Home Blog Page 7

ಮಹಾ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಸಂತಾಪ

0

ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಸಚಿವ ಹೆಚ್.ಕೆ. ಪಾಟೀಲ್ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಿಮಾನ ಲ್ಯಾಂಡಿಂಗ್ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಅಜಿತ್ ಪವಾರ್ ಅವರು ನಿಧನರಾಗಿರುವುದು ಅತ್ಯಂತ ದುಃಖಕರ ಸಂಗತಿ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಅವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ರೈತರ ಬದುಕಿನಲ್ಲಿ ಬದಲಾವಣೆ ತರಲು ಸದಾ ಶ್ರಮಿಸುತ್ತಿದ್ದರು ಎಂದು ಪಾಟೀಲ್ ಸ್ಮರಿಸಿದರು. ಕಳೆದ 10 ವರ್ಷಗಳ ಅವಧಿಯಲ್ಲಿ ಅಜಿತ್ ಪವಾರ್ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ತಾವು ಎಐಸಿಸಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿ ಅಜಿತ್ ಪವಾರ್ ಅವರ ಕಾರ್ಯಶೈಲಿಯನ್ನು ನೇರವಾಗಿ ಗಮನಿಸಿದ್ದೇನೆ ಎಂದು ಹೆಚ್.ಕೆ. ಪಾಟೀಲ್ ಹೇಳಿದರು.

ಶರದ್ ಪವಾರ್ ಅವರ ಸಹೋದರನ ಮಗನಾದ ಅಜಿತ್, ಮಹಾರಾಷ್ಟ್ರ ರಾಜಕೀಯದಲ್ಲಿ ಅಪ್ರತಿಮ ವ್ಯಕ್ತಿಯಾಗಿದ್ದರು. ಎನ್‌ಡಿಎ ಸೇರಿ ಗಮನ ಸೆಳೆದಿದ್ದ ಇವರು, ಹಲವು ಬಾರಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಬಾರಾಮತಿಯಿಂದ ನಿರಂತರವಾಗಿ ಶಾಸಕರಾಗಿ ಆಯ್ಕೆಯಾಗಿದ್ದ ಅವರ ಅಗಲಿಕೆ ರಾಜಕೀಯ ವಲಯದಲ್ಲಿ ಆಘಾತ ಮೂಡಿಸಿದೆ ಎಂದಿದ್ದಾರೆ.

ಅಮೃತಹಳ್ಳಿ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹4 ಕೋಟಿ ಮೌಲ್ಯದ ಡ್ರಗ್ ಸೀಜ್, 10 ಮಂದಿ ಬಂಧನ

0

ಬೆಂಗಳೂರು: ಅಮೃತಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 4 ಕೋಟಿ ಮೌಲ್ಯದ ಡ್ರಗ್ ಸೀಜ್ ಮಾಡಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಹತ್ತು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಹಾಗೂ ಅಭಿನವ್ ಎಂದು ಗುರುತಿಸಲಾಗಿದೆ.

ಥೈಲ್ಯಾಂಡ್‌ನಿಂದ ವಿಮಾನದ ಮೂಲಕ ಡ್ರಗ್ ತರಿಸಿ, ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ವಿದ್ಯಾರ್ಥಿಗಳು, ಐಟಿ–ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ಕಾರ್ಯಾಚರಣೆಯಲ್ಲಿ 3 ಕೆಜಿ ಹೈಡ್ರೋ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಡ್ರಗ್ ಸಾಗಣೆ ಹಾಗೂ ಮಾರಾಟಕ್ಕೆ ಬಳಸಿದ್ದ ಎರಡು ಕಾರುಗಳು ಮತ್ತು 10 ಮೊಬೈಲ್ ಫೋನ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ.

ಮಹಾರಾಷ್ಟ್ರ DCM ಅಜಿತ್ ಪವಾರ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ

0

ಬೆಂಗಳೂರು: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಅಕಾಲಿಕವಾಗಿ ನಿಧನ ಹೊಂದಿರುವ ಸುದ್ದಿ ಅತ್ಯಂತ ನೋವುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಅಜಿತ್ ಪವಾರ್ ಮಹಾರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಾಯಕರು. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಆಡಳಿತವನ್ನು ಬೆಂಬಲಿಸಿ, ಮಹಾರಾಷ್ಟ್ರದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು,” ಎಂದು ತಿಳಿಸಿದ್ದಾರೆ.

ಅವರ ಅಗಲಿಕೆಯಿಂದ ಮಹಾರಾಷ್ಟ್ರ ರಾಜಕಾರಣಕ್ಕೂ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೂ ದೊಡ್ಡ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ. “ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ,” ಎಂದು ಬಸವರಾಜ ಬೊಮ್ಮಾಯಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಅಜಿತ್ ಪವಾರ್ ಸಾವು ಆಘಾತಕಾರಿ: ಪ್ರಯಾಣ ವೇಳೆ ರಾಜಕಾರಣಿಗಳಿಗೆ ಹೆಚ್ಚಿನ ಜಾಗ್ರತೆ ಅಗತ್ಯ – ಡಿ.ಕೆ. ಶಿವಕುಮಾರ್

0

ಬೆಂಗಳೂರು: “ಅಜಿತ್ ಪವಾರ್ ಅವರ ಸಾವು ಆಘಾತಕಾರಿ. ಅವರ ಸಾವಿನ ಸುದ್ದಿ ಕೇಳಿ ನನಗೂ ಗಾಬರಿಯಾಯಿತು. ರಾಜಕಾರಣಿಗಳಾದ ನಾವುಗಳು ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಆಚೀಚೆ ಪ್ರಯಾಣ ಮಾಡುವಾಗ ಹುಷಾರಾಗಿ ಇರಬೇಕು. ಹೀಗೆ ಅನೇಕ ನಾಯಕರನ್ನು ನಾವು ಕಳೆದುಕೊಂಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಬುಧವಾರ ಪ್ರತಿಕ್ರಿಯೆ ನೀಡಿದರು.

“ಅತ್ಯಂತ ಪ್ರಗತಿಪರ ಆಲೋಚನೆ ಹೊಂದಿದ್ದಂತಹ ನಾಯಕ ಅಜಿತ್ ಪವಾರ್ ಅವರು. ಎಲ್ಲಾ ಕೆಲಸಗಳಿಗೂ ಸಹಕಾರ ಕೊಡುತ್ತಿದ್ದಾರೆ ಎಂದು ಮೊನ್ನೆಯಷ್ಟೇ ಮಹಾರಾಷ್ಟ್ರ ಮುಖ್ಯಮಂತ್ರಿಯವರು ಹೇಳಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ. ಅವರ ಕುಟುಂಬ ವರ್ಗ ಹಾಗೂ ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಅವರ ಕುಟುಂಬಸ್ಥರು ಬೆಂಗಳೂರಿನಲ್ಲೂ ನೆಂಟಸ್ಥಿಕೆ ಬೆಳೆಸಿದ್ದಾರೆ. ಮಂಗಳವಾರ ಅವರ ಸಂಬಂಧಿಕರನ್ನು ಭೇಟಿಮಾಡಿದ್ದೇ” ಎಂದರು.

“ಅಜಿತ್ ಪವಾರ್ ಅವರು ಹಿರಿಯ ನಾಯಕರು. ರಾಜಕೀಯ ಭವಿಷ್ಯಕ್ಕಾಗಿ ಪಕ್ಷ ಬಿಟ್ಟು ಮರಳಿ ಬಂದರು. ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಪ್ರಸ್ತುತ ಮಹಾರಾಷ್ಟ್ರ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದರು” ಎಂದರು.

ಇತ್ತೀಚೆಗೆ ಹೆಚ್ಚು ವಿಮಾನ ಅಪಘಾತಗಳು ಆಗುತ್ತಿರುವ ಬಗ್ಗೆ ಹಾಗೂ ತಾಂತ್ರಿಕ ದೋಷ ಎಂದು ಹೇಳುತ್ತಿದ್ದಾರೆ ಎಂದಾಗ, “ಇದರ ಬಗ್ಗೆ ವಿಸ್ತೃತ ವರದಿ ಬಂದ ನಂತರ ಮಾತನಾಡುತ್ತೇನೆ. ತಾಂತ್ರಿಕ ದೋಷದ ಬಗ್ಗೆ ನನಗೆ ಏನು ಗೊತ್ತು. ಮುಂಬೈನ ಗೆಳೆಯರು ಸೇರಿದಂತೆ ಹಲವರು ವಿಷಯ ತಿಳಿಸಿದ್ದಾರೆ” ಎಂದರು‌.

ಜನಸೇವೆಗೆ ಸದಾ ಮುಂಚೂಣಿಯಲ್ಲಿ ನಿಂತ ನಾಯಕ: ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ಸಂತಾಪ

0

ನವದೆಹಲಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ. ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಪತನದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣ ಹೊಂದಿದ ಹಿನ್ನೆಲೆಯಲ್ಲಿ ಪ್ರಧಾನಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶೋಕ ಸಂದೇಶ ಪ್ರಕಟಿಸಿದ್ದಾರೆ.

ತಮ್ಮ ಸಂದೇಶದಲ್ಲಿ ಅಜಿತ್ ಪವಾರ್ ಅವರನ್ನು ಜನಸೇವೆಗೆ ಸದಾ ಮುಂಚೂಣಿಯಲ್ಲಿ ನಿಂತ ನಾಯಕ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ಅವರು ತಳಮಟ್ಟದ ಜನರೊಂದಿಗೆ ನೇರ ಸಂಪರ್ಕ ಹೊಂದಿದ್ದ ಜನಪ್ರಿಯ ನಾಯಕರು ಎಂದು ಸ್ಮರಿಸಿದ್ದಾರೆ. ಆಡಳಿತಾತ್ಮಕ ವಿಷಯಗಳಲ್ಲಿ ಆಳವಾದ ತಿಳುವಳಿಕೆ ಹೊಂದಿದ್ದ ಅಜಿತ್ ಪವಾರ್ ಅವರು ಬಡವರು ಮತ್ತು ದೀನದಲಿತರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದ್ದರು ಎಂದು ಪ್ರಧಾನಿ ಪ್ರಶಂಸಿಸಿದ್ದಾರೆ.

ಅಜಿತ್ ಪವಾರ್ ಅವರ ಅಕಾಲಿಕ ನಿಧನವು ಅತ್ಯಂತ ಆಘಾತಕಾರಿ ಮತ್ತು ದುಃಖಕರ ಸಂಗತಿಯಾಗಿದೆ ಎಂದು ತಿಳಿಸಿರುವ ಪ್ರಧಾನಿ ಮೋದಿ, ದುಃಖದ ಘಳಿಗೆಯಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಅಪಾರ ಅಭಿಮಾನಿಗಳಿಗೆ ತಾನು ಹೃತ್ಪೂರ್ವಕ ಸಂತಾಪ ಸೂಚಿಸುತ್ತೇನೆ ಎಂದು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಮತ್ತೆ ಬೆಂಗಳೂರಿನಲ್ಲೇ RCB ಮ್ಯಾಚ್ ಫಿಕ್ಸ್? ಇಂದು ಸರ್ಕಾರದ ಜೊತೆ ಮ್ಯಾನೇಜ್‌ಮೆಂಟ್ ಚರ್ಚೆ

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸುವ ಆರ್ಸಿಬಿ ಅಭಿಮಾನಿಗಳ ಕನಸು ನನಸಾಗುವ ಸಾಧ್ಯತೆ ಕಂಡುಬಂದಿದೆ. ಆರ್ಸಿಬಿ ಮ್ಯಾನೇಜ್ಮೆಂಟ್‌ನಿಂದಲೇ ಸಣ್ಣ ಸುಳಿವು ಲಭಿಸಿದ್ದು, ಇಂದು ಅಥವಾ ನಾಳೆ ಒಳಗಾಗಿ ಬೆಂಗಳೂರಿನಲ್ಲಿ ಆರ್ಸಿಬಿ ತವರು ಪಂದ್ಯಗಳನ್ನು ಆಡುವ ಕುರಿತು ಅಧಿಕೃತ ನಿರ್ಧಾರ ಪ್ರಕಟವಾಗುವ ನಿರೀಕ್ಷೆ ಇದೆ.

ಐಪಿಎಲ್ ಆರಂಭಕ್ಕೆ ಇನ್ನೂ ಎರಡು ತಿಂಗಳು ಮಾತ್ರ ಬಾಕಿ ಇದ್ದರೂ, ಆರ್ಸಿಬಿ ಈವರೆಗೂ ತನ್ನ ತವರು ಮೈದಾನವನ್ನು ಅಂತಿಮಗೊಳಿಸಿಲ್ಲ. ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ನಡೆಸುವ ಕುರಿತು ಯಾವುದೇ ಸ್ಪಷ್ಟ ಸೂಚನೆಯನ್ನು ಮ್ಯಾನೇಜ್ಮೆಂಟ್ ನೀಡಿರಲಿಲ್ಲ. ಈ ನಡುವೆ ಮತ್ತೆ ಬೆಂಗಳೂರಲ್ಲೇ ಆರ್ಸಿಬಿ ಪಂದ್ಯಗಳು ನಡೆಯಬೇಕು ಎಂಬ ಅಭಿಮಾನಿಗಳ ಒತ್ತಾಯ ಹೆಚ್ಚಾಗಿದೆ.

ಈ ಹಿನ್ನೆಲೆ, ಅಭಿಮಾನಿಗಳ ಆಶೆಯನ್ನು ಈಡೇರಿಸುವ ನಿಟ್ಟಿನಲ್ಲಿ ಆರ್ಸಿಬಿ ಆಡಳಿತ ಮಂಡಳಿ ಮುಂದಿನ ಹೆಜ್ಜೆ ಇಟ್ಟಂತೆ ಕಾಣುತ್ತಿದೆ. ಕಳೆದ ವಾರ ಕೆಎಸ್ಸಿಎ, “ಬೆಂಗಳೂರಿನಲ್ಲಿ ಆಡುವ ಕುರಿತು ಅಂತಿಮ ನಿರ್ಧಾರ ಆರ್ಸಿಬಿ ಮ್ಯಾನೇಜ್ಮೆಂಟ್‌ದ್ದೇ” ಎಂದು ಹೇಳಿ ಹೊಣೆಗಾರಿಕೆಯನ್ನು ಆರ್ಸಿಬಿ ಮೇಲೆ ಹಾಕಿತ್ತು. ಆದರೆ ಆರ್ಸಿಬಿ ಇದುವರೆಗೂ ತನ್ನ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.

ಇದೀಗ ಬಿಸಿಸಿಐ ತವರು ಮೈದಾನ ಘೋಷಣೆಗೆ ನೀಡಿದ್ದ ಡೆಡ್ಲೈನ್ ಕೂಡ ಮುಗಿದಿದ್ದು, ಆರ್ಸಿಬಿಗೆ ನಿರ್ಧಾರ ಪ್ರಕಟಿಸುವ ಒತ್ತಡ ಹೆಚ್ಚಾಗಿದೆ. ಈ ಕಾರಣದಿಂದ ಬಿಸಿಸಿಐಗೆ ಡೆಡ್ಲೈನ್ ವಿಸ್ತರಣೆಗೆ ಮನವಿ ಸಲ್ಲಿಸಿರುವ ಆರ್ಸಿಬಿ, ಬೆಂಗಳೂರಿನಲ್ಲಿ ಪಂದ್ಯ ಆಯೋಜನೆ ಸಂಬಂಧ ಸರ್ಕಾರದೊಂದಿಗೆ ನೇರವಾಗಿ ಚರ್ಚೆಗೆ ಮುಂದಾಗಿದೆ.

ಇಂದು ಅಥವಾ ನಾಳೆ ಸರ್ಕಾರದೊಂದಿಗೆ ಸಭೆ ನಡೆಸಿ, ಹಿಂದಿನ ದುರಂತ ಘಟನೆ ಬಳಿಕ ಉಂಟಾದ ಬೆಳವಣಿಗೆಗಳು ಮತ್ತು ಭದ್ರತಾ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಇದರ ಬಳಿಕ ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸುವ ಕುರಿತು ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಕೆಎಸ್ಸಿಎ ಮತ್ತು ಪೊಲೀಸ್ ಇಲಾಖೆ ನಡುವೆ ಮತ್ತೊಂದು ಮಹತ್ವದ ಸಭೆ ನಡೆಯಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಖುನ್ನಾ ವರದಿ ಸಂಬಂಧ ಮತ್ತೊಂದು ಹಂತದ ಪರಿಶೀಲನೆ ನಡೆಸಿ, ನಂತರ ಮುಂದಿನ ಕ್ರಮಗಳ ಬಗ್ಗೆ ಪೊಲೀಸ್ ಆಯುಕ್ತರು ಸೂಚನೆ ನೀಡಲಿದ್ದಾರೆ.

ಒಟ್ಟಾರೆ, ಇಂದು ಅಥವಾ ನಾಳೆಯೊಳಗೆ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವ ಕುರಿತು ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆ ಇದ್ದು, 18 ವರ್ಷಗಳಿಂದ ಅಭಿಮಾನಿಗಳು ನೀಡಿರುವ ಪ್ರೀತಿಗೆ ಪೂರಕವಾಗಿ ಆರ್ಸಿಬಿ ಮತ್ತೆ ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಯುತ್ತದೆಯೇ? ಅಥವಾ ದುರಂತದ ನೋವಿನ ಹಿನ್ನೆಲೆಯಲ್ಲಿ ಬೇರೆ ತವರು ಮೈದಾನ ಆಯ್ಕೆ ಮಾಡುತ್ತದೆಯೇ ಎಂಬುದು ಕಾದು ನೋಡಬೇಕಿದೆ.

Maharashtra Plane Crash: ತಾವು ಶಾಸಕರಾಗಿ ಗೆದ್ದ ಕ್ಷೇತ್ರದಲ್ಲೇ ತಮ್ಮ ಕೊನೆಯ ಪಯಣ ಮುಗಿಸಿದ ಅಜಿತ್!

0

ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿಯ ಹಿರಿಯ ನಾಯಕ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅಜಿತ್ ಪವಾರ್ ಅವರನ್ನು ತಕ್ಷಣ ಸ್ಥಳೀಯ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ವಿಮಾನದಲ್ಲಿ ಒಟ್ಟು ಐದು ಮಂದಿ ಪ್ರಯಾಣಿಸುತ್ತಿದ್ದು, ದುರ್ಘಟನೆಯಲ್ಲಿ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ಅಜಿತ್ ಪವಾರ್ ಅವರ ಪಿಎಸ್ಒ ಸೇರಿದಂತೆ ಇಬ್ಬರು ಸಿಬ್ಬಂದಿ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಆರಂಭಿಕ ವರದಿಗಳ ಪ್ರಕಾರ, ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡು ಕ್ರ್ಯಾಶ್ ಲ್ಯಾಂಡಿಂಗ್ ಮಾಡಲು ಯತ್ನಿಸಿದೆ. ಈ ವೇಳೆ ವಿಮಾನ ಸಂಪೂರ್ಣವಾಗಿ ನಾಶಗೊಂಡಿದ್ದು, ಭಾರೀ ಅಪಘಾತ ಸಂಭವಿಸಿದೆ. ಇನ್ನೂ ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಜಿತ್ ಪವಾರ್ ಅವರು ಜಿಲ್ಲಾ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬುಧವಾರ ಬಾರಾಮತಿಯಲ್ಲಿ ಹಲವು ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿದ್ದರು ಎನ್ನಲಾಗಿದೆ. ಈ ದುರ್ಘಟನೆ ಮಹಾರಾಷ್ಟ್ರ ಸೇರಿದಂತೆ ದೇಶದ ರಾಜಕೀಯ ವಲಯದಲ್ಲಿ ತೀವ್ರ ಆಘಾತಕ್ಕೆ ಕಾರಣವಾಗಿದೆ. ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ತಮ್ಮನ ಮಗ ಹಾಗೂ ಇತ್ತೀಚಿನ ವರ್ಷಗಳಲ್ಲಿ ಎನ್‌ಸಿಪಿಯೊಳಗಿನ ಒಡಕಿನ ನಂತರ ತಮ್ಮದೇ ಬಣವನ್ನು ಮುನ್ನಡೆಸುತ್ತಿದ್ದರು.

ಅಜಿತ್ ಪವಾರ್ ಅವರ ರಾಜಕೀಯ ಪಯಣ

ಅಜಿತ್ ಪವಾರ್ ಮಹಾರಾಷ್ಟ್ರ ರಾಜಕೀಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾಗಿದ್ದರು. 1995ರಲ್ಲಿ ಪುಣೆ ಜಿಲ್ಲೆಯ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ನಂತರ 1999, 2004, 2009, 2014 ಮತ್ತು 2019ರಲ್ಲಿ ನಿರಂತರವಾಗಿ ಗೆಲುವು ಸಾಧಿಸಿದ್ದರು. 2025ರ ವಿಧಾನಸಭಾ ಚುನಾವಣೆಯಲ್ಲಿ ಅವರು ಯುಗೇಂದ್ರ ಪವಾರ್ ಅವರನ್ನು ಸೋಲಿಸಿ ಜಯಗಳಿಸಿದ್ದರು.

ಉಪಮುಖ್ಯಮಂತ್ರಿಯಾಗಿ ದಾಖಲೆ ಸೇವೆ

ಅಜಿತ್ ಪವಾರ್ ಅವರು ಐದು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಒಂದೇ ವರ್ಷದಲ್ಲಿ ಎರಡು ಬಾರಿ ವಿಭಿನ್ನ ಮುಖ್ಯಮಂತ್ರಿಗಳ ಅಡಿಯಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ವಿಶೇಷವಾಗಿದೆ. 2023ರಲ್ಲಿ ಮತ್ತೊಮ್ಮೆ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ಎನ್‌ಡಿಎ ಸೇರಿದ್ದ ಅಜಿತ್ ಪವಾರ್

ರಾಜಕೀಯ ಚಾಣಾಕ್ಷತನದಿಂದ ಎನ್‌ಸಿಪಿಯನ್ನು ಬಲಪಡಿಸಿದ ಅಜಿತ್ ಪವಾರ್, ನಂತರ ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರನ್ನು ಬಿಟ್ಟು ಎನ್‌ಡಿಎಗೆ ಸೇರಿದ್ದರು. ಎಂಟು ಎನ್‌ಸಿಪಿ ಶಾಸಕರೊಂದಿಗೆ ಬಿಜೆಪಿ–ಶಿಂಧೆ ಬಣವನ್ನು ಬೆಂಬಲಿಸಿ, ಮಹಾರಾಷ್ಟ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು.

ವೈಯಕ್ತಿಕ ಜೀವನ

ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಮಾಜಿ ಸಚಿವ ಪದಮ್ ಸಿಂಗ್ ಪಾಟೀಲ್ ಅವರ ಸಹೋದರಿ. ಈ ದಂಪತಿಗೆ ಜೈ ಪವಾರ್ ಮತ್ತು ಪಾರ್ಥ್ ಪವಾರ್ ಎಂಬ ಇಬ್ಬರು ಪುತ್ರರು ಇದ್ದಾರೆ.

ಅಂತರಘಟ್ಟಮ್ಮನ ಜಾತ್ರೆ ವೇಳೆ ಅವಘಡ; ರಥಕ್ಕೆ ಡಿಕ್ಕಿ ಹೊಡೆದ ಎತ್ತಿನಗಾಡಿ- ಇಬ್ಬರು ಗಂಭೀರ

0

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಡೆದ ಅಂತರಘಟ್ಟಮ್ಮನ ಜಾತ್ರೆ ವೇಳೆ ಅವಘಡ ಸಂಭವಿಸಿವೆ.

ರಥೋತ್ಸವದ ನಂತರ ಸಂಪ್ರದಾಯದಂತೆ ನಡೆಯುವ ಪಾನಕದ ಎತ್ತಿನಗಾಡಿಗಳ ಓಟದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿದ ಎತ್ತಿನಗಾಡಿಗಳು ಜನಸಂದಣಿಯೊಳಗೆ ನುಗ್ಗಿದವು. ಈ ವೇಳೆ ಒಂದು ಎತ್ತಿನಗಾಡಿ ರಥಕ್ಕೆ ಡಿಕ್ಕಿ ಹೊಡೆದಿದ್ದು, ಅಡ್ಡ ಬಂದ ವ್ಯಕ್ತಿಗೂ ಡಿಕ್ಕಿ ಸಂಭವಿಸಿದೆ. ಅಲ್ಲದೇ ವ್ಯಕ್ತಿಯೊಬ್ಬರು ಎತ್ತಿನಗಾಡಿಯ ಚಕ್ರಕ್ಕೆ ಸಿಲುಕಿಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೀರೂರು ನಿವಾಸಿ ಚಂದ್ರಶೇಖರ್ (50) ಅವರಿಗೆ ಕಾಲು ಹಾಗೂ ಸೊಂಟ ಭಾಗದಲ್ಲಿ ತೀವ್ರ ಗಾಯಗಳಾಗಿದ್ದು, ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಜಾತ್ರೆ ವೇಳೆ ಉಂಟಾದ ಈ ಅವಘಡಗಳು ಜನರಲ್ಲಿ ಆತಂಕ ಮೂಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.

ನಟಿ ಕಾವ್ಯ ಗೌಡ ಪ್ರಕರಣದಲ್ಲಿ ಹೊಸ ತಿರುವು: ಪತಿ ಸೋಮಶೇಖರ್‌ಗೆ ಎದುರಾಗುತ್ತಾ ಸಂಕಷ್ಟ?

ನಟಿ ಕಾವ್ಯ ಗೌಡ ಹಾಗೂ ಪ್ರೇಮಾ ಕುಟುಂಬದ ನಡುವಿನ ಕೌಟುಂಬಿಕ ಕಲಹ ಇದೀಗ ಕಾನೂನು ಹಾದಿಯಲ್ಲಿ ತೀವ್ರ ಸ್ವರೂಪ ಪಡೆದಿದೆ. ರಾಮಮೂರ್ತಿನಗರ ಪೊಲೀಸರು ಪ್ರಕರಣದ ತನಿಖೆಯನ್ನು ಗಂಭೀರವಾಗಿ ಕೈಗೊಂಡಿದ್ದು, ಸತ್ಯಾಸತ್ಯತೆ ತಿಳಿಯಲು ಸಾಕ್ಷ್ಯಗಳ ಬೆನ್ನತ್ತಿದ್ದಾರೆ.

ಪೊಲೀಸರಿಗೆ ದೊರಕಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ನಟಿ ಕಾವ್ಯ ಗೌಡ ಹಾಗೂ ಅವರ ಪತಿ ಸೋಮಶೇಖರ್ ವಿರುದ್ಧವೇ ಹೆಚ್ಚು ಪುರಾವೆಗಳು ಲಭ್ಯವಾಗುತ್ತಿರುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.

ಕಾವ್ಯ ಗೌಡ ತಮ್ಮ ಮೇಲೆ ಚಾಕು ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದರೂ, ಇದಕ್ಕೆ ಸಂಬಂಧಿಸಿದ ಯಾವುದೇ ದೃಢ ಸಾಕ್ಷ್ಯಗಳು ಸದ್ಯ ಪತ್ತೆಯಾಗಿಲ್ಲ. ಚಾಕುವೂ ವಶಕ್ಕೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ, ಆರೋಪಗಳನ್ನು ಸಮರ್ಥಿಸಲು ಪುರಾವೆ ನೀಡುವಂತೆ ಪೊಲೀಸರು ಸೂಚಿಸಿದ್ದಾರೆ.

ಇತ್ತ, ಪ್ರೇಮಾ ಅವರು ಪೊಲೀಸರಿಗೆ ಸಲ್ಲಿಸಿರುವ ವಿಡಿಯೋ ಮತ್ತು ಫೋಟೋ ಪುರಾವೆಗಳು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.  ನಟಿಯ ಮನೆಗೆ ಭೇಟಿ ನೀಡಿ ಸ್ಥಳ ಮಹಜರು, ಸಿಸಿಟಿವಿ ದೃಶ್ಯಗಳ ವಶಪಡಿಕೆ ಮತ್ತು ಪರಿಶೀಲನೆ, ಮನೆ ಸಿಬ್ಬಂದಿಗಳ ವಿಚಾರಣೆ, ಸೋಮಶೇಖರ್ ಆರೋಗ್ಯ ಸುಧಾರಿಸಿದ ನಂತರ ವಿಚಾರಣೆ ನಡೆಸಲಿದ್ದಾರೆ.

ಒಟ್ಟಿನಲ್ಲಿ, ಈ ಪ್ರಕರಣ ಇದೀಗ ಕೇವಲ ಕುಟುಂಬ ಕಲಹವಾಗಿಲ್ಲ; ಇದು ಕಾನೂನು ಮತ್ತು ಪುರಾವೆಗಳ ಆಧಾರದ ಮೇಲೆ ನಿರ್ಣಯಗೊಳ್ಳುವ ಗಂಭೀರ ಪ್ರಕರಣವಾಗಿ ಮಾರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಸಂಗತಿಗಳು ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ.

6 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್; ಇಬ್ಬರು ಅಪ್ರಾಪ್ತರು ಅರೆಸ್ಟ್, ಮತ್ತೊಬ್ಬನಿಗಾಗಿ ಶೋಧ

0

ನವದೆಹಲಿ: ದೆಹಲಿಯ ಭಜನ್‌ಪುರ ಪ್ರದೇಶದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಜನವರಿ 18ರಂದು ಈ ಘಟನೆ ನಡೆದಿದ್ದು, ಬಳಿಕ ಬಾಲಕಿಯ ಕುಟುಂಬ ಪೊಲೀಸ್ ಠಾಣೆಗೆ ದೂರು ನೀಡಿದೆ. ಪೊಲೀಸರ ಮಾಹಿತಿ ಪ್ರಕಾರ, ಮೂವರು ಬಾಲಕರು ಬಾಲಕಿಯನ್ನು ಆಮಿಷವೊಡ್ಡಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮೂರನೇ ಆರೋಪಿ ಪರಾರಿಯಾಗಿದ್ದಾನೆ. ಪರಾರಿಯಾದ ಆರೋಪಿಯ ಕುಟುಂಬವೂ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಬಂಧಿತ ಇಬ್ಬರನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅಗತ್ಯ ಚಿಕಿತ್ಸೆಯ ಜೊತೆಗೆ ಸಮಾಲೋಚನೆ ವ್ಯವಸ್ಥೆ ಮಾಡಲಾಗಿದೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಮೂರನೇ ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ಶೋಧ ತಂಡ ರಚಿಸಲಾಗಿದ್ದು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಪರಾರಿಯಾದ ಆರೋಪಿಯನ್ನು ಬಂಧಿಸುವ ವಿಶ್ವಾಸವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರದ ವಿರುದ್ಧ ಕಠಿಣ ಕಾನೂನುಗಳಿದ್ದರೂ, ಇಂತಹ ಘಟನೆಗಳು ಮರುಮರು ನಡೆಯುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ.

error: Content is protected !!