 6(1)ರ ಅಡಿಯಲ್ಲಿ ಈ ನೇಮಕಾತಿ ಮಾಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ವಿಮಾನ ದುರಂತಗಳಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ರಾಜಕಾರಣಿಗಳು ಯಾರ್ಯಾರು..?

0

ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು, ವಿಮಾನದಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ. ಬಾರಾಮತಿ ಪ್ರದೇಶದಲ್ಲಿ ಲ್ಯಾಂಡಿಂಗ್ ವೇಳೆ ಸಂಭವಿಸಿದ ಈ ದುರಂತ, ಅವರು ಗೆದ್ದಿದ್ದ ಕ್ಷೇತ್ರದಲ್ಲೇ ಅವರ ರಾಜಕೀಯ ಪಯಣಕ್ಕೆ ತೆರೆ ಎಳೆದಂತಾಗಿದೆ.

ಈ ದುರ್ಘಟನೆಯ ಬಳಿಕ, ಭಾರತದಲ್ಲಿ ಹಿಂದೆ ವಿಮಾನ ಹಾಗೂ ಹೆಲಿಕಾಪ್ಟರ್ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಪ್ರಮುಖ ರಾಜಕಾರಣಿಗಳ ಕುರಿತು ಮತ್ತೆ ಚರ್ಚೆ ಆರಂಭವಾಗಿದೆ. ಇಲ್ಲಿದೆ ಅಂತಹ ಪ್ರಮುಖ ಪ್ರಕರಣಗಳ ಸಂಕ್ಷಿಪ್ತ ಮಾಹಿತಿ:

ವಿಜಯ್ ರೂಪಾನಿ (2025)
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಜೂನ್ 12, 2025ರಂದು ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ನಿಧನರಾದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದರು.

ದೋರ್ಜಿ ಖಂಡು (2011)
ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಅವರು ಏಪ್ರಿಲ್ 30, 2011ರಂದು ತವಾಂಗ್‌ನಿಂದ ಇಟಾನಗರಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾದ ಪರಿಣಾಮ ಇತರ ನಾಲ್ವರು ಜೊತೆ ಪ್ರಾಣ ಕಳೆದುಕೊಂಡರು.

ವೈ.ಎಸ್. ರಾಜಶೇಖರ ರೆಡ್ಡಿ (2009)
ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ.ಎಸ್.ಆರ್ ಎಂದೇ ಪ್ರಸಿದ್ಧರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿ ಅವರು ಸೆಪ್ಟೆಂಬರ್ 2, 2009ರಂದು ಬೆಲ್ 430 ಹೆಲಿಕಾಪ್ಟರ್ ದಟ್ಟ ನಲ್ಲಮಲ ಅರಣ್ಯದಲ್ಲಿ ಅಪಘಾತಕ್ಕೀಡಾಗಿ ನಿಧನರಾದರು. ಕೆಟ್ಟ ಹವಾಮಾನ ಈ ಅಪಘಾತಕ್ಕೆ ಕಾರಣವಾಗಿತ್ತು.

ಓ.ಪಿ. ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)
ಕೈಗಾರಿಕೋದ್ಯಮಿ ಹಾಗೂ ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ ಮತ್ತು ಕೃಷಿ ಸಚಿವ ಸುರೇಂದರ್ ಸಿಂಗ್ ಅವರು 2005ರಲ್ಲಿ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾದ ಪರಿಣಾಮ ಸಾವನ್ನಪ್ಪಿದರು.

ಕೆ.ಎಸ್. ಸೌಮ್ಯ (ಸೌಂದರ್ಯ) (2004)
ಖ್ಯಾತ ದಕ್ಷಿಣ ಭಾರತೀಯ ನಟಿ ಸೌಂದರ್ಯ ಅವರು ಏಪ್ರಿಲ್ 17, 2004ರಂದು ವಿಮಾನ ಅಪಘಾತದಲ್ಲಿ ನಿಧನರಾದರು. ಅವರು ಬೆಂಗಳೂರಿನಿಂದ ಕರೀಂನಗರಕ್ಕೆ ತಮ್ಮ ಸಹೋದರರೊಂದಿಗೆ ಪ್ರಯಾಣಿಸುತ್ತಿದ್ದರು.

ಸಿಪ್ರಿಯನ್ ಸಂಗ್ಮಾ (2004)
ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ ಅವರು ಸೆಪ್ಟೆಂಬರ್ 22, 2004ರಂದು ಗುವಾಹಟಿಯಿಂದ ಶಿಲ್ಲಾಂಗ್‌ಗೆ ತೆರಳುತ್ತಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಬಾರಾಪಾನಿ ಸರೋವರದ ಬಳಿ ಅಪಘಾತಕ್ಕೀಡಾದ ಪರಿಣಾಮ ಇತರ ಒಂಬತ್ತು ಮಂದಿಯೊಂದಿಗೆ ಸಾವನ್ನಪ್ಪಿದರು.

ಜಿ.ಎಂ.ಸಿ. ಬಾಲಯೋಗಿ (2002)
ಲೋಕಸಭಾ ಸ್ಪೀಕರ್ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ ಅವರು ಮಾರ್ಚ್ 3, 2002ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ಕೈಕಲೂರು ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ಮಾಧವರಾವ್ ಸಿಂಧಿಯಾ (2001)
ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ನಾಗರಿಕ ವಿಮಾನಯಾನ ಸಚಿವ ಮಾಧವರಾವ್ ಸಿಂಧಿಯಾ ಅವರು ಸೆಪ್ಟೆಂಬರ್ 30, 2001ರಂದು ಉತ್ತರ ಪ್ರದೇಶದ ಮಣಿಪುರಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನಿಧನರಾದರು.

ಸಂಜಯ್ ಗಾಂಧಿ (1980)
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ ಅವರು ಜೂನ್ 23, 1980ರಂದು ದೆಹಲಿಯ ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ವಿಮಾನ ನಿಯಂತ್ರಣ ತಪ್ಪಿ ಪತನಗೊಂಡ ಪರಿಣಾಮ ಸಾವನ್ನಪ್ಪಿದರು.

ಮಹಾ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಸಂತಾಪ

0

ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಮಾನ ಲ್ಯಾಂಡಿಂಗ್ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಅಜಿತ್ ಪವಾರ್ ಅವರು ನಿಧನರಾಗಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ರೈತರ ಬದುಕಿನಲ್ಲಿ ಬದಲಾವಣೆ ತರಲು ಸದಾ ಶ್ರಮಿಸುತ್ತಿದ್ದರು ಎಂದು ಪಾಟೀಲ್ ಸ್ಮರಿಸಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ಅಜಿತ್ ಪವಾರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಾವು ಎಐಸಿಸಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅಜಿತ್ ಪವಾರ್ ಅವರ ಕಾರ್ಯಶೈಲಿಯನ್ನು ನೇರವಾಗಿ ಗಮನಿಸಿದ್ದೇನೆ ಎಂದು ಹೆಚ್.ಕೆ. ಪಾಟೀಲ್ ಹೇಳಿದರು.

ಶರದ್ ಪವಾರ್ ಅವರ ಸಹೋದರನ ಮಗನಾದ ಅಜಿತ್, ಮಹಾರಾಷ್ಟ್ರ ರಾಜಕೀಯದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದರು. ಎನ್‌ಡಿಎ ಸೇರಿ ಗಮನ ಸೆಳೆದಿದ್ದ ಇವರು, ಹಲವು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಾರಾಮತಿಯಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಅವರ ಅಗಲಿಕೆ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ ಎಂದಿದ್ದಾರೆ.

ಅಮೃತಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಕೋಟಿ ಮೌಲ್ಯದ ಡ್ರಗ್ ಸೀಜ್, 10 ಮಂದಿ ಬಂಧನ

0

ಬೆಂಗಳೂರು: ಅಮೃತಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 4 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಹಾಗೂ ಅಭಿನವ್ ಎಂದು ಗುರುತಿಸಲಾಗಿದೆ.

ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ ತರಿಸಿ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ಕಾರ್ಯಾಚರಣೆಯಲ್ಲಿ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಡ್ರಗ್ ಸಾಗಣೆ ಹಾಗೂ ಮಾರಾಟಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ

0

ಬೆಂಗಳೂರು: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಅಕಾಲಿಕವಾಗಿ ನಿಧನ ಹೊಂದಿರುವ ಸುದ್ದಿ ಅತ್ಯಂತ ನೋವುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಜಿತ್ ಪವಾರ್ ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾಯಕರು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಆಡಳಿತವನ್ನು ಬೆಂಬಲಿಸಿ, ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,” ಎಂದು ತಿಳಿಸಿದ್ದಾರೆ.

ಅವರ ಅಗಲಿಕೆಯಿಂದ ಮಹಾರಾಷ್ಟ್ರ ರಾಜಕಾರಣಕ್ಕೂ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೂ ದೊಡ್ಡ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ. “ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಅಜಿತ್ ಪವಾರ್ ಸಾವು ಆಘಾತಕಾರಿ: ಪ್ರಯಾಣ ವೇಳೆ ರಾಜಕಾರಣಿಗಳಿಗೆ ಹೆಚ್ಚಿನ ಜಾಗ್ರತೆ ಅಗತ್ಯ – ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಅಜಿತ್ ಪವಾರ್ ಅವರ ಸಾವು ಆಘಾತಕಾರಿ. ಅವರ ಸಾವಿನ ಸುದ್ದಿ ಕೇಳಿ ನನಗೂ ಗಾಬರಿಯಾಯಿತು. ರಾಜಕಾರಣಿಗಳಾದ ನಾವುಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆಚೀಚೆ ಪ್ರಯಾಣ ಮಾಡುವಾಗ ಹುಷಾರಾಗಿ ಇರಬೇಕು. ಹೀಗೆ ಅನೇಕ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

“ಅತ್ಯಂತ ಪ್ರಗತಿಪರ ಆಲೋಚನೆ ಹೊಂದಿದ್ದಂತಹ ನಾಯಕ ಅಜಿತ್ ಪವಾರ್ ಅವರು. ಎಲ್ಲಾ ಕೆಲಸಗಳಿಗೂ ಸಹಕಾರ ಕೊಡುತ್ತಿದ್ದಾರೆ ಎಂದು ಮೊನ್ನೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿಯವರು ಹೇಳಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಅವರ ಕುಟುಂಬಸ್ಥರು ಬೆಂಗಳೂರಿನಲ್ಲೂ ನೆಂಟಸ್ಥಿಕೆ ಬೆಳೆಸಿದ್ದಾರೆ. ಮಂಗಳವಾರ ಅವರ ಸಂಬಂಧಿಕರನ್ನು ಭೇಟಿಮಾಡಿದ್ದೇ” ಎಂದರು.

“ಅಜಿತ್ ಪವಾರ್ ಅವರು ಹಿರಿಯ ನಾಯಕರು. ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಟ್ಟು ಮರಳಿ ಬಂದರು. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು” ಎಂದರು.

ಇತ್ತೀಚೆಗೆ ಹೆಚ್ಚು ವಿಮಾನ ಅಪಘಾತಗಳು ಆಗುತ್ತಿರುವ ಬಗ್ಗೆ ಹಾಗೂ ತಾಂತ್ರಿಕ ದೋಷ ಎಂದು ಹೇಳುತ್ತಿದ್ದಾರೆ ಎಂದಾಗ, “ಇದರ ಬಗ್ಗೆ ವಿಸ್ತೃತ ವರದಿ ಬಂದ ನಂತರ ಮಾತನಾಡುತ್ತೇನೆ. ತಾಂತ್ರಿಕ ದೋಷದ ಬಗ್ಗೆ ನನಗೆ ಏನು ಗೊತ್ತು. ಮುಂಬೈನ ಗೆಳೆಯರು ಸೇರಿದಂತೆ ಹಲವರು ವಿಷಯ ತಿಳಿಸಿದ್ದಾರೆ” ಎಂದರು‌.

error: Content is protected !!