ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಯ ಲಕ್ಕುಂಡಿಯನ್ನು ವಿಶ್ವಪರಂಪರೆ ತಾತ್ಕಾಲಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲು ನಾಮನಿರ್ದೇಶನ ಪ್ರಸ್ತಾವನೆಯನ್ನು ಸಿದ್ಧಪಡಿಸುತ್ತಿದ್ದು, ಸರ್ಕಾರದ ಅನುಮೋದನೆಯೊಂದಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಖಾಂತರ ಸ್ಮಾರಕಗಳು ಮತ್ತು ಸೈಟ್ಗಳ ಇಂಟರ್ನ್ಯಾಷನಲ್ ಕೌನ್ಸಿಲ್ಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ಸೋಮವಾರದಂದು ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ, ಕನ್ನಡ ಸಾಹಿತ್ಯ ಪೋಷಕಿಯಾಗಿದ್ದ ದಾನಚಿಂತಾಮಣಿ ಅತ್ತಿಮಬ್ಬೆಯವರ ಸ್ಥಳವಾದ ಗದಗ ಜಿಲ್ಲೆ ಲಕ್ಕುಂಡಿ ಗ್ರಾಮವು ಐತಿಹಾಸಿಕ ಪಾರಂಪರಿಕ ಪ್ರದೇಶವಾಗಿದ್ದು, ಈ ಪಾರಂಪರಿಕ ಗ್ರಾಮದಲ್ಲಿರುವ ಸ್ಮಾರಕಗಳು, ದೇವಾಲಯಗಳು, ಬಾವಿಗಳು, ಶಾಸನಗಳ ಸಂರಕ್ಷಣೆಗಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಲಾಗಿದ್ದು, ಈ ಪ್ರಾಧಿಕಾರದ ಮುಖಾಂತರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮನೆಯ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ದೊರೆತ ಬೆಲೆಬಾಳುವ ಚಿನ್ನಾಭರಣಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ ಬಾಲಕನ ಪ್ರಾಮಾಣಿಕತೆಯನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಮೆಚ್ಚಿಕೊಂಡಿದ್ದು, ಅವರ ಕುಟುಂಬಕ್ಕೆ ಕಾನೂನು ಪ್ರಕಾರ ಸಿಗಬೇಕಾದ ಎಲ್ಲ ಪರಿಹಾರ ಮತ್ತು ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಲಕ್ಕುಂಡಿ ಪಾರಂಪರಿಕ ಶ್ರೀ ವಿರೂಪಾಕ್ಷ ದೇವಾಲಯ ಸಂರಕ್ಷಣೆ, ಶ್ರೀ ಮಲ್ಲಿಕಾರ್ಜುನ ದೇವಾಲಯ ಹಾಗೂ ಗದ್ದುಗೆ ಸಂರಕ್ಷಣೆ, ಶ್ರೀ ಚಂದ್ರಮೌಳೇಶ್ವರ ದೇವಾಲಯ ಸಂರಕ್ಷಣೆ, ಶ್ರೀ ಹಾಲಗುಂಡಿ ಬಸವಣ್ಣ ದೇವಾಲಯ ಸಂರಕ್ಷಣೆ ಕಾಮಗಾರಿ, ಶ್ರೀ ಕಣ್ಣರ ಭಾವಿ ಸಂರಕ್ಷಣೆ ಕಾಮಗಾರಿ, ಶ್ರೀ ಕಲ್ಮಠ ಭಾವಿ ಹಾಗೂ ಕಂಪೌಂಡ್ ಗೋಡೆ ಕಾಮಗಾರಿಗಳಿಗೆ ರೂ.10.16 ಕೋಟಿ ವೆಚ್ಚದಲ್ಲಿ ಸಂರಕ್ಷಣೆ ಕಾಮಗಾರಿ ಕೈಗೊಂಡು ಸ್ಮಾರಕಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವರು ತಿಳಿಸಿದರು.
ಶಿರಹಟ್ಟಿ ತಾಲೂಕಿನ ಶ್ರೀ ಹೊಳಲಮ್ಮ ದೇವಿ ದೇವಸ್ಥಾನ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗೆ ರೂ.6 ಕೋಟಿ 47 ಲಕ್ಷ, ಗದಗ ನಗರದ ಶ್ರೀ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ, ಜುಮ್ಮಾ ಮಸೀದಿ, ಲಕ್ಕುಂಡಿ ಸೇರಿದಂತೆ ಗದಗ ಜಿಲ್ಲೆಯ 22 ಧಾರ್ಮಿಕ ಕೇಂದ್ರಗಳ ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳಿಗೆ ರೂ.13 ಕೋಟಿ 5 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಕಪ್ಪತ್ತಗುಡ್ಡ ಗದಗ ಮೃಗಾಲಯ ವಿಸ್ತರಣೆ, ಮಾಗಡಿ ಕೆರೆ ಅಭಿವೃದ್ಧಿಗಾಗಿ ರೂ.22 ಕೋಟಿ 50 ಲಕ್ಷಗಳನ್ನು ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ವಾಣಿಜ್ಯ ವಹಿವಾಟು ನಿರ್ವಹಣೆಯಲ್ಲಿ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಹೆಚ್ಚಾಗಿ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿರುವುದಕ್ಕೆ ಮಹಿಳೆಯರು ಬ್ಯಾಂಕಿನ ಒಂದಿಗೆ ವ್ಯವಹರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯೇ ಪ್ರಮುಖ ಕಾರಣವಾಗಿದ್ದು, 2022ರಲ್ಲಿ ಬ್ಯಾಂಕ್ ಖಾತೆ ಹೊಂದಿರುವವರ ಸಂಖ್ಯೆ ಶೇ. 9 ಇದ್ದದ್ದು ಪ್ರಸ್ತುತ ಶೇ. 73ರಷ್ಟು ಆಗಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಜಿಲ್ಲೆಯಲ್ಲಿ ನಮ್ಮ ಸರ್ಕಾರದ ಅತ್ಯಂತ ಮಹತ್ವದ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಜಾರಿಗೊಂಡು ರಾಜ್ಯದ ಬಡತನವನ್ನು ಬೇರು ಸಹಿತ ಕಿತ್ತೊಗೆಯುವ ಸಾಧನೆ ನಮ್ಮ ಸರ್ಕಾರದ್ದಾಗಿದೆ. ಕ್ರಾಂತಿಕಾರಕವಾದ ಈ ಯೋಜನೆಗಳು ನಮ್ಮ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.
ಗದಗ ಜಿಲ್ಲೆಯಲ್ಲಿ ಒಟ್ಟು 1,41,981 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಿದ್ದಾರೆ. 2025-26ನೇ ಸಾಲಿನ ಡಿಸೆಂಬರ್ ಅಂತ್ಯದವರೆಗೆ ಗದಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿಶೇಷ ಘಟಕ ಯೋಜನೆಯಡಿ ರೂ.85 ಕೋಟಿ ಬಿಡುಗಡೆಯಾಗಿದ್ದು, ರೂ.73 ಕೋಟಿ ಖರ್ಚು ಮಾಡಲಾಗಿದೆ. ಗಿರಿಜನ ಉಪಯೋಜನೆಯಡಿಯಲ್ಲಿ ರೂ.12 ಕೋಟಿ ಬಿಡುಗಡೆಯಾಗಿದ್ದು ರೂ.7 ಕೋಟಿ ಖರ್ಚು ಮಾಡುವುದರ ಮೂಲಕ ಶೇ.62ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿವರಿಸಿದರು.
ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ, 2021-22ನೇ ಸಾಲಿನ ಕರ್ನಾಟಕ ನೀರಾವರಿ ನಿಗಮ ಹಾಗೂ ಮಾನ್ಯ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ವಾರ್ಡ್ ನಂ.17 ಮತ್ತು 18ರ ಮಧ್ಯದಲ್ಲಿ ಹರಿಯುವ ರಾಜ ಕಾಲುವೆಯ ಮೇಲೆ ಇಂದಿರಾ ವನ ನಿರ್ಮಾಣ ಮಾಡಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ವಸತಿ ರಹಿತ ಫಲಾನುಭವಿಗಳಿಗೆ ಎ.ಎಚ್.ಪಿ ಯೋಜನೆಯಡಿಯಲ್ಲಿ ಒಟ್ಟು 71 ಎಕರೆ ಜಮೀನಿನಲ್ಲಿ 3630 ಮನೆಗಳಲ್ಲಿ 205 ಮನೆಗಳು ಹಂಚಿಕೆ ಮಾಡಲಾಗಿದೆ. ಪ್ರಸ್ತುತ 774 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 2606 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

