ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ದೋಷಾರೋಪ ಪಟ್ಟಿ ಸಲ್ಲಿಸಿದೆ.
ಈಗಾಗಲೇ ಜಾರಿ ನಿರ್ದೇಶನಾಲಯ (ED) ಚಾರ್ಜ್ಶೀಟ್ ಸಲ್ಲಿಸಿದ್ದು, ಇದೀಗ ಎಸ್ಐಟಿ ಕೂಡ ತನಿಖೆಯ ಪ್ರಮುಖ ಅಂಶಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದೆ.
ಹಿಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ ಕನ್ನಾಳೆ ಸೇರಿದಂತೆ ಆರೋಪಿಗಳ ಅಕ್ರಮ ವ್ಯವಹಾರಗಳ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಅಭ್ಯರ್ಥಿಗಳಿಂದ ₹40 ಲಕ್ಷದಿಂದ ₹80 ಲಕ್ಷದವರೆಗೆ ಹಣ ವಸೂಲಿ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಒಟ್ಟು 15 ಅಭ್ಯರ್ಥಿಗಳೊಂದಿಗೆ ಡೀಲ್ ನಡೆಸಿರುವುದು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಅಭ್ಯರ್ಥಿಗಳಿಗೆ ಮುಂಚಿತವಾಗಿ ತರಬೇತಿ ನೀಡಿರುವ ಬಗ್ಗೆಯೂ ವಿವರಿಸಲಾಗಿದೆ.
ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದ್ದ ಅಂಶಗಳೇನು?
ಅಭ್ಯರ್ಥಿಗಳ ಸಂದರ್ಶನವನ್ನು ಸಿಸಿ ಕ್ಯಾಮರಾ ಇಲ್ಲದ ಸ್ಥಳಗಳಲ್ಲಿ ನಡೆಸಲಾಗುತ್ತಿತ್ತು. ಪಶುವೈದ್ಯಾಧಿಕಾರಿ, ಜೂನಿಯರ್ ಎಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಈ ರೀತಿಯ ಸಂದರ್ಶನ ನಡೆದಿರುವುದಾಗಿ ಇಡಿ ಆರೋಪಿಸಿದೆ. ಅಕ್ರಮ ಎಸಗುವ ಉದ್ದೇಶದಿಂದಲೇ ಸಿಸಿಟಿವಿ ಇಲ್ಲದ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಎಂದು ತಿಳಿಸಿದೆ.
ಜ್ಞಾನೇಂದ್ರ ಕುಮಾರ್ ಅವರ ಕುಟುಂಬಸ್ಥರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿರುವುದನ್ನೂ ಇಡಿ ಪತ್ತೆಹಚ್ಚಿದೆ. ಅವರ ಅತ್ತಿಗೆಯ ಖಾತೆಗೆ ₹15.39 ಲಕ್ಷ ಹಾಗೂ ತಮ್ಮನ ಖಾತೆಗೆ ₹10.94 ಲಕ್ಷ ಜಮೆಯಾಗಿರುವುದನ್ನು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಶ್ನೆಪತ್ರಿಕೆ ಸೋರಿಕೆಗಾಗಿ 10 ಅಭ್ಯರ್ಥಿಗಳಿಂದ ₹3.20 ಕೋಟಿ ಬೇಡಿಕೆ ಇಡಲಾಗಿತ್ತು. ಈ ಪೈಕಿ ₹1.52 ಕೋಟಿ ವಸೂಲಿ ಮಾಡಿರುವ ದಾಖಲೆಗಳು ಪತ್ತೆಯಾಗಿವೆ. ಬ್ಯಾಂಕ್ ಖಾತೆಗಳ ಮೂಲಕ ₹92 ಲಕ್ಷ ಹಾಗೂ ನಗದು ರೂಪದಲ್ಲಿ ₹60 ಲಕ್ಷ ಸ್ವೀಕರಿಸಲಾಗಿತ್ತು ಎಂದು ಇಡಿ ತಿಳಿಸಿದೆ.
ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಬೆಂಗಳೂರಿನ ಹೊರವಲಯದ ವಿಲ್ಲಾಗಳಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆಗಳ ಪ್ರಿಂಟ್ಔಟ್ ನೀಡಲಾಗಿತ್ತು ಎಂಬ ಆರೋಪವೂ ಇದೆ. ಆರು ಅಭ್ಯರ್ಥಿಗಳಿಗೆ ಕೀ ಉತ್ತರಗಳನ್ನು ನೀಡುವುದು ಹಾಗೂ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸುವ ಸಂಬಂಧವೂ ಡೀಲ್ ನಡೆದಿತ್ತು ಎಂದು ಚಾರ್ಜ್ಶೀಟ್ನಲ್ಲಿ ವಿವರಿಸಲಾಗಿದೆ.
ಇನ್ನು ಶಿವಶಂಕರಪ್ಪ ಸಾಹುಕಾರ್ ₹4.17 ಕೋಟಿ, ಜ್ಞಾನೇಂದ್ರ ಕುಮಾರ್ ₹1.52 ಕೋಟಿ, ಬಸವರಾಜ ಕನ್ನಾಳೆ ₹1.52 ಕೋಟಿ ಹಾಗೂ ಗೀತಾ ₹1.18 ಕೋಟಿ ಅಕ್ರಮ ಹಣ ಸಂಪಾದಿಸಿರುವುದು ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ. ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದ್ದು, ₹1.22 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.







