Home Blog Page 5

ನಾನು ಹಿರಿಯ ಶಾಸಕ; ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ – ಮಾಗಡಿ ಬಾಲಕೃಷ್ಣ

ಬೆಂಗಳೂರು: ಮುಂದಿನ ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವೇಳೆ ತಮಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಶಾಸಕ ಮಾಗಡಿ ಬಾಲಕೃಷ್ಣ ಹೇಳಿದ್ದಾರೆ. ತಾವು ಪಕ್ಷದ ಹಿರಿಯ ಶಾಸಕರಾಗಿರುವ ಹಿನ್ನೆಲೆ ಕ್ಯಾಬಿನೆಟ್‌ನಲ್ಲಿ ಅವಕಾಶ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಬಗ್ಗೆ ತಮಗೆ ಮಾಧ್ಯಮಗಳ ಮೂಲಕವೇ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.

“ಸಿದ್ದರಾಮಯ್ಯ ಅವರು ಎಷ್ಟು ವರ್ಷ ಮುಖ್ಯಮಂತ್ರಿಯಾಗಿರುತ್ತಾರೋ ಅಷ್ಟು ವರ್ಷ ಮುಂದುವರಿಯಲಿ. ಅದಕ್ಕೆ ನಮ್ಮ ಯಾವುದೇ ಅಭ್ಯಂತರವಿಲ್ಲ. ಆದರೆ ಸಿದ್ದರಾಮಯ್ಯ ಅವರ ಬಳಿಕ ರಾಜ್ಯ ಕಾಂಗ್ರೆಸ್‌ನ ಮುಂದಿನ ನಾಯಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಬೇಕು ಎಂಬುದು ನಮ್ಮ ಅಭಿಪ್ರಾಯ,” ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯ ರಾಜಕೀಯದಲ್ಲಿ ಸದ್ಯ ಉತ್ತಮ ವಾತಾವರಣ ನಿರ್ಮಾಣವಾಗುತ್ತಿದೆ. ಹೈಕಮಾಂಡ್ ನಾಯಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಚರ್ಚೆ ನಡೆಸಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿತ್ತು ಎಂದು ಅವರು ಹೇಳಿದರು. ಪಕ್ಷದ ಪರವಾಗಿ ಡಿಕೆಶಿ ಅನೇಕ ಬಾರಿ ತಮ್ಮ ನಿಷ್ಠೆಯನ್ನು ಸಾಬೀತುಪಡಿಸಿದ್ದಾರೆ. ಅವರು ಪಕ್ಷದ ಶಿಸ್ತಿನ ಸಿಪಾಯಿ ಎಂದು ಬಾಲಕೃಷ್ಣ ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲ ಸಮುದಾಯಗಳ ನಾಯಕರಿಗೂ ಅವಕಾಶವಿದ್ದು, ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಅಥವಾ ನಾಯಕತ್ವದ ಬಗ್ಗೆ ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದರು.

ಕಣ್ಣೀರಿನ ನಡುವೆ ಹಂಪಿಗೆ ವಿದಾಯ ಹೇಳಿದ ‘ಲಕ್ಷ್ಮೀ’: ತಡರಾತ್ರಿ ಕೊನೆಗೂ ಕೋಲಾರಕ್ಕೆ ಸ್ಥಳಾಂತರ

0

ಬಳ್ಳಾರಿ: ಹಂಪಿಯ ವಿರೂಪಾಕ್ಷ ದೇವಸ್ಥಾನದ ಆನೆ ‘ಲಕ್ಷ್ಮೀ’ ಕೊನೆಗೂ ಹಂಪಿಗೆ ವಿದಾಯ ಹೇಳಿದೆ. ಸ್ಥಳೀಯರ ತೀವ್ರ ವಿರೋಧ, ಸಾಮಾಜಿಕ ಜಾಲತಾಣಗಳ ಆಕ್ರೋಶ ಹಾಗೂ ಭಾವನಾತ್ಮಕ ಪ್ರತಿಭಟನೆಗಳ ನಡುವೆಯೂ ತಡರಾತ್ರಿ ರಹಸ್ಯ ಕಾರ್ಯಾಚರಣೆ ಮೂಲಕ ಆನೆಯನ್ನು ಕೋಲಾರಕ್ಕೆ ಸ್ಥಳಾಂತರಿಸಲಾಗಿದೆ.

ಮುಜರಾಯಿ ಇಲಾಖೆ ಮತ್ತು ವಿಜಯನಗರ ಜಿಲ್ಲಾಡಳಿತ ಸಂಯುಕ್ತವಾಗಿ ಈ ಕಾರ್ಯಾಚರಣೆ ನಡೆಸಿದ್ದು, ರಾತ್ರಿ 1 ಗಂಟೆಯ ನಂತರ ಯಾವುದೇ ಗೊಂದಲ ಸೃಷ್ಟಿಯಾಗದಂತೆ ಅತ್ಯಂತ ಗೌಪ್ಯವಾಗಿ ಆನೆಯನ್ನು ಲಾರಿಗೆ ಹತ್ತಿಸಿ ಕರೆದೊಯ್ಯಲಾಗಿದೆ.

ಈ ವೇಳೆ ವರ್ಷಗಳಿಂದ ಲಕ್ಷ್ಮಿಯನ್ನು ಸಾಕಿ ಬೆಳೆಸಿದ್ದ ಮಾವುತರ ಕುಟುಂಬ ಭಾವುಕರಾಯಿತು. ಆನೆಯನ್ನು ಅಪ್ಪಿಕೊಂಡು ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತ ದೃಶ್ಯ ಅಲ್ಲಿದ್ದವರ ಮನಕಲಕಿತು. ಸ್ಥಳೀಯರು ಸಹ ಆಡಳಿತದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಆದರೆ ಅಧಿಕಾರಿಗಳ ಪ್ರಕಾರ, ಲಕ್ಷ್ಮಿಯ ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಮತ್ತು ಆರೈಕೆಗೆ ಅನುಕೂಲವಾಗುವಂತೆ ಕೋಲಾರಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಹಂಪಿಯ ಜನರೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ‘ಲಕ್ಷ್ಮೀ’ಯ ಸ್ಥಳಾಂತರ ಇದೀಗ ರಾಜ್ಯಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಉಪೇಂದ್ರ ಫ್ಯಾಮಿಲಿ ಫೋಟೋ ವೈರಲ್: ನಿರಂಜನ್ ನಿಶ್ಚಿತಾರ್ಥದಲ್ಲಿ ಎಲ್ಲರ ಗಮನ ಸೆಳೆದ ಐಶ್ವರ್ಯಾ, ಆಯುಷ್!

ಯುವ ನಟ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ ಸಮಾರಂಭ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ರಿಯಲ್ ಸ್ಟಾರ್ ಉಪೇಂದ್ರ ಅವರ ಕುಟುಂಬ ಈ ಸಂಭ್ರಮದಲ್ಲಿ ಭಾಗಿಯಾಗಿದ್ದು, ಕುಟುಂಬದ ಅಪರೂಪದ ಫೋಟೋಗಳು ವೈರಲ್ ಆಗಿವೆ.

ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಪುತ್ರ ಆಯುಷ್ ಹಾಗೂ ಪುತ್ರಿ ಐಶ್ವರ್ಯಾ ಎಲ್ಲರೂ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ವಿಶೇಷವಾಗಿ ಆಯುಷ್ ಲುಕ್ ಮತ್ತು ಸ್ಟೈಲ್ ಅಭಿಮಾನಿಗಳ ಗಮನ ಸೆಳೆದಿದೆ.

ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಸಿನಿ ಗಣ್ಯರು ಪಾಲ್ಗೊಂಡು ಶುಭ ಹಾರೈಸಿದರು. ಈ ವೇಳೆ ಉಪೇಂದ್ರ ಕುಟುಂಬ ಒಟ್ಟಾಗಿ ಪೋಸ್ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಉಪೇಂದ್ರ ಪುತ್ರ ಆಯುಷ್ ಈಗಾಗಲೇ ಚಿತ್ರರಂಗದತ್ತ ಆಸಕ್ತಿ ತೋರಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಇನ್ನು ಐಶ್ವರ್ಯಾ ಬಾಲನಟಿಯಾಗಿ ಗುರುತಿಸಿಕೊಂಡಿದ್ದು, ಸದ್ಯ ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಒಟ್ಟಾರೆ, ಉಪ್ಪಿ ಕುಟುಂಬದ ಈ ಸಂಭ್ರಮದ ಕ್ಷಣ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮತ್ತು ಸಂತಸ ಮೂಡಿಸಿದೆ.

CMRL money laundering case: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ!

ತಿರುವನಂತಪುರಂ: ಸಿಎಂಆರ್‌ಎಲ್ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿದೆ. ಪ್ರಕರಣದ ತನಿಖೆಯ ಭಾಗವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಿರುವನಂತಪುರಂನಲ್ಲಿರುವ ಪಿಣರಾಯಿ ವಿಜಯನ್ ಅವರ ಬಾಡಿಗೆ ಮನೆ ಸೇರಿ ಒಟ್ಟು 10 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ

ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರೂಟೈಲ್ ಲಿಮಿಟೆಡ್ (ಸಿಎಂಆರ್‌ಎಲ್) ಸಂಸ್ಥೆಯು 2018ರಿಂದ 2019ರ ಅವಧಿಯಲ್ಲಿ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ. ವೀಣಾ ಒಡೆತನದ ಎಕ್ಸಲಾಜಿಕ್ ಸೊಲ್ಯೂಷನ್ಸ್ ಕಂಪನಿಗೆ ಸುಮಾರು 1.72 ಕೋಟಿ ರೂಪಾಯಿ ಪಾವತಿಸಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಈ ಹಣಕ್ಕೆ ತಕ್ಕ ಯಾವುದೇ ಸೇವೆಯನ್ನು ಕಂಪನಿ ನೀಡಿಲ್ಲ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ಕ್ರಮಗಳನ್ನು ರದ್ದುಪಡಿಸುವಂತೆ ಕೋರಿ ಸಿಎಂಆರ್‌ಎಲ್ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿತ್ತು. ನ್ಯಾಯಾಲಯದ ತೀರ್ಪಿನ ಬಳಿಕ ಇದೀಗ ಇ.ಡಿ ದಾಳಿ ನಡೆಸಿರುವುದು ಮಹತ್ವ ಪಡೆದಿದೆ.

ಟಿ. ವೀಣಾ ಅವರ ಎಕ್ಸಲಾಜಿಕ್ ಕಂಪನಿಗೆ ಮಾಸಿಕ ಪಾವತಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ವರ್ಗಾವಣೆ ನಡೆದಿರುವ ಆರೋಪಗಳು ಹೊರಬಿದ್ದ ನಂತರ, ಕೇಂದ್ರ ಸರ್ಕಾರ 2024ರಲ್ಲಿ ವಿಸ್ತೃತ ತನಿಖೆಗೆ ಆದೇಶಿಸಿತ್ತು. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವೂ ಕಂಪನಿಯ ವ್ಯವಹಾರಗಳ ಕುರಿತು ತನಿಖೆ ಆರಂಭಿಸಿತ್ತು.

ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಸಿಎಂಆರ್‌ಎಲ್ ಹಾಗೂ ಕೆಎಸ್‌ಐಡಿಸಿ ಸಂಸ್ಥೆಗಳಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿತ್ತು. ಆರೋಪಗಳಿಗೆ ಸಂಬಂಧಿಸಿದಂತೆ ಸಿಎಂಆರ್‌ಎಲ್ ಸ್ಪಷ್ಟ ಉತ್ತರ ನೀಡಿಲ್ಲ ಎನ್ನಲಾಗಿದ್ದು, ಕೆಎಸ್‌ಐಡಿಸಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ಹಿನ್ನೆಲೆಯಲ್ಲಿ ಎಕ್ಸಲಾಜಿಕ್, ಸಿಎಂಆರ್‌ಎಲ್ ಹಾಗೂ ಕೆಎಸ್‌ಐಡಿಸಿ ಸಂಸ್ಥೆಗಳ ಹಣಕಾಸು ವ್ಯವಹಾರಗಳ ಕುರಿತು ಸಮಗ್ರ ತನಿಖೆ ಮುಂದುವರಿಸಲಾಗಿದೆ.

ಇನ್ನೊಂದೆಡೆ, ಪುತ್ರಿಯ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಪಿಣರಾಯಿ ವಿಜಯನ್ ಸಂಪೂರ್ಣ ತಳ್ಳಿಹಾಕಿದ್ದಾರೆ. ತಮ್ಮ ರಾಜಕೀಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಅಧಿಕಾರಕ್ಕೆ ಬಂದಿದ್ದು, ಅದರೊಂದಿಗೆ ಪಿಣರಾಯಿ ವಿಜಯನ್ ಮುಖ್ಯಮಂತ್ರಿ ಸ್ಥಾನದಿಂದ ಹೊರಬಂದಿದ್ದರು. 2016ರಿಂದ 2026ರವರೆಗೆ ಎರಡು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅವರು ಪ್ರಸ್ತುತ ವಿಧಾನಸಭೆಯಲ್ಲಿ ವಿಪಕ್ಷ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಧರ್ಮಶಾಲಾದಲ್ಲಿ RCBಗೆ 92 ರನ್ ಭರ್ಜರಿ ಜಯ: ತಂಡದ ತಂತ್ರಗಾರಿಕೆ ಬಿಚ್ಚಿಟ್ಟ ರಜತ್

ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ 92 ರನ್ ಅಂತರದ ಗೆಲುವು ದಾಖಲಿಸಿದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟಿದರ್ ತಮ್ಮ ತಂತ್ರಗಾರಿಕೆಯ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಪಾಟಿದರ್ ಅವರು, ಪ್ರಶಸ್ತಿ ಸ್ವೀಕರಿಸಿದ ನಂತರ ಮಾಜಿ ಕ್ರಿಕೆಟಿಗ ಮುರಳಿ ಕಾರ್ತಿಕ್ ಅವರೊಂದಿಗೆ ಮಾತನಾಡಿ ತಂಡ ತೆಗೆದುಕೊಂಡ ಕೆಲ ತಂತ್ರಾತ್ಮಕ ನಿರ್ಧಾರಗಳನ್ನು ವಿವರಿಸಿದರು.

ವೇಗಿ ಜೇಕಬ್ ಡಫಿ ಅವರ ಬದಲಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೆಸ್ಟ್ ಇಂಡೀಸ್ ಆಲ್‌ರೌಂಡರ್ ರೊಮಾರಿಯೊ ಶೆಪಾರ್ಡ್ ಅವರನ್ನು ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪಾಟಿದರ್, ಮುಂಬರುವ ಫೈನಲ್ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಯೋಗ ಮಾಡಲಾಗಿದೆ ಎಂದು ತಿಳಿಸಿದರು.

ಫೈನಲ್ ಪಂದ್ಯದಲ್ಲಿ ಬೌಲಿಂಗ್ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಹಾಗೂ ಮಧ್ಯಮ ಓವರ್‌ಗಳಲ್ಲಿ ಶೆಪಾರ್ಡ್ ಅವರ ಬೌಲಿಂಗ್ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಅವಕಾಶ ನೀಡಲಾಗಿದೆ ಎಂದು ಅವರು ಹೇಳಿದರು.

ಶೆಪಾರ್ಡ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ದು, ಆ ಓವರ್‌ನಲ್ಲಿ 15 ರನ್ ನೀಡಿದರು. ಆದಾಗ್ಯೂ, ಮಹತ್ವದ ಪಂದ್ಯಕ್ಕೂ ಮುನ್ನ ತಂಡದ ಬೌಲಿಂಗ್ ಆಯ್ಕೆಗಳನ್ನು ಪರಿಶೀಲಿಸಲು ಇದು ಸಹಾಯಕವಾಯಿತು ಎಂದು ಪಾಟಿದರ್ ತಿಳಿಸಿದರು.

ಗುಜರಾತ್ ಇನ್ನಿಂಗ್ಸ್‌ನ 11ನೇ ಓವರ್ ನಂತರ ಡಫಿ ಅವರ ಸ್ಥಾನದಲ್ಲಿ ಶೆಪಾರ್ಡ್ ಮೈದಾನ ಪ್ರವೇಶಿಸಿದರು. ಡಫಿ ತಮ್ಮ 4 ಓವರ್ ಕೋಟಾವನ್ನು ಪೂರ್ಣಗೊಳಿಸಿ 39 ರನ್ ನೀಡಿ 3 ವಿಕೆಟ್ ಪಡೆದಿದ್ದರು.

ಐಪಿಎಲ್ ನಿಯಮಗಳ ಪ್ರಕಾರ, ಇಂಪ್ಯಾಕ್ಟ್ ಪ್ಲೇಯರ್ ವ್ಯವಸ್ಥೆಯಲ್ಲಿ ಟಾಸ್ ನಂತರ ಪ್ರತಿಯೊಂದು ತಂಡವು 5 ಬದಲಿ ಆಟಗಾರರ ಹೆಸರನ್ನು ನೀಡುತ್ತದೆ. ಅವುಗಳಲ್ಲಿ ಒಬ್ಬರನ್ನು ಮಾತ್ರ ಪಂದ್ಯದ ಮಧ್ಯದಲ್ಲಿ ಬಳಸಲು ಅವಕಾಶವಿದೆ. ಬದಲಾಯಿಸಲಾದ ಆಟಗಾರ ಮತ್ತೆ ಫೀಲ್ಡಿಂಗ್‌ಗೆ ಮರಳಲು ಸಾಧ್ಯವಿಲ್ಲ.

ಪ್ಲೇಯಿಂಗ್ XIನಲ್ಲಿ ವಿದೇಶಿ ಆಟಗಾರರ ಸಂಖ್ಯೆಯ ಆಧಾರದ ಮೇಲೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ನಿಯಮವೂ ಅನ್ವಯಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನಿಯಮದಂತೆ RCB ತಂಡವು ರೊಮಾರಿಯೊ ಶೆಪಾರ್ಡ್ ಅವರನ್ನು ಬಳಸಿತು.

ಜೋಶ್ ಹ್ಯಾಜಲ್ವುಡ್, ಟಿಮ್ ಡೇವಿಡ್ ಮತ್ತು ಜೇಕಬ್ ಡಫಿ ಅವರಿಗೆ ಪ್ಲೇಯಿಂಗ್ XIನಲ್ಲಿ ಅವಕಾಶ ನೀಡಿದ್ದರಿಂದ ಶೆಪಾರ್ಡ್ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಲಾಯಿತು.

‘ದೃಶ್ಯಂ 3’ಗೆ ಬಾಕ್ಸ್ ಆಫೀಸ್‌ ಉಡೀಸ್‌: 6 ದಿನಕ್ಕೆ 170 ಕೋಟಿ ದಾಟಿದ ಜಾರ್ಜ್‌ಕುಟ್ಟಿ ಮ್ಯಾಜಿಕ್!

ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ ಮುಂದುವರಿಸಿದೆ. ಬಿಡುಗಡೆಯಾದ ಆರನೇ ದಿನವೂ ಚಿತ್ರ ಭರ್ಜರಿ ಕಲೆಕ್ಷನ್ ದಾಖಲಿಸಿದ್ದು, ಜಾಗತಿಕ ಮಟ್ಟದಲ್ಲಿ 170 ಕೋಟಿ ರೂಪಾಯಿ ಕ್ಲಬ್‌ಗೆ ಎಂಟ್ರಿ ಕೊಟ್ಟಿದೆ.

ವಾರದ ದಿನಗಳಲ್ಲೂ ಪ್ರೇಕ್ಷಕರ ಸೆಳೆತ ಕಡಿಮೆಯಾಗದಿರುವುದು ಚಿತ್ರದ ದೊಡ್ಡ ಪ್ಲಸ್ ಆಗಿದೆ. ಮಂಗಳವಾರ (ಮೇ 26) ಒಂದೇ ದಿನ ಭಾರತದಲ್ಲಿ 4,668 ಪ್ರದರ್ಶನಗಳನ್ನು ಕಂಡ ‘ದೃಶ್ಯಂ 3’, 6.45 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ಇದರೊಂದಿಗೆ ಆರು ದಿನಗಳಲ್ಲಿ ಚಿತ್ರದ ಭಾರತದ ಒಟ್ಟು ನೆಟ್ ಕಲೆಕ್ಷನ್ 68.60 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಭಾರತದ ಗ್ರಾಸ್ ಕಲೆಕ್ಷನ್ 79.62 ಕೋಟಿ ರೂಪಾಯಿ ಆಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ಜಾರ್ಜ್‌ಕುಟ್ಟಿ ಕ್ರೇಜ್ ಭಾರೀ ಜೋರಾಗಿದೆ. ಆರನೇ ದಿನವೇ ಓವರ್‌ಸೀಸ್ ಮಾರುಕಟ್ಟೆಯಿಂದ 6 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು, ಒಟ್ಟು ವಿದೇಶಿ ಗ್ರಾಸ್ ಗಳಿಕೆ 90.70 ಕೋಟಿ ರೂಪಾಯಿಗೆ ತಲುಪಿದೆ.

ಭಾರತ ಮತ್ತು ವಿದೇಶಿ ಮಾರುಕಟ್ಟೆಯ ಕಲೆಕ್ಷನ್ ಒಟ್ಟುಗೂಡಿಸಿದರೆ, ‘ದೃಶ್ಯಂ 3’ ಚಿತ್ರದ ವಿಶ್ವವ್ಯಾಪಿ ಒಟ್ಟು ಗ್ರಾಸ್ ಕಲೆಕ್ಷನ್ 170.32 ಕೋಟಿ ರೂಪಾಯಿ ದಾಟಿದೆ. ಈ ವೇಗ ಮುಂದುವರಿದರೆ ಸಿನಿಮಾ ಶೀಘ್ರದಲ್ಲೇ 200 ಕೋಟಿ ಕ್ಲಬ್ ಸೇರುವುದು ಖಚಿತ ಎನ್ನಲಾಗುತ್ತಿದೆ.

ಜಾರ್ಜ್‌ಕುಟ್ಟಿ ಈ ಬಾರಿ ಪೊಲೀಸರ ಕೈಯಿಂದ ಹೇಗೆ ಪಾರಾಗುತ್ತಾನೆ ಎಂಬ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶವೇ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.

ರಾಮ್ ಚರಣ್ ‘ಪೆದ್ದಿ’ಗೆ ವಿದೇಶದಲ್ಲಿ ದೊಡ್ಡ ಟ್ವಿಸ್ಟ್: ಕೊನೆ ಕ್ಷಣದಲ್ಲಿ ಜಪಾನ್ ರಿಲೀಸ್ ಪೋಸ್ಟ್‌ಪೋನ್!

ಹೈದರಾಬಾದ್, ಮೇ 26: ಜೂನ್ 4 ರಂದು ಬಿಡುಗಡೆಯಾಗಲಿರುವ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಇದೀಗ ಹೊಸ ಬೆಳವಣಿಗೆಯಿಂದ ಸುದ್ದಿಯಲ್ಲಿದೆ. ಭಾರತದ ಜೊತೆ ಜಪಾನ್‌ನಲ್ಲೂ ಏಕಕಾಲಕ್ಕೆ ತೆರೆಗೆ ಬರಬೇಕಿದ್ದ ಸಿನಿಮಾ, ಕೊನೆ ಕ್ಷಣದಲ್ಲಿ ಜಪಾನ್ ಬಿಡುಗಡೆ ಮುಂದೂಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

‘ಆರ್‌ಆರ್‌ಆರ್‌’ ನಂತರ ಜಪಾನ್‌ನಲ್ಲಿ ರಾಮ್ ಚರಣ್‌ಗೆ ದೊಡ್ಡ ಮಟ್ಟದ ಫ್ಯಾನ್ ಬೇಸ್ ನಿರ್ಮಾಣವಾಗಿತ್ತು. ಇದೇ ಕಾರಣಕ್ಕೆ ‘ಪೆದ್ದಿ’ ಚಿತ್ರವನ್ನು ಜಪಾನ್ ಮಾರುಕಟ್ಟೆಯಲ್ಲೂ ಭರ್ಜರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು. ಆದರೆ ಕೆಲವು ತಾಂತ್ರಿಕ ಹಾಗೂ ವಿತರಣಾ ಸಮಸ್ಯೆಗಳ ಹಿನ್ನೆಲೆ ಸದ್ಯಕ್ಕೆ ಜಪಾನ್ ಬಿಡುಗಡೆ ಸ್ಥಗಿತಗೊಂಡಿದೆ ಎನ್ನಲಾಗಿದೆ.

ಈ ನಿರ್ಧಾರ ಜಪಾನ್ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದ್ದು, ಹೊಸ ಬಿಡುಗಡೆ ದಿನಾಂಕ ಯಾವಾಗ ಘೋಷಣೆಯಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಇತ್ತ ಭಾರತೀಯ ಸಿನಿಪ್ರೇಮಿಗಳು ಕೂಡ ಜಾಗತಿಕ ರಿಲೀಸ್ ಆಗಿದ್ದರೆ ಸಿನಿಮಾ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

‘ಪೆದ್ದಿ’ ಚಿತ್ರದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಶಿವರಾಜ್‌ಕುಮಾರ್ ಪಾತ್ರ. ರಾಮ್ ಚರಣ್ ಮತ್ತು ಶಿವಣ್ಣ ಕಾಂಬಿನೇಷನ್ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದ್ದು, ಕನ್ನಡ-ತೆಲುಗು ಪ್ರೇಕ್ಷಕರಲ್ಲಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ.

ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಆಕ್ಷನ್ ಡ್ರಾಮಾಗೆ ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಜಗಪತಿ ಬಾಬು, ದಿವ್ಯೇಂದು ಶರ್ಮ ಹಾಗೂ ಬೊಮನ್ ಇರಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೈಜುಸ್ ಸಂಸ್ಥಾಪಕ ಬೈಜು ರವೀಂದ್ರನ್ ಗೆ ಸಿಂಗಾಪುರ ಕೋರ್ಟ್ ನಿಂದ 6 ತಿಂಗಳ ಜೈಲು ಶಿಕ್ಷೆ!

ಸಿಂಗಾಪುರದಲ್ಲಿ ಬೈಜೂಸ್ (BYJU’S) ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಸಿಂಗಾಪುರ ನ್ಯಾಯಾಲಯವು 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ ಕತಾರ್ ಹೋಲ್ಡಿಂಗ್‌ಗೆ ಸಂಬಂಧಿಸಿದ ಒಪ್ಪಂದ ಉಲ್ಲಂಘನೆ ಹಾಗೂ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಈ ತೀರ್ಪು ಪ್ರಕಟವಾಗಿದೆ.

ಆಸ್ತಿ ವಿವರಗಳನ್ನು ಬಹಿರಂಗಪಡಿಸುವ ಕುರಿತು 2024ರ ಏಪ್ರಿಲ್‌ನಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಅವರು ಪಾಲಿಸದೆ ಉಲ್ಲಂಘಿಸಿದ ಕಾರಣ ಈ ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ನ್ಯಾಯಾಲಯವು ಬೈಜು ರವೀಂದ್ರನ್ ಅವರು ಯಾವುದೇ ವಿಳಂಬ ಅಥವಾ ನೆಪವಿಲ್ಲದೆ ತಕ್ಷಣವೇ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗಬೇಕು ಎಂದು ಖಡಕ್ ಆದೇಶ ನೀಡಿದೆ. ಜೊತೆಗೆ ಕಾನೂನು ವೆಚ್ಚವಾಗಿ ಸುಮಾರು 90,000 ಸಿಂಗಾಪುರ ಡಾಲರ್ (ಅಂದಾಜು ₹67.47 ಲಕ್ಷ) ಪಾವತಿಸುವಂತೆ ಸೂಚಿಸಿದೆ.

ಹೂಡಿಕೆದಾರರ ಹಣದ ದುರುಪಯೋಗ ಮತ್ತು ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಿದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವೈಯಕ್ತಿಕ ಹಾಗೂ ಕಂಪನಿಯ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ನೀಡಿದ್ದ ಹಲವು ಆದೇಶಗಳನ್ನು ಅವರು ನಿರಂತರವಾಗಿ ನಿರ್ಲಕ್ಷಿಸಿದ್ದಾರೆ ಎಂದು ಕೂಡ ನ್ಯಾಯಾಲಯ ಗಮನಿಸಿದೆ.

ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಮಾಹಿತಿಯನ್ನು ಮುಚ್ಚಿಡಲು ಉದ್ದೇಶಪೂರ್ವಕವಾಗಿ ಪ್ರಯತ್ನಿಸಲಾಗಿದೆ ಎಂದು ನ್ಯಾಯಾಲಯ ಗಂಭೀರವಾಗಿ ಟೀಕಿಸಿದೆ.

ಈ ನಡುವೆ, ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ತಮ್ಮ ನಷ್ಟವನ್ನು ವಸೂಲಿಸಲು ವಿವಿಧ ದೇಶಗಳಲ್ಲಿ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಈ ಹಿಂದೆಯೂ ಅಮೆರಿಕದ ನ್ಯಾಯಾಲಯವು ಆದೇಶ ಉಲ್ಲಂಘನೆಯ ಹಿನ್ನೆಲೆಯಲ್ಲಿ ಬೈಜು ರವೀಂದ್ರನ್ ಅವರಿಗೆ ಭಾರಿ ದಂಡ ವಿಧಿಸಿದ್ದುದನ್ನು ಗಮನಿಸಬಹುದು.

ಭಾರತದ ಜಾರಿ ನಿರ್ದೇಶನಾಲಯವು ಕೂಡ ಬೈಜೂಸ್ ಸಂಸ್ಥೆಯ ವಿದೇಶಿ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿದ್ದು, ಸುಮಾರು ₹9,000 ಕೋಟಿಗೂ ಹೆಚ್ಚು ಮೊತ್ತದ FEMA ನಿಯಮ ಉಲ್ಲಂಘನೆ ಆರೋಪಗಳಿವೆ ಎಂದು ವರದಿಯಾಗಿದೆ. ಕಂಪನಿಯ ಆದಾಯವನ್ನು ಹೆಚ್ಚಾಗಿ ತೋರಿಸಿ ಹೂಡಿಕೆದಾರರನ್ನು ಆಕರ್ಷಿಸಲು ಸುಳ್ಳು ಲೆಕ್ಕಪತ್ರಗಳನ್ನು ಸೃಷ್ಟಿಸಿದ ಆರೋಪವೂ ತನಿಖೆಯಲ್ಲಿದೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ!

ದೇವನಹಳ್ಳಿ: ಬೆಂಗಳೂರು ಹೊರವಲಯದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.

ಟರ್ಮಿನಲ್–1ರಲ್ಲಿ ನಿಂತಿದ್ದ ವಿಮಾನವು ಬೆಂಗಳೂರಿನಿಂದ ಚೆನ್ನೈಗೆ ತೆರಳಬೇಕಾಗಿತ್ತು.

ವಿಮಾನ ಟೇಕ್‌ಆಫ್‌ಗೆ ಸಜ್ಜಾಗಿದ್ದ ವೇಳೆ ಏಕಾಏಕಿ ಹೊಗೆ ಕಾಣಿಸಿಕೊಂಡ ಹಿನ್ನೆಲೆ ಪೈಲೆಟ್ ಎಚ್ಚೆತ್ತುಕೊಂಡು ರನ್‌ವೇಯಲ್ಲೇ ವಿಮಾನವನ್ನು ನಿಲ್ಲಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.

ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬಳಿಕ ಹಿರಿಯ ತಾಂತ್ರಿಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಿಮಾನದ ತಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಿದ್ದಾರೆ.

ಬಿರುಗಾಳಿ–ಆಲಿಕಲ್ಲು ಮಳೆ ಆರ್ಭಟ: ಮನೆ ಮೇಲ್ಛಾವಣಿ ಬಿದ್ದು 6 ವರ್ಷದ ಬಾಲಕಿ ದುರ್ಮರಣ!

ಬೀದರ್: ಜಿಲ್ಲೆ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಸಮೀಪದ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಭೀಕರ ಆರ್ಭಟಕ್ಕೆ ದಾರುಣ ಘಟನೆ ಸಂಭವಿಸಿದೆ.

ಭಾರೀ ಗಾಳಿ ಮತ್ತು ಮಳೆಯ ತೀವ್ರತೆಗೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ.

ಮೇಲ್ಛಾವಣಿಯ ಮೇಲಿದ್ದ ಭಾರವಾದ ಕಲ್ಲುಗಳು ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಕುಟುಂಬದ ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾನಿಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಅಬ್ಬರದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

error: Content is protected !!