Home Blog Page 2

ಹಣ ಕೇಳಿದ ಮಹಿಳೆಯರ ಮೇಲೆ ಗ್ಯಾಂಗ್ ದಾಳಿ: ಆರೋಪಿಗಳ ವಿರುದ್ಧ ದೂರು ದಾಖಲು

ಕಾರವಾರ: ಕೊಟ್ಟ ಹಣವನ್ನು ಮರುಪಾವತಿ ಮಾಡುವಂತೆ ಕೇಳಿದ ಕಾರಣಕ್ಕೆ ಮಹಿಳೆಯರ ಮೇಲೆ ಗ್ಯಾಂಗ್ ದಾಳಿ ನಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೆಹರು ನಗರದಲ್ಲಿ ಬೆಳಕಿಗೆ ಬಂದಿದೆ.

ಯಲ್ಲಾಪುರದ ನಿವಾಸಿಗಳಾದ ಆಯಿಷಾ ಮತ್ತು ಗೀತಾ ಅವರ ಮೇಲೆ ಮೊಹಮ್ಮದ್ ಸಲ್ಮಾನ್ ಹಾಗೂ ಅವನ ಸಂಗಡಿಗರು ಕ್ರೂರವಾಗಿ ಹಲ್ಲೆ ನಡೆಸಿದರೆಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತ್ರಸ್ತೆಯ ಹೇಳಿಕೆಯ ಪ್ರಕಾರ, ಆಯಿಷಾ ಅವರು ಅಂಗಡಿ ಆರಂಭಿಸಲು ಸಲ್ಮಾನ್‌ಗೆ ಸುಮಾರು 3.80 ಲಕ್ಷ ರೂಪಾಯಿ ನೀಡಿದ್ದರು. ನಂತರ ಕುಟುಂಬದ ಅನಿವಾರ್ಯ ಪರಿಸ್ಥಿತಿಯಿಂದ ಹುಬ್ಬಳ್ಳಿಗೆ ತೆರಳಿದ್ದ ಅವರು, ಎರಡು ತಿಂಗಳ ಬಳಿಕ ಮರಳಿ ಬಂದಾಗ ಸಲ್ಮಾನ್ ಯಲ್ಲಾಪುರವನ್ನು ತೊರೆದು ಶಿರಸಿಯಲ್ಲಿ ವ್ಯಾಪಾರ ನಡೆಸುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಅವರು ನೇರವಾಗಿ ಶಿರಸಿಗೆ ತೆರಳಿ ತಮ್ಮ ಹಣವನ್ನು ಹಿಂತಿರುಗಿಸುವಂತೆ ಕೇಳಿದ್ದಾರೆ.

ಆದರೆ ಈ ವಿಚಾರವಾಗಿ ಮಾತುಕತೆ ನಡೆಯುತ್ತಿದ್ದ ವೇಳೆ ಪರಿಸ್ಥಿತಿ ಏಕಾಏಕಿ ತೀವ್ರಗೊಂಡಿದ್ದು, ನಾಲ್ಕು ರಿಂದ ಐದು ಜನರ ಗುಂಪು ಸ್ಥಳಕ್ಕೆ ಬಂದು ಮಹಿಳೆಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಿಗ್ಗಾಮುಗ್ಗ ಥಳಿಸಿದೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆಯರ ಮೇಲೆ ಅಸಭ್ಯವಾಗಿ ವರ್ತಿಸಿ ಅವರ ಗೌರವಕ್ಕೆ ಧಕ್ಕೆ ಉಂಟುಮಾಡಲಾಗಿದೆ ಎಂಬುದೂ ತಿಳಿದುಬಂದಿದೆ.

ಇನ್ನಷ್ಟು ಆತಂಕಕಾರಿ ಅಂಶವೆಂದರೆ, ಸಂತ್ರಸ್ತೆಯ ಪ್ರಕಾರ ಯುಪಿ ಮತ್ತು ಬಿಹಾರ ಮೂಲದ ಕೆಲವರು ಕಳೆದ 18 ರಿಂದ 20 ವರ್ಷಗಳಿಂದ ಯಲ್ಲಾಪುರದಲ್ಲಿ ನೆಲೆಸಿದ್ದು, ಸಲೂನ್ ವ್ಯವಹಾರದಲ್ಲಿ ಪಾಲುದಾರರಾಗುವಂತೆ ನಂಬಿಸಿ ಹಣ ಪಡೆದಿದ್ದರು. ನಂತರ ಶಾಪ್ ಆರಂಭಿಸಿ, ಅಚಾನಕ್ ಅದನ್ನು ಮುಚ್ಚಿ ಹಲವು ಕಡೆ ಸಾಲ ಮಾಡಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಮಹಿಳೆ ಹಿಂದೆಲೇ ಪೊಲೀಸರಿಗೆ ದೂರು ನೀಡಿದ್ದರು. ಆ ಸಮಯದಲ್ಲಿ ಹಣ ಹಿಂತಿರುಗಿಸುವ ಭರವಸೆ ನೀಡಿದ್ದರೂ, ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು.

ಇತ್ತೀಚೆಗೆ ಅವರು ಶಿರಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ, ಸಂತ್ರಸ್ತೆಯರು ಅಲ್ಲಿಗೆ ತೆರಳಿ ವಿಚಾರಿಸಿದಾಗ, ಸಲ್ಮಾನ್‌ನ ಸಹೋದರನ ಸಂಪರ್ಕದಲ್ಲಿ ಈ ಘಟನೆ ನಡೆದಿದ್ದು, ಕೊನೆಗೆ ಗ್ಯಾಂಗ್ ದಾಳಿ ರೂಪ ಪಡೆದುಕೊಂಡಿದೆ ಎನ್ನಲಾಗಿದೆ.

CSK ವಿರುದ್ಧ ಗೆದ್ದರೂ PBKS ನಾಯಕ ಅಯ್ಯರ್‌ಗೆ ದಂಡ: ನಿಧಾನಗತಿಯ ಓವರ್ ರೇಟ್‌ʼಗೆ 24 ಲಕ್ಷ ರೂ. ಪೆನಾಲ್ಟಿ

0

ಚೆನ್ನೈ: ಪಂಜಾಬ್ ಕಿಂಗ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣ ತಂಡದ ನಾಯಕ ಶ್ರೇಯಸ್ ಅಯ್ಯರ್ ಗೆ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಿಯಮಾವಳಿ ಉಲ್ಲಂಘನೆ ಹಿನ್ನೆಲೆ ಅಯ್ಯರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದೇ ತಪ್ಪು ಮತ್ತೊಮ್ಮೆ ಮಾಡಿದರೆ 36 ಲಕ್ಷ ರೂ. ದಂಡದ ಜೊತೆಗೆ ಒಂದು ಪಂದ್ಯದಿಂದ ನಿಷೇಧವೂ ಎದುರಾಗಲಿದೆ ಎಂದು ಐಪಿಎಲ್ ಮಂಡಳಿ ಎಚ್ಚರಿಸಿದೆ.

ಇದಲ್ಲದೆ, ಪ್ಲೇಯಿಂಗ್-11 ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಸೇರಿ ಉಳಿದ ಆಟಗಾರರಿಗೆ ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ. ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 209 ರನ್ ಗಳಿಸಿತು.

ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ, 18.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿ ಗೆಲುವು ಸಾಧಿಸಿತು.ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಆರಂಭಿಕ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

 

ಗ್ಯಾರಂಟಿ ಪಕ್ಷ, ಗ್ಯಾರಂಟಿ ಸರ್ಕಾರಕ್ಕೆ ಗ್ಯಾರಂಟಿ ಗೆಲುವು: ಸಚಿವ ಚಲುವರಾಯಸ್ವಾಮಿ

ದಾವಣಗೆರೆ: ಈ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗ್ಯಾರಂಟಿ ಸರ್ಕಾರಕ್ಕೆ ಗೆಲುವು ಸಹ ಗ್ಯಾರಂಟಿ. ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಅಭಿವೃದ್ಧಿಗೆ ಜನಮನ್ನಣೆ ಸಿಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನತೆ ಶಾಮನೂರು ಶಿವಶಂಕರಪ್ಪ ಅವರ ಮೇಲೆ ಅಪಾರ ಗೌರವ ಹೊಂದಿದ್ದಾರೆ. ಎಲ್ಲಾ ಸಮುದಾಯದವರಿಗೂ ಸೌಲಭ್ಯ ಕಲ್ಪಿಸಿದ್ದಾರೆ.

ಶಿಕ್ಷಣ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಸಮರ್ಥ ಶಾಮನೂರು ಮಲ್ಲಿಕಾರ್ಜುನ ಅವರ ‘ಕೈʼ ಹಿಡಿಯಲಿದೆ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆಯಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವುದು ನಿಶ್ಚಿತ. ವಿಧಾನಸಭೆಯಲ್ಲಿ ನಮ್ಮ ಶಾಸಕರ ಸಂಖ್ಯೆ 138ರಿಂದ 140ಕ್ಕೆ ಏರಿಕೆಯಾಗಲಿದೆ ಎಂದರು.

ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿ ಮೋದಿ ಟೀಕಿಸಿದ್ದರು. ಗ್ಯಾರಂಟಿ ಜಾರಿಗೆ ತರಲು ಅಸಾಧ್ಯ, ರಾಜ್ಯ ದಿವಾಳಿ ಆಗುತ್ತದೆ. ರಾಜ್ಯದ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ ಎಂದರು. ಆದರೆ ಕಾಂಗ್ರೆಸ್ ಸರ್ಕಾರ ನುಡಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿತು. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರತಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ವಿವೇಚನೆಯಡಿ 80 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ವಿಪಕ್ಷ, ಆಡಳಿತದ ಶಾಸಕರಿಗೂ ಅನುದಾನ ಹಂಚಿಕೆ ಮಾಡಲಾಗಿದ್ದು ಈ ವರ್ಷ ಪ್ರತಿ ಶಾಸಕರಿಗೂ 25 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ವಿವರಿಸಿದರು.

ರಾಜ್ಯದಿಂದ 4.50 ಲಕ್ಷ ಕೋಟಿ ರೂ. ತೆರಿಗೆ ಹಣ ಪಡೆಯುತ್ತಿರುವ ಕೇಂದ್ರ ಸರ್ಕಾರ ರಾಜ್ಯಕ್ಕೆ ಹಂಚಿಕೆ ಮಾಡುತ್ತಿರುವುದು ಕೇವಲ 50 ಸಾವಿರ ಕೋಟಿ. ಐವರು ಕೇಂದ್ರ ಸಚಿವರಿದ್ದರೂ ರಾಜ್ಯದ ಹಿತಾಸಕ್ತಿ ಬಗ್ಗೆ ಬಾಯಿಬಿಡುತ್ತಿಲ್ಲ. ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದರು ಕೇಂದ್ರ ಸರ್ಕಾರ ಒಪ್ಪಿಗೆ ಕೊಡುತ್ತಿಲ್ಲ. ಈ ಬಗ್ಗೆ ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ ಅವರ ಮೌನ ಏಕೆ ಎಂದು ಪ್ರಶ್ನಿಸಿದರು.

ಈ ಉಪಚುನಾವಣೆ ಫಲಿತಾಂಶ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಈ ಉಪಚುನಾವಣೆ ಗೆಲುವು ಮುಂದಿನ ಚುನಾವಣೆ ದಿಕ್ಸೂಚಿ ಎಂಬುದು ಅವರ ವೈಯಕ್ತಿಕ ಅಭಿಪ್ರಾಯ, ರಾಜಕೀಯ ವಿಶ್ಲೇಷಣೆ. ಈ ಹಿಂದೆ ನಡೆದ ಬಳ್ಳಾರಿ, ಚನ್ನಪಟ್ಟಣ, ಹಾವೇರಿ ಉಪಚುನಾವಣೆಯಲ್ಲಿ ಮೂರರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಚನ್ನಪಟ್ಟಣ ಮತ್ತು ಹಾವೇರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ ಅವರ ಪುತ್ರರನ್ನೇ ಸೋಲಿಸಿ ಕಾಂಗ್ರೆಸ್ ಗೆಲುವು ಸಾದಿಸಿತ್ತು ಎಂದು ಹೇಳಿದರು.

ಕಾಂಗ್ರೆಸ್ ಅನ್ನು ಕಿತ್ತೊಗೆಯಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ 50 ಸ್ಥಾನ ದಾಟುತ್ತಿಲ್ಲ. ಅವರಿಗೆ ಬೇರೆ ಪಕ್ಷದ ಅನಿವಾರ್ಯತೆ ಇದೆ. ಜೆಡಿಎಸ್ ಮೈತ್ರಿ ವರ್ಕ್ ಔಟ್ ಆಗುವುದಿಲ್ಲ, ದಾವಣಗೆರೆಯಲ್ಲಿ ಜೆಡಿಎಸ್ ಪ್ರಭಾವ ಇಲ್ಲ. ಅಶೋಕ್, ವಿಜಯೇಂದ್ರ, ಕುಮಾರಸ್ವಾಮಿ ಅವರ ಮಾತಿಗೆ ಬೆಲೆ ಇಲ್ಲ. ಅವರದ್ದು ಹಿಟ್ ಅಂಡ್ ರನ್ ಎಂದು ಟೀಕಿಸಿದರು.

ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬಾಗಲಕೋಟೆ ಉಪಚುನಾವಣಾ ಪ್ರಚಾರ ಕಾರ್ಯ ಉತ್ತಮವಾಗಿ ನಡೆಯುತ್ತಿದ್ದು, ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆತಿದೆ. ಎಲ್ಲೆಡೆ ಅಭೂತಪೂರ್ವ ಸ್ಪಂದನೆ ಸಿಗುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಬಡವರಿಗಾಗಿ ರೂಪಿಸಿಸಲ್ಪಟ್ಟಿವೆ. ಎಲ್ಲಾ ಜಾತಿ, ಧರ್ಮ, ಭಾಷೆಗಳಿಗೆ ಸೇರಿದ ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಬಿಜೆಪಿ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದು, ಗ್ಯಾರಂಟಿ ಯೋಜನೆಗಳು ಸಾಮಾಜಿಕ ಬದ್ಧತೆಯನ್ನು ಒದಗಿಸುವ ಹೂಡಿಕೆಯಾಗಿದೆ. ಇದೂ ಕೂಡ ಅಭಿವೃದ್ದಿಯೇ ಎಂದರು.

ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಸೇತುವೆ, ಕಟ್ಟಡಗಳು ಮಾತ್ರವಲ್ಲ. ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವುದು ಕೂಡ ಆಗಿದೆ ಎಂದರು. ಸಾಮಾಜಿಕ ಯೋಜನೆಗಳನ್ನು ಘೋಷಿಸಿದ ಮೇಲೆ ಬಿಜೆಪಿ ಅಂದಿನಿಂದ ಇಂದಿನವರೆಗೆ ವಿರೋಧಿಸುತ್ತಲೇ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೇರಿದಂತೆ ಎಲ್ಲರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿಕೊಂಡು ಬಂದಿದ್ದಾರೆ. ಕಳೆದ ಮೂರು ವರ್ಷಗಳಿಂದ ಗ್ಯಾರಂಟಿ ಯೋಚನೆಗಳು ಜಾರಿಯಲ್ಲಿದ್ದು 24/3/2026 ವರೆಗೆ 1.31 ಲಕ್ಷ ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗೆ ಕೊಟ್ಟಿದ್ದೇವೆ.

ಇದರ ಜೊತೆಗೆ, ನೀರಾವರಿ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಕುಡಿಯುವ ನೀರು, ಪೊಲೀಸ್ ವ್ಯವಸ್ಥೆಗೆ ವೆಚ್ಚ, ಎಸ್ ಸಿ ಎಸ್ ಪಿ/ ಟಿ ಎಸ್ ಪಿ ಯೋಜನೆಗಳಿಗೆ ವೆಚ್ಚ ಮಾಡುವುದನ್ನು ಕಡಿಮೆ ಮಾಡಿಲ್ಲ. ಕಳೆದ ವರ್ಷದಲ್ಲಿ 42,000 ಕೋಟಿ ವೆಚ್ಚ ಮಾಡಿದ್ದರೆ, ಈ ವರ್ಷ 44,000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದೆ. ಅಭಿವೃದ್ಧಿ ಕೆಲಸಗಳ್ಯಾವುವೂ ಕುಂಠಿತವಾಗಿಲ್ಲ ಎಂದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕಳೆದ ಬಾರಿಗಿಂತ ದೊಡ್ಡ ಅಂತರದ ಗೆಲುವು: ಡಿ.ಕೆ. ಶಿವಕುಮಾರ್

ಬೆಂಗಳೂರು: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಕ್ಕಿಂತ ಈ ಬಾರಿಯ ಉಪಚುನಾವಣೆಯಲ್ಲಿ ಹೆಚ್ಚು ಮತ ಬೀಳಲಿದ್ದು, ನಮ್ಮ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ” ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆ ಪ್ರಚಾರದ ಬಗ್ಗೆ ಕೇಳಿದಾಗ, “ದಾವಣಗೆರೆ ಹಾಗೂ ಬಾಗಲಕೋಟೆಯ ಉಪಚುನಾವಣೆ ಪ್ರಚಾರ ಮಾಡಿ ಬಂದಿದ್ದೇನೆ. ನಮ್ಮ ಕಾರ್ಯಕರ್ತರು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಮನೆ ಮನೆಗೆ ಹೋಗಿ ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.

ಗ್ಯಾರಂಟಿ ಫಲಾನುಭವಿಗಳಲ್ಲಿ ಕಳೆದ ಬಾರಿ ಬಿಜೆಪಿಗೆ ಮತ ಹಾಕಿರುವವರೂ ಕೂಡ ಈ ಬಾರಿ ಕಾಂಗ್ರೆಸ್ ಗೆ ಮತ ಹಾಕುವುದಾಗಿ ತಿಳಿಸಿದ್ದಾರೆ. ಬೇಲೆ ಏರಿಕೆಯಾಗುತ್ತಿರುವ ಪರಿಸ್ಥಿತಿಯಲ್ಲಿ ಗ್ಯಾರಂಟಿ ಯೋಜನೆ ಎಷ್ಟು ನೆರವಾಗುತ್ತಿವೆ ಎಂದು ಸ್ಮರಿಸುತ್ತಿದ್ದಾರೆ. ಇವುಗಳನ್ನು ಉಳಿಸಿಕೊಳ್ಳಲು ಜನ ತೀರ್ಮಾನಿಸಿದ್ದಾರೆ” ಎಂದು ತಿಳಿಸಿದರು.

ಕೇರಳ ಚುನಾವಣಾ ಪ್ರಚಾರಕ್ಕೆ ತೆರಳುತ್ತಿರುವ ಬಗ್ಗೆ ಕೇಳಿದಾಗ, “ಕೇರಳ ಚುನಾವಣೆ ಪ್ರಚಾರಕ್ಕೆ ಎರಡು ದಿನ ಪ್ರವಾಸ ಮಾಡಬೇಕಾಗಿದ್ದು, ಅಲ್ಲಿ ಪ್ರವಾಸ ಮಾಡಿ ಬಂದ ಬಳಿಕ, ಇಲ್ಲಿ ದಾವಣಗೆರೆ ಅಥವಾ ಬಾಗಲಕೋಟೆಗೆ ತೆರಳುತ್ತೇನೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಗ್ಯಾಸ್ ಅಭಾವದ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೇಳಿದಾಗ, “ಆಟೋ ಚಾಲಕರಿಗೆ ಇದರಿಂದ ಬಹಳ ತೊಂದರೆಯಾಗುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆಗೆ ಪರಿಣಾಮ ಬೀರುತ್ತಿದೆ. ಜತೆಗೆ ಹೊಟೇಲ್ ಕ್ಷೇತ್ರವು ಸಮಸ್ಯೆ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು” ಎಂದು ಆಗ್ರಹಿಸಿದರು.

ಆಟೋ ಚಾಲಕರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಬಗ್ಗೆ ಕೇಳಿದಾಗ, “ಅನಿಲ ಪೂರೈಕೆ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರ್ಕಾರ ಸರಿಯಾಗಿ ಮುಂಜಾಗ್ರತೆ, ನೀತಿ ರೂಪಿಸಬೇಕಿತ್ತು. ಈ ವಿಚಾರದಲ್ಲಿ ವಿಫಲವಾಗಿದೆ. ಈ ವಿಚಾರವಾಗಿ ಬಿಜೆಪಿಯವರು ಈವರೆಗೂ ಯಾಕೆ ಮಾತನಾಡುತ್ತಿಲ್ಲ. ನಮ್ಮಿಂದ ತೊಂದರೆಯಾಗಿದೆ ಎಂದು ಒಪ್ಪಿಕೊಂಡು ಜನರ ಬಳಿ ಕ್ಷಮೆ ಕೋರಬೇಕು” ಎಂದು ತಿಳಿಸಿದರು.

ಸಿಎಂ ದಾವಣಗೆರೆಯಲ್ಲಿ ಪ್ರಚಾರ ಮಾಡಲು ಹೇಳಿದ್ದು, ವೇಣುಗೋಪಾಲ್ ಅವರು ಕೇರಳದಲ್ಲಿ ಪ್ರಚಾರ ಮಾಡಲು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ನನಗೆ ಈ ವಿಚಾರವಾಗಿ ಗೊತ್ತಿಲ್ಲ. ಯಾರು ಇರಲಿ, ಇಲ್ಲದಿರಲಿ ನಮ್ಮ ಕರ್ತವ್ಯ ನಾವು ಮಾಡುತ್ತೇವೆ” ಎಂದು ತಿಳಿಸಿದರು.

SSLC ಗ್ರೇಡಿಂಗ್ ವಿವಾದ: ರಾಜ್ಯಪಾಲರ ವಿರುದ್ಧ ಟಿ.ಎನ್. ನಾರಾಯಣಗೌಡ ವಾಗ್ದಾಳಿ

ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಕುರಿತು ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್. ನಾರಾಯಣಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಾರಾಯಣಗೌಡ, “ಹಿಂದಿ ಸಾಮ್ರಾಜ್ಯಶಾಹಿ ಲಾಬಿಯ ಪರವಾಗಿ ಮಾತನಾಡುತ್ತಿರುವುದು ಸ್ಪಷ್ಟ. ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ರಾಜಭವನದಲ್ಲಿ ಇದ್ದು, ತಿಂದ ಮನೆಗೆ ಕನ್ನ ಹಾಕಬೇಡಿ” ಎಂದು ಕಿಡಿಕಾರಿದ್ದಾರೆ.

ರಾಜ್ಯಪಾಲರು ಬರೆದಿರುವ ಪತ್ರದ ಬಗ್ಗೆ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಅವರು, “ಈ ರೀತಿಯ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತದ್ದು. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ಮರೆತಿದ್ದಾರೆ” ಎಂದು ಟೀಕಿಸಿದರು.

ಮುಂದುವರೆದು, “ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಯಲ್ಲದ ರಾಜ್ಯಪಾಲರಿಗೆ ದೈನಂದಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ನೈತಿಕ ಅಥವಾ ಸಾಂವಿಧಾನಿಕ ಅಧಿಕಾರವಿಲ್ಲ” ಎಂದು ಹೇಳಿದರು. ಈ ರೀತಿಯ ನಡೆ ಮುಂದುವರೆದರೆ “ಗಂಟುಮೂಟೆ ಕಟ್ಟಿಕೊಂಡು ತಮ್ಮ ರಾಜ್ಯಕ್ಕೆ ಹಿಂತಿರುಗುವಂತೆ ಹೇಳಬೇಕಾಗುತ್ತದೆ” ಎಂದು ನಾರಾಯಣಗೌಡ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು: ಸಿ.ಟಿ.ರವಿ ಆಕ್ಷೇಪ

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.

ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯದ ಒಟ್ಟು ಸಾಲ 8 ಲಕ್ಷದ 32 ಸಾವಿರ ಕೋಟಿ ಆಗಿದೆ. ಅದರಲ್ಲಿ ಸಿದ್ದರಾಮಯ್ಯನವರು ಒಬ್ಬರೇ ಮಾಡಿದ ಸಾಲ 5 ಲಕ್ಷ ಕೋಟಿಗೂ ಹೆಚ್ಚು ಎಂದು ಗಮನ ಸೆಳೆದರು. 2023-24ರಲ್ಲಿ 90,280 ಕೋಟಿ, 2024-25ರಲ್ಲಿ 1 ಲಕ್ಷದ 7 ಸಾವಿರ ಕೋಟಿ, 2025-26ರಲ್ಲಿ 1 ಲಕ್ಷದ 16 ಸಾವಿರ ಕೋಟಿ, 2026-27ರಲ್ಲಿ 1 ಲಕ್ಷದ 32 ಸಾವಿರ ಕೋಟಿ ರೂ. ಎಂದು ವಿವರಿಸಿದರು.

ಒಟ್ಟು 8 ವರ್ಷದಲ್ಲಿ ಅವರು ಮುಖ್ಯಮಂತ್ರಿಯಾಗಿ ಮಾಡಿದ ಸಾಲ ಶೇ 60ರಷ್ಟಿದೆ. ಕಳೆದ 30 ವರ್ಷಗಳಲ್ಲಿ ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್,

ಬಸವರಾಜ ಬೊಮ್ಮಾಯಿ ಹೀಗೆ ಎಷ್ಟು ಜನ ಮುಖ್ಯಮಂತ್ರಿಗಳಿದ್ದರೋ ಅವರೆಲ್ಲ ಮಾಡಿದ ಸಾಲ ಶೇ 40 ಆಗಿತ್ತು. ಆದರೆ, ಸಿದ್ದರಾಮಯ್ಯ ಅವರೊಬ್ಬರೇ ಮಾಡಿದ ಸಾಲ ಶೇ 60ರಷ್ಟು ಎಂದು ತಿಳಿಸಿದರು. ಈಗ ಹೇಳಿ, ನಿಮ್ಮನ್ನು ಸಾಲದ ರಾಮಯ್ಯ ಎಂದು ಕರೆಯುವುದು ಸರಿಯೇ ಅಲ್ಲವೇ ಎಂದು ಪ್ರಶ್ನಿಸಿದರು.

“ನ್ಯಾಷನಲ್ ಕ್ರಶ್ ರಶ್ಮಿಕಾ ಮತ್ತೆ ಗ್ಲೋಬಲ್ ಸ್ಟೇಜ್‌ನಲ್ಲಿ: ಜಪಾನ್‌ನಲ್ಲಿ ಡಬಲ್ ಧಮಾಕಾ!”

ಪ್ಯಾನ್ ಇಂಡಿಯಾ ಸ್ಟಾರ್ ರಶ್ಮಿಕಾ ಮಂದಣ್ಣ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ! ಸರಳ ಹಿನ್ನೆಲೆಯಿಂದ ಬಂದ ಈ ನಟಿ, ಇಂದು ಭಾರತದೆಲ್ಲೆಡೆ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ತನ್ನದೇ ಆದ ಕ್ರೇಜ್ ನಿರ್ಮಿಸಿಕೊಂಡಿದ್ದಾರೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಅವರೊಂದಿಗೆ ಮದುವೆಯಾದ ರಶ್ಮಿಕಾ, ವೈಯಕ್ತಿಕ ಜೀವನದ ಖುಷಿಯ ಜೊತೆಗೆ ವೃತ್ತಿ ಜೀವನದಲ್ಲೂ ಫುಲ್ ಫಾರ್ಮ್‌ನಲ್ಲಿ ಇದ್ದಾರೆ. ಅಭಿಮಾನಿಗಳಿಂದ ‘ನ್ಯಾಷನಲ್ ಕ್ರಶ್’ ಎಂದು ಕರೆಯಲ್ಪಡುವ ಈ ನಟಿ, ಈಗ ಮತ್ತೊಂದು ದೊಡ್ಡ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ.

ಜಪಾನ್‌ನ ಟೋಕಿಯೋದಲ್ಲಿ ನಡೆಯಲಿರುವ ಕ್ರಂಚೈರೋಲ್ ಅನಿಮೆ ಅವಾರ್ಡ್ಸ್ ಸಮಾರಂಭದಲ್ಲಿ ರಶ್ಮಿಕಾ ಎರಡನೇ ಬಾರಿ ಭಾಗವಹಿಸಲಿದ್ದಾರೆ. ಈ ಮೂಲಕ, ಎರಡು ಬಾರಿ ಈ ವೇದಿಕೆಯಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ಸೆಲೆಬ್ರಿಟಿ ಎಂಬ ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.

2024ರಲ್ಲಿ ಇದೇ ವೇದಿಕೆಯಲ್ಲಿ ಮಿಂಚಿದ್ದ ರಶ್ಮಿಕಾ, ಈ ಬಾರಿ ಹಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಸ್ಟೇಜ್ ಹಂಚಿಕೊಂಡು ಪ್ರಶಸ್ತಿಗಳನ್ನು ಪ್ರದಾನಿಸಲಿದ್ದಾರೆ. ಇದು ಭಾರತೀಯ ಸಿನಿರಂಗಕ್ಕೆ ದೊಡ್ಡ ಗೌರವವೆಂದೇ ಹೇಳಬಹುದು.

‘ಪುಷ್ಪ’ ಚಿತ್ರದ ಶ್ರೀವಳ್ಳಿ ಪಾತ್ರದಿಂದ ಜಪಾನ್‌ನಲ್ಲಿ ಭಾರೀ ಕ್ರೇಜ್ ಪಡೆದ ರಶ್ಮಿಕಾ, ಅನಿಮೇ ಪ್ರಪಂಚದ ಮೇಲಿನ ತಮ್ಮ ಪ್ರೀತಿಯಿಂದಲೇ ಈ ವೇದಿಕೆಯಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಅನಿಮಲ್’ದಿಂದ ‘ಪುಷ್ಪ 2’ವರೆಗೆ ಹಿಟ್ ಮೇಲೆ ಹಿಟ್ ನೀಡುತ್ತಿರುವ ರಶ್ಮಿಕಾ, ಈಗ ‘ಮೈಸಾ’, ‘ರಣಬಲಿ’ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಗ್ಲೋಬಲ್ ಸ್ಟಾರ್ ಆಗಿ ಮತ್ತಷ್ಟು ಎತ್ತರಕ್ಕೆ ಏರುತ್ತಿರುವ ರಶ್ಮಿಕಾ, ಅಭಿಮಾನಿಗಳ ಗಮನ ಸೆಳೆಯುತ್ತಲೇ ಇದ್ದಾರೆ.

ಆಟೋ ಚಾಲಕರ ಸಂಕಷ್ಟ: ಈ ಸಮಸ್ಯೆ ನಾವು ಯಾರೂ ಬಯಸಿ ಬಂದಿರೋದಲ್ಲ – ಹೆಚ್ ಡಿ ಕುಮಾರಸ್ವಾಮಿ

ಕೊಪ್ಪಳ: ರಾಜ್ಯದಲ್ಲಿ ಆಟೋ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳು ಯುದ್ಧದ ಹಿನ್ನೆಲೆ ಉಂಟಾಗಿರುವವು, ಇದು ಯಾರೂ ಬಯಸಿದ ಪರಿಸ್ಥಿತಿ ಅಲ್ಲ ಎಂದು ಕೇಂದ್ರ ಸಚಿವ HD ಕುಮಾರಸ್ವಾಮಿ ತಿಳಿಸಿದ್ದಾರೆ.

ಕೊಪ್ಪಳ ತಾಲೂಕಿನ ಹಿಟ್ನಾಳ್ ಟೋಲ್ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ಸರ್ಕಾರಗಳ ಕರ್ತವ್ಯ ಎಂದು ಹೇಳಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಕೆಲವು ಮಟ್ಟಿಗೆ ಯಶಸ್ಸು ಸಾಧಿಸಲಾಗಿದೆ ಎಂದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಟೀಕೆ ನಡೆಸಿದ ಅವರು, ಯುಪಿಎ ಸರ್ಕಾರ ಇದ್ದರೆ ಏನು ಮಾಡುತ್ತಿತ್ತು ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರವನ್ನು ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಅವರು, ರಾಜ್ಯದಲ್ಲಿ ಸಿಲಿಂಡರ್ ಮತ್ತು ಆಟೋ ಎಲ್‌ಪಿಜಿ ಕೊರತೆ ಕಾಣಿಸುತ್ತಿದೆ ಎಂದರು.

ಇದೇ ವೇಳೆ, ಆಟೋ ಚಾಲಕರ ಮೇಲೆ ತೆರಿಗೆ ವಿಧಿಸಿರುವುದನ್ನು ಉಲ್ಲೇಖಿಸಿ, ಆಟೋ ಚಾಲಕರು ತಿಂಗಳಿಗೆ ₹15,000 ನೆರವು ನೀಡುವಂತೆ ಆಗ್ರಹಿಸುತ್ತಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಕದ್ದ ಮೊಬೈಲ್‌ʼನಿಂದ ರ‍್ಯಾಪಿಡೋ ಬುಕ್: ಆಟೋ ಚಾಲಕನ ಮೇಲೆ ಹಲ್ಲೆ, ಇಬ್ಬರು ಬಂಧನ

0

ಬೆಂಗಳೂರು: ಕದ್ದ ಮೊಬೈಲ್ ಬಳಸಿ ರ‍್ಯಾಪಿಡೋ ಬುಕ್ ಮಾಡಿ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ ಸುಲಿಗೆ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಮೊದಲು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ರಿಹ್ಯಾಬಿಲಿಟೇಶನ್ ಕೇಂದ್ರದಿಂದ ಪರಾರಿಯಾಗಿದ್ದರು. ಅಲ್ಲಿಂದಲೇ ಕೇಂದ್ರದ ಮಾಲೀಕರ ಮೊಬೈಲ್ ಕದ್ದು, ಅದನ್ನು ಬಳಸಿ ರ‍್ಯಾಪಿಡೋ ಸೇವೆ ಬುಕ್ ಮಾಡಿದ್ದಾರೆ.

ಹುಸ್ಕೂರು ಬಳಿ ಆಟೋ ಬುಕ್ ಮಾಡಿಕೊಂಡು, ಚಾಲಕನನ್ನು ಜೋಹಳ್ಳಿ ಕೆಐಎಡಿಬಿ ಕೈಗಾರಿಕಾ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಡ್ರಾಪ್ ಮಾಡಿದ ನಂತರ ಹಣ ಕೇಳಿದ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಾಲ್ಕು ಹಲ್ಲುಗಳು ಮುರಿದಿವೆ.

ಆ ಬಳಿಕ ಆರೋಪಿಗಳು ಆಟೋ ಮತ್ತು ಮೊಬೈಲ್ ತೆಗೆದುಕೊಂಡು ಪರಾರಿಯಾಗಿ ಮಾಲೂರಿಗೆ ತೆರಳಿದ್ದಾರೆ. ಅಲ್ಲಿ “ತಂದೆಗೆ ಆರೋಗ್ಯ ಸರಿಯಿಲ್ಲ” ಎಂಬ ನೆಪ ಹೇಳಿ ಆಟೋವನ್ನು ಅಡಮಾನ ಇಟ್ಟು ಹಣ ಪಡೆದಿದ್ದಾರೆ.

ನಂತರ ಮತ್ತೆ ಬೆಂಗಳೂರಿಗೆ ಬಂದು ಸುತ್ತಾಡುತ್ತಿದ್ದರು. ಈ ನಡುವೆ, ಆರೋಪಿಗಳು ಮೊಬೈಲ್ ಅನ್ನು ಅಗತ್ಯವಿದ್ದಾಗ ಮಾತ್ರ ಆನ್ ಮಾಡಿ, ಬಳಿಕ ಆಫ್ ಮಾಡುತ್ತಿದ್ದರು. ಘಟನೆ ಸಂಬಂಧ ಆಟೋ ಚಾಲಕ ನೀಡಿದ ದೂರಿನ ಮೇರೆಗೆ ಬಾಗಲೂರು ಪೊಲೀಸರು ತನಿಖೆ ಆರಂಭಿಸಿ, ಕಾನಿಷ್ ಸೇರಿದಂತೆ ಒಬ್ಬ ಅಪ್ರಾಪ್ತನನ್ನು ಬಂಧಿಸಿದ್ದಾರೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

error: Content is protected !!