Home Blog

ದೇಶದ ಸುರಕ್ಷತೆಗೆ ಎಲ್ಲರೂ ಬದ್ಧರಾಗಿ : ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ,ನರೇಗಲ್ಲ : ಪ್ರಧಾನಿ ಮೋದಿ ಭ್ರಷ್ಟಾಚಾರಿಗಳಿಗೆ, ಭಯೋತ್ಪಾದಕರಿಗೆ ನಿಜಕ್ಕೂ ಶನಿಯಾಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ 11ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕತೆಯನ್ನು 5ನೇ ಸ್ಥಾನಕ್ಕೆ ತಂದು ನಿಲ್ಲಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ದೇಶವನ್ನು ಮುನ್ನಡೆಸಲು ಸಮರ್ಥ ನಾಯಕರೊಬ್ಬರು ಬೇಕು. ಕಳೆದ ಹತ್ತು ವರ್ಷಗಳಲ್ಲಿ ಇಡೀ ಜಗತ್ತೇ ಭಾರತೆದೆಡೆಗೆ ತಿರುಗಿ ನೋಡುವಂತೆ ಮಾಡಿರುವ ಮೋದಿ ಅಂತಹ ಸಮರ್ಥ ನಾಯಕರಾಗಿದ್ದಾರೆ. ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಿ ದೇಶದ ಸುರಕ್ಷತೆಗೆ ತಾವೆಲ್ಲರೂ ಬದ್ಧರಾಗಲು ಬಿಜೆಪಿಯನ್ನು ಬೆಂಬಲಿಸಬೇಕೆಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಪಟ್ಟಣದ ಕೊಂತಿ ಮಲ್ಲಪ್ಪನ ಎದುರಿಗಿನ ಮಾಜಿ ಗೌಡರ ಬಯಲಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜನಾಂಗಗಳ ನಡುವೆ ಬೆಂಕಿ ಹಚ್ಚಿ ತಮ್ಮ ರೊಟ್ಟಿ ಸುಟ್ಟುಕೊಳ್ಳುವ ಕಾಂಗ್ರೆಸ್ಸಿಗರ ಆಟ ಈ ಚುನಾವಣೆಯಲ್ಲಿ ಏನೂ ನಡೆಯದು. ಕ್ಷೇತ್ರದಲ್ಲಿ ಎಲ್ಲ ಕಡೆಗಳಲ್ಲಿಯೂ ಬಿಜೆಪಿಗೆ ಸ್ಪಷ್ಟ ಬಹುಮತ ಎದ್ದು ಕಾಣುತ್ತಿದೆ. ಅಲ್ಲದೆ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ರಾಜ್ಯದ ಎಲ್ಲ 28 ಕ್ಷೇತ್ರಗಳಲ್ಲಿಯೂ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಬೊಮ್ಮಾಯಿ ಭವಿಷ್ಯ ನುಡಿದರು.

ವೇದಿಕೆಯ ಮೇಲೆ ಮಾಜಿ ಸಚಿವ ಕೆ.ಜಿ. ಬಂಡಿ, ಕುಷ್ಟಗಿಯ ಶಾಸಕ ದೊಡ್ಡನಗೌಡ ಪಾಟೀಲ, ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ, ನ್ಯಾಯವಾದಿ ಎಂ.ಬಿ. ಸಜ್ಜನರ, ಜಿ.ಬಿ. ಪಾಟೀಲ, ಅಶೋಕ ನವಲಗುಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಎಫ್. ಮುಧೋಳ, ರೋಣ ಮಂಡಳ ಬಿಜೆಪಿ ಅಧ್ಯಕ್ಷ ಮುತ್ತಣ್ಣ ಕಡಗದ, ರುದ್ರಣ್ಣ ಗುಳಗುಳಿ, ಸ್ಥಳೀಯ ಮುಖಂಡರಾದ ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ಬಸವರಾಜ ಕೊಟಗಿ, ಆರ್.ಜಿ. ಪಾಟೀಲ, ಬಸನಗೌಡ ಪೊಲೀಸ್‌ಪಾಟೀಲ, ಪ್ರಕಾಶ ಹಕ್ಕಿ, ಮಹೇಶ ಶಿವಶಿಂಪ್ರ, ರಾಜಶೇಖರಗೌಡ ಪಾಟೀಲ ಮುಂತಾದವರಿದ್ದರು.

 

ರಾಜ್ಯ ಸರ್ಕಾರದಿಂದ ಉದಾಸೀನ ಧೋರಣೆ : ಕಳಕಪ್ಪ ಬಂಡಿ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರಕಾರ ನಡೆದುಕೊಂಡ ಉದಾಸೀನ ಧೋರಣೆ ಎಲ್ಲರಿಗೂ ನೋವು ತರಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪ ಸಂಖ್ಯಾತರನ್ನೆಲ್ಲ ದೇಶ ಬಿಟ್ಟು ಕಳಿಸಲಾಗುತ್ತಿದೆ ಎನ್ನುವ ಪುಕಾರನ್ನು ಕಾಂಗ್ರೆಸ್ ಹಬ್ಬಿಸುತ್ತಿದೆ. ಅಲ್ಪ ಸಂಖ್ಯಾತರಿಗೆ ಬದುಕಿ ಬಾಳಲು ಅತ್ಯಂತ ಸುರಕ್ಷಿತ ದೇಶವೆಂದರೆ ಅದು ಭಾರತ ಮಾತ್ರ. ನೀವೇನಾದರೂ ಕಾಂಗ್ರೆಸ್‌ನ ಗ್ಯಾರಂಟಿಗಳಿಗೆ ಮತ ನೀಡಲು ಮುಂದಾದರೆ ನಿಮಗೆ ಸಂಕಷ್ಟಗಳು ಕಟ್ಟಿಟ್ಟ ಬುತ್ತಿ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಆರೋಪಿಸಿದರು.

ಬುಧವಾರ ನರೇಗಲ್ಲದಲ್ಲಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜೆಡಿಎಸ್ ನಾಯಕ ಬಂಡೆಪ್ಪ ಕಾಶೆಂಪೂರ ಮಾತನಾಡಿ, ಅಕ್ಷಯ ಪಾತ್ರೆ ನೀಡಿರುವ ಮೋದಿಯವರ ಬಗ್ಗೆ ಕಾಂಗ್ರೆಸ್‌ನವರು ಚೊಂಬು ನೀಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಈ ಹುರುಳಿಲ್ಲದ ಆರೋಪದಿಂದ ಅವರ ಕೈಗೆ ಚೊಂಬು ಸಿಗಲಿದೆ. ಹಾಗಾಗಲು ನೀವೆಲ್ಲರೂ ಸ್ವಯಂ ಪ್ರೇರಣೆಯಿಂದ ಬೊಮ್ಮಾಯಿಯವರಿಗೆ ಮತದಾನ ಮಾಡಬೇಕೆಂದರು.

ಕಾಂಗ್ರೆಸ್ ಸರಕಾರ ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದುದ ಗ್ಯಾರಂಟಿಯೂ ರೈತರ ಬಗ್ಗೆ ಇಲ್ಲದಿರುವುದು ಇದು ರೈತ ವಿರೋಧಿ ಸರಕಾರ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಲೋಕಸಭಾ ಚುನಾವಣೆಯ ನಂತರ ಈ ಸರಕಾರ ಬಹಳಷ್ಟು ದಿನಗಳು ಬಾಳುವುದಿಲ್ಲ. ನೀವು ಮತ್ತೆ ಶಾಸಕರಾಗಲು ಸಿದ್ಧರಾಗಿ ಎಂದು ಬಂಡಿಯವರಿಗೆ ಕಾಶೆಂಪೂರ ಸಲಹೆ ನೀಡಿದರು.

ಸಭೆಯನ್ನುದ್ದೇಶಿಸಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ, ಮುಖಂಡರಾದ ಉಮೇಶ ಸಂಗನಾಳಮಠ, ಶಶಿಧರ ಸಂಕನಗೌಡ್ರ, ನ್ಯಾಯವಾದಿ ಎಂ.ಬಿ. ಸಜ್ಜನರ, ಮುತ್ತಣ್ಣ ಕಡಗದ ಮಾತನಾಡಿದರು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಕಳಕಪ್ಪ ಬಂಡಿ, ಜಿ.ಬಿ. ಪಾಟೀಲ, ಅಶೋಕ ನವಲಗುಂದ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಎಫ್. ಮುಧೋಳ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸೋಣ : ವಿನಯ್ ಕುಲಕರ್ಣಿ

ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಸಮಾಜವು ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ನಾನೇ ಸಾಕ್ಷಿ. ನನ್ನನು ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷನನ್ನಾಗಿ ಮಾಡಿದೆ. ಉನ್ನತ ಹುದ್ದೆ ನೀಡಿ ನಮ್ಮ ಸಮಾಜಕ್ಕೆ ಶಕ್ತಿ ತುಂಬಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶಕ್ತಿ ತುಂಬೊಣ. ನಿಮ್ಮ ಹಿಂದೆ ನಾನು ಯಾವಾಗಲೂ ಇರುತ್ತೇನೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಬೆಂಬಲಿತ ಪಂಚಮಸಾಲಿ ಸಮಾಜದ ವತಿಯಿಂದ ಗುರುವಾರ ಗದಗ ನಗರದ ಎಪಿಎಮ್‌ಸಿಯಲ್ಲಿ ಸಿದ್ದನಗೌಡ ಪಾಟೀಲರ ವಕಾರದಲ್ಲಿ ಹಮ್ಮಿಕೊಂಡಿದ್ದ ಸಮಾಜ ಬಾಂಧವರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅನಿಲಕುಮಾರ ಪಾಟೀಲ್ ಪ್ರಾಸ್ತವಿಕವಾಗಿ ಮಾತನಾಡಿ, ನಮ್ಮ ಸಮಾಜವು ಗದಗ ಜಿಲ್ಲೆಯಲ್ಲಿ ಯಾವಾಗಲೂ ಕಾಂಗ್ರೆಸ್ ಪಕ್ಷದ ಪರವಾಗಿ ಇದೆ ಅನ್ನುವುದಕ್ಕೆ ಈ ಸಭೆಯೇ ಸಾಕ್ಷಿಯಾಗಿದೆ. ನಾವೆಲ್ಲರೂ ಸೇರಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಗೆಲ್ಲುವಿನಲ್ಲಿ ಸಕ್ರಿಯವಾಗಿ ದುಡಿಯೋಣ ಎಂದರು.

ಕಾರ್ಯಕ್ರಮದಲ್ಲಿ ಏಅಅ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲಗುಡಿ, ಬಸವರಾಜ್ ಮನಗುಂಡಿ, ಚೆನ್ನವೀರ ಮಳಗಿ, ಸಿ.ಕೆ. ಮಾಳಶೆಟ್ಟಿ, ಕೊಟ್ರಗೌಡ ಪಾಟೀಲ, ಬಸವರಾಜ್ ದೇಸಾಯಿ, ಎಸ್.ವಿ. ಕೋಟಗಿ, ಮೋಹನ್ ಕಮತರ, ಕಿರಣ್ ಕಮತರ, ಶರಣಪ್ಪ ಗೋಳಗೊಳಕಿ, ಶರಣು ಬೋಳನವರ, ಲಲಿತಾ ಗೋಳಗೊಳಕಿ, ರುದ್ರಮ್ಮ ಕೆರಕಲಮಟ್ಟಿ, ಲಕ್ಷ್ಮಿ ದ್ಯಾಪನಗೌಡ್ರು, ಶಿವಪ್ಪ ಮುಳುಗುಂದ, ಬುದಪ್ಪ ಅಂಗಡಿ, ಅಶೋಕ್ ಶಿರಹಟ್ಟಿ, ಮುತ್ತು ಮುಳವಾಡ, ರಮೇಶ ರೋಣದ, ಸಂತೋಷ್ ಗುಡ್ಡದ, ಸಂಗಮೇಶ್ ಕವಳಿಕಾಯಿ ಮುಂತಾದವರಿದ್ದರು.

ಮುಂಡರಗಿ ತಾಲೂಕಿನ ಹಿರಿಯರಾದ ಕೊಟ್ರಗೌಡ ಪಾಟೀಲ್ ಮಾತನಾಡಿ, ಬರುವ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸನ್ನದ್ಧರಾಗೋಣ ಎಂದರು.ವಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ನೀಲಮ್ಮ ಬೋಳನವರ ಮಾತನಾಡಿ, ಕಾಂಗ್ರೆಸ್ ಪಕ್ಷವು ನಮ್ಮ ಸಮಾಜದ ಮಹಿಳೆಯರಿಗೆ ಹಲವಾರು ಅವಕಾಶಗಳನ್ನು ನೀಡಿದೆ. ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.

ಬರ ನಿರ್ವಹಣೆಯಲ್ಲಿ ನಿಷ್ಕಾಳಜಿ ಬೇಡ : ಬಿ. ಜಗದೇವ

ವಿಜಯಸಾಕ್ಷಿ ಸುದಿ,ಲಕ್ಷ್ಮೇಶ್ವರ : ಈ ಬಾರಿ ತಾಲೂಕು ವ್ಯಾಪ್ತಿಯಲ್ಲಿ ಬರಗಾಲವಿದ್ದು, ಮಳೆ ಕೊರತೆ ಉಂಟಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ಮತ್ತು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಬಿ. ಜಗದೇವ ಹೇಳಿದರು.

sabhe

ಅವರು ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಡೆದ ಬರ ನಿರ್ವಹಣೆ ಸಭೆಯಲ್ಲಿ ಮಾತನಾಡಿ, ಬರ ನಿರ್ವಹಣೆ ಬಗ್ಗೆ ನಿಷ್ಕಾಳಜಿ ವಹಿಸದೆ ಎಲ್ಲ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ನಿಗದಿತ ಸಮಯದಲ್ಲಿ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಮೇ ಮತ್ತು ಜೂನ್ ತಿಂಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಪೂರ್ವ ನಿಯೋಜಿತ ರೂಪುರೇಷೆಯನ್ನು ತಯಾರಿಸುವಂತೆ ಸೂಚನೆ ನೀಡಲಾಗಿದೆ. ಖಾಸಗಿ ಬೋರ್‌ವೆಲ್ ಮೂಲಕ ನೀರು ಒದಗಿಸಲು ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರಿನ ಘಟಕ ಚಾಲನೆಯಲ್ಲಿರುವಂತೆ ನೋಡಿಕೊಳ್ಳಲು ಸೂಚಿಸಿದರು.

ಮೇ 7ರಂದು ನಡೆಯುವ ಲೋಕಸಭಾ ಚುನಾವಣೆಗೆ ಮತದಾನ ದಿನಾಂಕ ನಿಗದಿಪಡಿಸಲಾಗಿದೆ. ಆದ್ದರಿಂದ ಮತಗಟ್ಟೆಗಳಲ್ಲಿ ನೀರಿನ ಸಂಪರ್ಕ, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ತಿಳಿಸಿದರು. ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಮಳೆ, ಗಾಳಿ, ಗುಡುಗು, ಸಿಡಿಲು ಹಾಗೂ ಪ್ರಕೃತಿ ವಿಕೋಪದಿಂದ ಉಂಟಾಗುವ ಪ್ರಾಣಹಾನಿ ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಂತೆ ತಿಳಿಸಿದರು. ಮನೆಗಳಲ್ಲಿ ಮತದಾನ ಪ್ರಕ್ರಿಯೆ ಶುಕ್ರವಾರದಿಂದ ಆರಂಭವಾಗಲಿದೆ. ಸಂಬಂಧಿಸಿದ ಸಿಬ್ಬಂದಿಗೆ ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.

ಪುರಸಭೆ ಮುಖ್ಯಾದಿಕಾರಿ ಮಹೇಶ ಹಡಪದ, ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು, ತೋಟಗಾರಿಕೆ, ಪಶುಪಾಲನೆ, ಅರಣ್ಯ ಮತ್ತು ಕುಡಿಯುವ ನೀರು ಪೂರೈಕೆ ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.

ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಮಾತನಾಡಿ, ಮುಂದಿನ ಕೆಲ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಖಾಸಗಿ ಬೊರ್‌ವೆಲ್ ಮಾಲೀಕರೊಂದಿಗೆ ಸಭೆ ಮಾಡಿ ಒಪ್ಪಂದ ಪತ್ರಗಳನ್ನು ಮಾಡಿಕೊಳ್ಳಬೇಕು. ಮುಂದಿನ ಸಭೆಗೆ ಆಗಮಿಸುವಾಗ ಅದರ ಪ್ರತಿಗಳನ್ನು ತರಬೇಕು ಎಂದು ಸೂಚಿಸಿದರು.

 

ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ನಗರಸಭೆ ಅಧಿಕಾರಿಗಳು ವಶಕ್ಕೆ

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಹಾತಲಗೇರಿ ನಾಕಾ ಹತ್ತಿರದ ವಾಣಿಜ್ಯ ಮಳಿಗೆಗಳಿಂದ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಅಂದಾಜು 200 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ನಗರಸಭೆ ಅಧಿಕಾರಿಗಳು ವಶಪಡಿಸಿಕೊಂಡರು.

ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಆನಂದ್ ಬದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಾಯಕ ಪರಿಸರ ಅಧಿಕಾರಿ ವಿಕಾಸ್ ಹಾಗೂ ನಗರಸಭೆಯ ಅಧಿಕಾರಿಗಳು ಹಾಜರಿದ್ದರು.

ಸಿದ್ಧಲಿಂಗ ಶ್ರೀಗಳು ಚಿರಸ್ಥಾಯಿಯಾಗಿದ್ದಾರೆ : ಬಸವರಾಜ ಹೊರಟ್ಟಿ

0

ವಿಜಯಸಾಕ್ಷಿ ಸುದ್ದಿ, ಗದಗ : ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನ್ನ ಕಾರ್ಯಗಳಿಗೆ ಪ್ರೇರಣೆಯಾಗಿದ್ದರು. ಈ ರಾಜ್ಯದಲ್ಲಿ ಜಾತ್ಯಾತೀತ ಪರಂಪರೆಯನ್ನು ಹೆಮ್ಮರವಾಗಿ ಬೆಳೆಸಿದ ಕೀರ್ತಿ ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನುಡಿದರು.

ಅವರು ನಗರದ ತೋಂಟದಾರ್ಯ ಮಠದ ಜಾತ್ರಾ ಮಹಾರಥೋತ್ಸವದ ನಂತರ ಜರುಗಿದ ವೇದಿಕೆ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿ ಮಾತನಾಡಿದರು.

ಅನೇಕ ಜನರು ಬದುಕಿದರೂ ಸತ್ತಂತಿರುತ್ತಾರೆ. ಆದರೆ ಕೆಲವೇ ಮಹಾತ್ಮರು ಸಿದ್ಧಲಿಂಗ ಮಹಾಸ್ವಾಮಿಗಳಂತೆ ಅಗಲಿಕೆಯ ನಂತರವೂ ತಮ್ಮ ಕೈಂಕರ್ಯಗಳ ಮೂಲಕ ಚಿರಸ್ಥಾಯಿಯಾಗಿರುತ್ತಾರೆ. ನನ್ನ ನಾಲ್ಕು ದಶಕಗಳ ಸಾರ್ವಜನಿಕ ಜೀವನದಲ್ಲಿ ಸಹಾಯ ಕೇಳಿಕೊಂಡು ಬಂದ ಅಸಂಖ್ಯ ಜನರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ದೇವರು ಹಾಗೂ ನನ್ನ ಶಿಕ್ಷಕ ಸಮೂಹ ಕೊಟ್ಟ ಅಧಿಕಾರವನ್ನು ಜನಸೇವೆಗೆ ಬಳಸಿದ್ದೇನೆ.

ನನ್ನನ್ನು ಸತತವಾಗಿ ಎಂಟು ಬಾರಿ ವಿಧಾನ ಪರಿಷತ್ತಿಗೆ ಆರಿಸಿ ಕಳುಹಿಸಿದ ಶಿಕ್ಷಕ ಸಮೂಹಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ ತೃಪ್ತಿ ನನಗಿದೆ ಎಂದರು.

ಡಾ.ಎಂ.ಎಂ ಕಲಬುರ್ಗಿ ಅಧ್ಯಯನ ಸಂಸ್ಥೆಯಿಂದ ಪ್ರಕಟಗೊಂಡ ಬಸವರಾಜ ಹೊರಟ್ಟಿಯವರ ಅಭಿನಂದನ ಗ್ರಂಥಗಳಾದ `ಮೈಲುಗಲ್ಲುಗಳೇ ಮಾತನಾಡುತ್ತವೆ’ ಹಾಗೂ `ದಿಟ್ಟ ಹೆಜ್ಜೆ’ ಗ್ರಂಥಗಳು ಲೋಕಾರ್ಪಣೆಗೊಂಡವು.

`ಮೈಲುಗಲ್ಲುಗಳೇ ಮಾತನಾಡುತ್ತವೆ’ ಗ್ರಂಥದ ಸಂಪಾದಕ ಡಾ.ಸಂಗಮನಾಥ ಲೋಕಾಪೂರ ಮಾತನಾಡಿ, ಶಿಕ್ಷಕರ ಸುಪುತ್ರರಾಗಿ, ಸ್ವತಃ ಶಿಕ್ಷಕರಾಗಿ ಹಾಗೂ ಶಿಕ್ಷಕರ ಪ್ರತಿನಿಧಿಯಾಗಿ ಸತತ ಎಂಟು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ದಾಖಲೆ ನಿರ್ಮಿಸಿದ ಬಸವರಾಜ ಹೊರಟ್ಟಿಯವರು ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಸರಾಗಿದ್ದಾರೆ. ಆತ್ಮಪ್ರಶಂಸೆ ಮಾಡಿಕೊಳ್ಳುವ ಗುಣ ಅವರಲ್ಲಿ ಇಲ್ಲವಾದ್ದರಿಂದ ಹೊರಟ್ಟಿಯವರು ಮಾಡಿದ ಪರೋಪಕಾರಗಳು ದಾಖಲೆಯಾಗಿ ಉಳಿಯಲಿ ಎನ್ನುವ ಕಾರಣಕ್ಕೆ ಅವರ ಅಭಿಮಾನಿಗಳು ನಾವು ಸೇರಿಕೊಂಡು `ಮೈಲುಗಲ್ಲುಗಳೇ ಮಾತನಾಡುತ್ತವೆ’ ಎಂಬ ಗ್ರಂಥ ತಯಾರು ಮಾಡಿದೆವು ಎಂದರು.

ಸಿದ್ಧಯ್ಯನಕೋಟೆಯ ವಿಜಯಮಹಾಂತ ಶಾಖಾಮಠದ ಪೂಜ್ಯ ಶ್ರೀ ಬಸವಲಿಂಗ ಮಹಾಸ್ವಾಮಿಗಳನ್ನು ಪೀಠಾರೋಹಣದ ನಿಮಿತ್ಯ ಸಂಮಾನಿಸಲಾಯಿತು. ಪಂ.ಕುಮಾರ ಮರಡೂರ ಅವರಿಂದ ವಚನ ಸಂಗೀತ, ನಾಗರತ್ನ ಹಡಗಲಿ ಋತಿಕಾ ನೃತ್ಯ ನಿಕೇತನ ತಂಡದವರಿಂದ ವಚನ ನೃತ್ಯರೂಪಕ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿದ್ದರು. ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸೊನ್ನ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ. ಕೆ.ಎಚ್. ಬೇಲೂರ ಸ್ವಾಗತಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ.ಎಸ್.ಎಸ್. ಪಟ್ಟಣಶೆಟ್ಟರ, ಡಾ.ಬಸವರಾಜ ಧಾರವಾಡ ಮುಂತಾದವರಿದ್ದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್ ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರಾದ ಡಿ.ಆರ್. ಪಾಟೀಲ ಮಾತನಾಡಿ, ಹೊರಟ್ಟಿಯವರ ಸೇವಾಕಾರ್ಯಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಶಿಕ್ಷಕರೇ ಅವರ ಶ್ರೀರಕ್ಷೆಯಾಗಿದ್ದು, ಅವರ ಹಿತಕ್ಕಾಗಿ ಅನೇಕ ಸರ್ಕಾರಿ ನೀತಿ-ನಿಯಮಗಳನ್ನು ಪಟ್ಟು ಹಿಡಿದು ಹೊರಟ್ಟಿಯವರು ಪರಿಷ್ಕರಿಸಿದ್ದಾರೆ. ಹೊರಟ್ಟಿಯವರಂತೆ ಕಟಿಬದ್ಧರಾಗಿ ಕೆಲಸ ಮಾಡುವ ಮನೋಭಾವ ಇಂದಿನ ಶಾಸಕರಿಗೆ ಅವಶ್ಯವಿದ್ದು, ಇದಕ್ಕಾಗಿ ಹೊರಟ್ಟಿಯವರ ಕುರಿತು ಬಿಡುಗಡೆಯಾದ ಗ್ರಂಥಗಳನ್ನು ಅವರಿಗೆ ಓದಲು ನೀಡಬೇಕು ಎಂದರು.

 

ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಅನನ್ಯ:ಡಾ.ಮಹಾಂತಸ್ವಾಮಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ : ಅನ್ನ, ಅಕ್ಷರ, ದಾಸೋಹಕ್ಕೆ ನಾಡಿನಲ್ಲಿ ಪ್ರಸಿದ್ಧವಾಗಿರುವ ತೋಂಟದಾರ್ಯ ಮಠವು ಸಮಾಜಕ್ಕೆ ಕೊಡುಗೆ ನೀಡಿ ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿ ಗೌರವಿಸುವುದಕ್ಕೆ ಹೆಸರುವಾಸಿಯಾಗಿದೆ ಎಂದು ಜಡೆ ಸಂಸ್ಥಾನಮಠದ ಪೂಜ್ಯ ಡಾ. ಮಹಾಂತ ಮಹಾಸ್ವಾಮಿಗಳು ನುಡಿದರು.

ಅವರು ಬುಧವಾರ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಲಘುರಥೋತ್ಸವ ಕಾರ್ಯಕ್ರಮದಲ್ಲಿ ಗೌರವ ಸಂಮಾನ ಸ್ವೀಕರಿಸಿ ಮಾತನಾಡಿದರು.

ಲಿಂಗೈಕ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ನನಗೆ ಮಾರ್ಗದರ್ಶಕರಾಗಿದ್ದರು. ನಾನು ಪೀಠಾಧಿಕಾರ ವಹಿಸಿಕೊಂಡ ದಿನದಂದು ಜಡೆ ಸಂಸ್ಥಾನಮಠದ ಸಂಪೂರ್ಣ ಇತಿಹಾಸವುಳ್ಳ ಪುಸ್ತಕವೊಂದನ್ನು ನನಗೆ ನೀಡಿ ಅಧ್ಯಯನ ಮಾಡುವಂತೆ ತಿಳಿಸಿದ್ದರು. ಲಿಂಗೈಕ್ಯ ಗುರುಗಳ ಅಧ್ಯಯನಶೀಲತೆ ಹಾಗೂ ಸಾಮಾಜಿಕ ಕಾಳಜಿ ನಮಗೆಲ್ಲರಿಗೂ ಸದಾಕಾಲ ಪ್ರೇರಣೆಯಾಗಿರುತ್ತದೆ ಎಂದರು.

ದೆಹಲಿ ಜಾಟವಾ ಸಮುದಾಯದ ಶ್ರೀಮಠದ ಭಕ್ತರು ಹಾಗೂ ಕಾರ್ಪೋರೇಶನ್ ಅಧಿಕಾರಿಗಳಾದ ರವೀಂದ್ರ ಪ್ರಧಾನ್ ಮಾತನಾಡಿ, ಜಾಟವಾ ಜನಾಂಗ ಮತ್ತು ತೋಂಟದಾರ್ಯ ಮಠಕ್ಕೂ ಇರುವ ಬಾಂಧವ್ಯವವನ್ನು ನೆನೆದರು. ಬೆಳಗಾವಿಯ ಪ್ರೊ.ಶಾಲಿನಿ ದೊಡಮನಿ ರಚಿಸಿದ `ಕರ್ನಾಟಕದ ಗಾಂಧಿ’ ಹರ್ಡೇಕರ ಮಂಜಪ್ಪನವರು ಗ್ರಂಥದ ಹಿಂದಿ ಆವೃತ್ತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಡಾ.ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಸಂಡೂರ, ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು, ಕಲಬುರ್ಗಿ ರೋಜಾ ಹಿರೇಮಠದ ಕೆಂಚಬಸವ ಶಿವಾಚಾರ್ಯಸ್ವಾಮಿಗಳು, ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯಸ್ವಾಮಿಗಳು, ಡಾ.ಮಹಾಂತಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಡಾ.ಅಶೋಕ ಹುಗ್ಗಣ್ಣವರ ವಚನ ಸಂಗೀತ ನೀಡಿದರು. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರೊ.ಕೆ.ಎಚ್ ಬೇಲೂರ ಸ್ವಾಗತಿಸಿದರು. ವೇದಿಕೆ ಮೇಲೆ ಮಾಜಿ ಸಚಿವರಾದ ಎಸ್.ಎಸ್. ಪಾಟೀಲ, ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಮುಂತಾದವರಿದ್ದರು.

ಜಾತ್ರಾ ಸಮಿತಿ ಉಪಾಧ್ಯಕ್ಷ ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಕಾರ್ಯದರ್ಶಿ ಪ್ರವೀಣ ವಾರಕರ, ಸಹ ಕಾರ್ಯದರ್ಶಿಗಳಾದ ಗವಿಸಿದ್ಧಪ್ಪ ಗಾಣಿಗೇರ, ಬರಕತ್ ಅಲಿ ಮುಲ್ಲಾ, ಚಂದ್ರಶೇಖರ ಇಟಗಿ, ಸಂಘಟನಾ ಕಾರ್ಯದರ್ಶಿ ತಿಮ್ಮರಡ್ಡಿ ಕೋನರಡ್ಡಿ, ಕೋಶಾಧ್ಯಕ್ಷ ವಿಶ್ವನಾಥ ಹಳ್ಳಿಕೇರಿ, ಸಹ ಕೋಶಾಧ್ಯಕ್ಷ ಅಜಯ ಮುನವಳ್ಳಿ, ಶ್ರೀಮಠದ ವ್ಯವಸ್ಥಾಪಕರಾದ ಎಂ.ಎಸ್. ಅಂಗಡಿ, ಅಮರೇಶ ಅಂಗಡಿ, ಶೇಖಣ್ಣ ಕಳಸಾಪೂರ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು.

ಜಡೆ ಸಂಸ್ಥಾನಮಠದ ಕುಮಾರ ಕೆಂಪಿನ ಸಿದ್ಧವೃಷಭೇಂದ್ರ ಮಹಾಸ್ವಾಮಿಗಳು ಮಾತನಾಡಿ, ಕರ್ನಾಟಕ ರಾಜ್ಯ ಇಂದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಧಾರ್ಮಿಕವಾಗಿ ಉನ್ನತ ಮಟ್ಟಕ್ಕೆ ತಲುಪಿದ್ದರೆ ಅದರ ಹಿಂದೆ ಮಠ-ಮಾನ್ಯಗಳ ಕೊಡುಗೆ ಸಾಕಷ್ಟಿದ್ದು, ತೋಂಟದಾರ್ಯ ಮಠ ಈ ಸಾಲಿನಲ್ಲಿ ಅಗ್ರಗಣ್ಯ ಸಾಲಿನಲ್ಲಿ ನಿಲ್ಲುತ್ತದೆ. ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಿರುವ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಅಪಾರ ವಿದ್ವತ್ತುಳ್ಳ ಅಪರೂಪದ ಯತಿಗಳಾಗಿದ್ದು, ನನಗೆ ಹಾಗೂ ನಮ್ಮ ಹಿರಿಯ ಸ್ವಾಮಿಗಳಿಗೆ ಅವರ ಮಾರ್ಗದರ್ಶನ ಸದಾಕಾಲ ಇರಬೇಕು ಎಂದರು.

ಬಾಲೇಹೊಸೂರ ಮಠದ ಜಾತ್ರಾ ಮಹೋತ್ಸವ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನ ಬಾಲೆಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠದ ಜಾತ್ರಾ ಮಹೋತ್ಸವ ಏ.28 ಮತ್ತು 29 ರಂದು ಜರುಗಲಿದೆ.

ಏ.28ರ ಪ್ರಾತಃಕಾಲ ಶ್ರೀ ಗುರು ದಿಂಗಾಲೇಶ್ವರರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಷಟಸ್ಥಲ ದ್ವಜಾರೋಹಣ, ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ. ಸಂಜೆ 5ಕ್ಕೆ ಮಹಾರಥೋತ್ಸವ ಜರುಗುವುದು.

ಏ.29ರ ಸಂಜೆ 5ಕ್ಕೆ ಕಡುಬಿನ ಕಾಳಗ ಜರುಗುವುದು. ಭಕ್ತರು ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಿಳಿಸಿದ್ದಾರೆ.

ಬಾಲೇಹೊಸೂರ ಮಠದ ಕಿರು ಪರಿಚಯ: ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೇಹೊಸೂರ ಗ್ರಾಮದ ಶ್ರೀ ದಿಂಗಾಲೇಶ್ವರ ಮಠವು 300 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ. ಈ ಮಠದ ಲಿಂ.ಶ್ರೀಗಳೆಲ್ಲರೂ ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಕ್ಕಾಗಿ ಸಮರ್ಪಿಸಿಕೊಂಡವರಾಗಿದ್ದರು. ಕಳೆದ 3 ದಶಕಗಳ ಹಿಂದೆ ಶ್ರೀಮಠದ 6ನೇ ಪಟ್ಟಾಧ್ಯಕ್ಷರು, ಸದ್ಯ ಶಿರಹಟ್ಟಿ ಫಕೀರೇಶ್ವರಮಠದ ಉತ್ತರಾಧಿಕಾರಿಗಳಾದ ಶ್ರೀ ಫಕೀರ ದಿಂಗಾಲೇಶ್ವರ ಜಗದ್ಗುರುಗಳು ತಮ್ಮ ಪಾಂಡಿತ್ಯ, ಪ್ರವಚನದ ಪ್ರಖರತೆ ಮತ್ತು ಶ್ರೀಮಠದ ಅಭಿವೃದ್ಧಿಗಾಗಿ ಹಾಗೂ ಧರ್ಮ ಯುದ್ಧಕ್ಕಾಗಿ ಶ್ರಮಿಸುವ ಮೂಲಕ ಬಾಲೇಹೊಸೂರ ಮಠವನ್ನು ನಾಡಿನಾದ್ಯಂತ ಗುರುತಿಸುವ ಮಹೋನ್ನತ ಕಾರ್ಯ ಮಾಡಿದ್ದಾರೆ.

jatre

ಫಕೀರ ದಿಂಗಾಲೇಶ್ವರ ಶ್ರೀಗಳು ತಮ್ಮ ಪ್ರವಚನದ ಮೂಲಕ ನಾಡಿನ ಜನ ಮಾನಸದಲ್ಲಿ ಮನೆ ಮಾಡಿದ್ದಾರೆ. `ಸದ್ಗುಣಗಳ ದೀಕ್ಷೆ-ದುಶ್ಚಟಗಳ ದೀಕ್ಷೆ ಕಾರ್ಯಕ್ರಮದ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣದ ಕಾಳಜಿ ಅವರದ್ದಾಗಿದೆ. ಪರಿಸರ ಪ್ರೇಮಿಗಳಾದ ಶ್ರೀಗಳು, ಮಠದ ಕಾರ್ಯಕ್ರಮದಲ್ಲಿ 5001 ಮಾತೆಯರಿಗೆ 1 ತೆಂಗು, 1 ಮಾವಿನ ಸಸಿಗಳನ್ನು ಉಡಿ ತುಂಬಿ ವನಸಿರಿ ಬೆಳೆಸುವಂತೆ ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದು ಅವರ ಪರಿಸರ ಕಾಳಜಿಗೆ ಸಾಕ್ಷಿಯಾಗಿದೆ. ಕೆರೆಗೆ ನದಿ ನೀರು ಹರಿಸಲು ಹೋರಾಟ, ಕೆರೆ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಸದಾ ಓದುವ ಹಂಬಲ ಹೊಂದಿರುವ ಇವರು ತಮ್ಮದೇ ಆದ ಗ್ರಂಥಾಲಯ ಹೊಂದಿದ್ದು, ಅಲ್ಲಿ ಅತ್ಯಂತ ಶ್ರೇಷ್ಠವಾದ ಸಾವಿರಾರು ಗ್ರಂಥಗಳಿವೆ. ಇದೀಗ ಕಳೆದ ಒಂದು ವರ್ಷದಿಂದ ಶಿರಹಟ್ಟಿ ಸಂಸ್ಥಾನದ ಮಠದ ಉತ್ತರಾಧಿಕಾರಿಗಳಾಗಿ ಧರ್ಮ ಜನಜಾಗೃತಿ, ಶಿಕ್ಷಣ ಸೇವೆ, ಸಾಮಾಜಿಕ ಬದಲಾವಣೆಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿರುವ ಫಕೀರ ದಿಂಗಾಲೇಶ್ವರ ಶ್ರೀಗಳು ಈ ನೆಲದ ನಾಡಿನ ಭಕ್ತರ ಮನೆ ಮಾತಾಗಿದ್ದಾರೆ.

ಗ್ರಾಮೀಣ ಭಾಗದ ಶ್ರೀಮಠಕ್ಕೆ ತಮ್ಮ ಪ್ರಾಮಾಣಿಕ ಸೇವೆಯ ಮೂಲಕ ಅಮೃತ ಶಿಲೆಯ ಭವ್ಯ ಮಠ, ದಾಸೋಹ ಭವನ, ಯಾತ್ರಿ ನಿವಾಸ, ಶಾಲೆ, ಗೋಶಾಲೆ, ಸಮುದಾಯ ಭವನ, ಸುಂದರ ಸಮೃದ್ಧ ತೋಟ ನಿರ್ಮಿಸಿ ಸಮಾಜಕ್ಕೆ ಸಮರ್ಪಿಸಿದ್ದಾರೆ. `ಮಠ ಕಟ್ಟುವುದು ಭಕ್ತರ ಕೆಲಸ, ಸಮಾಜ ಕಟ್ಟುವುದು, ಧರ್ಮ ಕಾಪಾಡುವುದು ಸ್ವಾಮಿಗಳ ಕೆಲಸ’ ಎಂದು ಹೇಳುವ ಶ್ರೀಗಳು ಭಕ್ತರು ನೀಡುವ ಕಾಣಿಕೆ ಸತ್ಕಾರ್ಯಕ್ಕೆ ಸಲ್ಲಬೇಕೆಂಬ ಉದ್ದೇಶ ಸಾಕಾರಗೊಳಿಸಿದ್ದಾರೆ. ಶ್ರೀಮಠವಿಂದು ನಾಡಿನೆಲ್ಲೆಡೆ ಹೆಸರಾಗಿದೆ.

ಪರೀಕ್ಷಾ ಕೇಂದ್ರಗಳ ಸುತ್ತ ಪ್ರತಿಬಂಧಕಾಜ್ಞೆ ಜಾರಿ

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು 2024ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಸಲಿರುವ ದ್ವೀತಿಯ ಪಿಯುಸಿ ಪರೀಕ್ಷೆ-2 ಪರೀಕ್ಷೆಗಳನ್ನು ಏಪ್ರಿಲ್ 29ರಿಂದ ಮೇ 16ರವರೆಗೆ ಬೆಳಿಗ್ಗೆ 10.15 ಗಂಟೆಯಿಂದ ಸಂಜೆ 5.30ರವರೆಗೆ ನಡೆಸಲಿದೆ.

ಪರೀಕ್ಷಾ ಸಮಯದಲ್ಲಿ ನಕಲು ಮಾಡುವುದು, ಪರೀಕ್ಷಾರ್ಥಿಗಳ ಬದಲು ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 29ರಿಂದ ಮೇ 16ರವರೆಗೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ.

ಪರೀಕ್ಷಾರ್ಥಿಗಳು ಹಾಗೂ ಪರೀಕ್ಷೆಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿ ಇತರ ಯಾವುದೇ ವ್ಯಕ್ತಿ ಅಥವಾ ಐದು, ಐದಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು, ಅಥವಾ ವ್ಯಕ್ತಿಗಳ ಗುಂಪುಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಬಂದ್ ಮಾಡಲು ಆದೇಶಿಸಿದೆ. ಪರೀಕ್ಷಾ ಕೇಂದ್ರಗಳಲ್ಲಿ ಮೊಬೈಲ್ ಫೋನ್ ಮತ್ತು ಇತರೇ ಸಂಪರ್ಕ ಸಲಕರಣೆಗಳನ್ನು ತರುವುದನ್ನು ನಿಷೇಧಿಸಲಾಗಿದೆ.

ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳಿಗೆ ವಿದ್ಯಾರ್ಥಿಗಳು ಆಗಮಿಸುವ ಸಮಯ ಮತ್ತು ಹೊರ ಹೋಗುವ ಸಮಯದಲ್ಲಿ ಮಾತ್ರ ಚಿತ್ರೀಕರಿಸಲು ಮಾಧ್ಯಮದವರಿಗೆ ಅವಕಾಶವಿದ್ದು, ಪರೀಕ್ಷಾ ಗೌಪ್ಯತೆ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಲ್ಲಿ ಪ್ರವೇಶ, ಚಿತ್ರೀಕರಣ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ವೈಶಾಲಿ ಎಂ.ಎಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ವಿವರ

ನಗರದ ಜ.ತೊಂಟದಾರ್ಯ ಪದವಿಪೂರ್ವ ಕಾಲೇಜು, ಹೆಚ್‌ಸಿಇಎಸ್ ಪದವಿಪೂರ್ವ ಕಾಲೇಜು, ಶಿರಹಟ್ಟಿಯ ಸರ್ಕಾರಿ ಪದವಿಪೂರ್ವ ಕಾಲೇಜು, ನರಗುಂದದ ಸರ್ಕಾರಿ ಪದವಿಪೂರ್ವ ಕಾಲೇಜು, ಮುಂಡರಗಿಯ ಜೆ.ಎ. ಪದವಿಪೂರ್ವ ಕಾಲೇಜು, ರೋಣದ ವೀರರಾಣಿ ಚನ್ನಮ್ಮ ಪದವಿಪೂರ್ವ ಕಾಲೇಜು, ಲಕ್ಷ್ಮೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜು, ಗಜೇಂದ್ರಗಡ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ.

ಮೋದಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ : ರಾಜ್ಯದ 223 ತಾಲೂಕುಗಳು ಬರದಿಂದ ತತ್ತರಿಸಿವೆ. ಬರ ಪರಿಹಾರ ಕೊಡುವಂತೆ 2023ರ ಸಪ್ಟೆಂಬರ್‌ನಲ್ಲಿ ಸರಕಾರ ಮನವಿ ಮಾಡಿತ್ತು. ಅಕ್ಟೋಬರ್ 4ರಿಂದ 9ರವರೆಗೆ ಕೇಂದ್ರ ತಂಡ ಅಧ್ಯಯನ ನಡೆಸಿ, ವರದಿ ನೀಡಿದರೂ ಪ್ರಧಾನಿ ಮೋದಿ ಪರಿಹಾರ ಕೊಡಲಿಲ್ಲ. ಅಷ್ಟೇ ಅಲ್ಲದೆ, ೨೦೧೯ರಲ್ಲಿ ಭೀಕರ ಪ್ರವಾಹ ಬಂದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರೂ ಆಗಲೂ ಕರ್ನಾಟಕದ ಮುಖ ನೋಡದ ಪ್ರಧಾನಿ ಮೋದಿ ಈಗ ಚುನಾವಣೆ ಪ್ರಚಾರಕ್ಕೆ ಪದೇ ಪದೇ ಕರ್ನಾಟಕ್ಕೆ ಬರುತ್ತಿದ್ದಾರೆ. ಅವರಿಗೆ ಕರ್ನಾಟಕದ ಜನರ ಮತ ಕೇಳುವ ನೈತಿಕತೆ ಇಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಜಿಲ್ಲೆಯ ಗಜೇಂದ್ರಗಡದ ಎಪಿಎಂಸಿ ಮೈದಾನದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರ ಪರಿಹಾರ ಕೋರಿ ನಾವು ಸುಪ್ರೀಂಕೋರ್ಟ್ ಮೊರೆ ಹೋಗದಿದ್ದಲ್ಲಿ ಕೇಂದ್ರ ಸರಕಾರ ಕರ್ನಾಟಕದತ್ತ ತಿರುಗಿಯೂ ನೋಡುತ್ತಿರಲಿಲ್ಲ ಎಂದು ಹೇಳಿದರು.

ಸುಪ್ರಿಂಕೋರ್ಟ್ ಮೊರೆ ಹೋಗಿದ್ದರಿಂದಲೇ ಇವತ್ತು ಕೇಂದ್ರದಿಂದ ಬರ ಪರಿಹಾರ ಲಭ್ಯವಾಗುವ ಭರವಸೆ ಮೂಡಿದೆ. ಕೇಂದ್ರ ಸರಕಾರದ ಪರ ವಕೀಲರು ಕೇಳಿದ್ದ ಕಾಲಾವಕಾಶ ಮುಗಿಯುತ್ತಾ ಬಂದಿದ್ದು, ಅನುದಾನ ಬರುವ ನಿರೀಕ್ಷೆಯಿದೆ. ಆದರೆ ಈವರೆಗೂ ಹಣ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬರ ಪರಿಹಾರ ಮತ್ತು ಕೇಂದ್ರ ಸರಕಾರದ ಮಲತಾಯಿ ಧೋರಣೆ ವಿರುದ್ಧ ಕರ್ನಾಟಕದ 25 ಜನ ಬಿಜೆಪಿ ಸಂಸದರಿದ್ದರೂ ಸಂಸತ್‌ನಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತಾಡಲಿಲ್ಲ. ಕರ್ನಾಟಕವನ್ನು ಕಡೆಗಣಿಸಿದ ಬಿಜೆಪಿ ಮತ ಹಾಕಬೇಡಿ ಎಂದು ಸಿದ್ದರಾಮಯ್ಯ ವಿನಂತಿಸಿದರು.

ಮಹದಾಯಿ ಯೋಜನೆ ಜಾರಿಗಾಗಿ ರಕ್ತದಲ್ಲಿ ಪತ್ರ ಬರೆದ ಬಸವರಾಜ ಬೊಮ್ಮಾಯಿ, ಎರಡೂವರೆ ವರ್ಷ ಅಧಿಕಾರದಲ್ಲಿದ್ದರೂ ಮಹದಾಯಿ ಯೋಜನೆಯನ್ನು ಜಾರಿ ಮಾಡಲಿಲ್ಲ. ಸದ್ಯ ಕೇಂದ್ರ ಸರಕಾರ ಪರಿಸರ ಇಲಾಖೆ ಸದರಿ ಯೋಜನೆ ಜಾರಿಗೆ ತಡೆ ನೀಡಿದೆ. ರಾಜ್ಯ ಬಿಜೆಪಿ ನಾಯಕರು ಮತ್ತು ಕೇಂದ್ರದ ಬಿಜೆಪಿ ಸರಕಾರ ಪರಿಸರ ನಿರಪೇಕ್ಷಣಾ ದೊರಕಿಸಿಕೊಟ್ಟರೆ ನಾಳೆಯೇ ಕೆಲಸ ಆರಂಭಿಸಲಾಗುವುದು. ಅದಕ್ಕಾಗಿ ಈಗಾಗಲೇ ಟೆಂಡರ್ ಸಹ ಕರೆದಿದ್ದೇವೆ ಎಂದರು.

program

ಕಾಂಗ್ರೆಸ್ ಜಿಲ್ಲಾಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕಾನೂನು ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಹಾವೇರಿ-ಗದಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ, ಆರ್.ಎಸ್. ಪಾಟೀಲ, ಶಾಸಕರಾದ ಶ್ರೀನಿವಾಸ ಮಾನೆ, ಆರ್. ಶಂಕರ್, ಯು.ಬಿ. ಬಣಕಾರ, ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

ನರೇಂದ್ರ ಮೋದಿ ಕಳೆದ 10 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಆದರೂ ಈವರೆಗೆ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂಪಾಯಿ ಹಾಕಿಲ್ಲ. ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಈಡೇರಿಸಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವ ಭರವಸೆ ನೀಡಿದರು, ಆದರೆ ರೈತರ ಖರ್ಚು ದುಪ್ಪಟ್ಟುಗೊಳಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲಿಲ್ಲ. ಇಂಥ ಸುಳ್ಳು ಹೇಳುವ ಪಕ್ಷಕ್ಕೆ ಜನ ಮತ ಹಾಕಬಾರದು ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದರು.

error: Content is protected !!