ನವದೆಹಲಿ: ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಪೊಲೀಸರ ವಶದಲ್ಲಿದ್ದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ನ್ಯಾಯಾಲಯದ ಆದೇಶದ ಬಳಿಕ ಷರತ್ತುಬದ್ಧವಾಗಿ ಬಿಡುಗಡೆ ಮಾಡಲಾಗಿದೆ.
ಹೌದು.. ಶುಕ್ರವಾರ ದೆಹಲಿಯಲ್ಲಿ ‘ಲೆಹ್ರಾ ದೋ ತಿರಂಗಾ’ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕನ್ನಾಟ್ ಪ್ಲೇಸ್ನಲ್ಲಿ ರಾಷ್ಟ್ರಧ್ವಜ ಹಾರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆದರೆ, ಪ್ರತಿಭಟನೆಗೂ ಮುನ್ನವೇ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಹಾಗೂ ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷೆ ನೇಹಾ ಬೋರಾ ಅವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದರು.
ಇದೀಗ ದೆಹಲಿ ನ್ಯಾಯಾಲಯವು ಅಭಿಜೀತ್ ದೀಪ್ಕೆ ಅವರನ್ನು ಷರತ್ತುಬದ್ಧವಾಗಿ ಬಿಡುಗಡೆ ಮಾಡಲು ಆದೇಶಿಸಿದೆ. 50 ಸಾವಿರ ರೂಪಾಯಿಗಳ ಬಾಂಡ್ ಒದಗಿಸಬೇಕು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವುದಿಲ್ಲ ಎಂಬ ಮುಚ್ಚಳಿಕೆ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಬಳಿಕ ಅಭಿಜೀತ್ ದೀಪ್ಕೆ ಅವರು ಮಂದಿರ ಮಾರ್ಗ ಪೊಲೀಸ್ ಠಾಣೆಯಿಂದ ಹೊರಬಂದಿದ್ದಾರೆ. ಮತ್ತೊಂದೆಡೆ, ಪೊಲೀಸ್ ವಶದಲ್ಲಿದ್ದ ನೇಹಾ ಬೋರಾ ಅವರನ್ನು ಶನಿವಾರ ಮುಂಜಾನೆಯೇ ಬಿಡುಗಡೆ ಮಾಡಲಾಗಿದೆ.
ಇನ್ನು ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ನಿರ್ಬಂಧ ಉಲ್ಲಂಘಿಸಿದ ಆರೋಪದಡಿ ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರ ಕ್ರಮದ ನಡುವೆಯೂ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ನಡೆಸಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಅಕ್ರಮಗಳ ಆರೋಪದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಪೊಲೀಸ್ ಕ್ರಮಗಳು ದೆಹಲಿಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಅಭಿಜೀತ್ ದೀಪ್ಕೆ ಅವರ ಷರತ್ತುಬದ್ಧ ಬಿಡುಗಡೆ ಪ್ರಕರಣದ ಇತ್ತೀಚಿನ ಬೆಳವಣಿಗೆಯಾಗಿದೆ.

