Home Blog Page 2

ಬೈರಮಂಗಲ, ಕಂಚುಗಾರನಹಳ್ಳಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ; ಸಿಎಂ ಡಿಕೆ ಶಿವಕುಮಾರ್ʼಗೆ ಬಿಡದಿ ರೈತರ ಮನವಿ

0

ಬೆಂಗಳೂರು: “ನಮಗೆ ರೆಡ್ ಜೋನ್ ನಿಂದ ಮುಕ್ತಿ ಬೇಕು. ಬಿಡದಿ ಟೌನ್ ಶಿಪ್ ಗೆ ನಮ್ಮ ಭೂಮಿ ನೀಡಲು ಸಿದ್ಧರಿದ್ದೇವೆ. ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿ ನಮ್ಮ ಸಂಕಷ್ಟಕ್ಕೆ ನೆರವಾಗಬೇಕು” ಎಂದು ಬಿಡದಿಯ ಸುತ್ತಮುತ್ತಲ ರೈತರ ನಿಯೋಗ ಇಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗವು ರೆಡ್ ಜೋನ್ ನಿಂದ ತಮಗಾಗಿರುವ ಕಷ್ಟ ವಿವರಿಸಿದರು. ತಕ್ಷಣವೇ ಅದನ್ನು ತೆಗೆದು ಹಾಕಿ ಎಂದು ಒತ್ತಾಯಿಸಿದರು. ಯಾರದೋ ರಾಜಕೀಯ ಆಟಕ್ಕೆ ನಾವು ಬಲಿ ಆಗುತ್ತಿದ್ದೇವೆ. ನಾವು ಜಮೀನು ಕೊಡಲು ಸಿದ್ಧ. ತಕ್ಷಣವೇ ಪರಿಹಾರ ಕೊಡಿ ಎಂದು ಮನವಿ ಮಾಡಿದರು. ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಹಲವು ಬಾರಿ ಮನವಿ ಮಾಡಿದ್ದರೂ ಅವರು ಸ್ಪಂದಿಸಲಿಲ್ಲ. ನೀವಾದರೂ ನಮ್ಮ ಕಷ್ಟ ಬಗೆಹರಿಸಿ ಎಂದು ಮನವಿ ಮಾಡಿದರು.

ಬೈರಮಂಗಲ ಗ್ರಾಮದ ಸುನೀಲ್ ಎಂಬುವವರು ಮಾತನಾಡಿ, “ಕಳೆದ 20 ವರ್ಷಗಳಿಂದ ನಾವು ರೆಡ್ ಜೋನ್ ನಿಂದ ಸಂಕಷ್ಟ ಅನುಭವಿಸಿದ್ದೇವೆ. ಅಲ್ಲಿ ವೃಷಭಾವತಿ ಕೊಳಚೆ ನೀರಿನಿಂದ ವ್ಯವಸಾಯ ಕಷ್ಟವಾಗಿದೆ. ಅಲ್ಲಿ ಕೆಲವು ಭಾಗದಲ್ಲಿ ತೆಂಗಿನ ತೋಟ ಮೇಲುನೋಟಕ್ಕೆ ಹಸಿರಾಗಿ ಕಾಣಬಹುದು ಆದರೆ, ಇಳುವರಿ ಬರುತ್ತಿಲ್ಲ.

ಕುಡಿಯುವ ಹಾಲು ಕೂಡ ಕಲುಷಿತಗೊಂಡಿದೆ. ರೆಡ್ ಜೋನ್ ಮಾಡಿರುವುದರಿಂದ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಆಸ್ಪತ್ರೆ, ಕಲ್ಯಾಣಮಂಟಪ ನಿರ್ಮಾಣ ಸಾಧ್ಯವಿಲ್ಲ. ನಮ್ಮ ಪಕ್ಕದ ಊರುಗಳಲ್ಲಿ ಬ್ಯಾಂಕ್ ನಲ್ಲಿ ಜಮೀನಿಗೆ 1 ಕೋಟಿವರೆಗೆ ಸಾಲವ ಕೊಟ್ಟರೆ ನಮಗೆ 1ಲಕ್ಷರೂಪಾಯಿ ಕೂಡ ಸಾಲ ಸಿಗುತ್ತಿಲ್ಲ. ನಮಗೆ ಮದುವೆ ಹಾಗೂ ಕಷ್ಟಕಾಲದಲ್ಲಿ ನಮ್ಮ ಜಮೀನು ಮಾರಲು ಆಗುತ್ತಿಲ್ಲ. ಇವೆಲ್ಲವೂ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿ ಅವರ ಕೊಡುಗೆ. ಹೀಗಾಗಿ ನಮಗೆ ಈ ಸಮಸ್ಯೆಗಳಿಂದ ಮುಕ್ತಿ ದೊರಕಿಸಬೇಕು” ಎಂದು ಮನವಿ ಮಾಡಿದರು.

“ನಮ್ಮಲ್ಲಿ ಕೊಳಚೆ ನೀರಿನ ವಾಸನೆ, ಸೊಳ್ಳೆಗಳ ಕಾಟದಿಂದ ನೆಮ್ಮದಿ ಜೀವನ ನಡೆಸಲು ಆಗುತ್ತಿಲ್ಲ. ನಮಗೆ ಹಣ ಬೇಡ, ನಾವು ಈ ಯೋಜನೆಯಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆದು, ಯೋಜನೆಯ ಪಾಲುದಾರರಾಗುತ್ತೇವೆ” ಎಂದು ತಿಳಿಸಿದರು. “ನಾವು ಜೆಡಿಎಸ್ ಕಾರ್ಯಕರ್ತರೆ, ಅಭಿವೃದ್ಧಿ ಮೊದಲು, ಪಕ್ಷ ಆಮೇಲೆ. ನಮಗೆ ಟೌನ್ ಶಿಪ್ ಯೋಜನೆ ಬೇಕು. ಅಲ್ಲಿ ಹೋರಾಟ ಮಾಡುತ್ತಿರುವವರು ಬೇರೆ ಕ್ಷೇತ್ರಗಳಿಂದ ಕರೆ ತಂದಿರುವ ಪಕ್ಷದ ಕಾರ್ಯಕರ್ತರು. ನಮ್ಮಲ್ಲಿ ಬಹುತೇಕ ಜನರು ಟೌನ್ ಶಿಪ್ ಯೋಜನೆಗೆ ಭೂಮಿ ನೀಡಲು ಸಿದ್ಧರಿದ್ದಾರೆ” ಎಂದು ವಿವರಿಸಿದರು.

ಯಾಲಕ್ಕಿ ಗೌಡ ಎಂಬ ಹಿರಿಯ ನಾಗರಿಕರು ಮಾತನಾಡಿ, “ನನಗೆ 80 ವರ್ಷ, ಕಳೆದ 40 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿದ್ದೆ. ಕಳೆದ 20 ವರ್ಷಗಳಿಂದ ನಮ್ಮ ಭಾಗವನ್ನು ರೆಡ್ ಜೋನ್ ನಿಂದ ಮುಕ್ತಿಗೊಳಿಸಿ ಎಂದು ಮನವಿ ಮಾಡಿದೆವು. ಆದರೆ ಕುಮಾರಸ್ವಾಮಿ ಅವರು ಮನಸ್ಸು ಮಾಡಲಿಲ್ಲ. ಅವರ ಉದ್ದೇಶ ನಮಗೆ ತಿಳಿಯುತ್ತಿಲ್ಲ. ನಮ್ಮಲ್ಲಿ ಕೇವಲ 1 ಲಕ್ಷಕ್ಕೆ ಜಮೀನು ಕಳೆದುಕೊಂಡವರನ್ನು ನೋಡಿದ್ದೇನೆ. ಎಲ್ಲರ ಬದುಕು ಅದ್ವಾನ ಆಗೋಗಿದೆ. ಈಗ ಈ ಪುಣ್ಯಾತ್ಮ ಡಿ.ಕೆ. ಶಿವಕುಮಾರ್ ಅವರ ಸರ್ಕಾರ ಎಲ್ಲವನ್ನೂ ಸರಿ ಮಾಡಲು ಮುಂದಾಗಿದೆ. ಈಗ ಇವರು ಇಲ್ಲದ ಕಾರಣ ಹುಡುಕಿ, ಕೆದಕಿ ತಕರಾರು ಮಾಡುತ್ತಿದ್ದಾರೆ. ಅವರು ಗೌಡರೇ, ಇವರೂ ಗೌಡರೇ, ನಾವು ಗೌಡರೇ ಆದರೆ ಕುಮಾರಣ್ಣನಿಗೆ ಎಲ್ಲರೂ ಚೆನ್ನಾಗಿರಬೇಕು ಎಂಬ ಆಸೆ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಈ ವಿಚಾರದಲ್ಲಿ ಚರ್ಚೆ ಮಾಡಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರನ್ನು ವಿಧಾನಸೌಧಕ್ಕೆ ಕರೆದರು. ಅಲ್ಲಿ ಚರ್ಚೆಗೆ ಹೋಗದೇ ಕುಮಾರಸ್ವಾಮಿ ಅವರು ಸಿಎಂ ಶಿವಕುಮಾರ್ ಅವರನ್ನು ಬೈರಮಂಗಲಕ್ಕೆ ಕರೆದರು. ಅಲ್ಲಿ ಪರ ಇರೋರು ವಿರೋಧ ಇರೋರು, ಹೊಡೆದಾಡಿಕೊಂಡರೆ ಗೋಲಿಬಾರ್ ಮಾಡುವ ಪಿತೂರಿ ಇದರ ಹಿಂದೆ ಇತ್ತು. ಇದನ್ನು ಅರಿತು ನಾವು ಸಿಎಂ ಅವರಿಗೆ ದಯಮಾಡಿ ನೀವು ಚರ್ಚೆಗೆ ಬರಬೇಡಿ ಎಂದು ಮನವಿ ಮಾಡಿಕೊಂಡೆವು” ಎಂದು ತಿಳಿಸಿದರು.

ಯುವ ರೈತ ಹರೀಶ್ ರೆಡ್ಡಿ ಅವರು” ರೈತರ ಹಿತ ಕಾಪಾಡುವ ದೊಡ್ಡ ಮನಸ್ಸು ಕುಮಾರಸ್ವಾಮಿ ಅವರಿಗಿದ್ದಿದ್ದರೆ ರೆಡ್ ಜೋನ್ ಮಾಡುತ್ತಿರಲಿಲ್ಲ. ರೆಡ್ ಜೋನ್ ಅನ್ನು ತೆಗೆದು ಬಿಡಿ ಎಂದು ನಾವೆಲ್ಲಾ ಅವರ ಮನೆಗೆ ಹೋಗಿ ಎಲ್ಲ ರೀತಿಯಲ್ಲೂ ಮನವಿಮಾಡಿದರೂ ನಮ್ಮ ಮಾತಿಗೆ ಕಿಮ್ಮತ್ತು ನೀಡಲಿಲ್ಲ. ಬಿಡಿದಿ ಟೌನ್ ಶಿಪ್ ನನ್ನ ಕನಸಿನ ಕೂಸು ಅಂತ ಅವರೇ ಹೇಳಿಕೊಂಡಿದ್ದಾರೆ. ಈಗ ನಮ್ಮ ಪಾಲಿಗೆ ಪಾಪದ ಕೂಸಾಗಿದೆ. ಬೆಂಗಳೂರು ಸುತ್ತಮುತ್ತಲಿನ ಇತರೆ ಎಲ್ಲಾ ಪ್ರದೇಶಗಳನ್ನು ಗಮನಿಸಿ. ಎಲ್ಲವೂ ಶರವೇಗದಲ್ಲಿ ಅಭಿವೃದ್ಧಿಗೊಂಡಿವೆ, ಗೊಳ್ಳುತ್ತಿವೆ. ಆದರೆ, ಬಿಡಿದ ಮಾತ್ರ ಹಿಂದೆ ಬಿದ್ದಿದೆ. ಇವತ್ತು ಆ ಕುಮಾರಸ್ವಾಮಿ ಅವರ ಪಾಪದ ಕೂಸಿಗೆ ಲಾಲಿ ಹಾಡಬೇಕಾದ ಅನಿವಾರ್ಯ ನಮಗೆಲ್ಲ ಬಂದಿರುವುದು ದುರಾದೃಷ್ಟ ಮತ್ತು ದುರಂತ ” ಎಂದು ತಮ್ಮ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಅಧಿಕಾರಿಗಳೇ ತಮಗೆ ತೋಚಿದಂತೆ ಸೂಕ್ಷ್ಮ ವಲಯ ನಿರ್ಧರಿಸುವಂತಿಲ್ಲ; ನಿರ್ದಿಷ್ಟ ಪ್ರಸ್ತಾವನೆ ಅಗತ್ಯ ಎಂದ ಹೈಕೋರ್ಟ್‌

0

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶ (KTR) ಅಥವಾ ಇತರ ಸಂರಕ್ಷಿತ ಅರಣ್ಯಗಳ ಸುತ್ತ ಯಾವುದೇ ನಿರ್ದಿಷ್ಟ ಪ್ರಸ್ತಾವನೆ ಅಥವಾ ಅಧಿಸೂಚನೆ ಇಲ್ಲದಿದ್ದರೂ, ಸ್ವಯಂಚಾಲಿತವಾಗಿ 10 ಕಿ.ಮೀ ವ್ಯಾಪ್ತಿಯನ್ನು ‘ಪರಿಸರ ಸೂಕ್ಷ್ಮ ವಲಯ’ (ESZ) ಎಂದು ಪರಿಗಣಿಸಿ ಅಧಿಕಾರಿಗಳು ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಜೋಯಿಡಾ ತಾಲೂಕಿನ ರಾಮನಗರ ಗ್ರಾಮದಲ್ಲಿ ಜೇಡಿಮಣ್ಣು ಗಣಿಗಾರಿಕೆಗೆ ಅನುಮತಿ ನಿರಾಕರಿಸಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕ್ರಮವನ್ನು ಪ್ರಶ್ನಿಸಿ ಅಭಿಷೇಕ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.

ಯಾವುದೇ ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಧಾಮದ ಸುತ್ತ 10 ಕಿ.ಮೀ ವ್ಯಾಪ್ತಿಯ ‘ಡಿಫಾಲ್ಟ್ ಪರಿಸರ ಸೂಕ್ಷ್ಮ ವಲಯ’ ಅಸ್ತಿತ್ವದಲ್ಲಿದೆ ಹಾಗೂ ಆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಗಣಿಗಾರಿಕೆ ನಿಷೇಧಿಸಲಾಗಿದೆ ಎಂಬ ಸರ್ಕಾರದ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.

ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ESZ ವ್ಯಾಪ್ತಿಯ ಕರಡು ಅಧಿಸೂಚನೆ ಪ್ರಸ್ತಾವನೆ ಸಲ್ಲಿಸಿದೆ. ಸಾರ್ವಜನಿಕರಿಂದ ಬರುವ ಆಕ್ಷೇಪಣೆಗಳು ಹಾಗೂ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ESZ ವ್ಯಾಪ್ತಿ ಅಂತಿಮಗೊಳ್ಳಬೇಕಿದೆ. ಹೀಗಾಗಿ ಸ್ವಯಂಚಾಲಿತವಾಗಿ 10 ಕಿ.ಮೀ ವ್ಯಾಪ್ತಿಯನ್ನು ESZ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಅಸ್ತಿತ್ವದಲ್ಲಿಲ್ಲದ ESZ ಆಧರಿಸಿ ಅರ್ಜಿ ತಿರಸ್ಕಾರ

ಅಧಿಕಾರಿಗಳು ಕಾನೂನುಬಾಹಿರ ಹಾಗೂ ಅಸ್ತಿತ್ವದಲ್ಲೇ ಇಲ್ಲದ ‘ಡಿಫಾಲ್ಟ್ ESZ’ ಪರಿಕಲ್ಪನೆಯನ್ನು ಆಧರಿಸಿ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದ್ದಾರೆ ಎಂದು ನ್ಯಾಯಪೀಠ ಹೇಳಿದೆ. ಈ ಹಿನ್ನೆಲೆಯಲ್ಲಿ 2023ರ ಜನವರಿ 5ರಂದು ಹೊರಡಿಸಲಾಗಿದ್ದ ನಿರಾಕ್ಷೇಪಣಾ ಪತ್ರ (NOC) ತಿರಸ್ಕರಿಸಿದ ಆದೇಶವನ್ನು ರದ್ದುಗೊಳಿಸಿದೆ.

ಅಲ್ಲದೇ, ಅರ್ಜಿದಾರರು ಸಲ್ಲಿಸಿರುವ ಗಣಿಗಾರಿಕೆ ಗುತ್ತಿಗೆ ಪರವಾನಗಿ ಮನವಿಯನ್ನು ಹೊಸದಾಗಿ ಪರಿಶೀಲಿಸಿ, ಅನ್ವಯವಾಗುವ ನಿಯಮಗಳ ಪ್ರಕಾರ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪುಗಳ ಉಲ್ಲೇಖ

‘ಗೋವಾ ಫೌಂಡೇಶನ್’ ಮತ್ತು ‘ಟಿ.ಎನ್. ಗೋದಾವರ್ಮನ್’ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ESZಗೆ ಸಂಬಂಧಿಸಿದಂತೆ ಪ್ರಸ್ತಾವನೆಗಳು ಸಲ್ಲಿಕೆಯಾಗಿರುವ ಅಥವಾ ಅಧಿಸೂಚನೆಗಳು ಜಾರಿಯಲ್ಲಿರುವ ಪ್ರದೇಶಗಳಿಗೆ ಸ್ವಯಂಚಾಲಿತವಾಗಿ 10 ಕಿ.ಮೀ ನಿಯಮ ಅನ್ವಯಿಸುವುದಿಲ್ಲ ಎಂದು ವಿವರಿಸಿದೆ.

ಅದೇ ವೇಳೆ, ದೇಶದಲ್ಲಿರುವ ನಿರ್ದಿಷ್ಟ 21 ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಧಾಮಗಳಿಗೆ ಮಾತ್ರ ಈ ರೀತಿಯ 10 ಕಿ.ಮೀ ನಿಯಮ ಅನ್ವಯವಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ ಏನು?

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರ (ಅಕ್ರಳಿ) ಗ್ರಾಮದ ಸರ್ವೆ ನಂಬರ್ 243/122, ಪ್ಲಾಟ್ ನಂಬರ್ 485ರಲ್ಲಿ ಒಂದು ಎಕರೆ ಜಮೀನಿನಲ್ಲಿ ಜೇಡಿಮಣ್ಣು ಗಣಿಗಾರಿಕೆ ನಡೆಸಲು ಅರ್ಜಿದಾರರು ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಗುತ್ತಿಗೆಗಾಗಿ ಮನವಿ ಸಲ್ಲಿಸಿದ್ದರು.

ಆದರೆ, ಗಣಿಗಾರಿಕೆಗೆ ಉದ್ದೇಶಿಸಿದ್ದ ಸ್ಥಳವು ಕಾಳಿ ಸಂರಕ್ಷಿತ ಪ್ರದೇಶದಿಂದ 9.5 ಕಿ.ಮೀ ದೂರದಲ್ಲಿತ್ತು. ಹೀಗಾಗಿ ಅದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ESZ ವ್ಯಾಪ್ತಿಗೆ ಬರುತ್ತದೆ ಎಂದು ಅಧಿಕಾರಿಗಳು ವಾದಿಸಿದ್ದರು. ಈ ಕಾರಣ ನೀಡಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ತಿಳಿಸಿ, 2023ರ ಜನವರಿ 5ರಂದು NOC ನೀಡಲು ನಿರಾಕರಿಸಲಾಗಿತ್ತು.

ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2011ರ ಫೆಬ್ರವರಿ 9ರಂದು ಹೊರಡಿಸಿದ್ದ ಮಾರ್ಗಸೂಚಿಗಳನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು. ಅರ್ಜಿದಾರರು ಗಣಿಗಾರಿಕೆಗೆ ಕೋರಿರುವ ಜಮೀನು ಕಾಳಿ ಹುಲಿ ಸಂರಕ್ಷಿತ ಪ್ರದೇಶದ 10 ಕಿ.ಮೀ ವ್ಯಾಪ್ತಿಯಲ್ಲಿರುವುದರಿಂದ ಗಣಿಗಾರಿಕೆಗೆ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು.

ಆದರೆ, ಈ ವಾದವನ್ನು ಪರಿಗಣಿಸಿದ ಹೈಕೋರ್ಟ್, ನಿರ್ದಿಷ್ಟ ಅಧಿಸೂಚನೆ ಅಥವಾ ಪ್ರಸ್ತಾವನೆಯಿಲ್ಲದೆ 10 ಕಿ.ಮೀ ವ್ಯಾಪ್ತಿಯನ್ನು ಸ್ವಯಂಚಾಲಿತವಾಗಿ ESZ ಎಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಅರ್ಜಿದಾರರಿಗೆ ಪರಿಹಾರ ಒದಗಿಸಿದೆ.

ಅತ್ಯಾಚಾರ, ಬೆದರಿಕೆ ಪ್ರಕರಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ ಅಭಿಷೇಕ್ ಪೊರೆಲ್ ಅರೆಸ್ಟ್!

0

ಕೋಲ್ಕತಾ: ಅತ್ಯಾಚಾರ ಹಾಗೂ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಕ್ರಿಕೆಟಿಗ ಹಾಗೂ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿರುವ ಅಭಿಷೇಕ್ ಪೊರೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಅಭಿಷೇಕ್ ಪೊರೆಲ್ ಅವರನ್ನು ಶೀಘ್ರವಾಗಿ ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಕ್ರಮ ಕೈಗೊಂಡಿದ್ದು, ಹೂಗ್ಲಿ ಗ್ರಾಮಾಂತರ ಪೊಲೀಸ್ ಎಸ್ಪಿ ಕುನ್ವರ್ ಭೂಷಣ್ ಸಿಂಗ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ.

ದಮ್ ದಮ್ ಪೊಲೀಸ್ ಠಾಣಾ ವ್ಯಾಪ್ತಿಯ ಎಮಾಮಿ ಸಿಟಿಯಿಂದ ಅಭಿಷೇಕ್ ಪೊರೆಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದೂರುದಾರ ಮಹಿಳೆಯ ಪ್ರಕಾರ, ತಾನು ಹಾಗೂ ಅಭಿಷೇಕ್ ಪೊರೆಲ್ ಕಳೆದ ಮೂರು ವರ್ಷಗಳಿಂದ ಸಂಬಂಧದಲ್ಲಿದ್ದೆವು. ಕಳೆದ ವರ್ಷ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಉಂಟಾದ ಬಳಿಕ ಪೊರೆಲ್ ತಮ್ಮಿಂದ ದೂರವಾಗಲು ಆರಂಭಿಸಿದ್ದರು ಎಂದು ಆರೋಪಿಸಿದ್ದಾರೆ.

ಅಭಿಷೇಕ್ ಪೊರೆಲ್ ಈ ಹಿಂದೆ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತನ್ನೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು. ಅಲ್ಲದೆ, ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಅತ್ಯಾಚಾರ, ಹಲ್ಲೆ ಹಾಗೂ ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

ಇನ್ನೊಂದೆಡೆ, ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಅಭಿಷೇಕ್ ಪೊರೆಲ್ ತಳ್ಳಿಹಾಕಿದ್ದಾರೆ. ಹೀಗಾಗಿ ಪ್ರಕರಣದ ಮುಂದಿನ ತನಿಖೆ ಹಾಗೂ ಕಾನೂನು ಪ್ರಕ್ರಿಯೆಯಲ್ಲಿ ಆರೋಪಗಳಿಗೆ ಸಂಬಂಧಿಸಿದ ವಾಸ್ತವಾಂಶಗಳು ಮತ್ತಷ್ಟು ಸ್ಪಷ್ಟವಾಗಬೇಕಿದೆ.

ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಯಾರು? ಧೋನಿ, ಕೊಹ್ಲಿ, ಗಂಗೂಲಿಯನ್ನು ಬದಿಗಿಟ್ಟು ಸಚಿನ್ ಹೆಸರಿಸಿದ ಅಜಿಂಕ್ಯ ರಹಾನೆ

0

ಭಾರತದ ಮಾಜಿ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದರು. ಇದೀಗ ‘ಸ್ಟಿಕ್ ಟು ಕ್ರಿಕೆಟ್’ ಕಾರ್ಯಕ್ರಮದ ಎಪಿಸೋಡ್‌ನಲ್ಲಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

2011ರಿಂದ 2023ರವರೆಗೆ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ರಹಾನೆ, ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರನನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ ಎಂದು ಹೇಳಿದ್ದಾರೆ. ಆದರೆ ಒಬ್ಬರನ್ನೇ ಆಯ್ಕೆ ಮಾಡಬೇಕಾದ ಪರಿಸ್ಥಿತಿ ಎದುರಾದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಆಯ್ಕೆ ಮಾಡುವುದಾಗಿ ತಿಳಿಸಿದ್ದಾರೆ.

“ಕೇವಲ ಒಬ್ಬರ ಹೆಸರನ್ನು ಆಯ್ಕೆ ಮಾಡುವುದು ನಿಜಕ್ಕೂ ಕಠಿಣವಾದ ಕೆಲಸ. ಆದರೆ ಒಬ್ಬರ ಹೆಸರನ್ನು ಆಯ್ಕೆ ಮಾಡಲೇಬೇಕು ಎಂದಾದರೆ ನಾನು ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು ಆಯ್ಕೆ ಮಾಡುತ್ತೇನೆ,” ಎಂದು ರಹಾನೆ ಹೇಳಿದ್ದಾರೆ.

24 ವರ್ಷಗಳ ಸಚಿನ್ ಯುಗ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಪರ ಬರೋಬ್ಬರಿ 24 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. 1989ರ ನವೆಂಬರ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಚಿನ್, 2013ರ ನವೆಂಬರ್ 16ರಂದು ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಸಚಿನ್ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 200 ಟೆಸ್ಟ್, 463 ಏಕದಿನ ಹಾಗೂ ಒಂದು ಟಿ20 ಪಂದ್ಯ ಸೇರಿವೆ. ಟೆಸ್ಟ್‌ನಲ್ಲಿ 15,921 ರನ್, ಏಕದಿನದಲ್ಲಿ 18,426 ರನ್ ಹಾಗೂ ಟಿ20ಯಲ್ಲಿ 10 ರನ್ ಗಳಿಸಿದ್ದಾರೆ.

2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಯಶಸ್ಸಿನಲ್ಲಿ ಸಚಿನ್ ತೆಂಡೂಲ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಇಂದಿಗೂ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸಚಿನ್ ಹೆಸರಿನಲ್ಲಿದೆ. ಇದರ ಜತೆಗೆ ಅತಿ ಹೆಚ್ಚು ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ನಾಯಕನಾಗಿ ಸಚಿನ್ ದಾಖಲೆ ಹೇಗಿತ್ತು?

ಬ್ಯಾಟರ್ ಆಗಿ ಸಚಿನ್ ತೆಂಡೂಲ್ಕರ್ ಸಾಧಿಸಿದಷ್ಟು ಯಶಸ್ಸು ನಾಯಕನಾಗಿ ಅವರಿಗೆ ಸಿಗಲಿಲ್ಲ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗುತ್ತದೆ. ಸಚಿನ್ ನಾಯಕತ್ವದಲ್ಲಿ ಭಾರತ ತಂಡ 25 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಒಂಬತ್ತು ಪಂದ್ಯಗಳಲ್ಲಿ ಸೋಲು ಕಂಡಿದ್ದರೆ, 12 ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು.

ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ 73 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಈ ಪೈಕಿ 23 ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದರೆ, 43 ಪಂದ್ಯಗಳಲ್ಲಿ ಸೋಲು ಕಂಡಿತ್ತು. ಒಂದು ಪಂದ್ಯ ಟೈ ಆಗಿದ್ದರೆ, ಆರು ಪಂದ್ಯಗಳಲ್ಲಿ ಯಾವುದೇ ಫಲಿತಾಂಶ ಹೊರಬಂದಿರಲಿಲ್ಲ.

ಧೋನಿ, ಕೊಹ್ಲಿ, ಗಂಗೂಲಿ ಬಿಟ್ಟು ಸಚಿನ್ ಆಯ್ಕೆ!

ಅಜಿಂಕ್ಯ ರಹಾನೆ 2011ರ ಆಗಸ್ಟ್ 31ರಂದು ಭಾರತ ತಂಡಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ ಅವರ ಜತೆಗೆ ರಹಾನೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ತಮ್ಮ ಸುಮಾರು 12 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದ ಬಹುಪಾಲು ಅವಧಿಯಲ್ಲಿ ರಹಾನೆ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ಆಡಿದ್ದಾರೆ. ಸೌರವ್ ಗಂಗೂಲಿ ಕೂಡ ಭಾರತದ ಶ್ರೇಷ್ಠ ನಾಯಕರ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ.

ಹೀಗಿದ್ದರೂ ಧೋನಿ, ಕೊಹ್ಲಿ ಹಾಗೂ ಗಂಗೂಲಿ ಅವರನ್ನು ಬದಿಗಿಟ್ಟು ಸಚಿನ್ ತೆಂಡೂಲ್ಕರ್ ಅವರನ್ನು ಭಾರತದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಹಾಗೂ ನಾಯಕನಾಗಿ ರಹಾನೆ ಆಯ್ಕೆ ಮಾಡಿರುವುದು ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ಸಚಿನ್ ಅವರ ಬ್ಯಾಟಿಂಗ್ ಸಾಧನೆ, ಸುದೀರ್ಘ ವೃತ್ತಿಜೀವನ ಹಾಗೂ ಭಾರತೀಯ ಕ್ರಿಕೆಟ್‌ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಹಾನೆ ಈ ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಯಾರು ಬರಲಿ, ಬಿಡಲಿ ಕಾವೇರಿಗಾಗಿ ಬಂದ್ ಮಾಡೇ ಮಾಡ್ತೀವಿ: ವಾಟಾಳ್ ನಾಗರಾಜ್ ಖಡಕ್ ಘೋಷಣೆ

0

ಹುಬ್ಬಳ್ಳಿ: ಕಾವೇರಿ ನೀರು ಹಂಚಿಕೆ ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಗೊಂದಲವೂ ಹೆಚ್ಚಾಗಿದೆ. ಕಾವೇರಿ ನೀರಿನ ಸಮಸ್ಯೆ ಸದ್ಯಕ್ಕೆ ತಗ್ಗಿರುವ ಹಿನ್ನೆಲೆಯಲ್ಲಿ ಬಂದ್ ಅಗತ್ಯವಿಲ್ಲ ಎಂದು ಕೆಲ ಸಂಘಟನೆಗಳು ಹಿಂದೆ ಸರಿದಿದ್ದರೆ, ಮತ್ತೊಂದೆಡೆ ಬಂದ್‌ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಪಟ್ಟು ಹಿಡಿದಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡಿನ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಈ ಹಿಂದೆ ತೀವ್ರ ಹೋರಾಟ ನಡೆಸಿದ್ದವು. ಇದರ ಮುಂದುವರಿದ ಭಾಗವಾಗಿ ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಸಮಸ್ಯೆ ಸದ್ಯಕ್ಕೆ ಕೊಂಚ ತಗ್ಗಿದ್ದು, ಎರಡೂ ರಾಜ್ಯಗಳ ರೈತರಿಗೆ ನೆಮ್ಮದಿ ಮೂಡಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು, ಖಾಸಗಿ ಶಾಲೆಗಳು ಹಾಗೂ ವ್ಯಾಪಾರ ವಹಿವಾಟುದಾರರು ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರಿಂದ ಆಗಸ್ಟ್ 13ರ ಬಂದ್ ಕುರಿತು ಗೊಂದಲ ಮತ್ತಷ್ಟು ಹೆಚ್ಚಾಗಿದೆ.

ಬಂದ್ ನಿರ್ಧಾರದಿಂದ ಹಿಂದೆ ಸರಿಯದ ವಾಟಾಳ್ ನಾಗರಾಜ್, ಕಾವೇರಿ ನೀರಿನ ಜೊತೆಗೆ ಮೇಕೆದಾಟು ಮತ್ತು ಮಹದಾಯಿ ವಿಚಾರಗಳಿಗೂ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಿದ ವಾಟಾಳ್ ನಾಗರಾಜ್, ಮಹದಾಯಿ ಹೋರಾಟಗಾರರು ಹಾಗೂ ರೈತಪರ ಸಂಘಟನೆಗಳ ಬೆಂಬಲ ಕೋರಿದರು. ನಗರದ ಚೆನ್ನಮ್ಮ ವೃತ್ತದಲ್ಲಿ ಸಾಂಕೇತಿಕ ಹೋರಾಟ ನಡೆಸಿ, ಬಳಿಕ ಸಭೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, “ಯಾರು ಬೆಂಬಲ ನೀಡಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ. ವಿಭಿನ್ನ ರೀತಿಯಲ್ಲಿ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಬೆಳಗಾವಿಯಿಂದ ಚಾಮರಾಜನಗರದವರೆಗೂ ಬಂದ್‌ಗೆ ಬೆಂಬಲವಿದೆ” ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ಮತ್ತೆ ಸಂಕಷ್ಟ: ತಮಿಳುನಾಡಿಗೆ 15 ದಿನ ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಲು CWRC ಶಿಫಾರಸು

0

ನವದೆಹಲಿ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ ಶಿಫಾರಸು ಮಾಡಿದೆ.

ಈ ಶಿಫಾರಸಿನ ಕುರಿತು ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.

ದೆಹಲಿಯಲ್ಲಿರುವ CWMA ಕಚೇರಿಯಲ್ಲಿ ಇಂದು ಬೆಳಗ್ಗೆ ಅಧ್ಯಕ್ಷ ವಿನೀತ್ ಗುಪ್ತಾ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಕರ್ನಾಟಕದ ಪರವಾಗಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (MD) ಮಹೇಶ್ ಅವರು ಖುದ್ದಾಗಿ ಹಾಜರಾಗಿ ರಾಜ್ಯದ ವಿವಿಧ ಜಲಾಶಯಗಳ ನೀರಿನ ಮಟ್ಟ ಹಾಗೂ ಪ್ರಸ್ತುತ ಜಲ ಪರಿಸ್ಥಿತಿಯ ಕುರಿತು ವಿವರಗಳನ್ನು ಪ್ರಾಧಿಕಾರದ ಮುಂದಿಟ್ಟರು.

ತಮಿಳುನಾಡಿನ ಹಿರಿಯ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಸ್ತುತ ಜಲಾಶಯಗಳಲ್ಲಿರುವ ನೀರಿನ ಸಂಗ್ರಹ, ಮುಂದಿನ ದಿನಗಳಲ್ಲಿ ನಿರೀಕ್ಷಿಸಲಾಗಿರುವ ಮಳೆ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಿ CWRC ಈ ಶಿಫಾರಸು ಮಾಡಿದೆ.

ಬಿಳಿಗುಂಡ್ಲುವಿನಲ್ಲಿ ಈಗಾಗಲೇ 9 ಟಿಎಂಸಿ ನೀರು ದಾಖಲು

ಆಗಸ್ಟ್ 10ರವರೆಗಿನ ಮಾಹಿತಿಯ ಪ್ರಕಾರ, ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಈಗಾಗಲೇ ಸುಮಾರು 9 ಟಿಎಂಸಿ ನೀರು ಹರಿದು ಹೋಗಿರುವುದು ದಾಖಲಾಗಿದೆ.

ಇದೀಗ CWRC ಶಿಫಾರಸಿನಂತೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12,000 ಕ್ಯೂಸೆಕ್ ನೀರು ಹರಿಸಿದರೆ, ತಮಿಳುನಾಡಿಗೆ ಹರಿಯುವ ಒಟ್ಟು ನೀರಿನ ಪ್ರಮಾಣ ಸುಮಾರು 16 ಟಿಎಂಸಿಗೆ ತಲುಪಲಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇರುವ ಸಂದರ್ಭದಲ್ಲೇ ಈ ಶಿಫಾರಸು ಹೊರಬಿದ್ದಿದೆ.

CWMA ಸಭೆಯತ್ತ ಕುತೂಹಲ

ಇಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ CWMA ಸಭೆಯಲ್ಲಿ CWRC ಮಾಡಿರುವ ಶಿಫಾರಸನ್ನು ಪ್ರಾಧಿಕಾರ ಯಾವ ಪ್ರಮಾಣದಲ್ಲಿ ಅಂಗೀಕರಿಸಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

ಒಂದು ವೇಳೆ CWRC ಶಿಫಾರಸನ್ನು CWMA ಅಂಗೀಕರಿಸಿದರೆ ಕರ್ನಾಟಕದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುವ ಅನಿವಾರ್ಯತೆ ಎದುರಾಗಬಹುದು. ಹೀಗಾಗಿ ರಾಜ್ಯದ ಹಿತಾಸಕ್ತಿ ಕಾಪಾಡಲು ಕರ್ನಾಟಕ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದರತ್ತ ಇದೀಗ ಎಲ್ಲರ ಗಮನ ನೆಟ್ಟಿದೆ.

ನಾನು, ಸಚಿವರು ಸೇರಿ ಎಲ್ಲರೂ ಸರ್ಕಾರಿ ನೌಕರರು; ನಾವೆಲ್ಲರೂ ಟೀಮ್ ಕರ್ನಾಟಕವಾಗಿ ಕೆಲಸ ಮಾಡೋಣ’ ಎಂದ ಸಿಎಂ ಡಿಕೆ ಶಿವಕುಮಾರ್

0


ಬೆಂಗಳೂರು: “ನಾನು ಸೇರಿದಂತೆ ನನ್ನ ಮಂತ್ರಿ ಮಂಡಲ, ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರು. ನಮ್ಮದು ಟೀಮ್ ಕರ್ನಾಟಕ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಲ್ಯಾಣ ಮಾಡುವುದೇ ನಮ್ಮ ಗುರಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರೆ ಕೊಟ್ಟರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಂಗಳವಾರ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ನೌಕರರನ್ನು ಉದ್ದೇಶಿಸಿ ಮಾತನಾಡಿದರು. “ನಮ್ಮನ್ನು ಸೇರಿದಂತೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿರುವುದು 5.50 ಲಕ್ಷ ಸರ್ಕಾರಿ ನೌಕರರಿಗೆ ಮಾತ್ರ. ನಾವು ನಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಬೇಕು. ಕೆಂಗಲ್ ಹನುಮಂತಯ್ಯ ಅವರ ಕಾಲದಿಂದ ಇಲ್ಲಿಯವರೆಗೆ ಎಲ್ಲ ಸಿಎಂಗಳು ತಮ್ಮದೇ ರೀತಿಯಲ್ಲಿ,

ತಮ್ಮದೇ ಅನುಭವ ಸಿದ್ಧಾಂತದ ಮೇಲೆ ಆಡಳಿತ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ ಅವರು ಜೈಲಿನ ಖೈದಿಗಳಿಂದ ವಿಧಾನಸೌಧ ಕಟ್ಟಿಸಿದರು. ಆಗ ಕೆಲವು ಖೈದಿಗಳು ಹನುಮಂತಯ್ಯ ಅವರ ಮೇಲೆ ಚಪ್ಪಲಿ ಎಸೆದಿದ್ದರು. ವಿಶ್ವೇಶ್ವರಯ್ಯ ಅವರು ₹1 ಗೆ ಕೆಲಸ ಮಾಡುತ್ತಿದ್ದರು ಎಂಬ ಇತಿಹಾಸ ಇದೆ. ನಾನು ಈ ಹಿಂದಿನವರ ಕೆಲಸಗಳನ್ನು ಟೀಕೆ ಮಾಡುವುದಿಲ್ಲ. ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ” ಎಂದು ತಿಳಿಸಿದರು.

“ಅಂಬೇಡ್ಕರ್ ಅವರು ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ನೀವು ಸಾಕಷ್ಟು ವಿದ್ಯೆ, ಅನುಭವ ಹೊಂದಿದ್ದೀರಿ. ನಾನು ಹೆಚ್ಚು ಓದಿಲ್ಲ, ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾಗಿ ಅನುಭವ ಇದೆ. ನೀವು ಶ್ರಮಜೀವಿ, ಸರ್ಕಾರದ ನಾಡಿ ಮಿಡಿತ ಇಟ್ಟುಕೊಂಡು, ಜನ ಮತ್ತು ಸರ್ಕಾರದ ಸೇತುವೆಯಾಗಿದ್ದೀರಿ. ನಾವು ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ” ಎಂದು ಕರೆ ಕೊಟ್ಟರು.

“ನಮ್ಮ ನಿಮ್ಮ ಮೇಲೆ ಜನರ ಬದುಕಿನಲ್ಲಿ, ಬದಲಾವಣೆ ತರುವ ಜವಾಬ್ದಾರಿ ಇದೆ. ನಾನು ಇತಿಹಾಸ ಓದಲು ಬರೆಯಲು ಇಚ್ಚಿಸುವುದಿಲ್ಲ. ಇತಿಹಾಸ ಸೃಷ್ಟಿಸಲು ಬಯಸುತ್ತೇನೆ. ಸರ್ಕಾರಿ ನೌಕರರ ಸೇವೆಯಿಂದಲೇ ನಮ್ಮ ರಾಜ್ಯ ಈ ಹಂತಕ್ಕೆ ಬೆಳೆದಿದೆ” ಎಂದರು.

ಮಹಾರಾಜರ ಕಾಲದಿಂದ ಪರಿಶುದ್ಧ ಆಡಳಿತದಿಂದ ರಾಜ್ಯದ ಪ್ರಗತಿ

“ಮೈಸೂರಿನ ಕಾರ್ಯಕ್ರಮದಲ್ಲಿ ನಾನು ಪ್ರಧಾನಮಂತ್ರಿಗಳ ಬಳಿ ಒಂದು ಮಾತು ಹೇಳಿದ್ದೆ. ಅಟಲ್ ಬಿಹಾರಿ ವಾಜಪೇಯಿ ಅವರು ಇದೆ ಹಾಲ್ ನಲ್ಲಿ, ವಿಶ್ವದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದಲ್ಲಿ ಬೇರೆ ನಗರಗಳಿಗೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ಬೇರೆ ನಗರಗಳಿಗೆ ಹೋಗುತ್ತಿದ್ದಾರೆ ಎಂದು ಹೇಳಿದ್ದರು. ಇದು ಕೇವಲ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ನಾನು ಹೇಳಲ್ಲ. ರಾಜ ಮಹಾರಾಜರ ಕಾಲದಿಂದ ಪರಿಶುದ್ಧ ಆಡಳಿತದ ಪರಿಣಾಮ, ನಮ್ಮ ವಿದ್ಯಾರ್ಥಿಗಳ ಜ್ಞಾನ, ಪ್ರತಿಭಾನ್ವಿತ ಮಾನವ ಸಂಪನ್ಮೂಲಗಳ ಕಾರಣ.ಮಹಾರಾಜರು ಬೆಂಗಳೂರಿನಲ್ಲೇ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸ್ ಆರಂಭಿಸಿದರು” ಎಂದರು.

“ಪೋಲೆಂಡ್ ಪ್ರಧಾನಿಯನ್ನು ಭೇಟಿ ಮಾಡಿದಾಗ, ಸಿಲಿಕಾನ್ ವ್ಯಾಲಿಯಲ್ಲಿ 3ರಲ್ಲಿ ಇಬ್ಬರು ಭಾರತದವರು. ಹೀಗಾಗಿ ಬೆಂಗಳೂರಿನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದೇವೆ ನಮಗೆ 60% ಉಳಿತಾಯವಾಗಿದೆ ಎಂದರು. ಗ್ಯಾರಂಟಿ ಯೋಜನೆಯಲ್ಲಿ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ನಮ್ಮ ರಾಜ್ಯದವರಿಗೆ ನಾವು ಯೋಜನೆ ನೀಡಬೇಕು. ಬೇರೆಯವರಿಗೆ ನೀಡುವ ಅಗತ್ಯವಿಲ್ಲ” ಎಂದರು.

ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ

“ನಮ್ಮಲ್ಲಿರುವ ಶಿಕ್ಷಣ, ಆರೋಗ್ಯ ಸೌಲಭ್ಯ ಬೇರೆ ಎಲ್ಲೂ ಇಲ್ಲ. ನಾನು ನನ್ನ ಮೇಲೆ ಕಣ್ಣು ಇಟ್ಟುಕೊಂಡಿದ್ದೇನೆ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಹಾಗೂ ಶಾಸಕರು ಯಾವ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಪರಿಶೀಲನೆ ಮಾಡುತ್ತೇವೆ. ನಾವು ಕೆಲಸ ಮಾಡುವುದೇ ಜನರಿಗಾಗಿ. ಬೇರೆಯವರಿಗೆ ಒಪ್ಪಿಸದಿದ್ದರೂ ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಿ” ಎಂದರು.

“ಅಧಿಕಾರ ಜವಾಬ್ದಾರಿ ಸಂಕೇತ. ಇದು ಸಿಂಹಾಸನ ಅಲ್ಲ, ಅವಕಾಶ. ಮೂರ್ತಿಗೆ ಬೆಲೆ ಕಟ್ಟಿದರೂ ಭಗವಂತನಿಗೆ ಬೆಲೆ ಕಟ್ಟಲು ಆಗಲ್ಲ. ಜನರಲ್ಲೇ ದೇವರನ್ನು ಕಾಣಬಹುದು. ಗ್ಯಾರಂಟಿ ಬಗ್ಗೆ ಶಾಸಕರು, ವಿರೋಧ ಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಪ್ರಧಾನಮಂತ್ರಿಗಳು ಟೀಕಿಸಿದರೂ ನಂತರ ಅವರೇ ಪಾಲಿಸುವಂತಾಗಿದೆ. ನಮ್ಮ ಮಾದರಿ ದೇಶಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿ

ಸರ್ಕಾರ ನೌಕರರ ಸಂಘದವರು ಗ್ಯಾರಂಟಿ ಯೋಜನೆ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದನೆಗಳು. ಕೇಂದ್ರ ಕಚೇರಿಯಲ್ಲಿ ಇದ್ದು ಕೆಲಸ ಮಾಡದಿದ್ದರೆ ಮತ್ತೆ ನಿಮಗೆ ಈ ಜವಾಬ್ದಾರಿ ಯಾಕೆ? ಪ್ರತಿ ತಾಲ್ಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಅಲ್ಲೇ ವಾಸ ಇರಬೇಕು. ಇಂದು 750 ಕಡೆ ಸಭೆ ಈ ಕಾರ್ಯಕ್ರಮ ನಡೆಯುತ್ತಿದೆ. ರಾಜ್ಯದ ಪ್ರಮುಖ ನೌಕರನಾಗಿ ಸರ್ಕಾರದ ಚಿಂತನೆ, ಮುಂದಿನ ದಿನಗಳಲ್ಲಿ ಸಾಗಬೇಕಾದ ದಾರಿ ಬಗ್ಗೆ ಮಾರ್ಗದರ್ಶನ ನೀಡಲು ಬಂದಿರುವೆ. ಮನಸ್ಸು ಶುದ್ಧವಾಗಿ, ಪಾರದರ್ಶಕವಾಗಿ ಕೆಲಸ ಮಾಡಿದರೆ ಸಮಸ್ಯೆಗೆ ಪರಿಹಾರ ನೀಡಬಹುದು” ಎಂದು ಕಿವಿಮಾತು ಹೇಳಿದರು.

 

ಓವರ್ ಟೇಕ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ: ಜೆಸಿಬಿ ಚಾಲಕನ ಹೊಡೆತಕ್ಕೆ ಯುವಕ ಸ್ಥಳದಲ್ಲೇ ಸಾವು!

0

ಕಲಬುರಗಿ: ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಆರಂಭವಾದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿ ಗ್ರಾಮದಲ್ಲಿ ನಡೆದಿದೆ. ಜೆಸಿಬಿ ಚಾಲಕನೊಬ್ಬ ಯುವಕನಿಗೆ ಹೊಡೆದಿದ್ದು, ಹೊಡೆತದ ರಭಸಕ್ಕೆ ಯುವಕ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಉಡಗಿ ಗ್ರಾಮದ ಭಾಗ್ಯವಂತ (24) ಎಂದು ಗುರುತಿಸಲಾಗಿದೆ. ವಾಹನ ಓವರ್‌ಟೇಕ್ ಮಾಡುವ ವಿಚಾರಕ್ಕೆ ಭಾಗ್ಯವಂತ ಹಾಗೂ ಜೆಸಿಬಿ ಚಾಲಕ ನಬೀ ನಡುವೆ ಜಗಳ ಆರಂಭವಾಗಿತ್ತು.

ಮಾತಿಗೆ ಮಾತು ಬೆಳೆದು ಜಗಳ ತೀವ್ರಗೊಂಡ ವೇಳೆ ಭಾಗ್ಯವಂತ, ನಬೀ ಅವರ ಶರ್ಟ್‌ನ ಕಾಲರ್ ಹಿಡಿದಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ನಬೀ, ಭಾಗ್ಯವಂತನ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಹೊಡೆತದ ರಭಸಕ್ಕೆ ಭಾಗ್ಯವಂತನ ಕೆನ್ನೆಗೆ ಗಂಭೀರ ಪೆಟ್ಟಾಗಿದ್ದು, ಕೂಡಲೇ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಘಟನೆ ಬಳಿಕ ಸೇಡಂ ಪೊಲೀಸರು ಆರೋಪಿ ನಬೀಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಾಹನ ಓವರ್‌ಟೇಕ್ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಯುವಕನ ಸಾವಿನಲ್ಲಿ ಅಂತ್ಯವಾಗಿರುವುದು ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಸ್ವಾತಂತ್ರ್ಯೋತ್ಸವಕ್ಕೂ ಮುನ್ನ ದೆಹಲಿಯಲ್ಲಿ ಹೈ ಅಲರ್ಟ್; 19 ಮೋಸ್ಟ್ ವಾಂಟೆಡ್ ಉಗ್ರರ ಪೋಸ್ಟರ್ ಬಿಡುಗಡೆ ಮಾಡಿದ ಪೊಲೀಸರು

0

ನವದೆಹಲಿ: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು 19 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸಾರ್ವಜನಿಕ ಸ್ಥಳಗಳು ಹಾಗೂ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಪೋಸ್ಟರ್‌ಗಳಲ್ಲಿ ಆರೋಪಿಗಳ ಛಾಯಾಚಿತ್ರ ಹಾಗೂ ಗುರುತಿನ ವಿವರಗಳನ್ನು ಪ್ರಕಟಿಸಲಾಗಿದ್ದು, ಇವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.

ಮೋಸ್ಟ್ ವಾಂಟೆಡ್ ಆರೋಪಿಗಳ ಬಂಧನಕ್ಕೆ ನೆರವಾಗುವಂತಹ ವಿಶ್ವಾಸಾರ್ಹ ಮಾಹಿತಿ ನೀಡುವವರಿಗೆ ಸೂಕ್ತ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ. ಮಾಹಿತಿ ನೀಡುವವರ ಗುರುತನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ದೆಹಲಿ ಪೊಲೀಸರು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳು, ಪ್ರಮುಖ ಮಾರುಕಟ್ಟೆಗಳು, ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಂಭವನೀಯ ಭದ್ರತಾ ಬೆದರಿಕೆಗಳನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಾದ್ಯಂತ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಪೋಸ್ಟರ್‌ನಲ್ಲಿ ಯಾರ್ಯಾರ ಹೆಸರು?

ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಪೋಸ್ಟರ್‌ನಲ್ಲಿ ಇಂಡಿಯನ್ ಮುಜಾಹಿದ್ದೀನ್, ಅಲ್-ಖೈದಾ ಹಾಗೂ ವಿವಿಧ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪಿಗಳ ಮಾಹಿತಿ ಒಳಗೊಂಡಿದೆ.

ಇಂಡಿಯನ್ ಮುಜಾಹಿದ್ದೀನ್‌ಗೆ ಸಂಬಂಧಿಸಿದಂತೆ ರಿಯಾಜ್ ಭಟ್ಕಳ್ ಹಾಗೂ ಶಬಂದರಿ ಮೊಹಮ್ಮದ್ ಇಕ್ಬಾಲ್ ಅಲಿಯಾಸ್ ಇಕ್ಬಾಲ್ ಭಟ್ಕಳ್ ಅವರ ಹೆಸರುಗಳನ್ನು ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಲ್-ಖೈದಾ ಜತೆಗೆ ಸಂಪರ್ಕ ಹೊಂದಿರುವ ಆರೋಪಿಗಳ ಪಟ್ಟಿಯಲ್ಲಿ ಮೊಹಮ್ಮದ್ ಶಾರ್ಜೀಲ್ ಅಖ್ತರ್, ಅಬು ಸುಫಿಯಾನ್ ಹಾಗೂ ಸೈಯದ್ ಮೊಹಮ್ಮದ್ ಅರ್ಷಿಯಾನ್ ಅವರ ಹೆಸರುಗಳಿವೆ.

ಖಲಿಸ್ತಾನಿ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದಂತೆ ಖಲಿಸ್ತಾನ್ ಜಿಂದಾಬಾದ್ ಫೋರ್ಸ್‌ನ ರಂಜಿತ್ ಸಿಂಗ್ ಅಲಿಯಾಸ್ ನೀತಾ ಮತ್ತು ಪರಮಜಿತ್ ಸಿಂಗ್ ಪಮ್ಮಾ, ಖಲಿಸ್ತಾನ್ ಟೈಗರ್ ಫೋರ್ಸ್‌ನ ಅರ್ಶ್‌ದೀಪ್ ಸಿಂಗ್ ಅಲಿಯಾಸ್ ಅರ್ಶ್ ದಲಾ ಅವರ ಹೆಸರುಗಳನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಇದಲ್ಲದೆ, ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ಗೆ ಸಂಬಂಧಿಸಿದ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ, ವಾಧವಾ ಸಿಂಗ್ ಬಬ್ಬರ್ ಹಾಗೂ ಗುರ್ಮೀತ್ ಸಿಂಗ್ ಬಗ್ಗಾ ಸೇರಿದಂತೆ ಇತರ ಮೋಸ್ಟ್ ವಾಂಟೆಡ್ ಆರೋಪಿಗಳ ಮಾಹಿತಿಯನ್ನೂ ಪೊಲೀಸರು ಪ್ರಕಟಿಸಿದ್ದಾರೆ.

ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದು, ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ಟ್ವಿಸ್ಟ್‌ ಮೇಲೆ ಟ್ವಿಸ್ಟ್: ಪ್ರದೂಷ್ ಭದ್ರತೆಗೆ ಕೋರ್ಟ್ ಸೂಚನೆ, ಮಾಧ್ಯಮಗಳಿಗೆ ಕೋರ್ಟ್ ವಾರ್ನಿಂಗ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ14 ಆರೋಪಿ ಪ್ರದೂಷ್ ಸಲ್ಲಿಸಿರುವ ಮಾಫಿ ಸಾಕ್ಷಿ ಅರ್ಜಿ ಇದೀಗ ವಿಚಾರಣೆಯ ಕೇಂದ್ರಬಿಂದುವಾಗಿದೆ. 59ನೇ ಸಿಸಿಹೆಚ್ ಕೋರ್ಟ್‌ನ ನ್ಯಾಯಾಧೀಶೆ ಸುಜಾತ ಎಂ. ಸಾಂಬ್ರಾಣಿ ಅವರ ಮುಂದೆ ಅರ್ಜಿ ವಿಚಾರಣೆ ಆರಂಭವಾಗಿದ್ದು, ಪ್ರದೂಷ್ ಪರ ವಕೀಲ ದಿವಾಕರ್ ಹಾಗೂ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ನಡುವೆ ತೀವ್ರ ವಾದ-ಪ್ರತಿವಾದ ನಡೆದಿದೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಪವಿತ್ರಾ ಗೌಡ, ದರ್ಶನ್, ಪ್ರದೂಷ್ ಸೇರಿದಂತೆ ಆರೋಪಿಗಳು ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ.

ಪ್ರದೂಷ್ ಪರ ವಕೀಲ ದಿವಾಕರ್ ಅವರು, ಪ್ರದೂಷ್ ಅಪ್ರೂವರ್ ಆಗಲು ಬಯಸಿದ್ದು, ಅವರ ಹೇಳಿಕೆಯನ್ನು ಕೋರ್ಟ್ ದಾಖಲಿಸಬೇಕು ಎಂದು ವಾದಿಸಿದ್ದಾರೆ. ಈ ಪ್ರಕರಣದಲ್ಲಿ ಕಿಡ್ನಾಪ್, ಕೊಲೆ ಮತ್ತು ಸಾಕ್ಷ್ಯ ನಾಶಕ್ಕೆ ಯತ್ನ ಎಂಬ ಮೂರು ಆಯಾಮಗಳಿವೆ. ಹೀಗಾಗಿ ಪ್ರದೂಷ್ ಅವರ ಅರ್ಜಿಯನ್ನು ವಿಳಂಬ ಮಾಡದೆ ಪರಿಗಣಿಸಿ, ಅವರ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅರ್ಜಿ ವಿಚಾರಣೆಯನ್ನು ವಿಳಂಬ ಮಾಡಿದರೆ ಪ್ರಕರಣದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಅರ್ಜಿ ಪರಿಗಣಿಸಿ ಹೇಳಿಕೆ ದಾಖಲಿಸುವುದು ಅಗತ್ಯ ಎಂದು ದಿವಾಕರ್ ವಾದಿಸಿದ್ದಾರೆ.

ಆದರೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ‘ಎ14 ಇನ್ನೂ ಆರೋಪಿಯೇ ಹೊರತು ಸಾಕ್ಷಿಯಲ್ಲ. ಅವರು ಇನ್ನೂ ಸಾಕ್ಷಿಯಾಗಿಲ್ಲ. ಕೋರ್ಟ್ ಕೂಡ ಅವರ ಮಾಫಿ ಸಾಕ್ಷಿ ಅರ್ಜಿಯನ್ನು ಇನ್ನೂ ಪರಿಗಣಿಸಿಲ್ಲ’ ಎಂದು ವಾದಿಸಿದ್ದಾರೆ.

ಸೆಷನ್ಸ್ ಕೋರ್ಟ್‌ನ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶವಿದೆ. ಒಂದು ವೇಳೆ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿಹಿಡಿದರೆ, ನಂತರ ಮುಂದಿನ ಪ್ರಕ್ರಿಯೆ ಮುಂದುವರಿಸಬಹುದು. ಹೀಗಿರುವಾಗ ತಕ್ಷಣವೇ ಪ್ರದೂಷ್ ಅವರ ಹೇಳಿಕೆ ದಾಖಲಿಸುವುದು ಸೂಕ್ತವಲ್ಲ ಎಂದು ಹಷ್ಮತ್ ಪಾಷಾ ಪ್ರತಿವಾದಿಸಿದ್ದಾರೆ.

ಇದಕ್ಕೆ ದಿವಾಕರ್ ತಿರುಗೇಟು ನೀಡಿದ್ದು, ‘ನಾನು ಪ್ರದೂಷ್ ಸಾಕ್ಷಿ ಎಂದು ಹೇಳುತ್ತಿಲ್ಲ. ಅವರು ಸಾಕ್ಷಿಯಾಗಲು ಮನವಿ ಮಾಡಿದ್ದಾರೆ. ಅದಕ್ಕಾಗಿಯೇ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರದೂಷ್ ಅವರ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ದಿವಾಕರ್ ಮತ್ತೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರ ಹೇಳಿಕೆ ಸಾಕ್ಷಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪ್ರಾಸಿಕ್ಯೂಷನ್ ನಿರ್ಧರಿಸಲಿದೆ. ಅವರು ಸಾಕ್ಷಿಯಾಗದಿದ್ದರೆ ಆರೋಪಿಯಾಗಿಯೇ ಮುಂದುವರಿಯಲಿದ್ದಾರೆ ಎಂದು ವಾದಿಸಿದ್ದಾರೆ.

ಅಲ್ಲದೆ, ಪ್ರಾಸಿಕ್ಯೂಷನ್ ಈಗಾಗಲೇ ಮಾಫಿ ಸಾಕ್ಷಿಯಾಗಲು ಪ್ರದೂಷ್‌ಗೆ ಸಮ್ಮತಿ ನೀಡಿದೆ ಎಂಬುದನ್ನೂ ದಿವಾಕರ್ ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಹೀಗಾಗಿ ಅರ್ಜಿ ವಿಚಾರಣೆಯನ್ನು ಮುಂದೂಡದೆ, ಮಾಫಿ ಸಾಕ್ಷಿ ಅರ್ಜಿಯನ್ನು ಪುರಸ್ಕರಿಸಿ ಹೇಳಿಕೆ ದಾಖಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಚಾರಣೆಯ ನಡುವೆ ಪ್ರದೂಷ್ ಅವರ ಭದ್ರತೆಯ ಬಗ್ಗೆಯೂ ವಕೀಲ ದಿವಾಕರ್ ಕೋರ್ಟ್ ಮುಂದೆ ಮನವಿ ಮಾಡಿದ್ದಾರೆ. ಪ್ರದೂಷ್ ಅವರನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

ಇದನ್ನು ಪರಿಗಣಿಸಿದ ನ್ಯಾಯಾಲಯ, ಪ್ರದೂಷ್‌ಗೆ ಸೂಕ್ತ ಭದ್ರತೆ ಒದಗಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈ ಸಂಬಂಧ ಒಂದು ವಾರ ಕಾಲಾವಕಾಶ ನೀಡಿರುವ ಕೋರ್ಟ್, ಪ್ರದೂಷ್ ಅವರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

ಇದೇ ವೇಳೆ ಪ್ರಕರಣದ ಕುರಿತು ವರದಿ ಮಾಡುವ ಮಾಧ್ಯಮಗಳಿಗೂ ನ್ಯಾಯಾಲಯ ಖಡಕ್ ವಾರ್ನಿಂಗ್ ನೀಡಿದೆ. ಪ್ರಕರಣದ ಬಗ್ಗೆ ಸರಿಯಾದ ಮಾಹಿತಿಯನ್ನೇ ನೀಡಬೇಕು. ಇಲ್ಲಿ ಆಗಿರುವುದು ಒಂದು, ಅಲ್ಲಿ ಪ್ರಕಟವಾಗುವುದು ಮತ್ತೊಂದು ಆಗಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಹೀಗಾಗಿ ಇದೀಗ ಕೋರ್ಟ್‌ನ ಮುಂದಿರುವ ಪ್ರಮುಖ ಪ್ರಶ್ನೆ ಪ್ರದೂಷ್ ಅವರ ಮಾಫಿ ಸಾಕ್ಷಿ ಅರ್ಜಿಯೇ ಆಗಿದೆ. ಎ14 ಆರೋಪಿಗೆ ಅಪ್ರೂವರ್ ಆಗುವ ಅವಕಾಶ ಸಿಗುತ್ತಾ? ಮಾಫಿ ಸಾಕ್ಷಿ ಅರ್ಜಿಗೆ ಕೋರ್ಟ್ ಒಪ್ಪಿಗೆ ನೀಡುತ್ತಾ? ಅಥವಾ ದರ್ಶನ್ ಪರ ವಕೀಲರ ಆಕ್ಷೇಪದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಾ? ಎಂಬ ಕುತೂಹಲ ಮೂಡಿದೆ.