20.9 C
Gadag
Monday, October 2, 2023
Home Blog

ಗಣೇಶ ಮೆರವಣಿಗೆ ಬೇಗ ಮುಗಿಸಿ ಅಂದಿದ್ದಕ್ಕೆ ಪೊಲೀಸ್ ಮೇಲೆ ಹಲ್ಲೆ…

0

ಮೂವರಿಂದ ಕರ್ತವ್ಯಕ್ಕೆ ಅಡ್ಡಿ…..

ವಿಜಯಸಾಕ್ಷಿ ಸುದ್ದಿ, ಗದಗ

ಗಣೇಶ ವಿಸರ್ಜನಾ ಮೆರವಣಿಗೆ ಬೇಗ ಮುಗಿಸಿ ಎಂದ ಪೊಲೀಸ್ ಒಬ್ಬರ ಮೇಲೆ ಮೂವರು ಹಲ್ಲೆ ಮಾಡಿದ ಘಟನೆ ಮೊನ್ನೆ ರಾತ್ರಿ ಜರುಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೊನ್ನೆ ಗದಗ ತಾಲೂಕಿನ ಚಿಂಚಲಿ ಗ್ರಾಮದ ಮಲ್ಲಿಕಾರ್ಜುನ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಗೆ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಬಂದೋಬಸ್ತ್ ‌ಗೆ ತೆರಳಿದ್ದ ಪೇದೆ ಗಿರೀಶ್ ಕುರಹಟ್ಟಿ, ಮೆರವಣಿಗೆ ಬೇಗ ಮುಗಿಸಿ ಅಂದಿದ್ದೆ ತಡ, ಅದೇ ಗ್ರಾಮದ ದುರ್ಗಾನಗರದ ವಿರೇಂದ್ರ ತಂದೆ ಮಂಜಪ್ಪ ಲಕ್ಷ್ಮೀಗುಡಿ, ರಾಕೇಶ್ ತಂದೆ ಹುಚ್ಚಪ್ಪ ವಡ್ಡರ ಹಾಗೂ ಮುದಕಪ್ಪ ತಂದೆ ಹನಮಂತಪ್ಪ ವಡ್ಡರ ಎಂಬ ಮೂವರು ಆರೋಪಿಗಳು, ಪೇದೆ ಜೊತೆಗೆ ವಾಗ್ವಾದಕ್ಕಿಳಿದರು.

ಏಕವಚನದಲ್ಲಿ ಮಾತನಾಡಿದ ಆರೋಪಿಗಳು, ಪೇದೆಯ ಯುನಿಪಾರ್ಮ್ ಕಾಲರ್ ಹಿಡಿದು ಜಗ್ಗಾಡಿ, ಶರ್ಟ್ ಹರಿದು, ಒಬ್ಬ ಅಡ್ಡಗಟ್ಟಿ ಕಪಾಳಕ್ಕೆ ಹೊಡೆದರೆ, ಮತ್ತೊಬ್ಬ ಎದೆಗೆ ಹಾಗೂ ಹೊಟ್ಟೆಯ ಕೆಳಭಾಗಕ್ಕೆ ಹೊಡೆದು ಒಳಪೆಟ್ಟುಪಡಿಸಿದ್ದಾನೆ. ಅಷ್ಟೇ ಅಲ್ಲದೆ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದ್ದಾರೆ.

ಪೇದೆ ಗಿರೀಶ್ ಕುರಹಟ್ಟಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಮುಳಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರು ಆರೋಪಿಗಳ ವಿರುದ್ಧ 0065/2023, IPC 1860(U/s-341,332,353,504,34) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಹಟ್ಟಿ ಪೊಲೀಸರ ಕಾರ್ಯಾಚರಣೆ; ಕುಖ್ಯಾತ ಬೈಕ್ ಕಳ್ಳನ ಬಂಧನ, 7 ಬೈಕ್‌ಗಳು ಜಪ್ತಿ

0

ಎಸ್ಪಿ ಬಿ.ಎಸ್. ನೇಮಗೌಡ ಶ್ಲಾಘನೆ…..

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಶಿರಹಟ್ಟಿ ಪೊಲೀಸ್ ಠಾಣೆ ಹಾಗೂ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತನಿಂದ 7 ಬೈಕ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಬೆನ್ನತ್ತಿದ ಪೊಲೀಸರು, ಎಸ್‌ಪಿ ಬಿ.ಎಸ್ ನೇಮಗೌಡ ಮತ್ತು ಡಿಎಸ್‌ಪಿ ಸಂಕದ ಅವರ ಮಾರ್ಗದರ್ಶನದಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ವಿಜಯಕುಮಾರ ತಳವಾರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ, ಸೆ.೨೮ರ ಬೆಳಗಿನ ಜಾವ ಆರೋಪಿ ಗುಡದಯ್ಯ ಲಕ್ಷ್ಮಣ ಮೋಡಕೇರ(21) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕದ್ದ ಬೈಕ್‌‌ಗಳ ಬಗ್ಗೆ ಆರೋಪಿ ಬಾಯಿ ಬಿಟ್ಟಿದ್ದಾನೆ.

ಶಿರಹಟ್ಟಿ ತಾಲೂಕಿನ ಕಡಕೋಳ, ಛಬ್ಬಿ, ಶಿರಹಟ್ಟಿಯ ಚರ್ಚ್ ಹತ್ತಿರ, ಗದಗ ತಾಲೂಕಿನ ಅಂತೂರ-ಬೆಂತೂರ, ಗಜೇಂದ್ರಗಡ, ಲಿಂಗಸೂರು, ಗುತ್ತಲದ ಹುರುಳಿಹಾಳ ಗ್ರಾಮಗಳಲ್ಲಿ ಕಳುವು ಮಾಡಿದ್ದ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯನ್ನು ಪತ್ತೆಹಚ್ಚಿ, ಬಂಧಿಸುವಲ್ಲಿ ಯಶಸ್ವಿಯಾದ ಪಿಎಸ್‌ಐ ಈರಪ್ಪ ರಿತ್ತಿ, ವಿಜಯಕುಮಾರ ತಳವಾರ, ಸಿಬ್ಬಂದಿಗಳಾದ ಎಲ್.ಎಚ್ ಲಮಾಣಿ, ಆರ್.ಎಸ್ ಯರಗಟ್ಟಿ, ಎಸ್.ಸಿ ಕಪ್ಪತ್ತನವರ, ಎಂ.ವಾಯ್ ಪಿರಂಗಿ, ಕಿರಣ ಪವಾರ, ಸಿ.ಸಿ ಗುಂಡೂರಮಠ, ರಾಜೇಶ ವೀರಾಪೂರ, ಬಿ.ಜೆ ಮುಳಗುಂದ, ಹನಮಂತ ದೊಡ್ಡಮನಿ, ಆರ್.ಎಚ್ ಮುಲ್ಲಾ, ಎಸ್.ಎಚ್ ರಾಮಗೇರಿ, ತಾಂತ್ರಿಕ ಸಿಬ್ಬಂದಿಗಳಾದ ಗುರುರಾಜ ಬೂದಿಹಾಳ, ಸಂಜು ಕೊಡೂರ ಇವರ ಕಾರ್ಯಕ್ಕೆ ಎಸ್‌ಪಿ ಬಿ.ಎಸ್. ನೇಮಗೌಡ, ಡಿಎಸ್‌ಪಿ ಸಂಕದ ಹಾಗೂ ಸಿಪಿಐ ನಾಗರಾಜ್ ಮಾಡಳ್ಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಕ್ಕುಂಡಿ ಬಳಿ ಭೀಕರ ಅಪಘಾತ; ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್, ಕಾರಿನಲ್ಲಿದ್ದ ತಂದೆ, ಮಗ ಸ್ಥಳದಲ್ಲೇ ಸಾವು

0

ಶವ ಹೊರ ತಗೆಯಲು ಹರಸಾಹಸ....

ವಿಜಯಸಾಕ್ಷಿ ಸುದ್ದಿ, ಗದಗ

ಸಾರಿಗೆ ಸಂಸ್ಥೆಯ ಬಸ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತದ ನಂತರ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಮುಂಜಾನೆ ಜರುಗಿದೆ.

ಶಿಕ್ಷಣ ಇಲಾಖೆಯಲ್ಲಿ ಜೆಡಿಯಾಗಿ ನಿವೃತ್ತಿ ಹೊಂದಿದ್ದ ಹೊಸಪೇಟೆಯ ನಿವಾಸಿಗಳಾದ ಬಾಲರಾಜ್ (65) ಹಾಗೂ ಮಗ ಉಪನ್ಯಾಸಕ ವಿನಯ್ (28) ಸ್ಥಳದಲ್ಲೇ ಮೃತಪಟ್ಟ ದುರ್ಧೈವಿಗಳು ಎಂದು ಗುರುತಿಸಲಾಗಿದೆ.

ಗದಗ ಕೊಪ್ಪಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಲಕ್ಕುಂಡಿ ಗ್ರಾಮದ ಕೂಗಳತೆಯಲ್ಲಿ ಈ ಅಪಘಾತ ನಡೆದಿದೆ.

ಬಸ್ ಗದಗನಿಂದ ಲಕ್ಕುಂಡಿ ಮಾರ್ಗವಾಗಿ ಕೊಪ್ಪಳಕ್ಕೆ ಹೊರಟಿತ್ತು ಎನ್ನಲಾಗಿದೆ. ಕಾರು ಹೊಸಪೇಟೆಯಿಂದ ಹುಬ್ಬಳ್ಳಿ ಕಡೆ ಹೊರಟಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಪಘಾತದ ನಂತರ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಿಂದ ಶವ ಹೊರಗಡೆ ತೆಗೆಯಲು ಹರಸಾಹಸ ಪಡಬೇಕಾಯಿತು.

ಗಾಯಗೊಂಡ ಪ್ರಯಾಣಿಕರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿ, ಹಾಲಿನ ಪುಡಿ ವಶಕ್ಕೆ

0

ಆಹಾರ ಇಲಾಖೆ, ಪೊಲೀಸರ ಜಂಟಿ ಕಾರ್ಯಾಚರಣೆ…

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ


ಪಟ್ಟಣದಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿರುವ ಗೋಡೌನ್ ಮೇಲೆ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಅನ್ನಭಾಗ್ಯದ ಅಕ್ಕಿ ಮತ್ತು ಕ್ಷೀರಭಾಗ್ಯದ ಹಾಲಿನ ಪುಡಿಯನ್ನು ವಶಪಡಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.

ತಾಲೂಕು ಅಹಾರ ನಿರೀಕ್ಷಕ ಮಂಜುನಾಥ ತಳ್ಳಿಹಾಳ ಹಾಗೂ ಗಜೇಂದ್ರಗಡ ಪಿಎಸ್‌ಐ ಸೋಮನಗೌಡ ಗೌಡ್ರ ನೇತೃತ್ವದಲ್ಲಿ ಎಪಿಎಂಸಿ ಗೋದಾಮೊಂದರಲ್ಲಿ ಅಕ್ರಮ ಅಕ್ಕಿ ಸಂಗ್ರಹಣೆ ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಹಾಗೂ ಅನ್ನಭಾಗ್ಯ ಅಕ್ಕಿಯನ್ನು ಹೋಲುವ 51 ಚೀಲಗಳಲ್ಲಿರುವ 26.5ಕ್ವಿಂಟಾಲ್ ತೂಕದ 90,100 ರೂ ಮೌಲ್ಯದ ಅಕ್ಕಿ ಚೀಲಗಳು ಸಿಕ್ಕಿವೆ. ಈ ಕುರಿತು ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಪಟ್ಟಣದ ಎಪಿಎಂಸಿಯ ಗೋದಾಮಿನ ಮೇಲೆ ನಡೆದ ದಾಳಿ ವೇಳೆ 1 ಕೆಜಿ ತೂಕದ 180 ಪ್ಯಾಕೆಟ್ ಹಾಲಿನ ಪುಡಿ ಸಿಕ್ಕಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯದ್ದಾಗಿದೆ. ಗಜೇಂದ್ರಗಡ ನೆರೆಯ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಿಗೆ ಹತ್ತಿರವಿದ್ದು, ಎಲ್ಲ ಪ್ಯಾಕೆಟ್‌ಗಳ ಬ್ಯಾಚ್ ನಂಬರ್ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರೋಣ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಅಂಗಡಿ ತಿಳಿಸಿದ್ದಾರೆ.

ಗಾಂಜಾ ಬೆಳೆದ ಆರೋಪಿಗೆ 3 ವರ್ಷ ಶಿಕ್ಷೆ, 25 ಸಾವಿರ ದಂಡ

0

ಅಯ್ಯನಗೌಡ ಗೌಡಪ್ಪಗೌಡ……ಜಮೀನಿನಲ್ಲಿ ಗಾಂಜಾ ಬೆಳೆದಿದ್ದ…..

ವಿಜಯಸಾಕ್ಷಿ ಸುದ್ದಿ, ಗದಗ

ತನ್ನ ಸ್ವಂತ ಲಾಭಕ್ಕೋಸ್ಕರ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಗದಗ ತಾಲೂಕಿನ ಬೆಳಹೋಡದಿಂದ ಮದಗಾನೂರು ಗ್ರಾಮಕ್ಕೆ ಹೋಗುವ ರಸ್ತೆಯ ಪಕ್ಕದಲ್ಲಿ ಸರ್ವೆ ನಂ. 111/1+2ಅ/2 ರಲ್ಲಿ ಒಟ್ಟು 10 ಹಸಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು.

22.10.2021 ರಂದು ಆರೋಪಿತ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡರ ಸಿಕ್ಕಿಬಿದ್ದಿದ್ದು, ಇವನಿಂದ ಸುಮಾರು 12 ಕೆಜಿ ಗಾಂಜಾವನ್ನು ವಶಕ್ಕೆ ಪಡೆದು, ಆರೋಪಿಯ ವಿರುದ್ಧ ಗದಗ ವಲಯದ ಅಬಕಾರಿ ನಿರೀಕ್ಷಕ ನಾರಾಯಣಸಾ ಪವಾರ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದುಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಎಸ್‌ ಶೆಟ್ಟಿ ಇವರು ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಅಯ್ಯನಗೌಡ ರಾಮನಗೌಡ ಗೌಡಪ್ಪಗೌಡನಿಗೆ ದಿ.16.09.2023 ರಂದು ಶಿಕ್ಷೆ ವಿಧಿಸಿದ್ದಾರೆ.

ಎನ್‌ಡಿಪಿಎಸ್‌ ಕಾಯ್ದೆಯ ಕಲಂ 20(I) 20(ಎ) 25, 8 (ಸಿ) ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ ಹಾಗೂ 25 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

ಲೋಕಾಯುಕ್ತರ ದಾಳಿ, ಬಿಲ್ ಪಾವತಿಸಲು 1. 50 ಲಕ್ಷ ರೂ. ಲಂಚ ಕೇಳಿದ್ದ ಸಿಡಿಪಿಒ, ಸಿಬ್ಬಂದಿ ಬಲೆಗೆ

0

ಡಾಬಾವೊಂದರಲ್ಲಿ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತರ ದಾಳಿ……

ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ

ಅಂಗನವಾಡಿಗಳಿಗೆ ಆಹಾರ ಪೂರೈಸಿದ್ದ ಬಿಲ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಗಜೇಂದ್ರಗಡ ಸಿಡಿಪಿಒ ಹಾಗೂ ಕಚೇರಿ ಸಿಬ್ಬಂದಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ರೋಣ ತಾಲೂಕಿನ ಸಿಡಿಪಿಒ ಬಸಮ್ಮ ಹೂಲಿ ಎಂಬುವರು ತಮ್ಮ ಸಿಬ್ಬಂದಿ ಜಗದೀಶ್ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.

ಗಜೇಂದ್ರಗಡದ ಡಾಬಾವೊಂದರಲ್ಲಿ 1ಲಕ್ಷ 50 ಸಾವಿರ ರೂ. ಗಳನ್ನು ಗುತ್ತಿಗೆದಾರನಿಂದ ಹಣ ಪಡೆಯುವಾಗ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಕಳೆದ ವರ್ಷ ರೋಣ ತಾಲೂಕಿನ ಅಂಗನವಾಡಿಗಳಿಗೆ ಆಹಾರ ಪೂರೈಕೆ ಮಾಡಿದ್ದ ಅನಿಲ ಎಂಬ ಗುತ್ತಿಗೆದಾರರ 42 ಲಕ್ಷ ರೂ. ಬಿಲ್ ಪಾವತಿಸಲು ಸಿಡಿಪಿಒ ಬಸಮ್ಮ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಶನಿವಾರ ಮಧ್ಯಾಹ್ನ ಗಜೇಂದ್ರಗಡದ ಡಾಬಾವೊಂದರಲ್ಲಿ ಲಂಚದ ಹಣ ಪಡೆಯುತ್ತಿದ್ದ ಸಿಬ್ಬಂದಿ ಜಗದೀಶ್ ಎಂಬಾತನನ್ನು ಡ್ರಾಪ್ ಮಾಡಲಾಗಿದೆ.

ಗದಗ ಜಿಲ್ಲೆಯ ಲೋಕಾಯುಕ್ತರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಸದ್ಯ ಸಿಡಿಪಿಒ ಹಾಗೂ ಸಿಬ್ಬಂದಿ ಇಬ್ಬರನ್ನು ಹೆಚ್ಚಿನ ಮಾಹಿತಿ ಕಲೆ ಹಾಕಲು ರೋಣ ಪಟ್ಟಣಕ್ಕೆ ಕರೆದೊಯ್ಯಲಾಗಿದೆ.

ವಿದ್ಯುತ್ ಕಂಬಕ್ಕೆ ದ್ವಿಚಕ್ರ ವಾಹನ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಮತ್ತೊಬ್ಬ ಯುವಕನಿಗೆ ಗಂಭೀರ ಗಾಯ

0

ಬಸವೇಶ್ವರ ಜಾತ್ರೆಗೆ ಡ್ರೆಸ್ ತರಲು ಹೋಗಿದ್ದಾಗ ಘಟನೆ…

ವಿಜಯಸಾಕ್ಷಿ ಸುದ್ದಿ, ನರಗುಂದ

ದ್ವಿಚಕ್ರ ವಾಹನವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.

ಗದಗ ರಸ್ತೆಯ ಕುರ್ಲಗೇರಿ ಗ್ರಾಮದ ಬಳಿ ನಡೆದ ಈ ಘಟನೆಯಿಂದಾಗಿ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸುರೇಶ್ (26) ಎಂಬಾತ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸವಾರ ಸಂತೋಷ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ರವಾನೆ ಮಾಡಲಾಗಿದೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ಶ್ರಾವಣ ಮಾಸದ ಕಡೆ ಸೋಮವಾರ ಬಸವೇಶ್ವರ ಜಾತ್ರೆ ಇತ್ತು. ಹೀಗಾಗಿ ನರಗುಂದ ಪಟ್ಟಣಕ್ಕೆ ಡ್ರೆಸ್ ತರಲು ಹೋಗಿದ್ದರು ಎಂದು ಎನ್ನಲಾಗಿದೆ.

ಡ್ರೆಸ್ ಖರೀದಿಸಿ ವಾಪಾಸು ಗ್ರಾಮಕ್ಕೆ ಬರುವಾಗ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಜರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ತೋಳಗಳ ದಾಳಿ; 20ಕ್ಕೂ ಹೆಚ್ಚು ಕುರಿಮರಿಗಳ ಸಾವು

0

ಕುರಿಗಾಯಿಗಳ ಆಕ್ರಂಧನ……

ವಿಜಯಸಾಕ್ಷಿ ಸುದ್ದಿ, ನರಗುಂದ

ತೋಳಗಳ ದಾಳಿಗೆ 20 ಕ್ಕೂ ಹೆಚ್ಚು ಕುರಿಯ ಮರಿಗಳು ಸಾವನ್ನಪ್ಪಿದ ಘಟನೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ.

ಹಿರೇಕೊಪ್ಪ ಗ್ರಾಮದ ಮಹಾದೇವಪ್ಪ ಬಾಳಣ್ಣವರ ಎಂಬ ಕುರಿಗಾಯಿಗೆ ಸೇರಿದ ಕುರಿಮರಿಗಳು ಸಾವನ್ನಪ್ಪಿವೆ. ಕುರಿಗಳ ದಡ್ಡಿಯ ಮೇಲೆ ಯಾರು ಇಲ್ಲದ ಸಮಯದಲ್ಲಿ ತೋಳಗಳು ದಾಳಿ ಮಾಡಿ ಕುರಿ ಮರಿಗಳ ತಿಂದು ಹಾಕಿವೆ.

ಇದರಿಂದಾಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದ್ದು,
ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕುರಿ ಮರಿಗಳನ್ನು ಸಾಕಿದ್ದ ಕುರಿಗಾಯಿ ಕುಟುಂಬ ಕಣ್ಣೀರು ಹಾಕುತ್ತಿದೆ. ಸ್ಥಳಕ್ಕೆ ಪಶು ವೈದ್ಯರು ಹಾಗೂ ನರಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೀಗ ಮುರಿದು ನಗದು ಸೇರಿ ಲಕ್ಷಾಂತರ ರೂ. ಚಿನ್ನಾಭರಣ ಲೂಟಿ

0

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಬೀಗ ಮುರಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ನಗದು ಸೇರಿದಂತೆ ಲಕ್ಷಾಂತರ ರೂ.ಗಳ ಚಿನ್ನಾಭರಣ ದೋಚಿಕೊಂಡು ಹೋದ ಘಟನೆ ನಡೆದಿದೆ.

ಹುಬ್ಬಳ್ಳಿ ರಸ್ತೆಯ ಹ್ಯುಂಡೈ ಶೋ ರೂಂ ಬಳಿಯ ನಿವಾಸಿ ಉದ್ಯಮಿ ವಿಜಯಕುಮಾರ್ ವಿಷ್ಣುಸಾ ಶಿದ್ಲಿಂಗ್ ಎಂಬುವರ ಮನೆಯೆ ಕಳ್ಳತನವಾಗಿದ್ದು, ಸೆ.03 ರ ಮುಂಜಾನೆಯಿಂದ 4 ತಾರೀಖಿನ ಮುಂಜಾನೆ 9ಗಂಟೆ‌ ನಡುವಿನ ಅವಧಿಯಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ.

ಇದನ್ನೂ ಓದಿ ಮದುವೆ ಮುಗಿಸಿಕೊಂಡು ಬರುವಾಗ ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಯಾರೋ ದುಷ್ಕರ್ಮಿಗಳು, ಮನೆಯ ಬೀಗ ಮುರಿದು ಮನೆ ಒಳಗೆ ಹೋಗಿ ಟ್ರಝರಿಯಲ್ಲಿಟ್ಟಿದ್ದ ನಗದು 2ಲಕ್ಷ 16 ಸಾವಿರದ 500 ರೂ.ಗಳು, ಹಾಗೂ 50 ಸಾವಿರ ರೂ. ಮೌಲ್ಯದ 9 ಗ್ರಾಮ ತೂಕದ ಬಂಗಾರದ ಆಭರಣಗಳು, 33ಸಾವಿರದ 300ರೂ.ಗಳ 395 ಗ್ರಾಮ ತೂಕದ ಬೆಳ್ಳಿ ಆಭರಣಗಳು ಸೇರಿದಂತೆ ಒಟ್ಟು 2ಲಕ್ಷ 99ಸಾವಿರದ 800ರೂ.ಗಳಷ್ಟು ವಸ್ತುಗಳು ಕಳ್ಳತನವಾಗಿವೆ.

ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 0258/2023- IPC 1860(U/s-454,457,380) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹಾಡಹಗಲೆ ಮನೆ ಕಳ್ಳತನ; ಸಾವಿರಾರು ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು….

0

ಆತಂಕದಲ್ಲಿ ಗ್ರಾಮಸ್ಥರು….

ವಿಜಯಸಾಕ್ಷಿ ಸುದ್ದಿ, ನರೇಗಲ್ಲ

ಮನೆಗೆ ಹಾಕಿದ್ದ ಚಿಲಕ ತಗೆದು ಒಳಹೊಕ್ಕ ಖದೀಮರು, ಅಡುಗೆ ಮನೆಯಲ್ಲಿದ್ದ ಟ್ರಝರಿಯಲ್ಲಿದ್ದ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಹಾಡಹಗಲೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಮೀಪದ ಬೂದಿಹಾಳ ಗ್ರಾಮದ ರೈತ ಬಸನಗೌಡ ಪಾಟೀಲ ಅವರ ಮನೆಯ ಹಗಲು ಹೊತ್ತಿನಲ್ಲಿ ಕಳ್ಳತನವಾಗಿದೆ.

ಪಾಟೀಲ ದಂಪತಿ ಜಮೀನಿಗೆ ಹೋದಾಗ, ಮಕ್ಕಳು ‌ಹಾಗೂ ತಾಯಿ ಮನೆಗೆ ಚಿಲಕ ಹಾಕಿ ಹೊರ ಹೋದಾಗ ಖದೀಮರು ಹೊಂಚು ಹಾಕಿ ಈ ದುಷ್ಕೃತ್ಯ ನಡೆಸಿದ್ದಾರೆ.

ದುಷ್ಕರ್ಮಿಗಳು, ಅಡುಗೆ ಮನೆಯ ಟ್ರಝರಿಯಲ್ಲಿ ಇಟ್ಟಿದ್ದ 50 ಸಾವಿರ ರೂ. ಮೌಲ್ಯದ ಎರಡೂವರೆ ತೊಲಿ ಬಂಗಾರದ ಚೈನು ಹಾಗೂ 8 ಸಾವಿರ ರೂ. ಮೌಲ್ಯದ 4 ಗ್ರಾಮ ತೂಕದ ಬೆಂಡವಾಲೆಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ 0060/2023-ipc 1860(U/s-454,380 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!