Home Blog Page 3

14 ವರ್ಷದ ಅಪ್ರಾಪ್ತೆಗೆ ಹೆರಿಗೆ: ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

0

ಹುಬ್ಬಳ್ಳಿ: 14 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲೇ ಮಗುವಿಗೆ ಜನ್ಮ ನೀಡಿರುವ ಪ್ರಕರಣ ಹುಬ್ಬಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಜುಲೈ 8ರಂದು ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಬಾಲಕಿಗೆ ಮನೆಯಲ್ಲೇ ಹೆರಿಗೆಯಾಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಸದ್ಯ ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದು, ಅಪ್ರಾಪ್ತೆಯಾದ ಕಾರಣ ಆಕೆಗೆ ‘ನಿರ್ಭಯಾ ವಾರ್ಡ್‌’ನಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯ ಪ್ರಕಾರ, ಬಾಲಕಿ ಗರ್ಭಿಣಿಯಾಗಿದ್ದ ವಿಷಯವನ್ನು ಪೋಷಕರು ಮುಂಚಿತವಾಗಿ ತಿಳಿಸಿರಲಿಲ್ಲ. ಅಲ್ಲದೆ, ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯೊಂದಿಗೆ ಪಾಲಕರು ಇಲ್ಲದಿರುವುದು ಪ್ರಕರಣದ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಪ್ರಾಪ್ತೆಯ ಗರ್ಭಧಾರಣೆಗೆ ಕಾರಣವಾದ ಸಂದರ್ಭಗಳು, ಲೈಂಗಿಕ ದೌರ್ಜನ್ಯ ಅಥವಾ ಇತರೆ ಕಾನೂನು ಉಲ್ಲಂಘನೆಗಳ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.

‘ಸಂಭಾವನೆ ಕೊಟ್ಟ ಬಳಿಕವೂ ಡಬ್ಬಿಂಗ್ ಬೇಡ ಎಂದರು’; ‘ಕರಾವಳಿ’ ವಿವಾದಕ್ಕೆ ಪ್ರಜ್ವಲ್ ಉತ್ತರ

ಬೆಂಗಳೂರು: ‘ಕರಾವಳಿ’ ಚಿತ್ರದ ಸುತ್ತ ನಡೆಯುತ್ತಿರುವ ವಿವಾದದ ಮಧ್ಯೆ ನಟ ಪ್ರಜ್ವಲ್ ದೇವರಾಜ್ ತಮ್ಮ ಮೌನ ಮುರಿದಿದ್ದಾರೆ. ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಮಾಡುತ್ತಿರುವ ಆರೋಪಗಳಿಗೆ ತಿರುಗೇಟು ನೀಡಿರುವ ಅವರು, ನಿಜವಾದ ಕಾರಣಗಳನ್ನು ಬಹಿರಂಗಪಡಿಸುವ ಮೂಲಕ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

ಟ್ರೇಲರ್ ಬಿಡುಗಡೆಯ ವೇಳೆ ತಮ್ಮ ಪಾತ್ರಕ್ಕೆ ಅನುಮತಿಯಿಲ್ಲದೆ ಮತ್ತೊಬ್ಬರಿಂದ ಡಬ್ಬಿಂಗ್ ಮಾಡಲಾಗಿತ್ತು. ಇದೇ ವೇಳೆ ತಮ್ಮ ಸಂಭಾವನೆಯೂ ಸಂಪೂರ್ಣವಾಗಿ ಪಾವತಿಯಾಗಿರಲಿಲ್ಲ. ಈ ಎರಡೂ ಕಾರಣಗಳಿಂದಲೇ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಸಿಕ್ಸ್ ಪ್ಯಾಕ್ ವಿಚಾರವನ್ನು ಮುಂದಿಟ್ಟಿರುವ ಚಿತ್ರತಂಡದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ದೈಹಿಕ ತಯಾರಿಗೂ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಾಕಿ ಹಣ ಪಾವತಿಸಿದ ತಕ್ಷಣ ಡಬ್ಬಿಂಗ್ ಮಾಡಲು ಮತ್ತು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲು ತಾವು ಸಿದ್ಧವಾಗಿದ್ದೆ ಎಂದಿದ್ದಾರೆ.

ಸಂಭಾವನೆ ಪಾವತಿಯಾದ ನಂತರ ಚಿತ್ರತಂಡವೇ ತಮ್ಮ ಮ್ಯಾನೇಜರ್‌ಗೆ ಕರೆ ಮಾಡಿ ಡಬ್ಬಿಂಗ್ ಹಾಗೂ ಪ್ರಚಾರಕ್ಕೆ ಬರಬೇಕಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಚಿತ್ರದಿಂದ ದೂರ ಉಳಿದಿರುವುದು ತಮ್ಮ ನಿರ್ಧಾರವಲ್ಲ, ಚಿತ್ರತಂಡದ ನಿರ್ಧಾರ ಎಂದು ಪ್ರಜ್ವಲ್ ಹೇಳಿದ್ದಾರೆ.

ತಮ್ಮ ಧ್ವನಿ ಪಾತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿರುವುದು ನೋವುಂಟು ಮಾಡಿದೆ. ಅವಕಾಶ ನೀಡದೆ ಈ ರೀತಿಯ ಹೇಳಿಕೆ ನೀಡಿರುವುದು ತಮ್ಮ ವೃತ್ತಿಪರ ಗೌರವಕ್ಕೆ ಧಕ್ಕೆ ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸುವುದಾಗಿ ಘೋಷಿಸಿರುವ ಪ್ರಜ್ವಲ್ ದೇವರಾಜ್, ಯಾವುದೇ ವೈಯಕ್ತಿಕ ಭಿನ್ನಾಭಿಪ್ರಾಯಗಳು ಚಿತ್ರದ ಪರಿಶ್ರಮವನ್ನು ಮರೆಮಾಚಬಾರದು ಎಂದು ಹೇಳಿ, ‘ಕರಾವಳಿ’ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಅಕ್ಟೋಬರ್ ಅಥವಾ ನವೆಂಬರ್ʼನಲ್ಲಿ ಗ್ರಾಮ ಪಂಚಾಯತ್ ಚುನಾವಣೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದ ಬಹುತೇಕ ಗ್ರಾಮ ಪಂಚಾಯತ್‌ಗಳ ಆಡಳಿತಾವಧಿ ಪೂರ್ಣಗೊಂಡಿದ್ದು, ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವು ಗ್ರಾಮ ಪಂಚಾಯತ್‌ಗಳು ಮೇಲ್ದರ್ಜೆಗೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಅಗತ್ಯವಾಗಿದೆ. ಈ ಪ್ರಕ್ರಿಯೆಯನ್ನು ಜುಲೈ ಅಂತ್ಯ ಅಥವಾ ಆಗಸ್ಟ್ ಆರಂಭದೊಳಗೆ ಪೂರ್ಣಗೊಳಿಸಿ, ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು. ಬಳಿಕ ಆಯೋಗವು 45 ದಿನಗಳೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲಿದೆ ಎಂದು ಮಾಹಿತಿ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿರುವುದರಿಂದ ಹೆಚ್ಚಿನ ಸರ್ಕಾರಿ ಸಿಬ್ಬಂದಿ ಆ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದೇ ಕಾರಣಕ್ಕೆ ಚುನಾವಣೆಗೆ ಕಾಲಾವಕಾಶ ಕೋರಲಾಗಿದೆ ಎಂದು ತಿಳಿಸಿದರು.

ಪಂಚಾಯತ್ ರಾಜ್ ವ್ಯವಸ್ಥೆಯ ಮಹತ್ವವನ್ನು ವಿವರಿಸಿದ ಅವರು, ಮಹಾತ್ಮ ಗಾಂಧೀಜಿ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಪ್ರತಿಪಾದಿಸಿದ್ದರು. ಕರ್ನಾಟಕದಲ್ಲಿ 1980ರಲ್ಲಿ ನಜೀರ್ ಸಾಬ್ ಅಧಿಕಾರ ವಿಕೇಂದ್ರೀಕರಣಕ್ಕೆ ನಾಂದಿ ಹಾಡಿದ್ದರು.

ಬಳಿಕ ದಿವಂಗತ ಪ್ರಧಾನಿ ರಾಜೀವ್ ಗಾಂಧಿ 1989ರಲ್ಲಿ 64ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಿದ್ದರು. ನಂತರ 1992ರಲ್ಲಿ 73ನೇ ಸಾಂವಿಧಾನಿಕ ತಿದ್ದುಪಡಿ ಅಂಗೀಕಾರಗೊಂಡು, 1993ರ ಏಪ್ರಿಲ್ 24ರಿಂದ ದೇಶಾದ್ಯಂತ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂತು ಎಂದು ವಿವರಿಸಿದರು.

ಗ್ರಾಮಗಳ ಆಡಳಿತವನ್ನು ಗ್ರಾಮಸ್ಥರೇ ನಿರ್ವಹಿಸುವುದು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲ ಉದ್ದೇಶವಾಗಿದ್ದು, ಸ್ಥಳೀಯ ಆಡಳಿತವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

HDK ಪ್ರಧಾನಿ, ಕೇಂದ್ರ ಜಲ ಶಕ್ತಿ ಸಚಿವರಿಂದ ಮಾಹಿತಿ ಪಡೆದು ನದಿ ಜೋಡಣೆ ಯೋಜನೆ ಬಗ್ಗೆ ಮಾತನಾಡಲಿ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು: “ಕುಮಾರಸ್ವಾಮಿ ಅವರು ಮೊದಲು ಪ್ರಧಾನಮಂತ್ರಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿ. ಈ ಯೋಜನೆ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಲಿ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿರುಗೇಟು ನೀಡಿದರು.

ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ನದಿ ಜೋಡಣೆ ವಿಚಾರ ರಿಯಲ್ ಎಸ್ಟೇಟ್ ವ್ಯವಹಾರವಲ್ಲ, ನೀರಿನ ಪ್ರಮಾಣ ನಿಗದಿಯಾಗಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಯಾವ ಸಮಯದಲ್ಲಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತೇನೆ” ಎಂದು ತಿಳಿಸಿದರು.

ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಸಂಕಲ್ಪ

“ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಪೊಲೀಸರಿಗೆ ಸಹಕಾರ ನೀಡಬೇಕು. ಹೀಗಾಗಿ ಪೊಲೀಸ್ ಇಲಾಖೆಯಿಂದ ‘ಬೇಡ ಬ್ರೋ’ ಅಭಿಯಾನ ನಡೆಸುತ್ತಿದೆ” ಎಂದರು.

ಬದ್ರಿನಾಥ ದೇಣಿಗೆ ದುರ್ಬಳಕೆ ಆರೋಪ: ಉನ್ನತ ಮಟ್ಟದ ತನಿಖೆಗೆ ಉತ್ತರಾಖಂಡ ಸರ್ಕಾರ ಆದೇಶ

0

ಡೆಹ್ರಾಡೂನ್: ಬದ್ರಿನಾಥ ದೇವಸ್ಥಾನದಲ್ಲಿ ಭಕ್ತರ ದೇಣಿಗೆ ಹಾಗೂ ಕಾಣಿಕೆಗಳ ದುರ್ಬಳಕೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಮೂರು ಸದಸ್ಯರ ಸ್ವತಂತ್ರ ತನಿಖಾ ಸಮಿತಿಯನ್ನು ರಚಿಸಿದೆ.

ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಮಧ್ಯಪ್ರವೇಶಿಸಿದ್ದು, ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದೆ. ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸುವ ಉದ್ದೇಶದಿಂದ ಈ ತನಿಖೆ ನಡೆಸಲಾಗುತ್ತಿದೆ.

ದೇವಾಲಯದ ಹಣಕಾಸು ವಿಭಾಗದಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಬದ್ರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯು ಈಗಾಗಲೇ ಒಬ್ಬ ಹಿರಿಯ ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಆರಂಭದಲ್ಲಿ ದೇವಸ್ಥಾನ ಸಮಿತಿಯೇ ನಾಲ್ಕು ಸದಸ್ಯರ ಆಂತರಿಕ ತನಿಖಾ ಸಮಿತಿಯನ್ನು ರಚಿಸಿತ್ತು. ಆದರೆ, ಇದು ಆರೋಪಿಗಳನ್ನು ರಕ್ಷಿಸುವ ಪ್ರಯತ್ನ ಎಂದು ಭಕ್ತರು ಹಾಗೂ ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಪಾರದರ್ಶಕ ತನಿಖೆ ನಡೆಸಲು ಸರ್ಕಾರವೇ ನೇರವಾಗಿ ಸ್ವತಂತ್ರ ಸಮಿತಿಯನ್ನು ನೇಮಿಸಿದೆ.

ತನಿಖಾ ಸಮಿತಿಯು ಕಳೆದ ಕೆಲವು ವರ್ಷಗಳಿಂದ ಭಕ್ತರಿಂದ ನಗದು, ಚಿನ್ನ, ಬೆಳ್ಳಿ ಹಾಗೂ ಆನ್‌ಲೈನ್ ಮೂಲಕ ಬಂದಿರುವ ಎಲ್ಲಾ ದೇಣಿಗೆ ಮತ್ತು ಕಾಣಿಕೆಗಳ ಲೆಕ್ಕಪರಿಶೀಲನೆ ನಡೆಸಲಿದೆ. ದೇವಸ್ಥಾನದ ಬ್ಯಾಂಕ್ ಖಾತೆಗಳು, ರಸೀದಿ ಪುಸ್ತಕಗಳು ಹಾಗೂ ಹಣಕಾಸು ದಾಖಲೆಗಳಲ್ಲಿ ಯಾವುದೇ ತಿರುಚುವಿಕೆ ಅಥವಾ ಅಕ್ರಮ ನಡೆದಿದೆಯೇ ಎಂಬುದನ್ನು ಪರಿಶೀಲಿಸಲಿದೆ.

ಇದರ ಜೊತೆಗೆ, ಭಕ್ತರು ನೀಡಿದ ಹಣವನ್ನು ಧಾರ್ಮಿಕ ಕಾರ್ಯಗಳ ಹೊರತಾಗಿ ವೈಯಕ್ತಿಕ ಅಥವಾ ಅನಧಿಕೃತ ಉದ್ದೇಶಗಳಿಗೆ ಬಳಸಲಾಗಿದೆಯೇ ಎಂಬುದರ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತದೆ.

ವಿಶ್ವವಿಖ್ಯಾತ ಬದ್ರಿನಾಥ ಧಾಮದ ಪಾವಿತ್ರ್ಯತೆ ಹಾಗೂ ಭಕ್ತರ ನಂಬಿಕೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ. ತನಿಖಾ ಸಮಿತಿಯು ನಿಗದಿತ ಅವಧಿಯೊಳಗೆ ವರದಿ ಸಲ್ಲಿಸಲಿದ್ದು, ದೇಣಿಗೆ ದುರ್ಬಳಕೆ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಉತ್ತರಾಖಂಡ ಸರ್ಕಾರ ಸ್ಪಷ್ಟಪಡಿಸಿದೆ.

ಹೆರಿಗೆಯ ಬಳಿಕ ಬಾಣಂತಿ ಸಾವು: ಜೆಸಿ ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆಕ್ರೋಶ, ಪ್ರತಿಭಟನೆ

0

ಶಿವಮೊಗ್ಗ: ಸಹಜ ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟ ಪ್ರಕರಣ ತೀರ್ಥಹಳ್ಳಿಯಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ನಿರ್ಲಕ್ಷ್ಯದಿಂದಲೇ ಯುವತಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು ಜೆಸಿ ತಾಲೂಕು ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕಿನ ಶಾಖವಳ್ಳಿ ಗ್ರಾಮದ ಸುಮಾ (27) ಜುಲೈ 1ರಂದು ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಬಳಿಕ ಸಹಜ ಹೆರಿಗೆ ನಡೆಸಲಾಗಿತ್ತು. ಹೆರಿಗೆಯ ನಂತರ ರಕ್ತಸ್ರಾವ ಹೆಚ್ಚಾಗಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಮೊದಲು ಮೆಗ್ಗಾನ್ ಆಸ್ಪತ್ರೆಗೆ, ನಂತರ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುಮಾ ಮೃತಪಟ್ಟಿದ್ದಾರೆ. ನವಜಾತ ಶಿಶು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ.

ಪ್ರಕರಣದಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅರಗ ಜ್ಞಾನೇಂದ್ರ, ಪ್ರಕರಣದ ಸಮಗ್ರ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ತುಟಿಗೆ ಹೊಲಿಗೆ ಹಾಕಲು ಅರಿವಳಿಕೆ: 18 ತಿಂಗಳ ಮಗು ಸಾವು, ವೈದ್ಯರ ವಿರುದ್ಧ ಕೇಸ್

0

ತಿರುವನಂತಪುರಂ: ಕೆಳತುಟಿಯ ಸಣ್ಣ ಗಾಯಕ್ಕೆ ಹೊಲಿಗೆ ಹಾಕುವ ವೇಳೆ ಅರಿವಳಿಕೆ ನೀಡಿದ ಬಳಿಕ 18 ತಿಂಗಳ ಗಂಡು ಮಗು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ವೈದ್ಯಕೀಯ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು, ಅರಿವಳಿಕೆ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೃತ ಮಗುವನ್ನು ದೇವನ್ಶ್ ಶೌರ್ಯ (18 ತಿಂಗಳು) ಎಂದು ಗುರುತಿಸಲಾಗಿದೆ. ಇರಾಮಮ್-ಕುಟ್ಟೂರ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇರಂಗಲ್ ನಿವಾಸಿಗಳಾದ ಟಿ. ಸೂರಜ್ ಹಾಗೂ ವಿಜಿಶಾ ದಂಪತಿಯ ಏಕೈಕ ಪುತ್ರನಾಗಿದ್ದ ದೇವನ್ಶ್, ಮದುವೆಯಾದ ಎಂಟು ವರ್ಷಗಳ ಬಳಿಕ ಜನಿಸಿದ್ದ ಮಗು ಎಂದು ತಿಳಿದುಬಂದಿದೆ.

ಜುಲೈ 5ರಂದು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಬಿದ್ದು ದೇವನ್ಶ್‌ನ ಕೆಳತುಟಿಗೆ ಗಾಯವಾಗಿತ್ತು. ಬಳಿಕ ಪೋಷಕರು ಪಯ್ಯನ್ನೂರಿನ ಬೇಬಿ ಮೆಮೋರಿಯಲ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಗಾಯಕ್ಕೆ ಹೊಲಿಗೆ ಹಾಕಲು ವೈದ್ಯರು ಅರಿವಳಿಕೆ ನೀಡಿದ ಕೆಲವೇ ಕ್ಷಣಗಳಲ್ಲಿ ಮಗು ಪ್ರಜ್ಞೆ ಕಳೆದುಕೊಂಡಿತ್ತು.

ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಮತ್ತೊಂದು ಆಸ್ಪತ್ರೆ ಘಟಕಕ್ಕೆ ದಾಖಲಿಸಲಾಗಿತ್ತು. ಐದು ದಿನಗಳ ಕಾಲ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿದರೂ ಶುಕ್ರವಾರ ರಾತ್ರಿ ಮಗು ಮೃತಪಟ್ಟಿದೆ.

ಮಗುವಿಗೆ ಅರಿವಳಿಕೆಯ ಅತಿಯಾದ ಡೋಸ್ ನೀಡಿದ್ದರಿಂದ ಮೆದುಳು ಹಾನಿಗೊಳಗಾಗಿ ಸಾವಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ದೂರಿನ ಮೇರೆಗೆ ಪಯ್ಯನ್ನೂರು ಪೊಲೀಸರು ಅರಿವಳಿಕೆ ತಜ್ಞೆ ಡಾ. ಅಂಜಲಿ ಪೊದುವಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 125ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ ವೈದ್ಯಕೀಯ ನಿರ್ಲಕ್ಷ್ಯದ ಆರೋಪವನ್ನು ಆಸ್ಪತ್ರೆ ತಳ್ಳಿಹಾಕಿದೆ. ಅರಿವಳಿಕೆ ನೀಡಿದ ಬಳಿಕ ಮಗುವಿಗೆ ಅನಿರೀಕ್ಷಿತ ಹೃದಯ ಸ್ತಂಭನ ಉಂಟಾಗಿದ್ದು, ಎಲ್ಲಾ ವೈದ್ಯಕೀಯ ಪ್ರೋಟೋಕಾಲ್‌ಗಳನ್ನು ಪಾಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.

ಘಟನೆಯ ಬಳಿಕ ಆಸ್ಪತ್ರೆ ಎದುರು ಡಿವೈಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಸಂಬಂಧಿತ ವೈದ್ಯರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಶವಪರೀಕ್ಷೆ ವರದಿಗಾಗಿ ಕಾಯುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ.

SIR ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದ BLO ಹೃದಯಾಘಾತದಿಂದ ಸಾವು!

ದಾವಣಗೆರೆ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ.

ಚಿರಡೋಣಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಹಾಗೂ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಆರ್. ರಾಜಪ್ಪ (57) ಮೃತಪಟ್ಟವರು.

ಜುಲೈ 10ರಂದು ಎಸ್‌ಐಆರ್ ಕಾರ್ಯದ ಅಂಗವಾಗಿ ರಾಜಪ್ಪ ಅವರು ದಿನಪೂರ್ತಿ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಿ ರಾತ್ರಿ ಮನೆಗೆ ಮರಳಿದ್ದರು. ಬಳಿಕ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.

ಕುಟುಂಬದವರು ಚಿಕಿತ್ಸೆಗಾಗಿ ಪ್ರಯತ್ನಿಸಿದರೂ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

8ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಮುಖ್ಯ ಶಿಕ್ಷಕಿ ಸೇರಿ ಮೂವರು ಶಿಕ್ಷಕಿಯರು ಹಾಗೂ ಅಡುಗೆ ಸಹಾಯಕಿ ವಿರುದ್ಧ FIR

0

ಆನೇಕಲ್: ಎಂಟನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಶಾಲೆಯ ಮುಖ್ಯ ಶಿಕ್ಷಕಿ, ಇಬ್ಬರು ಸಹ ಶಿಕ್ಷಕಿಯರು ಹಾಗೂ ಅಡುಗೆ ಸಹಾಯಕಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿದ್ಯಾರ್ಥಿನಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯ ಶಿಕ್ಷಕಿ ಸುಜಾತ ಈರಪ್ಪ, ಸಹ ಶಿಕ್ಷಕಿಯರಾದ ಕವಿತಾ, ರೂಪಾ ಹಾಗೂ ಅಡುಗೆ ಸಹಾಯಕಿ ಕಮಲಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿದ್ಯಾರ್ಥಿನಿ ಮಧುಶ್ರೀಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

ಪ್ರಾಥಮಿಕ ತನಿಖೆ ಪ್ರಕಾರ, ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ತಮ್ಮನ್ನು ಮಾನಸಿಕವಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ದೂರು ನೀಡಲು ಮಧುಶ್ರೀ ಪತ್ರವೊಂದನ್ನು ಬರೆದು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಈ ವಿಷಯ ಶಿಕ್ಷಕಿಯರಿಗೆ ತಿಳಿದ ಬಳಿಕ ಮಧುಶ್ರೀ ಅವರನ್ನು ಇನ್ನಷ್ಟು ಗುರಿಯಾಗಿಸಿ ಮಾನಸಿಕ ಒತ್ತಡಕ್ಕೆ ಒಳಪಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆತ್ಮಹತ್ಯೆಗೂ ಒಂದು ದಿನ ಮೊದಲು ಮಧುಶ್ರೀ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಅವರಿಗೆ ತನ್ನ ಮೇಲಿನ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಳು ಎಂದು ತಿಳಿದುಬಂದಿದೆ. ಅದೇ ದಿನ ಮನೆಗೆ ಬಂದ ಬಳಿಕ, ಶಿಕ್ಷಕಿಯರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ತನ್ನ ಸಹೋದರಿ ಭಾನುಶ್ರೀ ಅವರ ಬಳಿ ಮಧುಶ್ರೀ ಹೇಳಿಕೊಂಡಿದ್ದಳು ಎನ್ನಲಾಗಿದೆ. ಇದಾದ ಬಳಿಕ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದ ನಿವಾಸಿಯಾಗಿದ್ದ ಮಧುಶ್ರೀ, ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾಜ್ಯಮಟ್ಟದ ಕಬಡ್ಡಿ ಆಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಳು.

ಜುಲೈ 9ರ ರಾತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಅದರಲ್ಲಿ ಶಾಲೆಯಲ್ಲಿ ನಡೆದ ಘಟನೆಗಳಿಂದ ತೀವ್ರ ಮನನೊಂದಿರುವುದಾಗಿ ಉಲ್ಲೇಖಿಸಿದ್ದಾಳೆ.

ಡೆತ್‌ನೋಟ್‌ನಲ್ಲಿ, “ಶಾಲೆಯಲ್ಲಿ ನಡೆದ ಘಟನೆ ನನಗೆ ತುಂಬಾ ನೋವು ತಂದಿದೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಈ ಅವಮಾನ ಸಹಿಸಿಕೊಂಡು ಬದುಕಲು ಸಾಧ್ಯವಾಗುತ್ತಿಲ್ಲ. ಮನಸ್ಸಿಗೆ ತುಂಬಾ ನೋವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಅಮ್ಮ, ಅಕ್ಕ, ತಂಗಿ, ತಮ್ಮ ಯಾರದ್ದೂ ತಪ್ಪಿಲ್ಲ. ನನ್ನ ಅಮ್ಮನನ್ನು ಯಾರೂ ಬೈಯಬೇಡಿ. ಎಲ್ಲರೂ ನನ್ನನ್ನು ಕ್ಷಮಿಸಿ. ನನಗೆ ಈ ಭೂಮಿಯ ಮೇಲೆ ಬದುಕುವ ಅರ್ಹತೆ ಇಲ್ಲ” ಎಂದು ಬರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರು ಡೆತ್‌ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿರುವ ಆರೋಪಗಳು, ಕುಟುಂಬ ಸದಸ್ಯರ ಹೇಳಿಕೆಗಳು ಹಾಗೂ ಶಾಲಾ ಸಿಬ್ಬಂದಿಯ ಪಾತ್ರ ಸೇರಿದಂತೆ ಎಲ್ಲ ಆಯಾಮಗಳಿಂದ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ.

29ನೇ ವಯಸ್ಸಿನಲ್ಲೇ 300 ಅಂತಾರಾಷ್ಟ್ರೀಯ ಪಂದ್ಯಗಳ ಮೈಲುಗಲ್ಲು: ಲಾರ್ಡ್ಸ್ʼನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ

0

ಲಂಡನ್: ಕ್ರಿಕೆಟ್‌ನ ಕಾಶಿ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ ಮಹಿಳಾ ತಂಡದ ಉಪನಾಯಕಿ ಸ್ಮೃತಿ ಮಂಧಾನ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅವರು ತಮ್ಮ 300ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದು, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಈ ಮೈಲುಗಲ್ಲು ತಲುಪಿದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ವಿಶ್ವದಾಖಲೆಯನ್ನು ನಿರ್ಮಿಸಿದ್ದಾರೆ.

ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ನ್ಯಾಟ್ ಸೀವರ್-ಬ್ರಂಟ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತದ ಪರ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ 300ನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ ಸಾಧನೆ ಮಾಡಿದರು.

ಈ ಮೈಲುಗಲ್ಲಿನೊಂದಿಗೆ ಸ್ಮೃತಿ ಮಂಧಾನ 29 ವರ್ಷ 357 ದಿನಗಳ ವಯಸ್ಸಿನಲ್ಲಿ 300 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ವಿಶ್ವದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ದಕ್ಷಿಣ ಆಫ್ರಿಕಾದ ಸುನೆ ಲೂಸ್ ಹೆಸರಿನಲ್ಲಿತ್ತು. ಸುನೆ ಲೂಸ್ ಅವರು 30 ವರ್ಷ 163 ದಿನಗಳ ವಯಸ್ಸಿನಲ್ಲಿ 300 ಪಂದ್ಯಗಳನ್ನು ಆಡಿದ್ದರು.

ಈ ಮೂಲಕ ಅತೀ ಕಡಿಮೆ ವಯಸ್ಸಿನಲ್ಲಿ 300 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಮಹಿಳಾ ಕ್ರಿಕೆಟಿಗೆಯಾಗಿ ಸ್ಮೃತಿ ಮಂಧಾನ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದೇ ಪಂದ್ಯದಲ್ಲಿ ಸ್ಮೃತಿ ಮಂಧಾನ ಬ್ಯಾಟಿಂಗ್‌ನಲ್ಲೂ ಮಿಂಚಿದರು. 108 ಎಸೆತಗಳನ್ನು ಎದುರಿಸಿದ ಅವರು 83 ರನ್ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಪೂರೈಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ ಅರ್ಧಶತಕ ದಾಖಲಿಸಿದ ಮೊದಲ ಮಹಿಳಾ ಬ್ಯಾಟರ್ ಎಂಬ ಅಪರೂಪದ ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡರು.

ಒಂದೇ ಪಂದ್ಯದಲ್ಲಿ ಎರಡು ಐತಿಹಾಸಿಕ ಸಾಧನೆಗಳನ್ನು ದಾಖಲಿಸಿರುವ ಸ್ಮೃತಿ ಮಂಧಾನ, ಮಹಿಳಾ ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ತಮ್ಮ ಸ್ಥಾನಮಾನವನ್ನು ಸಾಬೀತುಪಡಿಸಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೆಮ್ಮೆ ಹೆಚ್ಚಿಸಿದ್ದಾರೆ.