ಗಜೇಂದ್ರಗಡ: ಭಾರತೀಯ ಭೂಸೇನೆಯಲ್ಲಿ ಸತತ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ಸ್ವಗ್ರಾಮಕ್ಕೆ ಮರಳಿದ ಸುಭೇದಾರ್ ಭೀಮಣ್ಣ ಮುಧೋಳ ಅವರಿಗೆ ಗಜೇಂದ್ರಗಡದಲ್ಲಿ ಅದ್ಧೂರಿ ಸ್ವಾಗತ ನೀಡಿ ಅಭಿನಂದಿಸಲಾಯಿತು. ಬಸ್ ನಿಲ್ದಾಣದಿಂದ ತೆರೆದ ಜೀಪಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಯಘೋಷ ಮೊಳಗಿಸುವ ಮೂಲಕ ದೇಶಸೇವೆಯಿಂದ ಮರಳಿದ ಯೋಧನಿಗೆ ತವರಿನ ಜನರು ಗೌರವ ಸಲ್ಲಿಸಿದರು.

ನಗರದ ಸೈನಿಕ ನಗರದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಭೀಮಣ್ಣ ಮುಧೋಳ, ಕಡುಬಡತನದಲ್ಲಿ ಹುಟ್ಟಿ ಬೆಳೆದು ಗೌಂಡಿ ಕೆಲಸ ಮಾಡುತ್ತಲೇ ಕಷ್ಟಪಟ್ಟು ಓದಿದೆ. ಬಡತನ ನನ್ನ ಸಾಧನೆಗೆ ಎಂದಿಗೂ ಅಡ್ಡಿಯಾಗಲಿಲ್ಲ. ಏನಾದರೂ ಸಾಧಿಸಬೇಕೆಂಬ ಛಲ, ಓದುವ ಹಂಬಲ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನನ್ನನ್ನು ಈ ಹಂತಕ್ಕೆ ತಲುಪಿಸಿವೆ ಎಂದರು.
ಸೇನಾ ಸೇವೆ ಎಂದರೆ ಕೇವಲ ಸಂಬಳ ಮತ್ತು ಸೌಲಭ್ಯಗಳಲ್ಲ. ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಡುವ ಪವಿತ್ರ ಕರ್ತವ್ಯ. ಯಾವ ಕ್ಷಣದಲ್ಲಿ ಜೀವಕ್ಕೆ ಅಪಾಯ ಎದುರಾಗುತ್ತದೆ ಎಂಬುದೂ ಗೊತ್ತಿರುವುದಿಲ್ಲ. ಇಂತಹ ಸೇವೆಯಲ್ಲಿ 28 ವರ್ಷಗಳನ್ನು ಕಳೆಯುವ ಅವಕಾಶ ದೊರೆತಿದ್ದು ನನ್ನ ಪುಣ್ಯ. ಯುವಕರು ದೇಶಸೇವೆಗೆ ಮುಂದಾಗಬೇಕು. ಪರಿಶ್ರಮದಿಂದ ಬದುಕಿನಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಪ್ರಗತಿಪರ ಚಿಂತಕ ಬಿ.ಎ. ಕೆಂಚರೆಡ್ಡಿ ಮಾತನಾಡಿ, ಪ್ರತಿಕೂಲ ಹವಾಮಾನ ಹಾಗೂ ಕಠಿಣ ಪರಿಸ್ಥಿತಿಗಳಲ್ಲೂ ದೇಶದ ರಕ್ಷಣೆಗಾಗಿ ಶ್ರಮಿಸುವ ಸೈನಿಕರ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಭೀಮಣ್ಣ ಅವರ ದೇಶಪ್ರೇಮ, ಶಿಸ್ತು ಮತ್ತು ಸಾಧನೆ ಇಂದಿನ ಯುವಜನತೆಗೆ ಮಾದರಿಯಾಗಿವೆ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಲಕ್ಷ್ಮಣ ಮುಧೋಳ ಅಧ್ಯಕ್ಷತೆ ವಹಿಸಿದ್ದರು. ಮರಾಠ ಸಮಾಜದ ಅಧ್ಯಕ್ಷ ಎಸ್.ಆರ್. ರಾಮಜಿ, ಖ್ಯಾತ ರೇಖಾಚಿತ್ರ ಕಲಾವಿದ ಪುಂಡಲಿಕ ಕಲ್ಲಿಗನೂರ ಮಾತನಾಡಿದರು. ವಕೀಲ ಎಂ.ಎಸ್. ಹಡಪದ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ, ಗೃಹರಕ್ಷಕ ದಳ, 12ನೇ ಮದ್ರಾಸ್ ಆರ್ಮಿ ತಂಡ, 3ನೇ ಮದ್ರಾಸ್ ಆರ್ಮಿ ತಂಡ, ಸಾಯಿ ಗ್ರೂಪ್ ಹಾಗೂ ಸ್ನೇಹಿತರು, ಬಂಧುಗಳು ಭೀಮಣ್ಣ ಮುಧೋಳ ದಂಪತಿಯನ್ನು ಸನ್ಮಾನಿಸಿದರು. ಕಷ್ಟದ ದಿನಗಳಲ್ಲಿ ಸಹಕಾರ ನೀಡಿದ ಸಂಗಮ್ಮ ಕೊಟಗಿ, ಭೀಮಣ್ಣ ಹಾಳಕೇರಿ, ಯಲ್ಲಪ್ಪ ಕಲ್ಗುಡಿ, ಡಾ.ಪಿ.ಬಿ. ರಾಮಜಿ, ಎಸ್.ಆರ್. ರಾಮಜಿ, ಎಲ್.ಎಚ್. ಮುಧೋಳ, ಎಲ್.ಎಂ. ಮುಧೋಳ, ಪರಪ್ಪ ಅರಗಂಜಿ, ಕೆ.ಬಿ. ಚಾಗರಿ ಹಾಗೂ ಆರ್.ಎಸ್. ಇಟಗಿ ಅವರನ್ನು ಕುಟುಂಬದವರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಡಾ. ರೇಣುಕರಾಜ ರಾಮಜಿ, ಎಚ್.ಆರ್. ಮುಜಾವರ, ಕೆ.ಬಿ. ಡೊಂಬರ, ಕೆ.ಎಸ್. ಗಡಾದ, ಎನ್.ಡಿ. ಕಲ್ಗುಡಿ, ಪಿರೋಜಿ ರಾಮಜಿ, ಬಸವರಾಜ ಕಂಪ್ಲಿ, ರಫೀಕ್ ಮುಜಾವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಕೀಲ ದಾವಲಸಾಬ ತಾಳಿಕೋಟಿ ನಿರೂಪಿಸಿದರು.
ಬಡತನ ನನ್ನ ಸಾಧನೆಗೆ ಅಡ್ಡಿಯಾಗಲಿಲ್ಲ. ಓದುವ ಛಲ, ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸವೇ ನನ್ನನ್ನು ಈ ಹಂತಕ್ಕೆ ತಲುಪಿಸಿವೆ. ದೇಶಸೇವೆ ನನ್ನ ಬದುಕಿನ ಹೆಮ್ಮೆ.
— ಸುಭೇದಾರ್ ಭೀಮಣ್ಣ ಮುಧೋಳ, ನಿವೃತ್ತ ಭೂಸೇನಾ ಅಧಿಕಾರಿ









