29.2 C
Gadag
Monday, September 26, 2022
Home Blog

`ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುವುದು ಡರ್ಟಿ ಪಾಲಿಟಿಕ್ಸಾ?’

ವಿಜಯಸಾಕ್ಷಿ ಸುದ್ದಿ, ಮೈಸೂರು

ಪ್ರಧಾನಿ ನರೇಂದ್ರ ಮೋದಿ ಹೋದ ಕಡೆಯಲ್ಲೆಲ್ಲಾ ಬಿಜೆಪಿ ಸೋತಿದೆ. ಪಂಜಾಬ್, ತೆಲಂಗಾಣ, ಕೇರಳ ರಾಜ್ಯಗಳಲ್ಲಿ ಬಿಜೆಪಿ ಸೋತಿಲ್ವೇನ್ರೀ? ಅವರು ಕೂಡ ಸೋಲ್ತಾರೆ. ಇದು ಕೇವಲ ರಾಜಕಾರಣಕ್ಕಾಗಿ ಹೇಳಿಕೆ ಕೊಡುತ್ತಿರುವದು. ಮುಖ್ಯಮಂತ್ರಿಗಳ `ರಾಜಕಾರಣದಲ್ಲಿ ನಾನು ಕರ್ಣನಿದ್ದಂತೆ’ ಎಂಬ ಮಾತುಗಳು ಅವರ ಭಂಡತನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಟುವಾಗಿ ಪ್ರತ್ಯುತ್ತರ ನೀಡಿದರು.

ಅವರು ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಡರ್ಟಿ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡುತ್ತ, ರಾಜ್ಯಕ್ಕೆ ರಾಹುಲ್ ಗಾಂಧಿ ಬಂದರೆ ಬಿಜೆಪಿಗೇ ಲಾಭವಿದೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ಕೇವಲ ಭಂಡರು ಮಾತ್ರ ಆ ರೀತಿ ಮಾತನಾಡುವುದು. ಟೀಕೆಗಳಿಗೂ, ನಮಗೂ ಸಂಬಂಧವಿಲ್ಲ ಎನ್ನುವ ಭಾವನೆಯಿರುವವರು ಹಾಗೆ ಮಾತನಾಡುತ್ತಾರೆ. ನಾವು ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಬಿಜೆಪಿ ಸರ್ಕಾರದವರು ರಾಜಕಾರಣ ಮಾಡುವ ಉದ್ದೇಶದಿಂದಲೇ ಮಾತನಾಡುತ್ತಾರೆ. ಡರ್ಟಿ ಪಾಲಿಟಿಕ್ಸ್ ಮಾಡುವುದು ಸಂಘ ಪರಿವಾರದವರು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನವರು ಹೋರಾಟ ಮಾಡಿ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ. ಮಹಾತ್ಮ ಗಾಂಧೀಜಿಯನ್ನು ಕೊಂದವರನ್ನು ಇವರು ಆರಾಧಿಸುತ್ತಾರೆ. ಗಣೇಶನ ಮೆರವಣಿಗೆಯಲ್ಲಿ ನಾಥೂರಾಂ ಗೋಡ್ಸೆಯ ಫೋಟೊ ಇಟ್ಟುಕೊಂಡು ಓಡಾಡುತ್ತಾರೆ. ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ? ಈಗ ಇವರಿಗೆ ಡರ್ಟಿ ಪಾಲಿಟಿಕ್ಸ್ ಅಂದರೆ ಏನೆಂದೇ ಗೊತ್ತಿಲ್ಲದವರಂತೆ ಮಾತನಾಡುತ್ತಾರೆ. ನಿಮ್ಮ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ ಎಂದು ಹೇಳುವುದು ಡರ್ಟಿ ಪಾಲಿಟಿಕ್ಸಾ? ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆಯಲ್ಲಿ ಬಿದ್ದು ಹೊರಳಾಡಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು

0

ರಸ್ತೆ ದುರಸ್ತಿ ಮಾಡಿಸಲು ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯಿಂದ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದಲ್ಲಿ ಹಾದು ಹೋಗಿರುವ ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ಸೇರಿ ಪಟ್ಟಣ ಮತ್ತು ತಾಲೂಕಿನ ಬಹುತೇಕ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಜನತೆ ಪಡಬಾರದ ಯಾತನೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ರಸ್ತೆಗಳನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ಜಯ ಕರ್ನಾಟಕ ತಾಲೂಕು ಘಟಕದಿಂದ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಹೊಸ ಬಸ್ ನಿಲ್ದಾಣದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ನಡೆಸಿದ ಪ್ರತಿಭಟನಾಕಾರರು ಪಿಡಬ್ಲೂಡಿ ಮತ್ತು ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಶಾಸಕ ರಾಮಣ್ಣ ಲಮಾಣಿ ಅವರ ವಿರುದ್ಧ ಘೋಷಣೆ ಕೂಗಿದರು.

ಪೊಲೀಸರು ಮತ್ತು ಪಿಡಬ್ಲ್ಯೂ ಡಿ ಇಲಾಖೆ ಅಧಿಕಾರಿಗಳು ಪ್ರತಿಭಟನೆ ಕೈಬಿಡುವಂತೆ ಕೇಳಿದರೂ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದು ಹೊರಳಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕಾ ಅಧ್ಯಕ್ಷ ಇಸ್ಮಾಯಿಲ್ ಆಡೂರ, ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯಲ್ಲಿ ಮೊಣಕಾಲುದ್ದ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಮಳೆಗಾಲದಲ್ಲಿ ಹತ್ತಾರು ಸಮಸ್ಯೆಗಳಾದರೆ ಉಳಿದಂತೆ ರಸ್ತೆಗಳು ಧೂಳುಮಯವಾಗಿರುತ್ತವೆ.

ಪಟ್ಟಣದ ಮುಖ್ಯ ಬಜಾರ್ ರಸ್ತೆ ಹದಗೆಟ್ಟು ವರ್ಷಗಳೇ ಕಳೆದಿವೆ. ತಾಲೂಕಿನ ಗದಗ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿ, ಲಕ್ಷ್ಮೇಶ್ವರದಿಂದ ದೇವಿಹಾಳ, ಬಾಲೆಹೊಸೂರ, ಸೂರಣಗಿ, ದೊಡ್ಡೂರ, ಯತ್ತಿನಹಳ್ಳಿ ಸೇರಿ ಬಹುತೇಕ ಗ್ರಾಮೀಣ ರಸ್ತೆಗಳ ಸ್ಥಿತಿ ಅಯೋಮಯವಾಗಿದೆ. ಸರ್ಕಾರಿ ಬಸ್‌ಗಳು ಬಂದ್ ಆಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವ್ಯವಸ್ಥೆಗೆ ಧಕ್ಕೆಯಾಗಿದೆ. ಇಡೀ ತಾಲೂಕಿನ ಜನರು ರಸ್ತೆಗಳ ಅವ್ಯವಸ್ಥೆಯ ಬಗ್ಗೆ ರೋಸಿಹೋಗಿದ್ದಾರೆ.

ಈ ನಡುವೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಯರ‍್ರಾಬರ‍್ರಿ ಸಂಚರಿಸುವ ಎಂಸ್ಯಾಂಡ್, ಖಡಿ ಸಾಗಿಸುವ ಟಿಪ್ಪರ್-ಲಾರಿಗಳ ಅಬ್ಬರಕ್ಕೆ ಜನರು ನಲುಗಿ ಹೋಗಿದ್ದಾರೆ. ಲೋಕೋಪಯೋಗಿ ಇಲಾಖೆಯ ಸಚಿವರು ಜಿಲ್ಲೆಯವರಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಸಕರು ನಮ್ಮ ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸದನದಲ್ಲಿ ಗಟ್ಟಿಧ್ವನಿಯಿಂದ ಕೇಳುವ ಮನಸ್ಥಿತಿಯವರಂತೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಬಿ.ಎಸ್ ಹಳ್ಳದ ಮನವಿ ಸ್ವೀಕರಿಸಿದರು.

ಸಂಘಟನಾ ಕಾರ್ಯದರ್ಶಿ ಇಶಾಕಬಾಶಾ ಹರಪನಹಳ್ಳಿ, ರಮೇಶ ಲಮಾಣಿ, ರಮೇಶ ಹಂಗನಕಟ್ಟಿ, ಗೋಪಿ ನಾಯಕ, ಗೌಸ್‌ಮೋದಿನ ಸವಣೂರ, ಹಾಲಪ್ಪ ಭಂಡಾರಿ, ಯಲ್ಲಪ್ಪ ಹಂಜಗಿ, ಅಭಿಷೇಕ್ ಸಾತಪುತೆ, ಸುಲೇಮಾನ ಆಡೂರ, ಅಬ್ದುಲ್ ಖಾದರ್ ಕೊಪ್ಪಳ, ಸೋಹಿಲ್ ಬಂಕಾಪುರ, ಲುಕ್ಮನ ಬೆಟಗೇರಿ, ನಾಸೀರ ಸಿದ್ದಿ, ಗೋಪಿ ನಾಯಕ, ಖಾದರಭಾಷಾ ರಿತ್ತಿ, ಬಸು ಲಮಾಣಿ, ಮಾನಪ್ಪ ನಾಯಕ, ಬಸವರಾಜ ಮೇಲ್ಮುರಿ ಸೇರಿದಂತೆ ಇತರರು ಇದ್ದರು.

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ; ಲಕ್ಷಾಂತರ ರೂ. ಹಾನಿ

0

ವಿಜಯಸಾಕ್ಷಿ ಸುದ್ದಿ, ಗದಗ

ತೋಟದಲ್ಲಿ ನಿರ್ಮಿಸಿದ್ದ ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ ತಗುಲಿದ ಬೆಂಕಿಯ ಪರಿಣಾಮವಾಗಿ ಕೃಷಿ ಉಪಕರಣಗಳು ಭಸ್ಮವಾದ ಘಟನೆ ಜಿಲ್ಲೆಯ ರೋಣ ತಾಲೂಕಿನಲ್ಲಿ ಜರುಗಿದೆ.

ಈ ದನದ ಕೊಟ್ಟಿಗೆ ರೋಣ ತಾಲೂಕಿನ ಸೋಮನಕಟ್ಟಿ ಗ್ರಾಮದ ರೈತ ಹಸನಸಾಬ್ ಬೆನಹಾಳ ಎಂಬುವರಿಗೆ ಸೇರಿದೆ.

ದನದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಟಗರಿಗೂ ಗಾಯವಾಗಿದ್ದು, ಮೇವು, ಹೊಟ್ಟು ಹಾಗೂ ಕೃಷಿ ಸಲಕರಣೆಗಳು ಸುಟ್ಟು ಭಸ್ಮವಾಗಿವೆ. ಇದರಿಂದಾಗಿ ರೈತ ಹಸನಸಾಬ್‌ನಿಗೆ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ತಿಳಿದು ಬಂದಿದೆ.

ಸಕಾಲದಲ್ಲಿ ಆಗಿಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪೌರ ಕಾರ್ಮಿಕರ ಸೇವೆ ಅನನ್ಯ; ವಿಜಯಲಕ್ಷ್ಮಿ ಚಲವಾದಿ

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಜನರ  ಆರೋಗ್ಯ ಚೆನ್ನಾಗಿರಬೇಕು, ನಗರ ಸ್ವಚ್ಛವಾಗಿರಬೇಕು ಎಂದು ಪರಿಶ್ರಮ ಪಡುವ ಪೌರ ಕಾರ್ಮಿಕರ ಸೇವೆ ಹಾಗೂ ಸಮಾಜದ ಸೌಖ್ಯ ಕಾಪಾಡುವ ಸಲುವಾಗಿ ಅವರು ನಿರ್ವಹಿಸುತ್ತಿರುವ ಕಾರ್ಯ ನಿಜಕ್ಕೂ ಶ್ರೇಷ್ಠ ಮತ್ತು ಶ್ಲಾಘನೀಯ ಎಂದು ಪ.ಪಂ ಅಧ್ಯಕ್ಷೆ  ವಿಜಯಲಕ್ಷ್ಮಿ ಚಲವಾದಿ ಹೇಳಿದರು.

ಸ್ಥಳೀಯ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಪೌರ ನೌಕರರ ಸೇವಾ ಸಂಘ ಹಾಗೂ ಪಟ್ಟಣ ಪಂಚಾಯಿತಿಯ ಸಂಯುಕ್ತಾಶ್ರಯದಲ್ಲಿ ಜರುಗಿದ ೧೧ನೇ ವರ್ಷದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪೌರ ಕಾರ್ಮಿಕರಿಲ್ಲದಿದ್ದರೆ ಪಟ್ಟಣದ ನಾಗರಿಕರು ಆ ದಿನವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಪ್ರತಿ ದಿನ ಪಟ್ಟಣವನ್ನು ಸ್ವಚ್ಛತೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಪೌರ ಕಾರ್ಮಿಕರ ಸೇವೆಯನ್ನು ಪ್ರತಿಯೊಬ್ಬರು ಗುರುತಿಸಬೇಕು. ಸಮಾಜದ ಆರೋಗ್ಯ ಕಾಪಾಡುವಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಬೇಕು. ಅವರಿಗೆ ನ್ಯಾಯಯುತವಾಗಿ ಎಲ್ಲಾ ರೀತಿಯ ಸೌಲಭ್ಯ ದೊರಕುವಂತಾಗಬೇಕು.

ನಾಗರಿಕತೆ ಬೆಳೆದಂತೆ ಜನರ ಅವಶ್ಯಕತೆ ಜತೆಗೆ, ಪೌರ ಕಾರ್ಮಿಕರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ ಹೆಚ್ಚಾಗುತ್ತಿದೆ. ಪೌರಕಾರ್ಮಿಕರಿಗೆ ಭತ್ಯ, ವೇತನ, ಅಧುನಿಕ, ವೈಜ್ಞಾನಿಕ ಸೌಲಭ್ಯ, ಸೌಕರ್ಯಗಳು ಸಮರ್ಪಕವಾಗಿ ಸಿಗಬೇಕು. ನಗರಸಭೆ ಅವರ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದರು.

ಕ.ರಾ.ಪೌ.ಸೇ.ನೌ. ಸೇವಾ ಸಂಘದ ರಾಜ್ಯ ಕಾರ್ಯದರ್ಶಿ ಸಿದ್ದು ಹುಣಸಿಮರದ ಮಾತನಾಡಿ, ಪೌರಕಾರ್ಮಿಕರ ಸೇವೆ ಅನನ್ಯವಾದ ಸೇವೆಯಾಗಿದ್ದು, ಇಂತಹ ಕಾರ್ಮಿಕರಿಗೆ ನಾವು ಗೌರವ ಕೊಡದೆ ಅಗೌರವದಿಂದ ನಡೆಸಿಕೊಳ್ಳುವುದು ಸರಿಯಲ್ಲ.ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಬೆಚ್ಚಗೆ ಮಲಗಿರುವಾಗ ತಾವು ಬೀದಿಯಲ್ಲಿ ನಿಂತು ನಾವು ಹಾಕಿರುವ ಕಸವನ್ನು ಸ್ವಚ್ಚಮಾಡುವ ಕೆಲಸ ಮಾಡುತ್ತಿರುತ್ತಾರೆ.

ನಾವು ಕಣ್ಣುಬಿಡುವ ಮೊದಲೇ ನಗರವನ್ನು ಸ್ವಚ್ಚಗೊಳಿಸಿ ಮನಸ್ಸಿಗೆ ಮುದ ನೀಡುವ ಇವರಿಗೆ ನಾವು ಏನು ಕೊಟ್ಟರೂ ಕಡಿಮೆಯೇ ಆಗಿದೆ. ಏನು ಕೊಡದಿದ್ದರೂ ಪರವಾಗಿಲ್ಲ ಕನಿಷ್ಟ ಗೌರವವನ್ನು ಕೊಡಬೇಕು, ಕೊರೋನಾದಂತಹ ಕಠಿಣ ಸಂದರ್ಭದಲ್ಲಿ ಎಲ್ಲರೂ ಭೀತಿಗೊಳಗಾಗಿ ಜೀವವನ್ನು ಕೈಲಿಡಿದು ಬದುಕುತ್ತಿರುವಾಗ, ಸಾವಿಗೂ ಹೆದರದೆ, ಭೀತಿಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ಕಾಯಕದಲ್ಲೇ ಕೈಲಾಸ ಕಂಡ ಏಕೈಕ ಸೇವಕ ವರ್ಗವೆಂದರೆ ಅದು ಪೌರಕಾರ್ಮಿಕ ವರ್ಗವಾಗಿದೆ.

ಕೊರೋನಾ ಆರೈಕೆ ಕೇಂದ್ರಗಳ ತ್ಯಾಜ್ಯಗಳನ್ನು ವಿಂಗಡಣೆ ಮಾಡಲೂ ಹಿಂಜರಿಯದ ಇವರು ಕಣ್ಣಮುಂದಿರುವ ನಿಜವಾದ ದೈವಗಳಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ ಎಂದರು.

ಕ.ರಾ.ಪೌ.ಸೇ.ನೌ ಸೇವಾ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಕಜ್ಜಿ, ಪ.ಪಂ ಮುಖ್ಯಾಧಿಕಾರಿ ಹನಮಂತಪ್ಪ ಮಣ್ಣೊಡ್ಡರ, ಪ.ಪಂ ಸದಸ್ಯರಾದ ದಾವುದಲಿ ಕುದರಿ, ಜ್ಯೋತಿ ಪಾಯಪ್ಪಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ ಪೌರ ಕಾರ್ಮಿಕರಿಗೆ ಮತ್ತು ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದ ಪೌರ ಕಾರ್ಮಿಕರ ಮಕ್ಕಳಿಗೆ ಸನ್ಮಾನಿಸಲಾಯಿತು. ನಂತರ ಸಂಗೀತ ಕಾರ್ಯಕ್ರಮ ಜರುಗಿತು.

ಪ.ಪಂ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ, ಕ.ರಾ.ಪೌ.ಸೇ.ನೌ. ಸೇವಾ‌ ಸಂಘ ನರೇಗಲ್ಲ ಘಟಕದ ಅಧ್ಯಕ್ಷ ನೀಲಪ್ಪ ಚಳ್ಳಮರದ, ಸ್ಥಾಯಿ ಸಮಿತಿಯ ಚೇರಮ್ ಫಕೀರಪ್ಪ ಮಳ್ಳಿ, ಕ.ರಾ.ಪೌ.ಸೇ.ನೌ. ಸೇವಾ ಸಂಘದ ಜಿಲ್ಲಾಧ್ಯಕ್ಷ ರಮೇಶ ಹಲಗಿಯವರ, ಕ.ರಾ.ಪೌ.ಸೇ.ನೌ. ಸೇವಾ ನರೇಗಲ್ಲ ಘಟಕದ ಉಪಾಧ್ಯಕ್ಷ ಶಂಕ್ರಪ್ಪ ದೊಡ್ಡಣ್ಣವರ, ಪ.ಪಂ ಸದಸ್ಯರಾದ ಕುಮಾರಸ್ವಾಮಿ ಕೋರಧ್ಯಾನಮಠ, ಮಲ್ಲಕಸಾಬ ರೋಣದ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಫಕೀರಪ್ಪ ಬಂಬ್ಲಾಪೂರ, ರಾಚಯ್ಯ ಮಾಲಗಿತ್ತಿಮಠ, ಈರಪ್ಪ ಜೋಗಿ, ಮುತ್ತಪ್ಪ, ಅಕ್ಕಮ್ಮ ಮಣ್ಣೊಡ್ಡರ, ವಿಶಾಲಾಕ್ಷಿ ಹೊಸಮನಿ, ಬಸಮ್ಮ ಧರ್ಮಾಯತ, ಶಕುಂತಲಾ ಧರ್ಮಾಯತ ಸೇರಿದಂತೆ ಪ.ಪಂ ಪೌರಕಾರ್ಮಿಕರು ಹಾಗೂ ಸಿಬ್ಬಂದಿಗಳು ಇದ್ದರು. ಮುತ್ತು ಹೂಗಾರ ಕಾರ್ಯಕ್ರಮ ನಿರೂಪಿಸಿದರು.

ಲೋಕಾಯುಕ್ತ ಅಧಿಕಾರಿಗಳ ದಾಳಿ; ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಬಲೆಗೆ

ವಿಜಯಸಾಕ್ಷಿ ಸುದ್ದಿ, ಚಿತ್ರದುರ್ಗ

ಹಾಸ್ಟೆಲ್ ಗೆ ಸರಬರಾಜು ಮಾಡಿದ್ದ ವಸ್ತುಗಳಿಗೆ ಬಿಲ್ ಮಾಡಲು ಲಂಚ ಕೇಳಿದ್ದ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.

ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಎಫ್ ಡಿ ಎ ನರಸಿಂಹಮೂರ್ತಿ ಎಂಬಾತ, ಜಿಲ್ಲೆಯ ವಿವಿಧ ಹಾಸ್ಟೆಲ್ ಗಳಿಗೆ ವಸ್ತುಗಳನ್ನು ಸರಬರಾಜು ಮಾಡಿದ್ದ ಗುತ್ತಿಗೆದಾರ ಸಜ್ಜನಕೆರೆ ಗ್ರಾಮದ ಲೋಕೇಶ್ ಎಂಬುವವರ ಬಿಲ್ ಪಾವತಿ ಮಾಡಲು ಲಂಚ ಕೇಳಿದ್ದ.

ಗುರುವಾರ ಮಧ್ಯಾಹ್ನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ 11ಸಾವಿರ ರೂ. ಹಣ ಲಂಚ ಪಡೆಯುತ್ತಿದ್ದಾಗ, ಲೋಕಾಯುಕ್ತ ಡಿವೈಎಸ್ಪಿ ಜಿ. ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಹಿಡಿದಿದ್ದು, ವಿಚಾರಣೆ ನಡೆಸಿದ್ದಾರೆ.

ಅಪ್ರಾಪ್ತೆ ಮೇಲೆ ಗ್ಯಾಂಗ್ ರೇಪ್ ಮಾಡಿದ್ದ ಇಬ್ಬರು ಅಪರಾಧಿಗಳಿಗೆ 20 ವರ್ಷ ಜೈಲು, ಪುನರ್ವಸತಿಗಾಗಿ 5 ಲಕ್ಷ ರೂ. ಪರಿಹಾರ

0

ವಿಜಯಸಾಕ್ಷಿ ಸುದ್ದಿ, ಗದಗ

ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವದನ್ನು ಗಮನಿಸಿ ಮಹಿಳೆಯೊಬ್ಬಳು ನಂಬಿಸಿ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು, ಆಕೆಯ ಇಬ್ಬರು ಮಕ್ಕಳು ನಿರಂತರವಾಗಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.

ಘಟನೆಯ ವಿವರ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನರಗುಂದ ಪಟ್ಟಣದ ಆರ್ಭಾನ ಓಣಿಯ ಜೈತುನಬಿ ಕೋಂ ಇಮಾಮ್ ಸಾಬ್ ತೆಗ್ಗಿನಮನಿ, ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ್ ತೆಗ್ಗಿನಮನಿ ಈ ಮೂವರೂ ಒಂದೇ ಕುಟುಂಬದವರಾಗಿದ್ದಾರೆ.

ನೊಂದ ಬಾಲಕಿಯ ತಂದೆ ಹಾಗೂ ಮಲತಾಯಿ ಇಬ್ಬರೂ ಮಂಗಳೂರಿನಲ್ಲಿ ದುಡಿಯುತ್ತಿದ್ದರು. ನೊಂದ ಬಾಲಕಿಯನ್ನು ಧಾರವಾಡದ ಒಂದು ಮನೆಯಲ್ಲಿ ಕೆಲಸಕ್ಕೆ ಇಟ್ಟಿದ್ದರು. ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಮರಳಿ ತನ್ನ ಮನೆಗೇ ಬಂದು ಒಬ್ಬಳೇ ವಾಸವಾಗಿದ್ದಳು.

ಈ ಸಂದರ್ಭದಲ್ಲಿ ಆರೋಪಿಗಳ ತಾಯಿ `ನೀನು ನನ್ನ ಸಂಬಂಧಿಕಳು’ ಎಂದು ಸುಳ್ಳು ಹೇಳಿ ನಂಬಿಸಿ, ನರಗುಂದದ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಸದರಿ ತನ್ನ ಇಬ್ಬರು ಮಕ್ಕಳೂ ದಿನನಿತ್ಯ ಅತ್ಯಾಚಾರ ಮಾಡಿ, ಗರ್ಭವತಿಯನ್ನಾಗಿಸಿದ ಆರೋಪದ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಕಲಂ 376, 448,109 ಐಪಿಸಿ ಮತ್ತು 4&6, 17 ಪೋಕ್ಸೋ ಕಾಯ್ದೆ 2012ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಸಿಪಿಐ ರಮಾಕಾಂತ. ಎಚ್.ವೈ. ತನಿಖೆ ನಡೆಸಿ 20.8.2016ರಂದು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ 1ನೇ ಆರೋಪಿಯಾದ ಜೈತುನಬಿ ಕೋಂ ಇಮಾಮ್ ಸಾಬ ತೆಗ್ಗಿನಮನಿ ಇವಳ ಮೇಲೆ ಆರೋಪ ಸಾಬೀತಾಗದೇ ಇರುವದರಿಂದ ಇವಳನ್ನು ಬಿಡುಗಡೆಗೊಳಿಸಿಲಾಗಿದೆ.

ಮಕ್ಕಳಾದ ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ ತೆಗ್ಗಿನಮನಿ ಈ ಆರೋಪಿಗಳು ಮಾಡಿದ ಅಪರಾಧವು ಕಲಂ 376(ಡಿ) ಐಪಿಸಿ 4&6 ಪೋಕ್ಸೋ ಕಾಯ್ದೆ 2012ರ ಪ್ರಕಾರ ರುಜುವಾತಾಗಿರುವದರಿಂದ ಸದರಿ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ಗಳನ್ನು ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡಲು ಆದೇಶಿಸಿದೆ.

ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 5 ಲಕ್ಷ ರೂ.ಗಳನ್ನು ಪರಿಹಾರವಾಗಿ National Legal Services Authority ನೀಡಲು ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.

ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ; ವಿಜಯಾನಂದ ಕಾಶಪ್ಪನವರ್ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ವಿಚಾರಕ್ಕೆ ಈಗಾಗಲೇ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆದಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಗದಗ ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸರ್ಕಾರ ಮತ್ತೆ ಗಡುವು ಕೇಳಿದರೆ ನಾವು ಒಪ್ಪುವುದಿಲ್ಲ. ಇದುವರೆಗೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೆ ಕೂಡಾ ನಡೆಸುತ್ತಿಲ್ಲ. ಸರ್ಕಾರದ ಈ ನಡೆಗೆ ಪಂಚಮಸಾಲಿ ಸಮುದಾಯವು ಬೇಸತ್ತಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ ೨೫ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ ಸಿ ಪಾಟೀಲ್ ದಾರಿ ತಪ್ಪಿಸುವಂಥ ಕೆಲಸ ಮಾಡ್ತಿದ್ದಾರೆ. ಮೀಸಲಾತಿ ಕೊಟ್ಟರೆ ಪಂಚಮಸಾಲಿ ಜನಾಂಗಕ್ಕೆ ಉದ್ಯೋಗ, ಶಿಕ್ಷಣದಲ್ಲಿ ಅನುಕೂಲ ಆಗುತ್ತೆ. ಹಿಂದುಳಿದ ಸಮಾಜದವರಿಗೆ ಮೀಸಲಾತಿ ಕೇಳುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ. ಆದರೆ ಸರಕಾರ ಮೂಗಿಗೆ ತುಪ್ಪ ಒರೆಸೋ ಕೆಲಸವನ್ನು ಮಾಡುತ್ತಿದೆ.

ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶೇ ೫೦ ಒಳಗಾಗಿ ಮೀಸಲಾತಿ ಪಡೆಯಬಹುದು. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಮೀಸಲಾತಿ ವಿಚಾರ ರಾಜ್ಯ ಸರ್ಕಾರದ ಕೈಗೆ ಕೊಟ್ಟಿದೆ. ೨ಎ ಮೀಸಲಾತಿ ಅಷ್ಟೇ ಕೇಳಿದ್ದೇವೆಯೇ ಹೊರತು ಶೇ ೫೦ ಅಂತೂ ಅಲ್ಲ. ಈಗಾಗಲೇ ೨ಎ ಯಲ್ಲಿ ೧೦೮ ಪಂಗಡಗಳ ಒಳಪಡಿಸಲಾಗಿದೆ. ಅದರಲ್ಲಿ ನಮಗೂ ಒಂದು ಪಾಲು ಕೊಡಿ. ಪಂಚಮಸಾಲಿ ಸಮಾಜ ೩ಬಿ ಯಲ್ಲಿ ಇದೆ. ೨ಎ ಯಲ್ಲಿ ಶೇ ೧೫ ನೀಡುತ್ತಿದ್ದೀರಿ, ನಮ್ಮ ಸಮುದಾಯಕ್ಕೆ ಶೇ ೧೫ ನೀಡಿದರೆ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುತ್ತಾರೆ. ಅದಕ್ಕೆ ನಾವು ಮೀಸಲಾತಿ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಸಿ ಸಿ ಪಾಟೀಲರೇ, ಯಾಕೆ ದಾರಿ ತಪ್ಪಿಸುವಂತಹ ಕೆಲಸ ಮಾಡ್ತೀರಿ, ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೀವಿ, ಗೌರವ ಇಟ್ಟಿದ್ದೀವಿ. ಆ ಗೌರವ ಉಳಿಸಿಕೊಳ್ಳುವಂತಹ ಕೆಲಸ ಮಾಡಿ. ನೀವು ಮೀಸಲಾತಿ ಕೊಡಿಸುತ್ತೀರಿ ಎಂದು ಕಾಯುತ್ತಿದ್ದೇವೆ. ನಿಮ್ಮನ್ನು ಟಾರ್ಗೆಟ್ ಮಾಡ್ತಿದ್ದೀವಿ ಎಂದು ಹೇಳ್ತೀರಿ. ಮಾಡುವ ಕೆಲಸ ಸರಿಯಾಗಿ ಮಾಡಿದರೆ ನಾವು ಯಾಕೆ ಟಾರ್ಗೆಟ್ ಮಾಡೋಣ ಹೇಳಿ? ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ತೀವಿ, ತಪ್ಪೇನಿದೆ..? ನಾಚಿಕೆ ಆಗಬೇಕು ಸಾಮಾಜಿಕ ನ್ಯಾಯಕ್ಕೋಸ್ಕರ ಯಾವ ಮುಖ್ಯಮಂತ್ರಿ ಮನೆ ಮುಂದೂ ಧರಣಿ ನಡೆದಿರಲಿಲ್ಲ. ನೀವು ಒಬ್ಬ ಪೂಜ್ಯರನ್ನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂಡಿಸುವಂಥ ಕೆಲಸ ಮಾಡಿದ್ರಿ. ಇದು ಸರೀನಾ ಸಿ ಸಿ ಪಾಟೀಲರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಕುರ್ಚಿಗಾಗಿ ತಿರುಪತಿ ಭೇಟಿ

  • ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಿರುಪತಿಗೆ ಕರೆದುಕೊಂಡು ಹೋಗಿ ನಿಮ್ಮ ಕುರ್ಚಿ ಉಳಿಯಬೇಕಾದರೆ ಪಂಚಮಸಾಲಿಯವರಿಗೆ ೨ಎ ಮೀಸಲಾತಿ ಕೊಡಬಾರದು ಅಂತಾ ಪ್ರಮಾಣ ಮಾಡಿಸಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಆ ಕಾರಣಕ್ಕೆ ಯಡಿಯೂರಪ್ಪ ಮೇಲೆ ನಾವು ನೇರವಾದ ಆರೋಪ ಮಾಡ್ತಿದೀವಿ. ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಸಚಿವ ಸ್ಥಾನ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ೨ಎ ಮೀಸಲಾತಿ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ನಮ್ಮ ಮೀಸಲಾತಿಗೆ ಅಡ್ಡಿಯಾದವರು ಯಡಿಯೂರಪ್ಪ. ಸಮುದಾಯದ ಹೆಸರಲ್ಲಿ ನೀವು ಮಂತ್ರಿಗಿರಿ ತಗೋತೀರಿ. ಸಮದಾಯದ ಹೆಸರಲ್ಲಿ ಗೆದ್ದು ಬರ್ತೀರಿ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ನೀವು ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿದವರು ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಒಬ್ಬ ಮಂತ್ರಿ ಕಾನೂನು ಹೋರಾಟ ಮಾಡ್ತೀವಿ ಅಂತಾರೆ. ಅದಕ್ಕೆ ಪರೋಕ್ಷವಾಗಿ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಕಾರ್ಯದರ್ಶಿ ಸಂಗಮೇಶ ಕವಳಿಕಾಯಿ, ಸಮಾಜದ ಮುಖಂಡ ಸಿದ್ದು ಪಾಟೀಲ್ ಇದ್ದರು.

ಅವ್ಯವಸ್ಥೆ ಕಂಡು ತಾಪಂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು

0

ವಿಜಯಸಾಕ್ಷಿ ಸುದ್ದಿ, ರೋಣ

ಇಲ್ಲಿನ ತಾಪಂ ಸಭಾಂಗಣದ ಅವ್ಯವಸ್ಥೆಯನ್ನು ಕಂಡು ಕೋಪಗೊಂಡ ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ ಅವರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ನಿಮ್ಮ ಮುಖ್ಯ ಕಚೇರಿಯೇ ಇಷ್ಟೊಂದು ಗಲೀಜು ಇರಬೇಕಾದರೆ ಇನ್ನು ಗ್ರಾಮೀಣ ಭಾಗಗಳ ಸ್ಥಿತಿ ಹೇಗಿರಬಹುದು ಎಂದು ತರಾಟೆಗೆ ತೆಗೆದುಕೊಂಡರು.

ಅವರು ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ ವೇಳೆಯಲ್ಲಿ ತಾಪಂ ಸಭಾಭವನದ ಸ್ಥಿತಿಯನ್ನು ಕಂಡು ತಮ್ಮ ಅಸಮಾಧಾನ ಹೊರಹಾಕಿದರು.

ತಾಪಂ ಸಭಾವನದ ಒಳಗಡೆ ಸಿಬ್ಬಂದಿಗಳು ಕಸ ಗೂಡಿಸದೆ ಹಾಗೆ ಬಿಟ್ಟಿದ್ದರು.ಅಲ್ಲದೆ ಎಲ್ಲೆಂದರಲ್ಲಿ ಚಹಾ ಕಪ್‌ಗಳು ಸೇರಿದಂತೆ ಅನೇಕ ತಾಜ್ಯ ವಸ್ತುಗಳು ಬಿದ್ದಿದ್ದವು. ಸ್ವಚ್ಛತೆ ಬಗ್ಗೆ ಪಾಠ ಹೇಳುವ ನೀವೇ ನಿಮ್ಮ ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲವಲ್ಲ ಎಂದು ಗದರಿದರು.

ಹೊಳೆಆಲೂರ ಎಪಿಎಂಸಿ ಕಾರ್ಯದರ್ಶಿಯ ವಿ.ಎ.ಹಾದಿಮನಿಯವರು ಈರುಳ್ಳಿ ಬೆಳೆಯ ವಿಮಾ ಹಣ ಬಂದಿದ್ದರೂ ಸಹ ಬಜಾಜ್ ವಿಮಾ ಕಂಪನಿಯವರು ಹಣ ಪಾವತಿ ಮಾಡುತ್ತಿಲ್ಲ. ಕಚೇರಿಗೆ ಅಲೆದು ಸಾಕಾಗಿದೆ ಎಂದು ಲೋಕಾಯುಕ್ತರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಬಜಾಜ್ ವಿಮಾ ಕಂಪನಿ ವಿರುದ್ಧ ಅನೇಕ ದೂರುಗಳು ಬಂದಿದ್ದು, ರಾಜ್ಯ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಶೀಘ್ರ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದರು.

ಈ ಸಂಧರ್ಭದಲ್ಲಿ ಉಪತಹಸೀಲ್ದಾರ ಜೆ.ಟಿ.ಕೊಪ್ಪದ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಬಜಾಜ್‌ನ ಹೊಸ ಮಾಡೆಲ್ ಸಿಟಿ 125 ಬೈಕ್ ಅನಾವರಣ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಚನ್ನಮ್ಮ ಬಜಾಜ್ ಶೋರೂಮ್‌ನಲ್ಲಿ ಬಜಾಜ್‌ನ ಹೊಸ ಮಾಡೆಲ್ ಸಿಟಿ ೧೨೫ ಹೊಸ ಬೈಕನ್ನು ಬಿಡುಗಡೆಗೊಳಿಸಲಾಯಿತು. ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ್ ನಿಂಗನಗೌಡ್ರ ಪಾಟೀಲ ಹಾಗೂ ಮೆಕ್ಯಾನಿಕ್ ಅಸೋಸಿಯಷನ್ ಲಕ್ಷ್ಮೇಶ್ವರ ಅಧ್ಯಕ್ಷ ಕಲಂದರ್ ಸೂರಣಗಿ ಬೈಕ್ ಅನಾವರಣಗೊಳಿಸಿದರು.

ಈ ವೇಳೆ ಶೋರೋಮ್ ಸೇಲ್ಸ್ ಮ್ಯಾನೇಜರ್ ಸಂತೋಷ ನಂದಿಕೇಶ್ವರಮಠ ಬೈಕ್‌ನ ವಿವರಣೆ ನೀಡಿ, ಸಿಟಿ ೧೨೫ಹೊಸ ಮಾಡೆಲ್ ಬೈಕ್ ಎಲ್ಲ ವರ್ಗದ ಜನರಿಗೂ ಅನಕೂಲವಾಗಿದೆ. ದೀರ್ಘ ಪ್ರಯಾಣಕ್ಕೆ ದುರ್ಗಮ ರಸ್ತೆಗಳಲ್ಲಿ ಚಲಿಸಲು ಅನಕೂಲವಾಗಲಿದೆ. ಎಂಜಿನ್ ರಕ್ಷಣೆಗಾಗಿ ಬೆಲ್ಲಿ ಪ್ಯಾನ್ಸ್, ಸ್ಟೈಲಿಶ್ ಸಿಟ್ಟಿಂಗ್ ವ್ಯವಸ್ಥೆ, ಅಲ್ಲದೇ ಮೊಟ್ಟ ಮೊದಲಬಾರಿಗೆ ಬಜಾಜ್‌ನಲ್ಲಿ ಯುಎಸ್‌ಬಿ ಚಾರ್ಜರ್, ಧೂಳಿನಿಂದ ರಕ್ಷಣೆ ನೀಡಲು ಸ್ಡೈಲಿಶ್ ಬೆಲ್ಲೋಸ್ ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಹೀಗೆ ಅನೇಕ ಹೊಸತನಗಳಿದ್ದು, ಉತ್ತಮ ಮೈಲೇಜ್ ಹೊಂದಿದೆ ಎಂದು ಹೇಳಿದರು.

ಈ ವೇಳೆ ಶೋರೂಮ್ ಮಾಲೀಕ ಶಿವಯೋಗಿ ಗಡ್ಡದೇವರಮಠ, ರಿಜ್ವಾನ್ ಕಲಬುರ್ಗಿ, ಷಣ್ಮುಖ ಗಡ್ಡೆಣ್ಣನವರ, ಶಿವರಾಜ ಕರೆವಡಿಮಠ, ಸಿಬ್ಬಂದಿಗಳಾದ ಬಸವರಾಜ ಘಂಟಿ, ಮಂಜು ಸುತಾರ, ಅಸ್ಲಾಂ, ಜಿಲಾನಿ, ಜಾವೀದ್, ಅಪ್ತಾಬ, ಪಟ್ಟಣದ ಮೆಕ್ಯಾನಿಕ್ ಅಸೋಸಿಯೇಷನ್ ಸದಸ್ಯರು ಇದ್ದರು.

ಗದಗ, ಧಾರವಾಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ; ನಟೋರಿಯಸ್ ಕ್ರಿಮಿನಲ್ ಅಂದರ್

ವಿಜಯಸಾಕ್ಷಿ ಸುದ್ದಿ, ಬೀದರ್

ಇತ್ತೀಚಿನ ದಿನಗಳಲ್ಲಿ ಬೀದರ್ ನಗರದಲ್ಲಿ ಮನೆಗಳ್ಳತನದ ಪ್ರಕರಣಗಳು ಹೆಚ್ಚಿದ್ದು, ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳು ದಾಖಲಾಗುತ್ತಿರುವದು ಇಲಾಖೆಯ ನಿದ್ದೆಗೆಡಿಸಿತ್ತು.

ಇಂಥ ಪ್ರಕರಣಗಳನ್ನು ನಿಯಂತ್ರಿಸಿ, ಮನೆಗಳ್ಳತನದಲ್ಲಿ ಭಾಗಿಯಾದ ಕಳ್ಳರನ್ನು ಪತ್ತೆಮಾಡುವ ಉದ್ದೇಶದಿಂದ ಬೀದರ್ ಉಪವಿಭಾಗದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಪೊಲೀಸ್ ಉಪ ಅಧೀಕ್ಷಕ ಕೆ,ಎಂ, ಸತೀಶ್ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನೇ ರಚಿಸಲಾಗಿತ್ತು. ಈ ತಂಡವು ಸೆ.19ರಂದು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಯಿಂದ 10 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ಬೀದರ ನಗರದ ಆದರ್ಶ ಕಾಲೋನಿ, ಜ್ಯೋತಿ ಕಾಲೋನಿಯಲ್ಲಿ ನಡೆದಿದ್ದ ಮೂರು ಸರಣಿ ಮನೆಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಸೋಲಾಪುರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಲ್ಲಿಯೂ ಹಲವು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯ ವಿರುದ್ಧ ಗಾಂಧಿಜಂಗ್ ಪೊಲೀಸ್ ಠಾಣೆಯಲ್ಲಿ 134/2022, 138/2022 ಹಾಗೂ ಬೀದರ್ ನ ನೂತನ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 155/2022, ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತನು ನಟೋರಿಯಸ್ ಅಪರಾಧಿಯಾಗಿದ್ದು, ಅಂತರ್ ರಾಜ್ಯ ಕಳ್ಳನಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.

ಪೊಲೀಸ್ ಕಾರ್ಯಾಚರಣೆಯ ತಂಡದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ನಿರೀಕ್ಷಕ ಜಿ.ಎಸ್. ಬಿರಾದಾರ, ಬೀದರ್ ಗ್ರಾಮೀಣ ವೃತ್ತದ ಸಿಪಿಐ ಶ್ರೀಕಾಂತ ಅಲ್ಲಾಪೂರೆ, ಪಿಎಸ್ಐ ಸೈಯದ್ ಪಟೇಲ್, ಪಿಎಸ್ಐ ದಯಾನಂದ ಮಡಿವಾಳ ಹಾಗೂ ಸಿಬ್ಬಂದಿಗಳಾದ ಆರೀಫ್, ನವೀನ್, ಅನಿಲ್, ಇರ್ಫಾನ್, ಗಂಗಾಧರ, ಪ್ರವೀಣ್, ಶ್ರೀನಿವಾಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!