ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ (59) ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಪಾವಗಡದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲೇ, ಸಿಬ್ಬಂದಿ ತೆರಳಿದ ಬಳಿಕ ಮಲ್ಲಿಕಾರ್ಜುನ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ.
ಸಾವಿಗೆ ಮುನ್ನ ಮಲ್ಲಿಕಾರ್ಜುನ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಅದರಲ್ಲಿ ಅವರು ಜಂಟಿ ನಿರ್ದೇಶಕ ಕೃಷ್ಣಪ್ಪ ನೀಡಿದ ಕಿರುಕುಳವೇ ತಮ್ಮ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿದ್ದಾರೆ. “ನನ್ನ ತಾಯಿ, ಪತ್ನಿ ಮತ್ತು ಮಕ್ಕಳು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆದರೆ ಮೇಲಾಧಿಕಾರಿಯಿಂದಾದ ಕಿರುಕುಳದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಇನ್ನೂ, ಕೃಷ್ಣಪ್ಪ ಅವರಿಗೆ ದೇವರು ಮತ್ತು ಕಾನೂನು ತಕ್ಕ ಶಿಕ್ಷೆ ನೀಡಲಿದೆ ಎಂಬುದನ್ನೂ ಅವರು ಹೇಳಿದ್ದಾರೆ.
ಘಟನಾ ಸ್ಥಳದಲ್ಲಿ ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡಿದ್ದು, ಅದರಲ್ಲಿ ಕೃಷ್ಣಪ್ಪ ಮತ್ತು ಹಣಕಾಸು ಸಂಬಂಧಿತ ವಿಚಾರಗಳ ಉಲ್ಲೇಖ ಇರುವುದಾಗಿ ತಿಳಿದುಬಂದಿದೆ.
ಮಲ್ಲಿಕಾರ್ಜುನ ಮೂಲತಃ ಪಾವಗಡ ತಾಲೂಕಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇನ್ನೂ ಕೆಲವೇ ದಿನಗಳಲ್ಲಿ ಅವರು ನಿವೃತ್ತಿಯಾಗಬೇಕಾಗಿತ್ತು ಎನ್ನಲಾಗಿದೆ.
ಪ್ರಕರಣದ ಕುರಿತು ಪಾವಗಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಮುಂದುವರಿಸಿದ್ದಾರೆ.

