ನವದೆಹಲಿ: ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಭಾರತ ಎ ತಂಡದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಯುಎಇ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್,
ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಶತಕ ದಾಖಲಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಕೇವಲ 40 ಎಸೆತಗಳಲ್ಲಿ 150 ರನ್ ಗಳಿಸಿ ಮತ್ತೊಂದು ದಾಖಲೆಯನ್ನೂ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಇಂದು ಭಾರತ ಎ ತಂಡ ಯುಎಇ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನಾಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಎಇ ತಂಡ 250 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
ಈ ಗುರಿಯನ್ನು ಬೆನ್ನಟ್ಟಿದ ಭಾರತ ಎ ತಂಡದ ಪರ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ವೈಭವ್, ನಂತರವೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿ 28 ಎಸೆತಗಳಲ್ಲಿ ಶತಕ ಬಾರಿಸಿದರು.
ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗದ ಶತಕದ ದಾಖಲೆ
28 ಎಸೆತಗಳಲ್ಲಿ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ, ಆಸ್ಟ್ರೇಲಿಯಾದ ಜೇಕ್ ಫ್ರೇಸರ್ ಮ್ಯಾಕ್ಗುರ್ಕ್ ಅವರ ದಾಖಲೆಯನ್ನು ಮುರಿದು ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗದ ಶತಕ ದಾಖಲಿಸಿದ ಆಟಗಾರರ ಪಟ್ಟಿ ಹೀಗಿದೆ:
- ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ
- ಜೇಕ್ ಫ್ರೇಸರ್ ಮ್ಯಾಕ್ಗುರ್ಕ್: ಟ್ಯಾಸ್ಮೇನಿಯಾ ವಿರುದ್ಧ 29 ಎಸೆತಗಳಲ್ಲಿ ಶತಕ
- ಎಬಿ ಡಿವಿಲಿಯರ್ಸ್: ವೆಸ್ಟ್ ಇಂಡೀಸ್ ವಿರುದ್ಧ 31 ಎಸೆತಗಳಲ್ಲಿ ಶತಕ
- ಸಾಕಿಬ್ ಗನಿ: ಅರುಣಾಚಲ ಪ್ರದೇಶ ವಿರುದ್ಧ 32 ಎಸೆತಗಳಲ್ಲಿ ಶತಕ
- ಇಶಾನ್ ಕಿಶನ್: ಕರ್ನಾಟಕ ವಿರುದ್ಧ 33 ಎಸೆತಗಳಲ್ಲಿ ಶತಕ
ಸಿಕ್ಸರ್ಗಳ ಸುರಿಮಳೆಗೈದು ದಾಖಲೆ ಬರೆದ ವೈಭವ್
ವೈಭವ್ ಸೂರ್ಯವಂಶಿ ತಮ್ಮ ಇನ್ನಿಂಗ್ಸ್ನ ಮೊದಲ ಎರಡು ಎಸೆತಗಳಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ ನಂತರ ಆರಂಭವಾದ ಅವರ ಸ್ಫೋಟಕ ಆಟಕ್ಕೆ ಯುಎಇ ಬೌಲರ್ಗಳು ತತ್ತರಿಸಿದರು. ಜಾಹಿದ್ ಅಲಿ ಎಸೆದ ಓವರ್ನಲ್ಲಿ ಸತತ ಮೂರು ಎಸೆತಗಳನ್ನು ಸಿಕ್ಸರ್ಗೆ ಅಟ್ಟಿದ ವೈಭವ್, ಮುಂದಿನ ಓವರ್ನಲ್ಲೂ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ ಸಿಡಿಸಿದರು. ಮೂರನೇ ಓವರ್ನಲ್ಲಿ ಮತ್ತೆರಡು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಸಿಮರ್ಜೀತ್ ಸಿಂಗ್ ಬೌಲಿಂಗ್ನಲ್ಲೂ ವೈಭವ್ ಸತತ ಮೂರು ಸಿಕ್ಸರ್ಗಳನ್ನು ಸಿಡಿಸಿ ಎದುರಾಳಿ ತಂಡಕ್ಕೆ ನಡುಕ ಹುಟ್ಟಿಸಿದರು. ಐದನೇ ಓವರ್ ಮುಗಿಯುವ ವೇಳೆಗೆ ಭಾರತ ಎ ತಂಡದ ಮೊತ್ತ 100 ರನ್ಗಳ ಗಡಿ ದಾಟಿತ್ತು. ಬಳಿಕ ಮುಂದಿನ ಆರು ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಎರಡು ಬೌಂಡರಿ ಬಾರಿಸಿದ ವೈಭವ್ ಶತಕದ ಗಡಿ ತಲುಪಿದರು. ತಮ್ಮ ಶತಕದ ಇನ್ನಿಂಗ್ಸ್ನಲ್ಲಿ ಒಟ್ಟು 15 ಸಿಕ್ಸರ್ಗಳನ್ನು ಸಿಡಿಸಿದರು.
40 ಎಸೆತಗಳಲ್ಲಿ 150 ರನ್, ಮತ್ತೊಂದು ವಿಶ್ವದಾಖಲೆ
ಶತಕ ಬಾರಿಸಿದ ಬಳಿಕವೂ ವೈಭವ್ ಸೂರ್ಯವಂಶಿ ತಮ್ಮ ಸ್ಫೋಟಕ ಆಟಕ್ಕೆ ವಿರಾಮ ನೀಡಲಿಲ್ಲ. ಶತಕದ ನಂತರ ಕೇವಲ 12 ಎಸೆತಗಳಲ್ಲಿ ಆರು ಸಿಕ್ಸರ್ಗಳನ್ನು ಬಾರಿಸಿ 150 ರನ್ಗಳ ಗಡಿ ತಲುಪಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ವೇಗವಾಗಿ 150 ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ನಿರ್ಮಿಸಿದರು.
ಕೇವಲ 40 ಎಸೆತಗಳಲ್ಲಿ 150 ರನ್ ಪೂರೈಸಿದ ವೈಭವ್, ಈ ಸಾಧನೆಗೆ 20 ಸಿಕ್ಸರ್ಗಳ ನೆರವು ಪಡೆದರು. ಇದಕ್ಕೂ ಮೊದಲು 2025ರಲ್ಲಿ ಅರುಣಾಚಲ ಪ್ರದೇಶ ವಿರುದ್ಧ 59 ಎಸೆತಗಳಲ್ಲಿ 150 ರನ್ ಗಳಿಸಿದ್ದು ವೈಭವ್ ಅವರದೇ ದಾಖಲೆಯಾಗಿತ್ತು. ಇದೀಗ ತಮ್ಮ ಹಿಂದಿನ ದಾಖಲೆಯನ್ನು ತಾವೇ ಮುರಿದು ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.







