ದಾವಣಗೆರೆ: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕರ್ತವ್ಯ ನಿರ್ವಹಿಸಿ ಮನೆಗೆ ಮರಳಿದ್ದ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿರಡೋಣಿ ಗ್ರಾಮದಲ್ಲಿ ನಡೆದಿದೆ.
ಚಿರಡೋಣಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಹಾಗೂ ಬಿಎಲ್‌ಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಿ.ಆರ್. ರಾಜಪ್ಪ (57) ಮೃತಪಟ್ಟವರು.
ಜುಲೈ 10ರಂದು ಎಸ್‌ಐಆರ್ ಕಾರ್ಯದ ಅಂಗವಾಗಿ ರಾಜಪ್ಪ ಅವರು ದಿನಪೂರ್ತಿ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಿ ರಾತ್ರಿ ಮನೆಗೆ ಮರಳಿದ್ದರು. ಬಳಿಕ ರಾತ್ರಿ ಸುಮಾರು 11 ಗಂಟೆ ವೇಳೆಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.
ಕುಟುಂಬದವರು ಚಿಕಿತ್ಸೆಗಾಗಿ ಪ್ರಯತ್ನಿಸಿದರೂ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.



