Home Blog Page 4

IPL 2026: ವೈಭವ್​ ಸೂರ್ಯವಂಶಿಗೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿರಾಟ್​ ಕೊಹ್ಲಿ: ವಿಡಿಯೋ ವೈರಲ್​

0

ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಓಪನರ್ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಏಪ್ರಿಲ್ 10ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಪಂದ್ಯದ ಬಳಿಕ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ, ವೈಭವ್ ಅವರನ್ನು ಭೇಟಿ ಮಾಡಿ ಅವರ ಆಟವನ್ನು ಶ್ಲಾಘಿಸಿದರು. ಈ ವೇಳೆ ವೈಭವ್ ಧರಿಸಿದ್ದ ಟೋಪಿಯ ಮೇಲೆ “ಡಿಯರ್ ವೈಭವ್, ವೆಲ್ ಡನ್” ಎಂದು ಬರೆಯುತ್ತಾ ಸಹಿ ಹಾಕಿ ಶುಭಾಶಯ ತಿಳಿಸಿದರು. ಈ ಕ್ಷಣಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗುವಾಹಟಿಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 201 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 7 ಸಿಕ್ಸ್ ಮತ್ತು 8 ಬೌಂಡರಿಗಳೊಂದಿಗೆ 78 ರನ್ ಸಿಡಿಸಿ ಪಂದ್ಯದ ದಿಕ್ಕೇ ಬದಲಿಸಿದರು.

ಅವರ ಸ್ಫೋಟಕ ಆಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡ 202 ರನ್ ಗುರಿಯನ್ನು ಇನ್ನೂ 12 ಎಸೆತಗಳು ಬಾಕಿ ಇರುವಾಗಲೇ ತಲುಪಿತು. ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ವೈಭವ್ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.

ಈ ಅದ್ಭುತ ಪ್ರದರ್ಶನದೊಂದಿಗೆ ವೈಭವ್ ಸೂರ್ಯವಂಶಿ ಪ್ರಸ್ತುತ ಐಪಿಎಲ್ 2026ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈವರೆಗೆ 4 ಪಂದ್ಯಗಳಲ್ಲಿ 200 ರನ್ ಗಳಿಸಿರುವ ಅವರು ‘ಆರೆಂಜ್ ಕ್ಯಾಪ್’ ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ಆರೆಂಜ್ ಕ್ಯಾಪ್ ಗೆದ್ದರೆ, ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಇಂದು ಮಳೆ ಮುನ್ಸೂಚನೆ: ಕರಾವಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರುತ್ತಿದೆ.

ನಿನ್ನೆ ಸಿಲಿಕಾನ್ ಸಿಟಿಯಲ್ಲಿ ಮಳೆಯಾಗಿದ್ದರಿಂದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮುಂದಿನ ಕೆಲವು ದಿನಗಳವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಕರ್ನಾಟಕದಲ್ಲಿ ಬಿಸಿ ಹಾಗೂ ಆರ್ದ್ರತೆ ಹೆಚ್ಚಾಗುವ ಸಾಧ್ಯತೆ ಇದ್ದು, ಏಪ್ರಿಲ್ 10ರಿಂದ 12ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸೆಖೆ ಅನುಭವವಾಗಲಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರ ಭಾಗಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದಕ್ಕೆ ವಿರುದ್ಧವಾಗಿ, ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ತಾಪಮಾನದಲ್ಲಿ ಏರಿಕೆ ಕಂಡುಬರಲಿದೆ.

ಬೆಂಗಳೂರು ನಗರದಲ್ಲಿ ಹಗಲಿನಲ್ಲಿ ಬಿಸಿಲಿನ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಾಣಿಸಿಕೊಳ್ಳಲಿದೆ. ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಗಾಳಿಯ ವೇಗ ಗಂಟೆಗೆ 6ರಿಂದ 13 ಕಿಲೋಮೀಟರ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರಾಭಿವೃದ್ಧಿ ಅಧಿಕಾರಿಯ ಮನೆ ಮೇಲೆ ಲೋಕಾ ದಾಳಿ: 14 ಕೋಟಿ ಅಕ್ರಮ ಆಸ್ತಿ ಪತ್ತೆ!

ಬೆಳಗಾವಿ: ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಹಣಾಧಿಕಾರಿ (ಎಇಇ) ಮನೆ ಮೇಲೆ ಲೋಕಾಯುಕ್ತ ನಡೆಸಿದ ದಾಳಿಯಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಲೋಕಾಯುಕ್ತ ಅಧಿಕಾರಿಗಳು ಬೆಳಗಾವಿ ನಗರದ ಆಂಜನೇಯ ನಗರ ಸೇರಿದಂತೆ ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದು, ಒಟ್ಟು 14 ಕೋಟಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಈ ಪ್ರಮಾಣದ ಆಸ್ತಿ ಕಂಡು ಅಧಿಕಾರಿಗಳೇ ಆಶ್ಚರ್ಯಗೊಂಡಿದ್ದಾರೆ.

ದಾಳಿ ವೇಳೆ ಡಿಯುಡಿಸಿ (DUDC) ಎಇಇ ಅಜಯಸಿಂಗ್ ರಜಪೂತ್ ಅವರ ಮನೆ, ಕಚೇರಿ ಹಾಗೂ ಬ್ಯಾಂಕ್ ಲಾಕರ್‌ಗಳನ್ನು ಪರಿಶೀಲಿಸಲಾಗಿದೆ. ತನಿಖೆಯಲ್ಲಿ ಬೆಳಗಾವಿ ಸೇರಿದಂತೆ ಸವದತ್ತಿ, ಹುಕ್ಕೇರಿ ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು 18 ನಿವೇಶನಗಳು ಪತ್ತೆಯಾಗಿವೆ.

ಇದಲ್ಲದೆ, ಸುಮಾರು 5.96 ಕೆಜಿ ಚಿನ್ನಾಭರಣ, 5 ಕೆಜಿ ಬೆಳ್ಳಿ, ಸುಮಾರು 3.12 ಕೋಟಿ ರೂ. ಬ್ಯಾಂಕ್ ಠೇವಣಿಗಳು, ಐಷಾರಾಮಿ ಕಾರು ಹಾಗೂ ಬೈಕ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ. ಬ್ಯಾಂಕ್ ಲಾಕರ್ ಪರಿಶೀಲನೆ ಇನ್ನೂ ಬಾಕಿಯಿದ್ದು, ಹೆಚ್ಚಿನ ಅಕ್ರಮ ಆಸ್ತಿ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ PU ಸಾಧಕರು: ಕುಸಿತದ ಮಧ್ಯೆಯೂ ಮಿಂಚಿದ ಪ್ರತಿಭೆಗಳು – ಮೂವರು ವಿಭಾಗಗಳಲ್ಲಿ ಅಗ್ರ ಸಾಧನೆ

ಗದಗ: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಗದಗ ಜಿಲ್ಲೆ ಮತ್ತೆ ಹಿನ್ನಡೆ ಅನುಭವಿಸಿದೆ. ಕಳೆದ ವರ್ಷ ಅಲ್ಪ ಏರಿಕೆ ಕಂಡಿದ್ದ ಫಲಿತಾಂಶ ಈ ಬಾರಿ ಕುಸಿದಿದ್ದರೂ, ಕೆಲವು ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈ ಬಾರಿ ಕೂಡ ಜಿಲ್ಲೆಯ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮೂರು ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗ

ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದ ಎಸ್‌ಎ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಲಿಗೆಮ್ಮ 589 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಲಕ್ಷ್ಮೇಶ್ವರದ ಎಸ್‌ಎಂಜಿವಿಜಿ ಕಾಲೇಜಿನ ರೋಹಿಣಿ ಬೆಟಗೇರಿ 584 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಎಂ.ಬಿ. ಪಾಟೀಲ ಪಿಯು ಕಾಲೇಜಿನ ಮಂಜುಳಾ ಹುಳಕಣ್ಣವರ 582 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗ

ಗದಗ ನಗರದ ಸರಕಾರಿ ಪಿಯು ಕಾಲೇಜಿನ ಸಮೃದ್ಧಿ ಸಿದ್ಧಲಿಂಗ 591 (ಶೇ. 98.4) ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸನ್ಮಾರ್ಗ ಪಿಯು ಕಾಲೇಜಿನ ಕಿರಣ ಹಿರೇಮಠ 590 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿನ ರೇಖಾ ಕಣ್ಣೂರ 587 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ

ಮುಂಡರಗಿ ಜೆಎ ಕಾಲೇಜಿನ ಪದ್ಮಪ್ರಿಯಾ ಶೆಟ್ಟರ್ ಹಾಗೂ ಗದಗ ತಾಲೂಕಿನ ಬಳಗಾನೂರ ಗ್ರಾಮದ ಚಿಕೇನಕೊಪ್ಪ ಶರಣರ ಕಾಲೇಜಿನ ಗೀತಾ ಹೂಗಾರ ಇಬ್ಬರೂ 590 (ಶೇ. 98.3) ಅಂಕಗಳೊಂದಿಗೆ ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ. ಗದಗ ಎಎಸ್‌ಎಸ್ ಕಾಲೇಜಿನ ವಿನೀತ ಬಂಡಾ, ಪ್ರಿಯಾಂಕಾ ಎಚ್ ಮತ್ತು ಆದಿತ್ಯ ರಾಯಬಾಗಿ ತಲಾ 589 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಡಿಡಿಪಿಯುಗೆ ಡಿಸಿ ನೋಟಿಸ್

ಜಿಲ್ಲೆಯ ಪಿಯುಸಿ ಫಲಿತಾಂಶ ಕುರಿತು ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಡಿಡಿಪಿಯು ಎಸ್.ಬಿ. ಮಸನಾಯಕ ಅವರಿಗೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಫಲಿತಾಂಶ ಪ್ರಕಟವಾದ ಬಳಿಕವೂ ಸಮಯಕ್ಕೆ ಸರಿಯಾಗಿ ಮಾಹಿತಿ ನೀಡದಿರುವುದು ಹಾಗೂ ಜಿಲ್ಲೆಯ ಸ್ಥಾನ ಕುರಿತು ತಪ್ಪು ಮಾಹಿತಿ ನೀಡಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

“ಪಿಯು ಫಲಿತಾಂಶ ಕುರಿತು ಡಿಡಿಪಿಯು ಸಮಗ್ರ ಮಾಹಿತಿ ನೀಡಲೇಬೇಕು. ತಪ್ಪು ಮಾಹಿತಿ ನೀಡಿದರೆ ತಪ್ಪು ಸಂದೇಶ ಹೋಗುತ್ತದೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದ್ದಾರೆ.

ಗಂಗಾವತಿ ಭೀಮಪ್ಪ ಪಿಯು ಕಾಲೇಜಿನಲ್ಲಿ 65.15% ಫಲಿತಾಂಶ: ಕಳೆದ ವರ್ಷಕ್ಕಿಂತ 33% ಏರಿಕೆ

0

ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 65.15ರಷ್ಟು ಫಲಿತಾಂಶ ದಾಖಲಾಗಿದೆ ಎಂದು ಪ್ರಾಚಾರ್ಯ ಎಂ.ಕೆ. ದುರುಗಪ್ಪ ತಿಳಿಸಿದ್ದಾರೆ.

2026ನೇ ಸಾಲಿನ ಫಲಿತಾಂಶದ ಪ್ರಕಾರ ಒಟ್ಟು 746 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, 735 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇವರಲ್ಲಿ 486 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಒಟ್ಟು ಶೇಕಡಾ 66.12ರಷ್ಟು ಫಲಿತಾಂಶ ದೊರೆತಿದ್ದು, ಉನ್ನತ ಶ್ರೇಣಿಯಲ್ಲಿ 50, ಪ್ರಥಮ ಶ್ರೇಣಿಯಲ್ಲಿ 285, ದ್ವಿತೀಯ ಶ್ರೇಣಿಯಲ್ಲಿ 123 ಹಾಗೂ ಉತ್ತೀರ್ಣ ಶ್ರೇಣಿಯಲ್ಲಿ 28 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಕಲಾ ವಿಭಾಗ

ಸೊನ್ನದ ನಾಗರಾಜ – 575, ಎಚ್. ರೇಣುಕಾ – 569, ತಿಪ್ಪಮ್ಮ – 566, ಟಿ. ಸೌಂದರ್ಯ – 566

ವಾಣಿಜ್ಯ ವಿಭಾಗ

ಎಂ.ಎಸ್. ನಿತಿನ್ – 570, ಎಂ. ಸಂಜನಾ – 568, ಪಿ. ಸಿಂಧು – 567

ವಿಜ್ಞಾನ ವಿಭಾಗ

ಎಂ.ಎಂ. ವೀಣಾ – 557, ಪಿ.ಎಂ. ಅಲಿಷ ಬಾನು – 556, ಬಿ. ಲಕ್ಷ್ಮಿ – 549

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 33% ಹೆಚ್ಚು ಫಲಿತಾಂಶ ಕಂಡುಬಂದಿದ್ದು, ವಿದ್ಯಾರ್ಥಿಗಳ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಕರು ಸಂತೋಷ ವ್ಯಕ್ತಪಡಿಸಿದ್ದಾರೆ.

ವಿದ್ಯಾನಿಕೇತನ PU ಕಾಲೇಜಿಗೆ 98.28% ಫಲಿತಾಂಶ: ಭಾರ್ಗವಿ ಬೇವಿನಮರ ಜಿಲ್ಲೆಗೆ ಪ್ರಥಮ – ಡಿಸ್ಟಿಂಕ್ಷನ್ʼಗಳಲ್ಲಿ ಪಾಸಾದ ವಿದ್ಯಾರ್ಥಿಗಳು

0

ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 98.28ರಷ್ಟು ಫಲಿತಾಂಶ ದಾಖಲಿಸಿ ವಿಜಯನಗರ ಜಿಲ್ಲೆಯಲ್ಲಿ ಭರ್ಜರಿ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಭಾರ್ಗವಿ ಬೇವಿನಮರ 600 ಅಂಕಗಳಿಗೆ 592 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರೂಪಶ್ರೀ ಎಸ್ 591 ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಹರ್ಷಲಾ ಪ್ರೀತಿ 588 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ. ಇನ್ನೂ 7 ವಿದ್ಯಾರ್ಥಿಗಳು 580ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಕಾಲೇಜಿನ ಒಟ್ಟು 582 ವಿದ್ಯಾರ್ಥಿಗಳಲ್ಲಿ 283 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 266 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಒಟ್ಟಾರೆ ಅತ್ಯುತ್ತಮ ಫಲಿತಾಂಶ ಸಾಧಿಸಲಾಗಿದೆ.

ರಾಜ್ಯ ಮಟ್ಟದಲ್ಲಿ ಸರಾಸರಿ ಫಲಿತಾಂಶ ಸುಮಾರು 86% ಇದ್ದ ಸಂದರ್ಭದಲ್ಲಿ ವಿದ್ಯಾನಿಕೇತನ ಕಾಲೇಜಿನ ಈ ಸಾಧನೆ ವಿಶೇಷ ಗಮನ ಸೆಳೆದಿದೆ. ಹೆಚ್ಚಿನ ವಿದ್ಯಾರ್ಥಿಗಳು ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಕಾಲೇಜಿನ ಶೈಕ್ಷಣಿಕ ಗುಣಮಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ವಿದ್ಯಾನಿಕೇತನ ಕಾಲೇಜಿನ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮೆಯ ವಿಷಯವಾಗಿದ್ದು, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರು, ಪೋಷಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.

ಈ ಸಾಧನೆ ವಿದ್ಯಾರ್ಥಿಗಳ ನಿರಂತರ ಪರಿಶ್ರಮ, ಶಿಕ್ಷಕರ ಸಮರ್ಪಿತ ಬೋಧನೆ ಹಾಗೂ ಪೋಷಕರ ಸಹಕಾರದ ಫಲವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲು ನಾವು ಬದ್ಧರಾಗಿದ್ದೇವೆ ಎಂದು ಚೇರ್ಮನ್ ಶರತ್ ಚಂದ್ರ ಹೇಳಿದ್ದಾರೆ.

ಕಾಲೇಜಿನ ಪ್ರಿನ್ಸಿಪಾಲರಾದ ಶೇಖರ್, ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಭವಿಷ್ಯದಲ್ಲೂ ಇದೇ ರೀತಿಯ ಶ್ರೇಷ್ಠ ಫಲಿತಾಂಶ ಮುಂದುವರಿಯಲಿ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ವೃಂದಾವನದಲ್ಲಿ ಬೋಟ್ ದುರಂತ: 10 ಮಂದಿ ಸಾವು, ಹಲವರಿಗೆ ಗಾಯ

0

ಲಕ್ನೋ: ವೃಂದಾವನದ ಯಮುನಾ ನದಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ ಭೀಕರ ದುರಂತ ಸಂಭವಿಸಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿ, 22 ಮಂದಿ ಗಾಯಗೊಂಡಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಪಂಜಾಬ್‌ನಿಂದ ಬಂದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಕೇಸಿ ಘಾಟ್ ಬಳಿ ಆಳವಾದ ನೀರಿಗೆ ಹೋಗಿ ತೇಲುತ್ತಿದ್ದ ಪಾಂಟೂನ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

ನೀರಿನ ಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿದ್ದ ಪಾಂಟೂನ್ ಸೇತುವೆಯನ್ನು ಇತ್ತೀಚೆಗೆ ತೆರವುಗೊಳಿಸಲಾಗಿತ್ತು. ಆದರೆ ಕೆಲ ಪಾಂಟೂನ್ ಡ್ರಮ್‌ಗಳು ನದಿಯಲ್ಲೇ ಉಳಿದಿದ್ದು, ಅವುಗಳಲ್ಲಿ ಒಂದಕ್ಕೆ ದೋಣಿ ಡಿಕ್ಕಿ ಹೊಡೆದಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಈ ಘಟನೆ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಅಗತ್ಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ. ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗಾಗಿ ಎರಡೂ ರಾಜ್ಯಗಳ ಸರ್ಕಾರಗಳು ನಿರಂತರ ಸಂಪರ್ಕದಲ್ಲಿವೆ.

ಮೃತರಲ್ಲಿ ಬಹುತೇಕರು ಲುಧಿಯಾನಾದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರು ಎಂದು ತಿಳಿದುಬಂದಿದೆ. ಜಗ್ರಾಂವ್‌ನ ಶ್ರೀ ಬಂಕೆ ಬಿಹಾರಿ ಕ್ಲಬ್‌ನಿಂದ ಸುಮಾರು 120 ಯಾತ್ರಿಕರು ಏಪ್ರಿಲ್ 9ರಂದು ಎರಡು ಬಸ್‌ಗಳಲ್ಲಿ ವೃಂದಾವನಕ್ಕೆ ನಾಲ್ಕು ದಿನಗಳ ಪ್ರವಾಸಕ್ಕೆ ಬಂದಿದ್ದರು.

ಮೃತರಾದವರಲ್ಲಿ ಕವಿತಾ ರಾಣಿ (49), ಚರಂಜಿತ್ (40), ಸಪ್ನಾ ಹನ್ಸ್ (55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ ಹಾಗೂ ಮಿನು ಬನ್ಸಾಲ್ ಸೇರಿದ್ದಾರೆ.

ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ ಇನ್ನೂ ನಾಪತ್ತೆಯಾಗಿದ್ದಾರೆ.

ಗಾಯಗೊಂಡ 22 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರಲ್ಲಿ ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಘಟನಾ ಸ್ಥಳದಲ್ಲಿ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ತಂಡಗಳು, ಸೇನೆ ಹಾಗೂ ಸ್ಥಳೀಯ ಡೈವರ್‌ಗಳು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್ ಬರ್ಬರ ಹತ್ಯೆ!

ಧಾರವಾಡ: ಅವಳಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ ನನ್ನು ಧಾರವಾಡ ನಗರದ ಹಾಶ್ಮಿ ನಗರದಲ್ಲಿರುವ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ತಿಳಿದ ತಕ್ಷಣ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೃತ್ಯವನ್ನು ಆರು ಮಂದಿ ಸೇರಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ಮೊಹಮ್ಮದ್ ಶಾ, ಸದ್ದಾಂ, ಗೌಸ್ ಮತ್ತು ಪರ್ವೇಜ್ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ ಆರೋಪಿಗಳೆಂದು ತಿಳಿದುಬಂದಿದೆ.

ಕೊಲೆ ಸಂಚು ರೂಪಿಸಿದ್ದ ಅರ್ಬಾಜ್ ಪಠಾಣ್ ಮತ್ತು ಗುಲಾಬ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಗೈದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯಾಚರಣೆ ಮುಂದುವರಿದಿದೆ.

ವೈಯಕ್ತಿಕ ಹಾಗೂ ರಾಜಕೀಯ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಉಪನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ದೈವಕ್ಕೆ ಅಪಮಾನ: ರಣವೀರ್ ಸಿಂಗ್‌ಗೆ ಮತ್ತೆ ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ಸೂಚನೆ!

ಬೆಂಗಳೂರು: ದೈವಕ್ಕೆ ಅಪಮಾನ ಮಾಡಿದ ಆರೋಪ ಸಂಬಂಧ ನಟ ರಣವೀರ್ ಸಿಂಗ್ ಅವರಿಗೆ ಮತ್ತೊಮ್ಮೆ ಅಫಿಡವಿಟ್ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ.

ಕಾಂತಾರ ಚಿತ್ರದ ದೈವ ಸಂಪ್ರದಾಯವನ್ನು ಅಪಹಾಸ್ಯ ಮಾಡಿದ ಆರೋಪದಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ ಪ್ರಕರಣದಲ್ಲಿ, ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ರಣವೀರ್ ಸಿಂಗ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಪೀಠದಲ್ಲಿ ನಡೆಯಿತು.

ವಿಚಾರಣೆ ವೇಳೆ ದೂರುದಾರರ ಪರ ವಕೀಲರು, ರಣವೀರ್ ಸಿಂಗ್ ಮನಸಾರೆ ಕ್ಷಮೆ ಕೋರಿಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಯಾಗಿ ರಣವೀರ್ ಪರ ವಕೀಲರು, ಈಗಾಗಲೇ ಬೇಷರತ್ ಕ್ಷಮೆ ಕೋರಿ ಅಫಿಡವಿಟ್ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅಗತ್ಯವಿದ್ದರೆ ಮತ್ತೊಮ್ಮೆ ಅಫಿಡವಿಟ್ ಸಲ್ಲಿಸಲು ಸಿದ್ಧವಿದ್ದೇವೆ ಎಂದು ಹೇಳಿದರು.

ಇದನ್ನು ಪರಿಗಣಿಸಿದ ನ್ಯಾಯಾಲಯ, ಮತ್ತೊಮ್ಮೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಿದೆ.

ಬೆಂಗಳೂರಿನಲ್ಲಿ ವರುಣನ ಅಬ್ಬರ – ಹಲವು ಕಡೆ ಭಾರೀ ಮಳೆ, ರಸ್ತೆಗಳು ಜಲಾವೃತ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹಲವೆಡೆ ಗುರುವಾರ ವರುಣನ ಅಬ್ಬರ ಕಂಡುಬಂದಿದೆ.

ಮೆಜೆಸ್ಟಿಕ್, ರಾಜಾಜಿನಗರ, ವಸಂತನಗರ, ಕಲಾಸಿಪಾಳ್ಯ, ಟೌನ್‌ಹಾಲ್, ವಿಜಯನಗರ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು, ಕೆಲ ಹೊತ್ತಿನಲ್ಲೇ ರಸ್ತೆಗಳು ಜಲಾವೃತವಾಗಿವೆ.

ಏಕಾಏಕಿ ಸುರಿದ ಮಳೆಯಿಂದ ಪ್ರಮುಖ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರ ನಿಧಾನಗೊಂಡಿದೆ. ಸಂಜೆ ವೇಳೆಗೆ ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಹಲವೆಡೆ ವಾಹನ ಸವಾರರು ಪರದಾಟ ಅನುಭವಿಸಿದರು.

ಇದೇ ವೇಳೆ ಹವಾಮಾನ ಇಲಾಖೆ ರಾಜ್ಯದಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಹೆಚ್ಚಾಗುವ ಸಾಧ್ಯತೆ ಇದ್ದು, ಏಪ್ರಿಲ್ 10ರಿಂದ 12ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.

ದಕ್ಷಿಣ ಒಳನಾಡಿನ ಬೆಂಗಳೂರು, ಮೈಸೂರು, ಕೊಡಗು ಮತ್ತು ಚಾಮರಾಜನಗರದ ಕೆಲ ಭಾಗಗಳಲ್ಲಿ ಸಂಜೆ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಉತ್ತರ ಒಳನಾಡಿನ ಬೆಳಗಾವಿ, ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ತಾಪಮಾನ ಏರಿಕೆಯಾಗುವ ನಿರೀಕ್ಷೆಯಿದೆ.

ಬೆಂಗಳೂರು ನಗರದಲ್ಲಿ ಹಗಲಿನ ವೇಳೆ ಬಿಸಿಲಿನ ವಾತಾವರಣ ಕಂಡುಬರುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಮೋಡಕವಿದ ಆಕಾಶ ಹಾಗೂ ಮಳೆಯ ಸಾಧ್ಯತೆ ಇದೆ. ನಗರದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಾಳಿಯ ವೇಗ ಗಂಟೆಗೆ 6 ರಿಂದ 13 ಕಿಲೋ ಮೀಟರ್ ಇರುವ ಸಾಧ್ಯತೆಯೂ ಇದೆ.

error: Content is protected !!