36.4 C
Gadag
Friday, June 2, 2023
Home Blog

ಗದಗ ಜಿಲ್ಲೆಯ ಪೊಲೀಸರ ಕರ್ತವ್ಯಕ್ಕೆ ಹ್ಯಾಟ್ಸ್ ಆಫ್…… ರಾಜ್ಯದಲ್ಲಿಯೇ ಗದಗ ಜಿಲ್ಲೆ ಮೊಬೈಲ್ ಪತ್ತೆ ಪ್ರಕರಣಗಳಲ್ಲಿ ಟಾಪ್ 5….

ಕಳೆದುಹೋಗಿದ್ದ ಮೊಬೈಲ್ ಪತ್ತೆಹಚ್ಚಿ ಮಾಲೀಕರಿಗೆ ನೀಡಿದ ಗದಗ ಪೊಲೀಸರು….

1124 ಪ್ರಕರಣಗಳು ದಾಖಲು….. ಈ ಮೊದಲು 315, ಈಗ 80 ಮೊಬೈಲ್ ಮಾಲೀಕರಿಗೆ ವಾಪಸ್……

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರ ಇತ್ತೀಚೆಗೆ ಕಳೆದುಹೋದ ಮೊಬೈಲ್‌ಗಳನ್ನು ಪತ್ತೆಹಚ್ಚಲು ಸಿಇಐಆರ್ ಎಂಬ ಪೋರ್ಟಲ್‌ನ್ನು ಫೆಬ್ರುವರಿ 2023ರಲ್ಲಿ ಜಾರಿಗೆ ತಂದಿದ್ದು, ಇದನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಜಿಲ್ಲೆಯಲ್ಲಿ ಕಳೆದು ಹೋದ 80 ಮೊಬೈಲ್‌ಗಳನ್ನು ವಾರಸುದಾರಿಗೆ ವಾಪಸ್ ಕೊಡಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ ಹೇಳಿದರು.

ಅವರು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 1124 ಮೊಬೈಲ್ ಕಳವಿನ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ ಈ ಮೊದಲು 315 ಮೊಬೈಲ್‌ಗಳನ್ನು ಸಿಇಐಆರ್ ತಂತ್ರಾಂಶದ ಹಾಗೂ ಮೊಬಿಫೈ ಎಂಬ ತಂತ್ರಾಂಶದ ಮೂಲಕ ಹುಡುಕಿ ವಾಪಸ್ ಕೊಡಲಾಗಿತ್ತು. ಇಂದು ಮತ್ತೆ 80 ಮೊಬೈಲ್‌ಗಳನ್ನು ಹುಡುಕಿ ಅದರ ಮಾಲೀಕರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಯಾರು ಮೊಬೈಲ್ ಕಳೆದುಕೊಂಡಿರುತ್ತಾರೋ ಆ ವಿಷಯ ನಮಗೆ ಗೊತ್ತಾದರೆ ಸಾಕು, ನಾವೇ ಸ್ವತಃ ಅವರನ್ನು ಕರೆದು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿಕೊಳ್ಳುತ್ತೇವೆ. ಈ ತಂತ್ರಾಂಶದ ಮೂಲಕ ಕಳೆದು ಹೋದ ಮೊಬೈಲುಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ ಎಂದು ಹೇಳಿದರು.

ಇದಕ್ಕಾಗಿಯೇ ನಾವು ಪತ್ಯೇಕ ವಿಭಾಗವನ್ನು ತೆರೆದು ಆ ಮೂಲಕ ಸಿಬ್ಬಂದಿಯನ್ನು ನೇಮಕ ಮಾಡಿ ಮೊಬಿಫೈ ಮೂಲಕ ಮಾಹಿತಿ ಪಡೆದುಕೊಂಡು ಸಿಇಐಆರ್‌ಗೆ ನಾವೇ ಅಪ್‌ಲೋಡ್ ಮಾಡುತ್ತಿದ್ದೇವೆ. ಇದರಿಂದಾಗಿ ರಾಜ್ಯದಲ್ಲಿಯೇ ಗದಗ ಜಿಲ್ಲೆ ಮೊಬೈಲ್ ಪತ್ತೆ ಪ್ರಕರಣಗಳಲ್ಲಿ ಟಾಪ್ 5 ರಲ್ಲಿದೆ ಎಂಬುದು ಹೆಮ್ಮೆಯ ಸಂಗತಿ ಎಂದರು.

ನಗರ ಠಾಣೆ, ಗ್ರಾಮೀಣ ಠಾಣೆ, ಬೆಟಗೇರಿ, ಮುಳಗುಂದ, ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ, ರೋಣ, ಗಜೇಂದ್ರಗಡ, ಮುಂಡರಗಿ, ನರೇಗಲ್, ಸೆಂಟ್ರಲ್ ಪಿಎಸ್, ಟೆಕ್ ಸೆಲ್ ಈ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದುಹೋದ ಸುಮಾರು 11,25,557 ರೂ. ಮೌಲ್ಯದ ಒಟ್ಟು 80 ಮೊಬೈಲ್‌ಗಳನ್ನು ಮಾಲೀಕರಿಗೆ ನೀಡಲಾಗಿದೆ. ಮೊಬೈಲ್ ಪತ್ತೆ ಮಾಡುವಲ್ಲಿ ಶ್ರಮವಹಿಸಿದ ಪೊಲೀಸ್ ಸಿಬ್ಬಂದಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದು ಎಸ್ಸಿ ಬಿ.ಎಸ್ ನೇಮಗೌಡ ಹೇಳಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಇದ್ದರು. ಪೊಲೀಸರ ಈ ಕರ್ತವ್ಯ ನಿಷ್ಠೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ದಾವಣಗೆರೆಯಲ್ಲಿ ಮನಕಲಕುವ ಘಟನೆ; ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದ ಪಾಪಿ ತಂದೆ…..

ಟೋಲ್ ಸರ್ವೀಸ್ ರೋಡ್ ನಲ್ಲಿ ಕುತ್ತಿಗೆಗೆ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ತಂದೆ….

ವಿಜಯಸಾಕ್ಷಿ ಸುದ್ದಿ, ದಾವಣಗೆರೆ

ಮಕ್ಕಳು ಹೆಚ್ಚು ಹಠ ಮಾಡುತ್ತವೆ ಎಂಬ ಕಾರಣದಿಂದ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಕುತ್ತಿಗೆಗೆÀ ಟೇಪ್ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ರಾಣೆಬೆನ್ನೂರಿನ ಚಳಗೇರಿ ಟೋಲ್ ಸರ್ವೀಸ್ ರೋಡ್ ಬಳಿ ಗುರುವಾರ ನಡೆದಿದೆ.

ದಾವಣಗೆರೆ ಆಂಜನೇಯ ಬಡಾವಣೆಯ ನಿವಾಸಿ ಅಮರ್ ಕಿತ್ತೂರು (36) ಅವಳಿ ಮಕ್ಕಳನ್ನು ಕೊಂದ ತಂದೆ. ನಾಲ್ಕೂವರೆ ವರ್ಷದ ಅದೈತ್ ಮತ್ತು ಅನ್ವಿತ್ ಎಂಬ ಮಕ್ಕಳೇ ತಂದೆಯಿಂದ ಕೊಲೆಯಾದವರು.

ಘಟನೆಯ ಹಿನ್ನೆಲೆ………

ಬೆಳಗಾವಿ ಮೂಲದ ಅಮರ್ ದಾವಣಗೆರೆಯಲ್ಲಿ ವಾಸವಾಗಿದ್ದು, ಹರಿಹರದ ಕಾರ್ಗಿಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ. ಅವನ ಪತ್ನಿ ಜಯಲಕ್ಷ್ಮಿ ಕೆಲ ತಿಂಗಳ ಹಿಂದೆ ಗಂಡನ ಜೊತೆ ಜಗಳ ಮಾಡಿ ತವರೂರಾದ ವಿಜಯಪುರಕ್ಕೆ ಹೋಗಿದ್ದಳು. ಮಕ್ಕಳು ಹಠ ಮಾಡುವುದರಿಂದ ಅವರನ್ನು ಕೊಲ್ಲುತ್ತೇನೆ ಎಂದು ಅಮರ್ ಆಗಾಗ ಪತ್ನಿಗೆ ಹೆದರಿಸುತ್ತಿದ್ದ ಎನ್ನಲಾಗಿದೆ.

ಹೆಂಡತಿ ತವರಿಗೆ ಹೋದ ಸಂದರ್ಭದಲ್ಲಿ ಅಮರ್ ಈ ಕೃತ್ಯಗೈದಿದ್ದಾನೆಂದು ತಿಳಿದು ಬಂದಿದೆ. ಮಕ್ಕಳನ್ನು ಕೊಲೆ ಮಾಡಿದ ನಂತರ ತಾನೇ ಪತ್ನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದ. ಅವನ ಪತ್ನಿಯ ಮೂಲಕ ವಿಷಯ ತಿಳಿದ ಪೊಲೀಸರು ಮೊಬೈಲ್ ಲೊಕೇಷನ್ ಜಾಡನ್ನು ಆಧರಿಸಿ ಆರೋಪಿ ಅಮರ್‌ನನ್ನು ಬಂಧಿಸಿದ್ದಾರೆ. ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಚಿವ ಎಚ್.ಕೆ. ಪಾಟೀಲರಿಂದ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳ ಭೇಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್ ಕೆ ಪಾಟೀಲ್ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲಯ್ಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಚರ್ಚಿಸಿದರು.

ಈ ಸಂದರ್ಭದಲ್ಲಿ ಗದಗ ಮತಕ್ಷೇತ್ರದ ಮಾಜಿ ಶಾಸಕರಾದ ಡಿ.ಆರ್.ಪಾಟೀಲ ಉಪಸ್ಥಿತರಿದ್ದರು.

ರಾಜ್ಯದಲ್ಲಿ ಲೋಕಾ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ; ನಿರ್ಮಿತಿ ಕೇಂದ್ರದ ಇಂಜಿನಿಯರ್ ಮನೆಯಲ್ಲಿ ಹಣ ಎಣಿಸೋ ಮಷೀನ್ ಪತ್ತೆ..!

ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ……

ವಿಜಯಸಾಕ್ಷಿ ಸುದ್ದಿ, ಹಾವೇರಿ/ ಬೆಂಗಳೂರು

ಹಾವೇರಿ ಹಾಗೂ ರಾಣೆಬೆನ್ನೂರು ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಾಣೆಬೆನ್ನೂರಿನ ಸಿದ್ದಾರೂಢ ಮಠದ ಹಿಂಬಾಗದಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, 10 ಇಂಚು ಅಳತೆಯ ಜಿಂಕೆ ಕೊಂಬು ಸಹಿತ ಒಟ್ಟು 4.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಇವುಗಳಲ್ಲಿ ಅರ್ಧ ಕೆ.ಜಿ ಬಂಗಾರ, 2 ಕೆ.ಜಿ ಬೆಳ್ಳಿಯ ವಸ್ತುಗಳು, 18.30 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಹಣ ಎಣಿಕೆ ಮಾಡುವ ಯಂತ್ರ, ೩ ಕಾರು, 2 ಟ್ರಾಕ್ಟರ್, 2 ಬೈಕ್ ಸೇರಿದಂತೆ 8 ಮನೆ, ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 16 ಸೈಟ್, 65 ಎಕರೆ ಭೂಮಿಯ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.

ಅಕ್ರಮವಾಗಿ ಸಂಗ್ರಹಿಸಿರುವ ಜಿಂಕೆ ಕೊಂಬು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದರೊಂದಿಗೆ ಮೈಸೂರು ಮತ್ತು ಶಿವಮೊಗ್ಗಗಳಲ್ಲೂ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಬೇಟೆಗಿಳಿದಿದ್ದಾರೆ. ಮೈಸೂರಿನಲ್ಲಿ ನಾಲ್ಕು ಅಧಿಕಾರಿಗಳ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆಗೆ ದಾಳಿ ನಡೆಸಲಾಗಿದ್ದು, ಕೇಜಿಗಟ್ಟಲೆ ಚಿನ್ನ, ಫಾರಿನ್ ಮದ್ಯ ಇತ್ಯಾದಿ ದುಬಾರಿ ವಸ್ತುಗಳು ಸಿಕ್ಕಿದೆ ಎಂದು ಹೇಳಲಾಗಿದೆ.

ಮೈಸೂರು ನಗರದ ವಿವಿಧ ಕಡೆಗಳಲ್ಲಿ ನಾಲ್ವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಮೈಸೂರು ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ನೀರಿನ ಟ್ಯಾಂಕ್ ಒಳಗೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಮುತ್ತು, ನಂಜನಗೂಡು ತಾಲೂಕು ಸಬ್ ರಿಜಿಸ್ಟಾರ್ ಶಿವಶಂಕರಮೂರ್ತಿ, ಮೂಡಾ ಅಸಿಸ್ಟೆಂಟ್ ಇಂಜಿನಿಯರ್ ನಾಗೇಶ್ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು.

ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ಮನೆಯಲ್ಲಿ ಸುದೀರ್ಘ ತಪಾಸಣೆ ನಡೆಸಲಾಗಿದೆ.

ಶಿವಮೊಗ್ಗದಲ್ಲಿ ಬುಧವಾರ ಮುಂಜಾನೆ ಲೋಕಾಯುಕ್ತ ದಾಳಿ ನಡೆಸಿ, ತುಂಗಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೆ ಅವರ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಪತ್ತೆಹಚ್ಚಿದ್ದಾರೆ.

ಮೆರವಣಿಗೆಯಲ್ಲಿ ಶಾಸಕ ಚಂದ್ರು ಮೇಲೆ ಕಲ್ಲೆಸೆದ ಕಿಡಿಗೇಡಿ; ಪ್ರಕರಣ ದಾಖಲು

ಹೂವುಗಳನ್ನು ಎರಚುತ್ತಿದ್ದ ಸಂದರ್ಭದಲ್ಲಿ ತೂರಿ ಬಂದ ಕಲ್ಲು……..

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಹನುಮಜಯಂತಿ ಹಾಗೂ ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಚಂದ್ರು ಲಮಾಣಿ ಅವರ ಮೇಲೆ ಅಪರಿಚಿತ ಕಿಡಿಗೇಡಿಯೊಬ್ಬ ಶಾಸಕರ ಮೇಲೆ ಕಲ್ಲು ಎಸೆದಿರುವ ಘಟನೆಯ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೇ.27ರ ರಾತ್ರಿ 8.15ರ ಸುಮಾರಿಗೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಹನುಮಜಯಂತಿ ಹಾಗೂ ರಾಮನವಮಿಯ ನಿಮಿತ್ತ ಮೆರವಣಿಗೆ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಆಗಮಿಸಿದ್ದು, ಗ್ರಾಮಸ್ಥರು ಶಾಸಕರಿಗೆ ಮಾಲಾರ್ಪಣೆ ಮಾಡಿ ಗೌರವಿಸಿ, ಗ್ರಾಮದ ಚೌತಮನಿಕಟ್ಟಿ ಹತ್ತಿರ ಸೇರಿದ ಜನರು ಮೆರವಣಿಗೆಯಲ್ಲಿ ಹೂವುಗಳನ್ನು ಎರಚುತ್ತಿದ್ದರು.

ಈ ಸಮಯದಲ್ಲಿ ಯಾರೋ ಒಬ್ಬ ಕಿಡಿಗೇಡಿ ಸಣ್ಣ ಕಲ್ಲನ್ನು ಶಾಸಕರೆಡೆ ಎಸೆದಿದ್ದು, ಅದು ಶಾಸಕರಿಗೆ ಬಡಿದಿದೆ. ಕಲ್ಲು ಎಸೆದವರು ಯಾರೆಂದು ಸೇರಿದ ಜನರಲ್ಲಿ ವಿಚಾರಿಸಿ ಹುಡುಕಿದಾಗ ಯಾರೆಂದು ತಿಳಿದಿಲ್ಲ.

ಹೀಗೆ ಕಲ್ಲು ಎಸೆದ ಅಪರಿಚಿತ ಕಿಡಿಗೇಡಿಯ ವಿರುದ್ಧ ಸೂರಣಗಿ ಗ್ರಾಮದ ಅಶೋಕ ಎಂಬುವರು ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಸಲ್ಲಿಸಿದ ದೂರಿನನ್ವಯ ಅಪರಾಧ 0068/2023, ಐಪಿಸಿ ಸೆಕ್ಷನ್‌ 1860ರ ಕಲಂ 324ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಜನರಿಗೆ ಮಾತು ಕೊಟ್ಟಿರುವಂತೆ ನಡೆದುಕೊಳ್ಳುತ್ತೇವೆ; ಸಚಿವ ಎಚ್. ಕೆ. ಪಾಟೀಲ್

ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್…….

ವಿಜಯಸಾಕ್ಷಿ ಸುದ್ದಿ, ಗದಗ

ನಮ್ಮ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಜನರಿಗೆ ಮಾತು ಕೊಟ್ಟಿರುವಂತೆ ನಡೆದುಕೊಳ್ಳುತ್ತೇವೆ. ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿಯೂ ಗ್ಯಾರಂಟಿ ವಿಷಯ ಚರ್ಚೆಯಾಗಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಗ್ಯಾರಂಟಿ ವಿಷಯದಲ್ಲಿ ಹಾಗಾಗಬಹುದು, ಹೀಗೆ ನಡೆಯಬಹುದು ಎಂದು ಕಲ್ಪಿಸಿಕೊಂಡವರು ಖಂಡಿತವಾಗಿಯೂ ನಿರಾಶೆಗೊಳಗಾಗುತ್ತಾರೆ ಮತ್ತು, ಗ್ಯಾರಂಟಿ ಯೋಜನೆಗಳ ಮೂಲಕ ಬದುಕು ಕಟ್ಟಿಕೊಳ್ಳುವವರು, ಬದುಕು ಸುಧಾರಿಸಿಕೊಳ್ಳುವವರು ಸಂತಸಪಡುತ್ತಾರೆ ಎಂದು ಸಚಿವ ಎಚ್ ಕೆ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ಅವರು ಗದಗ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಪಠ್ಯ ಪರಿಷ್ಕರಣೆ ವಿಷಯವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಠ್ಯ ಪರಿಷ್ಕರಣೆ ವಿಷಯವಾಗಿ ಹೆಚ್ಚಿನ ಮಾಹಿತಿ ಇಲ್ಲ ಮತ್ತು ನಾನು ಆ ಬಗ್ಗೆ ಗಮನ ಹರಿಸಿಲ್ಲ. ಅಗತ್ಯವಾದಲ್ಲಿ, ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಶಿಕ್ಷಣ ಕ್ಷೇತ್ರದ ಸ್ನೇಹಿತರ ಜೊತೆ ಮಾತನಾಡಿ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯತ್ ಸಿಇಒ ಸುಶೀಲಾ ಬಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಗದಗ-ಬೆಟಗೇರಿ ವ್ಯಾಪ್ತಿಯ ಅಭಿವೃದ್ಧಿಗಳ ಕುರಿತು ಮಾಹಿತಿ ಪಡೆದುಕೊಂಡರು.

೨೦೧೩ರಿಂದ ೨೦೧೮ ರ ಅವಧಿಯಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ವಿಳಂಬವಾದ ಕಾಮಗಾರಿಗಳ ಬಗ್ಗೆ ಸ್ಪಷ್ಟನೆ ಪಡೆದುಕೊಂಡರು. ೨೪/೭ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ, ವಸತಿ ಯೋಜನೆ, ಪ್ರವಾಸೋದ್ಯಮ ಇತ್ಯಾದಿ ಜಿಲ್ಲಾ ವ್ಯಾಪ್ತಿಯಲ್ಲಿನ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ, ಸ್ಥಗಿತಗೊಂಡ ಯೋಜನೆಗಳ ಮರು ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ ಅಸೂಟಿ, ನಗರಸಭೆ ಸದಸ್ಯ ಬರಕತ್ ಅಲಿ ಮುಲ್ಲಾ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಮುಖಂಡರಾದ ಅರವಿಂದ ಹುಲ್ಲೂರ ಸೇರಿದಂತೆ ಅನೇಕರಿದ್ದರು.

ವಯೋವೃದ್ಧರ ಗಮನ ಬೇರೆಡೆ ಸೆಳೆದು 1.60 ಲಕ್ಷ ರೂ ದೋಚಿದ ಕಳ್ಳರು….

ಬಸವೇಶ್ವರ ಶಾಲಾ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟರ್‌…….ಮೂವರಿಂದ ಕೃತ್ಯ…

ವಿಜಯಸಾಕ್ಷಿ ಸುದ್ದಿ, ಗದಗ

ಶಾಲೆಯ ಆವರಣವೊಂದರಲ್ಲಿ ನಿಂತಿದ್ದ ವಯೋವೃದ್ಧರೊಬ್ಬರ ಗಮನವನ್ನು ಬೇರೆಡೆ ಸೆಳೆದು, ಅವರ ಆಕ್ಟಿವಾ ಸ್ಕೂಟರ್‌ನ ಡಿಕ್ಕಿಯಲ್ಲಿಟ್ಟಿದ್ದ ಹಣ, ಬ್ಯಾಂಕ್‌ ಪಾಸ್‌ಬುಕ್‌, ಪಾನ್‌ಕಾರ್ಡ್‌ ಇತ್ಯಾದಿ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ದಾಸರ ಓಣಿಯ ರಾಜಣಸಾ ಯಲುಸಾ ಹಬೀಬ(68) ಹುಡ್ಕೋ ಕಾಲನಿಯ ಸಿದ್ದಲಿಂಗ ನಗರದಲ್ಲಿರುವ ಬಸವೇಶ್ವರ ಶಾಲೆಯ ಆವರಣದಲ್ಲಿ ನಿಂತಿದ್ದರು.

ಈ ಸಮಯದಲ್ಲಿ ಸುಮಾರು 35-40 ವರ್ಷ ವಯಸ್ಸಿನ ಯಾರೋ ಮೂವರು ಕಳ್ಳರು ದೂರುದಾರರ ಗಮನವನ್ನು ಬೇರೆಡೆ ಸೆಳೆದು ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಸ್ಕೂಟರ್‌ನ ಡಿಕ್ಕಿಯಲ್ಲಿರಿಸಿದ್ದ 1.60 ಲಕ್ಷ ರೂ ನಗದು, ಬ್ಯಾಂಕ್‌ ಪಾಸ್‌ಬುಕ್‌, ಪಾನ್‌ಕಾರ್ಡ್‌ಗಳನ್ನು ದೋಚಿದ್ದಾರೆ.

ಆರೋಪಿಗಳನ್ನು ಪುನಃ ನೋಡಿದರೆ ಅವರನ್ನು ಗುರುತಿಸಬಲ್ಲೆ ಎಂದು ಗದಗ ಶಹರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಅಪರಾಧ 0067/2023, ಐಪಿಸಿ ಕಾಯ್ದೆ 1860ರ ಕಲಂ 379ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಗದಗ ಶಹರ ಪೊಲೀಸರು ತನಿಖೆ ನಡೆಸಿದ್ದಾರೆ.

ಮಹಿಳೆಯ ವ್ಯಾನಿಟಿ ಬ್ಯಾಗ್‌ನಿಂದ ಲಕ್ಷಾಂತರ ರೂ,ಮೌಲ್ಯದ ಚಿನ್ನಾಭರಣ ಎಗರಿಸಿದ ಕಳ್ಳರು…….

ಬಸ್ ನಿಲ್ದಾಣದಲ್ಲಿ ಘಟನೆ……

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮಹಿಳೆಯೊಬ್ಬರು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದಾಗ ಯಾರೋ ಕಳ್ಳರು ಆಕೆಯ ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಮುಂಡರಗಿಯ ಉಸ್ತಾದ್‌ ಪ್ಲಾಟ್‌ ನಿವಾಸಿ ರುಬೀನಾಬಾನು ಸಯ್ಯದಜರುದ್ದಿನ್‌ ಮಕಾನದಾರ ಎಂಬುವರು ತನ್ನ ಪತಿಯೊಂದಿಗೆ ಲಕ್ಷ್ಮೇಶ್ವರದಿಂದ ಹಾವೇರಿಗೆ ಹೋಗುವ ಉದ್ದೇಶದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿದ್ದರು.

ಈ ಸಮಯದಲ್ಲಿ ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಒಟ್ಟೂ 2,46,800 ರೂ ಬೆಲೆಬಾಳುವ ಬಂಗಾರ ಹಾಗೂ ಬೆಳ್ಳಿಯ ಆಭರಣಗಳಿದ್ದ ಪರ್ಸನ್ನು ಯಾರೋ ಕಳ್ಳರು ಬ್ಯಾಗಿನ ಜಿಪ್‌ ತೆಗೆದು ಕಳ್ಳತನ ಮಾಡಿದ್ದಾರೆಂದು ದೂರು ಸಲ್ಲಿಸಿದ್ದಾರೆ.

ಈ ಬಗ್ಗೆ ಅಪರಾಧ 0061/2023, ಐಪಿಸಿ ಕಾಯ್ದೆ 1860ರ ಕಲಂ 379ರಂತೆ ಲಕ್ಷ್ಮೇಶ್ವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಡು ಪ್ರಾಣಿಗಳ ಕಾಟ; ಗ್ರಾಮಸ್ಥರ ಆತಂಕ…!

ವಿಜಯಸಾಕ್ಷಿ ಸುದ್ದಿ, ಗದಗ

ತಾಲೂಕಿನ ಅಸುಂಡಿ, ಬಿಂಕದಕಟ್ಟಿ ಗ್ರಾಮಗಳಲ್ಲಿ ಕಾಡು ಪ್ರಾಣಿಗಳ ಕಾಟ ಜೋರಾಗಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಮೇ 23ರಂದು ರಾತ್ರಿಯ ಸಮಯದಲ್ಲಿ ಅಸುಂಡಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಹೈನಾವೊಂದು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸಿತ್ತು. ಶುಕ್ರವಾರ ಬೆಳಿಗ್ಗೆ ಹೈನಾ ಇಲ್ಲಿನ ಸಿದ್ದಯ್ಯ ಮಠಪತಿ ಎಂಬುವರು ತೋಟದ ಬಳಿ ಮತ್ತೆ ಪ್ರತ್ಯಕ್ಷವಾಗಿದ್ದು ಆತಂಕ ಮೂಡಿಸಿದೆ.

ಮಳಿ ಹಳ್ಳದ ಸರುವಿನಲ್ಲಿ ಹೈನಾ ಠಿಕಾಣಿ ಹೂಡಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಸ್ಥಳಕ್ಕೆ ಬಂದು ಸೂಕ್ತ ಕ್ರಮ ಕೈಗೊಳ್ಳದಿರುವ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ತೋಟದ ಮನೆ ಹಾಗೂ ಜಮೀನಿನಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರ ಮೇಲೆ ದಾಳಿ ಮಾಡುವ ಆತಂಕ ಗ್ರಾಮಸ್ಥರನ್ನು ಕಾಡತೊಡಗಿದೆ. ಒಂದು ತಿಂಗಳ ಹಿಂದಷ್ಟೇ ಬಿಂಕದಕಟ್ಟಿ ಗ್ರಾಮದ ಬಳಿ ಚಿರತೆಯೂ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕದಿಂದಲೇ ಓಡಾಡುವಂತಾಗಿದೆ.

ಕಾರಿನಲ್ಲಿ ಸೇರಿದ್ದ ವಿಷಕಾರಿ ಹಾವು; ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದ ಸ್ನೇಕ್ ಬುಡ್ಡಾ……..

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ಇಂಡಿಯನ್ ಕಾಮನ್ ಕ್ರೈಟ್ ಹಾವು.. …..

ವಿಜಯಸಾಕ್ಷಿ ಸುದ್ದಿ, ನರಗುಂದ

ಸರ್ವಿಸ್ ಗೆ ಬಂದಿದ್ದ ಕಾರಿನಲ್ಲಿ ವಿಷಕಾರಿ ಹಾವು ಸೇರಿಕೊಂಡು ಕೆಲಕಾಲ ಆತಂಕ ಮೂಡಿಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಇಲ್ಲಿನ ಹುಬ್ಬಳ್ಳಿ ರಸ್ತೆಯಲ್ಲಿ ಇರುವ ಹುಸೇನ್ ಅತ್ತಾರ್ ಎಂಬುವವರಿಗೆ ಸೇರಿದ ನ್ಯಾಷನಲ್ ಕಾರ್ ಮೋಟಾರ್ಸ್ ಗ್ಯಾರೇಜ್ ಗೆ ಇಂಡಿಕಾ ಕಾರೊಂದು ಸರ್ವಿಸ್ ಗೆ ಬಂದಿತ್ತು. ಅದರ ಬಾನೆಟ್ ನ ಕೆಳಗೆ ಕಟ್ಟಾವು ಅಂತ ಕರೆಯುವ ವಿಷಕಾರಿ ಹಾವು ಸೇರಿಕೊಂಡಿತ್ತು.

ಇದರಿಂದಾಗಿ ಗಾಬರಿಬಿದ್ದ ಮೆಕ್ಯಾನಿಕ್ ಉರಗ ತಜ್ಞ ಬುಡ್ನೆಸಾಬ ಸುರೇಬಾನ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಬುಡ್ನೆಸಾಬ, ಬಾನೆಟ್ ನಲ್ಲಿ ಇದ್ದ ಹಾವನ್ನು ಹೊರ ತೆಗೆದು ರಕ್ಷಣೆ ಮಾಡಿದರು.

ನಂತರ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿರುವ ಸ್ನೇಕ್ ಬುಡ್ನೆಸಾಬ, ಈ ವಿಷಕಾರಿ ಹಾವಿನ ಬಗ್ಗೆ ಮಾಹಿತಿ ನೀಡಿದ್ದು, ನಾಗರಹಾವುಗಿಂತಲೂ ಐದು ಪಟ್ಟು ಹೆಚ್ಚು ವಿಷಕಾರಿ ಹಾವು ಇದಾಗಿದ್ದು, ಯಾರಿಗಾದರೂ ಈ ಹಾವು ಕಚ್ಚಿದರೆ, ಕಚ್ಚಿದ ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಸಾವು ಸಂಭವಿಸಬಹುದು ಎಂದು ಹೇಳಿದ್ದಾರೆ.