Home Blog

RTO ಅಧಿಕಾರಿಗಳ ಕಾರ್ಯಾಚರಣೆ: ಕಾನೂನು ಉಲ್ಲಂಘನೆ ಮಾಡಿದ್ದ 233 ಆಟೋಗಳು ಸೀಜ್!

ಬೆಂಗಳೂರು: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗಿದ್ದೇ ಆಗಿದ್ದು, ಈ ಅಗ್ರಿಗೇಟರ್ ಕಂಪನಿಗಳು ಮತ್ತು ಆಟೋ ಚಾಲಕರು ಪ್ರಯಾಣಿಕರಿಂದ ಮನಸೋ ಇಚ್ಛೆ ದರ ವಸೂಲಿಗೆ ಮುಂದಾಗಿದ್ದರು. ಇದಕ್ಕೆ ಬ್ರೇಕ್ ಹಾಕಲು ಆರ್​​ಟಿಒ ಅಧಿಕಾರಿಗಳು ಮುಂದಾಗಿದ್ದು, ಭರ್ಜರಿ ಕಾರ್ಯಾಚರಣೆ ನಡೆಸಿ ಕಳೆದೊಂದು ವಾರದಲ್ಲೇ ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಶಾಕ್ ನೀಡಿದೆ.

ಕಳೆದ ಒಂದು ವಾರದಿಂದ ನಗರದ 11 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ 20 ತಂಡಗಳನ್ನ ರಚಿಸಿ ಸಾರಿಗೆ ಅಧಿಕಾರಿಗಳು ನಗರದಾದ್ಯಂತ ಕಾರ್ಯಚರಣೆ ಕೈಗೊಂಡಿದ್ದಾರೆ. ಈ ವೇಳೆ ಒಟ್ಟು 3,531 ಆಟೋಗಳನ್ನ ತಪಾಸಣೆ ನಡೆಸಿದ್ದು, ಅದರಲ್ಲಿ ಪರ್ಮೀಟ್, ದುಪ್ಪಟ್ಟು ದರ ವಸೂಲಿ ಇನ್ಶೂರೆನ್ಸ್, ಡಾಕ್ಯುಮೆಂಟ್‌ಗಳಿಲ್ಲದ 1,006 ವಾಹನಗಳ ವಿರುದ್ಧ ಕೇಸ್ ದಾಖಲಿಸಿ, 233 ಆಟೋಗಳನ್ನ ಸೀಜ್ ಮಾಡಿದ್ದಾರೆ.

ಆಟೋಗಳ ಪೈಕಿ ಅತಿ ಹೆಚ್ಚು ಆಟೋಗಳು ಆ್ಯಪ್ ಆಧಾರಿತ ಸಂಚಾರ ಮಾಡುತ್ತಿದ್ದ ಆಟೋಗಳೇ. ನಗರವ್ಯಾಪಿ ಆ್ಯಪ್ ಆಧಾರಿತ ಆಟೋಗಳ ಮೇಲೆಯೇ ಅತಿ ಹೆಚ್ಚು ದೂರಗಳಿದ್ದು, ಅದರಂತೆ ಆಯಾ ವ್ಯಾಪ್ತಿಯಲ್ಲಿ ಹೆಚ್ಚುವರಿ ದರ ಪಡೆದು ಸಂಚಾರ ಮಾಡುತ್ತಿದ್ದ ಆ್ಯಪ್ ಆಧಾರಿತ ಆಟೋಗಳಿಗೂ ಆರ್‌ಟಿಓ ಬಿಸಿ ಮುಟ್ಟಿಸಿದೆ.

ರಾಯಚೂರು: ಹೃದಯಾಘಾತದಿಂದ ಕುಸಿದು ಬಿದ್ದು ರೈತ ಸಾವು!

ರಾಯಚೂರು: ಜಿಲ್ಲೆಯ ಡಿ.ರಾಂಪೂರ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಮೃತನನ್ನು ಉಪ್ಪರ ವೆಂಕಟೇಶ್ (45) ಎಂದು ಗುರುತಿಸಲಾಗಿದೆ. ಅವರು ಜಮೀನಿನಲ್ಲಿ ತಾನುಟಕಾಲಿಕೆ ಕೆಲಸಗಳಲ್ಲಿ ತೊಡಗಿದ್ದ ಸಂದರ್ಭದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.

ಕೂಡಲೇ ಸ್ಥಳಿಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ. ಆರೋಗ್ಯವಾಗಿದ್ದ ವೆಂಕಟೇಶ್‌ ಈ ರೀತಿಯಲ್ಲಿ ಸಾವನ್ನಪ್ಪಿರುವುದು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ಶೋಕ ಮತ್ತು ಅಚ್ಚರಿಯನ್ನುಂಟುಮಾಡಿದೆ. ಗ್ರಾಮದಲ್ಲಿ ದುಃಖದ ವಾತಾವರಣವಿದೆ.

ವಿಮಾನ ದುರಂತ: ಇಂಧನ ಸ್ವಿಚ್ “CUT OFF” ಆಗಿದ್ದೇ ದುರಂತಕ್ಕೆ ಕಾರಣ: AAIB ವರದಿ

0

ನವದೆಹಲಿ: ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ 270ಕ್ಕೂ ಹೆಚ್ಚು ಪ್ರಯಾಣಿಕರ ಬಲಿಯಾದ ಭೀಕರ ದುರಂತಕ್ಕೆ ಕಾರಣವೇನೆಂಬುದರ ಬಗ್ಗೆ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ. ವಿಮಾನ ಹಾರಿದ ಕೆಲವೇ ಸೆಕೆಂಡುಗಳಲ್ಲಿ ಇಂಧನ ಸ್ವಿಚ್ಗಳು “RUN” ನಿಂದ “CUT OFF” ಆಗಿದ್ದರಿಂದ, ಎಂಜಿನ್ಗಳಿಗೆ ಇಂಧನ ಸರಬರಾಜು ನಿಂತಿದ್ದು ವಿಮಾನ ಭೂಮಿಗೆ ಪತನಗೊಂಡಿದೆ.

ದಾಖಲಾಗಿರುವ ಪ್ರಮುಖ ಅಂಶಗಳು:

  • ಟೇಕ್ ಆಫ್ ಆದ 30 ಸೆಕೆಂಡುಗಳಲ್ಲೇ ದುರಂತ ಸಂಭವ.
  • ಪೈಲಟ್ಗಳ ಮಾತುಕತೆಯಲ್ಲಿಇಂಧನ ಏಕೆ ಆಫ್?” ಎಂಬ ಪ್ರಶ್ನೆ, ಉತ್ತರ: “ನಾನು ಮಾಡಿಲ್ಲ”.
  • ಇಂಧನ ಪೂರೈಕೆ ಪುನಶ್ಚಾಲನೆ ಪ್ರಯತ್ನ ವಿಫಲ.
  • ವಿಮಾನದ ತೂಕಇಂಧನ ಸಮತೋಲನ ಸರಿಯಾಗಿತ್ತು, ತಾಂತ್ರಿಕ ದೋಷ ಅಥವಾ ಸ್ಫೋಟದ ಲಕ್ಷಣಗಳಿಲ್ಲ.
  • FAA ರೀತಿಯ ದೋಷದ ಕುರಿತು ಹಿಂದೆಯೇ ಎಚ್ಚರಿಕೆ ನೀಡಿದ್ದರೂ, ಏರ್ ಇಂಡಿಯಾ ಕೈಗೆತ್ತಿಕೊಳ್ಳಲಿಲ್ಲ.

ಪ್ರಯಾಣಿಕರ ಸಂಖ್ಯೆ:
ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದರು. 15 ಮಂದಿ ಬಿಸಿನೆಸ್ ಕ್ಲಾಸ್ ಮತ್ತು ಉಳಿದವರು ಎಕಾನಮಿ ಕ್ಲಾಸ್ನಲ್ಲಿ ಪ್ರಯಾಣಿಸುತ್ತಿದ್ದರು.

ಪೈಲಟ್ ಅನುಭವ:
ಮುಖ್ಯ ಪೈಲಟ್ಗೆ 15,638 ಗಂಟೆಗಳ ಹಾಗೂ ಸಹಾಯಕನಿಗೆ 3,403 ಗಂಟೆಗಳ ಹಾರಾಟದ ಅನುಭವವಿತ್ತು.

ಅಂತಿಮ ವರದಿ ಬಾಕಿ:
ಇದೀಗ ತನಿಖಾ ತಂಡ ಹೆಚ್ಚಿನ ಸಾಕ್ಷ್ಯಾಧಾರ, ತಾಂತ್ರಿಕ ಮಾಹಿತಿ ಮತ್ತು ಮರಣೋತ್ತರ ಪರೀಕ್ಷಾ ವರದಿ ನಿರೀಕ್ಷಿಸುತ್ತಿದೆ. ತಾತ್ಕಾಲಿಕವಾಗಿ ವಿಮಾನ ತಯಾರಕರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

3 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ ಜೀವಾವಧಿ ಶಿಕ್ಷೆ

0

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಗ್ರಾಮವೊಂದರಲ್ಲಿ ಮೂರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣದಲ್ಲಿ, 53 ವರ್ಷದ ಶಿವಣ್ಣ ಎಂಬಾತನಿಗೆ ಮಂಡ್ಯ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

2023ರ ಡಿಸೆಂಬರ್ 11ರಂದು ಈ ಘಟನೆ ನಡೆದಿದೆ. ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದ ಶಿವಣ್ಣ, ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೇ, ಈ ವಿಚಾರವನ್ನು ಯಾರಿಗೂ ಹೇಳಬಾರದೆಂದು ಬಾಲಕಿಗೆ ಬೆದರಿಕೆ ಕೂಡ ಹಾಕಿದ್ದನು.

ಘಟನೆಯ ಕುರಿತು ಪೊಲೀಸರು ತನಿಖೆ ನಡೆಸಿ ಆರೋಪಪತ್ರ ಸಲ್ಲಿಸಿದರು. ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸರ್ಕಾರಿ ವಕೀಲ ಹೆಬ್ಬಕವಾಡಿ ನಾಗರಾಜು ವಾದ ಮಂಡಿಸಿದ್ದು, ನ್ಯಾಯಾಧೀಶ ದಿಲೀಪ್ ಅವರು ಶಿವಣ್ಣನನ್ನು ದೋಷಿಯಾಗೆಣಿಸಿ ಜೀವಾವಧಿ ಶಿಕ್ಷೆ ವಿಧಿಸಿದರು.

ಅಪರಾಧಿಗೆ ಕಾನೂನುಬದ್ಧವಾದ ಗಂಭೀರ ಶಿಕ್ಷೆ ವಿಧವಾಗಿರುವುದು ನ್ಯಾಯದ ವಿಜಯವೆಂದು ಜನಪ್ರತಿನಿಧಿಗಳು ಹಾಗೂ ಮಹಿಳಾ ಮಕ್ಕಳ ಹಕ್ಕುಗಳ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.

‘ಎಕ್ಕ’ ಚಿತ್ರದ ಟ್ರೈಲರ್ ರಿಲೀಸ್: ರಗಡ್ ಅವತಾರದಲ್ಲಿ ಯುವ ರಾಜ್‌ಕುಮಾರ್

ದೊಡ್ಮನೆ ಕುಟುಂಬದ ಕುಡಿ ಯುವರಾಜ್‌ ಕುಮಾರ್‌ ನಟನೆಯ ಬಹುನಿರೀಕ್ಷಿತ ‘ಎಕ್ಕ’ ಸಿನಿಮಾದ ಟ್ರೈಲರ್‌ ಬಿಡುಗಡೆ ಆಗಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ಸಿನಿಮಾ ಸದ್ಯ ಬಿಡುಗಡೆ ಆಗಿರುವ ಟ್ರೈಲರ್‌ ಮೂಲಕ ಆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಎಕ್ಕ ಯುವ ರಾಜ್​ಕುಮಾರ್ ನಟನೆಯ ಎರಡನೇ ಸಿನಿಮಾವಾಗಿದ್ದು ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಸಖತ್‌ ಸೌಂಡ್‌ ಮಾಡುತ್ತಿದ್ದು ಸದ್ಯ ರಿಲೀಸ್‌ ಮಾಡಿರುವ ಟ್ರೈಲರ್‌ ಸಖತ್‌ ನಿರೀಕ್ಷೆ ಮೂಡಿಸಿದೆ. ಹಳ್ಳಿಯಲ್ಲಿ ಆರಾಮಾಗಿ ಇದ್ದ ಮುತ್ತು ಪಟ್ಟಣ ಸೇರೋದು ಯಾಕೆ? ಏನೋ ಮಾಡಲು ಹೋಗಿ ಮತ್ತೇನೋ ಆಗಿ ಮುಂದೇನು? ಸಾಮಾನ್ಯ ಹುಡುಗನೊಬ್ಬ ಭೂತಕ ಲೋಕಕ್ಕೆ ಹೇಗೆ ಕಾಲಿಡುತ್ತಾನೆ ಎಂಬುದನ್ನು ತೋರಿಸಲು ಹೊರಟಿದ್ದಾರೆ ನಿರ್ದೇಶಕ ರೋಹಿತ್ ಪದಕಿ. ಎಕ್ಕ ಸಿನಿಮಾ ಸಿನಿಮಾದಲ್ಲಿ ಸಂಜನಾ ಆನಂದ್ ಮತ್ತು ಸಂಪದಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿ ‘ಎಕ್ಕ’ ಸಿನಿಮಾವನ್ನು ನಿರ್ಮಾಣ ಮಾಡಿವೆ. ಜುಲೈ 18ರಂದು ‘ಎಕ್ಕ’ ಸಿನಿಮಾ ತೆರೆಕಾಣಲಿದ್ದು ಸದ್ಯ ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.

ನಿರ್ದೇಶಕ ಲೋಕೇಶ್‌ ಕನಗರಾಜ್ ನನ್ನನ್ನು ವೇಸ್ಟ್ ಮಾಡಿ ಬಿಟ್ಟರು: ನಟ ಸಂಜಯ್‌ ದತ್‌ ಬೇಸರ

ನಟ ಸಂಜಯ್ ದತ್ ಸಖತ್‌ ಬ್ಯುಸಿಯಾಗಿದ್ದಾರೆ. ಕೆಜಿಎಫ್‌ ಸಿನಿಮಾದ ಬಳಿಕ ಸಂಜಯ್‌ ದತ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್​ನಿಂದ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿರುವ ಸಂಜಯ್‌ ದತ್‌ ಇದೀಗ್‌ ತಾವು ನಟಿಸಿದ ಸಿನಿಮಾವೊಂದರ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

2023ರಲ್ಲಿ ತೆರೆಕಂಡ ಲೋಕೇಶ್‌ ಕನಗರಾಜ್‌ ನಿರ್ದೇಶನದ ದಳಪತಿ ವಿಜಯ್‌ ನಟನೆಯ ಲಿಯೋ ಸಿನಿಮಾದಲ್ಲಿ ಸಂಜಯ್‌ ದತ್‌ ಆ್ಯಂಟನಿ ದಾಸ್ ಹೆಸರಿನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಟ್ರೇಲರ್ ನೋಡಿದವರಿಗೆ ಈ ಪಾತ್ರದಲ್ಲಿ ಏನೋ ಇದೆ ಎಂದೇ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಪಾತ್ರ ಕಮಾಲ್ ಮಾಡುವಲ್ಲಿ ವಿಫಲವಾಯಿತು. ಎಲ್ಲರೂ ಲೋಕೇಶ್​ನ ಬೈದರು. ಈಗ ಸಂಜಯ್ ದತ್ ಕೂಡ ಇದೇ ಕೆಲಸ ಮಾಡಿದ್ದಾರೆ.

ಚೆನ್ನೈನಲ್ಲಿ ನಡೆದ ಈವೆಂಟ್ ಒಂದರಲ್ಲಿ ಮಾತನಾಡಿದ ಸಂಜಯ್ ದಯ್, ‘ನನಗೆ ಲೋಕೇಶ್ ಮೇಲೆ ಸಿಟ್ಟಿದೆ. ನನಗೆ ದೊಡ್ಡ ಆಫರ್ ನೀಡಿಲ್ಲ. ಅವರು ನನ್ನನ್ನು ವೇಸ್ಟ್ ಮಾಡಿ ಬಿಟ್ಟರು’ ಎಂದು ಬೇಸರ ಹೊರ ಹಾಕಿದ್ದಾರೆ. ಇದನ್ನು ಹಲವರು ಒಪ್ಪಿಕೊಂಡಿದ್ದು ಸಂಜಯ್‌ ದತ್‌ ರಂತಹ ನಟನಿಗೆ ಆಂಟನಿ ದಾಸ್‌ ಪಾತ್ರ ನೀಡಿದ್ದಕ್ಕೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಂಜಯ್‌ ದತ್‌ ಸದ್ಯ ‘ಕೆಡಿ: ದಿ ಡೆವಿಲ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಜೋಗಿ ಪ್ರೇಮ್ ನಿರ್ದೇಶನದ ಈ ಸಿನಿಮಾದಲ್ಲಿ ಧ್ರುವ ಸರ್ಜಾ, ಶಿಲ್ಪಾ ಶೆಟ್ಟಿ, ರೀಷ್ಮಾ ನಾಣಯ್ಯ ಸೇರಿದಂತೆ ಹಲವರು ನಟಿಸುತ್ತಿದ್ದು ಸದ್ಯ ಚಿತ್ರತಂಡ ಪ್ರಮೋಷನ್‌ ಕೆಲಸದಲ್ಲಿ ತೊಡಗಿಕೊಂಡಿದೆ. ಇದರ ಜೊತೆಗೆ ಸಂಜಯ್‌ ದತ್‌ ‘ದಿ ರಾಜಾ ಸಾಬ್’ ಸಿನಿಮಾ ಹಾಗೂ ರಣವೀರ್ ಸಿಂಗ್ ನಟನೆಯ ‘ಧುರಂದರ್’ ಚಿತ್ರದಲ್ಲಿಯೂ ತೊಡಗಿಕೊಂಡಿದ್ದಾರೆ.

ನಿಸ್ವಾರ್ಥ ಸಂಘಟನೆಯಿಂದ ಹಿಂದವೀ ಸ್ವರಾಜ್ಯ

0

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯ ಸಂಘಟನೆ ನಿರ್ಮಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಗಳ ಮೇಲೆ ಆಕ್ರಮಣ ಮಾಡುವ ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳೆಗಳ ಸಂಘಟನೆಯನ್ನು ಮಾಡಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ಸಂಘಟನೆಯು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ಆಗಿತ್ತು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಮತ್ತು ಹಿಂದವೀ ಸ್ವರಾಜ್ಯ ಸಾಕಾರಗೊಳ್ಳುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಯಮನಪ್ಪ ಭಜಂತ್ರಿ ಹೇಳಿದರು.

ಅವರು ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು.

ಪ್ರಸ್ತುತ ಹಿಂದೂ ಸಮಾಜದ ಮೇಲೆ ಅನೇಕ ರೀತಿ ಆಘಾತಗಳಾಗುತ್ತಿವೆ. ಹಿಂದೆ ಪ್ರಭು ಶ್ರೀರಾಮರ ಕಾಲದಲ್ಲಿ, ಶಿವಾಜಿ ಮಹಾರಾಜರ ಕಾಲದಲ್ಲಿ, ಹಕ್ಕ ಬುಕ್ಕರ ಕಾಲದಲ್ಲಿ ಇದೇ ರೀತಿ ಧರ್ಮಸಂಕಟಗಳು ಎದುರಾಗಿದ್ದವು. ಈ ಎಲ್ಲ ಸಂದರ್ಭಗಳಲ್ಲಿಯೂ ಅವರು ಗುರುಗಳ ಮಾರ್ಗದರ್ಶನ ಪಡೆದು ಧರ್ಮಸಂಸ್ಥಾಪನೆಯ ಕಾರ್ಯ ಮಾಡಿದ್ದಾರೆ. ಹಾಗಾಗಿ ಗುರು-ಶಿಷ್ಯ ಪರಂಪರೆಗೆ ಹಿಂದಿನಿಂದಲೂ ಅಷ್ಟೇ ಮಹತ್ವವಿದೆ. ಈಗ ನಾವೂ ಸಹ ಇಂದಿನ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯರಾದ ಶ್ರೀಪತಿ ಭಟ್ ಮಾತನಾಡಿ, ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದನ್ನು ಮುಂದಿನ ಪೀಳಿಗೆಯವರು ಪಾಲಿಸಬೇಕಾದರೆ ಈಗಿನಿಂದಲೇ ಒಗ್ಗಟ್ಟಾಗಿ ಕಾರ್ಯ ಮಾಡಬೇಕಿದೆ ಎಂದರು.

ಕುಸ್ತಿ ಪಟುಗಳ ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌ನ ಜಿಲ್ಲಾ ಅಧ್ಯಕ್ಷರಾಗಿ ವಸಂತ ಸಿದ್ದಮ್ಮನಹಳ್ಳಿ ಆಯ್ಕೆ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲಾ ಕುಸ್ತಿ ಪಟುಗಳ ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌ನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವ ಅಧ್ಯಕ್ಷರಾಗಿ ಆದಪ್ಪ ಮಾರೆಪ್ಪ ಮಾರೆಪ್ಪನವರ ಗದಗ, ಅಧ್ಯಕ್ಷರಾಗಿ ವಸಂತ ಪರಸಪ್ಪ ಸಿದ್ದಮ್ಮನಹಳ್ಳಿ ಗದಗ, ಉಪಾಧ್ಯಕ್ಷರಾಗಿ ರಮೇಶ ಚನ್ನಮಲ್ಲಪ್ಪ ಭಾವಿ ಲಕ್ಕುಂಡಿ, ಉಪಾಧ್ಯಕ್ಷರಾಗಿ ಸೋಮಪ್ಪ ಧರ್ಮಪ್ಪ ಮೇಲ್ಮನಿ ಹಾತಗೇರಿ, ಕಾರ್ಯದರ್ಶಿಯಾಗಿ ಬಾಲೆಸಾಬ ಮಾಬುಸಾಬ ನದಾಫ್ ಹಾರೋಗೇರಿ, ಸಹ ಕಾರ್ಯದರ್ಶಿಯಾಗಿ ಅನಿಕುಮಾರ ಪರಸಪ್ಪ ಸಿದ್ದಮ್ಮನಹಳ್ಳಿ ಗದಗ, ಸಂಘಟನಾ ಕಾರ್ಯದರ್ಶಿಯಾಗಿ ಈಶಪ್ಪ ಜಗ್ಗಲ ರೋಣ, ಖಜಾಂಚಿಯಾಗಿ ಮಹಾಂತೇಶ ಗುಂಜಳ ಮುಳಗುಂದ, ಸದಸ್ಯರಾಗಿ ಬಸವರಾಜ ಹ.ಕರಿಮೇರಿ ಹುಯಿಲಗೋಳ, ಅಬ್ದುಲಖಾದರ ಜೈಲಾನಿ ಅಣ್ಣಿಗೇರಿ ಶಿರಹಟ್ಟಿ, ರವಿಕುಮಾರ ದ್ಯಾಮಣ್ಣ ವಾಲ್ಮೀಕಿ ಬಸಾಪೂರ ಮುಂತಾದವರು ಆಯ್ಕೆಯಾಗಿದ್ದಾರೆ.

ಭಕ್ತರಿಗೆ ಸನ್ಮಾರ್ಗ ತೋರುವವನೇ ನಿಜವಾದ ಗುರು

0

ವಿಜಯಸಾಕ್ಷಿ ಸುದ್ದಿ, ಗದಗ: ಮನುಷ್ಯ ಸಹಜ ಜೀವಿ. ತನ್ನ ಬದುಕಿನ ಹಲವಾರು ಜಂಜಾಟಗಳಿಂದ ತಲ್ಲಣಗೊಂಡ ಅವನಿಗೆ ಜೀವನದ ಸರಿಯಾದ ಮಾರ್ಗ ಹಾಗೂ ಗುರಿ ಬೇಕು. ಇದಕ್ಕಾಗಿ ಗುರುವನ್ನು ಆತ ನಂಬುತ್ತಾನೆ. ಭಕ್ತರ ಮನದ ಗೊಂದಲಗಳಿಗೆ ಉತ್ತಮ ಸನ್ಮಾರ್ಗ ತೋರುವವನೇ ಗುರು ಎಂದು ಗದುಗಿನ ಅಡವೀಂದ್ರ ಮಠದ ಧರ್ಮದರ್ಶಿ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಹೇಳಿದರು.

ಅವರು ಶ್ರೀ ಮಠದಲ್ಲಿ ಜರುಗಿದ 336ನೇ ಮಾಸಿಕ ಶಿವಾನುಭವ ಗೋಷ್ಠಿಯ ಸಮ್ಮುಖ ವಹಿಸಿ ಮಾತನಾಡುತ್ತಿದ್ದರು.

ಮನುಷ್ಯ ತನ್ನ ಜೀವನದಲ್ಲಿ ದಾನ-ಧರ್ಮದಂತಹ ಪರೋಪಕಾರಿ ಗುಣಗಳೊಂದಿಗೆ ಮಾನವೀಯತೆ, ಸಹಕಾರಗಳನ್ನು ಬೆಳೆಸಿಕೊಳ್ಳಬೇಕು. ಗುರು ಹಿರಿಯರ, ಪೂಜ್ಯರ ನುಡಿಗಳು ಬದುಕನ್ನು ಬದಲಿಸಬಲ್ಲವು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ಸಂಸ್ಕಾರ ಭಾರತಿ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಂಸ್ಕಾರಗಳು ಹಾಗೂ ಸಂಸ್ಕೃತಿಗಳು ಮರೆಯಾಗುತ್ತಿವೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರವನ್ನು ಹೇಳಿಕೊಡಬೇಕು. ಗುರುವಿನ ಮಹತ್ವದ ಕುರಿತು ಯುವ ಪೀಳಿಗೆ ತಿಳಿಯಬೇಕು. ಅಂದಾಗ ಸುಂದರ ಸಮಾಜ ನಿರ್ಮಾಣವಾಗಬಲ್ಲದು ಎಂದರು.

ಇನ್ನೋರ್ವ ಅತಿಥಿಗ ವಿದ್ವಾನ ಸಂಜಯ ಶಾನಭೋಗರ ಮಾತನಾಡಿ, ಕಲೆ ಮನುಷ್ಯನಿಗೆ ಸಂತೋಷ ಉಂಟುಮಾಡಬಲ್ಲದು. ಕಲೆಯಿಂದಾಗಿ ಅನೇಕ ಕುಟುಂಬಗಳು ಅರ್ಥಿಕ ಸದೃಢತೆ ಕಂಡಿವೆ. ಅದಕ್ಕಾಗಿ ಕಲೆ ಹಾಗೂ ಕಲಾವಿದರನ್ನು ಗೌರವಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಬಸವರಾಜ ಗಿಡ್ನಂದಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಅಣ್ಣಿಗೇರಿ, ನಿವೃತ್ತ ಪ್ರಾಚಾರ್ಯ ಸಿ.ಅಂಗಾರಡ್ಡಿ, ಶಾಂತಾ ಗೌಡರ, ವಿದ್ಯಾ ಆನಂದ ಪಾಟೀಲ, ಜಯಶ್ರೀ ಮಾಳಗಿ, ಬಿ.ಎಮ್. ಬಿಳೇಯಲಿ, ಎಲ್.ಎಸ್. ನೀಲಗುಂದ, ನಿಂಗಪ್ಪ ಬಳಿಗಾರ, ಬಿ.ಎಂ. ಯಾಮನಶೆಟ್ಟಿ, ಪ್ರಾಚಾರ್ಯ ಬಿ.ಬಿ. ಪಾಟೀಲ ಉಪಸ್ಥಿತರಿದ್ದರು. ಸಿದ್ಧಣ್ಣ ಜವಳಿ ಪ್ರಾರ್ಥಿಸಿದರು, ಪಿ.ಸಿ. ಪಾಟೀಲ ಸ್ವಾಗತಿಸಿದರು. ಪ್ರಕಾಶ ಬಂಡಿ ನಿರೂಪಿಸಿ ವಂದಿಸಿದರು.

ಗುರುಪೂರ್ಣಿಮೆ ಕುರಿತು ಉಪನ್ಯಾಸ ನೀಡಿದ ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದತ್ತಾತ್ರೇಯ ಜೋಶಿ, ಗುರುವಿನ ಶಕ್ತಿ ಅತ್ಯದ್ಭುತವಾದುದು. ಬದುಕಿನ ಪರಿಪೂರ್ಣತೆಗೆ ಬೆಳಕಿನ ರೂಪದಲ್ಲಿ ಸುಜ್ಞಾನವನ್ನು ಕೊಡುತ್ತಾನೆ. ಹರ ಮುನಿದರೂ ಗುರು ಕಾಯುವನು ಎಂಬ ಮಾತು ಇದೆ. ಅದಕ್ಕಾಗಿ ನಾವು ಗುರುವಿನ ಅಣತಿಯನ್ನು ಪಾಲಿಸಬೇಕು ಎಂದರು.

ರಸ್ತೆ ಡಾಂಬರೀಕರಣಕ್ಕೆ ಡಾ. ಚಂದ್ರು ಲಮಾಣಿ ಚಾಲನೆ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ತಾಲೂಕಿನ ತಾರೀಕೊಪ್ಪ ಗ್ರಾಮದಲ್ಲಿ 80.50ಲಕ್ಷ ವೆಚ್ಚದಲ್ಲಿ ಹೆಬ್ಬಾಳ-ತಾರೀಕೊಪ್ಪ ಜಿಲ್ಲಾ ಮುಖ್ಯ ರಸ್ತೆಯ ಕಿಮೀ 7ರವರೆಗೆ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಡಾ. ಚಂದ್ರು ಲಮಾಣಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಚಂದ್ರು ಲಮಾಣಿ, ತಾಲೂಕಿನ ತಾರೀಕೊಪ್ಪ ಮತ್ತು ಹೆಬ್ಬಾಳ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಯಾಗದೇ ಇರುವುದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ಈ ಬಗ್ಗೆ ಎರಡೂ ಊರುಗಳ ಗ್ರಾಮಸ್ಥರು ಅನೇಕ ಬಾರಿ ರಸ್ತೆ ಸರಿಪಡಿಸುವಂತೆ ವಿನಂತಿಸಿದ್ದರು. ಇದೀಗ ಮರು ಡಾಂಬರೀಕರಣಕ್ಕೆ 80.50 ಲಕ್ಷ ರೂ ಮಂಜೂರಾಗಿದ್ದು, ಶೀಘ್ರವೇ ರಸ್ತೆ ಸುಧಾರಣೆ ಮಾಡಲಾಗುವುದು. ಕಾಮಗಾರಿಯನ್ನು ನಿರ್ವಹಿಸುವ ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸುರೇಶಗೌಡ ಪಾಟೀಲ, ಹನುಮರೆಡ್ಡಿ ಬುಳ್ಳಪ್ಪನವರ, ಪುರಪ್ಪ ಲಮಾಣಿ, ಶಂಕರ ಭಾವಿ, ಪ್ರವೀಣ ಪಾಟೀಲ, ರಾಜೀವರೆಡ್ಡಿ ಬಮ್ಮನಕಟ್ಟಿ, ಚನ್ನವೀರಗೌಡ ತೆಗ್ಗಿನಮನಿ, ಎಚ್.ಎಚ್. ತಳವಾರ, ಅಣ್ಣಪ್ಪ ರಣತೂರ, ಶಿವನಗೌಡ ಕಂಠಿಗೌಡ್ರ, ಸಿ.ಆರ್. ಪಾಟೀಲ, ಪ್ರಶಾಂತ ರೆಡ್ಡಿ, ಶ್ರೀನಿವಾಸ್ ಸೌದತ್ತಿ, ಮಲ್ಲೇಶ ಲಮಾಣಿ, ದೇವರಾಜ ಮೇಟಿ, ಮಹೇಶ ಲಮಾಣಿ, ಶಿವಾನಂದ ಪೂಜಾರ, ಈರಣ್ಣ ಬಡಿಗೇರ, ಬಾಬು ತಿರುಮಲರೆಡ್ಡಿ, ಗುಡದಪ್ಪ ಸುರಣಗಿ, ಮಲ್ಲು ನಾವಿ, ಮಂಜುನಾಥ ಕರಿಯತ್ತಿನ ಮುಂತಾದವರು ಉಪಸ್ಥಿತರಿದ್ದರು.

error: Content is protected !!