Home Blog

ಮಹಿಳೆಯರಲ್ಲಿ ಅರಿವು ಹೆಚ್ಚಿಸಿದ `ಶಕ್ತಿ’

0

ವಿಜಯಸಾಕ್ಷಿ ಸುದ್ದಿ, ಗದಗ: ಕರ್ನಾಟಕ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಶಕ್ತಿ ಯೋಜನೆಯಡಿ ಈವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ ಸಂಭ್ರಮದ ಹಿನ್ನೆಯಲ್ಲಿ ಗದಗ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಮಾಡಿ, ಸಿಹಿ ವಿತರಿಸಿ ಅವರು ಮಾತನಾಡಿದರು.

ಈ ಯೋಜನೆ ಯಶಸ್ವಿಯಾಗಲು ಸಾರಿಗೆ ಇಲಾಖೆಯ ಸಿಬ್ಬಂದಿ ಹಾಗೂ ಸರ್ಕಾರದ ಉತ್ಸಾಹದ ಕಾರ್ಯವೈಖರಿಯೇ ಕಾರಣವಾಗಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ ಉಚಿತವಾಗಿ ರಾಜ್ಯದಾದ್ಯಂತ ಪ್ರವಾಸ ಮಾಡುವ ಅವಕಾಶ ದೊರೆತಿದ್ದು, ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯ ಅರಿವು ಹೆಚ್ಚಾಗಿದೆ. ಈ ಯೋಜನೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರ ನಿಷ್ಠೆಯಿಂದ ಯಶಸ್ಸು ಕಂಡಿದೆ ಎಂದರು.

ಗದಗ ಜಿಲ್ಲೆಯಲ್ಲಿ ಇದುವರೆಗೆ 10.98 ಲಕ್ಷ ಮಹಿಳೆಯರು ಈ ಯೋಜನೆಯ ಲಾಭ ಪಡೆದಿದ್ದು, 358.89 ಕೋಟಿ ರೂಪಾಯಿ ಮೌಲ್ಯದ ಪ್ರಯಾಣವಾಗಿದೆ ಎಂದು ಅಸೂಟಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರ್‌ಸಾಬ್ ಕೌತಾಳ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಸಮಿತಿಯ ಸದಸ್ಯರಾದ ಕೃಷ್ಣಗೌಡ ಎಚ್.ಪಾಟೀಲ, ಅಶೋಕ ಮಂದಾಲಿ ಮುಂತಾದವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ನಿಗಮದ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ. ದೇವರಾಜ, ಸಂಚಲನಾಧಿಕಾರಿ ಪಿ.ವೈ. ಮೇತ್ರಿ, ಡಿಪೋ ಮ್ಯಾನೇಜರ್ ಬಿ.ಎಲ್. ಗೆಣ್ಣೂರ, ವೆಂಕಟೇಶ್ ಜಾದವ, ಶಿವಾನಂದ ಸಂಗಣ್ಣನವರ, ಎಂ.ಬಿ. ಪಾಟೀಲ ಸೇರಿ ಹಲವರು ಉಪಸ್ಥಿತರಿದ್ದರು.

ಯಶಸ್ಸಿನ ಹಿಂದೆ ಗುರು ಕೃಪೆ ಅಗತ್ಯ

0

ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪ್ರತಿಯೊಂದು ಯಶಸ್ಸಿನ ಹಿಂದೆಯೂ ಗುರು ಕೃಪೆ ಇದ್ದೇ ಇರುತ್ತದೆ ಎಂದು ಶಿಕ್ಷಕ ಎಂ.ಎ. ಮೇಗಲಮನಿ ಹೇಳಿದರು.

ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡುಮಕ್ಕಳ ಶಾಲೆ ನಂ. 1ರಲ್ಲಿ ಹಡಪದ ಅಪ್ಪಣ್ಣ ಜಯಂತಿ ಹಾಗೂ ಗುರುಪೂರ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದುಕಿನಲ್ಲಿ ನಾವು ಎಷ್ಟೇ ಎತ್ತರಕ್ಕೇರಿದರೂ, ಅದರ ಹಿಂದೆ ಗುರುಗಳ ಪ್ರೇರಣೆಯ ಛಾಯೆ ಇದ್ದೇ ಇರುತ್ತದೆ. ಆದ್ದರಿಂದ ಗುರುಗಳಿಗೆ ಸಮಾಜದಲ್ಲಿ ವಿಶೇಷ ಗೌರವ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಗುರುಗಳ ಅನುಸರಣೆ ಮತ್ತು ಉಪದೇಶಗಳು ನಮ್ಮನ್ನು ಉತ್ತಮ ಪ್ರಜೆಗಳಾಗಿಸುವ ಶಕ್ತಿ ಹೊಂದಿವೆ. ಮಕ್ಕಳು ನಿತ್ಯ ಪಾಠ ಭೋಧನೆಯಲ್ಲಿ ಗುರುಗಳನ್ನು ಅನುಕರಿಸಿದರೆ, ದೇಶದ ಭವಿಷ್ಯ ಉಜ್ವಲವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ, ಎಂ.ಎ. ಕೊಪ್ಪಳ, ಎಚ್.ಆರ್. ಭಜಂತ್ರಿ, ಎಸ್.ಎಚ್. ಉಪ್ಪಾರ, ವೀಣಾ ಟಿ, ವಿ.ಎಂ. ಕಠಿ, ಎಸ್.ವಿ. ಹಿರೇಮಠ, ಎಸ್.ಡಿ. ಪಂಡಿತ, ಕೆ.ಎಂ. ಹೆರಕಲ್ಲ, ಮಂಜುನಾಥ ಕಲ್ಯಾಣಮಠ, ಶಬಾನಾ ಢಾಲಾಯತ, ರೇಣುಕಾ ಪರ್ವತಗೌಡರ, ಕವಿತಾ ಬಿನ್ನಾಳ ಮತ್ತು ರಾಧಾ ಬಾತಾಖಾನಿ ಉಪಸ್ಥಿತರಿದ್ದರು.

ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಸಹಕರಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ ನೇತೃತ್ವದ ನಿಯೋಗವು ಸ್ಥಳೀಯ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ವಿಭಾಗದ ಅಧಿಕಾರಿ ಉಮೇಶ್ ದಂಟಿ ಅವರನ್ನು ಸೋಮವಾರ ಭೇಟಿ ಮಾಡಿ, ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಸಹಕಾರ ನೀಡಲು ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಅಧಿಕಾರಿಗಳು ಪ್ರತಿಕ್ರಿಯಿಸಿ, ವ್ಯಾಪಾರಸ್ಥರು ಜಿಎಸ್‌ಟಿ ಕಾಯ್ದೆಯ ವ್ಯಾಪ್ತಿಯಲ್ಲಿ ಇರುವಾಗ ಯಾವುದೇ ತೊಂದರೆ ಆಗುವುದಿಲ್ಲ. ಆದರೆ ಕಾಯ್ದೆಯ ಅಧೀನದಲ್ಲಿಲ್ಲದ ವಹಿವಾಟುಗಳು ಕಂಡುಬಂದಲ್ಲಿ, ನಿರ್ದಿಷ್ಟವಾಗಿ ಜಾರಿ ಇರುವ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ವ್ಯಾಪಾರಸ್ಥರೂ ಸಹ ತಮ್ಮ ವಹಿವಾಟುಗಳನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ನಡೆಸಬೇಕೆಂದು ಸಲಹೆ ನೀಡಿದರು.

ನಿಯೋಗದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿಜಯಕುಮಾರ ಎಸ್.ಮಾಟಲದಿನ್ನಿ, ಸಹ ಗೌರವ ಕಾರ್ಯದರ್ಶಿ ರಾಘವೇಂದ್ರ ಎಸ್.ಕಾಲವಾಡ, ಕೋಶಾಧಿಕಾರಿ ಸಂಜಯ ಬಾಗಮಾರ ಉಪಸ್ಥಿತರಿದ್ದರು ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗ ಪಡೆಯುವತ್ತ ಗಮನ ಹರಿಸಿ

0

ವಿಜಯಸಾಕ್ಷಿ ಸುದ್ದಿ, ಡಂಬಳ: ಪ್ರಸ್ತುತ ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾಗಿ ಪದವಿಯನ್ನು ಪಡೆದರೆ ಸಾಲದು. ಅದರೊಂದಿಗೆ ತಂತ್ರಜ್ಞಾನ ಹಾಗೂ ಹೊಸ ಆವಿಷ್ಕಾರ ಕೌಶಲ್ಯ ಬಳಸಿಕೊಳ್ಳುವ ಮೂಲಕ ಉದ್ಯೋಗವನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.

ಅವರು ಡಂಬಳದ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಐಟಿಐನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ತಮ್ಮ ತಮ್ಮ ವೃತ್ತಿಯಲ್ಲಿ ಕೌಶಲ್ಯ ಪಡೆದು ಹೊಸ ತಂತ್ರಜ್ಞಾನ ಹಾಗೂ ಆವಿಷ್ಕಾರಗಳನ್ನು ಬಳಸಿಕೊಂಡು, ಉನ್ನತ ವೃತ್ತಿ ಜೀವನ ನಡೆಸುವತ್ತ ಮುನ್ನುಗ್ಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

ಪ್ರಾಚಾರ್ಯ ಎಸ್.ಎಂ. ಶಿವರಾಚಯ್ಯ ಮಾತನಾಡಿ, ಐಟಿಐ ಕೋರ್ಸ್ ಮುಗಿದ ತಕ್ಷಣ ಅಪ್ರೆಂಟಿಸ್ ಕೋರ್ಸ್ ಮಾಡುವದರಿಂದ ಕೆಲಸದೊಂದಿಗೆ ಸಂಬಳವನ್ನೂ ಪಡೆಯಬಹುದು. ಪ್ರತಿಯೊಬ್ಬರೂ ಇದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.

ಡಾ. ಉಮೇಶ ಪುರದ, ಈ.ವಿ. ಹಿರೇಮಠ, ಆರ್.ವಿ. ಘಳಗಿ, ಆರ್.ಜಿ. ಕೊರ್ಲಹಳ್ಳಿ, ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕರು ಇದ್ದರು.

ಮಹಿಳೆಯರ ಬದುಕಿಗೆ ಬಲವಾದ `ಶಕ್ತಿ’

0

ವಿಜಯಸಾಕ್ಷಿ ಸುದ್ದಿ, ಗದಗ: ಸರ್ಕಾರಿ ಬಸ್‌ಗಳಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಏಕೈಕ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಎಂಬ ಹೆಮ್ಮೆ, ಸಾರ್ಥಕತೆ ನಮಗಿದೆ ಎಂದು ತಾಲೂಕಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಹೇಳಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ ಸಂಭ್ರಮದ ಹಿನ್ನೆಯಲ್ಲಿ ಗದಗ ನಗರದ ಗಾನಯೋಗಿ ಪಂ. ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್‌ಗೆ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯೊAದಿಗೆ ಪ್ರಾರಂಭಿಸಲಾದ `ಶಕ್ತಿ’ ಯೋಜನೆಯ ಫಲಾನುಭವಿಗಳ ಸಂಖ್ಯೆ ಇಂದಿಗೆ 500 ಕೋಟಿ ಗಡಿಯನ್ನು ದಾಟಿ ದಾಖಲೆ ಬರೆದಿದೆ. ನಾಡಿನ ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ, ವೈದ್ಯಕೀಯ ಚಿಕಿತ್ಸೆ ಮುಂತಾದ ಉದ್ದೇಶಗಳಿಗೆ ಕುಟುಂಬದ ಯಜಮಾನನ ಮೇಲೆ ಅವಲಂಬಿತರಾಗದೆ ಸ್ವತಂತ್ರ ನಿರ್ಣಯ ಕೈಗೊಂಡು ಸ್ವಾವಲಂಬಿ ಬದುಕಿನೆಡೆಗೆ ಪಯಣಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಇದು ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಗ್ಗೆ ಹೆಮ್ಮೆಯಿದೆ ಎಂದರು.

ಗದಗ ತಾಲೂಕು ಸಾರಿಗೆ ಘಟಕದಲ್ಲಿ 8,31,378 ಮಹಿಳಾ ಪ್ರಯಾಣಿಕರು ಪ್ರಯಾಣ ಬೆಳೆಸುವ ಮೂಲಕ ದಾಖಲೆಯ 253.28 ಲಕ್ಷ ರೂ ಟಿಕೆಟ್ ಮೊತ್ತದ ಪ್ರಯಾಣ ಮಾಡಿದ್ದಾರೆ. ಅದರಂತೆ ಗದಗ ಜಿಲ್ಲೆಯಲ್ಲಿ 10.98 ಲಕ್ಷ ಮಹಿಳೆಯರು ಪ್ರಯಾಣಿಸುವ ಮೂಲಕ 358.89 ಕೋಟಿ ರೂ ಆದಾಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶಂಭು ಎಸ್.ಕಾಳೆ, ಮೀನಾಕ್ಷಿ ಬೆನಕಣ್ಣನವರ, ಸಾವಿತ್ರಿ ಹೂಗಾರ, ದಯಾನಂದ್ ಪವಾರ, ಸಂಗು ಕರೆಕಲಮಟ್ಟಿ, ಎನ್.ಬಿ. ದೇಸಾಯಿ, ಸಂಗಮೇಶ್ ಹಾದಿಮನಿ, ರಮೇಶ್ ಹೊನ್ನಿನಾಯ್ಕರ, ದೇವರಡ್ಡಿ ತಿರ್ಲಾಪುರ್, ಮಲ್ಲಪ್ಪ ಚಿಂಚಲಿ, ಗಣೇಶ್ ಸಿಂಗ್ ಮಿಟಾಡೆ, ಮಲ್ಲಪ್ಪ ಬಾರಕೇರ, ಭಾಷಾಸಾಬ್ ಮಲ್ಲಸಮುದ್ರ, ಗಣರಾದ ಬಸವರಾಜ ಕಡೆಮನಿ, ಜಾನಕಿ ಮಲ್ಲಾಪುರ, ಶರೀಫ್ ಬಿಳಿಯಲಿ, ಕೆಎಸ್‌ಆರ್‌ಟಿಸಿ ಗದಗ ವಿಭಾಗೀಯ ನಿಯಂತ್ರಣಾಧಿಕಾರಿ ಡಿ ದೇವರಾಜ, ವಿಭಾಗೀಯ ಸಂಚಲನಾಧಿಕಾರಿ ಪಿ.ವೈ. ಮೇತ್ರಿ, ಡಿಪೋ ಮ್ಯಾನೇಜರ್ ಬಿ.ಎಲ್. ಗೆಣ್ಣೂರ, ನಿಯಂತ್ರಕರಾದ ವೆಂಕಟೇಶ್ ಜಾದವ, ಶಿವಾನಂದ ಸಂಗಣ್ಣನವರ, ಎಂ.ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಪೀರ್‌ಸಾಬ್ ಕೌತಾಳ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಸಮಿತಿಯ ಜಿಲ್ಲಾ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಕೃಷ್ಣಗೌಡ ಹೆಚ್.ಪಾಟೀಲ ಸೇರಿದಂತೆ ಎಲ್ಲ ಸದಸ್ಯರು ನೆರೆದ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.

“ಐದು ಗ್ಯಾರಂಟಿ ಯೋಜನೆಗಳ ಪೈಕಿ ರಾಜ್ಯ ಸರ್ಕಾರ ಮೊದಲು ಜಾರಿಗೊಳಿಸಿದ `ಶಕ್ತಿ’ ಯೋಜನೆ ರಾಜ್ಯದ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿ ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಕಾರಣವಾಗಿದೆ”

– ಕೃಷ್ಣಗೌಡ ಹೆಚ್.ಪಾಟೀಲ.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ

ಪ್ರಾಧಿಕಾರದ ಸದಸ್ಯರು.

ನಕ್ಕ ಕಮಲ; ನಲುಗಿದ ಕೈ

0
ವಿಜಯಸಾಕ್ಷಿ ಸುದ್ದಿ, ರೋಣ: ಸೂಡಿ ಗ್ರಾ.ಪಂಚಾಯತಿಯ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕೈ ಬೆಂಬಲಿತ ಅಭ್ಯರ್ಥಿ ಮುಖಭಂಗವನ್ನು ಅನುಭವಿಸಿದ್ದು, ಕೊನೆಗೆ ಕಾಂಗ್ರೆಸ್ ಬೆಂಬಲಿತ 11 ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಆಡಳಿತ ವ್ಯವಸ್ಥಯಿಂದ ಹಿಂದೆ ಸರಿದಿದ್ದಾರೆ.

ಈ ಹಿಂದೆ ಗ್ರಾ.ಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಖಾದರಬಿ ಮುಜಾವರ (ಡಾಲಾಯತ) ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಸೂಡಿ ಗ್ರಾ.ಪಂ ಒಟ್ಟು 17 ಸದಸ್ಯರುಗಳ ಬಲವನ್ನು ಹೊಂದಿದ್ದು, ಅದರಲ್ಲಿ 11 ಕಾಂಗ್ರೆಸ್ ಬೆಂಬಲಿತ ಸದಸ್ಯರು, 6 ಜನ ಬಿಜೆಪಿ ಬೆಂಬಲಿತ ಸದಸ್ಯರು ಇದ್ದರು.. ಸಂಖ್ಯಾಬಲವಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನು ಅನುಭವಿಸಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ.

ತೆರವಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗಂಗವ್ವ ಗೊರವರ ನಾಮಪತ್ರ ಸಲ್ಲಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಶಾಬೇಗಂ ಮೊಕಾಶಿ ಎಂಬುವರು ನಾಮಪತ್ರ ಸಲ್ಲಿಸಿದರು. ನಂತರ ನಡೆದ ಬೆಳವಣಿಗೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಶಾಬೇಗಂ ಮೊಕಾಶಿ 9 ಮತಗಳನ್ನು ಪಡೆದು ಗೆದ್ದು ಬೀಗಿದರು. ಸ್ಪಷ್ಟ ಬಹುಮತ ಹೊಂದಿದ್ದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಗಂಗವ್ವ ಗೊರವರ ಪರಾಭವಗೊಂಡರು.

ಸ್ಪಷ್ಟ ಬಹುಮತ ಹೊಂದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಪರಾಭವಗೊಂಡಿದ್ದು ಕಾಂಗ್ರೆಸ್ ಮುಖಂಡರಲ್ಲಿ ಮುಜುಗರ ತರಿಸಿತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಆಡಳಿತ ವ್ಯವಸ್ಥೆಯಿಂದ ದೂರ ಉಳಿದಿದ್ದಾರೆ.

ಕೀಟನಾಶಕದ ಬದಲಾಗಿ ತಾನೇ ಬೆಳೆದ ಸಮೃದ್ಧ ಬೆಳೆಗೆ ಕಳೆನಾಶಕ ಸಿಂಪಡಿಸಿದ ಮುಗ್ಧ ರೈತ: 3 ಎಕರೆ ಹತ್ತಿ ಬೆಳೆ ನಾಶ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಗೊಜನೂರ ಗ್ರಾಮದ ಮುಗ್ಧ ರೈತನೋರ್ವ ತಾನೇ ಕಷ್ಟಪಟ್ಟು ಬಿತ್ತಿ, ಬೆಳೆದು ಸಂರಕ್ಷಿಸಿದ ಹತ್ತಿ ಬೆಳೆಗೆ ತನ್ನ ಕೈಯಾರ ಕಳೆನಾಶಕ ಸಿಂಪಡಿಸಿ ಬೆಳೆ ಹಾಳು ಮಾಡಿಕೊಂಡ ಘಟನೆ ಜರುಗಿದೆ. ಶಿಕ್ಷಣದ ಕೊರತೆ, ತಪ್ಪು ಮಾಹಿತಿ, ತಪ್ಪು ಕಲ್ಪನೆಯಿಂದ ಕೀಟನಾಶಕದ ಬದಲಾಗಿ ತಾನೇ ಬೆಳೆದ ಸಮೃದ್ಧ ಬೆಳೆಗೆ ಕಳೆನಾಶಕ ಸಿಂಪಡಿಸಿ ಈಗ ಮರುಗುತ್ತಿದ್ದಾನೆ.

ಗೊಜನೂರ ಗ್ರಾಮದ ಹಿರಿಯ ರೈತ ತಾಜುದ್ದೀನ ಆನಿ ಎಂಬ ರೈತ ತನ್ನ 6 ಎಕರೆ ಜಮೀನಿನಲ್ಲಿ 3 ಎಕರೆ ಗೋವಿನಜೋಳ, 3 ಎಕರೆ ಹತ್ತಿ ಬಿತ್ತನೆ ಮಾಡಿದ್ದರು. ಇತ್ತೀಚಿನ ದಿನಗಳಲ್ಲಿ ಕೃಷಿ ಕೂಲಿಕಾರರ ಕೊರತೆಯಿಂದ ರೈತರು ಕಳೆನಾಶಕಕ್ಕೆ ಮೊರೆ ಹೋಗಿದ್ದಾರೆ. ಅದರಂತೆ ಇವರೂ ಸಹಿತ ಗೋವಿನ ಜೋಳದಲ್ಲಿನ ಕಳೆ ನಿಯಂತ್ರಣಕ್ಕಾಗಿ ಲಕ್ಷ್ಮೇಶ್ವರದ ಕೃಷಿ ಪರಿಕರ ಮಾರಾಟದ ಅಂಗಡಿಯಿಂದ ಕಳೆ ನಾಶಕ ಕೇಳಿ ತಂದಿದ್ದಾರೆ. ಗೋವಿನ ಜೋಳದ ಬೆಳೆಯಲ್ಲಿ ಸಿಂಪರಣೆ ಮಾಡಿ ಉಳಿದ ಕಳೆನಾಶಕವನ್ನೇ 3 ಎಕರೆ ಹತ್ತಿ ಬೆಳೆಗೆ ಸಿಂಪರಣೆ ಮಾಡಿದ್ದಾರೆ.

ಸಿಂಪರಣೆಯ ನಾಲ್ಕು ದಿನದ ನಂತರ ಬೆಳೆ ಒಣಗಿರುವುದು ಗೊತ್ತಾಗಿದೆ. ಆದರೆ ಇದಕ್ಕೆ ಯಾರನ್ನೂ ದೂಷಿಸಲಾಗದೇ ಒಳಗೊಳಗೆ ಸಂಕಟ ಪಟ್ಟುಕೊಳ್ಳುವ ಪರಿಸ್ಥಿತಿ ರೈತನದ್ದಾಗಿದೆ. ಇಷ್ಟೇ ಅಲ್ಲದೆ, ಕಳೆನಾಶಕ ಸಿಂಪರಣೆಯಿಂದ ಪಕ್ಕದ ಹೊಲದ ಒಂದಷ್ಟು ಹೆಸರು ಬೆಳೆ ಹಾಳಾಗಿ ಅದಕ್ಕೂ ದಂಡ ತೆತ್ತಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿದ ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ, ಕೃಷಿ ಕೂಲಿಕಾರರ ಕೊರತೆಯ ಕಾರಣದಿಂದ ರೈತರು ಅತಿಯಾದ ಕಳೆನಾಶಕದ ಬಳಕೆ ಮಾಡುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಬೆಳೆ ರಕ್ಷಣೆಯ ಅನಿವಾರ್ಯತೆಯ ನಡುವೆ ಕಳೆನಾಶಕ ಸಿಂಪರಣೆ ಮಾಡುವ ಮೊದಲು ಕೃಷಿ ಅಧಿಕಾರಿಗಳು, ನುರಿತ/ಅಧಿಕೃತ ಕೃಷಿ ಪರಿಕರ ಮಾರಾಟಗಾರರು, ವಿದ್ಯಾವಂತ ಪ್ರಗತಿಪರ ರೈತರ ಸಲಹೆ-ಸೂಚನೆ ಪಡೆಯಬೇಕು.

ಕಳೆ ನಾಶಕದಿಂದ ಬೆಳೆಹಾನಿಯಾದರೆ ಯಾವುದೇ ಪರಿಹಾರ/ಸಹಾಯಧನ ಸಿಗಲಾರದು. ಕಳೆ ನಾಶದ ಜತೆಗೆ ಭೂಮಿಯಲ್ಲಿನ ಬೆಳೆ ಪೋಷಕ ಸೂಕ್ಷ್ಮಾಣು ಜೀವಿಗಳನ್ನು ನಾಶ ಮಾಡುತ್ತದೆ. ಅತಿಯಾದ ಕಳೆನಾಶಕದಿಂದ ಅಳಿಲು, ಹಾವು, ಮೊಲ, ಬೆಕ್ಕು, ಪಕ್ಷಿ ಸಂಕುಲಕ್ಕೆ ಕಂಟಕವಾಗುತ್ತಿದೆ. ಕೃಷಿಯೂ ಒಂದು ವಿಜ್ಞಾನವೇ ಆಗಿದೆ. ಅರಿತು ಬಳಕೆ ಮಾಡಬೇಕು ಎಂದರು.

ಬದಲಾವಣೆಗೆ ತಕ್ಕಂತೆ ಹೊಂದಿಕೊಳ್ಳಲಾಗದ ಅವಿದ್ಯಾವಂತ, ಮುಗ್ಧ ರೈತರರಿಗೆ ಕೃಷಿ ಇಲಾಖೆ ತಿಳುವಳಿಕೆ, ಜಾಗೃತಿ ಮೂಡಿಸುವ ಕಾರ್ಯಕ್ರಮಗಳಾಗಬೇಕು. ಭವಿಷ್ಯದ ದೃಷ್ಟಿಯಿಂದ ಕ್ರಿಮಿನಾಶಕ, ಕಳೆನಾಶಕದ ಬದಲಾಗಿ ಜೈವಿಕ ಸಂಶೋಧನೆ, ಮಾರ್ಗೋಪಾಯ ಕಂಡುಕೊಳ್ಳಬೇಕಾಗಿದೆ. ಸಾವಯುವ ಕೃಷಿಗೆ ಸರ್ಕಾರ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ರೈತ ಚನ್ನಪ್ಪ ಷಣ್ಮುಕಿ ಮನವಿ ಮಾಡಿಕೊಂಡಿದ್ದಾರೆ.

ಗ್ರಾಮೀಣ ಪೊಲೀಸರ ವಿಶೇಷ ಕಾರ್ಯಾಚರಣೆ: ಗಾಂಜಾ ಮಾರಾಟ ಮಾಡುತ್ತಿದ್ದ ಆರು ಜನರ ಬಂಧನ- 6.70 ಲಕ್ಷ ರೂ ಮೌಲ್ಯದ ಗಾಂಜಾ ವಶಕ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಇತ್ತೀಚಿನ ದಿನಗಳಲ್ಲಿ ಗದಗ-ಬೆಟಗೇರಿ ಅವಳಿ ನಗರದಾದ್ಯಂತ ಅಕ್ರಮ ಗಾಂಜಾ ಮಾರಾಟದ ಹಾವಳಿ ಹೆಚ್ಚಾಗಿತ್ತು. ಇದರಿಂದ ಯುವಕರು ಗಾಂಜಾ ಚಟಕ್ಕೆ ಮಾರುಹೋಗಿ ಅನೇಕ ಸಮಾಜದ್ರೋಹಿ ಕೆಲಸದಲ್ಲಿ ನಿರತರಾಗಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಓರ್ವ ಮಹಿಳೆಯೂ ಸೇರಿದಂತೆ ಒಟ್ಟೂ 6 ಜನರನ್ನು ಬಂಧಿಸಿ 6.7 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ಗಾಂಜಾ ಮಾರಾಟ ಮತ್ತು ಸಾಗಾಟಗಾರರಿಗೆ ಬಲೆ ಬೀಸಿ, ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಸಿದ್ದರಾಮೇಶ್ವರ ಗಡೇದ, ಪಿಎಸ್‌ಐಗಳಾದ ಎ.ಆರ್. ರಾಮೇನಹಳ್ಳಿ, ಎಸ್.ಬಿ. ಕವಲೂರ, ಸಿಬ್ಬಂದಿಗಳಾದ ಪ್ರಕಾಶ ಗಾಣಗೇರ, ಅಶೋಕ ಬೂದಿಹಾಳ, ಅನಿಲ ಬನ್ನಿಕೊಪ್ಪ, ಗಂಗಾಧರ ಮಜ್ಜಗಿ, ರಾಜಮಹ್ಮದ ಅಲಮದಾರ, ಹೇಮಂತ ಪರಸಣ್ಣವರ, ಲಕ್ಷ್ಮಣ ಪೂಜಾರ, ಪ್ರವೀಣ ಶಾಂತಪ್ಪನವರ, ರವಿ ನಾಯ್ಕರ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಗುರು ಬೂದಿಹಾಳ, ಸಂಜೀವ ಕೊರಡೂರ ಇವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.

ತನಿಖೆ ಚುರುಕುಗೊಳಿಸಿದ್ದ ತಂಡ ಹಲವು ಆಯಾಮಗಳಿಂದ ಮಾಹಿತಿ ಸಂಗ್ರಹಿಸಿ ಗಾಂಜಾ ಮಾರಾಟ ಮಾಡುತ್ತಿದ್ದ 6 ಜನರನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಅಂದಾಜು 6.7 ಕೆ.ಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅಂದಾಜು 6 ಲಕ್ಷ 70 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 148/2025 ಕಲಂ 20(ಎ) ಎನ್‌ಡಿಪಿಎಸ್ ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಆಧುನಿಕ, ಅಗತ್ಯ ತಂತ್ರಾಂಶ ಮತ್ತು ತಮ್ಮ ಕೌಶಲ್ಯದಿಂದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಗಾಂಜಾ ಮಾರಾಟ ಜಾಲವನ್ನು ಬೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳನ್ನು ಚಾಣಾಕ್ಷತನದಿಂದ ಬಂಧಿಸಿ ಅಕ್ರಮ ಗಾಂಜಾವನ್ನು ವಶಪಡಿಸಿಕೊಂಡು ಆರೋಪಿತರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಗಾಂಜಾ ಪೂರೈಕೆ ಆಗುತ್ತಿರುವ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ಮುಂದುವರೆದಿದ್ದು, ಒಟ್ಟಾರೆಯಾಗಿ ಆರೋಪಿತರಿಂದ ಒಂದು ಬೈಕ್, 6 ಮೊಬೈಲ್ ಫೋನುಗಳು, 1 ಸಾವಿರ ರೂ ನಗದು ಹಣ ವಶಪಡಿಸಿಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ಎಸ್.ಪಿ ಬಿ.ಎಸ್ ನೇಮಗೌಡ ತಿಳಿಸಿದರು.

ಬಂಧಿತ ಆರೋಪಿಗಳು

* ಬಾಪು ಪುಣಜಪ್ಪ ಹರಣಸಿಕಾರಿ,

* ಚಂದಪ್ಪ ತಂದೆ ಪುಣಜಪ್ಪ ಹರಣಸಿಕಾರಿ

* ಗಾಯಿತ್ರಿ ಕೋಂ ಮಾರುತಿ ಕಾಳೆ

* ಮಾರುತಿ ಶೇಖಪ್ಪ ಕಾಳೆ

* ಗೋಪಾಲ ರಾಮಚಂದ್ರ ಬಸವಾ

* ಕಲ್ಯಾಣಬಾಬು ಚಿನ್ನನಾಗು ಶಿಕಾರಿ

ಹಣಕಾಸು ಸಾಕ್ಷರತೆಯಿಂದ ಮಹಿಳೆಯರ ಆರ್ಥಿಕ ಅಭಿವೃದ್ಧಿ

0

ವಿಜಯಸಾಕ್ಷಿ ಸುದ್ದಿ, ಗದಗ: ಇಂದಿನ ಆಧುನಿಕ ಸಮಾಜದಲ್ಲಿ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದುತ್ತಿರುವ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಅಗತ್ಯ ಮಾಹಿತಿ ಹಾಗೂ ಆರ್ಥಿಕ ನೆರವನ್ನು ಪಡೆದು ಜವಾಬ್ದಾರಿಯುತ ಯಶಸ್ವಿ ಮಹಿಳೆಯಾಗಿ ಗುರುತಿಸಿಕೊಳ್ಳಬೇಕು. ಹಣಕಾಸು ಸಾಕ್ಷರತೆಯಿಂದ ಮಾತ್ರ ಮಹಿಳೆಯರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಬೆಟಗೇರಿ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮಣ ಎಂ.ಆರಿ ಹೇಳಿದರು.

ಬೆಟಗೇರಿ ಹಳೆ ಬನಶಂಕರಿದೇವಿ ಸಮುದಾಯ ಭವನದಲ್ಲಿ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಗದಗ ಶಾಖೆಯಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ತಮ್ಮ ಆರ್ಥಿಕ ಅಭಿವೃದ್ಧಿಗಾಗಿ ಮೈಕ್ರೊ ಫೈನಾನ್ಸ್‌ ಗಳು ನೀಡುವ ಸಾಲವನ್ನು ಅಗತ್ಯವಿದ್ದಷ್ಟೇ ಪಡೆದು ನಿಗದಿತ ಕಾರ್ಯಕ್ಕೆ ಬಳಸಿ, ಲಾಭದಾಯಕ ಉದ್ಯೋಗ ಮಾಡಿ. ಅದರಿಂದ ಬರುವ ಆದಾಯದಿಂದ ತಾವು ಪಡೆದ ಸಾಲವನ್ನು ಜವಾಬ್ದಾರಿಯಿಂದ ಮರಳಿ ಪಾವತಿಸಿ ಸಮಾಜದಲ್ಲಿ ಸದೃಢವಾಗಿ ಬೆಳೆಯಬೇಕು. ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್, ಮೈಕ್ರೋ ಫೈನಾನ್ಸ್ ಹಾಗೂ ಇತರೆಡೆಗಳಲ್ಲಿ ತಾವು ಪಡೆದ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಬೇಕು. ಆ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ, ಸದೃಢ ಮಹಿಳೆಯರಾಗಬೇಕು ಎಂದು ಅವರು ಹೇಳಿದರು.

ಜವಾಬ್ದಾರಿಯುತ ಸಾಲ, ಕ್ರೆಡಿಟ್ ಶಿಸ್ತು ಹಾಗೂ ಹಣಕಾಸು ಸಾಕ್ಷರತೆಯ ಕುರಿತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಬೆಳಗಾವಿ ವಿಭಾಗೀಯ ವ್ಯವಸ್ಥಾಪಕ ರವಿ ಎಸ್.ಎನ್ ಮಾತನಾಡಿ, ರಾಜ್ಯದಲ್ಲಿ 12 ಲಕ್ಷ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ನೀಡುವ ಜೊತೆಗೆ ಆ ಕುಟುಂಬದ ಮಹಿಳೆಯರಲ್ಲಿ ಸ್ವಾಭಿಮಾನದ ಬದುಕು ರೂಪಿಸಿಕೊಟ್ಟು, ಅವರನ್ನು ಆರ್ಥಿಕವಾಗಿ ಬಲಗೊಳಿಸುವಲ್ಲಿ ತಮ್ಮ ಸಂಸ್ಥೆ ಮುಂಚೂಣಿಯಲ್ಲಿದೆ ಎಂದರು.

ಹಣಕಾಸು ಸಾಕ್ಷರತೆ ಕುರಿತು ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಹಾವೇರಿ ಪ್ರಾದೇಶಿಕ ವ್ಯವಸ್ಥಾಪಕರಾದ ನಾಗಪ್ಪ ಸಿ ಮಾತನಾಡಿದರು. ಗದಗ ಸೈಬರ್ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಕುಮಾರ ಹರ್ಲಾಪೂರ ಮಾತನಾಡಿ, ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು.

ಆರ್ಥಿಕ ನೆರವನ್ನು ಪಡೆದು ಸ್ವ ಉದ್ಯೋಗಿಗಳಾಗಿ ಜೀವನ ನಿರ್ವಹಿಸುತ್ತಿರುವ ಮಹಿಳೆಯರಾದ ನಿರ್ಮಲಾ ಕಮಲಾಕ್ಷಿ, ಭಾಗ್ಯವತಿ, ಶಶಿಕಲಾ ಚಕ್ರಸಾಲಿ ಅವರು ತಾವು ಸಾಲ ಸದ್ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಅನುಭವವನ್ನು ಹಂಚಿಕೊಂಡರು.

ಎಎಸ್‌ಐ ಬಿ.ಬಿ. ಜಕ್ಕಣ್ಣವರ, ಬೆಳಗಾವಿ ಡಿವಿಜಿನಲ್ ವ್ಯವಸ್ಥಾಪಕ ಮಾದೇಗೌಡ, ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ಆನಂದ ಲಮಾಣಿ, ಏರಿಯಾ ಮ್ಯಾನೇಜರ್ ಚಂದ್ರಪ್ಪ ಅರ್ಕಸಾಲಿ ವೇದಿಕೆಯಲ್ಲಿದ್ದರು. ನೇತ್ರಾವತಿ ಪ್ರಾರ್ಥಿಸಿದರು. ಈರಣ್ಣ ಎಂ.ಎಚ್ ಸ್ವಾಗತಿಸಿದರು. ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಗದಗ ಶಾಖೆ ವ್ಯವಸ್ಥಾಪಕ ಬಸಪ್ಪ ಸ್ವಾದಿ ವಂದಿಸಿದರು.

ಮಕ್ಕಳಿಗೆ ಮೊಬೈಲ್ ಗೀಳನ್ನು ಬಿಡಿಸಿ ಪುಸ್ತಕ ಓದುವುದನ್ನು ರೂಢಿ ಮಾಡಿಸಬೇಕು. ಸಾಧ್ಯವಾದಷ್ಟು ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರವಿಡಬೇಕು. ಮಹಿಳೆಯರು ಬಸ್ ಹತ್ತುವಾಗ ಹುಷಾರಾಗಿರಬೇಕು. 18 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಬೈಕ್‌ಗಳನ್ನು ಕೊಡಬೇಡಿ. ಗುಣಮಟ್ಟದ ಶಿಕ್ಷಣ ನೀಡಿ, ಮಕ್ಕಳಲ್ಲಿ ಪ್ರಾಮಾಣಿಕತೆ, ಸ್ವಾಭಿಮಾನ, ಶ್ರಮ ಸಂಸ್ಕೃತಿಯನ್ನು ತುಂಬಿ ಇಂದಿನ ಆಧುನಿಕ ಜಗತ್ತಿನಲ್ಲಿ ಸದೃಢವಾಗಿ ಬಾಳುವಂತೆ ಸಿದ್ಧಗೊಳಿಸಬೇಕು ಎಂದು ಪಿಎಸ್‌ಐ ಲಕ್ಷ್ಮಣ ಎಂ.ಆರಿ ಕರೆ ನೀಡಿದರು.

ಒಂದೇ ಸೂರಿನಡಿ ಹಲವು ಸೇವೆ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಾಗರಿಕರಿಗೆ ಆನ್‌ಲೈನ್ ಸೇವೆಗಳು ಒಂದೇ ಸೂರಿನಲ್ಲಿ ದೊರೆಯಬೇಕೆನ್ನುವ ಉದ್ದೇಶದಿಂದ ರಾಜ್ಯ ಸರಕಾರವು ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಸ್ಥಾಪಿಸಿದೆ. ಈ ಕೇಂದ್ರವು ನಾಗರಿಕರಿಗೆ ವಿವಿಧ ಸರ್ಕಾರಿ ಮತ್ತು ಖಾಸಗಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒದಗಿಸುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಯುವ ಮುಖಂಡ ಆನಂದ ಗಡ್ಡದೇವರಮಠ ಅಭಿಪ್ರಾಯಪಟ್ಟರು.

ಅವರು ರವಿವಾರ ಪಟ್ಟಣದ ಬಳಿಗಾರ(ಕಾಶೆಟ್ಟಿ) ಓಣಿಯಲ್ಲಿ ನೂತನ ಕರ್ನಾಟಕ ಒನ್ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಒನ್ ಕರ್ನಾಟಕ ಸರ್ಕಾರದ ಆನ್‌ಲೈನ್ ಪೋರ್ಟಲ್ ಆಗಿದ್ದು, ಇದರಲ್ಲಿ ಸರಕಾರದ ಅನೇಕ ಮಹತ್ವದ ಯೋಜನೆಗಳು, ಆಧಾರ್ ತಿದ್ದುಪಡಿ ಇತ್ಯಾದಿ ಸುಮಾರು 48 ಸೇವೆಗಳು ಇದರಲ್ಲಿ ದೊರೆಯುವಂತೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆಗಳನ್ನು ಸಹ ಇದೇ ಕರ್ನಾಟಕ ಒನ್ ಕೇಂದ್ರದಲ್ಲಿ ಪಾವತಿಸಬಹುದಾಗಿದ್ದು, ಹಂತಹಂತವಾಗಿ ಈ ಕೇಂದ್ರದಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ದೊರೆಯುವಂತಾಗಲಿ ಎಂದು ಹೇಳಿದರು.

ಕೇಂದ್ರದ ಮುಖ್ಯಸ್ಥ ಶಬ್ಬೀರ್‌ಅಲಿ ಶೇಖ್ ಮಾತನಾಡಿ, ಕರ್ನಾಟಕ ಸರ್ಕಾರವು ಒದಗಿಸುವ ವಿವಿಧ ಸೇವೆಗಳನ್ನು ಪಡೆಯಲು ಜನರು ಕರ್ನಾಟಕ ಒನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಆಸ್ತಿ ತೆರಿಗೆ, ನೀರಿನ ಬಿಲ್‌ಗಳನ್ನೂ ಇಲ್ಲಿ ಪಾವತಿಸಬಹುದು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಸೇವೆಗಳನ್ನು ಇಲ್ಲಿ ಪಡೆಯಬಹುದು. ಕರ್ನಾಟಕ ಒನ್ ಕೇಂದ್ರ ಪಟ್ಟಣದ ನಾಗರಿಕರಿಗೆ ವಿವಿಧ 15 ಇಲಾಖೆಗಳ 48 ಸೇವೆಗಳನ್ನು ಒದಗಿಸಲಿದ್ದು, ಹಂತ ಹಂತವಾಗಿ ಸೇವಾ ಕ್ಷೇತ್ರವನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಪೀರದೋಷ್ ಅಡೂರ, ಸದಸ್ಯರಾದ ಎಸ್.ಕೆ. ಹವಾಲ್ದಾರ, ಮುಸ್ತಾಕ್‌ಅಹ್ಮದ್ ಶಿರಹಟ್ಟಿ, ಸಿಕಂದರ್ ಕಣಕೆ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎಮ್.ಎಮ್. ಗದಗ, ಇಬ್ರಾಹಿಂ ಮುಲ್ಲಾ, ಗಂಗಾಧರ ಮ್ಯಾಗೇರಿ, ನಾರಾಯಣಸಾ ಪವಾರ, ಕಿರಣ ನವಲೆ, ನಿರಂಜನ ವಾಲಿ, ಚಂದ್ರಶೇಖರ ಸುಂಕದ, ನೀಲಪ್ಪ ಪಡಗೇರಿ, ವಾಸಿ ಬೋಮಲೆ ಮುಂತಾದವರಿದ್ದರು.

error: Content is protected !!