ಉಡುಪಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಿ ಊರಿಗೆ ಮರಳುತ್ತಿದ್ದ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕುಂದಾಪುರ ಸಮೀಪದ ಆನೆಗುಡ್ಡೆ ಗೋಪುರದ ಬಳಿ ನಡೆದಿದೆ.
ಎರಡು ಬುಲೆಟ್ ಟ್ಯಾಂಕರ್ಗಳ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ತ್ರಾಸಿಯಿಂದ ಸುಮಾರು 30 ಮಂದಿ ಪ್ರಯಾಣಿಕರನ್ನು ಹೊತ್ತುಕೊಂಡು ಈ ಪ್ರವಾಸಿ ಬಸ್ ಉಡುಪಿಯಲ್ಲಿ ನಡೆದ ಕಾಂಗ್ರೆಸ್ ಗ್ಯಾರಂಟಿ ಸಮಾವೇಶಕ್ಕೆ ಆಗಮಿಸಿತ್ತು. ಸಮಾವೇಶ ಮುಗಿದ ಬಳಿಕ ವಾಪಸ್ ತೆರಳುವ ಮಾರ್ಗದಲ್ಲಿ ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಪ್ರಯಾಣಿಕರು ಊಟ ಮುಗಿಸಿ ತ್ರಾಸಿಯತ್ತ ಪ್ರಯಾಣ ಮುಂದುವರಿಸಿದ್ದರು.
ಈ ವೇಳೆ ದೇವಸ್ಥಾನದ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಬಂದು ಕುಂದಾಪುರದ ಕಡೆಗೆ ಬಸ್ಸನ್ನು ತಿರುಗಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಇದೇ ಸಂದರ್ಭದಲ್ಲಿ ಮಂಗಳೂರಿನಿಂದ ಕುಂದಾಪುರದತ್ತ ವೇಗವಾಗಿ ಬರುತ್ತಿದ್ದ ಎರಡು ಬುಲೆಟ್ ಟ್ಯಾಂಕರ್ಗಳ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದೆ. ಆದರೆ ನಿಯಂತ್ರಣ ತಪ್ಪಿದ ಟ್ಯಾಂಕರ್ ಬಸ್ಸಿನ ಬಲಭಾಗಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ನಿಂತಿದೆ. ಪರಿಣಾಮ ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ತೀವ್ರತೆಯ ನಡುವೆಯೂ ಬಸ್ಸಿನಲ್ಲಿದ್ದ ಎಲ್ಲಾ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕುಂದಾಪುರ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಹೆದ್ದಾರಿಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.









