Home Blog

ವರುಣನ ಕೊಂಚ ರಿಲೀಫ್: ಕರ್ನಾಟಕದಲ್ಲಿ ಮುಂದುವರಿದ ಒಣ ಹವೆಯ ವಾತಾವರಣ!

0

ಬೆಂಗಳೂರು:- ಕರ್ನಾಟಕದಲ್ಲಿ ವರುಣ ರಿಲೀಫ್ ಕೊಟ್ಟಿದ್ದು, ರಾಜ್ಯದಲ್ಲಿ ಒಣ ಹವೆ ಮುಂದುವರಿದಿದೆ.

ಕರಾವಳಿಯ ಜಿಲ್ಲೆಗಳಲ್ಲಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಒಣ ಹವೆ ಇರಲಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಸಂಪೂರ್ಣವಾಗಿ ಒಣಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ತುಮಕೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಳೆ ಸಾಧ್ಯತೆ ತೀರಾ ವಿರಳವಾಗಿರಲಿದೆ. ಕರಾವಳಿಯಲ್ಲೂ ಸಧ್ಯಕ್ಕೆ ವರುಣಾರ್ಭಟ ನಿಂತಿದ್ದು, ಮಳೆಯ ಸಾಧ್ಯತೆ ಕಡಿಮೆಯಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಉಳಿದ ಭಾಗಗಳಂತೆ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಸಿಗ್ನಲ್ ನಲ್ಲಿ ನಿಂತಿದ್ದ ಬೈಕ್ ಗೆ ಆಂಬುಲೆನ್ಸ್ ಡಿಕ್ಕಿ: ಸ್ಥಳದಲ್ಲೇ ಗಂಡ ಹೆಂಡತಿ ದುರ್ಮರಣ

0

ಬೆಂಗಳೂರು:- ಸಿಗ್ನಲ್ ನಲ್ಲಿ ನಿಂತಿದ್ದ ಬೈಕ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಗಂಡ ಹೆಂಡತಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್‌ನ ಸಂಗೀತ ಸಿಗ್ನಲ್ ಬಳಿ ಜರುಗಿದೆ.

ಪತಿ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಮೃತರು. ಘಟನೆಯಲ್ಲಿ ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ರೆಡ್‌ ಸಿಗ್ನಲ್‌ ಇದ್ದ ಕಾರಣ ಸವಾರ ಬೈಕ್‌ ನಿಲ್ಲಿಸಿದ್ದರು. ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಅಂಬುಲೆನ್ಸ್‌ ಹಿಂದಿನಿಂದ ಬೈಕ್‌ಗೆ ಗುದ್ದಿದೆ. ಬೈಕ್‌ ಸಮೇತ 200 ಮೀಟರ್‌ ಎಳೆದೊಯ್ದಿದೆ. ಕೊನೆಗೆ ಪೊಲೀಸ್ ಚೌಕ್ ಹಾಗೂ ಸಿಗ್ನಲ್ ಕಂಡ್ರೋಲ್ ಯುನಿಟ್‌ಗೆ ಗುದ್ದಿ ಅಂಬುಲೆನ್ಸ್‌ ನಿಂತಿದೆ. ಪರಿಣಾಮ ಇಸ್ಮಾಯಿಲ್ (40) ಮತ್ತು ಪತ್ನಿ ಸಮೀನ್ ಬಾನು ಸಾವನ್ನಪ್ಪಿದ್ದಾರೆ.

ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಚಾಲಕನಿಂದ ಅಪಘಾತವಾಗಿದೆ. ಅಂಬುಲೆನ್ಸ್ ಒಳಗೆ ಯಾರೂ ರೋಗಿ ಇರಲಿಲ್ಲ. ಆದರೂ, ಅತಿವೇಗವಾಗಿ ಬಂದು ಸಿಗ್ನಲ್ ಇದ್ದರೂ ಬ್ರೇಕ್ ಹಾಕದೇ ಅಪಘಾತವೆಸಗಿದ್ದಾನೆ. ಅಪಘಾತ ಸ್ಥಳದಲ್ಲಿ ಸ್ಥಳೀಯರ ಆಕ್ರೋಶ ಹೊರಹಾಕಿ ಅಂಬುಲೆನ್ಸ್‌ ಅನ್ನು ಪಲ್ಟಿ ಹೊಡೆಸಿದ್ದಾರೆ. ಈ ಏರಿಯಾದಲ್ಲಿ ಅಂಬುಲೆನ್ಸ್ ಅಪಘಾತ ಎರಡನೇ ಸಲ ಆಗಿರೋದು. ಯಾರು ಕೂಡ ಇಲ್ಲದಿದ್ದರೂ ಸೈರನ್ ಹಾಕಿಕೊಂಡು ಬರ್ತಾರೆ. ಇವರಿಂದ ಇಬ್ಬರ ಪ್ರಾಣ ಹೋಗಿದೆ ಎಂದು ಸ್ಥಳೀಯರು ಕಿಡಿಕಾರಿದ್ದಾರೆ. ಅಂಬುಲೆನ್ಸ್‌ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

ಕನ್ನಡ ಈ ನೆಲದ ಸಂಸ್ಕೃತಿ, ಶಕ್ತಿ: ಸಂತೋಷ ಹಿರೇಮಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕು ಆಡಳಿತದ ವತಿಯಿಂದ ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದಲ್ಲಿ ಶನಿವಾರ 70ನೇ ವರ್ಷದ ರಾಜ್ಯೋತ್ಸವವನ್ನು ರಾಷ್ಟ್ರ ದ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ತಹಸೀಲ್ದಾರ ಸಂತೋಷ ಹಿರೇಮಠ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಸಾವಿರಾರು ವರ್ಷಗಳ ಭವ್ಯ ಇತಿಹಾಸ ಕನ್ನಡ ಭಾಷೆಯಾಗಿದೆ. ಕನ್ನಡಕ್ಕಿರುವ ಅಗಾಧ ಶಕ್ತಿ ಮತ್ತೊಂದು ಭಾಷೆಯಲ್ಲಿ ಕಾಣಲು ಸಾಧ್ಯವಾಗುವುದಿಲ್ಲ. ಕನ್ನಡ ಎಂಬುದು ಬರೀ ಭಾಷೆಯಲ್ಲ, ಅದು ಈ ನೆಲದ ಸಂಸ್ಕೃತಿ, ಸಂಸ್ಕಾರ, ಪರಂಪರೆ ಸಾರುವ ಶಕ್ತಿಯಾಗಿದೆ. ಪ್ರತಿಯೊಬ್ಬ ಕನ್ನಡಿಗರಲ್ಲೂ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ, ಸ್ವಾಭಿಮಾನ ಬೆಳೆದು ಬರಬೇಕು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಗೌರವಾಭಿಮಾನ ಮೂಡಿಸುವಲ್ಲಿ ಪಾಲಕ, ಶಿಕ್ಷಕ ಮತ್ತು ಕನ್ನಡಪರ ಸಂಘಟನೆಗಳ ಜವಾಬ್ದಾರಿ ಹೆಚ್ಚಿದೆ. ಯುವ ಜನತೆ ಕನ್ನಡ ನಾಡನ್ನು ಕಾಪಾಡಲು ಇಂದಿನಿಂದಲೇ ಪಣ ತೊಡಬೇಕು. ಕೇವಲ ಬಾಯಿ ಮಾತಿನಿಂದ ಕನ್ನಡ ಉಳಿಸಲು ಸಾಧ್ಯವಿಲ್ಲ. ಕನ್ನಡ ನಮ್ಮ ಉಸಿರಾಗಬೇಕು ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಈಶ್ವರ ಮೆಡ್ಲೇರಿ ಉಪನ್ಯಾಸ ನೀಡಿ, ಎರಡುವರೆ ಸಾವಿರ ವರ್ಷಗಳ ಭವ್ಯ ಇತಿಹಾಸದ ಕನ್ನಡ ಭಾಷೆಗೆ ಸಮನಾದ ಭಾಷೆ ಮತ್ತೊಂದಿಲ್ಲ. ಭಾರತಮಾತೆಯ ಮುಕುಟಮಣಿಯಾಗಿ ಕರ್ನಾಟಕದ ಕೀರ್ತಿ ಎಂದಿಗೂ ರಾರಾಜಿಸುತ್ತದೆ. ಕನ್ನಡ ಸಾಹಿತ್ಯಕ್ಕೆ ಲಕ್ಷ್ಮೇಶ್ವರದ ಕೊಡುಗೆ ಅಪಾರವಾಗಿದ್ದು, ಇಲ್ಲಿನ ಒಂದೊಂದು ಭಾಗವೂ ಒಂದು ಇತಿಹಾಸವನ್ನು ಸಾರುತ್ತಿವೆ ಎಂದರು.

ಈ ವೇಳೆ ಪುರಸಭೆ ಸದಸ್ಯ ರಾಜಣ್ಣ ಕುಂಬಿ, ಪ್ರಕಾಶ ಕೊಂಚಿಗೇರಿಮಠ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ, ರಾಮಣ್ಣ ಲಮಾಣಿ, ರಫೀಕ್ ಕಲಬುರ್ಗಿ, ಮುಖ್ಯಾಧಿಕಾರಿ ಮಹಾಂತೇಶ್ ಬೀಳಗಿ, ತಾ.ಪಂ ಇಒ ಕೃಷ್ಣಪ್ಪ ಧರ್ಮರ, ಪಿಎಸ್‌ಐ ನಾಗರಾಜ ಗಡಾದ, ಹೆಸ್ಕಾಂ ಎಇಇ ಆಂಜನಪ್ಪ, ಎಸ್.ಕೆ. ಜಲರಡ್ಡಿ, ಚಂದ್ರಶೇಖರ ನರಸಮ್ಮನವರ, ಗ್ರೇಡ್-2 ತಹಸೀಲ್ದಾರ ಮಂಜುನಾಥ ಅಮಾಸಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪೂರ, ಕಂದಾಯ ಅಧಿಕಾರಿ ಎಂ.ಎ. ನದಾಫ್, ಶಿರಸ್ತೇದಾರ ಜಮೀರ್ ಮನಿಯಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಇದ್ದರು.

ಶಿಕ್ಷಕರಾದ ಉಮೇಶ ನೇಕಾರ, ಸತೀಶ ಬೋಮಲೆ, ರಾಘವೇಂದ್ರ ಜೋಶಿ, ಎನ್.ಎ. ಮುಲ್ಲಾ ಕಾರ್ಯಕ್ರಮ ನಿರ್ವಹಿಸಿದರು.

ಇದೇ ಸಂದರ್ಭದಲ್ಲಿ ಸಾಧಕರನ್ನು ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಲಾಯಿತು. ಇತ್ತೀಚೆಗೆ ರಾಜ್ಯಮಟ್ಟದ ಕಿತ್ತೂರು ಚನ್ನಮ್ಮ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಲಲಿತಕ್ಕ ಕೆರಿಮನಿ ಮತ್ತು ಕೆಯುಡಬ್ಲ್ಯೂಜೆಯಿಂದ ನೀಡಲಾಗುವ ರಾಜ್ಯಮಟ್ಟದ ಅತ್ಯುತ್ತಮ ಗ್ರಾಮಾಂತರ ವರದಿಗೆ ನೀಡುವ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತರಾಗಿರುವ ಪತ್ರಕರ್ತ ದಿಗಂಬರ ಪೂಜಾರ ಅವರನ್ನು ಗೌರವಿಸಲಾಯಿತು.

ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳಿಸಿ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಕನ್ನಡ ನಮ್ಮ ಮಾತೃಭಾಷೆಯಾಗಿದ್ದು, ಕನ್ನಡ ಭಾಷೆ ಉಳಿಸಿ-ಬೆಳೆಸಲು ಕನ್ನಡದ ಬಗೆಗಿನ ಆಸಕ್ತಿ ಹೆಚ್ಚಾಗಬೇಕು ಎಂದು ಶಿಕ್ಷಕಿ ವಿ.ಎಂ. ಕಂಠಿ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ. 1ರಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ತಾಯಿಗೆ ಇರುವಷ್ಟೇ ಮಹತ್ವ ನಮ್ಮ ಕನ್ನಡ ಭಾಷೆಗೆ ಇರುವುದರಿಂದ, ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಕಳಿಸಬೇಕು. ಕನ್ನಡ ಶಾಲೆಯಲ್ಲಿ ನುರಿತ, ಅನುಭವಿ ಶಿಕ್ಷಕರ ವೃಂದವಿದ್ದು, ಸರ್ಕಾರ ಮಕ್ಕಳಿಗಾಗಿ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಶ್ರಮಿಸುತ್ತಿದೆ ಎಂದರು.

ಶಾಲಾ ಪ್ರಧಾನಗುರು ಪಿ.ಬಿ. ಕೆಂಚನಗೌಡರ, ಎಂ.ಎ. ಮೆಗಲಮನಿ, ಎಂ.ಎ. ಕೊಪ್ಪಳ, ಕೆ.ಎಂ. ಹೆರಕಲ್, ಮಂಜುನಾಥ ಕಲ್ಯಾಣಮಠ, ವೀಣಾ ಟಿ., ಎಸ್.ಎಚ್. ಉಪ್ಪಾರ, ಎಚ್.ಆರ್. ಭಜಂತ್ರಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ರೇಣುಕಾ ಪರ್ವತಗೌಡರ, ಶಭಾನಾ ಡಾಲಾಯತ್, ರಾಧಾ ಬಾತಾಖಾನಿ, ಕವಿತಾ ಬಿನ್ನಾಳ ಇದ್ದರು.

ಸೈನಿಕ ಸಮುದಾಯ ಭವನ, ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಇಂದು

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಮಾಜಿ ಸೈನಿಕರ ಸಂಘದ ನೂತನ ಸೈನಿಕ ಸಮುದಾಯ ಭವನ ಹಾಗೂ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ನವೆಂಬರ್ 2ರಂದು ಮುಂಜಾನೆ 11 ಗಂಟೆಗೆ ಮುಳಗುಂದ ರಸ್ತೆಯ ಆದಿತ್ಯ ನಗರದಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ, ನಿವೃತ್ತ ಸೇನಾಧಿಕಾರಿ ಸುಬೇದಾರ್ ಗೂಳಯ್ಯ ಮಾಲಗಿತ್ತಿಮಠ ಹೇಳಿದರು.

ಸಮುದಾಯ ಭವನದಲ್ಲಿ ಈ ಕುರಿತು ಜರುಗಿದ ಉದ್ಘಾಟನಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ವಿವರಣೆ ನೀಡಿದರು.

ಸಾನಿಧ್ಯವನ್ನು ಓಂಕಾರೇಶ್ವರ ಹಿರೇಮಠದ ಪೂಜ್ಯ ಫಕೀರೇಶ್ವರ ಪಟ್ಟಾಧ್ಯಕ್ಷರು ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಸಮುದಾಯ ಭವನವನ್ನು ಉದ್ಘಾಟಿಸುವರು. ಘನ ಅಧ್ಯಕ್ಷತೆಯನ್ನು ನಿವೃತ್ತ ವಾಯು ಸೇನಾಧಿಕಾರಿ ಏರ್ ಕಮಾಂಡರ್ ಸಿ.ಎಸ್. ಹವಲ್ದಾರ ವಹಿಸುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಜಿ.ಬಿ. ಮಾಲಗಿತ್ತಿಮಠ ವಹಿಸುವರು.

ಮುಖ್ಯ ಅತಿಥಿಗಳಾಗಿ ವಿ.ಪ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಬಸವರಾಜ ಬೊಮ್ಮಾಯಿ, ಸರ್ಕಾರದ ಮುಖ್ಯ ಸಚೇತಕ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಆಗಮಿಸುವರು. ವಿಶೇಷ ಆಹ್ವಾನಿತರಾಗಿ ಗಣ್ಯರಾದ ಅರವಿಂದ ಶಿಗ್ಗಾಂವಿ, ಸುಧೀಂದ್ರ ಇಟ್ನಾಳ, ಭುವನ್ ಖರೆ, ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಟಿ.ಎಸ್. ಪಾಟೀಲ, ಬಸವರಾಜ ನಿಂಗನಗೌಡರ, ಶಿವಲೀಲಾ ಭಾವಿಕಟ್ಟಿ ಆಗಮಿಸುವರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಕಾರ್ಯದರ್ಶಿ ಸಿ.ಜಿ. ಸೊನ್ನದ, ಖಜಾಂಚಿ ಎಸ್.ಎಫ್. ಹೊನ್ನಪ್ಪನವರ, ಸಂಘಟನಾ ಕಾರ್ಯದರ್ಶಿ ಈರಣ್ಣ ತಳ್ಳಿಕೇರಿ, ಮಹಮ್ಮದ್ ಹನೀಫ್ ಶೇಖಬಾಯಿ, ಲಲಿತಾ ಕುರಹಟ್ಟಿ, ಶರಣಪ್ಪ ಸರ್ವಿ, ವೀರಪ್ಪ ಬಿಂಗಿ, ಶಿವಲೀಲಾ ಭಾವಿಕಟ್ಟಿ, ಕೆ.ಎಸ್. ಹಿರೇಮಠ, ಎಸ್.ಎಸ್. ವಡ್ಡಿಣ, ಬಸವನಗೌಡ ಪಾಟೀಲ ಮುಂತಾದವರಿದ್ದರು.

ಅತಿಥಿಗಳಾಗಿ ಅನುಸೂಯಾ ಬೆಟಗೇರಿ, ಕಿರಣಕುಮಾರ ಕೋಪರ್ಡೆ, ಶಾಂತವ್ವ ಭಜಂತ್ರಿ, ವಿದ್ಯಾ ಕೆ., ಜಿ.ಸಿ. ರೇಶ್ಮಿ, ಕೇಶವ ದೇವಾಂಗ ಆಗಮಿಸುವರು. ಮಾಜಿ ಸೈನಿಕರ ಸಂಘಟನೆಯೊಂದು ಈ ರೀತಿಯ ಸೈನಿಕ ತರಬೇತಿ ಕೇಂದ್ರ/ಸಮುದಾಯ ಭವನ ನಿರ್ಮಿಸಿರುವುದು ರಾಜ್ಯದಲ್ಲಿಯೇ ಪ್ರಥಮ ಎಂಬ ಹೆಗ್ಗಳಿಕೆಗೆ ಗದಗ ಜಿಲ್ಲೆ ಪಾತ್ರವಾಗಿದೆ. ಈ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಇತರ ಚುನಾಯಿತ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಜೊತೆಗೆ ಮಾಜಿ ಸೈನಿಕರು, ವೀರನಾರಿಯರು ಉದಾರ ದೇಣಿಗೆ ನೀಡಿದ್ದಾರೆ ಎಂದು ಜಿ.ಬಿ. ಮಾಲಗಿತ್ತಿಮಠ ಮಾಹಿತಿ ನೀಡಿದರು.

ಕನ್ನಡದ ಬಗ್ಗೆ ಹೆಮ್ಮೆ ಬೆಳೆಸಿಕೊಳ್ಳಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಹೊಸ ಬಸ್ ನಿಲ್ದಾಣದ ಎದುರು ಲಕ್ಷ್ಮೇಶ್ವರ ತಾಲೂಕು ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಸ್.ಎಫ್. ಆದಿ ಅವರು ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಕನ್ನಡ ನಾಡು-ನುಡಿಯ ಬಗ್ಗೆ ಎಲ್ಲರೂ ಹೆಮ್ಮೆ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆ ನಮ್ಮ ಹೃದಯಭಾಷೆಯಾಗಿರಲಿ; ತೋರಿಕೆಗಾಗಿ ಕನ್ನಡದ ಅಭಿಮಾನ ಬೇಡ. ಕನ್ನಡಕ್ಕೆ ಅಪಾರ ಮಹತ್ವವಿದ್ದು, ಅನೇಕ ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ಸಾಹಿತಿಗಳು ಪಡೆದುಕೊಂಡಿದ್ದಾರೆ. ಅನೇಕ ಮಹನೀಯರು ಕನ್ನಡ ನಾಡಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪಣತೊಡಬೇಕು,” ಎಂದು ಹೇಳಿದರು.

ಕರವೇ ತಾಲೂಕಾಧ್ಯಕ್ಷ ಲೋಕೇಶ ಸುತಾರ ಮಾತನಾಡಿ, “ಕನ್ನಡ ರಕ್ಷಣಾ ವೇದಿಕೆಯವರು ಕನ್ನಡ, ನಾಡು-ನುಡಿ, ಜಲ-ನೆಲಕ್ಕಾಗಿ ಸದಾ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ನಮ್ಮವರೇ ಶತ್ರುಗಳಾಗಿ ಪರಿಣಮಿಸುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹದಿಂದ ಕನ್ನಡವನ್ನು ಮರೆತಿರುವುದು ನೋವುಂಟುಮಾಡುವ ವಿಷಯ. ಕನ್ನಡ ನಾಡಿನಲ್ಲಿ ಕನ್ನಡಿಗನೇ ಸಾರ್ವಭೌಮನಾಗಿದ್ದು, ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೆ ಬರಬೇಕೆನ್ನುವದು ಕರವೇ ಬೇಡಿಕೆಯಾಗಿದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರವೀಣ ಗಾಣಿಗೇರ, ಗಂಗಾಧರ ಕರ್ಜೆಕಣ್ಣವರ, ಈರಣ್ಣ ಶಿಗ್ಲಿ, ಅರುಣ ಮೆಕ್ಕಿ, ಗಂಗಾಧರ ಕೊಂಚಿಗೇರಿಮಠ, ಆದೇಶ ಸವಣೂರ, ಆಶೀಪ್ ಗುತ್ತಲ್, ಜಾಹೀರ್ ಮೊಮಿನ್, ವೀರೇಶ ಸಾಸಲವಾಡ, ಕುಮಾರ ಕಣವಿ, ಪ್ರವೀಣ ಮುದಗಲ್, ವುಳವೇಶ ಪಾಟೀಲ, ವಿನಯ ಹಿರೇಮಠ, ಸಾವಿತ್ರಿ ಅತ್ತಿಗೇರಿ, ವಿಜಯಕುಮಾರ ಮುಂತಾದವರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಕನ್ನಡದ ತೇರು

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಲಕ್ಷ್ಮೇಶ್ವರ ಸಾರಿಗೆ ಘಟಕದ ಹಲವು ಬಸ್ಸುಗಳು ಹಳದಿ-ಕೆಂಪು ಬಣ್ಣದೊಂದಿಗೆ ಅಲಂಕಾರಗೊಂಡಿದ್ದವು. ವಿಶೇಷವಾಗಿ ಘಟಕದ ಚಾಲಕ ಎನ್.ಜಿ. ಬೇನಾಳ ಅವರು ತಾವು ಚಾಲನೆ ಮಾಡುವ ಬಸ್ಸನ್ನು ಸಂಪೂರ್ಣವಾಗಿ ಕನ್ನಡದ ತೇರನ್ನಾಗಿಸಿದ್ದರು.

ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಕೆಂಪು-ಹಳದಿ ಬಲೂನ್, ರಿಬ್ಬನ್, ಬಾಳೆಕಂಬ ತಳಿರು-ತೋರಣಗಳಿಂದ ಸಿಂಗರಿಸಿದ್ದರು. ಬಸ್‌ನಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ, ಕನ್ನಡ ಕವಿಗಳ, ಸಾಹಿತಿಗಳ ಭಾವಚಿತ್ರಗಳು, ಅಲ್ಲದೆ ಬಸ್‌ನ ಸೀಟುಗಳನ್ನು ಕೆಂಪು-ಹಳದಿ ಬಣ್ಣ ಕಾಣುವಂತೆ ಸಿಂಗರಿಸಿದ್ದರು. ಬಸ್ಸಿನ ಅಲಂಕಾರಕ್ಕೆ ಕುಟುಂಬಸ್ಥರೂ ಸಹಕಾರ ನೀಡಿದರು.

ಚಾಲಕರ ಈ ಕನ್ನಡ ಪ್ರೀತಿಗೆ ಘಟಕ ವ್ಯವಸ್ಥಾಪಕರಾದ ಸವಿತಾ ಆದಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಯಾಣಿಕರು ಬಸ್ಸಿನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಘಟಕದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಡಿ.ಎಚ್. ಸೊರಟೂರ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು.

ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ವಯೋಮಾನದ ಹಂಗಿಲ್ಲ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ವ್ಯಕ್ತಿ ತನ್ನಲ್ಲಿನ ಕ್ರೀಡಾ ಸಾಮರ್ಥ್ಯ ಪ್ರದರ್ಶಿಸಲು ಅವನಿಗೆ ವಯಸ್ಸಿನ ಯಾವುದೇ ಮಿತಿ ಅಡ್ಡ ಬರುವುದಿಲ್ಲ. ಅವನಲ್ಲಿ ಮನೋ ಸಾಮರ್ಥ್ಯವಿದ್ದರೆ ಆತ ಯಾವಾಗ ಬೇಕಾದರೂ ತನ್ನಲ್ಲಿನ ಕ್ರೀಡಾ ಸಾಮರ್ಥ್ಯವನ್ನು ಪ್ರದರ್ಶಿಸಬಹುದು ಎಂದು ಅಬ್ಬಿಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುರುನಾಥ ಅವರೆಡ್ಡಿ ಹೇಳಿದರು.

ಸಮೀಪದ ಅಬ್ಬಿಗೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಅಬ್ಬಿಗೇರಿ ಇವರ ಸಂಯುಕ್ತ ಆಶ್ರಯದಲ್ಲಿ ರೋಣ-ಗಜೇಂದ್ರಗಡ ತಾಲೂಕಿನ 45 ವರ್ಷ ಮೇಲ್ಪಟ್ಟ ಲೆಜೆಂಡ್ಸ್ ಆಟಗಾರರ ಟೂರ್ನಿಯ ನಿಮಿತ್ತ ಅಬ್ಬಿಗೇರಿ ಲೆಜೆಂಡ್ಸ್ ತಂಡದ ಆಟಗಾರರಿಗೆ ಜರ್ಸಿ ವಿತರಣೆ ಮಾಡಿ ಅವರು ಮಾತನಾಡಿದರು.

ಜಿ.ಪಂ. ಮಾಜಿ ಸದಸ್ಯ ಸೋಮಣ್ಣ ಹರ್ಲಾಪೂರ ಮಾತನಾಡಿ, ಕ್ರೀಡೆಗಳು ಸಾಮಾಜಿಕ ಬೆಳವಣಿಗೆಗೆ ಸಹಾಯಕವಾಗುತ್ತವೆ. ನಲವತ್ತೆತ್ತರದ ನಂತರವೂ ವ್ಯಕ್ತಿ ತಾನು ಇಚ್ಛಿಸಿದ ಆಟಗಳಲ್ಲಿ ಪಾಲ್ಗೊಂಡು ಸಂತೋಷಪಡಬಹುದು ಎಂಬುದನ್ನು ಈ ಟೂರ್ನಿ ಸಾಬೀತುಪಡಿಸಲಿದೆ ಎಂದರು.
ಈ ವೇಳೆ ಡಾ. ಆರ್.ಬಿ. ಬಸವರಡ್ಡೇರ, ಸಂಜಯ್ ರಡ್ಡೇರ, ಬಸವರಾಜ ಬಾರಕೇರ, ದೇವಪ್ಪ ಅಸುಂಡಿ, ಬಸವರಾಜ ಪಲ್ಲೇದ, ಸುರೇಶ ಬಸವರಡ್ಡೇರ, ಅಂದಪ್ಪ ವೀರಾಪೂರ, ಸುರೇಶ ಶಿರೋಳ, ಉಮೇಶ ಅವರೆಡ್ಡಿ, ಶರಣು ಯಲ್ಲಿರೆಡ್ಡಿ, ಅಂದಪ್ಪ ನೀರಲೋಟಿ, ರಾಜು ಬೆಂಗಳೂರಶೆಟ್ಟ್ರ, ಚರಂತಯ್ಯ ಬೆನಹಾಳ, ಶೇಖಪ್ಪ ಜುಟ್ಲ, ಮಳ್ಳಪ್ಪ ದ್ವಾಸಲ್, ರಫೀಕ್ ರೇವಡಿ, ಚಂದ್ರು ಅಕ್ಕಸಾಲಿ, ಸಂಜಯ್‌ಶಾಸ್ತ್ರೀ, ಉಮೇಶ ಶಿರೋಳ, ಜಗದೀಶ ಶಿರೋಳ, ಮಹೇಶ ಹರ್ಲಾಪೂರ ಇನ್ನಿತರರಿದ್ದರು.

70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಸಾಧಕರಿಗೆ ಸನ್ಮಾನ

0

ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ 70ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.

ಆಕರ್ಷಕ ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ನಾಯಕತ್ವವನ್ನು ಲಷ್ಟಪ್ಪ ತಳವಾರ ವಹಿಸಿದ್ದರು. ನಾಗರಿಕ ಪೊಲೀಸ್ ಪಡೆಯ ನೇತೃತ್ವವನ್ನು ಸುಭಾಷ ಪಾಟೀಲ, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಮಂಜುನಾಥ ಮೇಲ್ಮನಿ, ಅಬಕಾರಿ ಇಲಾಖೆಯ ಆಶಾರಾಣಿ, ಅರಣ್ಯ ಪಡೆಯ ಸಚಿನ್ ಬಿಸನಹಳ್ಳಿ, ಎನ್‌ಸಿಸಿ ಸೀನಿಯರ್ ಬಾಯ್ಸ್ ದಳದ ನೇತೃತ್ವವನ್ನು ಆಕಾಶ್ ಎಸ್.ಕೆ., ಸೇವಾದಳದ ನೇತೃತ್ವವನ್ನು ಎಸ್.ಎಂ. ಕೃಷ್ಣಾ ಪ್ರೌಢಶಾಲೆಯ ಆಯೇಶಾ, ವಿ.ಡಿ.ಎಸ್ ಗರ್ಲ್ಸ್ ಹೈಸ್ಕೂಲ್ ನೇತೃತ್ವವನ್ನು ಆಕಾಂಕ್ಷಾ, ಸೇಂಟ್ ಜಾನ್ ಪ್ರಾಥಮಿಕ ಶಾಲೆಯ ಪವನ ವಡವಳ್ಳಿ, ಮಾಜಿ ಸೈನಿಕ ತಂಡದ ಬಸವರಾಜ ಮುಂಡರಗಿ, ಎಸ್.ಎಂ. ಕೃಷ್ಣ ಪ್ರಾಥಮಿಕ ಶಾಲೆಯ ಮುಸ್ಕಾನ್ ಬಾನು, ಕೆವಿಎಸ್‌ಆರ್ ಪ್ರೌಢಶಾಲೆಯ ಸ್ಪಂದನಾ, ಸೇಂಟ್ ಜಾನ್ ಬಾಲಕರ ಪ್ರೌಢಶಾಲೆಯ ಪವನ ಸಿಂಗ ದೊಡ್ಡಮನಿ, ಎನ್‌ಸಿಸಿ ಸೀನಿಯರ್ ಗರ್ಲ್ಸ್ ತಂಡದ ನೇತೃತ್ವವನ್ನು ಸ್ಪೂರ್ತಿ ಅವರು ವಹಿಸಿದ್ದರು.

ಪಥಸಂಚಲನದಲ್ಲಿ ಇಲಾಖಾವಾರು ನಗರದ ಅಗ್ನಿಶಾಮಕ ಘಟಕ, ಅಬಕಾರಿ ತಂಡ, ಗೃಹ ರಕ್ಷಕ ದಳ, ಶಾಲಾವಾರು ಎಸ್.ಎಂ. ಕೃಷ್ಣ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಟಗೇರಿಯ ಸೇಂಟ್ ಜಾನ್ ಬಾಲಕರ ಪ್ರೌಢಶಾಲೆ, ವಿ.ಡಿ.ಎಸ್.ಟಿ. ಬಾಲಕಿಯರ ಪ್ರೌಢಶಾಲೆಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದರು. ಸ್ತಬ್ಧಚಿತ್ರ ಪ್ರದರ್ಶನದಲ್ಲಿ 9 ಇಲಾಖೆಯ ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದು, ಆ ಪೈಕಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ, ಕೆಎಸ್‌ಆರ್‌ಟಿಸಿ ದ್ವಿತೀಯ ಹಾಗೂ ಶಿಕ್ಷಣ ಇಲಾಖೆ ತೃತೀಯ ಸ್ಥಾನ ಪಡೆದರು.

ಪತ್ರಿಕೋದ್ಯಮ/ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕಾಗಿ ವೆರಿಗುಡ್ ಮಾರ್ನಿಂಗ್ ದಿನಪತ್ರಿಕೆಯ ದೇವಪ್ಪ ಲಿಂಗಧಾಳ, ಉತ್ತರ ಪ್ರಭಾ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕಿ ಲಕ್ಷ್ಮೀಬಾಯಿ ರವಿಕಾಂತ ಅಂಗಡಿ, ಮುಳಗುಂದದ ವಿಜಯ ಕರ್ನಾಟಕ ವರದಿಗಾರ ವೀರಪ್ಪ ಸಿದ್ದನಗೌಡ, ಗಜೇಂದ್ರಗಡ ತಾಲೂಕು ಉದಯವಾಣಿ ವರದಿಗಾರ ಡಿ.ಜಿ. ವೋಮಿನ್, ಲಕ್ಷ್ಮೇಶ್ವರ ತಾಲೂಕು ವಿಜಯವಾಣಿ ವರದಿಗಾರ ಮಲ್ಲು ಕಳಸಾಪುರ, ನರಗುಂದ ತಾಲೂಕು ಸಂಯುಕ್ತ ಕರ್ನಾಟಕ ವರದಿಗಾರ ಉಮೇಶ ಬೋಳಶೆಟ್ಟಿ, ಶಿರಹಟ್ಟಿ ತಾಲೂಕು ಸಂಜೆವಾಣಿ ವರದಿಗಾರ ಪ್ರಕಾಶ ಮೇಟಿ, ರೋಣ ತಾಲೂಕು ಹೊಳೆ ಆಲೂರ ಹೋಬಳಿ ವಿಜಯವಾಣಿ ವರದಿಗಾರ ವೀರಯ್ಯ ವಸ್ತಾದ, ಮುಂಡರಗಿ ತಾಲೂಕು ಉದಯವಾಣಿ ವರದಿಗಾರ ಹು.ಬಾ. ವಡ್ಡಟ್ಟಿ, ವಿಶ್ವವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಮಾಳಿಂಗರಾಯ ಪೂಜಾರ, ಹಸಿರು ಕ್ರಾಂತಿ ಜಿಲ್ಲಾ ವರದಿಗಾರ ಮೌನೇಶ ಬಡಿಗೇರರನ್ನು ಸನ್ಮಾನಿಸಲಾಯಿತು.

ಕ್ರೀಡೆ ಮತ್ತು ಶಿಕ್ಷಣ ವಿಭಾಗದಲ್ಲಿ – ಮುಂಡರಗಿ ತಾಲೂಕು ಮುರಡಿ ತಾಂಡಾದ ರಮೇಶ ಬೂದಿಹಾಳ, ಗದಗ ಎ.ಎಸ್.ಎಸ್. ಕಾಮರ್ಸ್ ಕಾಲೇಜಿನ ಗುರುಪ್ರಸಾದ ಸೊನ್ನದ, ಜೆ.ಟಿ. ಕಾಲೇಜಿನ ಜ್ಞಾನೇಶ್ವರ ಗಾಯಕವಾಡ, ಗೊಜನೂರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪುನೀತ್ ರೆಡ್ಡಿ, ಹುಲಕೋಟಿಯ ರಾಜೇಶ್ವರಿ ವಿದ್ಯಾನಿಕೇತನದ ಶ್ರೀನಿವಾಸ ಆರ್. ಗುಳಗಂದಿ, ಸಂಭ್ರಮ ವಿ. ವಜ್ಜರಮಟ್ಟಿ, ಕೃಪಾ ರೊಟ್ಟಿಗವಾಡ, ನಿಖಿತಾ ವಿ. ಹೆಬಸೂರು, ರೋಶನಿ ಬಹದ್ದೂರಬಂಡಿ, ಗದಗ ಕ್ರೀಡಾ ವಸತಿ ನಿಲಯದ ಭಾಗ್ಯಾ ಕುಬೇರಪ್ಪ ಮೇಲ್ಮನಿ, ವೀರೇಶಯಲ್ಲಪ್ಪ ಶಿವಾನಂದ ಯಲಪ್ಪ, ಅರ್ಚನಾ ಫಕೀರಗೌಡ ಹಟ್ಟಿ, ಮುಳಗುಂದದ ಯಮನೂರಸಾಬ ದೊಡ್ಡಮನಿ, ಸಂಗಮೇಶ ಸಜ್ಜನ, ಹಿರೇಕೊಪ್ಪದ ದೀಪಾ ದಪ್ತಾರದಾರರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಚಿ, ಜಿಲ್ಲಾ ಮಟ್ಟದ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದು ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಎಸಿ ಗಂಗಪ್ಪ ಎಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು, ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಲೆ, ಸಾಹಿತ್ಯ, ಸಾಮಾಜಿಕ, ಆಡಳಿತ, ಕೃಷಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದಲ್ಲಿ – ಗದಗ ನ್ಯಾಯಾಂಗ ಇಲಾಖೆಯ ನಿವೃತ್ತ ನೌಕರ ಎ.ಎಸ್. ಮಕಾನದಾರ, ವಿವೇಕಾನಂದ ನಗರದ ಜ್ಯೋತಿ ಎಂ. ಲೋಣಿ, ಮೌಲಾನಾ ಅಲ್ಲಾಭಕ್ಷ್ ಹುಸೇನಸಾಬ ಪಲ್ಲೇದ, ಮುಂಡರಗಿ ತಾಲೂಕಿನ ನಾಗರಹಳ್ಳಿಯ ಬ್ರಹ್ಮಾನಂದ ಕಲಕೇರಿ, ದೇವೇಂದ್ರಪ್ಪ ಬಡಿಗೇರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರಡಿ, ಜಿಲ್ಲಾ ಪೊಲೀಸ್ ಕಾರ್ಯಾಲಯದ ಆರ್.ಎಸ್.ಐ. ಗುರುರಾಜ ಮಹಾದೇವಪ್ಪ ಬೂದಿಹಾಳರನ್ನು ಸನ್ಮಾನಿಸಲಾಯಿತು.

ಕನ್ನಡದ ಉಳಿವಿಗೆ ಹೋರಾಡೋಣ: ರಹಮಾನ ನಮಾಜಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ದೇಶದಲ್ಲಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇಂತಹ ಕನ್ನಡ ಭಾಷೆಯನ್ನು ಎಲ್ಲರೂ ಉಳಿಸಿ-ಬೆಳೆಸುವ ಜತೆಗೆ, ಕನ್ನಡ ನಾಡಿನ ನೆಲ, ಜಲ, ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಬಂದಾಗ ಎಲ್ಲರೂ ಹೋರಾಡಬೇಕಿದೆ ಎಂದು ರಹಮಾನ ನಮಾಜಿ ಹೇಳಿದರು.

ಡಂಬಳ ಗ್ರಾಮದ ಬಸವೇಶ್ವರ ವೃತ್ತದ ಬಳಿ ಶ್ರೀ ಬಸವೇಶ್ವರ ಆಟೋ ಚಾಲಕರ ಸಂಘದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಮೇಶ ಬಚನಳ್ಳಿ, ಕಾಳಿಂಗ ಒಂಟಲಭೋವಿ ಮಾತನಾಡಿ, ಕನ್ನಡ ಸಾಹಿತ್ಯ ಅತ್ಯಂತ ಶ್ರೀಮಂತವಾಗಿದ್ದು, ಕನ್ನಡ ಸಾಹಿತ್ಯಕ್ಕೆ ಈವರೆಗೂ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಕನ್ನಡದ ಏಕೀಕರಣಕ್ಕಾಗಿ ಸಾಕಷ್ಟು ಸಾಹಿತಿಗಳು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಣೆ ಮಾಡುವದರೊಂದಿಗೆ ಅವರ ಹೋರಾಟ ನಮಗೆ ದಾರಿದೀಪವಾಗಬೇಕಿದೆ ಎಂದು ಹೇಳಿದರು.

ಮುತ್ತು ಕರವೀರಮಠ, ಮಹಬೂಬ ಅತ್ತಾರ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ. ಕನ್ನಡದ ಮೇರು ಕೃತಿಗಳನ್ನು ಹೆಚ್ಚು ಓದಬೇಕು. ಕನ್ನಡ ಪದಗಳನ್ನು ಹೆಚ್ಚು ಬಳಸಿದಾಗ ಭಾಷೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಟೋ ಚಾಲಕರಾದ ವಿನಾಯಕ ಕಾಡಸಿದ್ದೇಶ್ವರಮಠ, ರಂಗಪ್ಪ ಒಂಟಲಭೋವಿ, ಚೇತನ ಕಾಡಸಿದ್ದೇಶ್ವರಮಠ, ಬಾಬುಸಾಬ ದೌಲತ್ತದಾರ, ನಾಶೀರ ಅತ್ತಾರ ಮುಂತಾದವರಿದ್ದರು.

error: Content is protected !!