Home Blog

ರಾಜಕೀಯಕ್ಕಿಂತ ದೇಶದ ಜನರ ಸುರಕ್ಷತೆ ಮುಖ್ಯ: ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

0

ನವದೆಹಲಿ: ಕೇರಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಿರುವಲ್ಲಾದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಶ್ಚಿಮ ಏಷ್ಯಾದ ರಾಷ್ಟ್ರಗಳ ಬಗ್ಗೆ ಕಾಂಗ್ರೆಸ್ ನೀಡುತ್ತಿರುವ ಹೇಳಿಕೆಗಳು ಭಾರತಕ್ಕೆ ಹಾನಿಕಾರಕವಾಗಿವೆ ಎಂದು ಟೀಕಿಸಿದ ಅವರು, ಇಂತಹ ಹೇಳಿಕೆಗಳಿಂದ ಗಲ್ಫ್ ದೇಶಗಳಲ್ಲಿ ಭಾರತೀಯರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಿದರು.

ರಾಜಕೀಯಕ್ಕಿಂತ ದೇಶದ ಜನರ ಸುರಕ್ಷತೆಯೇ ಮುಖ್ಯ ಎಂದು ಒತ್ತಿ ಹೇಳಿದ ಮೋದಿ, ಕೇರಳದ ಜನರ ರಕ್ಷಣೆಗೆ ತಾವು ಬದ್ಧರಾಗಿದ್ದೇನೆ ಎಂದು ತಿಳಿಸಿದ್ದಾರೆ. ಇದೇ ವೇಳೆ ರಾಜ್ಯದಲ್ಲಿನ ಎಲ್‌ಡಿಎಫ್ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, ದಶಕಗಳ ದುರಾಡಳಿತಕ್ಕೆ ಈ ಚುನಾವಣೆಯಲ್ಲಿ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ ಪ್ರಧಾನಿ, ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಿಲುಕಿಕೊಂಡಿರುವ ರಾಜ್ಯದ ಜನತೆ ಈ ಬಾರಿ ಬದಲಾವಣೆಗೆ ಮತ ಹಾಕಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದ ಅಭಿವೃದ್ಧಿ ವಿಷಯದಲ್ಲೂ ಸರ್ಕಾರಗಳನ್ನು ಟೀಕಿಸಿದ ಮೋದಿ, ರಸ್ತೆ, ಸೇತುವೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಈ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹಳೆಯ ವಾಹನಗಳಿಗೆ HSRP ಕಡ್ಡಾಯ: ಸುಳ್ಳು ಸುದ್ದಿಗೆ ತೆರೆ ಎಳೆದ ಸಾರಿಗೆ ಇಲಾಖೆ!

ಬೆಂಗಳೂರು: 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಾಯಿತವಾಗಿರುವ ಎಲ್ಲಾ ವಾಹನಗಳಿಗೆ ಹೈ ಸೆಕ್ಯುರಿಟಿ ನೋಂದಣಿ ಪ್ಲೇಟ್ (HSRP) ಅಳವಡಿಸುವುದು ಕಡ್ಡಾಯವಾಗಿದ್ದು, ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದೆ.

ಇತ್ತೀಚೆಗೆ ಹಳೆಯ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಲ್ಲ ಎಂಬ ತಪ್ಪು ಮಾಹಿತಿ ಹರಡಲಾಗಿತ್ತು. ಆದರೆ, ಸಾರಿಗೆ ಇಲಾಖೆಯ ಪ್ರಕಾರ 2019ರ ಏಪ್ರಿಲ್ 1ಕ್ಕೂ ಮೊದಲು ರಿಜಿಸ್ಟರ್ ಆಗಿರುವ ಎಲ್ಲಾ ವಾಹನಗಳಿಗೆ HSRP ಅಳವಡಿಸುವುದು ಕಡ್ಡಾಯವಾಗಿದ್ದು, ವಾಹನ ಮಾಲೀಕರು ತಕ್ಷಣವೇ ಈ ನಿಯಮ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.

ಕೇಂದ್ರ ಸರ್ಕಾರವು 1989ರ ಕೇಂದ್ರ ಮೋಟಾರು ವಾಹನ ನಿಯಮಗಳ 50ನೇ ವಿಧಿಯ ಪ್ರಕಾರ, ಈ ನಿಯಮವನ್ನು 2018ರಲ್ಲಿ ಜಾರಿಗೆ ತಂದಿದ್ದು, ರಾಜ್ಯದಲ್ಲಿಯೂ ಅನ್ವಯವಾಗುತ್ತಿದೆ. ರಾಜ್ಯ ಸಾರಿಗೆ ಇಲಾಖೆ 2023ರಲ್ಲಿ ಹೊರಡಿಸಿದ ಅಧಿಸೂಚನೆಯಲ್ಲಿಯೂ ಇದೇ ವಿಷಯವನ್ನು ಪುನರುಚ್ಚರಿಸಿದೆ.

ಇದಲ್ಲದೆ, ಈ ಕುರಿತು ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಸರ್ಕಾರದ ಕ್ರಮಕ್ಕೆ ಅವಕಾಶ ನೀಡಿದ್ದು, HSRP ಅಳವಡಿಕೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ. ಯಾವುದೇ ವಿನಾಯಿತಿ ಇಲ್ಲದೆ ಎಲ್ಲಾ ಹಳೆಯ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯ ಎಂದು ಇಲಾಖೆ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

 

ನಾಳೆ RCB ಮ್ಯಾಚ್: ಚಿನ್ನಸ್ವಾಮಿ ಸ್ಟೇಡಿಯಂನಿಂದ ಈ ಮಾರ್ಗಗಳಲ್ಲಿ ಬಿಎಂಟಿಸಿ ವಿಶೇಷ ಬಸ್ ಸಂಚಾರ!

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ಹಿನ್ನೆಲೆ, ಅಭಿಮಾನಿಗಳ ಅನುಕೂಲಕ್ಕಾಗಿ ಆಯೋಜಕರು ಹಾಗೂ ಬೆಂಗಳೂರು ಪೊಲೀಸರು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಈಗಾಗಲೇ ಬಿಎಂಆರ್‌ಸಿಎಲ್ ಮೆಟ್ರೋ ರೈಲುಗಳ ಸಮಯ ವಿಸ್ತರಣೆ ಮಾಡಿರುವ ನಡುವೆ, ಜನಸಂದಣಿ ನಿಯಂತ್ರಣಕ್ಕಾಗಿ ಬಿಎಂಟಿಸಿ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು 8 ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ.

ಈ ಬಸ್‌ಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (HAL ರಸ್ತೆ), ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಮಾಗಡಿ ರಸ್ತೆಯ ಜನಪ್ರಿಯ ಟೌನ್‌ಶಿಪ್, ಆರ್.ಕೆ. ಹೆಗಡೆ ನಗರ (ಯಲಹಂಕ), ಹೊಸಕೋಟೆ ಹಾಗೂ ಬನಶಂಕರಿ ಕಡೆಗಳಿಗೆ ಸಂಚರಿಸಲಿವೆ. ವಿಶೇಷ ಬಸ್‌ಗಳು ಸಿ.ಟಿ.ಒ ಜಂಕ್ಷನ್‌ನಿಂದ ಬಿ.ಆರ್.ವಿ ಜಂಕ್ಷನ್‌ವರೆಗೆ ರಸ್ತೆಯ ಎಡಭಾಗದಲ್ಲಿ ನಿಲುಗಡೆಯಾಗಲಿವೆ.

ಇದರ ಜೊತೆಗೆ, ಭದ್ರತಾ ದೃಷ್ಟಿಯಿಂದ ಕ್ರೀಡಾಂಗಣಕ್ಕೆ ಕೆಲವು ವಸ್ತುಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಭಿಮಾನಿಗಳು ಸುರಕ್ಷತಾ ಸಿಬ್ಬಂದಿಯೊಂದಿಗೆ ಸಹಕರಿಸಿ, ನಿರ್ಬಂಧಿತ ವಸ್ತುಗಳನ್ನು ತರದಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಶಯಾಸ್ಪದ ವಸ್ತುಗಳು ಕಂಡುಬಂದಲ್ಲಿ ಅವನ್ನು ವಶಕ್ಕೆ ಪಡೆಯಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಸಮೀರ್ ರಿಜ್ವಿ ಸ್ಫೋಟಕ ಬ್ಯಾಟಿಂಗ್: ಮುಂಬೈ ವಿರುದ್ಧ ಡೆಲ್ಲಿಗೆ 6 ವಿಕೆಟ್‌ಗಳ ಜಯ!

0

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲಿಗೆ ಬ್ಯಾಟ್ ಬೀಸಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 163 ರನ್ ಟಾರ್ಗೆಟ್ ನೀಡಿತು. ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 164 ರನ್ ಗಳಿಸುವ ಮೂಲಕ ಜಯ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಎರಡನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಕೇವಲ 1 ರನ್ ಗಳಿಸಿ ಔಟಾದರು. ನಿತೀಶ್ ರಾಣಾ ರನೌಟ್ ಆದರು. ಕೇವಲ 7 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ತಂಡ ಆಘಾತಕ್ಕೊಳಗಾಗಿತ್ತು. ಈ ವೇಳೆ, ಪಾತುಮ್ ನಿಸ್ಸಾಂಕ 30 ಎಸೆತಗಳಿಗೆ 4 ಬೌಂಡರಿ ಹಾಗೂ ಒಂದು ಸಿಕ್ಸ್ ಬಾರಿಸಿ ಒಟ್ಟು 44 ರನ್ ಕಲೆಹಾಕಿ, ತಂಡಕ್ಕೆ ಚೇತರಿಗೆ ನೀಡಿತು. ಸಮೀರ್ ರಿಜ್ವಿ 51 ಬಾಲ್‌ಗೆ 90 ರನ್ ಗಳಿಸಿ (7 ಫೋರ್ ಮತ್ತು 7 ಸಿಕ್ಸರ್) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಿಮಗೂ ಥೈರಾಯ್ಡ್ ಸಮಸ್ಯೆ ಇದ್ಯಾ!? ಚಿಂತೆ ಬಿಟ್ಟು ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಸಮಸ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ಥೈರಾಯ್ಡ್ ಒಂದು ಪ್ರಮುಖ ಗ್ರಂಥಿಯಾಗಿದ್ದು, ಇದು ಕುತ್ತಿಗೆಯ ಭಾಗದಲ್ಲಿ ಇರುತ್ತದೆ ಮತ್ತು ದೇಹದ ಮೆಟಾಬಾಲಿಸಮ್ ಅನ್ನು ನಿಯಂತ್ರಿಸುತ್ತದೆ.

ಈ ಗ್ರಂಥಿ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ತೂಕ ಹೆಚ್ಚುವುದು ಅಥವಾ ಕಡಿಮೆಯಾಗುವುದು, ದಣಿವು, ಕೂದಲು ಉದುರುವುದು, ಚರ್ಮದ ಸಮಸ್ಯೆಗಳು ಕಾಣಿಸಬಹುದು. ಜೀವನಶೈಲಿ, ಒತ್ತಡ, ಹಾರ್ಮೋನ್ ಬದಲಾವಣೆಗಳು ಮತ್ತು ಪೌಷ್ಟಿಕಾಂಶ ಕೊರತೆಯೂ ಇದರ ಪ್ರಮುಖ ಕಾರಣಗಳಾಗಿವೆ.

ಥೈರಾಯ್ಡ್ ಸಮಸ್ಯೆ ಇದ್ದಾಗ ಯಾವ ಆಹಾರಗಳ ಸೇವನೆ ಮಾಡಬಾರದು?

  • ಸೋಯಾ ಮತ್ತು ಸೋಯಾ ಉತ್ಪನ್ನಗಳು, ಏಕೆಂದರೆ ಇವು ಥೈರಾಯ್ಡ್ ಹಾರ್ಮೋನ್ ಕಾರ್ಯಕ್ಕೆ ಅಡ್ಡಿಯಾಗಬಹುದು
  • ಕಚ್ಚಾ ತರಕಾರಿಗಳು, ವಿಶೇಷವಾಗಿ ಗೋಬಿ, ಬ್ರೋಕೊಲಿ ಹೆಚ್ಚು ಪ್ರಮಾಣದಲ್ಲಿ ಸೇವನೆ ಮಾಡುವುದನ್ನು ತಪ್ಪಿಸಬೇಕು
  • ಪ್ರೊಸೆಸ್ಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಹಾನಿಕಾರಕ
  • ಹೆಚ್ಚು ಉಪ್ಪು ಮತ್ತು ಸಕ್ಕರೆ ಇರುವ ಆಹಾರಗಳು
  • ಕೆಫೀನ್ ಮತ್ತು ಮದ್ಯಪಾನ, ಹಾರ್ಮೋನ್ ಅಸಮತೋಲನಕ್ಕೆ ಕಾರಣ
  • ಥೈರಾಯ್ಡ್ ನಿಯಂತ್ರಣಕ್ಕೆ ಯಾವ ರೀತಿಯ ಆಹಾರ ಸೇವನೆ ಮಾಡಬೇಕು?
  • ಐಯೋಡಿನ್ ಇರುವ ಆಹಾರಗಳು: ಉಪ್ಪು, ಹಾಲು ಉತ್ಪನ್ನಗಳು, ಮೀನು
  • ಸೆಲೆನಿಯಂ ಮತ್ತು ಜಿಂಕ್ ಇರುವ ಆಹಾರಗಳು: ಡ್ರೈಫ್ರೂಟ್ಸ್, ಬೀಜಗಳು, ಸಂಪೂರ್ಣ ಧಾನ್ಯಗಳು
  • ಹಸಿರು ತರಕಾರಿಗಳು ಮತ್ತು ಹಣ್ಣುಗಳು
  • ಪ್ರೋಟೀನ್ ಆಹಾರಗಳು: ಬೇಳೆ, ಮೊಟ್ಟೆ, ಪನೀರ್
  • ಸಾಕಷ್ಟು ನೀರು ಕುಡಿಯುವುದು ಮತ್ತು ಸಮತೋಲನ ಆಹಾರ ಸೇವನೆ
  • ಜೀವನಶೈಲಿ ಯಾವ ರೀತಿಯ ಬದಲಾವಣೆ ಮಾಡಿಕೊಳ್ಳಬೇಕು?
  • ನಿಯಮಿತ ವ್ಯಾಯಾಮ ಮತ್ತು ಯೋಗ
  • ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು
  • ವೈದ್ಯರ ಸೂಚನೆ ಅನುಸರಿಸಿ ಔಷಧಿ ಸಮಯಕ್ಕೆ ತೆಗೆದುಕೊಳ್ಳುವುದು
  • ಸಾಕಷ್ಟು ನಿದ್ರೆ
  • ನಿಯಮಿತವಾಗಿ ಆರೋಗ್ಯ ತಪಾಸಣೆ

ಒಟ್ಟಿನಲ್ಲಿ, ಸರಿಯಾದ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿ ಮೂಲಕ ಥೈರಾಯ್ಡ್ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಜೊತೆಗೆ, ತಜ್ಞರ ಸಲಹೆಯನ್ನು ಪಾಲಿಸುವುದು ಬಹಳ ಮುಖ್ಯ.

 

ಕ್ಷುಲ್ಲಕ ವಿಚಾರಕ್ಕೆ ಯುವಕನ ಬರ್ಬರ ಕೊಲೆ: ಹುಡುಗಿ ವಿಚಾರಕ್ಕೆ ನಡೆಯಿತಾ ಕೃತ್ಯ!?

0

ಬೆಂಗಳೂರು: ಬೆಂಗಳೂರಿನ ಜೆ.ಸಿ. ನಗರದ ಮುಖ್ಯರಸ್ತೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ವಿಜಯ್(22) ಕೊಲೆಯಾದ ವ್ಯಕ್ತಿ. ಘಟನೆ ಸಂಬಂಧ ಕಿರಣ್ ಮತ್ತು ವಿನೋದ್ ಎಂಬ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಶುಕ್ರವಾರ ರಾತ್ರಿ ಕುಡಿದು ಹೋಗುವಾಗ ವಿಜಯ್ ಬೈಕ್​​ಗೆ ವಿನೋದ್ ಗಾಡಿ ಟಚ್ ಆಗಿತ್ತು. ಇದೇ ವಿಚಾರವಾಗಿ ಗಲಾಟೆ ಕೂಡ ನಡೆದಿತ್ತು. ವಿಷಯವನ್ನು ಅಲ್ಲಿಗೆ ಬಿಡದೆ ಇಂದು ಬೆಳಗ್ಗೆ ವಿಜಯ್ ಹುಡುಕಿಕೊಂಡು ಆರೋಪಿಗಳಾದ ಕಿರಣ್ ಮತ್ತು ವಿನೋದ್ ಹೋಗಿದ್ದರು. ಮನೆ ಬಳಿ ತೆರಳಿದ್ದಾಗ ವಿಜಯ್ ಸಿಗದಿದ್ದರಿಂದ ಫೋನ್ ಮಾಡಿ ಆತನನ್ನು ಮತ್ತೆ ಬಾರ್ ಬಳಿಗೆ ಕರೆಸಿಕೊಂಡಿದ್ದರು.

ವಿಜಯ್​​ ಸ್ಥಳಕ್ಕೆ ಬರುತ್ತಿದ್ದಂತೆ ಗಲಾಟೆ ಶುರುಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ವಿಜಯ್ ಹೊಟ್ಟೆಗೆ ಚಾಕು ಇರಿಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಜೆ.ಸಿ.ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇನ್ನು ಪ್ರಕರಣ ಸಂಬಂಧ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದ್ದು, ಬೈಕ್​​ ಟಚ್​​ ಆದ ವಿಚಾರ ಕೊಲೆಗೆ ಕೇವಲ ಪ್ರಚೋದನೆ ಮಾತ್ರ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಆರೋಪಿ ಕಿರಣ್​​ ಮತ್ತು ವಿಜಯ್​​ ನಡುವೆ ಹಿಂದಿನಿಂದಲೂ ದ್ವೇಷವಿತ್ತು. ವಿಜಯ್​​ಗೆ ಅದಾಗಲೇ ಮದುವೆಯಾಗಿದ್ದರೂ ಮಾಜಿ ಪ್ರೇಯಸಿಗೆ ಕಾಟ ನೀಡುತ್ತಿದ್ದ. ಆಕೆ ಈಗ ಕಿರಣ್​​ ಲವರ್​​ ಆಗಿದ್ದು, ಇದೇ ಕಾರಣಕ್ಕೆ ವಿಜಯ್​​ ಮೇಲೆ ಕಿರಣ್​​ಗೆ ಕೋಪ ಇತ್ತು. ಹೀಗಾಗಿ ನಿನ್ನೆ ರಾತ್ರಿಯ ಗಲಾಟೆ ನೆಪದಲ್ಲಿ ಇಂದು ಅಟ್ಟಾಡಿಸಿ ಕೊಲೆ ಮಾಡಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ.

ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದು ಬರಬೇಕಾಗಿದೆ.

ನಾಲಿಗೆಯಲ್ಲಿ ಪದೇ-ಪದೇ ಹುಣ್ಣಾಗುತ್ತಾ!? ಹಾಗಿದ್ರೆ ಇದು ಗಂಭೀರ ರೋಗದ ಮುನ್ಸೂಚನೆ!

0

ಕೆಲವರಿಗೆ ನಾಲಿಗೆಯಲ್ಲಿ ಪದೇ ಪದೇ ಹುಣ್ಣುಗಳು ಕಾಣಿಸುತ್ತವೆ. ಇದನ್ನು ವೈದ್ಯರು ಮೌತ್ ಅಲ್ಸರ್  ಎಂದು ಕರೆಯುತ್ತಾರೆ.

ಹೆಚ್ಚಿನವರು ಇದನ್ನು ದೇಹದ ಉಷ್ಣತೆ ಹೆಚ್ಚಳದ ಪರಿಣಾಮ ಎಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರು ಹೇಳುವಂತೆ, ಇದು ಕೆಲವೊಮ್ಮೆ ದೇಹದ ಒಳಗಿನ ಸಮಸ್ಯೆಗಳ ಸೂಚನೆ ಆಗಬಹುದು.

ಹುಣ್ಣುಗಳ ಪ್ರಮುಖ ಕಾರಣಗಳು:

  • ದೇಹದ ಉಷ್ಣತೆ ಹೆಚ್ಚಾದಾಗ.
  • ವಿಟಮಿನ್ B ಮತ್ತು C ಕೊರತೆ.
  • ಹೆಚ್ಚು ಮಸಾಲೆ, ಬಿಸಿ ಆಹಾರ ಸೇವನೆ.
  • ಬಾಯಿಯ ಸ್ವಚ್ಛತೆಯ ಕೊರತೆ.
  • ನಾಲಿಗೆಗೆ ಪದೇಪದೇ ಗಾಯವಾಗುವುದು.
  • ಮಾನಸಿಕ ಒತ್ತಡ, ಹಾರ್ಮೋನ್ ಬದಲಾವಣೆ.
  • ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು.
  • ರೋಗನಿರೋಧಕ ಶಕ್ತಿಯ ದುರ್ಬಲತೆ.
  • ಸೋಂಕು ಅಥವಾ ಅಲರ್ಜಿ ಸಮಸ್ಯೆ.
  • ತಡೆಗಟ್ಟುವುದು ಹೇಗೆ?
  • ಮಸಾಲೆ, ಹುಳಿ ಮತ್ತು ಬಿಸಿ ಆಹಾರ ಕಡಿಮೆ ಸೇವನೆ.
  • ಪ್ರತಿದಿನ ಬಾಯಿಯನ್ನು ಸ್ವಚ್ಛವಾಗಿ ತೊಳೆಯುವುದು.
  • ಸಾಕಷ್ಟು ನೀರು ಕುಡಿಯುವುದು.
  • ವಿಟಮಿನ್ B ಮತ್ತು C ಇರುವ ಹಣ್ಣು, ಹಸಿರು ತರಕಾರಿ ಸೇವನೆ.
  • ಒತ್ತಡ ಕಡಿಮೆ ಮಾಡಿ ಸರಿಯಾಗಿ ನಿದ್ರೆ.
  • ತಂಬಾಕು ಮತ್ತು ಮದ್ಯಪಾನದಿಂದ ದೂರವಿರಬೇಕು.
  • ವೈದ್ಯರನ್ನು ಸಂಪರ್ಕಿಸಬೇಕಾದ ಸಂದರ್ಭಗಳು:
  • 10–15 ದಿನಗಳಲ್ಲಿ ಗುಣವಾಗದಿದ್ದರೆ.
  • ಪದೇಪದೇ ಹುಣ್ಣುಗಳು ಕಾಣಿಸಿದರೆ.
  • ತೀವ್ರ ನೋವು, ಊತ, ಜ್ವರ, ರಕ್ತಸ್ರಾವ ಕಂಡುಬಂದರೆ.
  • ಊಟದಲ್ಲಿ ತೊಂದರೆ ಅಥವಾ ತೂಕ ಕಡಿಮೆಯಾಗುತ್ತಿರುವುದು.

ನಾಲಿಗೆಯ ಹುಣ್ಣುಗಳನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸಬಾರದು. ದೀರ್ಘಕಾಲ ಇದ್ದರೆ ಅದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಸೂಚನೆ ನೀಡಬಹುದು. ಸಮಯಕ್ಕೆ ಸರಿಯಾಗಿ ಗಮನಿಸಿ, ಚಿಕಿತ್ಸೆ ಪಡೆಯುವುದು ಅಗತ್ಯ.

ಬಾದಾಮಿಗೆ ಕೈ ಕೊಟ್ಟು ಓಡಿ ಹೋದ ಸಿದ್ದರಾಮಯ್ಯ: ಆರ್.ಅಶೋಕ್ ವ್ಯಂಗ್ಯ

ಬಾಗಲಕೋಟೆ: ಸಿದ್ದರಾಮಯ್ಯ ಅವರ ನಿಜ ಬಣ್ಣ ಮೈಸೂರಿನಲ್ಲಿ ಗೊತ್ತಾಗಿ ಅಲ್ಲಿನ ಮತದಾರರು ಸೋಲಿಸಿದರು. ಆಗ ಬಾದಾಮಿಗೆ ಓಡಿ ಬಂದರು. ಬಾದಾಮಿ ಕೈ ಹಿಡಿಯಿತು. ಆದರೆ ಇಲ್ಲಿಗೂ ಕೈ ಕೊಟ್ಟು ಓಡಿ ಹೋದರು. ಈಗ ಮತ್ತೆ ಬಾಗಲಕೋಟೆಗೆ ಬಂದಿದ್ದಾರೆ. ಇಲ್ಲಿಗೂ ಕೈ ಕೊಡುತ್ತಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.

ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಗ ಚುನಾವಣೆಗೆ ಬಾದಾಮಿಗೆ ಬಂದಿದ್ದರು. ಈಗ ಮತ್ತೆ ಬಂದಿದ್ದಾರೆ. ಬಾದಾಮಿ ಹಾಲು ಕುಡಿದು, ಬಿರಿಯಾನಿ ತಿಂದು ಟಾಟಾ ಬಾಯ್ ಬಾಯ್ ಹೇಳಿದರು. ಇನ್ನು ಎರಡು ವರ್ಷದಲ್ಲಿ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಅಂತ ಅವರು ಹೇಳುತ್ತಿದ್ದಾರೆ.

ಮೂರು ವರ್ಷ ನಿಮ್ಮದೇ ಶಾಸಕರು ಬಾಗಲಕೋಟದಲ್ಲಿ ಇದ್ದರಲ್ಲ. ಆಗ ನಿಮ್ಮ ಶಿಷ್ಯ ಏನು ಅಭಿವೃದ್ಧಿ ಮಾಡಿದ್ರು ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಈ ಹಿಂದೆ ಚರಂತಿಮಠ ಅವರ ಅಭಿವೃದ್ಧಿ ಕಾರ್ಯ ಜನರ ಮನಸ್ಸಲ್ಲಿ ಉಳಿದಿದೆ. ಆದ್ದರಿಂದ ಈ ಬಾರಿ ಜನರು ಅವರನ್ನು ಗೆಲ್ಲಿಸಲಿದ್ದಾರೆ ಎಂದರು.

ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಪಟ್ಟಕ್ಕಾಗಿ ಗುದ್ದಾಟ ನಡೆದಿದೆ. ಮೂರು ವರ್ಷದಲ್ಲಿ 30 ಹಗರಣಗಳನ್ನು ಮಾಡಿದರು. ವಾಲ್ಮೀಕಿ ಹಗರಣದಿಂದ ಹಿಡಿದು ಗುತ್ತಿಗೆದಾರರ ಅರವತ್ತು ಪಸೆರ್ಂಟ್ ಕಮಿಷನ್ ಹಗರಣದವರೆಗೆ ನಡೆಯತ್ತಿವೆ. ಲಿಕ್ಕರ್ ಲಾಬಿ ಮಾಡಿ ಸಚಿವರೊಬ್ಬರು ಕೋಟಿ ಕೋಟಿ ಹಣ ಹೊಡೆದು ದೆಹಲಿಗೆ ಕಳಿಸಿದರು. ಮೂರು ವರ್ಷದಲ್ಲಿ ಯಾವುದೇ ಸಾಧನೆ ಮಾಡಲಿಲ್ಲ. ನೀರಾವರಿಗೆ ಹಣ ಇಡಲಿಲ್ಲ. ಆದರೆ ಕಾಂಗ್ರೆಸ್‍ನವರು ಮಾತ್ರ ಹಣ ಮಾಡಿಕೊಳ್ಳುತ್ತಿದ್ದಾರೆ. ಒಂದು ಡ್ಯಾಮ್ ಕಟ್ಟಲಿಲ್ಲ. ಮೆಡಿಕಲ್ ಕಾಲೇಜು ತರಲಿಲ್ಲ ಎಂದರು.

ಕಾಂಗ್ರೆಸ್ ಬಂದ ಮೇಲೆ ಒಂದೇ ಒಂದು ಪಿ.ಎಚ್.ಸಿಗಳಲ್ಲಿ ವೈದ್ಯರಿಲ್ಲ. ಔಷಧ ಖರೀದಿಗೆ ಹಣವಿಲ್ಲ. ಹಣವಿಲ್ಲದೆ ಮೂರು ವರ್ಷದಲ್ಲಿ ಟೆಂಡರ್ ಕರೆದಿಲ್ಲ. ಅಭಿವೃದ್ಧಿಗೆ ಮಾಡಿದ ಸಾಲವೇ ಜಾಸ್ತಿ. ಸಾಲ ತಗೊಂಡು ಮಜವಾದಿ ರಾಮಯ್ಯ ಆದರು. ಸಣ್ಣ ಸಣ್ಣ ಸಮುದಾಯಗಳ ಬಳಿ ಹೋಗಿ ಈಗ ಮತ ಕೇಳುತ್ತಿದ್ದಾರೆ. 20 ನೇ ತಾರೀಕಿನ ನಂತರ ಇವರ ಕಥೆ ಏನು ಆಗುತ್ತದೋ ಗೊತ್ತಿಲ್ಲ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಿಎಂ ಸ್ಥಾನವನ್ನು ಒದ್ದು ಕಿತ್ತುಕೋತಾರೆ ಎಂದು ವಿವರಿಸಿದರು.

ಎಸ್.ಟಿ.ಮುಖಂಡನನ್ನು ಸಿಎಂ ಮಾಡ್ತಿನಿ ಅಂತ ಸಿದ್ದರಾಮಯ್ಯ ಅವರು ಒಂದು ದಿನ ಹೇಳಿಲ್ಲ. ಮುಂದೆ ಹೇಳಲ್ಲ. ಏಕೆಂದರೆ ಅವರ ಸ್ಥಾನವೇ ಗ್ಯಾರಂಟಿ ಇಲ್ಲ. ಮುಖ್ಯಮಂತ್ರಿಯಾಗಲು ಪರಮೇಶ್ವರ್ ಅವರು ಕಾಯುತ್ತಿದ್ದಾರೆ. ಆದರೆ ಅವರ ಭಾಗ್ಯದ ಬಾಗಿಲು ತೆರೆಯುವುದೇ ಡೌಟು ಎಂದರು.

ಅಭಿವೃದ್ಧಿ ವಿಷಯದಲ್ಲಿ ನಾನು ಸದಾ ರಾಜ್ಯ ಸರ್ಕಾರದ ಜೊತೆ ನಿಲ್ಲುತ್ತೇನೆ ಎಂದ ಹೆಚ್.ಡಿ. ಕುಮಾರಸ್ವಾಮಿ

ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದ ಶ್ರೀ ಕೃಷ್ಣದೇವರಾಯ ವಿದ್ಯಾಸಂಸ್ಥೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ಸೈನಿಕ ಶಾಲೆಯನ್ನು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ಕೇಂದ್ರದ ರಕ್ಷಣಾ ಖಾತೆ ರಾಜ್ಯ ಸಚಿವರಾದ ಸಂಜಯ್ ಸೇಠ್ ಅವರು ಹಾಗೂ ಆಂಧ್ರ ಪ್ರದೇಶದ ಸಚಿವರಾದ ನಾ.ರಾ. ಲೋಕೇಶ್ ಅವರು ಉದ್ಘಾಟನೆ ನೆರವೇರಿಸಿದರು. ಸಿಂಧನೂರು ಪಟ್ಟಣದಲ್ಲಿ ಶನಿವಾರ ನಡೆದ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ನೂತನ ಸೈನಿಕ ಶಾಲೆಗೆ ಹಸಿರುನಿಶಾನೆ ತೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಕುಮಾರಸ್ವಾಮಿಯವರು; ರಕ್ಷಣಾ ಕ್ಷೇತ್ರದಲ್ಲಿ ಭಾರತವನ್ನು ಸಾಟಿ ಇಲ್ಲದ ದೇಶವನ್ನಾಗಿ ರೂಪಿಸಲು ಪ್ರಧಾನಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಬಹುದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಇದರ ಭಾಗವಾಗಿಯೇ ಸಿಂಧನೂರಿಗೆ ಸೈನಿಕ ಶಾಲೆಯನ್ನು ಮಂಜೂರು ಮಾಡಲಾಗಿದೆ. ಇದಕ್ಕಾಗಿ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅದೇ ಸಚಿವಾಲಯದ ರಾಜ್ಯ ಸಚಿವರಾದ ಸಂಜಯ್ ಸೇಠ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವೆ ಎಂದು ಹೇಳಿದರು.

ಸಿಂಧನೂರಿನಲ್ಲಿ ಸೈನಿಕ ಶಾಲೆ ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಅವರು ಸಾಕಷ್ಟು ಶ್ರಮಿಸಿದ್ದಾರೆ. ಇವತ್ತು ಆಂಧ್ರ ಪ್ರದೇಶದ ಸಚಿವರಾದ ನಾ.ರಾ. ಲೋಕೇಶ್ ಅವರು ಮತ್ತು ಕೇಂದ್ರದ ಸಚಿವರಾದ ಸಂಜಯ್ ಸೇಠ್ ಅವರು ಪಟ್ಟಣಕ್ಕೆ ಬಂದು ಶಾಲೆಗೆ ನಾಂದಿ ಹಾಡಿದ್ದಾರೆ. ರಾಯಚೂರು ಜಿಲ್ಲೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಕಟ್ಟಿ ಬದ್ಧವಾಗಿದೆ ಎಂಬುದಕ್ಕೆ ಈ ಶಾಲೆಯ ಮಂಜೂರಾತಿಯೇ ಉದಾಹರಣೆ ಆಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಅಭಿವೃದ್ಧಿ ವಿಷಯದಲ್ಲಿ ರಾಜ್ಯ ಸರ್ಕಾರದ ಜತೆ ಇದ್ದೇನೆ:

ಈ ಕಾರ್ಯಕ್ರಮದಲ್ಲಿ ಮುಂದುವರೆದು ಮಾತನಾಡಿದ ಕೇಂದ್ರ ಸಚಿವರು; ಅಭಿವೃದ್ಧಿ ವಿಷಯದಲ್ಲಿ ಯಾರು ರಾಜಕೀಯ ಮಾಡಬಾರದು. ಎಲ್ಲರೂ ಸಂಘಟಿತವಾಗಿ ಕೆಲಸ ಮಾಡಿದರೆ ಮಾತ್ರ ರಾಜ್ಯಕ್ಕೆ ಒಳ್ಳೆದಾಗುತ್ತದೆ. ಅಭಿವೃದ್ಧಿ ವಿಷಯದಲ್ಲಿ ನಾನು ಎಂದೆಂದಿಗೂ ರಾಜ್ಯ ಸರ್ಕಾರದ ಜೊತೆಗೆ ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಅಭಿವೃದ್ಧಿಯ ಅನೇಕ ಕೆಲಸಗಳು ಆಗಬೇಕಿದೆ. ಅದಕ್ಕಾಗಿ ರಾಜಕೀಯ ಭಿನ್ನಮತ ಮರೆತು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ನನ್ನ ಕಡೆಯಿಂದ ಏನೇ ಕೆಲಸ ಆಗಬೇಕಿದ್ದರೂ ಯಾರೇ ಆಗಲಿ ನನ್ನನ್ನು ಮುಕ್ತವಾಗಿ ಸಂಪರ್ಕಿಸಬಹುದು. ರಾಜ್ಯಕ್ಕೆ ಒಳ್ಳೆಯದು ಮಾಡುವುದು ನನ್ನ ಕರ್ತವ್ಯ ಎಂದು ಭಾವಿಸಿದ್ದೇನೆ ಎಂಬುದಾಗಿ ಸಚಿವರು ಹೇಳಿದರು.

ರಾಯಚೂರು ಜಿಲ್ಲೆಗೆ ಏಮ್ಸ್ (ಅಖಿಲ ಭಾರತ ವೈದ್ಯಕೀಯ ಸಂಸ್ಥೆ) ಬೇಕೆನ್ನುವ ಬೇಡಿಕೆ ಇದೆ. ಹಾಗೆಯೇ ತುಂಗಭದ್ರಾ ಜಲಾಶಯಕ್ಕೆ ಸಮಾನಂತರವಾಗಿ ನವಿಲೇ ಜಲಾಶಯ ನಿರ್ಮಾಣದ ಬೇಡಿಕೆ ಕೂಡ ಇದೆ. ಇವು ಸಣ್ಣ ಬೇಡಿಕೆಗಳಲ್ಲ. ಇವೆಲ್ಲವೂ ಈಡೇರಬೇಕಾದರೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಈ ಭಾಗದಲ್ಲಿ ಕೈಗಾರಿಕೆ ಬರಬೇಕು ಎಂದು ಇಲ್ಲಿನ ಶಾಸಕರು, ಹಿರಿಯರು ಆಗಿರುವ ಹಂಪನಗೌಡ ಬಾದರ್ಲಿ ಅವರು ಬೇಡಿಕೆ ಮಂಡಿಸಿದ್ದಾರೆ. ಅದಕ್ಕೆ ಸಂಸದರಾದ ಕುಮಾರ್ ನಾಯಕ ಅವರು ದನಿಗೂಡಿಸಿದ್ದಾರೆ. ಇದಕ್ಕೆ ನನ್ನ ಸಹಮತವೂ ಇದೆ. ಯಾವುದಾದರೂ ಒಂದು ಕೈಗಾರಿಕೆಯನ್ನು ಇಲ್ಲಿಗೆ ತರುವ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಿಮ್ಮ ಬೇಡಿಕೆಗೆ ಸ್ಪಂದಿಸುವ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು

ಗ್ಯಾಸ್‌ʼಗಾಗಿ ಆಟೋ ಚಾಲಕರ ಕ್ಯೂ: ಇತ್ತ ಫ್ರೀ IPL ಟಿಕೆಟ್‌ʼಗಾಗಿ ಹಾತೊರೆದ ಶಾಸಕರು..! 

ಬೆಂಗಳೂರು: ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆಯಿಂದ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲೇ, ಜನಪ್ರತಿನಿಧಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಗ್ಯಾಸ್ ಸಿಲಿಂಡರ್ ಪಡೆಯಲು ಆಟೋ ಚಾಲಕರು ರಾತ್ರಿಯಿಡೀ ಸಾಲಿನಲ್ಲಿ ನಿಲ್ಲುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಶಾಸಕರು ಐಪಿಎಲ್ ಟಿಕೆಟ್‌ಗಾಗಿ ತಮ್ಮ ಪಿಎಗಳನ್ನು ಸಾಲಿನಲ್ಲಿ ನಿಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಹಿನ್ನೆಲೆಯಲ್ಲಿ, ಪ್ರತಿ ಪಂದ್ಯಕ್ಕೂ ಶಾಸಕರಿಗೆ ಉಚಿತವಾಗಿ 3 ಟಿಕೆಟ್ ನೀಡುವ ಕುರಿತು ಸರ್ಕಾರ ಮತ್ತು ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ನಡುವೆ ಮಾತುಕತೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಳೆ ನಡೆಯಲಿರುವ ಬೆಂಗಳೂರು-ಚೆನ್ನೈ ಪಂದ್ಯಕ್ಕಾಗಿ, ಶಾಸಕರ ಸೂಚನೆಯ ಮೇರೆಗೆ ಅವರ ಪಿಎಗಳು ಸ್ಪೀಕರ್ ಕಚೇರಿ ಮುಂದೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಜನಸಾಮಾನ್ಯರ ಸಮಸ್ಯೆಗಳಿಗಿಂತ ವೈಯಕ್ತಿಕ ಆಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಜನಪ್ರತಿನಿಧಿಗಳ ಈ ನಡೆ ವಿರೋಧಕ್ಕೆ ಗುರಿಯಾಗಿದೆ. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ಪಂದನೆ ನೀಡದೇ, ಮನರಂಜನೆಗಾಗಿ ಈ ರೀತಿಯ ವರ್ತನೆ ತೋರಿರುವುದು ವಿಪರ್ಯಾಸ ಎಂದು ಟೀಕೆಗಳು ಕೇಳಿಬರುತ್ತಿವೆ.

error: Content is protected !!