‘ಎಪ್ಪತ್ತು ಗಿರಿ ಸುತ್ತುವುದಕ್ಕಿಂತ ಕಪ್ಪತ್ತಗಿರಿ ಸುತ್ತುವುದು ಮೇಲು’, ‘ಕಣ್ಣಿದ್ದವನು ಕನಕಗಿರಿ ನೋಡಬೇಕು, ಕಾಲಿದ್ದವನು ಕಪ್ಪತ್ತಗುಡ್ಡ ನೋಡಬೇಕು’ ಎನ್ನುವ ಹಲವಾರು ನುಡಿಗಟ್ಟುಗಳು ಕಪ್ಪತ್ತಗಿರಿ ಕುರಿತು ಉತ್ತರ ಕರ್ನಾಟಕದಾದ್ಯಂತ ಮನೆ ಮಾತಾಗಿವೆ. ಇಂತಹ ಕಪ್ಪತ್ತಗುಡ್ಡವೀಗ ಮುಂಗಾರು ಮಳೆಯ ಸಿಂಚನದಿಂದ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಇದು ಪ್ರವಾಸಿಗರ ಆಕರ್ಷಣೆಗೆ ಪ್ರಮುಖ ಕಾರಣವಾಗಿದೆ.
ಬೀಸುವ ತಂಗಾಳಿ ಚದುರುತ್ತಿರುವ ಮೋಡಗಳನ್ನು ಇನ್ನೇನು ಓಡಿಸಿಕೊಂಡು ಹೋಗುವಂತಿದೆ. ಶ್ವೇತಮೋಡಗಳ ನಡುವೆ ಹಚ್ಚಹಸಿರ ಪರ್ವತ ಕಣ್ಮನ ಸೆಳೆಯದೇ ಇರದು. ಗದಗ ಜಿಲ್ಲೆಯ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವ್ಯಾಪ್ತಿಯಲ್ಲಿರುವ ಈ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಶುದ್ಧಗಾಳಿಗೆ ಹೆಸರುವಾಸಿ. ಹೀಗಾಗಿಯೇ ವಾಯು ವಿಹಾರಕ್ಕೂ ಈ ತಾಣ ಪ್ರವಾಸಿಗರಿಗೆ ಹೇಳಿ ಮಾಡಿಸಿದಂತಿದೆ. ಪರಿಶುದ್ಧ ಗಾಳಿ ಬೀಸುವ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ. ಈ ಎಲ್ಲ ಕಾರಣಗಳಿಂದ ಕಪ್ಪತ್ತಗಿರಿಯನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದು ಕರೆಯಲಾಗುತ್ತದೆ.
ಈ ಬೆಟ್ಟದ ತುದಿಯಲ್ಲಿ ಸುಮಾರು 250 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅನ್ನಜ್ಞಾನ ದಾಸೋಹ ಮಠವಿದೆ. ಈ ಮಠವು ದಕ್ಷಿಣ ಸಸ್ಯಕಾಶಿಯೆಂದು ಪ್ರಖ್ಯಾತ. ಕಪ್ಪತ್ತಗುಡ್ಡವು ಅಪಾರ ಖನಿಜ, ನೈಸರ್ಗಿಕ ಸಂಪತ್ತು ಹೊಂದಿದೆ. ಈ ಪ್ರದೇಶವನ್ನು ಇತ್ತೀಚೆಗೆ ಕರ್ನಾಟಕ ಸರ್ಕಾರವು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ. ಒಟ್ಟಾರೆ 17,872 ಹೆಕ್ಟೇರ್ ಇರುವ ಕಪ್ಪತಗುಡ್ಡ ಅರಣ್ಯ ಪ್ರದೇಶವು ಗದಗ ತಾಲೂಕಿನಲ್ಲಿ 401.811 ಹೆಕ್ಟೇರ್, ಮುಂಡರಗಿ ತಾಲೂಕಿನಲ್ಲಿ 15,433.673 ಹೆಕ್ಟೇರ್ ಮತ್ತು ಶಿರಹಟ್ಟಿ ತಾಲೂಕಿನಲ್ಲಿ 2016 ಹೆಕ್ಟೇರ್ಗಳಷ್ಟು ಪ್ರದೇಶವನ್ನು ಹಂಚಿಕೊಂಡಿದೆ.
ಕಪ್ಪತಗುಡ್ಡಕ್ಕೆ ಗದಗ ಮಾತ್ರವಲ್ಲದೇ ಕೊಪ್ಪಳ, ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೇರಳ, ಮಡಿಕೇರಿ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳುತ್ತಿದ್ದ ಜನ ಈಗೀಗ ಕಪ್ಪತಗುಡ್ಡಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ ಮಳೆ ಉತ್ತಮವಾಗಿ ಆಗುತ್ತಿರುವ ಕಾರಣ ಕಪ್ಪತಗುಡ್ಡ ಯಾವುದೇ ಗಿರಿಶಿಖರಗಳ ತಾಣಕ್ಕೂ ಕಡಿಮೆ ಇಲ್ಲದಂತೆ ಹಸಿರಿನಿಂದ ಕಂಗೊಳಿಸುತ್ತಿದೆ.
ಕಪ್ಪತ್ತಗುಡ್ಡ ಇಂದಿಗೂ ತನ್ನ ಮಣ್ಣು, ಗಿಡ, ಮರಗಳೆಲ್ಲದರಲ್ಲೂ ಔಷಧೀಯ ಗುಣ ಹೊಂದಿದೆ. ಅತೀ ಹೆಚ್ಚು ಆಯುರ್ವೇದಿಕ್ ಗಿಡಗಳನ್ನು ಹೊಂದಿರುವ ಕಾರಣಕ್ಕಾಗಿ ಇಲ್ಲಿಗೆ ಬಂದು ಹೋದರೆ ಸಾಕು, ಯಾವ ದವಾಖಾನೆನೂ ಬೇಡ ಎಂಬ ಪ್ರತೀತಿ ಇದೆ.
`ಎಪ್ಪತ್ತು ಗಿರಿಗಳಿಗಿಂತ ಕಪ್ಪತ್ತಗಿರಿ ಮೇಲೆ’ ಎಂಬುದು ಸ್ಕಂದ ಪುರಾಣದಲ್ಲಿನ ಉಲ್ಲೇಖ. ಅಂದರೆ ಎಪ್ಪತ್ತು ಗಿರಿಗಳಲ್ಲಿ ಸಿಗದ ಔಷಧಿ ಗಿಡಮೂಲಿಕೆಗಳು ಕಪ್ಪತ್ತಗುಡ್ಡ ಒಂದರಲ್ಲೇ ಸಿಗುವ ಕಾರಣಕ್ಕೆ ಈ ಮಾತು ಬಂತೆಂದು ಹಿರಿಯರು ಹೇಳುತ್ತಾರೆ. ಗಿಡಮೂಲಿಕೆಗಳನ್ನು ಅರಸಿ ವರ್ಷವಿಡೀ ಇಲ್ಲಿಗೆ ಎಲ್ಲೆಲ್ಲಿಂದಲೋ ಜನ ಬರುತ್ತಲೇ ಇರುತ್ತಾರೆ.
ಲಕ್ಷಾಂತರ ಸಸಿಗಳ ಪಾಲನೆ-ಪೋಷಣೆ ಮಾಡುವ ಮೂಲಕ ಸಾವಿರಾರು ಹೆಕ್ಟೇರ್ ಈ ಪ್ರದೇಶದಲ್ಲಿ ದೈವೀವನ, ನೆಡುತೋಪುಗಳು ಮತ್ತು ರಸ್ತೆ ಬದಿ ಮರ ಬೆಳಸುವುದು, ಶಾಲಾವನ, ಮಗುವಿಗೊಂದು ವನ ನಿರ್ಮಾಣ ಮಾಡುವುದು ಸೇರಿದಂತೆ ‘ಹಸಿರು ಹೊನ್ನು- ಹಸಿರು ಉಸಿರು’ ಯೋಜನೆ ಜಾರಿಗೊಳಿಸಿ ಕಪ್ಪತ್ತಗುಡ್ಡದ ಆಪತ್ತುನ್ನು ದೂರಗೊಳಿಸುವ ಕಾಲ ಸನ್ನಿಹಿತವಾಗುತ್ತಿರುವುದು ಸಂತಸದ ಸಂಗತಿ.
ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯ ಸುಮಾರು 32,346 ಹೆಕ್ಟೇರ್ಗಳನ್ನು ಒಳಗೊಂಡಿದೆ ಮತ್ತು ಜಲ ಪ್ರದೇಶಗಳು, ಕಾಡುಗಳು, ಪೊದೆಗಳು ಮತ್ತು ಹುಲ್ಲುಗಾವಲುಗಳು ಸೇರಿದಂತೆ ವಿವಿಧ ಪರಿಸರ ವ್ಯವಸ್ಥೆಗಳನ್ನು ಹೊಂದಿದೆ. ಇದು ಲಂಗೂರ್ಗಳು, ಜಿಂಕೆಗಳು, ಕಾಡು ಬೆಕ್ಕುಗಳು, ಪಕ್ಷಿಗಳು, ಕೃಷ್ಣಮೃಗಗಳು, ಚುಕ್ಕೆ ಜಿಂಕೆಗಳು, ಬೊಗಳುವ ಜಿಂಕೆಗಳು, ಚಿರತೆಗಳು, ಭಾರತೀಯ ತೋಳಗಳು ಮತ್ತು ಪಟ್ಟೆ ಹೈನಾಗಳಿಗೆ ಸುರಕ್ಷಿತ ತಾಣವಾಗಿದೆ ಎಂದು ಹೇಳಲಾಗುತ್ತದೆ.
ಕೊನೆಯದಾಗಿ, ಕಪ್ಪತ್ತಗುಡ್ಡವು ಪ್ರವಾಸಿತಾಣ ವ್ಯಾಪ್ತಿಗೆ ಒಳಪಟ್ಟರೆ ಅದು ಅರಣ್ಯ ನಾಶ ಹಾಗೂ ಪರಿಸರ ಮಾಲಿನ್ಯಕ್ಕೆ ರಹದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಸರ ಸೂಕ್ಷ್ಮ ವಲಯಗಳು ಮಾನವನ ಹಸ್ತಕ್ಷೇಪದಿಂದ ದೂರವಿದ್ದಷ್ಟು ಒಳಿತು. ಕಪ್ಪತ್ತಗುಡ್ಡವನ್ನು ಪ್ರವಾಸಿತಾಣವನ್ನಾಗಿ ಮಾಡಿದರೆ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲಿನ ಪ್ರಾಣಿ ಸಂಕುಲ ಭಯದಿಂದ ನಾಡು ಸೇರಿ ಜನರ ಜೀವನದ ಅಸ್ತಿತ್ವಕ್ಕೆ ಧಕ್ಕೆ ಬರಬಹುದು ಹಾಗೂ ಪ್ಲಾಸ್ಟಿಕ್ ಮತ್ತು ಮತ್ತಿತರ ವಸ್ತುಗಳ ಬಳಕೆ ಹೆಚ್ಚಾಗುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ಹಾಗೂ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ಕಪ್ಪತ್ತಗುಡ್ಡವನ್ನು ಯಥಾರೀತಿ ಕಾಯ್ದುಕೊಳ್ಳಬೇಕು ಎಂಬುದು ಪರಿಸರ ಪ್ರಿಯರ ಕಾಳಜಿಯಾಗಿದೆ.
– ಬಸವರಾಜ ಎಮ್.ಯರಗುಪ್ಪಿ.
ಲಕ್ಷ್ಮೇಶ್ವರ
(ಮಾಹಿತಿ ಕೃಪೆ: ಅರಣ್ಯ, ಪ್ರವಾಸೋದ್ಯಮ ಇಲಾಖೆ)